Tag: family

  • ಲಾಕ್‍ಡೌನ್ ನಿಂದ ತುತ್ತು ಅನ್ನಕ್ಕಾಗಿ ಪರದಾಡುತ್ತಿವೆ ಕಲಬುರಗಿಯ 30 ಕುಟುಂಬಗಳು

    ಲಾಕ್‍ಡೌನ್ ನಿಂದ ತುತ್ತು ಅನ್ನಕ್ಕಾಗಿ ಪರದಾಡುತ್ತಿವೆ ಕಲಬುರಗಿಯ 30 ಕುಟುಂಬಗಳು

    ಕಲಬುರಗಿ: ಕೊರೊನಾ ಲಾಕ್‍ಡೌನ್ ನಿಂದಾಗಿ ಎಂಥೆಂಥವರ ಬದುಕು ಬೀದಿಗೆ ಬಂದಿದೆ. ಅಂಥದರಲ್ಲಿ ಬೀದಿಲಿ ಬದುಕುವವರ ಕಷ್ಟ ಇದೀಗ ಹೇಳತೀರದಾಗಿದೆ. ಕಲಬುರಗಿಯ ರಾಣೇಸಪೀರ್ ದರ್ಗಾ ಬಳಿ ಪ್ಲಾಸ್ಟಿಕ್ ಬಿಂದಿಗೆ ಮಾರಾಟ ಮಾಡುತ್ತಿದವರ ಉದ್ಯೋಗಕ್ಕೆ ಕತ್ತರಿ ಬಿದಿದ್ದು, ಕಳೆದ 8 ದಿನಗಳಿಂದ ಇಲ್ಲಿನ 30 ಕುಟುಂಬಗಳು ತುತ್ತು ಅನ್ನಕ್ಕೂ ಪರದಾಡುತ್ತಿವೆ.

    ಈ ಹಿಂದೆ ಬೈಕ್ ಗಳ ಮೇಲೆ ಬಡಾವಣೆಗಳಿಗೆ ಹೋಗಿ ಬಿಂದಿಗೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಕಳೆದ 20 ದಿನಗಳಿಂದ ಲಾಕ್‍ಡೌನ್ ಹಿನ್ನೆಲೆ ಇವರು ಯಾವ ಬಡಾವಣೆಗಳಿಗೂ ಹೋಗಿ ಬಿಂದಿಗೆ ಮಾರಾಟ ಮಾಡಿಲ್ಲ. ನಿತ್ಯ 400 ರಿಂದ 500 ರೂಪಾಯಿವರೆಗೆ ಆದಾಯ ಗಳಿಸಿ ತಮ್ಮ ಕುಟುಂಬ ನಿರ್ವಹಣೆಯನ್ನು ಮಾಡುತ್ತಿದ್ದರು. ಆದರೆ ಲಾಕ್‍ಡೌನ್ ಬಳಿಕ ಇವರ ಈ ಉದ್ಯೋಗಕ್ಕೆ ಸಂಪೂರ್ಣ ಕತ್ತರಿ ಬಿದ್ದಿದೆ.

    ಅಲ್ಪ ಸ್ವಲ್ಪ ಉಳಿಸಿದ ಹಣದಿಂದ ಇಷ್ಟು ದಿನ ದಿನಸಿ ಧಾನ್ಯ ಹಾಗೂ ತರಕಾರಿ ಖರೀದಿಸಿ ಜೀವನ ನಡೆಸಿದ್ದಾರೆ. ಆದ್ರೆ ಇವರ ಉಳಿತಾಯದ ಹಣ ಸಹ 8 ದಿನಗಳ ಹಿಂದೆ ಖಾಲಿಯಾಗಿ ತುತ್ತು ಅನ್ನಕ್ಕೆ ಪರದಾಡುವಂತಾಗಿದೆ. ಹೀಗಾಗಿ ಲಾಕ್‍ಡೌನ್ ಮುಗಿಯುವರೆಗೆ ಯಾರಾದ್ರೂ ದಾನಿಗಳು ದಿನಸಿ ಪದಾರ್ಥ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

  • ಕುಟುಂಬ ಸಮೇತ ಧರ್ಮಸ್ಥಳಕ್ಕೆ ಡಿ.ಕೆ.ಶಿವಕುಮಾರ್ ಭೇಟಿ

    ಕುಟುಂಬ ಸಮೇತ ಧರ್ಮಸ್ಥಳಕ್ಕೆ ಡಿ.ಕೆ.ಶಿವಕುಮಾರ್ ಭೇಟಿ

    ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರವರು ಇಂದು ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

    ಶ್ರೀಕ್ಷೇತ್ರ ಧರ್ಮಸ್ಥಳದ ಹೆಲಿಪ್ಯಾಡ್‍ಗೆ ಹೆಲಿಕಾಪ್ಟರ್ ಮೂಲಕ ಡಿಕೆಶಿ, ಪತ್ನಿ, ಮಗಳು, ಅಳಿಯ ಸೇರಿದಂತೆ ಕುಟುಂಬ ಸಮೇತರಾಗಿ ಬಂದಿಳಿದರು. ಇದೊಂದು ಖಾಸಗಿ ಕಾರ್ಯಕ್ರಮ, ಧರ್ಮಸ್ಥಳದ ವೈದ್ಯರನ್ನು ಭೇಟಿಯಾಗಲು ಬಂದಿರುವುದಾಗಿ ತಿಳಿಸಿದರು.

    ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್‌ರವರು, ಬ್ಲ್ಯಾಕ್ ಫಂಗಸ್ ಬಗ್ಗೆ ಮಂತ್ರಿಗಳಲ್ಲೇ ಗೊಂದಲ ಇದೆ. ಒಬ್ಬರು ಇದೆ ಅಂತಾರೆ, ಮತ್ತೊಬ್ಬರು ಇಲ್ಲ ಅಂತಾ ಹೇಳುತ್ತಾರೆ. ಫಂಗಸ್‍ಗೆ ಔಷಧಗಳು ಇಲ್ಲ ಅಂತಾ ಮಾಧ್ಯಮಗಳು ವರದಿ ಮಾಡಿದೆ. ಆದರೆ ಕೇಂದ್ರ ಸರ್ಕಾರ ಗುಜರಾತಿಗೆ ಔಷಧ ಕಳಿಸಿಕೊಟ್ಟಿದೆ. ಹಾಗಾಗಿ ನಮ್ಮ ರಾಜ್ಯ ಸರ್ಕಾರ ಗುಜರಾತಿನಿಂದಾದರೂ ಔಷಧ ತರಬೇಕಾಗಿದೆ. ಈಗಾಗಲೇ ಭಯಗೊಂಡಿರುವ ಜನರನ್ನು ರಾಜ್ಯ ಸರ್ಕಾರ ಗೊಂದಲಕ್ಕೀಡು ಮಾಡುವ ಕೆಲಸ ಮಾಡುತ್ತಿದೆ ಎಂದರು.

    ಈ ಸಂದರ್ಭ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಜೊತೆಗಿದ್ದರು.

  • ಬ್ಲ್ಯಾಕ್ ಫಂಗಸ್‍ನಿಂದ ಕಣ್ಣು ಕಳೆದುಕೊಂಡ ವ್ಯಕ್ತಿ

    ಬ್ಲ್ಯಾಕ್ ಫಂಗಸ್‍ನಿಂದ ಕಣ್ಣು ಕಳೆದುಕೊಂಡ ವ್ಯಕ್ತಿ

    – ಕುಟುಂಬಸ್ಥರ ಅನುಮತಿ ಪಡೆದು ಆಪರೇಷನ್

    ಕಲಬುರಗಿ: ಕೊರೊನಾದಿಂದ ತತ್ತರಿಸಿದ ಕಲಬುರಗಿಯಲ್ಲಿ ಇದೀಗ ಬ್ಲ್ಯಾಕ್ ಫಂಗಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ಬ್ಲ್ಯಾಕ್ ಫಂಗಸ್‍ಗೇ ಗುರಿಯಾಗಿದ ವ್ಯಕ್ತಿಯೊಬ್ಬರ ಬಲಗಣ್ಣು ತೆಗೆದು ವೈದ್ಯರು ಅವರ ಜೀವ ಉಳಿಸಿದ್ದಾರೆ.

    ಕಲಬುರಗಿಯ ನಿವಾಸಿಯಾದ ಅನಿಲ್ ಕುಮಾರ್ ಅವರಿಗೆ 8 ದಿನಗಳ ಹಿಂದೆ ಬಲಗಣ್ಣಿನ ಬಳಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಆದಾದ ಬಳಿಕ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ಅವರ ಸಂಬಂಧಿಕರು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ನಂತರ ಆತನ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಔಷಧಿ ಮೂಲಕ ಬ್ಲ್ಯಾಕ್ ಫಂಗಸ್ ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಸಿದ್ದಾರೆ. ಆದರೆ ಎಷ್ಟೇ ಔಷಧಿ ಇಂಜಕ್ಷನ್ ನೀಡಿದರೂ, ಬ್ಲ್ಯಾಕ್ ಫಂಗಸ್ ಮಾತ್ರ ಕಡಿಮೆಯಾಗಲಿಲ್ಲ.

    ಯಾವ ಔಷಧಿ ನೀಡಿದರೂ ಅನಿಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಾಣದಿದ್ದಾಗ, ಕುಟುಂಬಸ್ಥರ ಜೊತೆ ಚರ್ಚಿಸಿ ಬ್ಲ್ಯಾಕ್ ಫಂಗಸ್ ಆಗಿರುವ ಬಲಗಣ್ಣು ತೆಗೆದರೆ ಮಾತ್ರ ಇವರು ಉಳಿಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ಮೆದುಳಿಗೂ ಸಹ ಇದು ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಹೀಗಾಗಿ ಕುಟುಂಬಸ್ಥರ ಅನುಮತಿ ಪಡೆದು ಬ್ಲ್ಯಾಕ್‍ಫಂಗಸ್ ಆದ ಬಲಗಣ್ಣನ್ನು ಆಪರೇಷನ್ ಮಾಡಿ ವೈದ್ಯರು ತೆಗೆದಿದ್ದಾರೆ. ಇದೀಗ ಅನಿಲ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

  • ಕೊರೊನಾ ಸೋಂಕಿಗೆ ಯುವಕ ಬಲಿ

    ಕೊರೊನಾ ಸೋಂಕಿಗೆ ಯುವಕ ಬಲಿ

    ಕೊಪ್ಪಳ: ಕೊರೊನಾದ ಎರಡನೇ ಅಲೆಯಲ್ಲಿ ಹೆಚ್ಚಾಗಿ ಯುವಕ ಯುವತಿಯರು ಸಾವನ್ನಪ್ಪುತ್ತಿದ್ದು, ಸದ್ಯ ಕೊಪ್ಪಳ ಜಿಲ್ಲೆಯಲ್ಲಿ ಯುವಕನೋರ್ವ ಕೊರೊನಾ ಸೋಂಕಿಗೆ ಬಲಿಯಾಗಿದ್ದಾನೆ.

    ಕೊಪ್ಪಳದ ಗಂಗಾವತಿ ತಾಲೂಕಿನ ಅರಳಹಳ್ಳಿ ರಾಜರಾಜೇಶ್ವರಿ ಬ್ರಹನ್ಮಠದ ಸ್ವಾಮೀಜಿಯಾದ ಶ್ರೀ ಗವಿಸಿದ್ದೇಶ್ವರ ತಾತನವರ ದ್ವಿತೀಯ ಸುಪುತ್ರ ಪ್ರಸಾದ್ (19)  ಮೃತ ಯುವಕ.

    ಕಳೆದ 10 ದಿನಗಳ ಹಿಂದೆ ಯುವಕನಿಗೆ ಸೊಂಕು ಕಾಣಿಸಿಕೊಂಡಿದ್ದು, ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದನು, ಚಿಕಿತ್ಸೆ ಫಲಕಾರಿಯಾಗದೆ ತೀವ್ರ ಉಸಿರಾಟದ ತೊಂದರೆಯಿಂದ ಪ್ರಸಾದ್ ಇಂದು ಕೊನೆಯುಸಿರೆಳೆದಿದ್ದಾನೆ. ಬಾಳಿ-ಬದುಕಬೇಕಾದ ಯುವಕ ಕೊರೊನಾಗೆ ಬಲಿಯಾಗಿದ್ದು, ಕುಟುಂಬದ ಅಕ್ರಂದನ ಮುಗಿಲು ಮುಟ್ಟಿದೆ. ನಂತರ ಮಠದ ಜಮೀನಿನಲ್ಲಿ ಯುವಕನ ಅಂತ್ಯ ಸಂಸ್ಕಾರ ನಡೆಸಲಾಯಿತು.

  • ಹುಟ್ಟಿದ ಕಂದಮ್ಮನ ಮುಖ ನೋಡುವ ಮುನ್ನವೇ ಕೊರೊನಾಗೆ ಬಲಿಯಾದ ತಂದೆ

    ಹುಟ್ಟಿದ ಕಂದಮ್ಮನ ಮುಖ ನೋಡುವ ಮುನ್ನವೇ ಕೊರೊನಾಗೆ ಬಲಿಯಾದ ತಂದೆ

    ಕಲಬುರಗಿ: ಆಗಷ್ಟೇ ಜನಿಸಿದ ಮಗುವಿನ ಮುಖ ನೋಡದೆಯೇ ತಂದೆ ಕೊರೊನಾಗೆ ಬಲಿಯಾದಂತಹ ಹೃದಯವಿದ್ರಾವಕ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಕಳೆದ ಹದಿನೈದು ದಿನಗಳ ಹಿಂದೆ 32 ವರ್ಷದ ಸುಭಾಷ್ ತಾವರಖೇಡ ಎಂಬವರು ಕೋವಿಡ್ ಸೋಂಕಿಗೊಳಗಾಗಿ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಎರಡು ದಿನಗಳ ಹಿಂದೆ ಮೃತಪಟ್ಟರು. ಆದರೆ ಎರಡು ದಿನದ ನಂತರ, ಸುಭಾಷ್ ಪತ್ನಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಮಗುವಿನ ಮುಖ ನೋಡದನೇ ತಂದೆ ಕೊರೊನಾಗೆ ಬಲಿಯಾಗಿರುವುದು ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಗಂಡ ತೀರಿಕೊಂಡ ವಿಷಯವನ್ನು ಇಲ್ಲಿಯವರೆಗೂ ಪತ್ನಿಗೆ ಕುಟುಂಬಸ್ಥರು ಮಾಹಿತಿ ನೀಡಿಲ್ಲ.

    ಸದ್ಯ ತಂದೆ ಮಗುವಿನ ಮುಖ ನೋಡಬಾರದು ಹೀಗಾಗಿ ಆಸ್ಪತ್ರೆಗೆ ಬಂದಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಹೀಗಾಗಿ ಮುದ್ದಾದ ಮಗುವಿನ ಮುಖ ನೋಡಲು ನನ್ನ ಗಂಡ ಯಾವಾಗ ಬರುತ್ತಾನೆ ಅಂತಾ ಆತನ ಪತ್ನಿ ಇದೀಗ ದಿನ ಕಳೆಯುತ್ತಿದ್ದಾರೆ.

  • ಪುತ್ರನನ್ನು ಕಳೆದುಕೊಂಡ ತಂದೆ-1 ಕೋಟಿ ಪರಿಹಾರ ಕೊಟ್ಟ ಕೇಜ್ರಿವಾಲ್

    ಪುತ್ರನನ್ನು ಕಳೆದುಕೊಂಡ ತಂದೆ-1 ಕೋಟಿ ಪರಿಹಾರ ಕೊಟ್ಟ ಕೇಜ್ರಿವಾಲ್

    ನವದೆಹಲಿ: ಕೊರೊನಾ ವಾರಿಯರ್ ಆಗಿರುವ ವೈದ್ಯರೊಬ್ಬರು ಕೋವಿಡ್‍ಗೆ ಬಲಿಯಾಗಿದ್ದು, ಅವರ ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬರೋಬ್ಬರಿ 1ಕೋಟಿ ರೂಪಾಯಿ ಹಣವನ್ನು ಪರಿಹಾರವಾಗಿ ಕೊಟ್ಟಿದ್ದಾರೆ.

    ಡಾ. ಅನಾಸ್(26) ಮೃತ ವೈದ್ಯರಾಗಿದ್ದಾರೆ. ಇವರು ಕೊರೊನಾ ಸೋಂಕಿನಿಂದ ಇತ್ತೀಚೆಗಷ್ಟೇ ಮೃತಪಟ್ಟಿದ್ದರು. ಇವರ ಕುಟುಂಬಕ್ಕೆ ಅರವಿಂದ ಕೇಜ್ರಿವಾಲ್ ಅವರು ಸಹಾಯವನ್ನು ಮಾಡಿದ್ದಾರೆ.

    ಮೃತ ಡಾ. ಅನಾಸ್ ಅವರ ಮನೆಗೆ ಭೇಟಿನೀಡಿ ಅವರ ತಂದೆಗೆ ಸಾಂತ್ವನ ಹೇಳಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 1 ಕೋಟಿ ರೂಪಾಯಿ ಮೌಲ್ಯದ ಚೆಕ್ ಹಸ್ತಾಂತರಿಸಿದ್ದಾರೆ. ನನ್ನ ಪುತ್ರ ಕರ್ತವ್ಯದ ಮೇಲಿದ್ದು, ಜನರ ಸೇವೆ ಮಾಡಿ ಜೀವ ಕಳೆದುಕೊಂಡಿದ್ದಾನೆ. ನನ್ನ ಇತರ ಮಕ್ಕಳು ಅವನಂತೆಯೇ ದೇಶಕ್ಕಾಗಿ ಸೇವೆ ಮಾಡಲಿ ಎಂದು ಬಯಸುತ್ತೇನೆ ಎಂದು ಅನಾಸ್ ಅವರ ತಂದೆ ಹೇಳಿದ್ದಾರೆ.

  • ದೇವಿ ವಿಗ್ರಹ, ಬಳೆ, ಬಾಳೆ ಹಣ್ಣು, ತಾಳಿ ಇಟ್ಟು ಪೂಜೆ- ಗ್ರಾಮಸ್ಥರಲ್ಲಿ ಆತಂಕ

    ದೇವಿ ವಿಗ್ರಹ, ಬಳೆ, ಬಾಳೆ ಹಣ್ಣು, ತಾಳಿ ಇಟ್ಟು ಪೂಜೆ- ಗ್ರಾಮಸ್ಥರಲ್ಲಿ ಆತಂಕ

    ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದ ಬಳಿ ರಸ್ತೆ ಪಕ್ಕದ ಮರದವೊಂದರ ಕೆಳಗಿರೋ ಪೂಜಾ ಸಾಮಗ್ರಿಗಳನ್ನ ಕಂಡು ಗ್ರಾಮಸ್ಥರು ಆತಂಕಕ್ಕೆ ಒಳಗಾದ ಘಟನೆ ನಡೆದಿದೆ.

    ಕರ್ಜಗಿ ಗ್ರಾಮದಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಕಟ್ಟಿಗೆಯ ದೇವಿ ವಿಗ್ರಹ, ಬಳೆ, ಬಾಳೆ ಹಣ್ಣು, ತಾಳಿ, ಎಳೆನೀರು, ನೂರಾರು ಮರಗಳು, ಮಡಿಕೆಗಳು ಸೇರಿದಂತೆ ಪೂಜೆ ಸಾಮಾಗ್ರಿಗಳನ್ನ ಇಟ್ಟು ಹೋಗಿದ್ದಾರೆ. ಅಕ್ಕಪಕ್ಕದ ಜಮೀನುಗಳ ರೈತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

    ಗಡಿ ದುರಗಮ್ಮನೋ ಅಥವಾ ಯಾರಾದರೂ ವಾಮಾಚಾರವೋ ಮಾಡಿದ್ದರ ಎಂಬುವುದು ಗೊತ್ತಾಗುತ್ತಿಲ್ಲ. ಗ್ರಾಮಸ್ಥರಲ್ಲಿ ಆತಂಕವನ್ನ ಉಂಟುಮಾಡಿದೆ. ಊರಿನ ಹಿರಿಯರ ಜೊತೆ ಚರ್ಚಿಸಿ ವಸ್ತುಗಳನ್ನ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ. ಗಡಿ ದುರಗಮ್ಮದೇವಿ ಆಗಿದ್ದರೆ ಕಡಿಮೆ ವಸ್ತುಗಳನ್ನ ಇಟ್ಟು ಪೂಜೆ ಮಾಡುತ್ತಿದ್ದರು. ಈಗ ಹೆಚ್ಚು ಪೂಜಾ ಸಾಮಗ್ರಿಗಳನ್ನ ಇಟ್ಟು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ ಅಂತಾರೆ ಗ್ರಾಮಸ್ಥರು.

    ಗ್ರಾಮದ ಹಿರಿಯ ಜೊತೆಗೆ ಮಾತನಾಡಿ ಪೂಜಾ ಹಾಗೂ ದೇವಿಯನ್ನ ನದಿಯಲ್ಲಿ ಬಿಡಬೇಕು. ಅಥವಾ ನಾವು ಗಡಿಯಲ್ಲಿ ಪೂಜೆ ಮಾಡಿ ಅಲ್ಲಿಯೇ ಮುಚ್ಚಬೇಕು ಅನ್ನೋದನ್ನ ತೀರ್ಮಾನ ಮಾಡುತ್ತೆವೆ ಅಂತಾರೆ ಗ್ರಾಮದ ಅಕ್ಕಪಕ್ಕದ ಜಮೀನಿನ ರೈತರು ಹಾಗೂ ಗ್ರಾಮಸ್ಥರು.

  • ಕೊರೊನಾ ಗೆದ್ದ ಒಂದೇ ಕುಟುಂಬದ 16 ಮಂದಿ

    ಕೊರೊನಾ ಗೆದ್ದ ಒಂದೇ ಕುಟುಂಬದ 16 ಮಂದಿ

    ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೆಮ್ಮಾರಿ ವೈರಸ್‍ಗೆ ಸಾಕಷ್ಟು ಜನರು ಬಲಿಯಾಗುತ್ತಿದ್ದಾರೆ. ಇದರ ನಡುವೆಯೇ ಅದೃಷ್ಟಶಾಲಿಗಳೆಂಬಂತೆ ವೈರಸ್ ವಿರುದ್ಧ ಹೋರಾಡಿ ಒಂದೇ ಕುಟುಂಬದ 16 ಜನರು ಗುಣಮುಖರಾಗುವ ಮೂಲಕ ಇತರಿಗೂ ಮಾದರಿಯಾಗಿದ್ದಾರೆ.

    ಸುಳ್ಳ ಗ್ರಾಮದ ಶಿವಳ್ಳಿ ಮಠ ಕುಟುಂಬದ 16 ಜನಕ್ಕೆ ಕೊರೊನಾ ಸೋಂಕು ತಗುಲಿತ್ತು. ಮೇ 3 ರಿಂದ ಎಲ್ಲರೂ ಹೋಮ್ ಐಸೋಲೇಷನ್‍ನಲ್ಲಿ ಇದ್ದುಕೊಂಡು ಚೇತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದರಲ್ಲಿ ಮೂರು ವರ್ಷದ ಒಳಗಿನ ನಾಲ್ಕು ಮಕ್ಕಳು ಸಹ ಗುಣಮುಖರಾಗಿದ್ದಾರೆ. 45 ವರ್ಷ ಮೇಲ್ಪಟ್ಟ 4 ಜನರು ಈ ಮೊದಲೇ ಎರಡನೇ ಡೋಸ್ ವ್ಯಾಕ್ಸಿನೇಷನ್ ಮಾಡಿಸಿಕೊಂಡಿದ್ದರು ಹಾಗೂ ಇತರ 3 ಜನರಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ.

    ಕಳೆದ ತಿಂಗಳು 29 ರಂದು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಕೊರೊನಾ ಟೆಸ್ಟ್ ಮಾಡಿಸಿಕೊಂಡು ಮನೆಯಲ್ಲಿಯೇ ಹೋಮ್ ಐಸೋಲೇಷನ್ ಆಗಿದ್ದೆವು ಹಾಗೂ ಪಾಸಿಟಿವ್ ರಿಪೋರ್ಟ್ ಬಂದಾಗ ಯಾವುದೇ ರೀತಿಯಲ್ಲೂ ಭಯಪಡದೇ ಆತ್ಮಸ್ಥೈರ್ಯದಿಂದ ಹಾಗೂ ಮನೆಯಲ್ಲಿನ ಸದಸ್ಯರಿಗೂ ಧೈರ್ಯ ತುಂಬಿ ವೈದ್ಯರ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಿದೆವು ಎಂದು ಮನೆಯ ಮುಖ್ಯಸ್ಥ ಮಲ್ಲಯ್ಯ ಶಿವಳ್ಳಿಮಠ ತಿಳಿಸಿದ್ದಾರೆ.

    ರಾಜು(34), ಶ್ರೇಯಾ (10ತಿಂಗಳು), ಲಕ್ಷ್ಮಿ(25), ವೈಭವಿ(1), ಶಶಿಕಲಾ(24), ಸಮರ್ಥ (2), ಸಹನಾ(16),ವೈಷ್ಣವಿ(2),ಗಿರಿಜಮ್ಮ(60),ಶರಣಯ್ಯಾ(9), ಮಲ್ಲಯ್ಯ (63),ಮಹಾಂತಯ್ಯ(60), ಸಿದ್ದರಾಮಯ್ಯ(59) ಮಲ್ಲಿಕಾರ್ಜುನ (25), ಮಲ್ಲಿಕಾರ್ಜುನಯ್ಯಾ(28), ಮೃತ್ಯುಂಜಯ(27) ಕೊರೊನಾವನ್ನು ಗೆದ್ದಿದ್ದಾರೆ.

  • ರೋಣದಲ್ಲಿ ಸೋಂಕಿತನ ಶವ ಸಂಸ್ಕಾರಕ್ಕೆ ಗ್ರಾಮಸ್ಥರ ಅಡ್ಡಿ

    ರೋಣದಲ್ಲಿ ಸೋಂಕಿತನ ಶವ ಸಂಸ್ಕಾರಕ್ಕೆ ಗ್ರಾಮಸ್ಥರ ಅಡ್ಡಿ

    ಗದಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತನ ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಅಮಾನವೀಯ ಘಟನೆ ಜಿಲ್ಲೆಯ ರೋಣ ತಾಲೂಕಿನ ಅಮರಗೋಳದಲ್ಲಿ ಬೆಳಕಿಗೆ ಬಂದಿದೆ.

    ಮೂಲತಃ ಅಮರಗೋಳ ಗ್ರಾಮದ 72 ವರ್ಷದ ವ್ಯಕ್ತಿಯೊಬ್ಬರು ಮಹಾಮಾರಿಗೆ ಬಲಿಯಾಗಿದ್ದರು. ಈ ವ್ಯಕ್ತಿ ಬಾಗಲಕೋಟೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾದಿಂದ ಬಾಗಲಕೋಟೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿದ್ದರು. ನಂತರ ಅಂತ್ಯ ಸಂಸ್ಕಾರ ಮಾಡಲು ಕುಟುಂಬಸ್ಥರು ಹುಟ್ಟೂರಿಗೆ ಶವ ತಂದಿದ್ದರು.

    ಈ ನಿರ್ಧಾರಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹೆಚ್ಚು ಮಳೆ ಸುರಿದಿದ್ದರಿಂದಾಗಿ ಅಂಬುಲೆನ್ಸ್ ವಾಹನ ಹೊಲಕ್ಕೆ ತೆರಳಲು ಪರದಾಟ ನಡೆಸಿತು. ಕೊನೆಗೆ ತಮ್ಮದೇ ಆದ ಜೆಸಿಬಿ ವಾಹನದಲ್ಲಿ ಶವವನ್ನು ಹಾಕಿಕೊಂಡು ಬಂದು ತಮ್ಮ ಸ್ವಂತ ಜಮೀನಿನಲ್ಲಿಯೇ ಸಂಬಂಧಿಕರು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಈ ಘಟನೆ ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಕೊಡಗಿನಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಬಲಿ

    ಕೊಡಗಿನಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಬಲಿ

    ಮಡಿಕೇರಿ: ಕಾಡಾನೆ ದಾಳಿಗೆ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ವಾಲ್ನೂರು ಗ್ರಾಮದಲ್ಲಿ ಇಂದು ನಡೆದಿದೆ.

    ತಿರುಚ್ಚನಪಳ್ಳಿಯ ಏಳುಮಲೈ(50) ಮೃತರಾಗಿದ್ದಾರೆ. ತಮಿಳುನಾಡು ಮೂಲದವರಾಗಿದ್ದು, ಪ್ರಭುಗಣಪತಿ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಲೈನ್ ಮನೆಯ ಬಳಿಯ ಹೊಳೆಗೆ ತೆರಳಿದ್ದ ಸಂದರ್ಭ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಆನೆ ತೀವ್ರವಾಗಿ ಘಾಸಿಗೊಳಿಸಿ ಸ್ಥಳದಲ್ಲೇ ಕೂಲಿ ಕಾರ್ಮಿಕನನ್ನು ಕೊಂದು ಹಾಕಿದೆ.

    ಕಳೆದ ಒಂದು ವಾರದಿಂದ ಹಲಸಿನ ಹಣ್ಣನ್ನು ತಿನ್ನಲು ಹಿಂಡು ಹಿಂಡು ಕಾಡಾನೆಗಳು ಈ ಭಾಗದಲ್ಲಿ ಲಗ್ಗೆ ಇಡುತ್ತಿವೆ. ಗ್ರಾಮದಲ್ಲಿ ಆತಂಕ ಮೂಡಿದ್ದು, ಕಾರ್ಮಿಕ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಏಳುಮಲೈ ಅವರ ಮೃತದೇಹವನ್ನು ತಿರುಚ್ಚನಪಳ್ಳಿಗೆ ಕೊಂಡೊಯ್ಯುವುದಾಗಿ ಕುಟುಂಬ ವರ್ಗ ತಿಳಿಸಿದೆ.