Tag: family

  • 140 ಕೋಟಿ ಜನರೇ ನನ್ನ ಕುಟುಂಬ: ಲಾಲೂಗೆ ಮೋದಿ ತಿರುಗೇಟು

    140 ಕೋಟಿ ಜನರೇ ನನ್ನ ಕುಟುಂಬ: ಲಾಲೂಗೆ ಮೋದಿ ತಿರುಗೇಟು

    ಹೈದರಾಬಾದ್:‌ ದೇಶದ 140 ಕೋಟಿ ಜನರೇ ನನ್ನ ಕುಟುಂಬ ಎಂದು ಹೇಳುವ ಮೂಲಕ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.

    ತೆಲಂಗಾಣದ ಆದಿಲಾಬಾದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡುತ್ತಾ ಪ್ರಧಾನಿ ಟಾಂಗ್‌ ನೀಡಿದರು. ನನ್ನ ಜೀವನ ತೆರೆದ ಪುಸ್ತಕ, ದೇಶದ 140 ಕೋಟಿ ಜನರು ನನ್ನ ಕುಟುಂಬ. ಇಂದು ದೇಶದ ಕೋಟ್ಯಂತರ ಹೆಣ್ಣುಮಕ್ಕಳು, ತಾಯಂದಿರು ಮತ್ತು ಸಹೋದರಿಯರು ಮೋದಿಯವರ ಕುಟುಂಬ. ದೇಶದ ಪ್ರತಿಯೊಬ್ಬ ಬಡವರೂ ನನ್ನ ಕುಟುಂಬ. ನನಗಾಗಿ ಅವರು, ಅವರಿಗಾಗಿ ನಾನು ಇದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಕುಟುಂಬದ ಬಗ್ಗೆ ಹೇಳಿಕೆ ನೀಡಿರುವ ಲಾಲು ವಿರುದ್ಧ ಬಿಜೆಪಿ ವಾಗ್ದಾಳಿ

    ಪಾಟ್ನಾದಲ್ಲಿ ನಡೆದಿದ್ದ ಸಮಾವೇಶದಲ್ಲಿ ಮೋದಿ (Narendra Modi) ಕುಟುಂಬದ ಬಗ್ಗೆ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ (Lalu Prasad Yadav), ನಮ್ಮದು ಕುಟುಂಬ ರಾಜಕಾರಣ ಅಂತ ಮೋದಿ ಹೇಳುತ್ತಾರೆ. ಮೋದಿಗೆ ಸ್ವಂತ ಕುಟುಂಬ ಇಲ್ಲದಿದ್ದರೆ ನಾವೇನು ಮಾಡೋಕೆ ಸಾಧ್ಯ?, ಅವರಿಗೇಕೆ ಮಕ್ಕಳಿಲ್ಲ?. ರಾಮಮಂದಿರದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಅವರು ನಿಜವಾದ ಹಿಂದೂ ಕೂಡ ಅಲ್ಲಾ. ಹಿಂದೂ ಸಂಪ್ರದಾಯದಲ್ಲಿ ತಂದೆ-ತಾಯಿ ಸತ್ತರೆ ತಲೆ ಕೂದಲು ಬೋಳಿಸಬೇಕು. ಆದರೆ ತಾಯಿ ಮೃತಪಟ್ಟಾಗ ಮೋದಿ ಆ ರೀತಿ ಮಾಡಲಿಲ್ಲ ಎಂದು ಹೇಳಿದ್ದರು.

    ಲಾಲೂ ಹೇಳಿಕೆಯಿಂದ ಸಿಡಿದೆದ್ದ ಬಿಜೆಪಿಯವರು ಸಾಮಾಜಿಕ ಜಾಲತಾಣದಲ್ಲಿ ʼಮೋದಿ ಕಾ ಪರಿವಾರ್ʼ ಎಂಬ ಅಭಿಯಾನವನ್ನು ಆರಂಭಿಸಿದೆ. ಅಮಿತ್‌ ಶಾ, ನಡ್ಡಾ, ಪುಷ್ಕರ್ ಸಿಂಗ್ ಧಾಮಿ, ಮನ್ಸುಕ್ ಮಾಂಡವೀಯ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ತಮ್ಮ ಹೆಸರಿನ ಮುಂದೆ ʼಮೋದಿ ಪರಿವಾರ್ʼ ಎಂದು ಬರೆದುಕೊಂಡಿದ್ದಾರೆ.

  • 850 ಅಡಿಕೆ ಮರ ಕಡಿದ ಕೇಸ್‌ಗೆ ಟ್ವಿಸ್ಟ್ – ಮಗಳನ್ನ ಮದುವೆ ಮಾಡಿಕೊಡ್ತೀವಿ ಅಂತಾ 25 ಲಕ್ಷ ಪೀಕಿತ್ತು ಕುಟುಂಬ

    850 ಅಡಿಕೆ ಮರ ಕಡಿದ ಕೇಸ್‌ಗೆ ಟ್ವಿಸ್ಟ್ – ಮಗಳನ್ನ ಮದುವೆ ಮಾಡಿಕೊಡ್ತೀವಿ ಅಂತಾ 25 ಲಕ್ಷ ಪೀಕಿತ್ತು ಕುಟುಂಬ

    – ಹೆಣ್ಣಿನ ಮನೆಯವರ ಕಳ್ಳಾಟ ಬಯಲು

    ಮೈಸೂರು: ಮಗಳನ್ನು ಮದುವೆ (Marriage ) ಮಾಡಿಕೊಡುವುದಾಗಿ 25 ಲಕ್ಷ ರೂ. ಹಣ ಪಡೆದು ವಂಚಿಸಿದ (Cheated)  ಪ್ರಕರಣ ಈಗ ರೋಚಕ ತಿರುವು ಪಡೆದುಕೊಂಡಿರುವ ಘಟನೆ ಹುಣಸೂರು ತಾಲೂಕಿನ ಕಡೇಮನಗುನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ವೆಂಕಟೇಶ್, ಲಕ್ಷ್ಮಿ ವಂಚಿಸಿದ ಕುಟುಂಬ. ವೆಂಕಟೇಶ್ ಕಳೆದ ವರ್ಷ ಮಗಳನ್ನು ಮದುವೆ ಮಾಡಿಕೊಡುವುದಾಗಿ ಅಶೋಕ್ ಎಂಬ ವ್ಯಕ್ತಿಗೆ ಒಪ್ಪಿಗೆ ನೀಡಿದ್ದರು. ಆದರೆ ಕೊನೆಗೆ ಮದುವೆಗೆ ಒಪ್ಪದೆ 2023ರ ಆಗಸ್ಟ್ 10 ರಲ್ಲಿ ಅಶೋಕ್ ಮೇಲೆ 850 ಅಡಿಕೆ ಮರ ಕಡಿದಿದ್ದ ಸುಳ್ಳು ಆರೋಪವನ್ನು ಕುಟುಂಬ ಮಾಡಿತ್ತು. ಇದೀಗ ಪ್ರಕರಣ ರೋಚಕ ತಿರುವು ಪಡೆದಿದೆ. ಇದನ್ನೂ ಓದಿ:  ಬಿಜೆಪಿಯಂತೆ 28 ಸ್ಥಾನವನ್ನೂ ಗೆಲ್ತೀವಿ ಎನ್ನಲ್ಲ, 20 ಕ್ಷೇತ್ರ ಗೆಲ್ಲುವ ಗುರಿ ಇದೆ: ಚಲುವರಾಯಸ್ವಾಮಿ

    ನಡೆದಿದ್ದೇನು?
    ಕಳೆದ ವರ್ಷ ವೆಂಕಟೇಶ್, ಲಕ್ಷ್ಮಿ  ದಂಪತಿ ತಮ್ಮ ಮಗಳನ್ನು ಅಶೋಕ್‌ಗೆ ಕೊಟ್ಟು ಮದುವೆ ಮಾಡುಕೊಡುವುದಾಗಿ ಒಪ್ಪಿಗೆ ನೀಡಿದ್ದರು. ಒಪ್ಪಂದದ ನಂತರ ಅಶೋಕ್ ಬಳಿ ಹುಡುಗಿ ಎರಡು ಲಕ್ಷ ಹಣ ಪಡೆದಿದ್ದು, ಆಕೆಯ ತಂದೆ 15 ಲಕ್ಷ ರೂ. ತಾಯಿ 8 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ. ಒಪ್ಪಂದದ ನಂತರ ಒಂದು ವರ್ಷದ ಅಂತರದಲ್ಲಿ 25 ಲಕ್ಷ ರೂ. ಹಣವನ್ನು ಕುಟುಂಬ ವಸೂಲಿ ಮಾಡಿದೆ. ಹಣ ಪಡೆದ ಬಳಿಕ ಒಪ್ಪಿಗೆಯಂತೆ ಮದುವೆ ಮಾಡಿಕೊಡುವಂತೆ ಅಶೋಕ್ ಕೇಳಿದಾಗ ಕುಟುಂಬ ಹಿಂದೇಟು ಹಾಕಿದೆ. ಕೊನೆಗೆ ಅಶೋಕ್ ತಾನು ನೀಡಿದ ಹಣ ವಾಪಸ್ ನೀಡುವಂತೆ ಕೇಳಿದಾಗ ಆತನ ಮೇಲೆ 850 ಅಡಿಕೆ ಮರ ಕಡಿದಿದ್ದಾನೆ ಎಂದು ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸಿದ್ದರು. ಇದನ್ನೂ ಓದಿ: ಮಕ್ಕಳು ಬೈಕ್‌ ಓಡಿಸಿದ್ದಕ್ಕೆ ಪೋಷಕರಿಗೆ ಬಿತ್ತು ದಂಡ; 23 ಕಾಲೇಜುಗಳ 800 ವಾಹನಗಳಿಗೆ ಫೈನ್‌

     ಜೈಲಿನಿಂದ ಹೊರ ಬಂದ ಅಶೋಕ್ ಮೋಸಗಾರರ ವಿರುದ್ಧ ಇದೀಗ ತಿರುಗಿ ಬಿದ್ದಿದ್ದು, ದಾಖಲೆಗಳ ಸಮೇತ ಕುಟುಂಬದ ಕಳ್ಳಾಟವನ್ನು ಬಯಲು ಮಾಡಿದ್ದಾರೆ. ಹುಡುಗಿ ಕುಟುಂಬಕ್ಕೆ ಹಣ ಕೊಟ್ಟಿರುವುದರ ಬಗ್ಗೆ ಹುಡುಗಿ ಹಾಗೂ ಅಶೋಕ್ ನಡುವೆ ನಡೆದಿದ್ದ ವಾಟ್ಸಪ್ ಮೆಸೇಜ್‌ಗಳ ದಾಖಲೆಯನ್ನು ಸಲ್ಲಿಸಿದ್ದಾರೆ. ಹುಡುಗಿ ಕುಟುಂಬದ ಕಳ್ಳಾಟದ ಬಗ್ಗೆ ದಾಖಲೆಗಳ ಸಮೇತ ಅಶೋಕ್ ಬಯಲು ಮಾಡಿದ್ದಾರೆ. ಇದನ್ನೂ ಓದಿ:  ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ್ ಸೌಂಡ್ ಜಾಸ್ತಿ ಮಾಡಿದ್ರೆ, ಜೋರಾಗಿ ಮಾತಾಡಿದ್ರೆ ಬೀಳುತ್ತೆ ಕೇಸ್

    ಘಟನೆ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅರೋಪಿಗಳ ವಿರುದ್ಧ ದೂರು ದಾಖಲಾದರೂ ಪೊಲೀಸರು ಇನ್ನೂ ಅಶೋಕ್‌ಗೆ ನ್ಯಾಯ ಕೊಡಿಸಿಲ್ಲ. ಇದರಿಂದ ಬೇಸತ್ತ ಅಶೋಕ್ ಹೆಣ್ಣಿಗೊಂದು ನ್ಯಾಯ, ನನಗೊಂದು ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ. ನ್ಯಾಯಕ್ಕಾಗಿ ಹುಡುಗಿ ಮನೆ ಮುಂದೆ ಧರಣಿ ಕೂರಲು ಅಶೋಕ್ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಅಕ್ಕನ ಆಭರಣಗಳ ಮೇಲೆ ತಂಗಿ ಕಣ್ಣು – ರೈಲಿನಲ್ಲೇ ಕೈಚಳಕ ತೋರಿ ಜೈಲು ಪಾಲು!

     

  • ವಿದ್ಯುತ್ ಸ್ಪರ್ಶಿಸಿ ಯಶ್ ಅಭಿಮಾನಿಗಳ ದುರ್ಮರಣ – ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ

    ವಿದ್ಯುತ್ ಸ್ಪರ್ಶಿಸಿ ಯಶ್ ಅಭಿಮಾನಿಗಳ ದುರ್ಮರಣ – ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ

    ಬೆಂಗಳೂರು: ಹುಟ್ಟು ಹಬ್ಬದ ಸಲುವಾಗಿ ಕಟೌಟ್ ನಿಲ್ಲಿಸುವುದಕ್ಕೆ ಹೋಗಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಯಶ್ ಅಭಿಮಾನಿಗಳ (Yash Fans) ಕುಟುಂಬಕ್ಕೆ ರಾಜ್ಯ ಸರ್ಕಾರ (Government Of Karnataka) ಪರಿಹಾರ ಘೋಷಣೆ ಮಾಡಿದೆ.

    ಈ ಸಂಬಂಧ ಮಾತನಾಡಿರುವ ಸಚಿವ ಹೆಚ್.ಕೆ ಪಾಟೀಲ್ (HK Patil), ವಿದ್ಯುತ್ ಸ್ಪರ್ಶದಿಂದ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದೇವೆ. ಗಾಯಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯಶ್ ಬರ್ತ್‍ಡೇಗೆ ಬೃಹತ್ ಕಟೌಟ್ ನಿಲ್ಲಿಸುವಾಗ ವಿದ್ಯುತ್ ಸ್ಪರ್ಶ – ಮೂವರ ದುರ್ಮರಣ

    ಮುಂದುವರಿದು, ಯಶ್ ಅಭಿಮಾನಿಗಳು ಮೃತಪಟ್ಟಿರುವ ಘಟನೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ನಟ ಯಶ್ ಸಹ ನನ್ನ ಜೊತೆ ಮಾತನಾಡಿದ್ದಾರೆ. ಅಭಿಮಾನಿಗಳ ಮನೆಗೆ ಅವರಿಂದು ಭೇಟಿ ನೀಡಲಿದ್ದಾರೆ. ಎತ್ತರದಲ್ಲಿ ಫ್ಲೆಕ್ಸ್ ಹಾಕುವಾಗ ಭದ್ರತಾ ವೈಫಲ್ಯವಾಗುತ್ತಿದೆ. ಈ ರೀತಿ ಘಟನೆಗಳು ನಡೆಯದಂತೆ ಏನೆಲ್ಲಾ ಎಚ್ಚರಿಕೆ ವಹಿಸಬಹುದು ಎಂದು ಸಿಎಂ ಜೊತೆಗೆ ಚರ್ಚೆ ಮಾಡ್ತೀವಿ. ನಂತರ ಕ್ರಮವನ್ನು ಅನುಷ್ಠಾನಗೊಳಿಸುತ್ತೇವೆ ಎಂದು ವಿವರಿಸಿದ್ದಾರೆ.

    ಮೃತ ಅಭಿಮಾನಿಗಳ ಮನೆಗೆ ಇಂದು ಯಶ್ ಭೇಟಿ:
    ಫ್ಲೆಕ್ಸ್ ಹಾಕುವಾಗ ಮೃತಪಟ್ಟಿರುವ ಮೂವರು ಅಭಿಮಾನಿಗಳ ಕುಟುಂಬಸ್ಥರನ್ನು ಭೇಟಿ ಮಾಡಲು ಸೋಮವಾರ (ಜ.8) ಸಂಜೆಯೇ ನಟ ಯಶ್ ಗದಗ ಜಿಲ್ಲೆಗೆ ತೆರಳಲಿದ್ದಾರೆ ಎನ್ನುವ ಮಾಹಿತಿ ಇದೆ. ಅವರ ಆಪ್ತರ ಪ್ರಕಾರ, ವಿದೇಶದಿಂದ ಬರುತ್ತಿದ್ದಂತೆಯೇ ಹೆಲಿಕಾಪ್ಟರ್‌ನಲ್ಲಿ ಯಶ್ ಗದಗಕ್ಕೆ ಆಗಮಿಸಿ, ಅಲ್ಲಿಂದ ಮೃತ ಅಭಿಮಾನಿಗಳ ಮನೆಗೆ ತೆರಳಲಿದ್ದಾರೆ. 3 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ 4 ಗಂಟೆಗೆ ಬೈರೋಡ್ ಲಕ್ಷ್ಮೀಶ್ವರಕ್ಕೆ ಮೃತ ಅಭಿಮಾನಿಗಳ ಮನೆಗೆ ಭೇಟಿ ಕೊಡಲಿದ್ದಾರೆ. ಇದನ್ನೂ ಓದಿ: ವಿದ್ಯುತ್ ಸ್ಪರ್ಶ ಘಟನೆ: ಮೃತ ಅಭಿಮಾನಿಗಳ ಮನೆಗೆ ಇಂದು ಯಶ್ ಭೇಟಿ

    ಏನಿದು ಘಟನೆ?
    ಖ್ಯಾತ ನಟ ಯಶ್ ಅವರ ಹುಟ್ಟುಹಬ್ಬಕ್ಕೆ ಬೃಹತ್ ಗಾತ್ರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ 3 ಯುವಕರು ಸಾವನ್ನಪ್ಪಿದ ಘಟನೆ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತರನ್ನು ಹನುಮಂತ ಹರಿಜನ್ (24), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (20) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಂಜುನಾಥ್, ಪ್ರಕಾಶ್ ಹಾಗೂ ಹನುಮಂತ ಎಂಬವರಿಗೆ ಗಂಭೀರ ಗಾಯಾಳಾಗಿವೆ.

  • ಐವರ ಅಸ್ಥಿಪಂಜರ ಪತ್ತೆ ಕೇಸ್‌ – ಮರಣೋತ್ತರ ಪರೀಕ್ಷಾ ವರದಿಯಲ್ಲೂ ಪತ್ತೆಯಾಗದ ಸತ್ಯಾಂಶ

    ಐವರ ಅಸ್ಥಿಪಂಜರ ಪತ್ತೆ ಕೇಸ್‌ – ಮರಣೋತ್ತರ ಪರೀಕ್ಷಾ ವರದಿಯಲ್ಲೂ ಪತ್ತೆಯಾಗದ ಸತ್ಯಾಂಶ

    ಚಿತ್ರದುರ್ಗ: ಇಲ್ಲಿನ ಪಾಳುಬಿದ್ದ ಮನೆಯಲ್ಲಿ ಪತ್ತೆಯಾಗಿದ್ದ ಐವರ ಅಸ್ಥಿಪಂಜರಗಳ (Skeleton) ಮರಣೋತ್ತರ ಪರೀಕ್ಷಾ ವರದಿ ಪೊಲೀಸರ ಕೈ ಸೇರಿದೆ. ಆದರೆ ಅದು ಕೊಲೆಯೊ? ಆತ್ಮಹತ್ಯೆಯೊ? ಎಂಬ ಅನುಮಾನಕ್ಕೆ ತೆರೆಬಿದ್ದಿಲ್ಲ.

    2023ರ ಡಿಸೆಂಬರ್ 28ರಂದು ಚಿತ್ರದುರ್ಗದ (Chitradurga) ಜಗನ್ನಾಥರೆಡ್ಡಿ ಅವರ ಪಾಳುಬಿದ್ದ ಮನೆಯಲ್ಲಿ ಪತ್ತೆಯಾಗಿದ್ದ ಐವರ ಅಸ್ಥಿಪಂಜರಗಳಿಂದಾಗಿ ಈ ಪ್ರಕರಣದ ಸುತ್ತ ಹಲವು ಅನುಮಾನಗಳ ಹುತ್ತ ಬೆಳೆದಿತ್ತು. ಹೀಗಾಗಿ ಮರಣೋತ್ತರ ಪರೀಕ್ಷಾ ವರದಿಯಿಂದ ಸತ್ಯಾಂಶ ಹೊರಬೀಳುವ ಭರವಸೆ ಪೊಲೀಸರಲ್ಲಿತ್ತು.

    ಇನ್ನು ಕಳೆದ‌ ಒಂದು ‌ವಾರದ ಹಿಂದೆ ಅಸ್ತಿ ಪಂಜರಗಳ ಮರಣೋತ್ತರ ಪರೀಕ್ಷೆ ನಡೆಸಿದ್ದ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ತಜ್ಞ ವೈದ್ಯ ವೇಣು ಅವರು, ಭಾನುವಾರ (ಜ.7) ರಾತ್ರಿ ಆ ವರದಿಯನ್ನು, ಬಡಾವಣೆ ಠಾಣೆ ಪಿಐ ನಯೂಮ್ ಅವರಿಗೆ ಹಸ್ತಾಂತರಿಸಿದ್ದಾರೆ‌. ಆದರೆ ಆ ವರದಿಯಲ್ಲಿ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸುಳಿವು ಸಿಕ್ಕಿಲ್ಲ. ವರದಿಯಲ್ಲಿ ಕೇವಲ FSL ವರದಿ ಬಾಕಿ ಇದೆ ಎಂದಷ್ಟೇ ಉಲ್ಲೇಖವಾಗಿದೆ. ಹೀಗಾಗಿ ಇದು ಕೊಲೆಯೋ? ಆತ್ಮಹತ್ಯೆಯೋ? ಎಂಬ ಶಂಕೆಗೆ ತೆರೆ ಎಳೆಯಲಾಗದೇ ಪೊಲೀಸರು ಮತ್ತೆ ಗೊಂದಲಕ್ಕೀಡಾಗಿದ್ದಾರೆ.

    ಇದು ವಿಷ ಸೇವಿಸಿ ಆತ್ಮಹತ್ಯೆಯೋ? ಸೈನಡ್ ಸೇವಿಸಿ ಆತಹತ್ಯೆಯೋ? ಅಥವಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಅನ್ನೋ ಬಗ್ಗೆ ಅನುಮಾನಗಳು ಮೂಡಿದ್ದು, ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ. ಎಫ್‌ಎಸ್‌ಎಲ್‌ ವರದಿಗೆ ಸಾಧ್ಯತೆ ಇದೆ‌ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಐವರ ಅಸ್ಥಿಪಂಜರ ಪತ್ತೆ ಕೇಸ್‍ಗೆ ಟ್ವಿಸ್ಟ್- ಪಾಳು ಬಿದ್ದ ಮನೆಯಲ್ಲಿ ಸಿಕ್ಕ ಡೆತ್‍ನೋಟ್‍ನಲ್ಲೇನಿದೆ?

    ಏನಾಗಿತ್ತು?
    ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್ ಗೇಟ್ ಬಳಿಯ ಜಿಲ್ಲಾಕಾರಗೃಹ ರಸ್ತೆಯ ಮನೆಯಲ್ಲಿರುವ ಮನೆಯೊಂದರಲ್ಲಿ ಐವರ ಅಸ್ಥಿಪಂಜರ ಪತ್ತೆಯಾಗಿತ್ತು. ಈ ಮನೆ ನಿವೃತ್ತ ಇಂಜಿನಿಯರ್ ಜಗನ್ನಾಥ್ ರೆಡ್ಡಿಯವರದ್ದಾಗಿದೆ. ಮನೆಯಲ್ಲಿ ಜಗನ್ನಾಥ್ ಪತ್ನಿ ಪ್ರೇಮಕ್ಕ ಮಕ್ಕಳಾದ ಕೃಷ್ಣರೆಡ್ಡಿ, ನರೇಂದ್ರ, ತ್ರಿವೇಣಿ ವಾಸವಾಗಿದ್ದರು. ಆದ್ರೆ ಹಲವು ವರ್ಷಗಳಿಂದ ಅವರ ಸಂಬಂಧಿಗಳು, ಸ್ನೇಹಿತರು ಹಾಗೂ ಅಕ್ಕಪಕ್ಕದ ನಿವಾಸಿಗಳ ಸಂಪರ್ಕಕ್ಕೂ ಕುಟುಂಬಸ್ಥರು ಬಂದಿರಲಿಲ್ಲ. ಎಲ್ಲೊ ದೂರದ ಊರಲ್ಲಿ ಅನಾಥಾಶ್ರಮದಲ್ಲಿ ನೆಲೆಸಿರಬಹುದು ಅಂತಲೇ ಎಲ್ರೂ ಭಾವಿಸಿದ್ರು. ಅಲ್ದೇ ಜಗನ್ನಾಥ್ ರೆಡ್ಡಿಯ ಮೂವರು ಮಕ್ಕಳಿಗೂ ವಿವಾಹವಾಗಿರಲಿಲ್ಲ. ಇದನ್ನೂ ಓದಿ: ಅಸ್ಥಿಪಂಜರ ಪತ್ತೆ ಕೇಸ್‌: ಮಾನಸಿಕ ಅಸ್ವಸ್ಥತೆಯಿಂದ ಆತ್ಮಹತ್ಯೆಗೆ ಶರಣಾಗಿತ್ತಾ ಇಡೀ ಕುಟುಂಬ? – ಪೊಲೀಸರ ತನಿಖೆ ಚುರುಕು

    ಮೊದಲ ಮಗ ಕೃಷ್ಣರೆಡ್ಡಿ ನಿರುದ್ಯೋಗಿಯಾಗಿದ್ದರಂತೆ, ಮತ್ತೋರ್ವ ನರೇಂದ್ರರೆಡ್ಡಿ 2013ರಲ್ಲಿ ಬೆಂಗಳೂರಿನ ಬಿಡದಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡೋದನ್ನ ಬಿಟ್ಟು ದರೋಡೆ ಕೇಸ್‌ನಲ್ಲಿ ಕೆಲದಿನ ಜೈಲು ಶಿಕ್ಷೆಗೆ ಗುರಿಯಾದರು. ಹಾಗೆಯೇ ಇದ್ದ ಓರ್ವ ಪುತ್ರಿಯಾದ ತ್ರಿವೇಣಿ ಬೋನ್ ಮ್ಯಾರೊ ಎಂಬ ಮೂಳೆ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಇವರ ಹಿರಿಯ ಮಗ ಮಂಜುನಾಥ ರೆಡ್ಡಿ ಕೇರಳದಲ್ಲಿ ಸಾವನ್ನಪ್ಪಿದ್ರು. ಹೀಗಾಗಿ ಇಡೀ ಕುಟುಂಬ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಕಳೆದ 8 ವರ್ಷಗಳಿಂದ ಯಾರ ಸಂಪರ್ಕದಲ್ಲಿರಲಿಲ್ಲ ಎಂದು ಜಗನ್ನಾಥ್ ಪತ್ನಿಯಾದ ಪ್ರೇಮಕ್ಕ ಅವರ ಸಹೋದರಿ ಲಲಿತಮ್ಮ ತಿಳಿಸಿದ್ದರು.

  • 5 ಅಸ್ಥಿಪಂಜರ ಪತ್ತೆ ಪ್ರಕರಣ- ತಮ್ಮ ತಮ್ಮ ಮನೆಗಳಿಗೆ ಬೀಗ ಹಾಕಿ ತೆರಳಿದ ಅಕ್ಕಪಕ್ಕದ ನಿವಾಸಿಗಳು

    5 ಅಸ್ಥಿಪಂಜರ ಪತ್ತೆ ಪ್ರಕರಣ- ತಮ್ಮ ತಮ್ಮ ಮನೆಗಳಿಗೆ ಬೀಗ ಹಾಕಿ ತೆರಳಿದ ಅಕ್ಕಪಕ್ಕದ ನಿವಾಸಿಗಳು

    ಚಿತ್ರದುರ್ಗ: ಐದು ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಕ್ಕಪಕ್ಕದ ನಿವಾಸಿಗಳು ತಮ್ಮ ತಮ್ಮ ಮನೆಗಳಿಗೆ ಬೀಗ ಹಾಕಿ ತೆರಳಿದ್ದಾರೆ.

    ಹೌದು. ಸದಾ ಜನನಿಬಿಡ‌ಪ್ರದೇಶವಾಗಿದ್ದ‌ ಜಿಲ್ಲಾ ಕಾರಾಗೃಹ ರಸ್ತೆ ಇದೀಗ ಬಿಕೋ ಎನ್ನುತ್ತಿದೆ. ಕಾರಣ ಪಾಳು ಬಿದ್ದ ಮನೆಯ ಅಕ್ಕಪಕ್ಕದ‌ ನಿವಾಸಿಗಳು ಆತಂಕಗೊಂಡು ತಮ್ಮ ತಮ್ಮ ಮನೆಗಳಿಗೆ ಬೀಗ ಹಾಕಿ ನೆಂಟರ ಊರುಗಳಿಗೆ ತೆರಳಿದ್ದಾರೆ.

    ಇತ್ತ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆಯಲ್ಲಿ ಭಯಗೊಂಡಿರುವ ವಾಯುವಿಹಾರಿಗಳು ಕೂಡ ಇಂದು ರಸ್ತೆಯತ್ತ ಮುಖಮಾಡಿಲ್ಲ. ಪ್ರತಿ ದಿನ ನಾಗರಿಕರು ಬೆಳಗ್ಗೆ ಮತ್ತು ಸಂಜೆ ಈ ರಸ್ತೆಯಲ್ಲಿ ವಾಕಿಂಗ್‌ ಬರುತ್ತಿದ್ದರು. ಆದರೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಅವರು ಕೂಡ ಭಯಗೊಂಡಿದ್ದಾರೆ. ಇದೇ ರಸ್ತೆಯ ಕೊನೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಗಳು ಇದ್ದು, ಅಲ್ಲಿಗೂ ಗ್ರಾಹಕರು ಬರುತ್ತಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ವಾಹನ ಸಂಚಾರ, ಜನದಟ್ಟಣೆ ಇಲ್ಲದೇ ಜೈಲು ರಸ್ತೆ‌ ಬಿಕೋ ಎನ್ನುತ್ತಿದೆ. ಇದನ್ನೂ ಓದಿ: ಅಸ್ಥಿಪಂಜರ ಪತ್ತೆ ಕೇಸ್‌: ಮಾನಸಿಕ ಅಸ್ವಸ್ಥತೆಯಿಂದ ಆತ್ಮಹತ್ಯೆಗೆ ಶರಣಾಗಿತ್ತಾ ಇಡೀ ಕುಟುಂಬ? – ಪೊಲೀಸರ ತನಿಖೆ ಚುರುಕು

    ಏನಿದು ಘಟನೆ..?: ಚಿತ್ರದುರ್ಗದ ನಗರದ (Chitradurga) ಪಾಳು ಬಿದ್ದ ಮನೆಯೊಂದರಲ್ಲಿ 5 ಅಸ್ಥಿಪಂಜರ (Five Skeletal Remains) ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಸತತ 4 ವರ್ಷಗಳಿಂದ ಬಾಗಿಲು ಮುಚ್ಚಿದ್ದ ಮನೆಯಲ್ಲಿ ಐದು ಅಸ್ಥಿಪಂಜರ (Skeleton) ಪತ್ತೆಯಾಗಿವೆ ಎಂದು ದೂರು ದಾಖಲಾಗಿತ್ತು. ಈ ಸಂಬಂಧ ಪವನ್ ಕುಮಾರ್ ಎಂಬವರು ಬಡಾವಣೆ ಠಾಣೆಗೆ ದೂರು ನೀಡಿದ್ದರು. ಸಂಬಂಧಿ ಜಗನ್ನಾಥ ರೆಡ್ಡಿ ಮತ್ತು ಕುಟುಂಬ ವಾಸವಾಗಿತ್ತು. ಸುಮಾರು ವರ್ಷಗಳಿಂದ ಜಗನ್ನಾಥ ರೆಡ್ಡಿ ಕುಟುಂಬ ನಮ್ಮ ಸಂಪರ್ಕದಲ್ಲಿರಲಿಲ್ಲ. ನಮ್ಮ ಮನೆಗೆ ಅವರು ಬರುತ್ತಿರಲಿಲ್ಲ. ಅವರ ಮನೆಗೆ ನಾವು ಹೋಗುತ್ತಿರಲಿಲ್ಲ. ಕೆಲ ವರ್ಷಗಳಿಂದ ಜಗನ್ನಾಥ ರೆಡ್ಡಿ ಮತ್ತು ಕುಟುಂಬದವರು ಕಂಡಿಲ್ಲ. ಜಗನ್ನಾಥ ರೆಡ್ಡಿ ಮನೆಯಲ್ಲಿ ಪತ್ತೆ ಆಗಿರುವುದು ಅವರ ಅಸ್ಥಿಪಂಜರ ಆಗಿರಬಹುದೆಂಬ ಶಂಕೆ ಇದೆ. 3 ವರ್ಷದ ಹಿಂದೆಯೇ ಮನೆಯಲ್ಲಿ ಮೃತಪಟ್ಟಿರಬಹುದು ಎಂದು ಮೃತರ ಸಾವಿನ ಬಗ್ಗೆ ಅನುಮಾನ ಇದೆ ಎಂದು ದೂರಿನಲ್ಲಿ ತಿಳಿಸಿದ್ದರು.

    ಈ ಸಂಬಂಧ ಎಸ್‌ಪಿ ಧರ್ಮೇಂದರ್ ಕುಮಾರ್, ಡಿವೈಎಸ್ಪಿ ಅನಿಲ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ 4 ವರ್ಷದ ಹಿಂದಿನ ಡೆತ್‍ನೋಟ್ (Deathnote) ಈ ಐವರ ಸಾವಿನ ಸುಳಿವನ್ನು ಕೊಟ್ಟಿತ್ತು. ಸಾವಿಗೂ ಮುನ್ನ ಈ ಐವರು ಡೆತ್‍ನೋಡ್ ಬರೆದಿಟ್ಟಿದ್ದು, ಅದರಲ್ಲಿ ಕಾರಣವನ್ನು ತಿಳಿಸಿದ್ದಾರೆ. ಜೈಲು ಪಾಲಾಗಿದ್ದಕ್ಕೆ ಮನನೊಂದು ಐವರು ಸಾವಿಗೆ ಶರಣಾಗಿರುವುದು ಬಯಲಾಗಿತ್ತು. ಇದನ್ನೂ ಓದಿ: ಐವರ ಅಸ್ಥಿಪಂಜರ ಪತ್ತೆ ಕೇಸ್‍ಗೆ ಟ್ವಿಸ್ಟ್- ಪಾಳು ಬಿದ್ದ ಮನೆಯಲ್ಲಿ ಸಿಕ್ಕ ಡೆತ್‍ನೋಟ್‍ನಲ್ಲೇನಿದೆ?

    ಮೃತ ಜಗನ್ನಾಥರೆಡ್ಡಿ ಪುತ್ರ ನರೇಂದ್ರರೆಡ್ಡಿ ವಿರುದ್ಧ ದರೋಡೆ ಪ್ರಕರಣ ದಾಖಲಾಗಿತ್ತು. 2013ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ನರೇಂದ್ರ ರೆಡ್ಡಿ ಎಂಜಿನಿಯರ್ ಆಗಿದ್ದರು. ಇದೇ ವರ್ಷ ಬಿಡದಿ ಬಳಿ ಅವರ ವಾಹನವನ್ನು ತಡೆದು ದರೋಡೆ ಕೇಸ್ ದಾಖಲು ಮಾಡಲಾಗಿತ್ತು. ನರೇಂದ್ರ ಅವರು ತಮ್ಮ ಗೆಳೆಯರ ಜೊತೆ ತೆರಳಿ ದರೋಡೆ ಕೇಸಲ್ಲಿ ಭಾಗಿ ಆಗಿದ್ದರು. ಹೀಗಾಗಿ ದರೋಡೆ ಕೇಸಲ್ಲಿ ಕೆಲದಿನ ಜೈಲುವಾಸವನ್ನೂ ಅನುಭವಿಸಿದ್ದರು. ನರೇಂದ್ರರೆಡ್ಡಿ ವಿರುದ್ಧದ ಕೇಸಿನಿಂದ ಮನನೊಂದಿದ್ದ ಕುಟುಂಬ 2019ರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಶರಣಾಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಸದ್ಯ ಪ್ರಕರಣದ ತನಿಖೆ ಚುರುಕುಗೊಂಡಿದೆ.

  • ಐವರ ಅಸ್ಥಿಪಂಜರ ಪತ್ತೆ ಕೇಸ್‍ಗೆ ಟ್ವಿಸ್ಟ್- ಪಾಳು ಬಿದ್ದ ಮನೆಯಲ್ಲಿ ಸಿಕ್ಕ ಡೆತ್‍ನೋಟ್‍ನಲ್ಲೇನಿದೆ?

    ಐವರ ಅಸ್ಥಿಪಂಜರ ಪತ್ತೆ ಕೇಸ್‍ಗೆ ಟ್ವಿಸ್ಟ್- ಪಾಳು ಬಿದ್ದ ಮನೆಯಲ್ಲಿ ಸಿಕ್ಕ ಡೆತ್‍ನೋಟ್‍ನಲ್ಲೇನಿದೆ?

    – ಸಾಕು ನಾಯಿ ಕಳೇಬರ ಪತ್ತೆ
    – ಮೃತರ ಸಂಬಂಧಿಕರು ಕಣ್ಣೀರಾಕಿ ಹೇಳಿದ್ದೇನು?

    ಚಿತ್ರದುರ್ಗ: ಪಾಳು ಬಿದ್ದ ಮನೆಯಲ್ಲಿ ಐವರ ಅಸ್ಥಿ ಪಂಜರ (Five Skeletal Remains) ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. 4 ವರ್ಷದ ಹಿಂದಿನ ಡೆತ್‍ನೋಟ್ (Deathnote) ಇದೀಗ ಐವರ ಸಾವಿನ ಸುಳಿವನ್ನು ಕೊಟ್ಟಿದೆ.

    ಜೈಲು ಪಾಲಾಗಿದ್ದಕ್ಕೆ ಮನನೊಂದು ಐವರು ಸಾವಿಗೆ ಶರಣಾಗಿರುವುದು ಬಯಲಾಗಿದೆ. ಸಾವಿಗೂ ಮುನ್ನ ಈ ಐವರು ಡೆತ್‍ನೋಡ್ ಬರೆದಿಟ್ಟಿದ್ದು, ಅದರಲ್ಲಿ ಕಾರಣವನ್ನು ತಿಳಿಸಿದ್ದಾರೆ.

    ಡೆತ್‍ನೋಟ್‍ನಲ್ಲೇನಿದೆ..?: ಮೃತ ಜಗನ್ನಾಥರೆಡ್ಡಿ ಪುತ್ರ ನರೇಂದ್ರರೆಡ್ಡಿ ವಿರುದ್ಧ ದರೋಡೆ ಪ್ರಕರಣ ದಾಖಲಾಗಿತ್ತು. 2013ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ನರೇಂದ್ರ ರೆಡ್ಡಿ ಎಂಜಿನಿಯರ್ ಆಗಿದ್ದರು. ಇದೇ ವರ್ಷ ಬಿಡದಿ ಬಳಿ ಅವರ ವಾಹನವನ್ನು ತಡೆದು ದರೋಡೆ ಕೇಸ್ ದಾಖಲು ಮಾಡಲಾಗಿತ್ತು. ನರೇಂದ್ರ ಅವರು ತಮ್ಮ ಗೆಳೆಯರ ಜೊತೆ ತೆರಳಿ ದರೋಡೆ ಕೇಸಲ್ಲಿ ಭಾಗಿ ಆಗಿದ್ದರು. ಹೀಗಾಗಿ ದರೋಡೆ ಕೇಸಲ್ಲಿ ಕೆಲದಿನ ಜೈಲುವಾಸವನ್ನೂ ಅನುಭವಿಸಿದ್ದರು. ನರೇಂದ್ರರೆಡ್ಡಿ ವಿರುದ್ಧದ ಕೇಸಿನಿಂದ ಮನನೊಂದಿದ್ದ ಕುಟುಂಬ 2019ರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಶರಣಾಗಿದೆ.

    ಸಾಕು ನಾಯಿ ಸಾವು: ಜಗನ್ನಾಥರೆಡ್ಡಿ ಮನೆಯಲ್ಲಿದ್ದ ಒಂದು ಸಾಕುನಾಯಿ ಸಹ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಪಾಳು ಬಿದ್ದ ಮನೆಯಲ್ಲಿ ಐವರ ಅಸ್ಥಿ ಪಂಜರ ಪತ್ತೆ ಕೇಸ್ ಸಂಬಂಧಿಸಿದಂತೆ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮನೆಯಲ್ಲಿ ಸಾಕಿದ್ದ ನಾಯಿಯೊಂದು ಸಾವಿಗೀಡಾಗಿದ್ದು ಪತ್ತೆಯಾಗಿದೆ. ಇದನ್ನೂ ಓದಿ: ಚಿತ್ರದುರ್ಗ; ಪಾಳುಬಿದ್ದ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ – ಮನೆಯಲ್ಲಿ ಸಿಕ್ತು 2019 ರ ಕ್ಯಾಲೆಂಡರ್‌

    ರೆಡ್ಡಿ ಸಂಬಂಧಿಕರು ಹೇಳಿದ್ದೇನು..?: ಪಾಳು ಬಿದ್ದ ಮನೆಯಲ್ಲಿ ಐವರ ಅಸ್ಥಿ ಪಂಜರ ಪತ್ತೆಯಾದ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಮೃತ ಜಗನ್ನಾಥ ರೆಡ್ಡಿ ಸಹೋದರನ ಪತ್ನಿ ಕೊಲ್ಲಿಲಕ್ಷ್ಮಿ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಜಗನ್ನಾಥ ರೆಡ್ಡಿ ಕುಟುಂಬಸ್ಥರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಸಕಾಲಕ್ಕೆ ಮಕ್ಕಳ ಮದುವೆ ಆಗದಿದ್ದಕ್ಕೆ ಮನನೊಂದಿದ್ದರು. ಮನನೊಂದು ಸಾವಾಗಿರುವ ಶಂಕೆ ವ್ಯಕ್ತಪಡಿಸಿದ ಅವರು, ಹಲವು ವರ್ಷಗಳಿಂದ ನಮ್ಮ ಸಂಪರ್ಕದಲ್ಲಿ ಇರಲಿಲ್ಲ ಎಂದರು.

    ಇತ್ತ ಮೃತ ಪ್ರೇಮಕ್ಕ ಸಹೋದರಿ ಲಲಿತಾ ಪ್ರತಿಕ್ರಿಯಿಸಿ, 8 ವರ್ಷದಿಂದ ಅವರು ಸಂಪರ್ಕದಲ್ಲಿ ಇಲ್ಲ. 8 ವರ್ಷಗಳಿಂದ ಫೋನ್ ಮಾಡ್ತಿದ್ದೆ ಸಿಗ್ತಿರಲಿಲ್ಲ. ಎಲ್ಲೋ ಅನಾಥಶ್ರಮಕ್ಕೆ ಸೇರಬಹುದು ಅಂತಾ ಸುಮ್ಮನಾದೆ. ನನ್ನ ತಂಗಿ ಯಾರದ್ದೂ ಮದುವೆ ಮಾಡಲಿಲ್ಲ. ನನ್ನ ತಂಗಿ ಮಾಡಿದ ತಪ್ಪಿಗೆ ಯಾರಿಗೂ ಮದುವೆಯಾಗಿಲ್ಲ ಎಮದು ಅವರು ಬೇಸರ ವ್ಯಕ್ತಪಡಿಸಿದರು.

  • ಆಟವಾಡುತ್ತಾ ನದಿಗೆ ಬಿದ್ದ ಮಗುವಿನ ರಕ್ಷಣೆಗಾಗಿ ಧುಮುಕಿದ ಐವರು ಸಾವು!

    ಆಟವಾಡುತ್ತಾ ನದಿಗೆ ಬಿದ್ದ ಮಗುವಿನ ರಕ್ಷಣೆಗಾಗಿ ಧುಮುಕಿದ ಐವರು ಸಾವು!

    ಕಾರವಾರ: ಪ್ರವಾಸಕ್ಕೆಂದು ನದಿ ತೀರಕ್ಕೆ ತೆರಳಿದ್ದ ಒಂದೇ ಕುಟುಂಬದ ಐವರು ನದಿಯಲ್ಲಿ ಮುಳುಗಿ ಸಾವು ಕಂಡ ಘಟನೆ ಉತ್ತರಕನ್ನಡ (Uttara Kannada) ಜಿಲ್ಲೆಯ ಶಿರಸಿಯ ಶಾಲ್ಮಲಾ ನದಿಯ ಭೀಮನಗುಂಡಿಯಲ್ಲಿ ಭಾನುವಾರ ನಡೆದಿದೆ.

    ಮೃತರು ಶಿರಸಿಯ ರಾಮನಬೈಲ್ ಹಾಗೂ ಕಸ್ತೂರಬಾ ನಗರ ನಿವಾಸಿಗಳಾಗಿದ್ದು ರಾಮನಬೈಲಿನ ನಿವಾಸಿಗಳಾದ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ನಾದಿಯಾ ನೂರ್ ಅಹಮದ್ ಶೇಖ್ (20), ನಬಿಲ್ ನೂರ್ ಅಹಮದ್ ಶೇಖ್(22), ವಿದ್ಯಾರ್ಥಿ ಉಮರ್ ಸಿದ್ದಿಕ್ (14) ಹಾಗೂ ಕಸ್ತೂರಬಾ ನಗರದ ವಿದ್ಯಾರ್ಥಿ ಮಿಸ್ಬಾ ತಬಸುಮ್ (21) ಸಾವಿಗೀಡಾದವರಾಗಿದ್ದಾರೆ.

    ಮಗುವೊಂದು ಆಡುವಾಗ ನದಿಗೆ ಬಿದ್ದಿದ್ದು ಮಗು ರಕ್ಷಣೆಗಾಗಿ ಸಲೀಮ್ ಕಲೀಲ್ ನದಿಗೆ ಧುಮುಕಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಗು ರಕ್ಷಣೆಗೆ ಉಳಿದವರೂ ನದಿಗೆ ಇಳಿದಿದ್ದು, ಈ ಸಂದರ್ಭದಲ್ಲಿ ಮಗು ರಕ್ಷಣೆ ಮಾಡಿದ ಸಲೀಮ್ ಉಳಿದವರನ್ನು ಸಹ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಆದರೆ ನೀರಿಗಿಳಿದ ಎಲ್ಲರೂ ಮುಳುಗಿ ಸಾವು ಕಂಡಿದ್ದಾರೆ. ಇದನ್ನೂ ಓದಿ: ಮನೆ ಬಳಿ ಮೂತ್ರ ವಿಸರ್ಜಿಸಿದಳೆಂದು ಮಹಿಳೆಯ ಗುಪ್ತಾಂಗಕ್ಕೆ ರಾಡ್‍ನಿಂದ ಹಲ್ಲೆ!

    ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸಲೀಮ್ ಕಲೀಲ್ ರೆಹಮಾನ್, ನಾದಿಯಾ ನೂರ್ ಶವವನ್ನು ಹೊರಕ್ಕೆ ತೆಗೆದಿದ್ದು, ಮೂರು ಜನರ ಶವ ಪತ್ತೆಯಾಗಬೇಕಿದೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಐದು ಜನ ನೀರಿನಲ್ಲಿ ಸಾವು ಕಂಡವರು ಒಂದೇ ಕುಟುಂಬದವರಾಗಿದ್ದಾರೆ. ಇನ್ನು ಕಳೆದ ತಿಂಗಳಷ್ಟೇ ಹಸಮಣೆ ಏರಿ ಕುಟುಂಬದ ಕನಸು ಕಂಡಿದ್ದ ಶಿರಸಿಯ ನಾದಿಯಾ ನೂರ್ ಮಗು ರಕ್ಷಣೆ ಮಾಡಲು ಹೋಗಿ ಸಾವು ಕಂಡಿದ್ದು ವಿಧಿಯಾಟವೇ ಸರಿ.

  • ಮದ್ಯಸೇವಿಸಿ ಕಾರ್ಯಕ್ರಮಕ್ಕೆ ಹೋಗ್ತಾರೆ, ನಮ್ಮನ್ನು ನಿರ್ಲಕ್ಷಿಸಿದ್ದಾರೆ – ಪಂಜಾಬ್ ಸಿಎಂ ವಿರುದ್ಧ ಪುತ್ರಿ ಕೆಂಡ

    ಮದ್ಯಸೇವಿಸಿ ಕಾರ್ಯಕ್ರಮಕ್ಕೆ ಹೋಗ್ತಾರೆ, ನಮ್ಮನ್ನು ನಿರ್ಲಕ್ಷಿಸಿದ್ದಾರೆ – ಪಂಜಾಬ್ ಸಿಎಂ ವಿರುದ್ಧ ಪುತ್ರಿ ಕೆಂಡ

    – ಮಕ್ಕಳನ್ನು ಸರಿಯಾಗಿ ನೋಡದವನು ರಾಜ್ಯವನ್ನು ಹೇಗೆ ಆಳುತ್ತಾನೆ?
    – ತಾಯಿಗೆ ತಂದೆಯಿಂದ ದೈಹಿಕ ಕಿರುಕುಳ

    ಚಂಡೀಗಢ: ಪಂಜಾಬ್ (Punjab) ಸಿಎಂ ಅಸೆಂಬ್ಲಿ, ಗುರುದ್ವಾರ ಅಥವಾ ಪತ್ರಿಕಾಗೋಷ್ಠಿಗಳಿಗೆ ಅಮಲೇರಿದ ಸ್ಥಿತಿಯಲ್ಲಿ ಹೋಗುತ್ತಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಪುತ್ರಿ (Daughter) ಆರೋಪಿಸಿದ್ದಾರೆ.

    ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪುತ್ರಿ ಸೀರತ್ ಮಾನ್ (Seerat Mann) ತಮ್ಮ ತಂದೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಸೀರತ್ ಅವರು ಸಿಎಂ ಭಗವಂತ್ ಮಾನ್ ಅವರ ಮಗಳು ಎಂದು ಹೇಳಿಕೊಂಡಿದ್ದಾರೆ. ಆದರೆ ಆಕೆ ಅಪ್ಪ ಎಂದು ಕರೆಯುವ ಹಕ್ಕನ್ನು ಕಳೆದುಕೊಂಡಿದ್ದು, ಅವರನ್ನು ಸಿಎಂ ಮಾನ್ ಎಂದು ಕರೆಯುವುದಾಗಿ ತಿಳಿಸಿದ್ದಾರೆ. ನಾನು ಈ ವಿಡಿಯೋ ಮಾಡುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ನನ್ನ ಕಥೆ ಹೊರಬರಲಿ ಎಂದು ನಾನು ಬಯಸುತ್ತೇನೆ. ಜನರು ನಮ್ಮ ಬಗ್ಗೆ ಏನು ಕೇಳಿದ್ದಾರೆಯೋ ಅದನ್ನು ಸಿಎಂ ಮಾನ್ ಅವರೇ ಹೇಳಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಗೆಳತಿಯನ್ನು ಮದುವೆಯಾಗಲು ಲಿಂಗವನ್ನೇ ಬದಲಾಯಿಸಿಕೊಂಡ ಮಹಿಳೆ

    ನಾನು ಇಲ್ಲಿಯವರೆಗೆ ಮೌನವಾಗಿದ್ದು, ತಾಯಿ ಕೂಡ ಮೌನವಾಗಿದ್ದಾರೆ. ನಮ್ಮ ಮೌನವನ್ನು ನಮ್ಮ ದೌರ್ಬಲ್ಯವೆಂದು ಅವರು ಭಾವಿಸಿದ್ದಾರೆ. ನಮ್ಮ ಮೌನದಿಂದಾಗಿ ಅವರು ಪ್ರಸ್ತುತ ಉನ್ನತ ಸ್ಥಾನದಲ್ಲಿ ಕುಳಿತಿದ್ದಾರೆ ಎಂದು ಅವರಿಗೆ ತಿಳಿದಿಲ್ಲ ಎಂದಿದ್ದಾರೆ. ಈ ವೀಡಿಯೋದಲ್ಲಿ ಸಿಎಂ ಮಾನ್ ಪತ್ನಿ ಡಾ.ಗುರುಕಿರತ್ ಗರ್ಭಿಣಿಯಾಗಿದ್ದು, ಸಿಎಂ ಮಾನ್ ಮೂರನೇ ಬಾರಿಗೆ ತಂದೆಯಾಗಲಿದ್ದಾರೆ ಎಂದು ಸೀರತ್ ಮಾಹಿತಿ ನೀಡಿದ್ದಾರೆ. ಈ ವಿಚಾರ ಬೇರೆಯವರಿಂದ ತಿಳಿಯಿತು. ಮಾನ್ ತನಗೆ ಅಥವಾ ಸಹೋದರನಿಗೆ ಈ ಬಗ್ಗೆ ತಿಳಿಸಲು ಯಾವುದೇ ಕಾಳಜಿ ವಹಿಸಲಿಲ್ಲ ಎಂದು ಸೀರತ್ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು, ಮಹಾರಾಷ್ಟ್ರದಲ್ಲಿ ಎನ್‌ಐಎ ದಾಳಿ, 15 ಮಂದಿ ಅರೆಸ್ಟ್‌ – 51 ಹಮಾಸ್‌ ಧ್ವಜ, ಪಿಸ್ತೂಲ್‌, ಗನ್‌, ಮಾರಕಾಸ್ತ್ರಗಳು ಜಪ್ತಿ

    ನಿಮಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ನೀವು ಅವರನ್ನು ನಿರ್ಲಕ್ಷಿಸಿದ್ದೀರಿ ಮತ್ತು ಈಗ ಮೂರನೇ ಮಗುವನ್ನು ಈ ಜಗತ್ತಿಗೆ ತರಲು ಬಯಸಿದ್ದೀರಿ. ಇದಕ್ಕೆ ಕಾರಣವೇನು ಎಂದು ತಂದೆಯನ್ನು ಪ್ರಶ್ನಿಸಿದ ಸೀರತ್, ಭಗವಂತ್ ಮಾನ್ ಪುತ್ರ ದೋಷನ್ ತಂದೆಯನ್ನು ಭೇಟಿ ಮಾಡಲು ಎರಡು ಬಾರಿ ಪಂಜಾಬ್‌ಗೆ ಹೋಗಿದ್ದರು. ಅವನು ತನ್ನ ತಂದೆಯೊಂದಿಗೆ ಸಮಯ ಕಳೆಯಲು ಬಯಸುತ್ತಾನೆ. ಆದರೆ ಸಿಎಂ ತಮ್ಮ ಮನೆಗೆ ಬರಲು ದೋಷನ್‌ಗೆ ಅವಕಾಶ ನೀಡಲಿಲ್ಲ. ನಂತರ ಅವರು ಕುಟುಂಬದ ಸ್ನೇಹಿತರೊಂದಿಗೆ ಚಂಡೀಗಢದಲ್ಲಿ ಉಳಿದುಕೊಂಡರು. ಒಂದು ದಿನ ಅವರು ಮತ್ತೆ ಸಿಎಂ ಮಾನ್ ಮನೆಗೆ ಹೋದರು. ಆ ಸಂದರ್ಭದಲ್ಲಿ ಅವನನ್ನು ಮನೆಯಿಂದ ಹೊರಹಾಕಲಾಯಿತು ಮತ್ತು ಅಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಹೇಳಿ ಅಲ್ಲಿಂದ ಹೊರಡಲು ಹೇಳಿದರು. ತನ್ನ ಸ್ವಂತ ಮಕ್ಕಳ ಜವಾಬ್ದಾರಿಯನ್ನು ಹೊರಲಾಗದ ವ್ಯಕ್ತಿ ಪಂಜಾಬ್ ಜನತೆಯ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳುತ್ತಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಈ ಬಾರಿ 7.43 ಲಕ್ಷ ನಕಲಿ MGNREGA ಜಾಬ್ ಕಾರ್ಡ್ ಡಿಲೀಟ್ – ಯುಪಿಯಲ್ಲೇ ಅತಿ ಹೆಚ್ಚು

    ನಾವು ನೋಡಿದ್ದೆಲ್ಲ ಪಂಜಾಬ್‌ನ ಜನರಲ್ಲೂ ನಡೆಯುತ್ತಿದೆ. ಸಿಎಂ ಮಾನ್ ಅವರು ರಾಜಕೀಯಕ್ಕೆ ಹೋಗಬಾರದು ಎಂದು ತಾಯಿ ಬಯಸಿದ್ದರು ಎಂದು ಭಗವಂತ್ ಮಾನ್ ವಿಚ್ಛೇದನಕ್ಕೆ ಕಾರಣ ನೀಡಿದ್ದರು. ವಿಚ್ಛೇದನಕ್ಕೆ ಹಲವು ಕಾರಣಗಳಿವೆ ಮತ್ತು ಅದು ನನ್ನ ತಾಯಿಯೇ ಹೇಳುತ್ತಾರೆ. ಯಾವಾಗ ನನ್ನ ತಾಯಿ ಈ ಸತ್ಯ ಹೇಳಲು ಸಿದ್ಧರಾಗುತ್ತಾರೋ ಅವತ್ತು ಖಂಡಿತವಾಗಿಯೂ ಎಲ್ಲರಿಗೂ ತಮ್ಮ ಕಥೆಯನ್ನು ಹೇಳುತ್ತಾರೆ ಎಂದು ಸೀರತ್ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಮಾನ್ ಮತ್ತು ತನ್ನ ತಾಯಿಯ ವಿಚ್ಛೇದನಕ್ಕೆ ತಂದೆಯ ಮದ್ಯಪಾನ, ಮಾನಸಿಕ ಮತ್ತು ದೈಹಿಕ ಕಿರುಕುಳ, ಸುಳ್ಳು ಹೇಳುವ ಅಭ್ಯಾಸ ಮತ್ತು ಬೆದರಿಕೆಗಳು ಕೆಲವು ಕಾರಣ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ ಪ್ರಕರಣ – ಇಬ್ಬರು ಶೂಟರ್ ಸೇರಿ ಮೂವರು ಅರೆಸ್ಟ್

  • ಆರೋಪಿ ಪ್ರವೀಣ್ ಚೌಗಲೆಗೆ 14 ದಿನ ಪೊಲೀಸ್ ಕಸ್ಟಡಿ

    ಆರೋಪಿ ಪ್ರವೀಣ್ ಚೌಗಲೆಗೆ 14 ದಿನ ಪೊಲೀಸ್ ಕಸ್ಟಡಿ

    ಉಡುಪಿ: ಜಿಲ್ಲೆಯ ನೇಜಾರು (Nejaru) ಸಮೀಪದ ತೃಪ್ತಿ ಲೇಔಟ್‌ನಲ್ಲಿ ಒಂದೇ ಕುಟುಂಬದ (Family) ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಪೊಲೀಸರು ಕೋರ್ಟ್‌ಗೆ (Court) ಹಾಜರುಪಡಿಸಿದ್ದಾರೆ. ಕೋರ್ಟ್ ಆರೋಪಿಯನ್ನು (Accused) 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ (Police Custody) ನೀಡಿದೆ.

    ಉಡುಪಿಯಲ್ಲಿ (Udupi) ನಾಲ್ವರ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿಯ ಒಂದು ಹಂತದ ವಿಚಾರಣೆ ಮುಗಿಸಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಉಡುಪಿಯ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಮುಂದೆ ಸಂಜೆ 5:15ಕ್ಕೆ ಸರಿಯಾಗಿ ಹಾಜರುಪಡಿಸಿದರು. ಕೋರ್ಟ್ ಆರೋಪಿಯ ಬಳಿ ಕೆಲ ಮಾಹಿತಿಗಳನ್ನ ಪಡೆದುಕೊಂಡಿದೆ. ಇದನ್ನೂ ಓದಿ:‌ ಕೆಇಎ ಪರೀಕ್ಷೆಯಲ್ಲಿ ಹಿಜಬ್ ಧರಿಸಲು ಅವಕಾಶ – ಸರ್ಕಾರದ ನಡೆಗೆ ಭಾರೀ ಆಕ್ರೋಶ

    ತನಿಖಾಧಿಕಾರಿಯಾಗಿರುವ ಮಲ್ಪೆ ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್ ಗೌಡ ಆರೋಪಿಯನ್ನು 14 ದಿನಗಳ ಕಾಲ ವಿಚಾರಣೆಯ ಉದ್ದೇಶದಿಂದ ಪೊಲೀಸ್ ಕಸ್ಟಡಿಗೆ ಕೇಳಿದ್ದಾರೆ. ಪೊಲೀಸ್ ಕಸ್ಟಡಿ ಮಂಜೂರು ಮಾಡಿದ್ದು, ನವೆಂಬರ್ 28ಕ್ಕೆ ಕೋರ್ಟಿಗೆ ಆರೋಪಿಯನ್ನು ಹಾಜರುಪಡಿಸುವಂತೆ ಸೂಚನೆ ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ಗೌಪ್ಯ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು, ವಿಚಾರಣೆ ಮುಂದುವರೆಸಲಿದ್ದಾರೆ. ಇದನ್ನೂ ಓದಿ: ಸೋಮಶೇಖರ್ ನಮಗೆ ಬಹಳ ವಿಶೇಷ, ನಾವಿಬ್ರು ಸ್ನೇಹಿತರು: ಜಿ ಪರಮೇಶ್ವರ್

  • ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ –  ಓರ್ವ ವಶಕ್ಕೆ

    ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ – ಓರ್ವ ವಶಕ್ಕೆ

    ಚಿಕ್ಕೋಡಿ: ಉಡುಪಿಯಲ್ಲಿ (Udupi) ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ-ಬೆಳಗಾವಿ ಪೊಲೀಸರು ಮಿಂಚಿನ ಕಾರ್ಯಚರಣೆ ಮಾಡಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ

    ಬೆಳಗಾವಿ (Belagavi) ರಾಯಭಾಗ ತಾಲೂಕಿನ ಕುಡಚಿಯಲ್ಲಿ (Kudachi) ಆರೋಪಿ ಪ್ರವೀಣ್ ಅರುಣ್ ಚೌಗಲೇಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರವೀಣ್ ಮೂಲತಃ ಮಹಾರಾಷ್ಟ್ರದ (Maharashtra) ಸಾಂಗ್ಲಿಯವನಾಗಿದ್ದು, ಭಾನುವಾರ ಘಟನೆಯ ಬಳಿಕ ಕುಡಚಿಯ ನೀರಾವರಿ ಇಲಾಖೆ ಅಧಿಕಾರಿ ಸಂಬಂಧಿ ಮನೆಯಲ್ಲಿ ತಲೆಮರೆಸಿಕೊಂಡಿದ್ದ. ಇಂದು ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಲು ಮುಂದಾಗಿದ್ದ ವೇಳೆ ಕುಡಚಿ ಪೊಲೀಸರ ಸಹಾಯದಿಂದ ಮಿಂಚಿನ ಕಾರ್ಯಚರಣೆ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರವೀಣ್ ಮಂಗಳೂರಿನ (Mangaluru) ವಿಮಾನ ನಿಲ್ದಾಣದ ಸಿಆರ್‌ಪಿಎಸ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣ – ಒಬ್ಬಳ ಮೇಲಿನ ದ್ವೇಷಕ್ಕೆ ನಾಲ್ವರು ಬಲಿ!

    ಭಾನುವಾರ ಮುಂಜಾನೆ ವ್ಯಕ್ತಿಯೊಬ್ಬ ಉಡುಪಿಯ ನೇಜಾರು ಎಂಬಲ್ಲಿ ಒಂದೇ ಕುಟುಂಬದವರಾದ ತಾಯಿ ಹಸೀನಾ (46), ಮಕ್ಕಳಾದ ಅಫ್ನಾನ್ (23), ಅಯ್ನಝ್ (21), ಆಸಿಂ (12) ಎಂಬವರನ್ನು ಕೊಲೆಗೈದಿದ್ದ. ಹರಿತವಾದ ಆಯುಧಗಳಿಂದ ಇರಿದು ನಾಲ್ವರನ್ನು ಕೊಲೆ ಮಾಡಿದ ಈತ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ!

    ಇದನ್ನೂ ಓದಿ: ಪಟಾಕಿ ಕಿಡಿಯಿಂದ ಹೊತ್ತಿ ಉರಿದ ಗುಜರಿ ಅಂಗಡಿ

    ಇದಾದ ಬಳಿಕ ಗಲಾಟೆ ಸದ್ದು ಕೇಳಿ ಪಕ್ಕದ ಮನೆಯ ಯುವತಿ ತನ್ನ ಮನೆಯಿಂದ ಹೊರ ಬಂದಿದ್ದಾಳೆ. ಆಕೆಯನ್ನೂ ಬೆದರಿಸಿ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮನೆಯೊಳಗಿದ್ದ ಹಸೀನಾ ಅತ್ತೆಗೂ ತೀವ್ರವಾದ ಗಾಯಗಳಾಗಿವೆ. ಹಸೀನಾ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಅವರ ಅನುಪಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ನಡೆದಿದೆ. ಮೊಬೈಲ್‌ ಟವರ್‌ ಲೊಕೇಶನ್‌ ಆಧರಿಸಿ ಪ್ರವೀಣ್‌ನನ್ನು ವಶಕ್ಕೆ ಪಡೆಯಲಾಗಿದೆ.  ಇದನ್ನೂ ಓದಿ: ಬೆಂಕಿ ಹಚ್ಚಿ ಲ್ಯಾಬ್ ಟೆಕ್ನಿಷಿಯನ್ ಹತ್ಯೆ ಪ್ರಕರಣ – ಇಬ್ಬರ ಬಂಧನ