Tag: family

  • ಲಾಕ್‍ಡೌನ್ ಸಂಕಷ್ಟ – ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ

    ಲಾಕ್‍ಡೌನ್ ಸಂಕಷ್ಟ – ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ

    ಯಾದಗಿರಿ: ಕೊರೊನಾ ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿ, ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಆರು ಸದಸ್ಯರು, ಕೃಷಿ ಹೊಂಡಕ್ಕೆ ಹಾರಿ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ಇಂದು ನಡೆದಿದೆ.

    ಗ್ರಾಮದ ಭೀಮರಾಯ್ ಎಂಬಾತ ತನ್ನ ಹೆಂಡತಿ ಶಾಂತಮ್ಮ ಜೊತೆಗೆ ತನ್ನ ನಾಲ್ವರು ಮಕ್ಕಳಾದ ಸುಮಿತ್ರಾ, ಶ್ರೀದೇವಿ, ಲಕ್ಷ್ಮೀ, ಶಿವರಾಜ್ ಜೊತೆ ತನ್ನದೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮೃತ ಭೀಮರಾಯ್ ಕೃಷಿ ಮತ್ತು ವೈಯಕ್ತಿಕ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಇಂದು ತನ್ನ ಕುಟುಂಬದ ಜೊತೆಗೆ ಜಮೀನಿಗೆ ತೆರಳಿದ್ದ ಭೀಮರಾಯ್, ಮೊದಲಿಗೆ ಮಕ್ಕಳ ಕಾಲಿಗೆ ಕಲ್ಲು ಕಟ್ಟಿ ಹೊಂಡಕ್ಕೆ ಹಾಕಿದ್ದಾನೆ. ಬಳಿಕ ತನ್ನ ಹೆಂಡತಿ ಜೊತೆಗೆ ತಾನು ಸಹ ಹಾರಿದ್ದಾನೆ.

    ಶಹಾಪುರ ಪೋಲಿಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸದ್ಯ ನಾಲ್ವರ ಶವಗಳನ್ನ ಹೊರತೆಗೆದಿದ್ದು, ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ವೇದಮೂರ್ತಿ, ಎಸಿ ಪ್ರಶಾಂತ್ ಹನಗಂಡಿ, ತಹಶೀಲ್ದಾರ ಜಗನ್ನಾಥ್ ರೆಡ್ಡಿ, ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಡವ್ ರಾಣಿ ಮಗಳು ಅಂದ ಶಮಂತ್‍ಗೆ ವೈಷ್ಣವಿ ವಾರ್ನ್

    ಡವ್ ರಾಣಿ ಮಗಳು ಅಂದ ಶಮಂತ್‍ಗೆ ವೈಷ್ಣವಿ ವಾರ್ನ್

    ಬಿಗ್‍ಬಾಸ್ ಸೆಕೆಂಡ್ ಇನಿಂಗ್ಸ್ ನ ಮೊದಲ ವಾರದ ಕಥೆ ಕಿಚ್ಚನ ಜೊತೆಗೆ ಕಾರ್ಯಕ್ರಮಕ್ಕೆ ಬಿಗ್ ಮನೆ ಸ್ಪರ್ಧಿ ಜಬರ್ ದಸ್ತ್ ಆಗಿ ರೆಡಿಯಾಗುತ್ತಿದ್ದರು. ಈ ವೇಳೆ ಡವ್ ರಾಣಿ ಮಗಳು ಎಂದ ಶಮಂತ್‍ಗೆ ವೈಷ್ಣವಿ ವಾರ್ನ್ ಮಾಡಿದ್ದಾರೆ.

    ಬಾತ್ ರೂಂ ಏರಿಯಾದಲ್ಲಿ ವೈಷ್ಣವಿ ಹಾಗೂ ಶಮಂತ್ ರೆಡಿಯಾಗುತ್ತಿರುತ್ತಾರೆ. ಈ ವೇಳೆ ವೈಷ್ಣವಿ ಶಮಂತ್‍ಗೆ ನಮ್ಮ ಅಮ್ಮನಿಗೆ ಏಕೆ ಬೈತಿದ್ದಿರಾ ಎಂದು ವೈಷ್ಣವಿ ಪ್ರಶ್ನಿಸಿದ್ದಾರೆ. ಆಗ ಶಮಂತ್ ನಾನು ಏಕೆ ನಿಮ್ಮ ಅಮ್ಮನನ್ನು ಬೈಯ್ಯಲಿ ಎಂದಿದ್ದಾರೆ. ಹಾಗಾದರೆ ಡವ್ ರಾಣಿ ಮಗಳು ಎಂದರೆ ಅರ್ಥ ಏನು ವೈಷ್ಣವಿ ಶಮಂತ್‍ಗೆ ಕೇಳಿದ್ದಾರೆ.

    ಆಗ ಶಮಂತ್ ಲೈನ್ಸ್ ಮ್ಯಾಚ್ ಮಾಡಿದೆ. ಸಾಂಗ್ ಹೇಳಿದರೆ ನಿಜವಾಗಿಯೂ ಅದನ್ನು ಅರ್ಥೈಸಿಕೊಳ್ಳುತ್ತಾರೆ ಎಂದು ಅರ್ಥವಲ್ಲ ಎಂದು ವಿವರಿಸುತ್ತಾರೆ. ಅದು ಏನಾದರೂ ಆಗಿರಲಿ ಈಗ ನಾನು ಹೇಳ್ಲಾ? ಎಂದು ವೈಷ್ಣವಿ ಹೇಳಿದಾಗ, ನೀವು ಕೂಡ ನಗುತ್ತಿದ್ರಿ, ನಾನು ಕೂಡ ನಗುತ್ತಿದ್ದೆ ಹಾಗಾಗಿ ರೇಗಿಸಿದಷ್ಟೇ. ಅದನ್ನು ಜಗಳ ಎಂದು ಹೇಳುವುದಿಲ್ಲ. ನಾನು ನಿಮ್ಮ ಅಮ್ಮನಿಗೆ ನಾನು ಏಕೆ ಬೈಯ್ಯಲಿ, ಅವರು ನನಗೇನು ಮಾಡಿದ್ದಾರೆ ಎಂದಿದ್ದಾರೆ.

    ನಂತರ ವೈಷ್ಣವಿ ನಿಮಗೇನಾದರೂ ತಮಾಷೆ ಮಾಡಬೇಕಾದರೆ ನನ್ನ ಮೇಲೆ ಮಾಡಿ. ನನ್ನ ಫ್ಯಾಮಿಲಿ ಮೇಲೆ ಅಲ್ಲ ಎಂದು ವಾರ್ನ್ ಮಾಡಿದ್ದಾರೆ. ನಂತರ ಶಮಂತ್ ವೈಷ್ಣವಿ ಬಳಿ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಹುಡುಗಿಯರಿಗೆ ಒಲಿಯದ ಕ್ಯಾಪ್ಟನ್ ಪಟ್ಟ

  • ಮರ್ಯಾದಾ ಹತ್ಯೆಯ ಎಲ್ಲ ಆರೋಪಿಗಳು ಅಂದರ್

    ಮರ್ಯಾದಾ ಹತ್ಯೆಯ ಎಲ್ಲ ಆರೋಪಿಗಳು ಅಂದರ್

    ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲಿ ನಡೆದಿದ್ದ ಮರ್ಯಾದಾ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

    ಯುವತಿಯ ತಂದೆ ಬಂದಗಿಸಾಬ್, ಲಾಳೇಸಾಬ್ ವಲ್ಲಿಬಾಯಿ, ಅಲ್ಲಾ ಪಟೇಲ್, ರಫಿಕ್ ಹಾಗೂ ಯುವತಿಯ ಅಣ್ಣ ದಾವಲ್ ಪಟೇಲ್ ನ್ಯಾಯಾಂಗ ಬಂಧನಕ್ಕೊಳಗಾದ ಆರೋಪಿಗಳು. ಇದನ್ನೂ ಓದಿ: ಮರ್ಯಾದಾ ಹತ್ಯೆಯ ಆರೋಪಿಗಳು ಅಂದರ್

    ಯುವತಿಯ ತಂದೆ ಹಾಗೂ ಕುಟುಂಬಸ್ಥರು ಸೇರಿ ಪ್ರೇಮಿಗಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಘಟನೆ ಬಳಿಕ ಮರ್ಯಾದಾ ಹತ್ಯೆಯ ಆರೋಪಿಗಳು ಪರಾರಿಯಾಗಿದ್ದರು. ಇದೀಗ ಪ್ರಕರಣದ ಎಲ್ಲ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರೇಮಿಗಳಿಬ್ಬರನ್ನು ಭೀಕರವಾಗಿ ಕೊಲೆ ಮಾಡಿದ್ದ ಐವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ವಿಜಯಪುರ ಆಟ್ರಾಸಿಟಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡೆಸಿದ್ದರು. ನಂತರ ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ವಿಜಯಪುರ ವಿಶೇಷ ಕೋರ್ಟ್ ಜುಲೈ 9ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ಪತಿಯ ಮನೆಯ ಬಾಗಿಲಲ್ಲಿಯೇ ವಧುವಿನಿಂದ ವರನಿಗೆ ಕಪಾಳ ಮೋಕ್ಷ

    ಪತಿಯ ಮನೆಯ ಬಾಗಿಲಲ್ಲಿಯೇ ವಧುವಿನಿಂದ ವರನಿಗೆ ಕಪಾಳ ಮೋಕ್ಷ

    ಲಕ್ನೋ: ಹೊಸದಾಗಿ ಮದುವೆಯಾದ ವಧು ವರನಿಗೆ ಕಪಾಳ ಮೋಕ್ಷ ಮಾಡಿ ತವರು ಮನೆಗೆ ಹಿಂದಿರುಗಿದ ಘಟನೆ ಉತ್ತರ ಪ್ರದೇಶದ ಜೌನ್‍ಪುರ ಜೆಲ್ಲೆಯ ಖುತಾಹನ್ ಬ್ಲಾಕ್‍ನ ಲವಾಯೆನ್ ಗ್ರಾಮದಲ್ಲಿ ನಡೆದಿದೆ.

    ಮದುವೆ ಮಂಟಪದಿಂದ ಕಾರಿನಲ್ಲಿ ನವಜೋಡಿ ವರನ ಮನೆಗೆ ಬಂದಿದ್ದಾರೆ. ಕಾರಿನಲ್ಲಿ ಬರುತ್ತಿರುವ ವಧುವನ್ನು ಸ್ವಾಗತಿಸಲು ವರನ ಕುಟುಂಬದವರು ತಯಾರಿ ನಡೆಸುತ್ತಿದ್ದರು. ಈ ವೇಳೆ ಕಾರಿನಲ್ಲಿ ವರನೊಟ್ಟಿಗೆ ಬಂದ ವಧು ಕಾರಿನಿಂದ ಇಳಿದ ತಕ್ಷಣ ವರನ ಕಪಾಳಕ್ಕೆ ಹೊಡೆದಿದ್ದಾಳೆ. ನಂತರ ಮನೆಯೊಳಗೆ ಮದುವೆಯಲ್ಲಿ ಧರಿಸಿದ್ದ ಲೆಹೆಂಗಾವನ್ನು ಬದಲಾಯಿಸಿ, ಕ್ಯಾಶುಯಲ್ ವೇರ್ ಧರಿಸಿ ತವರ ಮನೆಗೆ ಮರಳಿದ್ದಾಳೆ.

    ಮದುವೆ ಸಮಾರಂಭದ ನಂತರ ವರನ ಕುಟುಂಬವನ್ನು ವಧುವನ್ನು ಮನೆಗೆ ಬರಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದ ವೇಳೆ ಈ ಘಟನೆ ಜರುಗಿದ್ದು, ವಧು ತವರು ಮನೆಗೆ ಮರಳುತ್ತಿದ್ದಂತೆ ಈ ಸುದ್ದಿ ಊರಿಗೆಲ್ಲಾ ಹಬ್ಬಿದೆ.

    ಈ ಕುರಿತಂತೆ ವಿಚಾರಣೆ ವೇಳೆ ವರ ಮತ್ತೊಬ್ಬರನ್ನು ಪ್ರೀತಿ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು, ಇದನ್ನು ತಿಳಿದು ವಧು ದ್ರೋಹ ಮಾಡಿದ್ದಕ್ಕೆ ಸಿಟ್ಟಾಗಿ ವರನ ಕಪಾಳಕ್ಕೆ ಹೊಡೆದಿದ್ದಾಳೆ.

    ವರ ಹಾಗೂ ವಧುವಿನ ಕುಟುಂಬದವರು ಈ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗದೇ ಇದ್ದಾಗ ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿದ್ದು, ಪೊಲೀಸರು ಇಬ್ಬರನ್ನು ಪ್ರತ್ಯೇಕವಾಗಿರುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಪಾನಮತ್ತ ವ್ಯಕ್ತಿಯ ಕಿತಾಪತಿ – ಮಹಿಳೆಯರ ಮುಂದೆ ಬೆತ್ತಲೆ ಪ್ರದರ್ಶನ

  • ಅನ್ಯ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ಶವವಾಗಿ ಪತ್ತೆ

    ಅನ್ಯ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ಶವವಾಗಿ ಪತ್ತೆ

    – ಇನ್ನೊಂದು ವಾರದಲ್ಲಿ ಯುವತಿಯ ವಿವಾಹವಿರುವಾಗಲೇ ಕೊಲೆ?

    ಕೊಪ್ಪಳ: ಅನ್ಯ ಜಾತಿಯ ಯುವತಿಯನ್ನು ಪ್ರೀತಿಸಿದ ಹಿನ್ನೆಲೆಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ದಲಿತ ಯುವಕನ ಕೊಲೆಗೆ ಕಾರಣವಾಗಿರುವವರನ್ನು ಬಂಧಿಸಿ, ಸಮಗ್ರ ತನಿಖೆ ಮಾಡಬೇಕೆಂದು ಮೃತ ಯುವಕನ ಕುಟುಂಬದವರು ಒತ್ತಾಯಿಸಿದ್ದಾರೆ.

    ಇಂದು ಬೆಳಗ್ಗೆ ಜಿಲ್ಲೆಯ ಕಾರಟಗಿ ಬಳಿ 22 ವರ್ಷದ ಯುವಕ ದಾನೇಶ್ ನನ್ನು ಕೊಲೆ ಮಾಡಲಾಗಿದ್ದು, ನಗ್ನ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಯುವಕನ ಬೈಕ್, ಎಟಿಎಂ ಕಾರ್ಡ್, ಬಟ್ಟೆಗಳು ಚೆಲ್ಲಾಪಿಲ್ಲಿಯಾದ ಸ್ಥಿತಿಯಲ್ಲಿ ಸಿಕ್ಕಿವೆ.

    ಮೃತ ದಾನೇಶ್ ಟ್ರ್ಯಾಕ್ಟರ್ ಚಾಲಕರಾಗಿದ್ದು, ಕಳೆದ ಎರಡು ವರ್ಷಗಳಿಂದ ಮರಿಬಸಪ್ಪ ಅವರ ಮಗಳು ಗೀತಾ(ಹೆಸರು ಬದಲಾಯಿಸಲಾಗಿದೆ)ಳನ್ನು ಪ್ರೀತಿಸುತ್ತಿದ್ದ. ಇದೇ ವಿಷಯಕ್ಕಾಗಿ ಈ ಹಿಂದೆ ಒಂದು ಬಾರಿ ಮರಿಬಸಪ್ಪನ ಕಡೆಯವರು ದಾನೇಶ್ ಮೇಲೆ ಹಲ್ಲೆ ಮಾಡಿದ್ದರು. ಈ ಘಟನೆ ಬಳಿಕ ದಾನೇಶ್ ಕುಟುಂಬದವರು ಆಕೆಯನ್ನು ಬಿಡುವಂತೆ ಹೇಳಿದ್ದರು. ಈ ಮಧ್ಯೆ ಯುವತಿಗೆ ಇನ್ನೊಂದು ವಾರದಲ್ಲಿ ಮದುವೆಯ ಸಿದ್ಧತೆ ಸಹ ನಡೆದಿದ್ದು, ಇದೇ ಸಂದರ್ಭದಲ್ಲಿ ದಾನೇಶ್‍ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ದಾನೇಶ್ ತಾನು ಕೆಲಸಕ್ಕೆ ಹೋಗುವುದಾಗಿ ತಾಯಿಗೆ ಹೇಳಿ ಹೋಗಿದ್ದ. ಅಲ್ಲದೆ ರಾತ್ರಿ ಊಟಕ್ಕೆ ಮನೆಗೆ ಬರುವುದಿಲ್ಲ ಎಂದು ಸಹ ಹೇಳಿದ್ದ. ಈ ಸಮಯದಲ್ಲಿ ಕೆಲ ಗೆಳೆಯರು ಸೇರಿ ಪಾರ್ಟಿ ಮಾಡಿದ್ದಾರೆ, ಪಾರ್ಟಿಯ ಬಳಿಕ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಪ್ರೀತಿ ವಿಷಯವನ್ನು ಮನೆಯವರು ದೂರ ಮಾಡಲು ನೋಡಿದರೂ ಯುವತಿ ಆಗಾಗ ದಾನೇಶನಿಗೆ ಫೋನ್ ಮಾಡುತ್ತಿದ್ದಳಂತೆ, ನಿನ್ನೆಯೂ ಸಹ ಯುವತಿ ಫೋನ್ ಮಾಡಿದ್ದಾಳೆ. ಇದನ್ನು ಸ್ನೇಹಿತರಿಗೆ ಹೇಳಿ ಹೋಗಿದ್ದ ದಾನೇಶ್, ಅನುಮಾನವಾಗಿ ಸಾವನ್ನಪ್ಪಿದ್ದಾನೆ. ಯುವತಿಯ ಕಡೆಯವರೇ ಕೊಲೆ ಮಾಡಿದ್ದಾರೆ, ಸಮಗ್ರ ತನಿಖೆ ಮಾಡಿ, ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಯುವಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ.

    ಸ್ಥಳಕ್ಕೆ ಕಾರಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆಯ ನಂತರವೇ ಕೊಲೆಗೆ ನಿಖರವಾದ ಕಾರಣ ಗೊತ್ತಾಗಲಿದೆ. ಈ ಮಧ್ಯೆ ಕಾರಟಗಿ ಪೊಲೀಸರು ಯುವತಿ, ಯುವತಿಯ ತಂದೆ, ತಾಯಿ ಹಾಗೂ ಅಣ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ

    ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ

    ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದೀಗ ಮಾಸ್ ಮೀಸೆಯೊಂದಿಗೆ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಮಾಹಿ ಫ್ಯಾನ್ಸ್ ಫಿದಾ ಆಗಿದ್ದಾರೆ.

    ರಾಂಚಿ ರಾಜಕುಮಾರ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಆರಂಭಿಕ ದಿನಗಳಲ್ಲಿ ಅವರ ಉದ್ದನೆಯ ಕೂದಲು ಭಾರೀ ಟ್ರೆಂಡ್ ಸೃಷ್ಟಿಸಿತ್ತು. ಯುವಕರೆಲ್ಲಾ ಮಾಹಿಯಂತೆ ಕೂದಲು ಬೆಳೆಸಿ ಹೊಸ ಸಂಚಲನ ಸೃಷ್ಟಿಸಿದ್ದರು. ಆ ಬಳಿಕ ಧೋನಿ ಹಲವು ರೀತಿಯ ಕೇಶ ವಿನ್ಯಾಸಗಳಲ್ಲಿ ಗಮನ ಸೆಳೆದಿದ್ದರು. ಇದೀಗ ಧೋನಿ ತನ್ನ ಮೀಸೆಯ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಲು ಹೊರಟಿದ್ದಾರೆ. ಈ ರಗಡ್ ಲುಕ್ ಕಂಡು ಮಾಹಿ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ. ಇದನ್ನೂ ಓದಿ: ಅಪ್ಪನಿಗೆ ಮಸಾಜ್ ಮಾಡಿದ ಧೋನಿ ಪುತ್ರಿ ಝೀವಾ: ವಿಡಿಯೋ

    ಧೋನಿ 14ನೇ ಆವೃತ್ತಿಯ ಐಪಿಎಲ್ ಕೊರೋನಾದಿಂದಾಗಿ ಮುಂದೂಡಲ್ಪಟ್ಟ ಮೇಲೆ ತನ್ನ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ತನ್ನ ಮುದ್ದಿನ ಮಗಳು ಝೀವಾ ಜೊತೆ ತುಂಟಾಟಗಳನ್ನು ಆಡುವ ಧೋನಿ ಇದೀಗ ಫೋಟೋ ಒಂದರಲ್ಲಿ ಈ ರೀತಿ ಮೀಸೆ ಬಿಟ್ಟು ಫೋಸ್ ನೀಡಿದ್ದಾರೆ. ಮಾಹಿಯ ಈ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ ಫ್ರಾಂಚೈಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: ಕುದುರೆ ಜೊತೆ ಧೋನಿ ರೇಸ್

    ಈ ಪೋಸ್ಟ್ ನೋಡಿದ ಅಭಿಮಾನಿಗಳು ಹಲವು ರೀತಿಯ ಕಾಮೆಂಟ್ ಮಾಡುತ್ತಿದ್ದು, ಧೋನಿಗೆ ಈ ಲುಕ್ ಸೂಟ್ ಆಗುತ್ತದೆ ಹೀಗೆ ಇರಲಿ ಎಂದು ಅಭಿಮಾನಿಯೊಬ್ಬರು ಬರೆದುಕೊಂಡರೆ. ಇನ್ನೊಬ್ಬರು ಸಿಂಗಂ ಸ್ಟೈಲ್‍ನಂತಿದೆ ಎಂದಿದ್ದಾರೆ. ಒಟ್ಟಿನಲ್ಲಿ ಧೋನಿ ಕ್ರಿಕೆಟ್‍ನಿಂದ ದೂರ ಉಳಿದಿದ್ದರು ಕೂಡ ತಮ್ಮ ಬೇರೆ ಬೇರೆ ಕಾರ್ಯ ವೈಖರಿಗಳಿಂದ ಆಗಾಗ್ಗೆ ಸುದ್ದಿಯಾಗುತ್ತಿದ್ದಾರೆ.

  • ಅಂಬುಲೆನ್ಸ್ ಚಾಲಕನ ಅಜಾಗರೂಕತೆಗೆ ವ್ಯಕ್ತಿ ಬಲಿ – ಸಂಬಂಧಿಕರಿಂದ ಆರೋಪ

    ಅಂಬುಲೆನ್ಸ್ ಚಾಲಕನ ಅಜಾಗರೂಕತೆಗೆ ವ್ಯಕ್ತಿ ಬಲಿ – ಸಂಬಂಧಿಕರಿಂದ ಆರೋಪ

    ಧಾರವಾಡ: ಅಂಬುಲೆನ್ಸ್ ಚಾಲಕನ ಅಜಾಗರೂಕತೆಯಿಂದ ರೋಗಿಯೊಬ್ಬರು ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ಧಾರವಾಡ ತಾಲೂಕಿನ ಕೋಟೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಖುತಬುದ್ದಿನ್ ನನ್ನೆಸಾಬನವರ (50) ಮೃತಪಟ್ಟ ವ್ಯಕ್ತಿ. ಕಳೆದ ರಾತ್ರಿ ಖುತಬುದ್ದಿನರಿಗೆ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಕೋಟೂರು ಗ್ರಾಮದಿಂದ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

    ಮೃತ ವ್ಯಕ್ತಿಯ ಕುಟುಂಬದವರು ವೀಡಿಯೋವೊಂದನ್ನು ಮಾಡಿ, ಅಂಬುಲೆನ್ಸ್ ಚಾಲಕ ಆಕ್ಸಿಜನ್ ನೀಡದೇ ಅಜಾಗರೂಕತೆ ತೋರಿಸಿದ್ದಾನೆ. ಅಲ್ಲದೇ ಅಂಬುಲನ್ಸ್‍ನಲ್ಲಿ ಚಾಲಕನೊಬ್ಬನೇ ರೋಗಿಗೆ ಆಕ್ಸಿಜನ್ ಹಾಕಿದ್ದ, ಅಂಬುಲನ್ಸ್‍ನಲ್ಲಿ ನರ್ಸ್ ಕೂಡಾ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ಬರುತಿದ್ದಂತೆಯೇ ಅಂಬುಲನ್ಸ್ ಚಾಲಕ ವಾಹನ ನಿಲ್ಲಿಸಿ ಪರಾರಿಯಾದ್ದಾನೆ ಎಂದು ತಿಳಿಸಿದ್ದಾರೆ.

    ಆಸ್ಪತ್ರೆಗೆ ದಾಖಲಿಸಲು ರೋಗಿಯನ್ನು ಗ್ರಾಮದಿಂದ ಅರ್ಧ ದಾರಿಗೆ ಟಮ್ ಟಮ್ ವಾಹನದಲ್ಲಿ ಮನೆಯವರೇ ಕರೆದೊಯ್ದಿದ್ದರು. ನಂತರ ಅರ್ಧ ದಾರಿಗೆ ಬಂದ ಮೇಲೆ ಅಂಬುಲನ್ಸ್ ಬಂದಿತ್ತು. ಇದನ್ನೂ ಓದಿ: ಡ್ರೋನ್ ಮೂಲಕ ಔಷಧಿಗಳ ರವಾನೆಯ ಪರೀಕ್ಷಾರ್ಥ ಹಾರಾಟ

  • ಕಣ್ವಕುಪ್ಪೆ ಮಠಕ್ಕೆ ಈಶ್ವರಪ್ಪ ಕುಟುಂಬ ಸಮೇತ ಭೇಟಿ- ಒಂದು ಗಂಟೆ ಕಾಲ ಚರ್ಚೆ

    ಕಣ್ವಕುಪ್ಪೆ ಮಠಕ್ಕೆ ಈಶ್ವರಪ್ಪ ಕುಟುಂಬ ಸಮೇತ ಭೇಟಿ- ಒಂದು ಗಂಟೆ ಕಾಲ ಚರ್ಚೆ

    -ಸ್ವಾಮೀಜಿ ಭೇಟಿ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ?

    ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕೂಗಿನ ನಡುವೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿರುವ ಕಣ್ವಕುಪ್ಪೆ ಮಠಕ್ಕೆ ಪತ್ನಿ ಹಾಗೂ ಪುತ್ರ ಕಾಂತೇಶ್ ಜೊತೆ ಕುಟುಂಬ ಸಮೇತರಾಗಿ ಸಚಿವ ಕೆಎಸ್ ಈಶ್ವರಪ್ಪ ಭೇಟಿ ನೀಡಿ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಜಿ ಆಶೀರ್ವಾದ ಪಡೆದಿದ್ದಾರೆ.

    ರಾಜ್ಯದಲ್ಲಿ ಕಳೆದ ಕೆಲದಿಗಳಿಂದ ನಾಯಕತ್ವ ಬದಲಾವಣೆ ಕುರಿತು ಚರ್ಚೆ ಜೋರಾಗಿದೆ. ಈ ಸಮಯದಲ್ಲೇ ಮಠಗಳಿಗೆ ಭೇಟಿ ನೀಡುತ್ತಿರುವ ಈಶ್ವರಪ್ಪ, ಕಣ್ವಕುಪ್ಪೆ ಮಠಕ್ಕೆ ಭೇಟಿ ನೀಡಿ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಜೊತೆ ಸುಮಾರು ಒಂದು ಗಂಟೆಯ ಕಾಲ ಚರ್ಚೆ ನಡೆಸಿದ್ದಾರೆ. ಸ್ವಾಮೀಜಿಗಳ ಈ ಭೇಟಿ ಹಿಂದೆ ರಾಜಕೀಯ ಲೆಕ್ಕಾಚಾರ ಇದೆ ಎಂಬ ಹಲವು ಅನುಮಾನಗಳು ಮೂಡಿದೆ. ಇದನ್ನೂ ಓದಿ: ಬಿಜೆಪಿ ಪಕ್ಷ ಒಂದು ಕುಟುಂಬ ಇದ್ದಂತೆ : ಸಚಿವ ಕೆ.ಎಸ್ ಈಶ್ವರಪ್ಪ

    ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಕೇದರನಾಥ್ ನಲ್ಲಿ ಪ್ರಧಾನಿ ಮೋದಿಯವರಿಗೆ ಧೀಕ್ಷೆ ನೀಡಿದ್ದ ಸ್ವಾಮೀಜಿಯಾಗಿದ್ದು, ರಾಷ್ಟ್ರ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪ್ರತಿ ಆರು ತಿಂಗಳಿಗೊಮ್ಮೆ ಕೇದಾರನಾಥ್ ನಲ್ಲಿ ಕಣ್ವಕುಪ್ಪೆ ಸ್ವಾಮಿಜಿ ಅವರಿಂದಲೇ ವಿಶೇಷ ಪೂಜೆ ನಡೆಯುತ್ತದೆ. ಈ ಎಲ್ಲಾ ಆಗು ಹೋಗುಗಳ ನಡುವೆ ಈಶ್ವರಪ್ಪ ಕಣ್ವಕುಪ್ಪೆ ಸ್ವಾಮೀಜಿ ಭೇಟಿ ಸಾಕಷ್ಟು ಕೂತುಹಲ ಕೆರಳಿಸಿದ್ದು, ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.

  • ಕುಟುಂಬ ಕಲಹ ಮಗನಿಂದಲೇ ತಂದೆಯ ಬರ್ಬರ ಕೊಲೆ

    ಕುಟುಂಬ ಕಲಹ ಮಗನಿಂದಲೇ ತಂದೆಯ ಬರ್ಬರ ಕೊಲೆ

    ಕೋಲಾರ: ಕುಟುಂಬದಲ್ಲಿ ಉಂಟಾದ ಕಲಹ ತಾರಕಕ್ಕೆ ಏರಿ ಸ್ವಂತ ಮಗನೇ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ, ಶ್ರೀನಿವಾಸಪುರದ ಅಂಬೇಡ್ಕರ್ ಪಾಳ್ಯದಲ್ಲಿ ತಡ ರಾತ್ರಿ ನಡೆದಿದೆ.

    ಅಂಬೇಡ್ಕರ್ ಪಾಳ್ಯದ ವೆಂಕಟೇಶ್ (65) ಮೃತ ದುರ್ದೈವಿ. ನವೀನ್ ತಂದೆಯನ್ನು ಕೊಲೆ ಮಾಡಿದ ಆರೋಪಿ. ನವೀನ್ ಮತ್ತು ವೆಂಕಟೇಶ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಪ್ರಾರಂಭವಾಗಿದೆ. ಬಳಿಕ ಮಾತಿಗೆ ಮಾತು ಬೆಳೆದು ತಡರಾತ್ರಿ ನವೀನ್ ಮನೆಯಲ್ಲಿದ್ದ ರುಬ್ಬುವ ಗುಂಡಿನಿಂದ ತಲೆಗೆ ಹೊಡೆದು ವೆಂಕಟೇಶ್ ಅವರನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ:  ಬೇಟೆಯಾಡಲು ಹೋದವನೇ ಬೇಟೆಯಾದ ? 

    ತಲೆಗೆ ರುಬ್ಬುವ ಗುಂಡುನಿಂದ ಹೊಡೆದ ಪರಿಣಾಮ ವೆಂಕಟೇಶ್ ತೀವ್ರ ರಕ್ತ ಸ್ರಾವದಿಂದಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ. ಸ್ಥಳೀಯರು ಮನೆ ಮಂದಿಯ ಕಿರುಚಾಟ ಕೇಳಿ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ನವೀನ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ನವೀನ್‍ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ನಟ ಸಂಚಾರಿ ವಿಜಯ್ ಅಗಲಿ 3 ದಿನ – ಕ್ರಿಯಾವಿಧಿ ನೆರವೇರಿಸಿದ ಕುಟುಂಬಸ್ಥರು

    ನಟ ಸಂಚಾರಿ ವಿಜಯ್ ಅಗಲಿ 3 ದಿನ – ಕ್ರಿಯಾವಿಧಿ ನೆರವೇರಿಸಿದ ಕುಟುಂಬಸ್ಥರು

    ಚಿಕ್ಕಮಗಳೂರು: ಅಪಘಾತಕ್ಕೀಡಾಗಿ ಮೂರು ದಿನಗಳ ಹಿಂದೆ ಸಾವನ್ನಪ್ಪಿದ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಮಾಧಿಗೆ ಇಂದು ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಮರಣದ ನಂತರದ ಕ್ರಿಯಾವಿಧಿಗಳನ್ನ ನೆರವೇರಿಸಿದ್ದಾರೆ.

    ವಿಜಯ್ ಸಾವನ್ನಪ್ಪಿ ಇಂದಿಗೆ ಮೂರು ದಿನವಾದ ಹಿನ್ನೆಲೆ ಹಿಂದೂ ಸಂಪ್ರದಾಯದ ವೀರಶೈವ ಪದ್ಧತಿಯಂತೆ ಅವರ ಸಮಾಧಿಗೆ ಹಾಲು-ತುಪ್ಪ ಬಿಟ್ಟಿದ್ದಾರೆ. ವಿಜಯ್ ಸಹೋದರರು, ಕುಟುಂಬಸ್ಥರು, ವಿಜಯ್ ಆಪ್ತಮಿತ್ರ ರಘು ಹಾಗೂ ಸ್ನೇಹಿತರೊಡಗೂಡಿ ಸಮಾಧಿ ಸ್ಥಳಕ್ಕೆ ತೆರಳಿ, ಪೂಜೆ ಸಲ್ಲಿಸಿ ಹಾಲು-ತುಪ್ಪ ಎರೆದಿದ್ದಾರೆ. ಇದೇ ವೇಳೆ, ಸ್ಥಳೀಯರು, ವಿಜಯ್ ಅಭಿಮಾನಿಗಳೂ ದುಃಖ ತಪ್ತರಾಗಿ ಸಮಾಧಿ ಸ್ಥಳದಲ್ಲಿ ನೆರೆದಿದ್ದರು. ವಿಜಯ್ ಅಣ್ಣನ ಚಿಕ್ಕ-ಚಿಕ್ಕ ಮಕ್ಕಳು ಕಣ್ಣೀರಾಕುತ್ತಲೇ ಚಿಕ್ಕಪ್ಪನ ಸಮಾಧಿಗೆ ಹಾಲು-ತುಪ್ಪ ಎರೆದ ದೃಶ್ಯ ನೋಡುಗರ ಕಣ್ಣಲ್ಲಿ ನೀರು ತರಿಸುವಂತಿತ್ತು. ಇದನ್ನೂ ಓದಿ: ಮತ್ತೆ ಹುಟ್ಟಿ ಬಾ ಗೆಳೆಯ ಎಂದ ಸ್ಯಾಂಡಲ್‍ವುಡ್

    ಜೂನ್ 13ರಂದು ಬೈಕ್ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡು ಮೂರು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ್ದ ಸಂಚಾರಿ ವಿಜಯ್, ಜೂನ್ 15ರಂದು ಉಸಿರು ಚೆಲ್ಲಿದರು. ನಂತರ ಕುಪ್ಪೂರು ಶ್ರೀಗಳ ನೇತೃತ್ವದಲ್ಲಿ ಪಂಚನಹಳ್ಳಿಯಲ್ಲಿ ಅವರ ಸ್ನೇಹಿತನ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆದಿತ್ತು. ವಿಜಯ್ ಚಿಕ್ಕಂದಿನಿಂದಲೇ ನಟನೆ ಹಾಗೂ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದರು. ಬಾಲ್ಯದಲ್ಲಿಯೇ ಹೆತ್ತವರನ್ನು ಕಳೆದುಕೊಂಡಿದ್ದ ವಿಜಯ್, ಕೆಲಸ ಮಾಡುತ್ತಲೇ ಓದು ಮುಗಿಸಿ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದರು. ಇದನ್ನೂ ಓದಿ: ಸ್ನೇಹಿತ ರಘು ತೋಟದಲ್ಲೇ ಮಣ್ಣಲ್ಲಿ ಮಣ್ಣಾದ ವಿಜಯ್

    ಅತಿಥಿ ಉಪನ್ಯಾಸಕರಾಗಿ ಪಾಠವನ್ನು ಹೇಳಿಕೊಡುತ್ತಿದ್ದರು. ಕಲಾವಿದ ಕುಟುಂಬದ ಗೀಳು ಹೋಗದ ಕಾರಣ ರಂಗಭೂಮಿ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ್ದರು. ನಾನು ಅವನಲ್ಲ ಅವಳು ಸಿನಿಮಾದಲ್ಲಿ ನಟಿಸುವ ಮೂಲಕ ರಾಷ್ಟ್ರಪತಿ ಪಡೆದು ಸ್ಯಾಂಡಲ್‍ವುಡ್ ನಿಬ್ಬೆರಗಾಗುವಂತೆ ಮಾಡಿದ್ದರು. ದುರಾದೃಷ್ಟವಶತ್, ಬೆಂಗಳೂರಲ್ಲಿ ನಡೆದ ಬೈಕ್ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡು ಮೂರು ದಿನಗಳ ಕಾಲ ಜೀವನ್ಮರದ ಮಧ್ಯೆ ಹೋರಾಡಿ ಕೊನೆಯುಸಿರೆಳೆದಿದ್ದರು. ಅಂಗಾಂಗ ದಾನ ಮಾಡುವ ಮೂಲಕ ಸಮಾಜದ ಕಣ್ಣಿಗೆ ಸಾವಲ್ಲೂ ಸಾರ್ಥಕತೆ ಮೆರೆದ ಆದರ್ಶ ನಟನಾಗಿ ಉಳಿದರು. ಸಂಚಾರಿ ವಿಜಯ್ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ಜಿಲ್ಲೆಯ ಕಡೂರಿನ ತಾಲೂಕಿನ ಪಂಚನಹಳ್ಳಿಯಲ್ಲಿ ವಿಜಯ್ ಆಪ್ತಮಿತ್ರ ರಘು ಅವರ ತೋಟದಲ್ಲಿ ವೀರಶೈವ ಸಂಪ್ರದಾಯದಂತೆ ಕುಪ್ಪೂರು ಶ್ರೀಗಳು ನೇತೃತ್ವದಲ್ಲಿ ಅಂತ್ಯಸಂಸ್ಕಾರ ನೆರವೇರಿತ್ತು. ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ?