Tag: Family Hockey Tournament

  • ಕೊಡಗಿನ ಕೌಟುಂಬಿಕ ಹಾಕಿ ಉತ್ಸವಕ್ಕೆ ಚಾಲನೆ

    ಕೊಡಗಿನ ಕೌಟುಂಬಿಕ ಹಾಕಿ ಉತ್ಸವಕ್ಕೆ ಚಾಲನೆ

    ಕೊಡಗು: ಜಿಲ್ಲೆಯ ಪ್ರಸಿದ್ಧ ಕೌಟುಂಬಿಕ ಹಾಕಿ ಉತ್ಸವಕ್ಕೆ ಇಂದಿನಿಂದ ಚಾಲನೆ ಸಿಕ್ಕಿದೆ. ಸಂಭ್ರಮ ಸಡಗರದ ನಡುವೆ ಸಹಸ್ರಾರು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ಹಾಕಿ ಹಬ್ಬ ಪ್ರಾರಂಭಗೊಂಡಿದೆ. ಇಂದಿನಿಂದ ಒಂದು ತಿಂಗಳು ನಡೆಯುವ ಹಾಕಿ ಹಬ್ಬದಲ್ಲಿ 306 ಕೊಡವ ಕುಟುಂಬದ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

    ಒಲಿಂಪಿಯನ್ ಎ.ಬಿ ಸುಬ್ಬಯ್ಯ ಅವರು ಕಾರ್ಯಕ್ರಮ ಉದ್ಘಾಟಿಸೋ ಮೂಲಕ ಸಹಸ್ರಾರು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ಹಾಕಿ ಹಬ್ಬಕ್ಕೆ ಚಾಲನೆ ನೀಡಿದರು. ಹಾಕಿ ಉತ್ಸವದ ಸಂಸ್ಥಾಪಕ ಪಾಂಡಂಡ ಕುಟ್ಟಪ್ಪಾ ಬೆಳ್ಳಿ ಹಾಕಿ ಸ್ಟಿಕ್‍ನಲ್ಲಿ ಬೆಳ್ಳಿ ಚೆಂಡನ್ನು ಹೊಡೆಯೋ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಮಡಿಕೇರಿ ತಾಲೂಕಿನ ನಾಪೋಕ್ಲುವಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದು ಭಾರತ ವಿಶ್ರಾಂತ ತಂಡ ಹಾಗೂ ಕೂರ್ಗ್ ರೆಜಿಮೆಂಟ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಿತು.

    ಕಳೆದ 21 ವರ್ಷಗಳಿಂದ ನಡೆಯುತ್ತಿರುವ ಕೊಡಗಿನ ಈ ಹಾಕಿ ಉತ್ಸವ ವರ್ಷದಿಂದ ವರ್ಷಕ್ಕೆ ರಂಗೇರುತ್ತಿದೆ. ಕೊಡಗಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಬೇಕೆಂಬ ಉದ್ದೇಶದಿಂದ ಶುರುವಾದ ಈ ಹಾಕಿ ಹಬ್ಬ ಉತ್ತಮ ರೀತಿಯಲ್ಲಿ ನಡೆದುಕೊಂಡು ಬಂದಿದೆ. ಪ್ರತಿ ವರ್ಷ ಒಂದೊಂದು ಕುಟುಂಬಗಳು ಆಯೋಜನೆ ಮಾಡೋ ಕೌಟುಂಬಿಕ ಹಾಕಿಯನ್ನು ಈ ಬಾರಿ ಬಿದ್ದಾಟಂಡ ಕುಟುಂಬಸ್ಥರು ನಡೆಸುತ್ತಿದ್ದಾರೆ. ಮುಂದಿನ ಒಂದು ತಿಂಗಳು ಇದೇ ಮೈದಾನದಲ್ಲಿ ರೋಮಾಂಚನಕಾರಿ ಪಂದ್ಯಗಳು ನಡೆಯಲಿವೆ.