Tag: False Case

  • ಸುಳ್ಳು ರೇಪ್ ಕೇಸ್ ವಿರುದ್ಧ 10 ವರ್ಷ ಹೋರಾಡಿ 15 ಲಕ್ಷ ಪರಿಹಾರ ಗೆದ್ದ ಯುವಕ

    ಸುಳ್ಳು ರೇಪ್ ಕೇಸ್ ವಿರುದ್ಧ 10 ವರ್ಷ ಹೋರಾಡಿ 15 ಲಕ್ಷ ಪರಿಹಾರ ಗೆದ್ದ ಯುವಕ

    – ಮಗುವಿನ ಡಿಎನ್‍ಎಯಿಂದ ಬಯಲಾಯ್ತು ಯುವತಿಯ ಕಳ್ಳಾಟ
    – ಡ್ರೈವಿಂಗ್ ಲೈಸನ್ಸ್ ಸಿಗದೇ ಪರದಾಡಿದ್ದ ನಿರಪರಾಧಿ

    ಚೆನ್ನೈ: 10 ವರ್ಷಗಳ ಕಾಲ ಸುಳ್ಳು ರೇಪ್ ಪ್ರಕರಣದ ವಿರುದ್ಧ ಹೋರಾಡಿದ ಯುವಕನಿಗೆ ಯುವತಿಯು 15 ಲಕ್ಷ ಪರಿಹಾರ ನೀಡುವಂತೆ ಚೆನ್ನೈ ಕೋರ್ಟ್ ಆದೇಶ ನೀಡಿದೆ.

    ಆಸ್ತಿ ವಿವಾದ ಮತ್ತು ಕುಟುಂಬ ವೈಷಮ್ಯದ ಹಿನ್ನೆಲೆಯಿಂದ ಯುವತಿ ಮತ್ತು ಆಕೆಯ ಕುಟುಂಬದವರು ಸೇರಿಕೊಂಡು ಎಂಜಿನಿಯರಿಂಗ್ ಓದುತ್ತಿದ್ದ ಸಂತೋಷ್ ಮೇಲೆ ಸುಳ್ಳು ರೇಪ್ ಕೇಸ್ ಹಾಕಿದ್ದರು. ಈ ಕೇಸಿನಲ್ಲಿ ಸಂತೋಷ್ ನಿರಪರಾಧಿ ಎಂದು 2016ರಲ್ಲಿ ತೀರ್ಪು ಬಂದಿತ್ತು. ನಂತರ ಅವರು ಮಾನನಷ್ಟ ಮೊಕದ್ದಮೆ ಹಾಕಿದ್ದು, ಕೋರ್ಟ್ ಆತನಿಗೆ 15 ಲಕ್ಷ ಪರಿಹಾರ ಕೊಡಿಸಿದೆ.

    ಏನಿದು ಪ್ರಕರಣ?
    ಸಂತೋಷ್ ಮತ್ತು ಆ ಯುವತಿ ಒಂದೇ ಸಮುದಾಯರಾಗಿದ್ದು, ಅವರಿಬ್ಬರಿಗೂ ಮದುವೆ ಮಾಡಲು ಎಂದು ಎರಡು ಕುಟುಂಬಗಳು ಮಾತನಾಡಿಕೊಂಡಿದ್ದವು. ಎರಡು ಕುಟುಂಬ ಮನೆ ಅಕ್ಕಪಕ್ಕ ಇದ್ದು, ಆಸ್ತಿ ವಿಚಾರಕ್ಕೆ ಎರಡು ಕುಟುಂಬಗಳು ಗಲಾಟೆ ಮಾಡಿಕೊಂಡಿದ್ದವು. ಗಲಾಟೆ ಜಾಸ್ತಿಯಾದ ಕಾರಣ ಸಂತೋಷ್ ಕುಟುಂಬ ಮನೆ ಖಾಲಿ ಮಾಡಿಕೊಂಡು ಬೇರೆ ಕಡೆ ಹೋಗಿತ್ತು.

    ಈ ವೇಳೆ ಸಂತೋಷ್ ಎಂಜಿನಿಯರಿಂಗ್ ಓದುತ್ತಿದ್ದರು. ಒಂದು ದಿನ ಸಂತೋಷ್ ಮನೆಗೆ ಬಂದ ಯುವತಿಯ ತಾಯಿ, ನಿಮ್ಮ ಮಗ ನನ್ನ ಮಗಳನ್ನು ಗರ್ಭಿಣಿ ಮಾಡಿದ್ದಾನೆ. ತಕ್ಷಣ ಮದುವೆ ಮಾಡಿಕೊಡಿ ಎಂದು ಜಗಳವಾಡಿದ್ದರು. ಆಗ ಸಂತೋಷ್ ನಾನು ಆ ರೀತಿ ಮಾಡಿಲ್ಲ ಎಂದು ಯುವತಿ ಮನೆಯವರ ಆರೋಪವನ್ನು ತಳ್ಳಿ ಹಾಕಿದ್ದರು. ನಂತರ ಯುವತಿ ಮತ್ತು ಅವರ ಮನೆಯವರು ಸಂತೋಷ್ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದರು.

    ಈ ಪ್ರಕರಣದಲ್ಲಿ ಸಂತೋಷ್ 95 ದಿನ ನ್ಯಾಯಾಂಗ ಬಂಧನದಲ್ಲಿ ಇದ್ದು, 2010 ಫೆಬ್ರವರಿ 12ರಂದು ಜಾಮೀನು ಪಡೆದು ಹೊರಬಂದಿದ್ದರು. ಈ ವೇಳೆ ಗರ್ಭಿಣಿಯಾಗಿದ್ದ ಯುವತಿ ಮಗುವಿಗೆ ಜನ್ಮ ನೀಡಿದ್ದಳು. ಆ ನಂತರ ಮಗುವಿನ ಡಿಎನ್‍ಎ ಪರೀಕ್ಷೆ ಮಾಡಿದಾಗ ಸಂತೋಷ್ ಮಗುವಿನ ತಂದೆಯಲ್ಲ ಎಂಬುದು ಸಾಬೀತಾಗಿತ್ತು. ಈ ಕೇಸ್ ಮತ್ತೆ ವಿಚಾರಣೆಗೆ ಬಂದಿತು. ಆಗ ಮತ್ತೆ ನ್ಯಾಯಾಲಯ ಡಿಎನ್‍ಎ ಟೆಸ್ಟ್ ಮಾಡಿಸುವಂತೆ ಆದೇಶ ಮಾಡಿತ್ತು. ಆಗ 2016 ಫೆಬ್ರವರಿ 10ರಂದು ಸಂತೋಷ್ ನಿರಪರಾಧಿ ಎಂದು ಚೆನ್ನೈ ಮಹಿಳಾ ಕೋರ್ಟ್ ತೀರ್ಪು ನೀಡಿತ್ತು.

    ಪ್ರಕರಣದ ಬಗ್ಗೆ ಮಾತನಾಡಿರುವ ಸಂತೋಷ್, ಆರು ವರ್ಷ ಈ ಪ್ರಕರಣಕ್ಕಾಗಿ ಎರಡು ಲಕ್ಷ ಖರ್ಚು ಮಾಡಿದ್ದೇನೆ. ನನ್ನ ಎಂಜಿನಿಯರಿಂಗ್ ಓದನ್ನು ಅರ್ಧಕ್ಕೆ ಬಿಟ್ಟಿದ್ದೇನೆ. ಈ ಸುಳ್ಳು ಪ್ರಕರಣದಿಂದ ನನಗೆ ಡ್ರೈವಿಂಗ್ ಲೈಸಸ್ಸ್ ಕೂಡ ದೊರಕಿಲ್ಲ. ಎಲ್ಲೂ ಕೆಲಸ ಸಿಗದೇ ಒಂದು ಆಫೀಸಿನಲ್ಲಿ ಪಿಎಯಾಗಿ ಕೆಲಸ ಮಾಡಿದ್ದೇನೆ. ಈ ಕಾರಣದಿಂದ ನಾನು ಯುವತಿ, ಆಕೆಯ ಮನೆಯವರು ಮತ್ತು ತನಿಖೆ ಮಾಡಿದ ಪೊಲೀಸ್ ಅಧಿಕಾರಿ ಮೇಲೆ 30 ಲಕ್ಷ ಮಾನನಷ್ಟ ಮೊಕದ್ದಮೆ ಹೂಡಿದ್ದೆ ಎಂದು ತಿಳಿಸಿದ್ದಾರೆ.

  • ‘ದೂರು ಕೊಟ್ರೆ ಶೂಟ್ ಮಾಡ್ತೀನಿ’ – ಪಿಎಸ್‍ಐ ವಿರುದ್ಧ ಆರೋಪ

    ‘ದೂರು ಕೊಟ್ರೆ ಶೂಟ್ ಮಾಡ್ತೀನಿ’ – ಪಿಎಸ್‍ಐ ವಿರುದ್ಧ ಆರೋಪ

    ಕೊಪ್ಪಳ: ಮಾಮೂಲಿ ಕೊಡಲು ನಿರಾಕರಿಸಿದ ವ್ಯಕ್ತಿ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಮಾಧ್ಯಮಗಳಿಗೆ ಅಥವಾ ಅಧಿಕಾರಿಗಳಿಗೆ ದೂರು ಕೊಟ್ಟರೆ ಶೂಟ್ ಮಾಡುತ್ತೇನೆ ಎಂದು ಪಿಎಸ್‍ಯ ಒಬ್ಬರು ಬೆದರಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಜಿಲ್ಲೆಯ ಕಾರಟಗಿ ಪಿಎಸ್‍ಐ ವಿಜಯಕೃಷ್ಣ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಮುಕ್ಕುಂದ ಗ್ರಾಮದ ಭಾಷಾಸಾಬ್ ಅವರಿಗೆ ಪಿಎಸ್‍ಐ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ಭಾಷಾಸಾಬ್ ‘ನನ್ನ ಜೀವಕ್ಕೆ ಏನಾದರು ಆದರೆ ಅದಕ್ಕೆ ವಿಜಯಕೃಷ್ಣ ಕಾರಣ’ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

    ಮರಳು ಸಾಗಾಟ ವಿಚಾರದಲ್ಲಿ ಭಾಷಾಸಾಬ್ ಹಾಗೂ ಕಾರಟಗಿ ಪೊಲೀಸರ ನಡುವೆ ವಾಗ್ವಾದ ನಡೆದಿತ್ತು. ತಮ್ಮ ಠಾಣಾ ವ್ಯಾಪ್ತಿ ಮೀರಿ ಪೊಲೀಸರು ಭಾಷಾಸಾಬ್ ಟ್ರ್ಯಾಕ್ಟರ್ ಸೀಜ್ ಮಾಡಿದ್ದರು. ಈ ವಿಷಯ ಮಾಧ್ಯಮದಲ್ಲಿ ಭಿತ್ತರವಾಗುತ್ತಿದ್ದಂತೆ ರಿವೇಂಜ್ ತಗೆದುಕೊಂಡ ಪೊಲೀಸರು ಭಾಷಾಸಾಬ್ ವಿರುದ್ಧ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಈ ವಿಷಯ ಮಾಧ್ಯಮದವರಿಗೆ ತಿಳಿಸಿದರೆ ರಿವಾಲ್ವರ್ ಇಟ್ಟು ಶೂಟ್ ಮಾಡುತ್ತೇನೆ ಎಂದು ಪಿಎಸ್‍ಐ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಜೀವಭಯದಲ್ಲಿರುವ ಭಾಷಾಸಾಬ್ ವಿಜಯಕೃಷ್ಣ ವಿರುದ್ಧ ಸಿಎಂಗೆ ಪತ್ರ ಬರೆದಿದ್ದಾರೆ.

    ಈ ಘಟನೆಗೆ ಪ್ರಮುಖ ಕಾರಣ ಕಾರಟಗಿ ಪೊಲೀಸ್ ಠಾಣೆ ಪೇದೆ ಭೀಮಣ್ಣ ಎನ್ನಲಾಗಿದೆ. ಕಳೆದ ಮೂರು ತಿಂಗಳ ಹಿಂದೆ ಮುಕ್ಕುಂದ ಗ್ರಾಮದಲ್ಲಿ ಮರಳು ಸಾಗಾಟದ ಮಾಮೂಲಿ ವಸೂಲಿಗೆ ಪೊಲೀಸರು ಹೋಗಿದ್ದರು. ಆದರೆ ಭಾಷಾಸಾಬ್ ನಮ್ಮ ಗ್ರಾಮ ನಿಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರಲ್ಲ ಎಂದು ಪೊಲೀಸರ ಬಳಿ ಗಲಾಟೆ ಮಾಡಿದ್ದರು. ಅಲ್ಲದೇ ಮೊಬೈಲ್‍ನಲ್ಲಿ ಗಲಾಟೆಯ ದೃಶ್ಯವನ್ನು ಸೆರೆಹಿಡಿದಿದ್ದರು. ಹೀಗಾಗಿ ಪೊಲೀಸರು ಭಾಷಾಸಾಬ್‍ರನ್ನ ಟಾರ್ಗೆಟ್ ಮಾಡಿದ್ದರು. ಆದ್ದರಿಂದಲೇ ಭಾಷಾಸಾಬ್ ವಿರುದ್ಧ ಸುಳ್ಳು ಕೇಸ್ ದಾಖಲು ಮಾಡಿ ಪೊಲೀಸರು ಹಗೆ ಸಾಧಿಸಿದ್ದಾರೆ.

    ಮಾಮೂಲಿ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಪೊಲೀಸರು ಟಾರ್ಗೆಟ್ ಮಾಡುತಿದ್ದು, ಭಾಷಾಸಾಬ್ ಊರು ಬಿಟ್ಟು ಅಲೆಯುತ್ತಿದ್ದಾರೆ. ಅಲ್ಲದೆ ಪಿಎಸ್‍ಐ ವಿಜಯಕೃಷ್ಣ ಗೂಂಡಾಗಳನ್ನ ಬಿಟ್ಟು ಭಾಷಾಸಾಬ್‍ಗೆ ಧಮ್ಕಿ ಹಾಕಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

  • ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿಲ್ಲ, ಸುಳ್ಳು ದೂರುಗಳು ಹೆಚ್ಚುತ್ತಿವೆ ಎಂದ ಹರಿಯಾಣ ಸಿಎಂ

    ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿಲ್ಲ, ಸುಳ್ಳು ದೂರುಗಳು ಹೆಚ್ಚುತ್ತಿವೆ ಎಂದ ಹರಿಯಾಣ ಸಿಎಂ

    ಚಂಡೀಗಢ: ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿಲ್ಲ, ಸುಳ್ಳು ದೂರುಗಳು ಹೆಚ್ಚುತ್ತಿವೆ ಎಂದು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.

    ಪಂಚಕುಲ ಜಿಲ್ಲೆಯ ಕಾಲ್ಕಾ ಪಟ್ಟಣದಲ್ಲಿ ಶುಕ್ರವಾರದಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮನೋಹರ್ ಲಾಲ್ ಖಟ್ಟರ್ ಭಾಷಣದಲ್ಲಿ, ಹೆಚ್ಚಿನ ಸಂಖ್ಯೆಯ ಅತ್ಯಾಚಾರ ಪ್ರಕರಣಗಳನ್ನು ಮಹಿಳೆಯರು ಪರಿಚಿತರ ವಿರುದ್ಧ ದಾಖಲಿಸುತ್ತಾರೆ. ಅದರಲ್ಲೂ ಸುಳ್ಳು ಆರೋಪಗಳೇ ಹೆಚ್ಚಾಗಿರುತ್ತದೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿಲ್ಲ. ಆದರೇ ಹಿಂದೆ ಎಂದೋ ನಡೆದ ಘಟನೆಗಳು ಹಾಗೂ ಇಂದು ನಡೆಯುತ್ತಿರುವ ಘಟನೆಗಳನ್ನು ಮುಂದಿಟ್ಟುಕೊಂಡು ಬೇಕಂತಲೇ ಸುಳ್ಳು ಅತ್ಯಾಚಾರ ಕೇಸ್‍ಗಳನ್ನು ಕೆಲವರು ದಾಖಲಿಸುತ್ತಾರೆ. ಆದ್ದರಿಂದ ಇಂತಹ ಘಟನೆಗಳಿಗೆ ಸಂಬಂಧಪಟ್ಟ ದೂರುಗಳು ಹೆಚ್ಚಾಗುತ್ತಿದೆಯೇ ಹೊರತು ಪ್ರಕರಣಗಳಲ್ಲ ಎಂದು ಹೇಳಿಕೆ ನೀಡಿದರು.

    ಅತ್ಯಾಚಾರ ದೂರು ದಾಖಲೆಯಾಗುವ ಶೇ.80-90 ರಷ್ಟು ಪ್ರಕರಣಗಳಲ್ಲಿ ಆರೋಪಿ ಹಾಗೂ ದೂರು ನೀಡುವ ಮಹಿಳೆ ಪರಿಚಿತರಾಗಿರುತ್ತಾರೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಆರೋಪಿ ಮತ್ತು ದೂರುದಾರರು ತುಂಬಾ ವರ್ಷಗಳಿಂದ ಜೊತೆಗೆ ಇರುತ್ತಾರೆ. ಆದರೆ ಯಾವುದೋ ವಿಷಯಕ್ಕೆ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿ ಪೊಲೀಸ್ ಠಾಣೆಯಲ್ಲಿ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಮಹಿಳೆ ದೂರು ದಾಖಲಿಸುತ್ತಾರೆ ಎಂದು ಹೇಳಿದರು.

    ಸದ್ಯ ಮನೋಹರ್ ಲಾಲ್ ಖಟ್ಟರ್‍ರವರ ಹೇಳಿಕೆಗೆ ಪರ, ವಿರೋಧ ಅಭಿಪ್ರಾಯಗಳು ಕೇಳಿ ಬಂದಿದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews