Tag: falls

  • ಮೋಜು ಮಾಡಲು ಫಾಲ್ಸ್ ಗೆ ತೆರಳಿ ಬಂಡೆ ಮೇಲಿಂದ ಬಿದ್ದು ಕೋಮಾಕ್ಕೆ ಜಾರಿದ ಯುವಕ!

    ಮೋಜು ಮಾಡಲು ಫಾಲ್ಸ್ ಗೆ ತೆರಳಿ ಬಂಡೆ ಮೇಲಿಂದ ಬಿದ್ದು ಕೋಮಾಕ್ಕೆ ಜಾರಿದ ಯುವಕ!

    ಬೆಂಗಳೂರು: ಮೋಜು ಮಾಡಲೆಂದು ಫಾಲ್ಸ್ ಗೆ ಹೋಗಿ ಕಾಲು ಜಾರಿ ಬಿದ್ದು ಯುವಕನೊಬ್ಬ ಗಂಭೀರ ಗಾಯಗೊಂಡ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಸಮೀಪ ನಡೆದಿದೆ.

    ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿನ ಟಿ.ಕೆ ಫಾಲ್ಸ್ ಪ್ರವಾಸಿ ತಾಣಯಾಗಿದ್ದು, ಪ್ರವಾಸಕ್ಕೆಂದು ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಯುವಕ 50 ಅಡಿ ಬಂಡೆ ಮೇಲಿನಿಂದ ಕೆಳಗೆ ಬಿದ್ದಿದ್ದಾನೆ. ಯುವಕ ಯಾರೆಂದು ತಿಳಿದುಬಂದಿಲ್ಲ. ಸದ್ಯ ಗಾಯಾಳು ಯುವಕ ನಿಮಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ

    ಮೋಜು ಮಾಡಲು ಹೋಗಿ ಫಾಲ್ಸ್ ತೆರಳಿದ್ದ ವೇಳೆ 50 ಅಡಿ ಮೇಲಿಂದ ಕೆಳಗೆ ಬಿದ್ದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಪರಿಣಾಮ ಸದ್ಯ ಕೋಮದಲ್ಲಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

    ಯುವಕ ಫಾಲ್ಸ್ ಬಂಡೆ ಮೇಲೆ ಹತ್ತುವಾಗ ಪಾಚಿ ಮೇಲೆ ಕಾಲಿಟ್ಟು ಜಾರಿ ಬಿದ್ದಿದ್ದು, ಕಾಲು ಜಾರಿ ಬೀಳುವ ದೃಶ್ಯವನ್ನು ಪಕ್ಕದಲ್ಲೇ ಇದ್ದ ವ್ಯಕ್ತಿಯೊಬ್ಬ ತಮ್ಮ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಈ ಘಟನೆ ನಡೆದಿದೆ.

  • ಚನ್ನಗಿರಿ ಬೆಟ್ಟದಲ್ಲಿ ಸೆಲ್ಫಿ ದುರಂತ: ಜಲಪಾತದಿಂದ ನೂರು ಅಡಿ ಆಳಕ್ಕೆ ಬಿದ್ದು ವಿದ್ಯಾರ್ಥಿ ಸಾವು

    ಚನ್ನಗಿರಿ ಬೆಟ್ಟದಲ್ಲಿ ಸೆಲ್ಫಿ ದುರಂತ: ಜಲಪಾತದಿಂದ ನೂರು ಅಡಿ ಆಳಕ್ಕೆ ಬಿದ್ದು ವಿದ್ಯಾರ್ಥಿ ಸಾವು

    ಚಿಕ್ಕಬಳ್ಳಾಪುರ: ಸೆಲ್ಫಿ ತೆಗೆಯುವಾಗ ಜಲಪಾತದಿಂದ ನೂರು ಅಡಿ ಆಳಕ್ಕೆ ಆಯತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಬಳಿಯ ಚನ್ನಗಿರಿ ಬೆಟ್ಟದಲ್ಲಿ ನಡೆದಿದೆ.

    ವಿಶ್ವವಿಖ್ಯಾತ ನಂದಿಗಿರಿಧಾಮ ಪಕ್ಕದ ಚನ್ನಗಿರಿ ಬೆಟ್ಟದಲ್ಲಿ ಕಳೆದ ಒಂದು ತಿಂಗಳಿನಿಂದ ಜಲಪಾತ ಸೃಷ್ಟಿಯಾಗಿದ್ದು, ಜಲಪಾತ ನೋಡಲು ಬಂದಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಸೆಲ್ಫಿ ಕ್ರೇಜ್ ಗೆ ಬಲಿಯಾಗಿದ್ದಾನೆ. ದೊಡ್ಡಬಳ್ಳಾಪುರ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ನವೀನ್ (23) ಮೃತ ವಿದ್ಯಾರ್ಥಿ.

    ಕಾಲೇಜು ವಿದ್ಯಾರ್ಥಿಗಳೊಂದಿಗೆ ಚನ್ನಗಿರಿ ಬೆಟ್ಟದ ಫಾಲ್ಸ್ ಗೆ ಆಗಮಿಸಿದ್ದ ನವೀನ್ ಅಲ್ಲೇ ನೀರಿನಲ್ಲಿ ಆಟವಾಡುತ್ತ, ಅರ್ಧ ಮಟ್ಟ ಏರಿ ಅಲ್ಲಿ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಪಾಚಿ ಕಟ್ಟಿದ ಕಲ್ಲಿನ ಮೇಲೆ ಕಾಲಿಟ್ಟ ಪರಿಣಾಮ ಆಯತಪ್ಪಿ ಜಲಪಾತದಿಂದ ನೂರು ಅಡಿ ಆಳದ ಕೆಳಕ್ಕೆ ಬಿದ್ದು ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣಾದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಈ ಮಳೆಗಾಲ ಆರಂಭದ ನಂತರ ಈ ಜಲಪಾತ ಆರಂಭವಾಗಿದ್ದು, ಜಲಪಾತ ನೋಡಲು ಪ್ರತಿದಿನ ನೂರಾರು ಮಂದಿ ಚನ್ನಗಿರಿ ಬೆಟ್ಟಕ್ಕೆ ಲಗ್ಗೆಯಿಡುತ್ತಿದ್ದಾರೆ. ಇದರಿಂದ ಕಳೆದ ಒಂದು ತಿಂಗಳಲ್ಲೇ 3  ಮಂದಿ ಮೃತಪಟ್ಟಿದ್ದಾರೆ ಅಂತ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

     

  • ಮೈದುಂಬಿ ಹರಿಯುತ್ತಿದೆ ಮಂಡ್ಯದ ಗಾಣಾಳು ಫಾಲ್ಸ್

    ಮೈದುಂಬಿ ಹರಿಯುತ್ತಿದೆ ಮಂಡ್ಯದ ಗಾಣಾಳು ಫಾಲ್ಸ್

    ಮಂಡ್ಯ: ಒಂದು ಕಡೆ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಅವಾಂತರ ಸೃಷ್ಟಿಯಾಗುತ್ತಿದೆ. ಮತ್ತೊಂದೆಡೆ ಫಾಲ್ಸ್ ಗಳು ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

    ಫಾಲ್ಸ್ ಗಳು ಎಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಧುಮ್ಮಿಕ್ಕಿ ಹರಿಯುವ ನೀರನ್ನು ನೋಡುವುದೇ ಒಂದು ಚಂದಾ. ನಿರಂತರ ಮಳೆಯಿಂದ ಶಿಂಷಾ ಹೊಳೆಯಲ್ಲಿ ನೀರು ಬರುತ್ತಿರುವುದರಿಂದ ಅಪರೂಪದ ಗಾಣಾಳು ಫಾಲ್ಸ್ ಮೈದುಂಬಿ ಹರಿಯುತ್ತಿದ್ದು, ನೋಡಲು ಎರಡು ಕಣ್ಣುಗಳು ಸಾಲುತ್ತಿಲ್ಲ. ಅಷ್ಟು ಆಕರ್ಷಕವಾಗಿ ಎಲ್ಲರನ್ನು ತನ್ನತ್ತಾ ಕೈ ಬೀಸಿ ಕರೆಯುತ್ತಿದೆ.

    ಜಿಲ್ಲೆಯ ಮಳವಳ್ಳಿ ತಾಲೂಕಿನ ಗಾಣಾಳು ಗ್ರಾಮದ ಸಮೀಪದಲ್ಲಿರುವ ಫಾಲ್ಸ್ ಮೈದುಂಬಿ ಹರಿಯುತ್ತಿದೆ. ಗಾಣಾಳು ಫಾಲ್ಸ್ ನೋಡುವುದಕ್ಕೆ ಅಮೆರಿಕದ ನಯಾಗ್ರಾ ಫಾಲ್ಸ್ ನಂತೆ ಕಾಣುವುದರಿಂದ ಇದನ್ನು ಮಂಡ್ಯದ ನಯಾಗ್ರಾ ಫಾಲ್ಸ್ ಅಂತಾ ಕರೆಯುತ್ತಾರೆ. ಆದರೆ ಅಲ್ಲಿನ ಸ್ಥಳೀಯರು ಇದನ್ನು ಬೆಂಕಿ ಫಾಲ್ಸ್ ಅಂತಾ ಕರಿಯುತ್ತಾರೆ. ಹಾಗಾಗಿ ಈ ಫಾಲ್ಸ್ ಬೆಂಕಿ ಫಾಲ್ಸ್ ಅಂತಾನೆ ಚಿರಪರಿಚಿತವಾಗಿದೆ.

    ಈ ಫಾಲ್ಸ್ ನ ವಿಶೇಷತೆ ಎಂದರೆ ಯಾವಾಗಲೂ ತುಂಬಿ ಹರಿಯುವುದಿಲ್ಲ. ಶಿಂಷಾ ಹೊಳೆಯಲ್ಲಿ ನೀರು ಬಂದರೆ ಮಾತ್ರ ಈ ಫಾಲ್ಸ್ ಗೆ ಜೋರಾಗಿ ನೀರು ಹರಿದು ಬರುತ್ತದೆ. ಕಳೆದ ಒಂದೂವರೆ ವರ್ಷದಿಂದ ಗಾಣಾಳು ಫಾಲ್ಸ್ ಗೆ ನೀರು ಹರಿದು ಬಂದಿರಲಿಲ್ಲ. ಆದರೆ ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಶಿಂಷಾ ನದಿ ತುಂಬಿ ಹರಿಯುತ್ತಿದೆ.

     

    ಶಿಂಷಾ ಹೊಳೆಗೆ ಮಾರ್ಕೋನಹಳ್ಳಿ ಡ್ಯಾಂನಿಂದಲೂ ನೀರು ಹರಿದುಬಂದು ಸೇರುತ್ತಿದೆ. ಈ ನೀರು ಇಗ್ಲೂರು ಬ್ಯಾರೇಜ್ ಮೂಲಕ ಗಾಣಾಳುವಿಗೆ ಹರಿದು ಬರುತ್ತದೆ. ಇದರಿಂದ ಫಾಲ್ಸ್ ನಲ್ಲಿ ನೀರಿನ ಭೋರ್ಗರೆತ ಹೆಚ್ಚಾಗಿದೆ.

    ಮಳೆ ಬಂದರೆ ಅಥವಾ ಶಿಂಷಾ ಹೊಳೆಯಲ್ಲಿ ನೀರು ಬಂದರೆ ಮಾತ್ರ ಈ ಫಾಲ್ಸ್ ನಲ್ಲಿ ನೀರು ಬರುವುದರಿಂದ ಇದೊಂದು ಅಪರೂಪದ ಫಾಲ್ಸ್ ಅಂತಾನೇ ಕರೆಯಲಾಗುತ್ತದೆ. ಈ ಫಾಲ್ಸ್ ಮೈದುಂಬಿ ಹರಿಯುತ್ತಿರೋದನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು, ಪ್ರವಾಸಿಗರು ಆಗಮಿಸುತ್ತಿದ್ದಾರೆ.

  • ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ರಾಯಚೂರಿನ ಗುಂಡಲಬಂಡೆ ಜಲಪಾತ

    ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ರಾಯಚೂರಿನ ಗುಂಡಲಬಂಡೆ ಜಲಪಾತ

    ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿರುವ ಜಲಪಾತಕ್ಕೆ ದಾರಿಯೇ ಇಲ್ಲ

    -ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾನನ ಮರೆಯಲ್ಲೇ ಉಳಿದ ಜಲಸೊಬಗು

    ವಿಜಯ್ ಜಾಗಟಗಲ್

    ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಬೇಸಿಗೆಯ ಬಿಸಿಲ ಬೇಗೆ ಜನರನ್ನ ಆಗಲೇ ತತ್ತರಿಸುವಂತೆ ಮಾಡಿದೆ. ಕುಡಿಯುವ ನೀರಿನ ಸಮಸ್ಯೆಯಿಂದ ಜಿಲ್ಲೆಯ ಜನ ಪರದಾಡುತ್ತಿದ್ದಾರೆ. ಬರಗಾಲದಿಂದ ಹಳ್ಳ,ಕೊಳ್ಳ,ಕೆರೆಗಳು ಬತ್ತಿವೆ. ಇಷ್ಟಾದ್ರೂ ರಾಯಚೂರಿನಲ್ಲೊಂದು ಜೀವಂತ ಜಲಪಾತ ಧುಮ್ಮಿಕ್ಕಿ ಹರಿಯುವ ಮೂಲಕ ಅಚ್ಚರಿ ಮೂಡಿಸಿದೆ.

    ಕಲ್ಲು ಬಂಡೆಗಳ ಮೈಮೇಲೆ ಮೆಲ್ಲನೆ ಹರಿದು ರಮಣೀಯ ದೃಶ್ಯಕಾವ್ಯ ಸೃಷ್ಠಿಸಿರುವ ಇಲ್ಲಿನ ಜಲಸೋಬಗನ್ನ ನೋಡಿದ್ರೆ ಒಂದು ಕ್ಷಣ ಮಲೆನಾಡಿನ ಪ್ರಕೃತಿ ಸೌಂದರ್ಯದ ಚಿತ್ರಗಳು ಕಣ್ಮುಂದೆ ಬರದೇ ಇರಲ್ಲ. ಇದು ಬರಗಾಲದಿಂದ ತತ್ತರಿಸಿರುವ ಬಿರುಬೇಸಿಗೆಯ ನಾಡು ರಾಯಚೂರು ಜಿಲ್ಲೆಯ ಗುಂಡಲಬಂಡೆ ಜಲಪಾತ ಅನ್ನೋ ಸತ್ಯ ಮಾತ್ರ ನಿಜಕ್ಕೂ ಅಚ್ಚರಿ ತರಿಸುತ್ತೆ. ಲಿಂಗಸುಗೂರು ತಾಲೂಕಿನ ಗೋಲಪಲ್ಲಿ ಗ್ರಾಮದ ಬಳಿಯಿರುವ ಈ ಜಲಪಾತದ ಬಂಡೆಯೊಂದಕ್ಕೆ ಸಿಡಿಲು ಬಡಿದಿದ್ದರಿಂದ ‘ಸಿಡಿಲುಬಂಡೆ’ ಜಲಪಾತ ಅಂತಲೂ ಕರೆಯುತ್ತಾರೆ.

    ಹತ್ತು ವರ್ಷಗಳಿಂದ ಬೆಳಕಿಗೆ ಬರುತ್ತಿರುವ ಈ ಜಲಪಾತ ಮೊದಲು ಸಣ್ಣದಾಗಿ ಹರಿಯುತ್ತಿತ್ತು. ನಾರಾಯಣಪುರ ಬಲದಂಡೆ ಕಾಲುವೆಯ ಬಸಿನೀರು ಸೇರಿಕೊಂಡು ಈಗ ಜಲಪಾತ 90 ಅಡಿ ಮೇಲಿಂದ ಧುಮ್ಮಿಕ್ಕಿ ಹರಿಯುತ್ತಿದೆ. ಇಲ್ಲಿಂದ 10 ಕಿ.ಮೀ ದೂರದಲ್ಲಿ ಐದಾರು ಹಳ್ಳಗಳು ಒಂದೆಡೆ ಸೇರುವ ಸ್ಥಳದಿಂದ ಉಗಮವಾಗುವ ಜಲಪಾತದ ಮೂಲ ಪುನಃ ಹಳ್ಳಗಳ ಮೂಲಕ ಹರಿದು ಕೃಷ್ಣಾನದಿಗೆ ಸೇರುತ್ತಿದೆ. ಆದ್ರೆ ಇಲ್ಲೊಂದು ಸುಂದರ ಜಲಪಾತವಿದೆ ಅಂತ ಜಿಲ್ಲೆಯ ಎಷ್ಟೋ ಜನರಿಗೇ ಗೊತ್ತೇ ಇಲ್ಲಾ.

    ಜಲಪಾತದ ಇರುವು ಇನ್ನೂ ಪ್ರವಾಸೋದ್ಯಮ ಇಲಾಖೆ ಗಮನಕ್ಕೂ ಬಂದಿಲ್ಲ. ಕಾಡಿನ ಮಧ್ಯೆ ದುರ್ಗಮ ರಸ್ತೆಯಲ್ಲಿ ತೆರಳಿದರೆ ಸಿಗುವ ಜಲಪಾತದ ಬಳಿ ಹೋಗುವುದೇ ಒಂದು ಸಾಹಸವಾಗಿರುವುದರಿಂದ ಪ್ರವಾಸಿಗರು ಬೇಸರಗೊಂಡಿದ್ದಾರೆ. ಜಿಲ್ಲೆಯ ಏಕೈಕ ಸುಂದರ ಪ್ರವಾಸಿ ಸ್ಥಳವಾಗಿರುವ ಗುಂಡಲಬಂಡೆ ಜಲಪಾತ ಪ್ರದೇಶದ ಅಭಿವೃದ್ದಿ ಅವಶ್ಯವಾಗಿದೆ. ಅಲ್ಲದೆ ಎತ್ತರದಿಂದ ನೀರು ಧುಮ್ಮುಕ್ಕುವುದರಿಂದ ವಿದ್ಯುತ್ ಉತ್ಪಾದನೆಗೂ ಅವಕಾಶಗಳಿವೆ.

    ಭಾನುವಾರ ಹಾಗೂ ರಜಾ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಕಾಡಿನಲ್ಲಿ ಒಂದೂವರೆ ಕಿ.ಮೀ ದುರ್ಗಮ ದಾರಿ ಬಳಿಕ ಸಿಗುವ ಈ ಜಲಪಾತ ಬಂಡೆಗಳ ಗುಡ್ಡದಲ್ಲಿ ಹರಿಯುವುದರಿಂದ ಇಲ್ಲಿನ ಕಲ್ಲುಗಳು ಜಾರುತ್ತವೆ. ಅಲ್ಲದೆ ಅಲ್ಲಲ್ಲಿ ಅಪಾಯದ ಸ್ಥಳಗಳಿವೆ, ಮೊದಲಬಾರಿ ಇಲ್ಲಿಗೆ ಬರುವವರು ಮುನ್ನೆಚ್ಚರಿಕೆಯಿಲ್ಲದೆ ಓಡಾಡಿದರೆ ಅಪಾಯ ಕಟ್ಟಿಟ್ಟಬುತ್ತಿ. ಹೀಗಾಗಿ ಪ್ರವಾಸಿಗರಿಗೆ ಇಲ್ಲಿ ಜಲಪಾತದ ಕುರಿತ ನಾಮಫಲಕಗಳನ್ನ ಅಳವಡಿಸಬೇಕಿದೆ.

    ಜಿಲ್ಲೆಯ ಶಾಸಕರು, ಸಂಸದರು ಪ್ರಸ್ತಾವನೆ ಸಲ್ಲಿಸಿದರೆ ಜಲಪಾತ ಅಭಿವೃದ್ದಿಗೆ ಮುಂದಾಗುತ್ತೇವೆ ಅಂತ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಹೇಳುತ್ತಿದ್ದಾರೆ. ಆದ್ರೆ ಜಿಲ್ಲೆಯ ಜನಪ್ರತಿನಿಧಿಗಳಲ್ಲಿನ ಇಚ್ಚಾಶಕ್ತಿ ಕೊರತೆಯಿಂದ ಸುಂದರ ತಾಣವೊಂದು ಜನರಿಂದ ದೂರ ಉಳಿದಿದೆ. ಕನಿಷ್ಠ ಈಗಲಾದ್ರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಜಲಪಾತ ಅಭಿವೃದ್ದಿಗೆ ಮುಂದಾಗಬೇಕಿದೆ. ಜಿಲ್ಲೆಯ ಏಕೈಕ ಪ್ರವಾಸಿ ತಾಣವನ್ನ ಅಭಿವೃದ್ಧಿ ಪಡಿಸಬೇಕಿದೆ.