Tag: falls

  • ಹೊಗೇನಕಲ್‍ಗೆ ಹೋಗೋ ಪ್ರವಾಸಿಗರೇ ಎಚ್ಚರ- 2 ವರ್ಷದ ನಂತ್ರ ಕೋಡಿ ಹರಿದ ಗೋಪಿನಾಥಂ ಡ್ಯಾಂ

    ಹೊಗೇನಕಲ್‍ಗೆ ಹೋಗೋ ಪ್ರವಾಸಿಗರೇ ಎಚ್ಚರ- 2 ವರ್ಷದ ನಂತ್ರ ಕೋಡಿ ಹರಿದ ಗೋಪಿನಾಥಂ ಡ್ಯಾಂ

    ಚಾಮರಾಜನಗರ: ಸತತ ಮಳೆಗೆ ಮೈದುಂಬಿ ಗೋಪಿನಾಥಂ ಡ್ಯಾಂ ಕೋಡಿ ಬಿದ್ದಿರುವುದರಿಂದ ಹೊಗೇನಕಲ್‍ಗೆ ತೆರಳಲು ಪ್ರವಾಸಿಗರು ಪ್ರಯಾಸ ಪಡುವಂತಾಗಿದೆ.

    ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋಪಿನಾಥಂ ಡ್ಯಾಂ ಎರಡು ವರ್ಷದ ಬಳಿಕ ತುಂಬಿದೆ. ಶುಕ್ರವಾರ ಬಿದ್ದ ಜೋರು ಮಳೆಗೆ ಜಲಾಶಯದ ನೀರು, ಹಳ್ಳಕೊಳ್ಳದ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ‘ತೇಂಗಾಕೋಂಬು’ ಎಂಬಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.

    ವಾರಾಂತ್ಯದ ಮೋಜಿಗಾಗಿ ಹೊಗೇನಕಲ್‍ಗೆ ತೆರಳುವ ಪ್ರವಾಸಿಗರು ತೆರಳಲಾಗದೇ ಮೂರು 3 ತಾಸುಗಳಿಂದ ರಸ್ತೆತುದಿಯಲ್ಲೇ ನಿಂತಿದ್ದರು. ಬೈಕ್ ಸವಾರರಂತೂ 3-4 ಮಂದಿಯ ಸಹಾಯದಿಂದ ಬೈಕನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ತರಲಾಗುತ್ತಿದೆ. ಇಂದು ಕೂಡ ಜೋರು ಮಳೆಯಾದರೆ ನೀರು ಇಳಿಮುಖವಾಗುವವರೆಗೆ ಹೊಗೇನಕಲ್‍ ಮಾರ್ಗವೇ ಬಂದ್ ಆಗಲಿದೆ.

    ಇತ್ತ ರೇಷ್ಮೆನಗರಿ ರಾಮನಗರ ಜಿಲ್ಲೆಯ ಹಲವೆಡೆ ತಡರಾತ್ರಿ ಭರ್ಜರಿ ಮಳೆಯಾಗಿದ್ದು, ಸಾಕಷ್ಟು ಅವಾಂತರಗಳು ಉಂಟಾಗಿವೆ. ತಡರಾತ್ರಿ ಕನಕಪುರದಲ್ಲಿ ಭರ್ಜರಿ ಮಳೆಯಾಗಿದ್ದು, ನಗರಸಭೆ ವ್ಯಾಪಾರ ಮಳಿಗೆಗೆ ನೀರು ನುಗ್ಗಿ ವ್ಯಾಪಾರಸ್ಥರು ಪರದಾಡುವಂತಾಗಿತ್ತು. ಕನಕಪುರ ಹೊರ ವಲಯದ ಕುರುಪೇಟೆ ಗ್ರಾಮದಲ್ಲಿಯೂ ತಗ್ಗುಪ್ರದೇಶದಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಸಾರ್ವಜನಿಕರು ಪರದಾಡುವಂತಾಗಿತ್ತು. ಏಕಾಏಕಿ ನೀರು ನುಗ್ಗಿದ ಹಿನ್ನೆಲೆಯಲ್ಲಿ ಮನೆಯೆಲ್ಲಾ ಕೆರೆಗಳಂತಾಗಿದ್ದವು.

  • ಬಚ್ಚನ್ ಹೆಸರಿನಲ್ಲೊಂದು ಫಾಲ್ಸ್- ಹೆಸರಿಟ್ಟ ಕಾರಣ ಕೇಳಿ ನಕ್ಕ ಬಿಗ್ ಬಿ

    ಬಚ್ಚನ್ ಹೆಸರಿನಲ್ಲೊಂದು ಫಾಲ್ಸ್- ಹೆಸರಿಟ್ಟ ಕಾರಣ ಕೇಳಿ ನಕ್ಕ ಬಿಗ್ ಬಿ

    ಮುಂಬೈ: ದೊಡ್ಡ ಸ್ಟಾರ್ ಕಲಾವಿದರ ನೆನಪಿಗಾಗಿ ಕೆಲ ಸ್ಥಳಗಳಿಗೆ ಅವರ ಹೆಸರನ್ನು ನಾಮಕಾರಣ ಮಾಡಲಾಗುತ್ತದೆ. ಸಿನಿಮಾ ತಾರೆಯರ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಮೂರ್ತಿಗಳನ್ನ ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸುತ್ತಾರೆ. ದೊಡ್ಡ ನಗರಗಳಲ್ಲಿ ಪ್ರಮುಖ ರಸ್ತೆಗಳಿಗೆ ನಟರ ಹೆಸರು ನಾಮಕರಣ ಮಾಡುವ ಮೂಲಕ ಸರ್ಕಾರಗಳು ಗೌರವ ಸೂಚಿಸುತ್ತವೆ. ಬಾಲಿವುಡ್ ನ ಬಿಗ್ ಬಿ ಎಂದೇ ಗುರುತಿಸಿಕೊಳ್ಳುವ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲೊಂದು ಫಾಲ್ಸ್ ಇದೆ. ಈ ವಿಷಯ ಬಚ್ಚನ್ ಅವರಿಗೆ ಶುಕ್ರವಾರ ತಿಳಿದಿದೆ.

    ಶುಕ್ರವಾರ ಅಮಿತಾಬ್ ಬಚ್ಚನ್ ಟ್ವೀಟ್ ಒಂದನ್ನು ರೀಟ್ವೀಟ್ ಮಾಡಿಕೊಂಡಿದ್ದರು. ಟ್ವೀಟ್ ನಲ್ಲಿ ಮೂವರು ಫಾಲ್ಸ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು, ಅಮಿತಾಬ್ ಬಚ್ಚಬ್ ಒಂದು ಬಾರಿ ಈ ಸ್ಥಳಕ್ಕೆ ಭೇಟಿ ನೀಡಬೇಕೆಂದು ಬರೆದುಕೊಂಡಿದ್ದರು. ಕೆಳಗಡೆ ಸ್ಥಳ ಅಮಿತಾಬ್ ಬಚ್ಚನ್ ಫಾಲ್ಸ್ ಎಂದು ಬರೆಯಲಾಗಿತ್ತು. ಜಲಪಾತಕ್ಕೆ ತಮ್ಮ ಹೆಸರು ಇದೆಯಾ? ಇದು ನಿಜಾನಾ ಎಂದು ಬಿಗ್ ಬಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಎಲ್ಲಿದೆ ಜಲಪಾತ?
    ಸಿಕ್ಕಿಂ ರಾಜ್ಯದ ಲಾಚುಂಗ್ ಪ್ರದೇಶದ ಚುಂಗ್‍ಥಾಕ್ ಮತ್ತು ಯುಮ್‍ಥಾಂಗ್ ಕಣಿವೆ ನಡುವೆ ಈ ಜಲಪಾತವಿದೆ. ಲಾಚುಂಗ್ ಪ್ರದೇಶದ 14 ಕಿ.ಮೀ. ದೂರದಲ್ಲಿ ಅಮಿತಾಬ್ ಬಚ್ಚನ್ ಫಾಲ್ಸ್ ಇದೆ. ಈ ಜಲಪಾತದ ಹೆಸರು ಭೀಮಾ ನಾಲಾ ಫಾಲ್ಸ್ ಅಂತಾ ಇದ್ದರೂ, ಅತಿ ಎತ್ತರವಾಗಿ ನೀರು ಧುಮ್ಮಿಕ್ಕಿ ಬೀಳುವದರಿಂದ ಸ್ಥಳೀಯರು ಅಮಿತಾಬ್ ಬಚ್ಚನ್ ಜಲಪಾತ ಎಂದು ಕರೆಯುತ್ತಾರೆ. ಸ್ಥಳೀಯವಾಗಿ ಈ ಜಲಪಾತವನ್ನು ಅಮಿತಾಬ್ ಬಚ್ಚನ್ ಫಾಲ್ಸ್ ಎಂದು ಕರೆಯಲಾಗುತ್ತದೆ.

  • ಸೆಲ್ಫಿ ತೆಗೆಯಲು ಹೋಗಿ 100 ಅಡಿ ಎತ್ತರದಿಂದ ಬಿದ್ದ ಯುವಕ – ಮೈ ನಡುಗಿಸುವ ದೃಶ್ಯ

    ಸೆಲ್ಫಿ ತೆಗೆಯಲು ಹೋಗಿ 100 ಅಡಿ ಎತ್ತರದಿಂದ ಬಿದ್ದ ಯುವಕ – ಮೈ ನಡುಗಿಸುವ ದೃಶ್ಯ

    ಚಿಕ್ಕಮಗಳೂರು: ಫಾಲ್ಸ್ ಬಳಿ ಸೆಲ್ಫಿ ತೆಗೆಯುವ ಸಂದರ್ಭದಲ್ಲಿ ಯುವಕ ಕಾಲು ಜಾರಿ ಸುಮಾರು 100 ಅಡಿ ಎತ್ತರದಿಂದ ಬಿದ್ದ ಘಟನೆ ಬಳಿಯ ಚಿಕ್ಕಮಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ.

    ಚಿತ್ರದುರ್ಗ ಮೂಲದ ಯುವಕ ಘಟನೆಯಲ್ಲಿ ಗಾಯಗೊಂಡಿದ್ದಾನೆ ಎಂಬ ಮಾಹಿತಿ ಲಭಿಸಿದ್ದು, ಯುವಕನ ತಲೆ, ಕೈ ಕಾಲು, ಸೊಂಟಕ್ಕೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಘಟನೆ ಬಗ್ಗೆ ಮಾಹಿತಿ ಪಡೆದ ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ಜಲಪಾತವೊಂದರ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಈ ಘಟನೆ ನಡೆದಿದೆ. ಪ್ರವಾಸದ ನಿಮಿತ್ತ ಸ್ನೇಹಿತರ ತಂಡ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಭಾಗದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದರಿಂದ ಆನೇಕ ಸ್ಥಳಗಳಲ್ಲಿ ನೀರಿನ ಝರಿ ನಿರ್ಮಾಣವಾಗಿದ್ದು, ಪ್ರಕೃತಿ ಸೌಂದರ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಲು ಯತ್ನಿಸಿದ ವೇಳೆ ಘಟನೆ ನಡೆದಿದೆ. ಏಕಾಏಕಿ ಯುವಕ ಮೇಲಿಂದ ಕೆಳಗೆ ಬೀಳುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

  • ಸೌಂದರ್ಯದ ಒಡತಿಯಾಗಿ ಭರಚುಕ್ಕಿಯ ಭೋರ್ಗರೆತ – ನೋಡಲು ಬಂತು ಜನಸಾಗರ

    ಸೌಂದರ್ಯದ ಒಡತಿಯಾಗಿ ಭರಚುಕ್ಕಿಯ ಭೋರ್ಗರೆತ – ನೋಡಲು ಬಂತು ಜನಸಾಗರ

    ಚಾಮರಾಜನಗರ: ಜಲನಯನ ಪ್ರದೇಶದಲ್ಲಿ ವರುಣನ ಆರ್ಭಟ ಹೆಚ್ಚಾದ ಪರಿಣಾಮ ಜಿಲ್ಲೆಯಲ್ಲಿ ನಯನ ಮನೋಹರವಾಗಿ, ಬಿರುಸು ಬಿರುಸಾಗಿ ರಭಸದಿಂದ ಭರಚುಕ್ಕಿ ಧುಮ್ಮಿಕ್ಕಿ ಹರಿಯುತ್ತಿದೆ.

    ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಇದೀಗ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡಿದೆ. ಕೊಡಗು, ಕೇರಳ, ಮೈಸೂರು, ಮಂಡ್ಯ, ಚಾಮರಾಜನಗರದ ಕೆಲ ಪ್ರದೇಶಗಳು ಜಲಾವೃತದಿಂದ ಕಂಗೆಟ್ಟಿದ್ದರೆ ಭರಚುಕ್ಕಿ ಮಾತ್ರ ಈ ಪ್ರವಾಹದ ನೀರಿನಿಂದ ತನ್ನ ಭೋರ್ಗರೆತದ ಮೂಲಕ ಸೌಂದರ್ಯದ ಒಡತಿಯಾಗಿ ಕಾಣುತ್ತಿದ್ದಾಳೆ.

    ಕಾವೇರಿ ಧುಮ್ಮಿಕ್ಕುವ ಭರಚುಕ್ಕಿ ಜಲಪಾತದ ಸೊಬಗನ್ನು ನೋಡಿಯೇ ಅನುಭವಿಸಬೇಕು. ಇಲ್ಲಿನ ಪ್ರಕೃತಿಯ ಸೊಬಗಂತು ಅತ್ಯದ್ಭುತವಾಗಿದೆ. ಹಾಲ್ನೊರೆಯಂತೆ ಧುಮ್ಮಿಕ್ಕುವ ಕಾವೇರಿಯ ಐಸಿರಿ ನಯನಮನೋಹರವಾಗಿದ್ದು, ಈ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿವೆ. ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಈಗ ಈ ಕಡೆಹರಿದು ಬರುತ್ತಿದ್ದಾರೆ.

    ಸುತ್ತಲೂ ಇರುವ ಬೆಟ್ಟಸಾಲು, ಹಸಿರಿನಿಂದ ಕಂಗೊಳಿಸುವ ಅರಣ್ಯ, ಭರಚುಕ್ಕಿ ಜಲಪಾತದ ಸೊಬಗನ್ನು ಮತ್ತಷ್ಟು ಸುಂದರವಾಗಿಸಿದೆ. ಸುಮಾರು ನೂರು ಮೀಟರ್ ಆಳಕ್ಕೆ ಧುಮ್ಮಿಕ್ಕುವ ರಭಸ ಹಾಗು ಭೋರ್ಗರೆತ ಎಂತಹವರರನ್ನು ಬೆರಗೊಳಿಸುತ್ತದೆ ಎಂದು ಪ್ರವಾಸಿಗರು ಹೇಳಿದ್ದಾರೆ.

    ಕರ್ನಾಟಕದ ಕೊಡಗು ಹಾಗೂ ನೆರೆ ರಾಜ್ಯ ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಬಹುತೇಕ ಮಂದಿ ತಮ್ಮ ನೆಲೆ ಕಳೆದುಕೊಂಡು ಎಲ್ಲವೂ ಇದ್ದ ಏನೂ ಇಲ್ಲದಂತೆ ಆಗಿದ್ದಾರೆ. ಇದಲ್ಲದೇ ಈ ಮಳೆಯಿಂದ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಅನೇಕ ಗ್ರಾಮಗಳು ಮುಳುಗಡೆಯಾಗಿ ಹಲವು ಬೆಳೆಗಳು ನೀರಿನಲ್ಲಿ ಹಾನಿಯಾಗಿವೆ. ಆದರೆ ಈ ಎಲ್ಲಾ ಹಾನಿ ನೋವಿನ ನಂತರ ಪ್ರಕೃತಿ ತನ್ನ ಸೌಂದರ್ಯವನ್ನು ಚಿತ್ತಾರಗೊಳಿಸಿಕೊಳ್ಳುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭರಚುಕ್ಕಿ ಜಲಪಾತದಲ್ಲಿ ಕೊಚ್ಚಿ ಹೋದ ಹಸು!

    ಭರಚುಕ್ಕಿ ಜಲಪಾತದಲ್ಲಿ ಕೊಚ್ಚಿ ಹೋದ ಹಸು!

    ಚಾಮರಾಜನಗರ: ಭರಚುಕ್ಕಿ ಜಲಪಾತದಲ್ಲಿ ಹಸು ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆ.

    ಭರಚುಕ್ಕಿ ಜಲಪಾತದ ಬಳಿ ಹಸು ನೀರು ಕುಡಿಯಲು ತೆರಳಿತ್ತು. ನೀರಿನ ರಭಸದಲ್ಲಿ ಸಿಲುಕಿದ ಹಸು ಮೇಲಕ್ಕೆ ಬರಲಾರದೇ ನದಿಯ ಮಧ್ಯ ಭಾಗದಲ್ಲಿ ನಿಂತುಕೊಂಡಿತ್ತು. ಹಸು ತನ್ನ ಪ್ರಾಣ ರಕ್ಷಿಸಿಕೊಳ್ಳಲು ಸತತ ಎರಡು ಗಂಟೆಗಳ ಕಾಲ ಪ್ರಯತ್ನ ನಡೆಸಿದೆ. ಕೊನೆಗೆ ನೀರಿನ ರಭಸ ಹೆಚ್ಚಾಗಿದ್ದರಿಂದ ಜಲಪಾತದಲ್ಲಿ ಕೊಚ್ಚಿ ಹೋಗಿದೆ. ಈ ಎಲ್ಲ ದೃಶ್ಯಗಳು ಪ್ರವಾಸಿಗರ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ನೀರಿನ ರಭಸ ಹೆಚ್ಚಾಗಿದ್ದರಿಂದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪ್ರವಾಸಿಗರು ಅಸಹಾಯಕರಾಗಿದ್ದರು.

    ಕಬಿನಿ ಹಾಗೂ ಕೆಆರ್ ಎಸ್ ಜಲಾಶಯಗಳಿಂದ ಅಧಿಕ ನೀರು ಹರಿಸಿರುವ ಹಿನ್ನೆಲೆಯಲ್ಲಿ ನದಿ ಅಪಾಯ ಮಟ್ಟಿ ಮೀರಿ ಹರಿಯುತ್ತಿವೆ. ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹೊರ ನೀಡುತ್ತಿರುವ ಕಾರಣ ಎಲ್ಲೆಡೆ ಜಲಪ್ರವಾಹ ಉಂಟಾಗಿದೆ. ಕೇರಳ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಮೇಲೆ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ಕಳೆದ ಮೂರು ದಿನಗಳಿಂದ ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಹೆದ್ದಾರಿ ಸಂಪರ್ಕ ಕಡಿತದಿಂದ ವಾಹನ ಸವಾರರ ಪರದಾಡುತ್ತಿದ್ದಾರೆ.

    ಹೊಳೆ ದಾಟುವಾಗ ಆಕಸ್ಮಿಕವಾಗಿ ವೃದ್ಧ ನೀರಲ್ಲಿ ಕೊಚ್ಚಿಕೊಂಡು ಹೋಗಿರುವಂತ ಘಟನೆ ಮಂಗಳೂರಿನ ಬೆಳ್ತಂಗಡಿ ತಾಲೂಕಿನ ಮರೋಡಿಯಲ್ಲಿ ನಡೆದಿದೆ. ಬೊಮ್ಮಯ್ಯ ದಾಸ್ ನೀರಲ್ಲಿ ವೃದ್ಧ ಕೊಚ್ಚಿಹೋಗಿದ್ದು, ವೃದ್ಧನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮೂರು ವರ್ಷದ ಬಳಿಕ ಕರ್ನಾಟಕದ ನಯಾಗರ ಫಾಲ್ಸ್‌ನಲ್ಲಿ ಜಲಪಾತೋತ್ಸವ

    ಮೂರು ವರ್ಷದ ಬಳಿಕ ಕರ್ನಾಟಕದ ನಯಾಗರ ಫಾಲ್ಸ್‌ನಲ್ಲಿ ಜಲಪಾತೋತ್ಸವ

    ಚಾಮರಾಜನಗರ: ಕರ್ನಾಟಕದ ನಯಾಗರ ಫಾಲ್ಸ್ ಎಂದೇ ಹೆಸರು ವಾಸಿಯಾಗಿರುವ ಕೊಳ್ಳೆಗಾಲ ತಾಲೂಕಿನ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಹಿನ್ನೆಲೆಯಲ್ಲಿ  ಮೂರು ವರ್ಷದ ಬಳಿಕ ಜಲಪಾತೋತ್ಸವ ನಡೆಸಲು ಸರ್ಕಾರ ಮುಂದಾಗಿದೆ.

    ಇಂದು ಗಗನಚುಕ್ಕಿ-ಭರಚುಕ್ಕಿ ಜಲಪಾತಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಜಲಪಾತೋತ್ಸವದ ದಿನಾಂಕವನ್ನು ನಿಗದಿ ಮಾಡಿದ್ದಾರೆ.

    ಆಗಸ್ಟ್ ತಿಂಗಳ 18 ಮತ್ತು 19 ರಂದು ಜಲಪಾತೋತ್ಸವ ನಡೆಯಲಿದೆ. ಜಲಪಾತದಲ್ಲಿ ನೀರಿಲ್ಲದ ಕಾರಣ ಮೂರು ವರ್ಷಗಳ ಕಾಲ ಜಲಪಾತೋತ್ಸವ ನಿಂತು ಹೋಗಿತ್ತು. ಆದರೆ ಈ ಬಾರಿ ಕಾವೇರಿ ಮತ್ತು ಕಬಿನಿ ನದಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಜಲಪಾತಗಳಲ್ಲಿ ಭೋರ್ಗರೆದು ನೀರು ಧುಮುಕುತ್ತಿದೆ. ಹೀಗಾಗಿ ಪ್ರವಾಸಿಗರು ಹಾಗೂ ಸ್ಥಳೀಯರು ಈ ಬಾರಿ ಜಲಪಾತೋತ್ಸವ ನಡೆಸಬೇಕೆಂದು ಒತ್ತಾಯ ಮಾಡಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಸಾ.ರಾ. ಮಹೇಶ್ ತಿಳಿಸಿದರು. ಇದನ್ನೂ ಓದಿ: ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್

    ಈ ಹಿಂದಿನ ಜಲಪಾತೋತ್ಸವದ ವೇಳೆ ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಬಾಯಲ್ಲಿ ನೀರೂರಿಸುವ ಖಾದ್ಯಗಳು ಸ್ಥಳದಲ್ಲೇ ತಯಾರಾಗುತ್ತಿದ್ದವು. ಪ್ರವಾಸಿಗರು ಅದನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದರು. ಇನ್ನೂ ಸ್ಟಾರ್ ನಟರು ಹಾಗೂ ಕಲಾವಿದರನ್ನು ಆಹ್ವಾನಿಸಿ ಪ್ರತಿ ನಿತ್ಯ ರಾತ್ರಿ ಅದ್ಧೂರಿ ಕಾರ್ಯಕ್ರಮಗಳು ನಡೆಯುತಿತ್ತು.

    ಪ್ರವಾಸಿಗರು ಸಂಗೀತಕ್ಕೆ ಹುಚ್ಚೆದ್ದು ಕುಣಿಯುತ್ತಿದ್ದರು. ಭರಚುಕ್ಕಿ ಜಲಪಾತೋತ್ಸವ ಪ್ರವಾಸಿಗರಿಗೆ ಅಕ್ಷರಶಃ ಸ್ವರ್ಗವೇ ಆಗಿತ್ತು. ಸತತ ಮೂರು ವರ್ಷಗಳ ಕಾಲ ಯಶಸ್ವಿಯಾಗಿ ನಡೆದಿದ್ದ ಕಾರ್ಯಕ್ರಮವನ್ನು ಈ ವರ್ಷವೂ ಆಯೋಜಿಸಿ ಎಂದು ಪ್ರವಾಸಿಗರು ಹಾಗೂ ಜನ ಕಳೆದ ವರ್ಷ ಬೇಡಿಕೆ ಇಟ್ಟಿದ್ದರು. ಆದರೆ ಸರ್ಕಾರ ಜಲಪಾತೋತ್ಸವನ್ನು ಆಯೋಜಿಸಿರಲಿಲ್ಲ.

  • 50-60 ಅಡಿ ಎತ್ತರದಿಂದ ಹಾಲ್ನೊರೆಯಂತೆ ಬೀಳುತ್ತಿರುವ ಹೆಬ್ಬೆ ಫಾಲ್ಸ್

    50-60 ಅಡಿ ಎತ್ತರದಿಂದ ಹಾಲ್ನೊರೆಯಂತೆ ಬೀಳುತ್ತಿರುವ ಹೆಬ್ಬೆ ಫಾಲ್ಸ್

    ಚಿಕ್ಕಮಗಳೂರು: ಕಳೆದೊಂದು ತಿಂಗಳಿಂದ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿದ್ದ ಮಳೆ, ಇದೀಗ ಬಯಲುಸೀಮೆ ಭಾಗವಾದ ಕಡೂರು-ತರೀಕೆರೆಗೂ ಕಾಲಿಟ್ಟಿದೆ.

    ಕಳೆದ ಮೂರು ದಿನಗಳಿಂದ ತರೀಕೆರೆ ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆ ಜಲಪಾತದ ಸೊಬಗನ್ನ ನೋಡಲು ಎರಡು ಕಣ್ಣು ಸಾಲದಂತಾಗಿದೆ. ಧುಮ್ಮಿಕ್ಕುತ್ತಿರುವ ಜಲಧಾರೆಯನ್ನ ವರ್ಣಿಸಲು ಪದಗಳೇ ಇಲ್ಲವಾಗಿದೆ.

    ತರೀಕೆರೆಯ ಕೆಮ್ಮಣ್ಣುಗುಂಡಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಲ್ಲತ್ತಿಗರಿ ಹಾಗೂ ಕೆಮ್ಮಣ್ಣುಗುಂಡಿಯಲ್ಲಿ ಜಲವೈಭವವೇ ಮನೆಮಾಡಿದೆ. ಸುಮಾರು 50-60 ಅಡಿ ಎತ್ತರದಿಂದ ಹಾಲ್ನೊರೆಯಂತೆ ಬೀಳುತ್ತಿರುವ ಹೆಬ್ಬೆ ಫಾಲ್ಸ್‍ನ ನೋಡಲು ಪ್ರವಾಸಿಗರು ಮುಗಿ ಬಿದ್ದಿದ್ದಾರೆ. ಸುತ್ತಲೂ ಕಾಫಿ ತೋಟ ಹಾಗೂ ದಟ್ಟ ಕಾನನ. ಅದರ ಮಧ್ಯೆ ಹಕ್ಕಿಗಳ ಚಿಲಿಪಿಲಿ ಜತೆ ಧುಮ್ಮುಕುತ್ತಿರುವ ಜಲಧಾರೆ  ಪ್ರವಾಸಿಗರಿಗೆ ಹಾಟ್ ಸ್ಪಾಟ್ ಆಗಿದೆ.

  • ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್

    ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್

    ಚಾಮರಾಜನಗರ: ಕಬಿನಿ ಜಲಾಶಯದಿಂದ 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಟ್ಟಿರುವ ಪರಿಣಾಮ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಗಗನಚುಕ್ಕಿ-ಭರಚುಕ್ಕಿ ಹಾಗೂ ಹೊಗೆನಕಲ್ ಜಲಪಾತಗಳು ಮೈದುಂಬಿ ಭೋರ್ಗರೆಯುತ್ತಿವೆ.

    ಎರಡು ದಿನಗಳಿಂದ ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ನಯಾಗರ ಫಾಲ್ಸ್ ಎಂದೇ ಹೆಸರುವಾಸಿಯಾಗಿರುವ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು ತಮ್ಮ ಸೌಂದರ್ಯವನ್ನು ಮತ್ತಷ್ಟು ಎಚ್ಚಿಸಿಕೊಂಡಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

    ಗಗನಚುಕ್ಕಿಯಲ್ಲಂತೂ ನೀರು ಆಕಾಶದೆತ್ತರದಿಂದ ಬೀಳುವಂತೆ ಬಾಸವಾಗುತ್ತಿದೆ. ಇನ್ನೂ ಹೊಗೆನಕಲ್ ಫಾಲ್ಸ್ ಕೂಡ ಇದಕ್ಕೆ ಕಡಿಮೆ ಇಲ್ಲದಂತೆ ಧುಮ್ಮುಕ್ಕಿ ಹರಿಯುತ್ತಿದೆ. ಎತ್ತ ನೋಡಿದರೂ ನೀರು ತುಂಬಿಕೊಂಡಿದೆ. ಈ ರಮಣೀಯ ದೃಶ್ಯವನ್ನು ನೋಡಲು ಪ್ರವಾಸಿಗರ ದಂಡೆ ಈ ಜಲಪಾತಗಳ ಕಡೆ ಹರಿದು ಬರುತ್ತಿದೆ.

    ಮೈದುಂಬಿ ಹರಿಯುತ್ತಿರುವ ಕಾವೇರಿ ಮತ್ತು ಕಪಿಲಾ ನದಿಗಳಿಂದಾಗಿ ಅಕ್ಕ-ಪಕ್ಕದ ಗ್ರಾಮಗಳು ಪ್ರವಾಹದ ಭೀತಿಯಲ್ಲಿವೆ.

  • ನೂರಾರು ಅಡಿ ಎತ್ತರದಿಂದ ಬಳುಕೋ ಬಳ್ಳಿಯಂತೆ ಶ್ವೇತವರ್ಣೆಯಾಗಿ ಧುಮುಕುತ್ತಿದೆ ಜಲಕನ್ಯೆ ಮಲ್ಲಳ್ಳಿ ಜಲಪಾತ!

    ನೂರಾರು ಅಡಿ ಎತ್ತರದಿಂದ ಬಳುಕೋ ಬಳ್ಳಿಯಂತೆ ಶ್ವೇತವರ್ಣೆಯಾಗಿ ಧುಮುಕುತ್ತಿದೆ ಜಲಕನ್ಯೆ ಮಲ್ಲಳ್ಳಿ ಜಲಪಾತ!

    ಮಡಿಕೇರಿ: ಕೊಡಗಿನಲ್ಲಿ ಮಳೆಗಾಲ ಶುರುವಾದರೆ ಗಿರಿಕಾನನದ ನಡುವಿನಿಂದ ದುಮ್ಮಿಕ್ಕೋ ಜಲಧಾರೆಗಳ ವಯ್ಯಾರ ನೋಡೋಕೆ ಎರಡು ಕಣ್ಣು ಸಾಲಲ್ಲ. ಕೊಡಗಿನ ಅತಿ ಸುಂದರ ಜಲಕನ್ಯೆ ಮಲ್ಲಳ್ಳಿ ಜಲಪಾತ ಮೊದಲ ಮಳೆಗೆ ತುಂಬಿ ಹರಿಯುತ್ತಿದ್ದು ನಯನ ಮನೋಹರವಾಗಿ ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ.

    ಸುತ್ತಲೂ ಮುಗಿಲು ಚುಂಬಿಸೋ ಗಿರಿಶಿಖರಗಳು, ಹಚ್ಚ ಹಸಿರಿನಿಂದ ಕಂಗೊಳಿಸೋ ಪುಷ್ಪಗಿರಿ ಮೀಸಲು ಅರಣ್ಯದ ನಡುವೆ ನೂರಾರು ಅಡಿ ಎತ್ತರದಿಂದ ಬಳುಕೋ ಬಳ್ಳಿಯಂತೆ ಶ್ವೇತವರ್ಣೆಯಾಗಿ ಧುಮುಕುವ ಜಲರಾಶಿ. ಅಪರೂಪದ ಜಲರಾಶಿಯನ್ನು ಕಣ್ತುಂಬಿಕೊಳ್ಳುತ್ತಿರೋ ಪ್ರವಾಸಿಗರು ಇದು ಕೊಡಗಿನ ಅತಿಸುಂದರ ಜಲಕನ್ಯೆ ಮಲ್ಲಳ್ಳಿ ಜಲಪಾತದ ವಯ್ಯಾರ.

    ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿಯ ಈ ಜಲಪಾತ ನೋಡಲು ಸುಂದರ ಅತಿಸುಂದರ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವರ್ಷಧಾರೆಗೆ ಮೈದುಂಬಿ ಹರಿಯುತ್ತಿರೋ ಜಲರಾಶಿ ನೋಡುಗರ ಕಣ್ಣು ಕೊರೈಸುತ್ತಿದೆ. ಮುಗಿಲೆತ್ತರದಿಂದ ಹಾಳ್ನೊರೆಯಂತೆ ಇಳಿಯೋ ಜಲಪಾತದ ಸೌಂದರ್ಯ ಬಣ್ಣಿ ಸಲಸದಳ, ಹಸಿರ ನಡುವಿನಿಂದ ಬೋರ್ಗರೆಯುತ್ತಾ ಕರಿಕಲ್ಲುಗಳನ್ನು ಸೀಳಿಕೊಂಡು ರುದ್ರರಮಣೀಯ ಜಲಪಾತವನ್ನು ನೋಡೋದೆ ಅಂದ.

    ಅಕ್ಷರಶಃ ಸ್ವರ್ಗಕ್ಕೆ ಕಿಚ್ಚು ಹಚ್ಚುಂತಿರೋ ಇಲ್ಲಿನ ನಿಸರ್ಗದ ಸೌಂದರ್ಯ. ಇದರ ನಡುವೆ ಪ್ರಪಾತದಲ್ಲಿ ಕಾಣೋ ಜಲರಾಶಿ ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತದೆ. ಪುಷ್ಪಗಿರಿಯ ತಪ್ಪಲಿನಿಂದ ಹುಟ್ಟಿಬರೋ ಕುಮಾರಧಾರಾ ನದಿ ಸೃಷ್ಟಿಸಿರೋ ಈ ಅಪರೂಪದ ಜಲಧಾರೆಯ ಬಳುಕು ಬಿನ್ನಾಣ, ವಯ್ಯಾರದಿಂದ ಸಂಗೀತ ಲೋಕ ಸೃಷ್ಟಿಸಿ ಹರಿಯೋ ನೀರ ಝರಿ ದಣಿದ ಮನಕ್ಕೆ ನೆಮ್ಮದಿ ನೀಡುತ್ತೆ. ನೋಡಿದಷ್ಟು ಮತ್ತೆ ಮತ್ತೆ ನೋಡಬೇಕೆನಿಸೋ ಜಲಪಾತದ ಸೊಬಗು ನಯನ ಮನೋಹರವಾಗಿದೆ.

    ಈ ಜಲಪಾತದ ಸೌಂದರ್ಯವನ್ನು ಹತ್ತಿರದಿಂದ ಸವಿಯ ಬೇಕಾದರೆ ನೂರಾರು ಮೆಟ್ಟಿಲುಗಳನ್ನಿಳಿದು ಕೆಲವೇ ಕಿಲೋಮೀಟರ್ ಗಟ್ಟಲೆ ಬೆಟ್ಟವನ್ನಿಳಿಯಬೇಕು. ಇಷ್ಟು ಕಷ್ಟಪಟ್ಟು ಕೆಳಗಿಳಿದರೆ ಸ್ವರ್ಗವೇ ಕಣ್ಣೆದುರಿಗೆ ಬಂದ ಅನುಭವವಾಗುತ್ತೆ. ದುರಂತ ಅಂದ್ರೆ ಇಲ್ಲಿಗೆ ಬರುವ ಪ್ರವಾಸಿಗರು ಸೇಲ್ಫಿ ಕ್ರೇಜ್‍ನಿಂದ ಫೋಟೋ ತೆಗೆಯಲು ಹೋಗಿ ಸುಮಾರು 14 ಮಂದಿ ಈ ಜಲಪಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

    ಒಟ್ಟಿನಲ್ಲಿ ಮಳೆಗಾಲದಲ್ಲಿ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡು ಪ್ರಕೃತಿ ಪ್ರಿಯರ ಮನತಣಿಸೋ ನಿಸರ್ಗದ ಸೊಬಗು ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಮಾಮೂಲಿಯಂತೆ ಅಬ್ಬಿ ಜಲಪಾತ ನೋಡಿ ಹರ್ಷಗೊಳ್ಳೊ ಮನಕ್ಕೆ ಒಮ್ಮೆ ರುದ್ರರಮಣೀಯ ಮಲ್ಲಳ್ಳಿ ಜಲಪಾತದ ದರ್ಶನವಾದರೆ ನಿಜಕ್ಕೂ ಸಂತಸ ಉಕ್ಕಿಬರೋದಂತು ಸುಳ್ಳಲ್ಲ.

  • ಫೋಟೋ ಶೂಟ್‍ಗೆ ತೆರಳಿದ್ದ ನಿರ್ದೇಶಕ ಫಾಲ್ಸ್ ನಲ್ಲಿ ಮುಳುಗಿ ಸಾವು

    ಫೋಟೋ ಶೂಟ್‍ಗೆ ತೆರಳಿದ್ದ ನಿರ್ದೇಶಕ ಫಾಲ್ಸ್ ನಲ್ಲಿ ಮುಳುಗಿ ಸಾವು

    ಮಂಗಳೂರು: ಫೋಟೋ ಶೂಟ್‍ಗಾಗಿ ತೆರಳಿದ್ದ ನಿರ್ದೇಶಕ ಫಾಲ್ಸ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದೆ.

    ಸಂತೋಷ್ ಶೆಟ್ಟಿ ಸಾವನ್ನಪ್ಪಿದ ನಿರ್ದೇಶಕ. ಸಂತೋಷ್ ಸೇರಿದಂತೆ ಐವರು ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಫಾಲ್ಸ್ ಗೆ ಫೋಟೋ ಶೂಟ್‍ಗೆ ತೆರಳಿದ್ರು. ಈ ವೇಳೆ ಸಂತೋಷ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳಿಂದ ಮೆಕುನು ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆ ಫಾಲ್ಸ್ ನಲ್ಲಿ ನೀರಿನ ಹರಿಯುವಿಕೆ ಹೆಚ್ಚಾಗಿತ್ತು. ಫೋಟೋ ಶೂಟ್ ನಡೆಸುವಾಗ ಆಯ ತಪ್ಪಿ ಸಂತೋಷ್ ನೀರಿಗೆ ಬಿದ್ದಿದ್ದಾರೆ ಎಂಬ ಮಾಹಿತಿಗಳು ಸದ್ಯಕ್ಕೆ ಲಭ್ಯವಾಗಿವೆ.

    2015ರಲ್ಲಿ ‘ಕನಸು ಕಣ್ಣು ತೆರೆದಾಗ’ ಎಂಬ ಸಿನಿಮಾವನ್ನು ಸಂತೋಷ್ ನಿರ್ದೇಶಿಸಿದ್ರು. ಗಂಧದ ಕುಡಿ ಕನ್ನಡದಲ್ಲಿ, ಚಂದನ್ ವನ್ ಹಿಂದಿಯಲ್ಲಿ ಮಕ್ಕಳ ಚಿತ್ರವನ್ನು ಸಂತೋಷ್ ನಿರ್ದೇಶಿಸುತ್ತಿದ್ರು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಸಂತೋಷ್ ಮೃತ ದೇಹಕ್ಕಾಗಿ ಶೋಧನೆ ನಡೆಸುತ್ತಿದ್ದಾರೆ.