Tag: fake website

  • ದೇವರ ಹೆಸರಲ್ಲಿ ಅರ್ಚಕರಿಂದಲೇ ಭಕ್ತರಿಗೆ ಪಂಗನಾಮ – ಕೋಟಿ ಕೋಟಿ ವಂಚನೆ

    ದೇವರ ಹೆಸರಲ್ಲಿ ಅರ್ಚಕರಿಂದಲೇ ಭಕ್ತರಿಗೆ ಪಂಗನಾಮ – ಕೋಟಿ ಕೋಟಿ ವಂಚನೆ

    ಕಲಬುರಗಿ: ದೇವರು ಎಂದರೆ ಭಯಭಕ್ತಿ ಹೆಚ್ಚು. ಆದರೆ ಇಲ್ಲಿ ಕೆಲ ವಂಚಕರು ಭಯಭಕ್ತಿ ಎಲ್ಲವನ್ನು ಬಿಟ್ಟು ದೇವರ ಹೆಸರಿನಲ್ಲಿಯೇ ಭಕ್ತರಿಗೆ ಪಂಗನಾಮ ಹಾಕಿದ್ದಾರೆ. ದೇವರ ಹೆಸರಿನಲ್ಲಿ ಭಕ್ತರಿಗೆ ವಂಚಿಸಿರುವುದು ಸ್ವತಃ ಅರ್ಚಕರು ಎನ್ನುವುದು ಇಲ್ಲಿ ಬೆಚ್ಚಿಬೀಳಿಸುವ ಸಂಗತಿ.

    ಕಲಬುರಗಿ ಜಿಲ್ಲೆ ದೇವಲಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ದೇಶದ ಮೂಲೆಮೂಲೆಗಳಲ್ಲಿ ಭಕ್ತರಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಗಾಣಗಾಪುರದ ಕೆಲ ಅರ್ಚಕರು ದೇವಸ್ಥಾನ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು, ದೇವರ ಜೊತೆಗೆ ಭಕ್ತರಿಗೆ ಪಂಗನಾಮ ಹಾಕಿದ್ದಾರೆ. ದತ್ತಾತ್ರೇಯ ದೇವಸ್ಥಾನಕ್ಕೆ ಕಲಬುರಗಿ ಡಿಸಿ ಯಶವಂತ್ ಗುರುಕರ್ ಭೇಟಿ ನೀಡಿದ್ದಾಗ ಈ ವಂಚನೆ ಪ್ರಕರಣ ಬಯಲಿಗೆ ಬಂದಿದೆ. ಇದನ್ನೂ ಓದಿ: ಮೈಸೂರು ಆಯ್ತು ಈಗ ಹೈದರಾಬಾದ್‌ ಕರ್ನಾಟಕದತ್ತ ಕಣ್ಣು – ಬಿಜೆಪಿಯಿಂದ ಟಾರ್ಗೆಟ್‌ 25 ಫಿಕ್ಸ್‌

    ದೇವಸ್ಥಾನದ ಅಧಿಕೃತ ವೆಬ್‌ಸೈಟ್ www.devalgangapur.com (Shri dattatreya temple.ghanagapur) ಎಂದಿದೆ. ಆದರೆ ಅಧಿಕೃತ ವೆಬ್‌ಸೈಟ್ ಹೊರತುಪಡಿಸಿ ಅರ್ಚಕರೇ 7-8 ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿ ಮಾಡಿದ್ದಾರೆ. ದರ್ಶನ, ವಿಶೇಷ ಪೂಜೆ, ಅರ್ಚನೆ ಸೇರಿ ದೂರದ ಊರಿನಲ್ಲಿಯೇ ಕುಳಿತು ಆನ್‌ಲೈನ್ ಬುಕ್ ಮಾಡುವ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ದೇವಸ್ಥಾನಕ್ಕೆ ಸಲ್ಲಿಸುವ ದಾನವನ್ನು ಕೂಡಾ ವಂಚಕರು ತಮ್ಮ ಖಾತೆಗಳಿಗೆ ಹಾಕಿಸಿಕೊಂಡು ಸರ್ಕಾರ ಬೊಕ್ಕಸಕ್ಕೆ ಕೋಟಿ ಕೋಟಿ ವಂಚಿಸಿದ್ದಾರೆ. ದೇವಸ್ಥಾನದ ಹುಂಡಿ ಎಣಿಕೆ ವೇಳೆಯೂ ಮೋಸ ಮಾಡಿರುವಂತೆ ಕಂಡುಬಂದಿದೆ. ಎಣಿಕೆ ವೇಳೆ ಸಿಸಿ ಕ್ಯಾಮೆರಾ ಕಣ್ಣುಗಳನ್ನು ಮುಚ್ಚಿ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ದೇವಸ್ಥಾನದ ಅಧ್ಯಕ್ಷ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರ ಸೂಚನೆ ಮೇರೆಗೆ ದೇವಲಗಾಣಗಾಪುರ ಠಾಣೆಯಲ್ಲಿ ಗಂಗಾಧರ್ ಪೂಜಾರಿ, ಶರತ್ ಭಟ್ ಪೂಜಾರಿ, ವಲ್ಲಭ ಪೂಜಾರಿ, ಅಂಕುರ ಪೂಜಾರಿ, ಪ್ರತಿಕ್ ಪೂಜಾರಿ ಸೇರಿದಂತೆ ಒಟ್ಟು 7 ವಂಚಕರ ಮೇಲೆ ದೂರು ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ವಿದ್ಯಾಪೀಠಕ್ಕೆ ಇಂದು ಚಾಲನೆ – 3 ದಿನಗಳ ಶೈಕ್ಷಣಿಕ ಮೇಳಕ್ಕೆ ಬನ್ನಿ

    ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕೇವಲ ಅರ್ಧ ಗಂಟೆಯಲ್ಲೇ ನಕಲಿ ವೆಬ್‌ಸೈಟ್‌ಗಳು ಬಂದ್ ಆಗಿದೆ. ಸುಮಾರು 3-4 ವರ್ಷಗಳಿಂದ ವಂಚನೆ ನಡೆದಿದ್ದು, ದೇವಸ್ಥಾನದಿಂದ ಮುಜರಾಯಿ ಇಲಾಖೆಗೆ ಬರಬೇಕಾದ ಕೋಟ್ಯಂತರ ರೂ. ಆದಾಯ ಖದೀಮರು ನುಂಗಿಹಾಕಿದ್ದಾರೆ. ನಷ್ಟದ ಹಣವನ್ನು ಇವರಿಂದಲೇ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ ಹೊರಡಿಸಿದ್ದಾರೆ.

    Live Tv

  • ಫ್ಲಿಪ್ ಕಾರ್ಟ್, ಅಮೇಜಾನ್, ಪೇಟಿಯಂ ಮಾಲ್ ಹೆಸರಲ್ಲಿ ಫೇಕ್ ವೆಬ್ ಸೈಟ್!

    ಫ್ಲಿಪ್ ಕಾರ್ಟ್, ಅಮೇಜಾನ್, ಪೇಟಿಯಂ ಮಾಲ್ ಹೆಸರಲ್ಲಿ ಫೇಕ್ ವೆಬ್ ಸೈಟ್!

    – ಆಫರ್ ಅಂತ ಕ್ಲಿಕ್ ಮಾಡಿದ್ರೆ ನಿಮ್ಮ ಅಕೌಂಟ್ ಆಗುತ್ತೆ ಖಾಲಿ

    ಬೆಂಗಳೂರು: ಸ್ವಲ್ಪ ಯಾಮಾರಿದ್ರೇ ಏನ್ ಆಗುತ್ತೆ ಅನ್ನೊಕೆ ಇದು ಉದಾಹರಣೆ. ರವೀಶ್ ಅನ್ನೊ ಸಾಫ್ಟ್ ವೇರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡೋ ವ್ಯಕ್ತಿ ಫೇಕ್ ವೆಬ್‍ಸೈಟ್ ಇಂದು ಮೋಸ ಹೋಗಿದ್ದಾರೆ. ಕಳೆದ ಡಿಸೆಂಬರ್ 27 ರ ನೈಟ್ ಆನ್‍ಲೈನ್ ಅಲ್ಲಿ ಬ್ರೌಸ್ ಮಾಡಿದ್ದಾರೆ.

    ಫ್ಲಿಪ್ ಕಾರ್ಟ್, ಅಮೇಜನ್ ಅಲ್ಲಿ ಬ್ರೌಸ್ ಮಾಡೋವಾಗ ಸಡನ್ ಆಗಿ ಒಂದು ನೋಟಿಫಿಕೇಷನ್ ಬಂದಿದೆ. ಅದೂ ಸಾವಿರಾರು ರೂಪಾಯಿಗಳ ಬೆಲೆಯ ವಸ್ತುಗಳನ್ನ ಎರಡು ಮೂರು ಸಾವಿರಕ್ಕೆ ಆಫರ್ ಅಂತ ಬಂದಿದೆ. ಇದೇನೋ ಫೆಸ್ಟಿವಲ್ ಅಥವಾ ನ್ಯೂ ಇಯರ್ ಸೇಲ್ ಅಂತ ಸುಮಾರು 21 ಸಾವಿರ ಬೆಲೆಯ ವಸ್ತುಗಳನ್ನ ಓಕೆ ಮಾಡಿದ್ದಾರೆ. ಯಾವಾಗ ಕ್ಲಿಕ್ ಮಾಡಿದ್ರೋ ಇವರ ಅಕೌಂಟಿನಲ್ಲಿದ್ದ ಹಣ ಗಾಯಾಬ್ ಆಗಿದೆ.

    20 ಸಾವಿರ ಬೆಲೆಯ ವಸ್ತು 3-4 ಸಾವಿರಕ್ಕೆ, ಅದೂ 5 ನಿಮಿಷದ ಆಫರ್ ಅಂದಾಗ ನಾನು ಯಾಮಾರಿದೆ. ಸಾಫ್ಟ್‍ವೇರ್ ಕನ್ಸಲ್ಟೆಂಟ್ ಆದ ನಾನು ಈ ರೀತಿ ಮೋಸಕ್ಕೆ ಒಳಗಾಗಿದ್ದೇನೆ. ಆನ್‍ಲೈನ್ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿರುವ ನಾನೇ ಈ ರೀತಿ ಮೋಸ ಹೋಗಿದ್ದೇನೆ. ಸಾಮಾನ್ಯ ಜನ ಇನ್ನೆಷ್ಟು ಮೋಸ ಹೋಗಬಹುದು ಎಂದು ಸೈಬರ್ ಕ್ರೈಮ್ ಗೆ ಕಂಪ್ಲೆಂಟ್ ಕೊಟ್ಟಿದ್ದಾರೆ.

    ಉತ್ತರ ಭಾರತದಿಂದ ಈ ರೀತಿ ಅಮೇಜಾನ್, ಫ್ಲೀಪ್ ಕಾರ್ಟ್ ಅನ್ನೊ ಫೇಕ್ ವೆಬ್ ಸೈಟ್ ಗಳ ಮೂಲಕ ಇವರ ಹಣವನ್ನ ಲಪಟಾಯಿಸಿದ್ದಾರೆ. ನನಗಾದ ಪರಿಸ್ಥಿತಿಯಂತೆ ಯಾರೂ ಹಣ ಕಳೆದುಕೊಳ್ಳಬೇಡಿ ಅಂತ ಪಬ್ಲಿಕ್ ಟಿವಿ ಜೊತೆಗೆ ಮೋಸ ಆಗಿದ್ದನ್ನು ಹೇಳಿಕೊಂಡಿದ್ದಾರೆ.

    ಇತ್ತೀಚೆಗೆ ಈ ರೀತಿಯ ಮೋಸದ ಪ್ರಕರಣಗಳು ಹೆಚ್ಚಾಗುತ್ತಲಿವೆ. ಇದನ್ನು ಸೈಬರ್ ಕ್ರೈಮ್ ಪೊಲೀಸರು ಬೇಧಿಸಿ ಆನ್‍ಲೈನ್ ಕಳ್ಳರ ವಿರುದ್ಧ ಕ್ರಮ ಜರುಗಿಸದ ಹೊರತು ಹೊಸ ಹೊಸ ದಾರಿಗಳನ್ನು ಹುಡುಕಿ ಅಮಾಯಕರ ಹಣವನ್ನು ಲಪಟಾಯಿಸುತ್ತಾರೆ. ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

  • ನಕಲಿ ವೆಬ್‍ಸೈಟ್ ಸೃಷ್ಟಿಸಿ ಕೊಲ್ಲೂರಮ್ಮನ ಹುಂಡಿಗೆ ಕನ್ನ

    ನಕಲಿ ವೆಬ್‍ಸೈಟ್ ಸೃಷ್ಟಿಸಿ ಕೊಲ್ಲೂರಮ್ಮನ ಹುಂಡಿಗೆ ಕನ್ನ

    – ಪ್ರಸಾದ ಕಳುಹಿಸಿ ಭಕ್ತರಿಂದ ಲಕ್ಷಗಟ್ಟಲೇ ಕಾಸು ಲೂಟಿ
    – ದೇವಸ್ಥಾನದ ಅರ್ಚಕರ ಖಾಸಗಿ ಖಾತೆಗೆ ದುಡ್ಡು ಜಮೆ

    ಉಡುಪಿ: ನಕಲಿ ವೆಬ್‍ಸೈಟ್ ಸೃಷ್ಟಿಸಿ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ಹುಂಡಿಗೆ ಕನ್ನ ಹಾಕಿ, ಖದೀಮರು ಭಕ್ತರ ಹಣ ದೋಚಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.

    ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಮತ್ತೊಂದು ದೋಖಾ ಪ್ರಕರಣ ಬಯಲಾಗಿದೆ. ದೂರದ ಊರಿನಿಂದ ದೇವಿಗೆ ಬಂದು ಸೇವೆ ಕೊಡಲು ಸಾಧ್ಯವಾಗದ ನೂರಾರು ಭಕ್ತರು ದೇವಸ್ಥಾನದ ಅಧಿಕೃತ ವೆಬ್‍ಸೈಟ್ ಮೂಲಕ ಸೇವೆಗೆ ದೇಣಿಗೆ ಕೊಡುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ದೇವಸ್ಥಾನ ವೆಬ್‍ಸೈಟ್ ನಕಲಿ ಮಾಡಿ, ಭಕ್ತರ ಹಣ ದೋಚಿದ್ದಾರೆ. ಹೆಸರಿಗೊಂದು ಪೂಜೆ ಮಾಡಿಸಿ ಪ್ರಸಾದ ಕಳುಹಿಸಿ ಲಕ್ಷಗಟ್ಟಲೆ ಕಾಸು ಜೇಬಿಗಿಳಿಸಿ ಕೈತೊಳೆದುಕೊಂಡಿದ್ದಾರೆ.

    ಥೇಟ್ ಕೊಲೂರು ದೇವಸ್ಥಾನದ ವೆಬ್‍ಸೈಟ್ ನಕಲಿ ಮಾಡಿ, ಆಪ್ಶನ್ಸ್, ಫೋಟೋಗಳು, ಸೇವಾ ವಿವರಗಳೆಲ್ಲಾ ಒಂದೇ ರೀತಿ ಇರುವ ಹಾಗೆ ಖದೀಮರು ನಕಲಿ ವೆಬ್‍ಸೈಟ್ ರೂಪಿಸಿದ್ದಾರೆ. ಇದನ್ನು ನಂಬಿ ಭಕ್ತರು ದೇವರ ಸೇವೆಗೆ ಈ ವೆಬ್‍ಸೈಟ್‍ನಲ್ಲಿ ಪೂಜೆ ಬುಕ್ ಮಾಡುತ್ತಿದ್ದರು. ಆದರೆ ಹಣ ಮಾತ್ರ ಆನ್‍ಲೈನ್ ಮೂಲಕ ದೇವಸ್ಥಾನದ ಅಕೌಂಟಿಗೆ ಹೋಗದೇ ದೇವಸ್ಥಾನದ ಅರ್ಚಕರೊಬ್ಬರ ಖಾಸಗಿ ಖಾತೆಗೆ ಹೋಗಿ ಬೀಳುತ್ತಿತ್ತು.

    ಈ ವಿಚಾರ ದೇವಸ್ಥಾನದ ಹೊಸ ಇಒ ಗಮನಕ್ಕೆ ಬಂದಿದ್ದು, ಇಒ ಸೆನ್(ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಅಪರಾಧ ಠಾಣೆ) ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತನಿಖೆ ಶುರು ಮಾಡಿದಾಗ ದೇವಸ್ಥಾನದಲ್ಲೇ ಅರ್ಚಕ ವೃತ್ತಿ ಮಾಡುತ್ತಿರುವವರೇ ನಕಲಿ ವೆಬ್‍ಸೈಟ್‍ನ ಅಡ್ಮಿನ್ ಅನ್ನೋದು ಪೊಲೀಸರಿಗೆ ಗೊತ್ತಾಗಿದ್ದು, ತನಿಖೆ ಪೂರ್ಣಗೊಂಡ ಕೂಡಲೇ ದೇವರ ಹಣ ದೋಚಿದ ಕಳ್ಳ ಸಿಕ್ಕಿಹಾಕಿಕೊಳ್ಳುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

      ಕೊಲ್ಲೂರು ದೇವಸ್ಥಾನದ ಅಧಿಕೃತ ವೆಬ್‍ಸೈಟ್

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು, ಆನ್‍ಲೈನ್ ವ್ಯವಹಾರ ಮಾಡುವ ಮಂದಿ ‘ಹೂ ಇಸ್ ಇಟ್’ ಅನ್ನೋ ವೆಬ್‍ಸೈಟ್ ಬಳಸಿ ಅದರಲ್ಲಿ ಯಾವುದು ಅಧಿಕೃತ ಯಾವುದು ಅನಧಿಕೃತ ವೆಬ್‍ಸೈಟ್ ಎಂಬ ಬಗ್ಗೆ ಪಿನ್ ಟು ಪಿನ್ ಡೀಟೇಲ್ಸ್ ಇರುತ್ತದೆ. ಆನ್ ಲೈನ್ ಟ್ರಾನ್ಸಾಕ್ಷನ್ ಮಾಡುವವರು ಸರಿಯಾಗಿ ಪರಿಶೀಲಿಸಿ ದೇವಸ್ಥಾನದ ಆಗುಹೋಗುಗಳ ಬಗ್ಗೆ ಎಲ್ಲಾ ಮಾಹಿತಿ ಇರುವವರೇ ಇದರ ಹಿಂದೆ ಇದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸಂಪೂರ್ಣ ತನಿಖೆಯಾದ ಬಳಿಕ ಅಕ್ರಮ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

    ಮೂರು ವರ್ಷದ ಹಿಂದೆ ಕೊಲ್ಲೂರಮ್ಮನಿಗೆ ಬಂದ ಚಿನ್ನ, ಬೆಳ್ಳಿಯ ಆಭರಣಗಳನ್ನು ದೇವಸ್ಥಾನದ ಸಿಬ್ಬಂದಿ ಅಡವಿಟ್ಟು, ಮಾರಾಟ ಮಾಡಿ ಸಿಕ್ಕಿಬಿದ್ದಿದ್ದರು. ದೇವರು ಮತ್ತು ಭಕ್ತರ ನಡುವೆ ಕೊಂಡಿಯಾಗಬೇಕಾದ ಅರ್ಚಕರು, ಸಿಬ್ಬಂದಿ ಭಗವಂತನ ಕಾಸು ದೋಚುತ್ತಿರುವುದು ವಿಪರ್ಯಾಸ.

    ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ರಾಜ್ಯದ ಎರಡನೇ ಅತೀ ಹೆಚ್ಚು ವರಮಾನವಿರುವ ದೇವಸ್ಥಾನ ಎಷ್ಟು ವರ್ಷದಿಂದ ಕೊಳ್ಳೆಯಾಗುತ್ತಿದೆ ಅಂತ ತನಿಖೆ ಮಾಡಿಸಬೇಕಿದೆ.

  • ಬೆಂಗಳೂರು ಐಟಿ ಉದ್ಯಮಿಯ ಮೊಬೈಲ್ ನಂಬರ್‍ನಲ್ಲಿ ಆಯೋಧ್ಯೆ ಫೇಕ್ ವೆಬ್‍ಸೈಟ್ ಓಪನ್!

    ಬೆಂಗಳೂರು ಐಟಿ ಉದ್ಯಮಿಯ ಮೊಬೈಲ್ ನಂಬರ್‍ನಲ್ಲಿ ಆಯೋಧ್ಯೆ ಫೇಕ್ ವೆಬ್‍ಸೈಟ್ ಓಪನ್!

    ಲಕ್ನೋ: “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕಾ? ಮಸೀದಿ ನಿರ್ಮಾಣವಾಗಬೇಕಾ? ನಿಮ್ಮ ಅಭಿಪ್ರಾಯ ಏನು? www.ayodhya-issue.gov-up.in ವೆಬ್‍ಸೈಟ್‍ನಲ್ಲಿ ನೀವು ಅಭಿಪ್ರಾಯವನ್ನು ತಿಳಿಸಿ ಉತ್ತರಪ್ರದೇಶ ಸರ್ಕಾರಕ್ಕೆ ಸಹಕಾರ ನೀಡಿ” ಎನ್ನುವ ಸಂದೇಶ ನಿಮ್ಮ ವಾಟ್ಸಪ್‍ಗೆ ಬಂದಿದೆಯೇ?

    ಈ ರೀತಿಯ ಮೆಸೇಜ್ ನಿಮ್ಮ ವಾಟ್ಸಪ್‍ಗೆ ಬಂದಿದ್ದರೆ ದಯವಿಟ್ಟು ವೆಬ್‍ಸೈಟ್‍ಗೆ ಹೋಗಿ ನೀವು ಅಭಿಪ್ರಾಯವನ್ನು ದಾಖಲಿಸಬೇಡಿ. ಆಯೋಧ್ಯೆ ರಾಮಮಂದಿರ, ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಜನರಿಂದ ಅಭಿಪ್ರಾಯವನ್ನು ಸ್ವೀಕರಿಸಲು ಉತ್ತರಪ್ರದೇಶ ಸರ್ಕಾರ ಯಾವುದೇ ವೆಬ್‍ಸೈಟ್ ಆರಂಭಿಸಿಲ್ಲ. ಯಾರೋ ವ್ಯಕ್ತಿಗಳು ಈ ವೆಬ್‍ಸೈಟನ್ನು ಆರಂಭಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಆರಂಭಿಸಿದವರು ಯಾರು?
    ಈ ವೆಬ್‍ಸೈಟ್ ಯುಆರ್‍ಎಲ್ ಆಧಾರಿಸಿ ಪತ್ತೆ ಮಾಡಿದಾಗ ಈ ವೆಬ್‍ಸೈಟ್ ದೆಹಲಿಯ ತರುಣ್ ಚೌಧರಿಯ ಹೆಸರಿನಲ್ಲಿ ನೋಂದಣಿ ಆಗಿರುವುದು ಬೆಳಕಿಗೆ ಬಂದಿದೆ. ಆದರೆ ಈ ವೆಬ್‍ಸೈಟನ್ನು ಬೆಂಗಳೂರು ಮೂಲದ ಐಟಿ ಉದ್ಯಮಿಯವರ ಮೊಬೈಲ್ ನಂಬರ್ ನೀಡಿ ನೋಂದಣಿ ಮಾಡಲಾಗಿದೆ.

    ಉದ್ಯಮಿ ಅಕ್ತರ್ ಅಲಿಯವರ ಮೊಬೈಲ್ ನಂಬರನ್ನು ನೀಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರೋ ದುಷ್ಕರ್ಮಿಗಳು ನನ್ನ ನಂಬರನ್ನು ಬಳಸಿ ಈ ವೆಬ್‍ಸೈಟನ್ನು ತೆರೆದಿದ್ದಾರೆ. ಈ ವಿಚಾರ ನನಗೆ ಈಗಷ್ಟೇ ತಿಳಿದಿದೆ. ಪೊಲೀಸರಿಗೆ ಈ ವಿಚಾರವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.

    ವೆಬ್‍ಸೈಟ್ ಬೆಳಕಿಗೆ ಬಂದಿದ್ದು ಯಾವಾಗ?
    ಭೂ ವಿವಾದವನ್ನು ಎರಡು ಪಾರ್ಟಿಗಳು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದ ಬಳಿಕ ಈ ವೆಬ್‍ಸೈಟ್ ಕುರಿತಾಗಿರುವ ಮೆಸೇಜ್ ವಾಟ್ಸಪ್ ನಲ್ಲಿ ಹರಿದಾಡಲು ಆರಂಭವಾಗಿತ್ತು.

    ವೆಬ್‍ಸೈಟಿನಲ್ಲಿದ್ದ ನಾಲ್ಕು ಪ್ರಶ್ನೆಗಳು
    ಅಯೋಧ್ಯೆಯಲ್ಲಿ ರಾಮಮಂದಿರವನ್ನೇ ನಿರ್ಮಿಸಿ, ಮಸೀದಿಯನ್ನು ಬೇರೆಡೆ ನಿರ್ಮಿಸಬೇಕು, ಎರಡನೇಯದು ರಾಮಮಂದಿರ ಮತ್ತು ಮಸೀದಿಯನ್ನು ಹತ್ತಿರದಲ್ಲೇ ನಿರ್ಮಿಸಬೇಕು, ಮೂರನೆಯದಾಗಿ ಮೂಲಸ್ಥಾನದಲ್ಲಿ ಬಾಬ್ರಿ ಮಸೀದಿ ನಿರ್ಮಿಸಿ, ಪಕ್ಕದಲ್ಲಿ ರಾಮಮಂದಿರ ನಿರ್ಮಿಸಬೇಕು. ನಾಲ್ಕನೆಯದಾಗಿ ಜನರ ಭಾವನೆಗಳನ್ನು ಆಧರಿಸಿ ಕಾನೂನು ಪ್ರಕಾರವಾಗಿ ಸುಪ್ರೀಂಕೋರ್ಟ್ ವಿವಾದ ಇತ್ಯರ್ಥಗೊಳಿಸಬೇಕು ಎನ್ನುವ ಪ್ರಶ್ನೆಯನ್ನು ಕೇಳಿ ಪೋಲ್ ಆಯ್ಕೆಯನ್ನು ನೀಡಲಾಗಿತ್ತು.

    ಜನ ನಂಬಿದ್ದು ಯಾಕೆ?
    ಈ ವೆಬ್‍ಸೈಟ್‍ನಲ್ಲಿರುವ ಮಾಹಿತಿಯ ಜೊತೆಗೆ ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೋವನ್ನು ಅಪ್ಲೋಡ್ ಮಾಡಲಾಗಿತ್ತು. ಹೀಗಾಗಿ ಉತ್ತರ ಪ್ರದೇಶ ಸರ್ಕಾರವೇ ಈ ವೆಬ್‍ಸೈಟನ್ನು ಆರಂಭಿಸಿದೆ ಎಂದು ಜನ ನಂಬಿದ್ದರು.

    ಇದು ಸರ್ಕಾರಿ ವೆಬ್‍ಸೈಟ್ ಎಂದು ತಿಳಿಯುವುದು ಹೇಗೆ?
    ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಬಹುತೇಕ ವೆಬ್‍ಸೈಟ್‍ಗಳನ್ನು ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್(ಎನ್‍ಐಸಿ) ಸಿದ್ಧಪಡಿಸುತ್ತದೆ. ಎನ್‍ಐಸಿ ಸಿದ್ಧಪಡಿಸಿ ವೆಬ್‍ಸೈಟ್‍ಗಳ ಯೂನಿಫಾರ್ಮ್ ರಿಸೋರ್ಸ್ ಲೋಕೆಟರ್(ಯುಆರ್‍ಎಲ್)ಗಳು www.pib.nic.in, www.kar.nic.in ಈ ರೀತಿ ಇರುತ್ತದೆ. ಆದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಎಲ್ಲ ವೆಬ್‍ಸೈಟ್‍ಗಳನ್ನು ಎನ್‍ಐಸಿಯೇ ಸಿದ್ಧಪಡಿಸುವುದಿಲ್ಲ. ಹೀಗಾಗಿ ಅವುಗಳ ಒಳಗಡೆ ಇರುವ ಮಾಹಿತಿ, ವೆಬ್‍ಸೈಟಿಗೆ ಲಿಂಕ್ ಆಗಿರುವ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ನೋಡಿದ ಬಳಿಕವಷ್ಟೇ ಇದು ಸರ್ಕಾರಿ ವೆಬ್‍ಸೈಟ್ ಎಂದು ಖಚಿತಪಡಿಸಿಕೊಳ್ಳಬಹುದು.