ಹಾಸನ: ಸುಳ್ಳು ದಾಖಲೆ ನೀಡಿ ಹಾಸನ ಮೆಡಿಕಲ್ ಕಾಲೇಜಿನಲ್ಲಿ (ಹಿಮ್ಸ್) ಡಾಕ್ಟರ್ ರವಿಕುಮಾರ್ ಪ್ರೊಫೆಸರ್ ಹುದ್ದೆ ಗಿಟ್ಟಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ನ್ಯಾಯಾಲಯ ವಿಚಾರಣೆಗೆ ಆದೇಶ ನೀಡಿದೆ.
ಡಾಕ್ಟರ್ ರವೀಂದ್ರ ಸುಳ್ಳು ಸೇವಾನುಭವ ದಾಖಲೆ ಪತ್ರ ನೀಡಿ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರೊಫೆಸರ್ ಹುದ್ದೆ ಗಿಟ್ಟಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಹಾಸನದ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ವಕೀಲ ಧರ್ಮೇಂದ್ರ ನೇತೃತ್ವದಲ್ಲಿ ಖಾಸಗಿ ಕೇಸ್ ಹಾಕಲಾಗಿತ್ತು. ಹೀಗಾಗಿ ನ್ಯಾಯಾಲಯ ಡಾಕ್ಟರ್ ರವಿಕುಮಾರ್ ವಿರುದ್ಧ ವಿಚಾರಣೆಗೆ ಆದೇಶ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಕೀಲ ಧರ್ಮೇಂದ್ರ, ಸುಳ್ಳು ದಾಖಲೆ ಪತ್ರ ನೀಡಿರುವ ಡಾಕ್ಟರ್ ರವೀಂದ್ರ ವಿರುದ್ಧ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ ಎಂದು ಕೋರ್ಟ್ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿಕೊಂಡಿದೆ. ಒಂದು ವೇಳೆ ಆರೋಪ ಸಾಬೀತಾದರೆ ಡಾಕ್ಟರ್ ರವಿಕುಮಾರ್ ತಮ್ಮ ಹುದ್ದೆ ಕಳೆದುಕೊಂಡು, ಏಳು ವರ್ಷದವರೆಗೆ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರದ ಅವಧಿಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಹುಬ್ಲೋಟ್ ವಾಚ್ ಗಿಫ್ಟ್ ಪ್ರಕರಣ ಮತ್ತೆ ಸಿದ್ದರಾಮಯ್ಯ ಅವರಿಗೆ ಕಂಟಕವಾಗುವ ಸ್ಥಿತಿ ನಿರ್ಮಾಣವಾಗಿದೆ.
ಪ್ರಕರಣದಲ್ಲಿ ಸಿದ್ದರಾಮಯ್ಯ ಆಪ್ತ ಡಾ.ಗಿರೀಶ್ ಚಂದ್ರ ವರ್ಮಾ ಅವರು ನೀಡಿದ್ದ ದಾಖಲಾತಿಗಳು ಸುಳ್ಳು ಎಂದು ಆರೋಪ ಕೇಳಿಬಂದಿದೆ. ದುಬೈನಲ್ಲಿ ವಾಚ್ ಖರೀದಿ ಮಾಡಿದ್ದೆ ಎಂದು ಪ್ರಕರಣದ ತನಿಖಾ ಸಂಸ್ಥೆ ಎಸಿಬಿ ಮುಂದೆ ನೀಡಿದ್ದ ಹೇಳಿಕೆ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವರ್ಮಾ ಸಲ್ಲಿಸಿದ್ದರು. ಆದರೆ ಸದ್ಯ ಇದು ಸುಳ್ಳು, ಆ ದಾಖಲೆಗಳು ನಕಲಿ ಎಂದು ವಕೀಲ ನಟರಾಜ ಶರ್ಮಾ ಹೇಳಿದ್ದಾರೆ.
ಪ್ರಕರಣದಲ್ಲಿ ಎಸಿಬಿ ಅಧಿಕಾರಿಗಳು ವರ್ಮಾ ಅವರು ಕೊಟ್ಟ ದಾಖಲೆಗಳನ್ನು ಪರೀಶೀಲನೆ ಮಾಡದೆ ಹಾಗೂ ಅವರನ್ನು ವಿಚಾರಣೆಗೆ ಒಳಪಡಿಸದೇ, ಕೇವಲ ಹೇಳಿಕೆ ಮಾತ್ರ ಪಡೆದು ಕ್ಲೀನ್ ಚಿಟ್ ನೀಡಿದ್ದಾರೆ. ಆದರೆ ಎಸಿಬಿ ಅಧಿಕಾರಿಗಳಿಗೆ ನೀಡಿದ್ದ ದಾಖಲೆಗಳು ಇದೀಗ ಸುಳ್ಳು ಎಂದು ಸಾಬೀತಾಗಿದೆ. ಈ ಅವಧಿಯಲ್ಲಿ ಸಲ್ಲಿಕೆ ಆಗಿರುವ ಬಿಲ್ ನಕಲು ಎಂದು ಮಾರಾಟ ಸಂಸ್ಥೆ ಹೇಳಿಕೆ ನೀಡಿದೆ. ಅದ್ದರಿಂದ ಮರು ತನಿಖೆಗೆ ಒತ್ತಾಯ ಮಾಡುವಂತೆ ದೂರುದಾರ, ವಕೀಲ ನಟರಾಜ ಶರ್ಮಾ ಒತ್ತಾಯ ಮಾಡಿದ್ದಾರೆ. ಅಲ್ಲದೇ ಎಸಿಬಿ ಹೊರತಾದ ಪ್ರತ್ಯೇಕ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸುವುದಾಗಿ ವಕೀಲರು ತಿಳಿಸಿದ್ದಾರೆ.
ಪ್ರಮುಖವಾಗಿ ಹುಬ್ಲೋಟ್ ವಾಚ್ ಸಂಬಂಧಿಸಿದಂತೆ ಪ್ರಕರಣ ದಾಖಲಾದ 1 ತಿಂಗಳ ಬಳಿಕ ವಾಚ್‍ಗೆ ಸಂಬಂಧಿಸಿದ ಅಬಕಾರಿ ಸುಂಕ ಕಟ್ಟಲಾಗಿದೆ. ಆದರೆ ಈ ಬಗ್ಗೆಯೂ ಸಿಬಿಐ ವಿಚಾರಣೆ ನಡೆಸಿಲ್ಲ. ಎಸಿಬಿ ತನಿಖೆ ನಡೆಸದೇ ಪ್ರಕರಣ ಕ್ಲೋಸ್ ಮಾಡಿದೆ ಎಂದು ನಟರಾಜ್ ಶರ್ಮಾ ಗಂಭೀರ ಆರೋಪ ಮಾಡಿದ್ದಾರೆ. ಒಂದೊಮ್ಮೆ ನ್ಯಾಯಾಲಯ ಅರ್ಜಿದಾರರ ಮನವಿಗೆ ಒಪ್ಪಿಗೆ ನೀಡಿದಲ್ಲಿ ಪ್ರರಕಣ ಮರು ತನಿಖೆಗೆ ಒಳಪಡುವ ಸಾಧ್ಯತೆಗಳಿದೆ.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ, ನಿಮ್ಮ ಸಿಎಂ ಸಮಾಜವಾದಿಯಲ್ಲ ಅವರು ಮಜಾವಾದಿ. ದುಬಾರಿ ಬೆಲೆಯ ವಾಚು, ಗ್ಲಾಸ್ ಗಳನ್ನು ಧರಿಸುತ್ತಾರೆ ಎಂದು ಹೇಳಿದ್ದರು. ವಾಚ್ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಒಳಗಾಗುತ್ತಿದ್ದಂತೆ ಸಿದ್ದರಾಮಯ್ಯ ವಾಚ್ ಅನ್ನು ಸರ್ಕಾರದ ವಶಕ್ಕೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ಅಂತ್ಯ ಹಾಡಿದ್ದರು. ವಿವಾದ ಅಂತ್ಯವಾಗಿದ್ದರೂ ಈ ವಾಚ್ ಪ್ರಕರಣ ಸಿದ್ದರಾಮಯ್ಯ ಅವರ ಇಮೇಜ್‍ಗೆ ಸ್ವಲ್ಪ ಹೊಡೆತ ನೀಡಿತ್ತು. ವಿಧಾನಸಭಾ ಚುನಾವಣೆಯಲ್ಲಿ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಲೇ ಟೀಕೆ ಮಾಡುತ್ತಿದ್ದರು.
ಚಿಕ್ಕಬಳ್ಳಾಪುರ: ಸರ್ಕಾರ ನೀಡುವ ಉಚಿತ ಜಮೀನಿಗಾಗಿ ಹೆತ್ತ ಮಗಳನ್ನೇ ಪತ್ನಿಯೆಂದು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ತಂದೆಯೊಬ್ಬ ಜಮೀನು ಮಂಜೂರು ಮಾಡಿಸಿಕೊಂಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಅಬ್ಬರವಾರಿಪಲ್ಲಿ ಗ್ರಾಮದಲ್ಲಿ
ಅಬ್ಬರವಾರಿಪಲ್ಲಿ ಗ್ರಾಮದ ನಿವಾಸಿ ವೆಂಕಟರವಣಪ್ಪ, ಪರಿಶಿಷ್ಟ ಕಲ್ಯಾಣ ವರ್ಗಗಳ ಕಲ್ಯಾಣ ಇಲಾಖೆಯಿಂದ ಭೂ ರಹಿತ ಕೃಷಿ ಕಾರ್ಮಿಕ ಮಹಿಳೆಯರಿಗೆ ಮಾತ್ರವೇ ನೀಡುವ ಭೂ ಒಡೆತನ ಯೋಜನೆ ಮುಖಾಂತರ ತನ್ನ ಹೆತ್ತ ಮಗಳಾದ ರಂಜಿತಾ (ಹೆಸರು ಬದಲಾಯಿಸಿದೆ)ಯನ್ನೇ ಹೆಂಡತಿ ಎಂದು ದಾಖಲೆಗಳನ್ನು ಸೃಷ್ಟಿಸಿ 1 ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಂಡಿದ್ದಾನೆ.
5 ವರ್ಷಗಳ ಹಿಂದೆಯೇ ಮಗಳು ರಂಜಿತಾ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಆಗ ತಂದೆ ನಕಲಿ ದಾಖಲೆಗಳನ್ನ ಕೊಟ್ಟು, ಮಗಳಿಗೆ ನೀಟಾಗಿ ಸೀರೆ ಉಡಿಸಿ, ಕತ್ತಿಗೆ ಕಪ್ಪು ಮಣಿ ಸರದ ತಾಳಿ ಹಾಕಿಸಿ ವೆಂಕಟರವಣಪ್ಪ ತನ್ನ ಗಂಡ ಅಂತ ಹೇಳಿಸಿ ಸರ್ಕಾರದಿಂದ ಮಂಜೂರಾದ ಭೂಮಿಯನ್ನ ನೊಂದಣಿ ಮಾಡಿಸಿಕೊಂಡಿದ್ದಾನೆ.
ಒಂದು ಕುಟುಂಬಕ್ಕೆ ಕೇವಲ ಒಬ್ಬ ಫಲಾನುಭವಿಗೆ ಮಾತ್ರ ಒಂದು ಬಾರಿ ಉಚಿತ ಜಮೀನು ಪಡೆದುಕೊಳ್ಳಲು ಅವಕಾಶವಿದೆ. ಆದರೆ ವೆಂಕಟರವಣಪ್ಪ ತನ್ನ ತಾಯಿ-ತಂದೆ ಹೆಸರಲ್ಲಿ ಒಂದು ಎಕರೆ, ತನ್ನ ಸೊಸೆ-ಮಗನ ಹೆಸರಲ್ಲಿ ಒಂದು ಎಕರೆ, ತನ್ನ ಹೆಂಡತಿ ಹೆಸರಲ್ಲಿ ಒಂದು ಎಕರೆ ಸೇರಿದಂತೆ ತನ್ನ ಮಗಳನ್ನ ತನ್ನ ಹೆಂಡತಿ ಅಂತ ಹೇಳಿ ಒಟ್ಟು 4 ಬಾರಿ 4 ಎಕರೆ ಜಮೀನು ಮಂಜೂರು ಮಾಡಿಸಿಕೊಂಡಿದ್ದಾನೆ ಎಂದು ವೆಂಕಟರವಣಪ್ಪ ಅಳಿಯ ರವಣಪ್ಪ ತಿಳಿಸಿದ್ದಾರೆ.
ಮಗಳು ರಂಜಿತಾಗೆ ವೆಂಕಟರವಣಪ್ಪನ ಜೊತೆ ವಿವಾಹವಾದ ಕೆಲ ವರ್ಷಗಳ ನಂತರ ಅಳಿಯ ರವಣಪ್ಪನಿಗೆ ಈ ರೀತಿ ವಂಚನೆ ಮಾಡಿರುವ ವಿಷಯ ತಿಳಿದಿದೆ. ಹೀಗಾಗಿ ತನ್ನ ಮಗಳನ್ನೇ ಹೆಂಡತಿ ಅಂತ ಸರ್ಕಾರಕ್ಕೆ ಮೋಸ ಮಾಡಿರುವ ಮಾವನ ವಿರುದ್ಧ ತಿರುಗಿಬಿದ್ದಿರುವ ಅಳಿಯ ರವಣಪ್ಪ ಈಗ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಹಾಸನ: ಪಾಪಿ ಪುತ್ರನೊಬ್ಬ ತನ್ನ ತಂದೆ ಬದುಕಿರುವಾಗಲೇ ನಿಧನರಾಗಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾನೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಚಂದ್ರೇಗೌಡ ಎಂಬಾತನೇ ನಕಲಿ ದಾಖಲೆ ಸೃಷ್ಟಿಸಿದ ಪುತ್ರ. ಬಾಗೂರು ಗ್ರಾಮದ 76 ವರ್ಷದ ದ್ಯಾವೇಗೌಡ ಎಂಬವರು ಎರಡು ಮದುವೆಯಾಗಿದ್ದಾರೆ. ಮೊದಲ ಪತ್ನಿಯ ಪುತ್ರ ಚಂದ್ರೇಗೌಡನಿಗೆ ಆಸ್ತಿಯಲ್ಲಿ ಪಾಲನ್ನೂ ನೀಡಿದ್ದಾರೆ.
ತಂದೆ ಹೆಸರಲ್ಲಿದ್ದ 2.3 ಎಕರೆ ಜಮೀನನ್ನು ತಂದೆಯ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡು, ಬಳಿಕ ತನ್ನ ಪುತ್ರ ಮಹೇಶ್ ಹೆಸರಿಗೆ ಬದಲಿಸಿದ್ದಾನೆ. ಚಂದ್ರೇಗೌಡನ ಈ ವಂಚನೆಯಲ್ಲಿ ಸ್ಥಳೀಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಇಂತ ನೀಚ ಪುತ್ರನಿಗೆ ಜನ್ಮ ನೀಡಿದ ತಪ್ಪಿಗೆ ವೃದ್ಧ ತಂದೆ-ತಾಯಿ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ.