Tag: Fake Officers

  • ಒಂದೂವರೆ ಕೋಟಿ, 50 ಗ್ರಾಂ ಚಿನ್ನಾಭರಣ ದೋಚಿದ ʻಸರ್ಕಾರಿ ಅಧಿಕಾರಿಗಳುʼ

    ಒಂದೂವರೆ ಕೋಟಿ, 50 ಗ್ರಾಂ ಚಿನ್ನಾಭರಣ ದೋಚಿದ ʻಸರ್ಕಾರಿ ಅಧಿಕಾರಿಗಳುʼ

    ಬೆಂಗಳೂರು: ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಂಡು ಬಂದು ಮನೆಯಲ್ಲಿದ್ದ ಒಂದೂವರೆ ಕೋಟಿ ರೂ. ಹಣ ಹಾಗೂ 50 ಗ್ರಾಂನ ಚಿನ್ನಾಭರಣಗಳನ್ನು ಖದೀಮರು ಲಪಟಾಯಿಸಿರುವ ಘಟನೆ ಬೆಂಗಳೂರಿನ (Bengaluru) ಯಲಹಂಕದಲ್ಲಿ ನಡೆದಿದೆ.

    ಯಲಹಂಕ (Yalahanka) ನಿವಾಸಿ ಗಿರಿರಾಜು ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಇನ್ನೋವಾ ಕಾರಿನಲ್ಲಿ ಬಂದಿದ್ದ ನಾಲ್ವರು ಆರೋಪಿಗಳು, ನಾವು ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ಲಿವ್ ಇನ್ ಗೆಳತಿಯ ಕೊಂದು ನದಿಗೆಸೆದ ಪ್ರಿಯಕರ – ಶವದ ಜೊತೆ ಸೆಲ್ಫಿ ಕ್ಲಿಕ್ಕಿಸಿ ವಿಕೃತಿ ಮೆರೆದವ ಅಂದರ್‌

    ಬಳಿಕ ನಿಮ್ಮ ಮನೆಯಲ್ಲಿ ಹಣ ಇದೆ ಎಂದು ಗಿರಿರಾಜು ಮನೆಯವರ ಹೇಳಿದ್ದರು. ಹಣ ಎಲ್ಲಿದೆ ಎಂದು ಕೇಳಿದ್ದರು. ಜಮೀನು ಖರೀದಿಗಾಗಿ ಗಿರಿರಾಜು ಅವರು ಒಂದೂವರೆ ಕೋಟಿ ರೂ. ಹಣವನ್ನು ತಂದು ಮನೆಯಲ್ಲಿಟ್ಟಿದ್ದರು. ಅಡುಗೆ ಮನೆಯಲ್ಲಿಟ್ಟಿದ್ದ ಹಣವನ್ನು ಖದೀಮರು ತೆಗೆದುಕೊಂಡಿದ್ದರು.

    ಮನೆಯವರ ಬಳಿ ಗಿರಿರಾಜು ಎಲ್ಲಿದ್ದಾರೆ ಎಂದು ಕೇಳಿದ್ದರು. ಅವರು ಇಲ್ಲ ಎಂದಾಗ ಹಣದ ಬ್ಯಾಗ್ ಮತ್ತು 50 ಗ್ರಾಂ ಚಿನ್ನಾಭರಣವನ್ನು ದೋಚಿ ನಾಲ್ವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.


    ಇದೀಗ ಘಟನೆ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸುತ್ತಿದ್ದಾರೆ.

  • ಸಾಗರದಲ್ಲಿ 3 ನಕಲಿ ತೆರಿಗೆ ಅಧಿಕಾರಿಗಳ ಬಂಧನ

    ಸಾಗರದಲ್ಲಿ 3 ನಕಲಿ ತೆರಿಗೆ ಅಧಿಕಾರಿಗಳ ಬಂಧನ

    ಶಿವಮೊಗ್ಗ: ಆದಾಯ ತೆರಿಗೆ ಅಧಿಕಾರಿಗಳೆಂದು ವಂಚಿಸಿ ಹಣವನ್ನು ಪಡೆಯುತ್ತಿದ್ದ ಮೂವರು ನಕಲಿ ಅಧಿಕಾರಿಗಳನ್ನು ಸಾಗರದ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಭದ್ರಾವತಿ ಮೂಲದ ಚಂದನ್, ನವೀನ ಮತ್ತು ಲತೇಶ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 1.50 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಇಟಿಯಸ್ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಎಸ್‍ಪಿ ಕೆ.ಎಂ ಶಾಂತರಾಜು ಅಭಿನಂದನೆ ಸಲ್ಲಿಸಿದ್ದಾರೆ.

    ಜೂನ್ 12ರಂದು ಜನ್ನೆಹಕ್ಲುವಿನ ವಿಶ್ವನಾಥ್ ಎಂಬುವವರ ಮನೆಗೆ ನಾಲ್ವರು ಅಪರಿಚಿತರು ಬಂದು ನಾವು ಆದಾಯ ತೆರಿಗೆ ಇಲಾಖೆಯವರು ಎಂದು ಹೇಳಿದ್ದರು. ನಂತರ ನಿಮ್ಮ ವ್ಯವಹಾರ ಹಾಗೂ ಬ್ಯಾಂಕಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ನೀಡುವಂತೆ ಕೇಳಿದ್ದಾರೆ. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೆದರಿಸಿ ಅವರಿಂದ 2.30 ಲಕ್ಷ ಹಾಗೂ ಖಾಲಿ ಚೆಕ್ ಪಡೆದುಕೊಂಡು ಅಲ್ಲಿಂದ ಪರಾರಿಯಾಗಿದ್ದರು.

    ಈ ಸಂಬಂಧ ವಿಶ್ವನಾಥ್ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ಮೂವರು ಆರೋಪಿಗಳನ್ನು ಸಾಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆನಂದಪುರ ಸಮೀಪದ ದಾಸಕೊಪ್ಪ ವೃತ್ತದಲ್ಲಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

  • ಕೊರೊನಾ ಹೆಸ್ರಲ್ಲಿ ಹುಟ್ಟಿಕೊಂಡಿದ್ದಾರೆ ನಕಲಿ ಅಧಿಕಾರಿಗಳು

    ಕೊರೊನಾ ಹೆಸ್ರಲ್ಲಿ ಹುಟ್ಟಿಕೊಂಡಿದ್ದಾರೆ ನಕಲಿ ಅಧಿಕಾರಿಗಳು

    – ಐಡಿ ಇಲ್ಲದೆ ಮನೆಗೆ ಬಂದ್ರೆ ಮಾಹಿತಿ ಕೊಡಬೇಡಿ

    ಉಡುಪಿ: ಕಿಲ್ಲರ್ ಕೊರೊನಾ ವೈರಸ್ ಇಡೀ ವಿಶ್ವವನ್ನು ನಲುಗಿಸಿಬಿಟ್ಟಿದೆ. ಮದ್ದೇ ಇಲ್ಲದ ಕೊರೊನಾ ವೈರಸ್ಸಿಗೆ ದೇಶದ ಜನ ಹೈರಾಣಾಗಿ ಹೋಗಿದ್ದಾರೆ. ರಾಜ್ಯದ ಜನಕ್ಕೆ ಕೊರೊನಾ ವೈರಸ್ ಒಂದು ಕಡೆಯಿಂದ ಕಿರುಕುಳ ಕೊಡುತ್ತಿದ್ದರೆ, ಉಡುಪಿ ಜಿಲ್ಲೆಯಲ್ಲಿ ಫೇಕ್ ಆಫೀಸರ್ಸ್ ಹುಟ್ಟಿಕೊಂಡಿದ್ದಾರೆ.

    ನಾವು ಕೊರೊನಾ ವೈರಸ್ ಪತ್ತೆ ಮಾಡುವವರು ಮತ್ತು ಅಂಕಿ ಅಂಶವನ್ನು ಸಂಗ್ರಹ ಮಾಡುವವರು ಎಂದು ಉಡುಪಿ ನಗರದ ಕೆಲ ವಾರ್ಡ್ ಗಳ ಮನೆಗಳಿಗೆ ನಕಲಿ ಆಫೀಸರ್ ಗಳು ಹೋಗುತ್ತಿದ್ದಾರೆ. ಮನೆಗಳಿಗೆ ಬಂದು ನಾವು ಆರೋಗ್ಯ ಇಲಾಖೆಯಿಂದ ನೇಮಿಸಲ್ಪಟ್ಟ ಸಿಬ್ಬಂದಿ ಎಂದು ಸುಳ್ಳು ಹೇಳಿ ಜನರಿಂದ ಮಾಹಿತಿಯನ್ನು ಸಂಗ್ರಹ ಮಾಡುತ್ತಿದ್ದಾರೆ.

    ಉಡುಪಿ ಡಿಹೆಚ್‍ಒ ಡಾಕ್ಟರ್ ಸುಧೀರ್ ಚಂದ್ರ ಸೂರಿಗೂ ಈ ಬಗ್ಗೆ ದೂರುಗಳು ಬಂದಿದೆ. ಕೊರೊನಾ ತಪಾಸಣೆಯ ಹೆಸರಲ್ಲಿ ಅಪರಿಚಿತರಿಂದ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಅಪರಿಚಿತರು ಮನೆಗೆ ಬಂದ್ರೆ ಮಾಹಿತಿ ಕೊಡಬೇಡಿ. ಉಡುಪಿಯ ಬನ್ನಂಜೆಯಲ್ಲಿ ಆರೋಗ್ಯ ಇಲಾಖೆ ಕಾರ್ಯಕರ್ತರು ಅಂತ ಯಾರೋ ಬಂದಿದ್ರು. ಆರೋಗ್ಯ ಇಲಾಖೆಯ ಐಡಿ, ಧೃಡೀಕರಣ ಪತ್ರ ಇದ್ದರೆ ಮಾತ್ರ ಮಾಹಿತಿ ಕೊಡಿ ಎಂದರು.

    ನಮ್ಮ ಸಿಬ್ಬಂದಿ ಯೂನಿಫಾರ್ಮ್ ನಲ್ಲಿ ಇರುತ್ತಾರೆ. ಅಪರಿಚಿತರಿಗೆ ಯಾವ ಮಾಹಿತಿ ಕೊಡುವ ಅಗತ್ಯ ಇಲ್ಲ ಎಂದು ಡಿ.ಎಚ್.ಒ ಮಾಹಿತಿ ನೀಡಿದ್ದಾರೆ. ಅಂಗನವಾಡಿ ಆಶಾ ಕಾರ್ಯಕರ್ತರು ಮತ್ತು ಗುತ್ತಿಗೆ ಆಧಾರದಲ್ಲಿ ನೇಮಿಸಲ್ಪಟ್ಟ ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ಸಿಬ್ಬಂದಿ ಕೊರೊನಾ ವೈರಸ್ ಬಗ್ಗೆ ಜನಜಾಗೃತಿಯನ್ನು ಮಾಡಿಸ್ತಾ ಇದ್ದೇವೆ ಎಂದರು.

    ಕಷ್ಟದ ಸಂದರ್ಭವನ್ನು ಉಪಯೋಗಿಸಿಕೊಂಡು ಯಾರೋ ಕಿಡಿಗೇಡಿಗಳು ಆರೋಗ್ಯ ಅಧಿಕಾರಿಗಳೆಂದು ಹೇಳಿಕೊಂಡು ಮನೆಗಳಿಗೆ ತೆರಳುತ್ತಿರುವುದು ತಪ್ಪು. ಐಡಿ ಇಲ್ಲದ, ಯೂನಿಫಾರ್ಮ್ ಗಳು ಇಲ್ಲದ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸ್ ಠಾಣೆಗೆ ಅಥವಾ ಆರೋಗ್ಯ ಇಲಾಖೆಗೆ ದೂರು ನೀಡಿ ಎಂದು ಡಿಎಚ್‍ಒ ಮನವಿ ಮಾಡಿದ್ದಾರೆ.

  • ಮಂಗಳೂರು ಏರ್‌ಪೋರ್ಟ್‌ನಲ್ಲಿ ನಕಲಿ ಕಸ್ಟಮ್ಸ್ ಅಧಿಕಾರಿಗಳ ಬಂಧನ

    ಮಂಗಳೂರು ಏರ್‌ಪೋರ್ಟ್‌ನಲ್ಲಿ ನಕಲಿ ಕಸ್ಟಮ್ಸ್ ಅಧಿಕಾರಿಗಳ ಬಂಧನ

    ಮಂಗಳೂರು: ಕಸ್ಟಮ್ಸ್ ಅಧಿಕಾರಿಗಳು ಎಂದು ಹೇಳಿಕೊಂಡು ಪ್ರಯಾಣಿಕರಿಂದ ಹಣ ಕೀಳಲು ಯತ್ನಿಸಿದ ಮೂವರು ನಕಲಿ ಕಸ್ಟಮ್ಸ್ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಮಂಗಳೂರು ವಿಮಾಣ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಮಸ್ಕತ್ ನಿಂದ ಮಂಗಳೂರಿಗೆ ಆಗಮಿಸಿದ್ದ ಎಂ.ಡಿ.ಶಮಾಸ್ ಎಂಬ ಪ್ರಯಾಣಿಕರೋರ್ವರನ್ನು ಮೂರು ಮಂದಿ ತಡೆದು ನಿಲ್ಲಿಸಿ ದಾಖಲೆ ಪರಿಶೀಲನೆ ನಡೆಸಿದರು.

    ಬಳಿಕ ಪ್ರಯಾಣಿಕ ಶಮಾಸ್ ರಿಂದ ಹಣ ಕೀಳುವ ಪ್ರಯತ್ನ ನಡೆಸಿದ್ದು, ಈ ವೇಳೆ ಪಾರ್ಕಿಂಗ್ ಪ್ರದೇಶದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಲು ಸಾಧ್ಯವಿಲ್ಲ ಎಂದು ಅನುಮಾನಗೊಂಡ ಶಮಾಸ್ ತಕ್ಷಣ ವಿಮಾನ ನಿಲ್ದಾಣದ ಸಿ.ಐ.ಎಸ್.ಎಫ್ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿದ್ದು, ಭದ್ರತಾ ಸಿಬ್ಬಂದಿಗಳು ಈ ಮೂವರನ್ನು ವಿಚಾರಣೆ ನಡೆಸಿದ್ದಾರೆ.ವಿಚಾರಣೆ ಸಂದರ್ಭ ಇವರು ನಕಲಿ ಅಧಿಕಾರಿಗಳು ಎಂದು ತಿಳಿದಿದ್ದು, ಆರೋಪಿಗಳಾದ ರಿಯಾಝ್, ಮಹಮ್ಮದ್ ಸಾಹಿಬ್ ಹಾಗೂ ಖಾಝಿ ಅಫ್ತಾಬ್ ಎಂಬವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.