Tag: fake markscard

  • ಹಣಕ್ಕೆ ಡಿಗ್ರಿ ಅಂಕಪಟ್ಟಿ ನೀಡುತ್ತಿದ್ದವರು ಸಿಸಿಬಿ ಬಲೆಗೆ ಬಿದ್ರು

    ಹಣಕ್ಕೆ ಡಿಗ್ರಿ ಅಂಕಪಟ್ಟಿ ನೀಡುತ್ತಿದ್ದವರು ಸಿಸಿಬಿ ಬಲೆಗೆ ಬಿದ್ರು

    ಬೆಂಗಳೂರು: ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ನಡೆಸುತ್ತಿದ್ದ ಮಹಾಲಕ್ಷ್ಮಿ ಲೇಔಟ್ ಶ್ರೀ ವೆಂಕಟೇಶ್ವರ ಇನ್‍ಸ್ಟಿಟ್ಯೂಟ್ ಮೇಲೆ ದಾಳಿ ನಡೆಸಿ ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ.

    ಮಂಗಳವಾರ ಸಂಜೆಯಿಂದ ದಾಳಿ ನಡೆಸಿದ ಸಿಸಿಬಿ ಪೊಲೀಸರು ಹಲವು ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಅಪಾರ ಪ್ರಮಾಣದ ನಕಲಿ ಮಾರ್ಕ್ಸ್ ಕಾರ್ಡ್ ಗಳು ಪತ್ತೆಯಾಗಿವೆ. ಆಂಧ್ರ ಮೂಲದ ಶ್ರೀನಿವಾಸ್ ರೆಡ್ಡಿಗೆ ಸೇರಿದ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಈ ಮಾರ್ಕ್ಸ್ ಕಾರ್ಡ್ ದಂಧೆ ನಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

    ಹಣ ನೀಡಿದರೆ ಬೇಕಾದ ಡಿಗ್ರಿ ಮಾರ್ಕ್ಸ್ ಕಾರ್ಡ್ ಕೊಡ್ತಿದ್ರು. ಎಗ್ಗಿಲ್ಲದೇ ಮಾರ್ಕ್ಸ್ ಕಾರ್ಡ್ ಮಾರಾಟ ದಂಧೆ ನಡೆಯುತ್ತಿತ್ತು. ಒಂದು ಮಾರ್ಕ್ಸ್ ಕಾರ್ಡಿಗೆ 80 ಸಾವಿರದಿಂದ ಲಕ್ಷಾಂತರ ರೂಪಾಯಿ ಪಡೆಯುತ್ತಿದ್ದರು. ಅದೂ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಈ ಮಾರ್ಕ್ಸ್ ಕಾರ್ಡ್ ದಂಧೆ ಎಗ್ಗಿಲ್ಲದೆ ನಡೆಯುತಿತ್ತು.

    ಎಸ್‍ಎಸ್‍ಎಲ್‍ಸಿ, ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ ಸೇರಿ ಎಲ್ಲಾ ಡಿಗ್ರಿಗಳ ನಕಲಿ ಅಂಕ ಪಟ್ಟಿಯನ್ನು ಇಲ್ಲಿ ಮಾಡಿಕೊಡಲಾಗುತಿತ್ತು. ಒಂದು ವಿಷಯಕ್ಕೆ 15 ಸಾವಿರ ದಿಂದ 3 ಲಕ್ಷದವರೆಗೂ ಚಾರ್ಜ್ ಮಾಡಲಾಗುತಿತ್ತು. ನಾಮಾಕಾವಸ್ಥೆಗೆ ಪರೀಕ್ಷೆ ಬರೆಸುತ್ತಿದ್ದ ಆರೋಪಿಗಳು ಎಕ್ಸಾಮ್ ಅಟೆಂಡ್ ಮಾಡಿ ಬಂದರೆ ಸಾಕು ಇಲ್ಲಿ ಸುಲಭವಾಗಿ ಡಿಗ್ರಿ ಸಿಗುತಿತ್ತು. ಎಲ್.ಎಲ್.ಬಿ ಪದವಿಗಾಗಿ 3 ಲಕ್ಷ ಕೊಟ್ಟರೆ ಸರ್ಟಿಫಿಕೇಟ್ ಮಾಡಿಸಿ ಕೊಡುತ್ತಿದ್ದರು.

    ಈ ಆರೋಪಿಗಳು ಕೊಡುತ್ತಿದ್ದ ಮಾರ್ಕ್ಸ್ ಕಾರ್ಡ್ ಆಂಧ್ರ ಹಾಗೂ ರಾಜ್ಯದ ಅನೇಕ ವಿಶ್ವವಿದ್ಯಾಲಯಗಳದ್ದಾಗಿತ್ತು. ಕಾರ್ಲೆಕ್ಸ್ ಟೀಚರ್ ಯುನಿವರ್ಸಿಟಿ, ನಾರ್ತ್ ಈಸ್ಟ್ ಯುನಿವರ್ಸಿಟಿ, ಸ್ವಾಮಿ ವಿವೇಕಾನಂದ ಯುನಿವರ್ಸಿಟಿಗಳ ಮಾರ್ಕ್ಸ್ ಕಾರ್ಡ್ ಗಳನ್ನು ಲಕ್ಷ ಲಕ್ಷ ದುಡ್ಡು ತಗೊಂಡು ಕೊಡಿಸುತ್ತಿದ್ದರು.

    ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಸಿಸಿಬಿ ತಂಡಕ್ಕೆ ಸಾವಿರಾರು ನಕಲಿ ಮಾರ್ಕ್ಸ್ ಕಾರ್ಡ್ ಗಳು ಪತ್ತೆಯಾಗಿವೆ. ದಾಳಿ ವೇಳೆ ಇನ್‍ಸ್ಟಿಟ್ಯೂಟ್ ನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಕಲಿ ಅಂಕಪಟ್ಟಿ ನೀಡಿ ಸಾರ್ವಜನಿಕ ಗ್ರಂಥಾಲಯ ಹುದ್ದೆ ಪಡೆದ ಪ್ರಕರಣ- ಎಸಿಬಿ ತನಿಖೆಗೆ ಲೋಕಾಯುಕ್ತ ಕೋರ್ಟ್ ಆದೇಶ

    ನಕಲಿ ಅಂಕಪಟ್ಟಿ ನೀಡಿ ಸಾರ್ವಜನಿಕ ಗ್ರಂಥಾಲಯ ಹುದ್ದೆ ಪಡೆದ ಪ್ರಕರಣ- ಎಸಿಬಿ ತನಿಖೆಗೆ ಲೋಕಾಯುಕ್ತ ಕೋರ್ಟ್ ಆದೇಶ

    ಬೆಂಗಳೂರು: ನಕಲಿ ಅಂಕಪಟ್ಟಿ ನೀಡಿ ಹುದ್ದೆ ಪಡೆದ ಪ್ರಕರಣದ ತನಿಖೆಯನ್ನ ಎಸಿಬಿ ತನಿಖೆಗೆ ವಹಿಸಿ ಲೋಕಾಯುಕ್ತ ಕೋರ್ಟ್ ಆದೇಶಿಸಿದೆ.

    2008 ರಲ್ಲಿ ಸಾರ್ವಜನಿಕ ಗ್ರಂಥಾಲಯ ಹುದ್ದೆಗೆ ಸುಳ್ಳು ಅಂಕಪಟ್ಟಿ ನೀಡಿ ಹುದ್ದೆ ಪಡೆದಿರುವ ಬಗ್ಗೆ ಆರೋಪ ಇತ್ತು. ಈ ಬಗ್ಗೆ ಸರ್ಕಾರ ಸಮಿತಿಯೊಂದನ್ನ ರಚಿಸಿ ತನಿಖೆ ನಡೆಸಿದಾಗ ಅಕ್ರಮ ಸಾಬೀತಾಗಿತ್ತು. ಹೀಗಿದ್ರೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಚಿವ ತನ್ವೀರ್ ಸೇಠ್ ಯಾವುದೇ ಕ್ರಮಕೈಗೊಳ್ಳಲಿಲ್ಲ.

    ಇದರಿಂದ ಬೇಸತ್ತ ದೂರುದಾರ ಸತ್ಯನಾರಾಯಣ ದಾಖಲೆ ಸಮೇತ ಲೋಕಾಯುಕ್ತ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಲೋಕಾಯುಕ್ತ ಕೋರ್ಟ್, ಎಸಿಬಿ ತನಿಖೆಗೆ ಆದೇಶಿಸಿದೆ. ಅಲ್ಲದೇ 158 ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸಿ, ಜನವರಿ 31, 2018 ರೊಳಗೆ ಕೋರ್ಟ್‍ಗೆ ವರದಿ ನೀಡುವಂತೆ ಲೋಕಾಯುಕ್ತ ಕೋರ್ಟ್ ಸೂಚಿಸಿದೆ.

    ಸುಳ್ಳು ಅಂಕಪಟ್ಟಿ ನೀಡಿ ಕೆಲಸ ಪಡೆದ ಹಗರಣವನ್ನ ಪಬ್ಲಿಕ್ ಟಿವಿ ಬಯಲಿಗೆಳೆದಿತ್ತು.