Tag: fake gold

  • ನಿಧಿ ಆಸೆಗೆ ಬಿದ್ದು 3.50 ಲಕ್ಷ ರೂ. ಕಳ್ಕೊಂಡ

    ನಿಧಿ ಆಸೆಗೆ ಬಿದ್ದು 3.50 ಲಕ್ಷ ರೂ. ಕಳ್ಕೊಂಡ

    ದಾವಣಗೆರೆ: ವ್ಯಕ್ತಿಯೊಬ್ಬರಿಗೆ ಕಡಿಮೆ ಬೆಲೆಯಲ್ಲಿ ಕೆ.ಜಿ.ಗಟ್ಟಲೇ ಬಂಗಾರದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ 3.50 ಲಕ್ಷ ವಂಚಿಸಿರುವ ಪ್ರಕರಣ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.

    ಬೆಂಗಳೂರಿನ ಮೂಡ್ಡಪಾಳ್ಯದ ನಿವಾಸಿ ಶ್ರೀನಿವಾಸ್ ಮೋಸ ಹೋಗಿದ್ದಾರೆ. ಶಿವಮೊಗ್ಗದ ಹರೀಶ್ ಹಾಗೂ ಆತನ ಸಹಚರ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಹೋಟೆಲ್‍ನಲ್ಲಿ ಕೆಲಸ ಮಾಡುವ ಶ್ರೀನಿವಾಸ್‍ಗೆ ಹರೀಶ್ ಫೋನ್ ಮಾಡಿ, ನಾನು ನಿಮ್ಮ ಹೋಟೆಲ್‍ಗೆ ಪ್ರತಿ ದಿವ ಬರುತ್ತೇನೆ. ನೀವು ನನ್ನನ್ನು ನೋಡಿದ್ದೀರಿ ಎಂದು ಪರಿಚಯ ಮಾಡಿಕೊಂಡಿದ್ದಾನೆ.

    ಮತ್ತೊಂದು ದಿನ ಕರೆ ಮಾಡಿ, ಕಲಬುರ್ಗಿಯಲ್ಲಿರುವ ನನ್ನ ಅಜ್ಜ ಒಂದು ತಿಂಗಳ ಹಿಂದೆ ಮನೆಯ ಪಾಯ ತೆಗೆಯುತ್ತಿರುವಾಗ ನಿಧಿ ಸಿಕ್ಕಿದೆ. ನಿಮಗೆ ಬೇಕಾದರೆ ಒಂದು ಕೆ.ಜಿಯಷ್ಟು ಕೊಡುತ್ತೇನೆ. ಈ ವಿಷಯವನ್ನು ಯಾರಿಗೂ ಹೇಳಬೇಡಿ. ಸ್ಯಾಂಪಲ್ ಕೊಡುತ್ತೇನೆ ಶಿವಮೊಗ್ಗಕ್ಕೆ ಬನ್ನಿ ಎಂದು ತಿಳಿಸಿದ್ದಾನೆ.

    ಇದನ್ನು ನಂಬಿದ ಶ್ರೀನಿವಾಸ್ ಶಿವಮೊಗ್ಗಕ್ಕೆ ಹೋಗಿದ್ದಾರೆ. ನಂತರ ಅವರನ್ನು ಹರೀಶ್ ಚೀಲೂರಿಗೆ ಕರೆಸಿಕೊಂಡಿದ್ದಾನೆ. ಒಂದು ಬಿಲ್ಲೆಯನ್ನು ನೀಡಿದ್ದಾನೆ. ಇದನ್ನು ಪರೀಕ್ಷಿಸಿದಾಗ ಅದು ಅಸಲಿ ಬಂಗಾರವಾಗಿತ್ತು. ಕೊನೆಗೆ 5 ಲಕ್ಷ ಕೊಟ್ಟರೆ ಒಂದು ಕೆ.ಜಿ ಬಂಗಾರ ನೀಡುತ್ತೇನೆ ಎಂದು ಹರೀಶ್ ನಂಬಿಸಿದ್ದಾನೆ. ಇದನ್ನು ನಂಬಿದ ಶ್ರೀನಿವಾಸ್ ಜನವರಿಯಲ್ಲಿ 3.50 ಲಕ್ಷ ತೆಗೆದುಕೊಂಡು ಚೀಲೂರಿಗೆ ಬಂದಿದ್ದಾರೆ. ಆಗ ಆರೋಪಿಗಳು ನಕಲಿ ಬಂಗಾರ ನೀಡಿ ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ನಂತರ ಮನೆಗೆ ಹೋಗಿ ಪರೀಕ್ಷಿಸಿದಾಗ ಕೆ.ಜಿ.ಗಟ್ಟಲೇ ನಕಲಿ ಬಂಗಾರ ಇರುವುದು ಗೊತ್ತಾಗಿದೆ.

    ತಕ್ಷಣ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಸದ್ಯಕ್ಕೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

  • ಚಿನ್ನದ ನಾಣ್ಯ ನೀಡೋದಾಗಿ ಹೇಳಿ 1.30ಲಕ್ಷ ರೂ. ಕಿತ್ಕೊಂಡ್ರು

    ಚಿನ್ನದ ನಾಣ್ಯ ನೀಡೋದಾಗಿ ಹೇಳಿ 1.30ಲಕ್ಷ ರೂ. ಕಿತ್ಕೊಂಡ್ರು

    – ಶಿವಮೊಗ್ಗದಲ್ಲಿ ಇಬ್ಬರ ಬಂಧನ

    ಶಿವಮೊಗ್ಗ: ಬಂಗಾರದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ನಕಲಿ ನಾಣ್ಯಗಳನ್ನು ನೀಡಿದ ಆರೋಪದ ಮೇಲೆ ಸಾಗರ ಗ್ರಾಮಾಂತರ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ಹೊಸದುರ್ಗದ ಸತೀಶ್(28), ಕಡೂರಿನ ಮಂಜು (25) ಬಂಧಿತ ಆರೋಪಿಗಳು. ನಿತ್ಯಾನಂದ ಎಂಬವರಿಗೆ ಬಂಗಾರದ ನಾಣ್ಯ ನೀಡುವುದಾಗಿ ಹೇಳಿ 1 ಲಕ್ಷದ 30 ಸಾವಿರ ರೂ.ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

    ಇಂದು ಬೆಳಗ್ಗೆ ತ್ಯಾಗರ್ತಿ ಕ್ರಾಸ್ ಬಳಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಬಂಧಿತರಿಂದ 1 ಲಕ್ಷ ನಗದು, ಟಾಟಾ ಏಸ್ ವಾಹನ ಹಾಗೂ ನಕಲಿ ಬಂಗಾರವನ್ನು ಸಾಗರ ಗ್ರಾಮಾಂತರ ಠಾಣೆ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.