Tag: fake document

  • ಧಾರವಾಡ ಕೆಐಎಡಿಬಿ ಹಗರಣ – ನಕಲಿ ದಾಖಲೆ ಸೃಷ್ಟಿಸಿದ್ದ ಆರೋಪಿ ಇಡಿ ವಶಕ್ಕೆ

    ಧಾರವಾಡ ಕೆಐಎಡಿಬಿ ಹಗರಣ – ನಕಲಿ ದಾಖಲೆ ಸೃಷ್ಟಿಸಿದ್ದ ಆರೋಪಿ ಇಡಿ ವಶಕ್ಕೆ

    ಧಾರವಾಡ: ಧಾರವಾಡ (Dharwad) ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಲ್ಲಿ (KIADB) ಎರಡು ಬಾರಿ ಪರಿಹಾರ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿ ಮಾಡಿದ್ದ ಆರೋಪಿ ರವಿ ಕುರುಬೆಟ್‌ನನ್ನು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಧಾರವಾಡ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 2010-12ರ ಅವಧಿಯಲ್ಲಿ ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿಗೆ 2012ರಲ್ಲೇ ಪರಿಹಾರ ನೀಡಿದ್ದರು. ಆದರೆ 2021-22ರಲ್ಲಿ ಮತ್ತೆ ಹಲವು ಜಮೀನುಗಳಿಗೆ ಎರಡನೇ ಬಾರಿ 19.99 ಕೋಟಿ ರೂ. ಪರಿಹಾರ ನೀಡಿದ್ದರು. ಈ ಹಿನ್ನೆಲೆ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ವಿದೇಶದಲ್ಲಿ ಹೂಡಿಕೆ – ಕೈ ಶಾಸಕ ಸುಬ್ಬಾರೆಡ್ಡಿ ನಿವಾಸದ ಮೇಲೆ ಇಡಿ ದಾಳಿ


    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕೂಡಾ ದೂರು ದಾಖಲಿಸಿಕೊಂಡಿತ್ತು. ಒಟ್ಟು 72 ಕೋಟಿ ರೂ. ಅಕ್ರಮ ಮಾಡಲಾಗಿದೆ ಎಂದು ಇಡಿ ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ನಕಲಿ ದಾಖಲೆ ಸೃಷ್ಟಿ ಮಾಡಿದ್ದ ಆರೋಪದಡಿ ರವಿ ಕುರುಬೆಟ್‌ನನ್ನು ಇಡಿ ವಶಕ್ಕೆ ಪಡೆದಿದೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಕಲಹ – ಮಗನಿಂದಲೇ ತಂದೆ, ಸಹೋದರನ ಬರ್ಬರ ಹತ್ಯೆ

    ಈ ಪ್ರಕರಣದಲ್ಲಿ ಹಿಂದೆ ಕೆಐಎಡಿಬಿ ನಿವೃತ್ತ ಅಧಿಕಾರಿ ವಸಂತಕುಮಾರ್ ಸಜ್ಜನ್ ಹಾಗೂ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಅಲ್ಲಾಬಕ್ಷ ದುಂಡಸಿರನ್ನು ಬಂಧಿಸಲಾಗಿತ್ತು.

  • ಸಿಮ್ ಕಾರ್ಡ್, ಒಟಿಟಿ ಸೇವೆಗೆ ನಕಲಿ ದಾಖಲೆ ಕೊಟ್ರೆ ಬೀಳುತ್ತೆ 50 ಸಾವಿರ ದಂಡ,1 ವರ್ಷ ಜೈಲು

    ಸಿಮ್ ಕಾರ್ಡ್, ಒಟಿಟಿ ಸೇವೆಗೆ ನಕಲಿ ದಾಖಲೆ ಕೊಟ್ರೆ ಬೀಳುತ್ತೆ 50 ಸಾವಿರ ದಂಡ,1 ವರ್ಷ ಜೈಲು

    ನವದೆಹಲಿ: ಮೊಬೈಲ್ ಸಿಮ್ ಕಾರ್ಡ್ (SIM Card) ಅನ್ನು ಪಡೆಯಲು ಹಾಗೂ ವಾಟ್ಸಪ್, ಟೆಲಿಗ್ರಾಮ್, ಸಿಗ್ನಲ್‌ಗಳಂತಹ ಒಟಿಟಿ ಪ್ಲಾಟ್‌ಪಾರ್ಮ್‌ಗಳಲ್ಲಿ (OTT Platform) ಸೇವೆಯನ್ನು ಪಡೆಯಲು ನಕಲಿ ದಾಖಲೆಗಳನ್ನು ಒದಗಿಸಿದರೆ ಅಂತಹವರಿಗೆ 1 ವರ್ಷದ ಜೈಲು ಹಾಗೂ 50,000 ರೂ. ದಂಡ ವಿಧಿಸುವ ಸಾಧ್ಯತೆ ಇದೆ.

    ಹೌದು, ಟೆಲಿಕಾಂ (Telecom) ಬಳಕೆದಾರರನ್ನು ಆನ್‌ಲೈನ್ ವಂಚನೆ (Online fraud) ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಂದ ರಕ್ಷಿಸುವ ಸಲುವಾಗಿ ಕಠಿಣ ಕ್ರಮಗಳನ್ನು ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

    ಸೈಬರ್ ವಂಚಕರು ಅಪರಾಧವನ್ನು ಮಾಡಲು ನಕಲಿ ದಾಖಲೆಗಳನ್ನು ಬಳಸಿ ಸಿಮ್ ಕಾರ್ಡ್‌ಗಳನ್ನು ಖರೀದಿಸುತ್ತಾರೆ. ಈ ಮೂಲಕ ಒಟಿಟಿ ಅಪ್ಲಿಕೇಶನ್‌ಗಳಲ್ಲಿ ತಮ್ಮ ಗುರುತನ್ನು ಮರೆ ಮಾಡಿ, ಜನರನ್ನು ವಂಚಿಸುತ್ತಾರೆ. ಇಂತಹ ವಂಚನೆಗಳಿಂದ ರಕ್ಷಿಸಲು ಭಾರತೀಯ ದೂರಸಂಪರ್ಕ ಮಸೂದೆ, 2022ರ ಕರಡು ಭಾಗವಾಗಿ ಭದ್ರತಾ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ದೂರಸಂಪರ್ಕ ಇಲಾಖೆ ಈಗ ಕರಡು ಮಸೂದೆಯನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಂದ ಅಭಿಪ್ರಾಯವನ್ನು ಆಹ್ವಾನಿಸಿದೆ‌. ಇದನ್ನೂ ಓದಿ: ದೇಶದ ಮೊದಲ 5G ಸೇವೆ ಲಭ್ಯವಿರುವ ವಿಮಾನ ನಿಲ್ದಾಣ ಯಾವುದು ಗೊತ್ತಾ?

    ಕರಡು ಮಸೂದೆಯ ಸೆಕ್ಷನ್ 4ರ ಅಡಿಯಲ್ಲಿ ಉಪ-ವಿಭಾಗ 7ರ ಪ್ರಕಾರ, ತಪ್ಪು ಗುರುತು ನೀಡುವುದರಿಂದ 1 ವರ್ಷದ ಜೈಲು, 50,000 ರೂ. ವರೆಗೆ ದಂಡ ಹಾಗೂ ದೂರಸಂಪರ್ಕ ಸೇವೆಗಳಿಂದ ಅಮಾನತಾಗಬಹುದು. ಈ ಅಪರಾಧ ಎಸಗಿದವರನ್ನು ಪೊಲೀಸರು ಯಾವುದೇ ವಾರಂಟ್ ಅಥವಾ ನ್ಯಾಯಾಲಯದ ಅನುಮತಿಯಿಲ್ಲದೇ ಬಂಧಿಸಬಹುದಾಗಿದೆ. ಇದನ್ನೂ ಓದಿ: ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    Live Tv
    [brid partner=56869869 player=32851 video=960834 autoplay=true]

  • ಮಟಮಟ ಮಧ್ಯಾಹ್ನ ಬರ್ತಾರೆ – ಫೇಕ್ ದಾಖಲೆ ಹಿಡಿದು ಮನೆ ಧ್ವಂಸ ಮಾಡ್ತಾರೆ

    ಮಟಮಟ ಮಧ್ಯಾಹ್ನ ಬರ್ತಾರೆ – ಫೇಕ್ ದಾಖಲೆ ಹಿಡಿದು ಮನೆ ಧ್ವಂಸ ಮಾಡ್ತಾರೆ

    ಬೆಂಗಳೂರು: ಕೊರೊನಾ ಸಮಯದಲ್ಲಿಯೇ ಡೆಡ್ಲಿ ಗ್ಯಾಂಗ್ ಒಂದು ಸಿಲಿಕಾನ್ ಸಿಟಿಗೆ ಎಂಟ್ರಿಯಾಗಿದೆ. ಸುಳ್ಳು ದಾಖಲೆ ಸೃಷ್ಟಿಸಿ ಮನೆ ಧ್ವಂಸ ಮಾಡಿದ ಘಟನೆ ಬೆಂಗಳೂರಿನ ಪ್ಯಾಲೇಸ್ ಗುಟ್ಟಹಳ್ಳಿ ಮುನೇಶ್ವರ ಟೆಂಪಲ್ ಬಳಿ ನಡೆದಿದೆ.

    ಹೌದು. ಖದೀಮರ ತಂಡವೊಂದು ಮಟಮಟ ಮಧ್ಯಾಹ್ನವೇ ಬಂದು ಜೆಸಿಬಿ ಮೂಲಕ ಮನೆ ಕೆಡವಿ ಮನೆಯಲ್ಲಿದ್ದ ಹಣ, ಒಡವೆ, ವಸ್ತುಗಳನ್ನ ಕದ್ದೊಯ್ದಿದೆ. ಈ ವೇಳೆ ಪ್ರಶ್ನೆ ಮಾಡಿದ ಮನೆಯಲ್ಲಿದ್ದ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಸಿದ್ದಲ್ಲದೆ, ಹಲ್ಲೆ ಮಾಡಿದ ಆರೋಪ ಕೂಡ ಕೇಳಿ ಬಂದಿದೆ.

    ಸದ್ಯ ಮನೆ ಕಳೆದುಕೊಂಡು ಕುಟುಂಬ ಬೀದಿಗೆ ಬಿದ್ದಿದ್ದು, ರಾತ್ರಿ ಇಡೀ ಮಹಿಳೆಯರು ಬೀದಿಯಲ್ಲೇ ಮಲಗಿದ್ದಾರೆ. ಈ ಸಂಬಂಧ ಎಫ್‍ಐಆರ್ ಕೊಟ್ಟರೂ ವೈಯಾಲಿಕಾವಲ್ ಪೊಲೀಸರು ಸ್ಥಳಕ್ಕೆ ಬಂದಿಲ್ಲ ಎಂದು ಕುಟುಂಬ ಪೊಲೀಸರ ವಿರುದ್ಧವೂ ಆಕ್ರೋಶ ಹೊರಹಾಕಿದೆ.

    ಗಂಗಮ್ಮ (53) ಮತ್ತು ಅವರ ಮಕ್ಕಳು ಪ್ಯಾಲೆಸ್ ಗುಟ್ಟಹಳ್ಳಿಯ 4ನೇ ಕ್ರಾಸ್ ಮುನೇಶ್ವರ ಬ್ಲ್ಯಾಕ್ ನಲ್ಲಿ ಕಳೆದ 40 ವರ್ಷಗಳಿಂದ ವಾಸವಿದ್ದರು. 2008 ರಲ್ಲಿ ಕೃಷ್ಣಸ್ವಾಮಿ ಪಿಳ್ಳೆ ಎಂಬವರು ಈ ಮನೆಯನ್ನ ಗಂಗಮ್ಮ ಅವರಿಗೆ ಜಿಪಿಎ ಮಾಡಿಕೊಟ್ಟಿದ್ರು. ಈ ಸ್ವತ್ತಿನ ಮೇಲೆ ಸಿಟಿ ಸಿವಿಲ್ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಈ ನಡುವೆಯೇ ಭಾನುವಾರ ಮಧ್ಯಾಹ್ನ ವೇಣು, ರಮೇಶ್, ಮಹೇಶ್ ಎಂಬವರು ಮನೆಗೆ ನುಗ್ಗಿ, ಮನೆಯಲ್ಲಿರುವ ವಸ್ತುಗಳನ್ನ ಕದ್ದು ಜೆಸಿಬಿಯಿಂದ ಮನೆಯನ್ನ ನೆಲಸಮ ಮಾಡಿದ್ದಾರೆ.

    ಇತ್ತ ಘಟನಾ ಸ್ಥಳಕ್ಕೆ ಪಬ್ಲಿಕ್ ಟಿವಿ ಬರುತ್ತಿದ್ದಂತೆ ಪೊಲೀಸರು ಎದ್ನೋ ಬಿದ್ನೋ ಅಂತ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆರೋಪಿಗಳನ್ನ ಯಾಕೆ ಇನ್ನೂ ಬಂಧಿಸಿಲ್ಲ ಎಂದು ಸಬ್ ಇನ್ಸ್ ಪೆಕ್ಟರ್ ಗೆ ಇನ್ಸ್‍ಪೆಕ್ಟರ್ ಕ್ಲಾಸ್ ಮಾಡದ ಪ್ರಸಂಗವೂ ನಡೆಯಿತು.

    ಮಹಿಳೆಯ ಮೇಲೆ ಹಲ್ಲೆ ಮಾಡಿ ಮನೆಯಲ್ಲಿ ಅಡಗಿ ಕೂತಿದ್ದ ಮೊದಲ ಆರೋಪಿ ವೇಣುವನ್ನು ವಶಕ್ಕೆ ಪಡೆದು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಎರಡನೇ ಆರೋಪಿ ಮಹೇಶ್, ಮೂರನೇ ಆರೋಪಿ ಮಹೇಶ್ ಪರಾರಿಯಾಗಿದ್ದಾರೆ. ಎರಡನೇ ಆರೋಪಿ ಮಹೇಶ್ ನಕಲಿ ದಾಖಲೆಗಳನ್ನ ಮಾಡಿಕೊಡುವ ವಿಚಾರದಲ್ಲಿ ಸಿಸಿಬಿಯಿಂದ ಅರೆಸ್ಟ್ ಆಗಿದ್ದ ಎಂಬ ಆರೋಪವಿದೆ.

    ಘಟನೆ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಕಲಿ ದಾಖಲೆ ಸೃಷ್ಟಿಸಿ ಸೇನೆ ಸೇರಲು ಯತ್ನ- ಇಬ್ಬರ ಬಂಧನ

    ನಕಲಿ ದಾಖಲೆ ಸೃಷ್ಟಿಸಿ ಸೇನೆ ಸೇರಲು ಯತ್ನ- ಇಬ್ಬರ ಬಂಧನ

    – ಎಂಟು ಆರೋಪಿಗಳ ಬಂಧನಕ್ಕೆ ಬಲೆ

    ಚಿತ್ರದುರ್ಗ: ಭಾರತೀಯ ಸೇನೆ ಹಾಗೂ ವಿವಿಧ ಸರ್ಕಾರಿ ಉದ್ಯೋಗ ಪಡೆಯಲು ಯುವಕರು ವಾಮ ಮಾರ್ಗ ಅನುಸರಿಸುತ್ತಿದ್ದು, ನಕಲಿ ದಾಖಲೆ ಸೃಷ್ಟಿಸಿ ಸೇನೆಗೆ ಸೇರಲು ಯತ್ನಿಸಿದ್ದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಇಬ್ಬರು ಖತರ್ನಾಕ್ ಖದೀಮರನ್ನು ಚಿತ್ರದುರ್ಗ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಮಹಾರಾಷ್ಟ್ರದ ರೇವನಾಳ್ ಗ್ರಾಮದ ಸಚಿನ್(23), ಬಸ್ಕರ್ ಗ್ರಾಮದ ಸಂತೋಷ್(23) ಬಂಧಿತ ಆರೋಪಿಗಳು, ಚಿತ್ರದುರ್ಗದ ನಿವಾಸಿಗಳೆಂಬಂತೆ ನಕಲಿ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯನ್ನು ಸೃಷ್ಟಿಸಿಕೊಂಡಿದ್ದರು. ಚಿತ್ರದುರ್ಗದ ಉತ್ಸವಾಂಬ ದೇವಾಲಯದ ಹಿಂಭಾಗದಲ್ಲಿ ವಾಸವಾಗಿರುವ ಮಹಲಿಂಗಾಚಾರ್ ಎನ್ನುವವರ ಮನೆಯಲ್ಲಿ ವಾಸವಾಗಿರುವುದಾಗಿ ವಿಳಾಸ ನೀಡಿದ್ದರು. ಪೊಲೀಸರು ಈ ವಿಳಾಸಕ್ಕೆ ಹೋಗಿ ಪರಿಶೀಲಿಸಿದಾಗ ಆ ಹೆಸರಿನವರು ಯಾರು ಇರಲಿಲ್ಲ. ಅಲ್ಲದೆ ಸಚಿನ್ ಹಾಗೂ ಸಂತೋಷ್ ಕೂಡ ಚಿತ್ರದುರ್ಗದವರಲ್ಲ ಎಂದು ದೃಢವಾಗಿರುತ್ತದೆ.

    ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಸೇನಾ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದರು. ಇವರಿಗೆ ಇನ್ನೂ ಏಳು ಜನ ಮಹಾರಾಷ್ಟ್ರ ಮೂಲದವರು ಹಾಗೂ ಓರ್ವ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಆಸಾಮಿ ಸಾಥ್ ನೀಡಿದ್ದು, ನಕಲಿ ದಾಖಲೆ ಸೃಷ್ಟಿಸಿಕೊಡಲು ಲಕ್ಷಾಂತರ ರೂ. ಹಣವನ್ನು ಸಹ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ತಲೆ ಮರೆಸಿಕೊಂಡಿರುವ ಇನ್ನುಳಿದ 8 ಜನ ಆರೋಪಿಗಳಿಗಾಗಿ ಚಿತ್ರದುರ್ಗ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

    ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ಪಡೆಯುತ್ತಿರುವ ದೊಡ್ಡ ಜಾಲವೇ ಇವರ ಹಿಂದೆ ಇರಬಹುದು ಎಂದು ಚಿತ್ರದುರ್ಗ ಎಸ್ಪಿ ರಾಧಿಕಾ ಶಂಕಿಸಿದ್ದಾರೆ. ಎಸ್ಪಿ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ನಯೀಮ್, ಪೊಲೀಸರಾದ ದಿವಾಕರ್, ಪ್ರಕಾಶ್ ಅವರು ತಂಡ ರಚಿಸಿಕೊಂಡು ಈ ಖತರ್ನಾಕ್ ಜಾಲವನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.

  • ಕೃಷ್ಣಾ ನದಿ ಪ್ರವಾಹದ ಸಂತ್ರಸ್ತರಿಗೆ ಅಧಿಕಾರಿಗಳಿಂದ ವಂಚನೆ

    ಕೃಷ್ಣಾ ನದಿ ಪ್ರವಾಹದ ಸಂತ್ರಸ್ತರಿಗೆ ಅಧಿಕಾರಿಗಳಿಂದ ವಂಚನೆ

    – ಕಂದಾಯ ಇಲಾಖೆ ಅಧಿಕಾರಿಗಳಿಂದ ನಕಲಿ ದಾಖಲೆ ಸೃಷ್ಟಿ

    ರಾಯಚೂರು: ಕೃಷ್ಣಾ ನದಿ ಪ್ರವಾಹದಿಂದ ಜನ ನೆಮ್ಮದಿಯನ್ನು ಕಳೆದುಕೊಂಡು ಐದು ತಿಂಗಳಾದರೂ ನೆರೆಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಆದರೆ ರಾಯಚೂರಿನಲ್ಲಿ ನೆರೆ ಸಂತ್ರಸ್ತರ ಹೆಸರಿನಲ್ಲಿ ಇನ್ಯಾರದೋ ಬ್ಯಾಂಕ್ ಖಾತೆಗಳಿಗೆ ಸಾವಿರಾರು ರೂಪಾಯಿ ಹಣ ಬಂದಿದೆ. ಅಧಿಕಾರಿಗಳ ವಂಚನೆಗೆ ಸಂತ್ರಸ್ತರು ಮಾತ್ರ ಮತ್ತೆ ಮತ್ತೆ ಸಂತ್ರಸ್ತರಾಗುತ್ತಿದ್ದಾರೆ.

    ದೇವದುರ್ಗದ ಬೊಮ್ಮನಾಳ, ರಾಯಚೂರಿನ ಎಚ್.ತಿಮ್ಮಾಪುರ ಗ್ರಾಮದ ನೂರಾರು ಜನ ಸಂತ್ರಸ್ತ ರೈತರಿಗೆ ಪರಿಹಾರ ವಿತರಣೆಯಲ್ಲಿ ವಂಚನೆಯಾಗಿದೆ. ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷರ ವಂಚನೆಯಿಂದ ಪಹಣಿ, ಆಧಾರ್ ಸಂಖ್ಯೆ ಸೇರಿದಂತೆ ಇತರೆ ದಾಖಲೆಗಳನ್ನೇ ಬದಲಿಸಿ ಬೇರೆಯವರ ಖಾತೆಗೆ ಹಣ ಜಮಾಮಾಡಿ ಡ್ರಾ ಮಾಡಿಕೊಳ್ಳಲಾಗಿದೆ. ನೆರೆಹಾವಳಿಗೆ ಸಂಬಂಧವೇ ಇಲ್ಲದ ಜಮೀನಿನ ರೈತರ ಖಾತೆಗೆ ಹಣ ಹಾಕಿ ಅಧಿಕಾರಿಗಳೇ ಡ್ರಾಮಾಡಿಕೊಂಡಿದ್ದಾರೆ. ಇದರಿಂದ ನಿಜವಾದ ಸಂತ್ರಸ್ತರಿಗೆ ವಂಚನೆಯಾಗಿದೆ. ಸರ್ಕಾರದ ಲಕ್ಷಾಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಅಂತ ರೈತ ಮುಖಂಡ ವಾಸುದೇವ ಮೇಟಿ ಆರೋಪಿಸಿದ್ದಾರೆ.

    ದೇವದುರ್ಗ ತಾಲೂಕಿನ ಬೊಮ್ಮನಾಳ ಗ್ರಾಮದ 150 ರೈತರಿಗೆ ಮೋಸವಾಗಿದೆ. ರಾಯಚೂರಿನ ಎಚ್.ತಿಮ್ಮಾಪುರ ಗ್ರಾಮದಲ್ಲೂ ಸಾಕಷ್ಟು ರೈತರಿಗೆ ವಂಚನೆಯಾಗಿದ್ದು, ಈಗ ಬೆಳಕಿಗೆ ಬರುತ್ತಿದೆ. ಜಿಲ್ಲೆಯಲ್ಲಿ ಒಟ್ಟು 5400 ಜನ ರೈತರು ನೆರೆ ಹಾವಳಿಯಿಂದ ಬೆಳೆ ಕಳೆದುಕೊಂಡಿದ್ದು 18 ಜನರಿಗೆ ಮಾತ್ರ ಜಿಲ್ಲಾಡಳಿತ ದಾಖಲೆ ಕೊರತೆಯಿಂದ ಹಣ ಜಮಾ ಮಾಡಿಲ್ಲ. ಆದರೆ ಅಧಿಕಾರಿಗಳ ಗೋಲ್ ಮಾಲ್ ನಿಂದ ಕಂಡಕಂಡವರ ಖಾತೆಗೆ ಹಣಹೋಗಿದ್ದು ದುರುಪಯೋಗ ಮಾಡಿಕೊಳ್ಳಲಾಗಿದೆ. ರೈತರಿಗಾದ ವಂಚನೆಯನ್ನು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಒಪ್ಪಿಕೊಂಡಿದ್ದು ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

    ಒಟ್ಟಿನಲ್ಲಿ ಸಂತ್ರಸ್ತರ ಪರಿಹಾರದ ಹಣದ ಮೇಲೂ ಭ್ರಷ್ಟ ಅಧಿಕಾರಿಗಳು ಕಣ್ಣಾಕಿರುವುದು ದುರಂತ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ. ನೆರೆ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರವನ್ನ ಕೂಡಲೇ ಒದಗಿಸಬೇಕಿದೆ.

  • ನಕಲಿ ದಾಖಲೆ ಸೃಷ್ಟಿಸಿ 17 ಎಕ್ರೆ ಗುಳುಂ – 2 ಕೋಟಿ ರೂ. ಸಾಲ ಮಾಡಿ ವಂಚನೆ

    ನಕಲಿ ದಾಖಲೆ ಸೃಷ್ಟಿಸಿ 17 ಎಕ್ರೆ ಗುಳುಂ – 2 ಕೋಟಿ ರೂ. ಸಾಲ ಮಾಡಿ ವಂಚನೆ

    ಹುಬ್ಬಳ್ಳಿ: ನಕಲಿ ದಾಖಲೆ ಸೃಷ್ಟಿಸಿ ಮಹಿಳೆಯರ ಹೆಸರಿನಲ್ಲಿದ್ದ 17 ಎಕ್ರೆ 19 ಗುಂಟೆ ಜಮೀನನ್ನು ಬೇರೆ ಅವರ ಹೆಸರಿಗೆ ವರ್ಗಾಯಿಸಿ, ಕೋಟ್ಯಂತರ ರೂಪಾಯಿ ಸಾಲ ಮಾಡಿ ವಂಚಿಸಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

    ಬೆಂಗಳೂರಿನಲ್ಲಿ ವಾಸವಾಗಿರುವ ಶೋಭಾ, ಅನ್ನಪೂರ್ಣ, ಜಯಶ್ರೀ ಎಂಬವರ ಹೆಸರಿನಲ್ಲಿದ್ದ ಜಮೀನನ್ನ ನಕಲಿ ದಾಖಲೆ ಸೃಷ್ಟಿಸಿ ಭೂ ವರ್ಗಾವಣೆ ಮಾಡಿ ವಂಚನೆ ಮಾಡಲಾಗಿದೆ ಎಂದು ಮಹಿಳೆಯರು ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೇಶ್ವಾಪುರದ ಬಸವರಾಜ ಕಮತಗಿ, ಆನಂದ ಕಮತಗಿ, ಸುಲೋಚನಾ ಕಮತಗಿ, ವಿಶ್ವನಾಥ ಕಮತಗಿ, ಗಿರಿಜಾ ಪಾವಟೆ ಅವರ ವಿರುದ್ಧ ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

    ಆರೋಪಿಗಳು ಹುಬ್ಬಳ್ಳಿ ಉಪ ನೋಂದಣಿ ಕಚೇರಿಯಲ್ಲಿ ಖರೀದಿ ಕಾಗದ ಪತ್ರ ಮಾಡಿಕೊಂಡು ತಮ್ಮ ಹೆಸರಿಗೆ ಜಮೀನನ್ನು ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಕಲಿ ದಾಖಲೆ ಹಾಗೂ ಸಹಿ ಮಾಡಿ ಶೋಭಾ, ಅನ್ನಪೂರ್ಣ, ಜಯಶ್ರೀ ಹೆಸರಿನಲ್ಲಿ ಬರೋಬ್ಬರಿ 2 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೇಶ್ವಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಇದೀಗ ನಕಲಿ ದಾಖಲೆ ಹಾಗೂ ಬ್ಯಾಂಕ್ ಸಾಲದ ವಿವರದ ಮೇಲೆ ತನಿಖೆ ಆರಂಭಿಸಿದ್ದಾರೆ.

  • 70 ಕೋಟಿ ಮೌಲ್ಯದ ಜಾಗಕ್ಕಾಗಿ ಬ್ರಿಟಿಷ್ ಅಧಿಕಾರಿಯನ್ನೇ ಸೃಷ್ಟಿಸಿದ ಉದ್ಯಮಿ

    70 ಕೋಟಿ ಮೌಲ್ಯದ ಜಾಗಕ್ಕಾಗಿ ಬ್ರಿಟಿಷ್ ಅಧಿಕಾರಿಯನ್ನೇ ಸೃಷ್ಟಿಸಿದ ಉದ್ಯಮಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭೂಮಾಫಿಯಾವನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯಪೂರ್ವಕ್ಕೂ ಮುನ್ನ ಬೆಂಗಳೂರು ಹಾಗೂ ದೆಹಲಿ ಭಾಗದಲ್ಲಿ ಮಿಲಿಟರಿ ಅಧಿಕಾರಿಯೊಬ್ಬರಿಗೆ ಸೇರಿದ್ದ ಜಾಗವನ್ನು ರಿಯಲ್ ಎಸ್ಟೇಟ್ ಮಾಫಿಯಾದವರು ಲಪಟಾಯಿಸಲು ರೋಚಕ ಸ್ಕೆಚ್ ಹಾಕಿದ ಸತ್ಯಾಂಶ ಬಯಲಾಗಿದೆ.

    ವಿಚಿತ್ರ ಅಂದರೆ ಮಾಲೀಕನಿಲ್ಲದ ಈ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಬೇಕಾಗಿದ್ದ ನೋಂದಣಿ ಅಧಿಕಾರಿಗಳು ಖಾಲಿ ಪೇಪರ್ ಮೇಲೆಯೇ ಸಹಿ ಮಾಡಿಕೊಟ್ಟು ರಿಯಲ್ ಎಸ್ಟೇಟ್ ಮಾಫಿಯದವರಿಗೆ ಜಾಗವನ್ನು ಧಾರೆ ಎರೆದಿದ್ದಾರೆ.

    ಏನಿದು ಪ್ರಕರಣ?
    ಬ್ರಿಟಿಷ್ ಅಧಿಕಾರಿ ಸ್ಕ್ಯಾಡರ್ 1943ರಲ್ಲಿ ವೈಟ್ ಫೀಲ್ಡ್ ನಲ್ಲಿ 36 ಗುಂಟೆ ಜಾಗ ಖರೀದಿಸಿದ್ದರು. ತದನಂತರ ಅವರು ಭಾರತ ಬಿಟ್ಟು ಹೋಗಿದ್ದಾರೆ. ಆದರೆ ಜಾಗದ ದಾಖಲೆಗಳು ಭಾರತದಲ್ಲಿಯೇ ಇದ್ದು, ಈ ಖಾಲಿ ಸೈಟ್‍ನ್ನು ಕಂಡ ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ಮಾಲೀಕನ ಜಾಡು ಹಿಡಿದು, ಸ್ಕ್ಯಾಡರ್ ಹೆಸರಿನಲ್ಲಿ ನಕಲಿ ವ್ಯಕ್ತಿಯನ್ನು ಸೃಷ್ಟಿ ಮಾಡಿ ಜಾಗ ಲಪಟಾಯಿಸಲು ಹೊರಟ ಬಗ್ಗೆ ಬಯಲಾಗಿದೆ. ಅಷ್ಟೇ ಅಲ್ಲದೇ ಮಹದೇವಪುರ ಉಪನೋಂದಾಣಿಧಿಕಾರಿಗಳು ಪ್ರಮಾಣ ಪತ್ರದ ಮೇಲೆ ಯಾವುದೇ ದಾಖಲೆ ಫಿಲ್ ಮಾಡದೇ ಸಹಿ ಮಾಡಿ ಕೊಟ್ಟಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಪರಮೇಶ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬಹಿರಂಗ ಪಡಿಸಿದ್ದಾರೆ.

    ಸರ್ಕಾರದ ವಶಕ್ಕೆ ಹೋಗಬೇಕಾಗಿದ್ದ ಭರ್ತಿ 70 ಕೋಟಿ ರೂ. ಮೌಲ್ಯದ ಜಾಗ ಈ ರೀತಿ ಸಿಕ್ಕಸಿಕ್ಕವರ ಕೈ ಸೇರುವುದು ಸರಿಯಲ್ಲ, ಮುಖ್ಯವಾಗಿ ಕಂದಾಯ ಸಚಿವರು ಈ ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಶಶಿಕುಮಾರ್ ಕೂಡ ಒತ್ತಾಯಿಸಿದ್ದಾರೆ.