Tag: Faf du Plessis

  • ಫ್ಯಾನ್ಸ್‌ಗೆ ಶಾಕ್ ಕೊಟ್ಟ ಆರ್‌ಸಿಬಿ – ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಔಟ್?

    ಫ್ಯಾನ್ಸ್‌ಗೆ ಶಾಕ್ ಕೊಟ್ಟ ಆರ್‌ಸಿಬಿ – ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಔಟ್?

    ಬೆಂಗಳೂರು: ಐಪಿಎಲ್ (IPL) ಮೆಗಾ ಹರಾಜಿಗೂ ಮುನ್ನವೇ ಆರ್‌ಸಿಬಿ ಇಬ್ಬರು ವಿದೇಶಿ ಆಟಗಾರರನ್ನು ಕೈ ಬಿಡುವ ಸಾಧ್ಯತೆಯಿದೆ. ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದ್ದು, ಆರ್‌ಸಿಬಿ (RCB) ಫ್ಯಾನ್ಸ್‌ಗೆ ಆಘಾತ ನೀಡಿದೆ.

    ಕಳೆದ ಐಪಿಎಲ್‍ನಲ್ಲಿ ಫಾಫ್ ಬ್ಯಾಟಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಮ್ಯಾಕ್ಸ್‌ವೆಲ್ ನಿರೀಕ್ಷೆಯ ಪ್ರಕಾರ ಪ್ರದರ್ಶನ ನೀಡಿರಲಿಲ್ಲ. ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಭಾರಿ ವಿಫಲರಾದರು. ಆದರೂ ತಂಡದ ಯಶಸ್ಸಿನಲ್ಲಿ ಇಬ್ಬರೂ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು.

    ಇಬ್ಬರು ಆಟಗಾರರ ಕೈಬಿಟ್ಟ ಬಳಿಕ ತಂಡಕ್ಕೆ ಕೆ.ಎಲ್ ರಾಹುಲ್ ಸೇರ್ಪಡೆಯಾಗಬಹುದು ಎಂದು ವರದಿ ಪ್ರಕಟವಾಗಿದ್ದರೂ ಹರಾಜು ನಡೆಯುವ ವೇಳೆ ಅಧಿಕೃತವಾಗಿ ತಿಳಿದು ಬರಲಿದೆ.

    ಆರ್‌ಸಿಬಿಯು ಕ್ಯಾಮರೂನ್ ಗ್ರೀನ್ ಮತ್ತು ವಿಲ್ ಜ್ಯಾಕ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ ಬಿಡುಗಡೆ ಮಾಡಿದರೆ ಬೇರೆ ತಂಡಗಳು ಇವರನ್ನು ಖರೀದಿಸುವ ಸಾಧ್ಯತೆ ಕಡಿಮೆಯಿದೆ.

    ಡು ಪ್ಲೆಸಿಸ್‍ಗೆ ಈಗಾಗಲೇ 40 ವರ್ಷವಾಗಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಹೆಚ್ಚು ವಯಸ್ಸು ಆಗದೇ ಇದ್ದರೂ ಎರಡು ತಿಂಗಳಲ್ಲಿ 36 ವರ್ಷ ಪೂರೈಸಲಿದ್ದಾರೆ. ಅವರು ಕ್ರಿಕೆಟ್‍ನಲ್ಲಿ ಉತ್ತಮ ಕೌಶಲ್ಯಗಳ ಹೊರತಾಗಿಯೂ ಸಾಕಷ್ಟು ಋತುಗಳಲ್ಲಿ ವಿಫಲರಾಗಿದ್ದಾರೆ. ಇದೇ ಕಾರಣಕ್ಕೆ ಈ ಇಬ್ಬರೂ ಆಟಗಾರರ ವೃತ್ತಿ ಜೀವನ ಅಂತ್ಯವಾಗುವ ಸಾಧ್ಯತೆ ಇದೆ.

  • ರಾಜಸ್ಥಾನ್‌ಗೆ ಇಂದು ರಾಯಲ್‌ ಚಾಲೆಂಜ್‌ – ಮೋದಿ ಅಂಗಳದಲ್ಲಿ ಬೆಂಗಳೂರು ಬಾಯ್ಸ್‌ ಕೈಹಿಡಿಯುತ್ತಾ ಗೆಲುವು?

    ರಾಜಸ್ಥಾನ್‌ಗೆ ಇಂದು ರಾಯಲ್‌ ಚಾಲೆಂಜ್‌ – ಮೋದಿ ಅಂಗಳದಲ್ಲಿ ಬೆಂಗಳೂರು ಬಾಯ್ಸ್‌ ಕೈಹಿಡಿಯುತ್ತಾ ಗೆಲುವು?

    ಅಹಮದಾಬಾದ್: ಚೊಚ್ಚಲ ಐಪಿಎಲ್‌ ಆವೃತ್ತಿಯ ಚಾಂಪಿಯನ್‌ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB vs RR) ತಂಡ ಇಂದು (ಬುಧವಾರ) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ.

    ಉಭಯ ತಂಡಗಳು ಇದುವರೆಗಿನ ಐಪಿಎಲ್ (IPL 2024) ಆವೃತ್ತಿಯಲ್ಲಿ ಒಟ್ಟು 31 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್ಸಿಬಿ 15, ರಾಜಸ್ಥಾನ್ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 3 ಪಂದ್ಯಗಳು ಫಲಿತಾಂಶ ಇಲ್ಲದೇ ರದ್ದಾಗಿದೆ. ರಾಜಸ್ಥಾನ್‌ ರಾಯಲ್ಸ್‌ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದು ಮಾಜಿ ಚಾಂಪಿಯನ್‌ ಎನ್ನಿಸಿಕೊಂಡಿದ್ದರೆ ಮೂರು ಬಾರಿ ಫೈನಲ್‌ ಪ್ರವೇಶಿಸಿದ್ದ ಆರ್‌ಸಿಬಿ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಇದನ್ನೂ ಓದಿ: ಫ್ಲೆಮಿಂಗ್‌ ಟೀಂ ಇಂಡಿಯಾ ಕೋಚ್‌ ಆಗ್ತಾರಾ? – ಧೋನಿ ಸಹಾಯ ಕೇಳಿದ ಬಿಸಿಸಿಐ

    ಸೇಡು ತೀರಿಸಿಕೊಳ್ಳಲಿದೆಯೇ ಆರ್‌ಸಿಬಿ?
    ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2022ರಲ್ಲಿ ನಡೆದಿದ್ದ ಐಪಿಎಲ್ ಟೂರ್ನಿಯ ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲೇ ನಡೆದಿತ್ತು. ಪಂದ್ಯದಲ್ಲಿ ರಾಜಸ್ಥಾನ್ 7 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತ್ತು. ಇದೀಗ ಅಂದಿನ ಈ ಸೋಲಿಗೆ ಆರ್ಸಿಬಿ ಈ ಬಾರಿಯ ಎಲಿಮಿನೇಟರ್ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

    ಐಪಿಎಲ್‌ನಲ್ಲಿ ಆರ್‌ಸಿಬಿ ಸಾಧನೆ:
    16 ಆವೃತ್ತಿ ಕಳೆದರೂ ಈವರೆಗೆ ಒಂದು ಬಾರಿಯೂ ಟ್ರೋಫಿ ಗೆಲ್ಲದ ಆರ್‌ಸಿಬಿ 9 ಬಾರಿ ಪ್ಲೇ ಆಫ್‌ ಪ್ರವೇಶಿಸಿದೆ. 2009, 2011 ಹಾಗೂ 2016ರಲ್ಲಿ ಮೂರು ಬಾರಿ ಫೈನಲ್‌ ಪ್ರವೇಶಿಸಿದೆ. ಆದ್ರೆ ಈ ವರೆಗೆ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ.

    ರಾಜಸ್ಥಾನ್‌ ರಾಯಲ್ಸ್‌ ಸಾಧನೆ:
    2008ರ ಐಪಿಎಲ್‌ ಉದ್ಘಾಟನಾ ಆವೃತ್ತಿಯಲ್ಲೇ ಚಾಂಪಿಯನ್‌ ಆಗಿ ಹೊರಹೊಮ್ಮಿದ ತಂಡ ರಾಜಸ್ಥಾನ್‌ ರಾಯಲ್ಸ್‌. ಇದಾದ ಬಳಿಕ 2022ರ ಆವೃತ್ತಿಯಲ್ಲಿ 2ನೇ ಬಾರಿಗೆ ಫೈನಲ್‌ ಪ್ರವೇಶಿಸಿ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. 2024ರ ಆವೃತ್ತಿಯಲ್ಲಿ ಲೀಗ್‌ನಲ್ಲಿ 3ನೇ ಸ್ಥಾನ ಪಡೆಯುವ ಮೂಲಕ 6ನೇ ಬಾರಿ ಫೈನಲ್‌ ಪ್ರವೇಶಿಸಿದೆ. ಇದನ್ನೂ ಓದಿ: 4ನೇ ಬಾರಿಗೆ ಫೈನಲ್‌ಗೆ – ಕೋಲ್ಕತ್ತಾ ಅಬ್ಬರಕ್ಕೆ ಮುಳುಗಿದ ಸನ್‌ ರೈಸರ್ಸ್‌

  • ಆರ್‌ಸಿಬಿ ‘ರಾಯಲ್‌’ ಆಗಿ ಪ್ಲೇ-ಆಫ್‌ಗೆ; ಚೆನ್ನೈ ಮನೆಗೆ

    ಆರ್‌ಸಿಬಿ ‘ರಾಯಲ್‌’ ಆಗಿ ಪ್ಲೇ-ಆಫ್‌ಗೆ; ಚೆನ್ನೈ ಮನೆಗೆ

    ಬೆಂಗಳೂರು: ಪ್ಲೇ-ಆಫ್‌ ಪ್ರವೇಶ ಕಾರಣಕ್ಕೆ ಕೊನೆ ಕ್ಷಣದವರೆಗೂ ರೋಚಕತೆಯಿಂದ ಕೂಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಿದ ಬೆಂಗಳೂರು ತಂಡವು ರಾಯಲ್‌ ಆಗಿ ಪ್ಲೇ-ಆಫ್‌ಗೆ ಎಂಟ್ರಿ ಕೊಟ್ಟಿದೆ. ಈ ಸಲ ಕಪ್‌ ನಮ್ದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

    ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಪದ್ಯದಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿ 27 ರನ್‌ಗಳ ಗೆಲುವು ದಾಖಲಿಸಿತು. ಒಂದು ವೇಳೆ ಪಂದ್ಯ ಸೋತು 201 ರನ್‌ ಗಳಿಸಿದ್ದರೂ ಚೆನ್ನೈ ಪ್ಲೇ-ಆಫ್‌ ಪ್ರವೇಶಿಸಲು ಸಾಧ್ಯವಾಗುತ್ತಿತ್ತು. ಆದರೆ ಆರ್‌ಸಿಬಿ ಬೌಲರ್‌ಗಳ ಉತ್ತಮ ಪ್ರದರ್ಶನದಿಂದ ಚೆನ್ನೈ ಪ್ಲೇ-ಆಫ್‌ ಕನಸಿಗೂ ತಣ್ಣೀರು ಬಿದ್ದಿತು. ಕೇವಲ 10 ರನ್‌ಗಳ ಅಂತರದಲ್ಲಿ ಗಾಯಕ್‌ವಾಡ್‌ ಪಡೆ ಪ್ಲೇ-ಆಫ್‌ನಿಂದ ಮುಗ್ಗರಿಸಿತು.

    ಬೆಂಗಳೂರು ತಂಡ ನೀಡಿದ್ದ 219 ರನ್‌ಗಳ ಗುರಿ ಬೆನ್ನತ್ತಿದ ಸಿಎಸ್‌ಕೆ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 191 ರನ್‌ ಗಳಿಸಿ ಪಂದ್ಯ ಸೋತು ಪ್ಲೇ-ಆಫ್‌ನಿಂದ ಹೊರಬಿದ್ದಿತು. ತವರಿನಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಭರ್ಜರಿ ಗೆಲುವಿನ ಗಿಫ್ಟ್‌ ನೀಡಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗೆ 5 ವಿಕೆಟ್‌ ನಷ್ಟಕ್ಕೆ 218 ರನ್‌ ಗಳಿಸಿತು. ಉತ್ತಮ ಶುಭಾರಂಭ ನೀಡಿದ ಆರ್‌ಸಿಬಿ ಬ್ಯಾಟರ್‌ಗಳು ಚೆನ್ನೈ ಬೌಲರ್‌ಗಳನ್ನು ದಂಡಿಸಿದರು.

    3 ಓವರ್‌ಗೆ 31 ರನ್‌ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಕೆಲಹೊತ್ತಿನಲ್ಲಿ ಮತ್ತೆ ಪಂದ್ಯ ಪುನಾರಂಭವಾಯಿತು. 6.4 ಓವರ್‌ನಲ್ಲಿ ಕೊಹ್ಲಿ ಮತ್ತು ಡು ಪ್ಲೆಸಿಸ್‌ 50 ರನ್‌ಗಳ ಜೊತೆಯಾಟವಾಡಿದರು. ಹೊಡಿಬಡಿ ಆಟವಾಡುತ್ತಿದ್ದ ಕೊಹ್ಲಿ ಅರ್ಧಶತಕ ವಂಚಿತರಾಗಿ (47 ರನ್‌, 29 ಬಾಲ್‌, 3 ಫೋರ್‌, 4 ಸಿಕ್ಸರ್‌) ಔಟಾದರು.

    ಇತ್ತ ಜವಾಬ್ದಾರಿಯುತ ಆಟವಾಡಿದ ಡು ಪ್ಲೆಸಿಸ್‌ ಅರ್ಧಶತಕ (54 ರನ್‌, 39 ಬಾಲ್‌, 3 ಫೋರ್‌, 3 ಸಿಕ್ಸರ್‌) ಬಾರಿಸಿದರು. ಆದರೆ ವಿವಾದಾತ್ಮಕ ರನೌಟ್‌ ತೀರ್ಪಿಗೆ ಔಟ್‌ ಆಗಿ ಪೆವಿಲಿಯನ್‌ ಸೇರಿದರು.

    ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್‌ ಮಾಡಿದ ರಜತ್‌ ಪಾಟೀದಾರ್‌ 41 ರನ್‌ ಸಿಡಿಸಿ (23 ಬಾಲ್‌, 2 ಫೋರ್‌, 4 ಸಿಕ್ಸರ್‌) ಸವಾಲಿನ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು. ಕ್ರೀಸ್‌ಗೆ ಬಂದ ಯಾವೊಬ್ಬ ಬ್ಯಾಟರ್‌ ಕೂಡ ನಿರಾಸೆ ಮೂಡಿಸಲಿಲ್ಲ. ಕ್ಯಾಮರೂನ್‌ ಗ್ರೀನ್‌ (38), ದಿನೇಶ್‌ ಕಾರ್ತಿಕ್‌ (14) ರನ್‌ ಗಳಿಸಿದರು.

    ಫಾರ್ಮ್‌ ಕಳೆದುಕೊಂಡು ನಿರಾಸೆ ಮೂಡಿಸಿದ್ದ ಮ್ಯಾಕ್ಸ್‌ವೆಲ್‌ ಇಂದಿನ ಪಂದ್ಯದಲ್ಲಿ ಸ್ವಲ್ಪ ಹೊತ್ತು ಆಡಿದರೂ ಗಮನ ಸೆಳೆದರು. ಕೇವಲ 5 ಬಾಲ್‌ಗಳಿಗೆ 2 ಫೋರ್‌ ಮತ್ತು 1 ಸಿಕ್ಸ್‌ನೊಂದಿಗೆ 16 ರನ್‌ ಸಿಡಿಸಿದರು. ದೊಡ್ಡ ಹೊಡೆತಕ್ಕೆ ಮುಂದಾಗಿ ಧೋನಿಗೆ ಕ್ಯಾಚ್‌ ನೀಡಿದರು. ನೋಬಾಲ್‌ ಮತ್ತು ವೈಡ್‌ ಸೇರಿ ಆರ್‌ಸಿಬಿಗೆ 8 ರನ್‌ ಹೆಚ್ಚುವರಿಯಾಗಿ ಬಂತು. ಚೆನ್ನೈ ಪರ ಶಾರ್ದೂಲ್ ಠಾಕೂರ್ 2 ಹಾಗೂ ತುಷಾರ್ ದೇಶಪಾಂಡೆ, ಮಿಚೆಲ್ ಸ್ಯಾಂಟ್ನರ್ ತಲಾ 1 ವಿಕೆಟ್‌ ಕಿತ್ತರು.

    ಆರ್‌ಸಿಬಿ ನೀಡಿದ 219 ರನ್‌ ಗುರಿ ಬೆನ್ನತ್ತಿದ ಸಿಎಸ್‌ಕೆಗೆ ಆರಂಭಿಕ ಆಘಾತ ಎದುರಾಯಿತು. ಚೆನ್ನೈ ರನ್‌ ಖಾತೆ ತೆರೆಯುವ ಮೊದಲೇ ನಾಯಕ ಗಾಯಕ್ವಾಡ್‌ ಔಟಾಗುವ ಮೂಲಕ ವಿಕೆಟ್‌ ಖಾತೆ ತೆರೆಯಿತು. ಮೊದಲ ಪವರ್‌ ಪ್ಲೇ ಮುಕ್ತಾಯಕ್ಕೆ 58 ರನ್‌ ಗಳಿಸಿದ್ದ ಸಿಎಸ್‌ಕೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.

    ಈ ಸಂದರ್ಭದಲ್ಲಿ ರಚಿನ್‌ ರವೀಂದ್ರ ಮತ್ತು ಅಜಿಂಕ್ಯ ರಹಾನೆ ಜೊತೆಯಾಟ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿತು. ಈ ಜೋಡಿ 41 ಬಾಲ್‌ಗಳಿಗೆ 61 ರನ್‌ಗಳ ಜೊತೆಯಾಟವಾಡಿತು. ರಚಿನ್‌ ಅರ್ಧಶತಕ ಗಳಿಸಿ (61 ರನ್‌, 37 ಬಾಲ್‌, 5 ಫೋರ್‌, 3 ಸಿಕ್ಸರ್‌) ಮಿಂಚಿದರು. ಅಜಿಂಕ್ಯ 33 ರನ್‌ಗಳಿಸಿ ಔಟಾದರು. ಈ ವೇಳೆ ರಚಿನ್‌ಗೆ ದುಬೆ ಜೊತೆಯಾದರು. ಜವಾಬ್ದಾರಿಯುತ ಆಟವಾಡುತ್ತಾ ಬಂದ ರಚಿನ್‌ 2 ರನ್‌ ಕದಿಯಲು ಮುಂದಾಗಿ ರನೌಟ್‌ ಆದರು. ಇವರ ಬೆನ್ನಲ್ಲೇ ಶಿವಂ ದುಬೆ ಕ್ಯಾಚ್‌ ನೀಡಿ ಹೊರನಡೆದಿದ್ದು ಆರ್‌ಸಿಬಿ ನಿಟ್ಟುಸಿರು ಬಿಡುವಂತಾಯಿತು.

    ಈ ವೇಳೆ ಕ್ರೀಜ್‌ಗೆ ಬಂದ ಜಡೇಜಾ ಹೊಡಿಬಡಿ ಆಟವಾಡಿ ಆರ್‌ಸಿಬಿ ಬೌಲರ್‌ಗಳನ್ನು ಕಾಡಿದರು. 22 ಬಾಲ್‌ಗಳಿಗೆ 42 ರನ್‌ ಬಾರಿಸಿ ಪ್ಲೇ-ಆಫ್‌ ಭರವಸೆ ಮೂಡಿಸಿದ್ದರು. ಅವರಿಗೆ ಮಾಜಿ ನಾಯಕ ಧೋನಿ ಕೂಡ ಸಾಥ್‌ ನೀಡಿದರು. ಧೋನಿ 13 ಬಾಲ್‌ಗೆ 25 ರನ್‌ಗಳಿಸಿ ಕ್ಯಾಚ್‌ ನೀಡಿ 19ನೇ ಓವರ್‌ನಲ್ಲಿ ನಿರ್ಗಮಿಸಿದ್ದು ಆರ್‌ಸಿಬಿಗೆ ಇನ್ನಷ್ಟು ಭರವಸೆ ನೀಡಿತು. ಪ್ಲೇ-ಆಫ್‌ ಕಾರಣಕ್ಕೆ ಕೊನೆ ಓವರ್‌ ವರೆಗೂ ಪಂದ್ಯ ರೋಚಕತೆಯಿಂದ ಕೂಡಿತ್ತು. ಚೆನ್ನೈ ತಂಡವನ್ನು 191 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಆರ್‌ಸಿಬಿ ಬೌಲರ್‌ಗಳು ಯಶಸ್ವಿಯಾದರು.

    ಆರ್‌ಸಿಬಿ ಪರ ಯಶ್ ದಯಾಳ್ 2 ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್, ಕ್ಯಾಮರೂನ್ ಗ್ರೀನ್ ತಲಾ 1 ವಿಕೆಟ್‌ ಕಿತ್ತು ಆರ್‌ಸಿಬಿ ಗೆಲುವಿಗೆ ಕಾರಣರಾದರು.

  • ನಾವಿಕನಿಲ್ಲದ ದೋಣಿಯಲ್ಲಿ ಮುಳುಗಿದ ಡೆಲ್ಲಿ – ಆರ್‌ಸಿಬಿಗೆ 47 ರನ್‌ಗಳ ಜಯ; ಪ್ಲೇ ಆಫ್‌ ಕನಸು ಜೀವಂತ!

    ನಾವಿಕನಿಲ್ಲದ ದೋಣಿಯಲ್ಲಿ ಮುಳುಗಿದ ಡೆಲ್ಲಿ – ಆರ್‌ಸಿಬಿಗೆ 47 ರನ್‌ಗಳ ಜಯ; ಪ್ಲೇ ಆಫ್‌ ಕನಸು ಜೀವಂತ!

    ಬೆಂಗಳೂರು: ರಿಷಭ್‌ ಪಂತ್‌ ಅವರ ಅನುಪಸ್ಥಿತಿಯಲ್ಲಿ ಆರ್‌ಸಿಬಿ ವಿರುದ್ಧ ಅಖಾಡಕ್ಕಿಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಹೀನಾಯ ಸೋಲಿಗೆ ತುತ್ತಾಗಿದೆ. ಆದ್ರೆ ತವರಿನಲ್ಲೇ 47 ರನ್‌ಗಳ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

    ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 9 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತ್ತು. ಹೊಸ ನಾಯಕನ ನೇತೃತ್ವದಲ್ಲಿ ಸ್ಪರ್ಧಾತ್ಮಕ ರನ್‌ಗಳ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 19.1 ಓವರ್‌ಗಳಲ್ಲಿ 140 ರನ್‌ಗಳಿಗೆ ಸರ್ವಪತನ ಕಂಡಿತು.

    188 ರನ್‌ಗಳ ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆರಂಭದಲ್ಲೇ ಆಘಾತ ಎದುರಿಸಿತು. ಸ್ಫೋಟಕ ಪ್ರದರ್ಶನ ನೀಡಲು ಮುಂದಾದ ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌ 1 ರನ್‌ಗಳಿಗೆ ಔಟಾದರು. ಈ ಬೆನ್ನಲ್ಲೇ ಅಭಿಷೇಕ್‌ ಪೋರೆಲ್‌ 2 ರನ್‌ಗಳಿಗೆ ವಿಕೆಟ್‌ ಒಪ್ಪಿಸಿ ಹೊರನಡೆದರು. ಇನ್ನೂ 8 ಎಸೆತಗಳಲ್ಲಿ 21 ರನ್‌ (2 ಸಿಕ್ಸರ್‌, 2 ಬೌಂಡರಿ) ಬಾರಿಸಿದ್ದ ಫ್ರೆಸರ್‌ ಮೆಕ್‌ಗಾರ್ಕ್‌ ಸಹ ವಿಕೆಟ್‌ ಒಪ್ಪಿಸಿದರು. ಮೊದಲ 6 ಓವರ್‌ಗಳಲ್ಲಿ 54 ರನ್‌ ಗಳಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

    ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ಟ್ರಿಸ್ಟಾನ್ಸ್‌ ಸ್ಟಬ್ಸ್‌ ಬೂಸ್ಟ್‌ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ತಂಡ ಇತ್ತು. ಆದ್ರೆ ಅನಗತ್ಯವಾಗಿ ಒಂದು ರನ್‌ ಕದಿಯಲು ಯತ್ನಿಸಿ ರನೌಟ್‌ಗೆ ತುತ್ತಾದರು. ಇದು ಡೆಲ್ಲಿ ತಂಡಕ್ಕೆ ತುಂಬಲಾರದ ನಷ್ಟವಾಯಿತು. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ನಾಯಕ ರಿಷಭ್‌ ಪಂತ್‌ ಅವರ ಅನುಪಸ್ಥಿತಿ ಸಹ ಡೆಲ್ಲಿ ತಂಡವನ್ನು ಕಾಡಿತು.

    ಇನ್ನೂ ಏಕಾಂಗಿ ಹೋರಾಟ ನಡೆಸಿದ ನಾಯಕ ಅಕ್ಷರ್‌ ಪಟೇಲ್‌ 39 ಎಸೆತಗಳಲ್ಲಿ 57 ರನ್‌ (3 ಸಿಕ್ಸರ್‌, 5 ಬೌಂಡರಿ) ಗಳಿಸಿದ್ದು ಬಿಟ್ಟರೆ ಉಳಿದ ಯಾರೊಬ್ಬರು ಕ್ರೀಸ್‌ನಲ್ಲಿ ಉಳಿಯದ ಕಾರಣ ಆರ್‌ಸಿಬಿ ಸುಲಭ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಇನ್ನುಳಿದಂತೆ ಶಾಯ್‌ ಹೋಪ್‌ 29 ರನ್‌, ಕುಮಾರ್‌ ಕುಮಾರ್‌ ಕುಶಾರ್ಗ 2 ರನ್‌, ಸ್ಟಬ್ಸ್‌ 3 ರನ್‌, ರಸಿಕ್‌ ಸಲಾಮ್‌ 10 ರನ್‌, ಮುಕೇಶ್‌ ಕುಮಾರ್‌ 3 ರನ್‌, ಕುಲ್ದೀಪ್‌ ಯಾದವ್‌ 3 ರನ್‌ ಗಳಿಸಿ ಔಟಾದರು.

    ಇದಕ್ಕೂ ಮುನ್ನ ಸಂಘಟಿತ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಆರ್‌ಸಿಬಿ ಆಟಗಾರರು 200 ರನ್‌ಗಳನ್ನು ತಲುಪುವಲ್ಲಿ ವಿಫಲರಾದರು. ರಜತ್ ಪಾಟೀದಾರ್ ಸ್ಫೋಟಕ ಅರ್ಧಶತಕ, ವಿಲ್ ಜ್ಯಾಕ್ಸ್, ವಿರಾಟ್ ಕೊಹ್ಲಿ ಸ್ಫೋಟಲ ಪ್ರದರ್ಶನದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 9 ವಿಕೆಟ್ ಕಳೆದುಕೊಂಡು 187 ರನ್ ಬಾರಿಸಿತ್ತು. ಈ ಮೂಲಕ ಡೆಲ್ಲಿ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತ್ತು.

    ಮೊದಲಿಗೆ ಆರ್‌ಸಿಬಿ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ಫಾಫ್ ಡು ಪ್ಲೆಸಿಸ್ ಕೇವಲ 6 ರನ್ ಗಳಿಸಿ ಮುಕೇಶ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಕೇವಲ 13 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 27 ರನ್ ಸಿಡಿಸಿದ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.

    ಅಬ್ಬರಿಸಿದ ಪಾಟೀದಾರ್-ಜ್ಯಾಕ್ಸ್:
    ಕೇವಲ 36 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಆರ್‌ಸಿಬಿ ತಂಡಕ್ಕೆ 3ನೇ ವಿಕೆಟ್‌ಗೆ ರಜತ್ ಪಾಟೀದಾರ್ ಹಾಗೂ ವಿಲ್ ಜ್ಯಾಕ್ಸ್ ಕೇವಲ 53 ಎಸೆತಗಳಲ್ಲಿ 88 ರನ್‌ಗಳ ಜೊತೆಯಾಟ ನೀಡುವ ಮೂಲಕ ಬಲ ತುಂಬಿದರು. ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಪಾಟೀದಾರ್ ಕೇವಲ 29 ಎಸೆತಗಳಲ್ಲೇ 5ನೇ ಅರ್ಧಶತಕ ಸಿಡಿಸಿದರು. ಅಂತಿಮವಾಗಿ ಪಾಟೀದಾರ್ 32 ಎಸೆತಗಳಲ್ಲಿ 52 ರನ್ (3 ಸಿಕ್ಸರ್‌, 3 ಬೌಂಡರಿ) ಚಚ್ಚಿ ಔಟಾದರು. ಈ ಬೆನ್ನಲ್ಲೇ ವಿಲ್ ಜ್ಯಾಕ್ಸ್‌ 41 ರನ್ (29 ಎಸೆತ, 3 ಬೌಂಡರಿ, 2 ಸಿಕ್ಸರ್) ಬಾರಿಸಿ ಪೆವಿಲಿಯನ್‌ ಹಾದಿ ಹಿಡಿದರು. ಬಳಿಕ ಕ್ರೀಸ್‌ಗಿಳಿದ ಕ್ಯಾಮರೂನ್‌ ಗ್ರೀನ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. 24 ಎಸೆತ ಎದುರಿಸಿದ ಗ್ರೀನ್‌ ಅಜೇಯ 32 ರನ್ (1 ಬೌಂಡರಿ, 2 ಸಿಕ್ಸರ್) ಬಾರಿಸಿದರು.

    ಇನ್ನು ಮಧ್ಯಮ ಕ್ರಮಾಂಕದಲ್ಲಿ ಆರ್‌ಸಿಬಿ ಭರ್ಜರಿಯಾಗಿ ರನ್ ಗಳಿಸಿತಾದರೂ ಉತ್ತಮವಾಗಿ ಫಿನೀಶ್ ಮಾಡಲು ಸಾಧ್ಯವಾಗಲಿಲ್ಲ. ಮಹಿಪಾಲ್ ಲೋಮ್ರಾರ್ ಕೇವಲ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಿರ್ಣಾಯಕ ಘಟ್ಟದಲ್ಲಿ ದಿನೇಶ್ ಕಾರ್ತಿಕ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇದು ಆರ್‌ಸಿಬಿ ರನ್ ವೇಗಕ್ಕೆ ಕಡಿವಾಣ ಬೀಳುವಂತೆ ಮಾಡಿತು.

    ಡೆಲ್ಲಿ ಕ್ಯಾಪಿಟಲ್ಸ್‌ ಪರ ಖಲೀಲ್‌ ಅಹ್ಮದ್‌, ರಸಿಕ್‌ ಸಲಾಮ್‌ ತಲಾ 2 ವಿಕೆಟ್‌ ಕಿತ್ತರೆ, ಇಶಾಂತ್‌ ಶರ್ಮಾ, ಮುಕೇಶ್‌ ಕುಮಾರ್‌, ಕುಲ್ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ತವರಿನಲ್ಲಿ ಆರ್‌ಸಿಬಿಗೆ ಇಂದು ನಿರ್ಣಾಯಕ ಪಂದ್ಯ – ಗೆದ್ದರಷ್ಟೇ ಪ್ಲೇ-ಆಫ್‌ ಕನಸು ಜೀವಂತ

    ತವರಿನಲ್ಲಿ ಆರ್‌ಸಿಬಿಗೆ ಇಂದು ನಿರ್ಣಾಯಕ ಪಂದ್ಯ – ಗೆದ್ದರಷ್ಟೇ ಪ್ಲೇ-ಆಫ್‌ ಕನಸು ಜೀವಂತ

    – ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ V/S ಡೆಲ್ಲಿ ಫೈಟ್‌

    ಬೆಂಗಳೂರು: ತವರಿನಲ್ಲಿ ಇಂದು (ಭಾನುವಾರ) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ನಿರ್ಣಾಯಕ ಕದನಕ್ಕೆ ಸಜ್ಜಾಗಿದೆ. ಈ ಪಂದ್ಯ ಗೆದ್ದರಷ್ಟೇ ಆರ್‌ಸಿಬಿಗೆ (RCB) ಪ್ಲೇ-ಆಫ್‌ಗೇರುವ ಕನಸು ಜೀವಂತವಾಗಿರಲಿದೆ. ಒಂದರ್ಥದಲ್ಲಿ ಇದು ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ.

    ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಇಂದು ನಡೆಯುವ ಪಂದ್ಯದಲ್ಲಿ ಒಂದು ವೇಳೆ ಆರ್‌ಸಿಬಿ ಸೋತರೆ ನಾಕೌಟ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ. ಡೆಲ್ಲಿ ಕ್ಯಾಪಿಟಲ್ಸ್‌ಗೂ (DC) ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಸೋತರೆ ನಾಕೌಟ್‌ ಹಾದಿ ಕಠಿಣವಾಗಲಿದೆ. ಇದನ್ನೂ ಓದಿ: ಪ್ಲೇ-ಆಫ್‌ಗೆ ಎಂಟ್ರಿ ಕೊಟ್ಟ ಕೆಕೆಆರ್‌

    ಆರ್‌ಸಿಬಿ ಒಟ್ಟು 12 ಪಂದ್ಯಗಳನ್ನು ಆಡಿದ್ದು, 5 ಪಂದ್ಯಗಳಲ್ಲಿ ಜಯಗಳಿಸಿದೆ. ಟೂರ್ನಿಯ ಆರಂಭಿಕ 8 ಪಂದ್ಯಗಳಲ್ಲಿ ಡು ಪ್ಲೆಸಿಸ್‌ ನಾಯಕತ್ವದ ಆರ್‌ಸಿಬಿ 7 ರಲ್ಲಿ ಸೋತಿದೆ. ಆದರೆ ಕಳೆದ 4 ಪಂದ್ಯಗಳಲ್ಲಿ ಅಭೂತಪೂರ್ವ ಪ್ರದರ್ಶನದೊಂದಿಗೆ ಜಯಭೇರಿ ಬಾರಿಸಿದೆ. ಗುಜರಾತ್‌ ವಿರುದ್ಧ 9 ವಿಕೆಟ್‌ಗಳ ಗೆಲುವು ಮತ್ತು ಪಂಜಾಬ್‌ ವಿರುದ್ಧ 60 ರನ್‌ಗಳ ಜಯ ಆರ್‌ಸಿಬಿ ತಂಡದ ರನ್‌ ನೆಟ್‌ ರೇಟನ್ನು ಹೆಚ್ಚಿಸಿರುವುದು ಪ್ಲಸ್‌ ಪಾಯಿಂಟ್‌ ಆಗಿದೆ. ಸದ್ಯ ತಂಡಕ್ಕೆ ಎರಡು ಪಂದ್ಯಗಳಿದ್ದು, ಭಾರಿ ಅಂತರದಲ್ಲಿ ಗೆಲ್ಲಬೇಕಿದೆ. ಅದೃಷ್ಟ ಖುಲಾಯಿಸಿದರೆ ಪ್ಲೇ-ಆಫ್‌ಗೇರುವ ಸಾಧ್ಯತೆ ಇದೆ.

    ಡೆಲ್ಲಿ 12 ರಲ್ಲಿ 6 ಪಂದ್ಯಗಳನ್ನು ಗೆದ್ದಿದೆ. ತಂಡ 12 ಅಂಕ ಸಂಪಾದಿಸಿದ್ದು, ಪ್ಲೇ-ಆಫ್‌ಗೇರಲು ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಆರ್‌ಸಿಬಿ ವಿರುದ್ಧ ಇಂದು ನಡೆಯುವ ಪಂದ್ಯದಲ್ಲಿ ಸೋತರೆ ಡೆಲ್ಲಿಗೆ ಪ್ಲೇ-ಆಫ್‌ ಹಾದಿ ಇನ್ನೂ ಕಠಿಣವಾಗಲಿದೆ. ಇದನ್ನೂ ಓದಿ: ಟೆಸ್ಟ್‌ಗೆ ಇಂಗ್ಲೆಂಡ್ ಕ್ರಿಕೆಟ್ ದಂತಕಥೆ ಜೇಮ್ಸ್ ಆಂಡರ್ಸನ್ ನಿವೃತ್ತಿ

    ವಿರಾಟ್‌ ಕೊಹ್ಲಿ ಉತ್ತಮ ಲಯದಲ್ಲಿದ್ದಾರೆ. ಪಂದ್ಯಗಳಲ್ಲಿ ದಾಖಲೆ ಕೂಡ ಬರೆಯುತ್ತಿದ್ದಾರೆ. ತವರಿನಲ್ಲಿ ಕೊಹ್ಲಿ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ವಿಲ್‌ ಜಾಕ್ಸ್‌, ರಜತ್‌ ಪಾಟೀದಾರ್‌ ಕೂಡ ನಿರೀಕ್ಷೆ ಮೂಡಿಸಿದ್ದಾರೆ. ಡು ಪ್ಲೆಸಿಸ್‌ ಮತ್ತು ದಿನೇಶ್‌ ಕಾರ್ತಿಕ್‌ ತಂಡದ ಕೈ ಹಿಡಿಯಬೇಕಿದೆ. ಬೌಲರ್‌ಗಳು ಕಳೆದ ನಾಲ್ಕು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅದನ್ನೇ ಮುಂದುವರಿಸಿದರೆ ತಂಡಕ್ಕೆ ಸಹಕಾರಿಯಾಗಲಿದೆ.

    ಡೆಲ್ಲಿ ತಂಡದಲ್ಲೂ ಜೇಕ್‌ ಫ್ರೇಸರ್‌, ಅಭಿಷೇಕ್‌ ಪೊರೆಲ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಡೆಲ್ಲಿ ಬೌಲರ್‌ಗಳು ಆರ್‌ಸಿಬಿ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಿದೆ. ಇಂದು ಸಂಜೆ 7:30 ಪಂದ್ಯ ನಡೆಯಲಿದೆ.

  • ಚಿನ್ನಸ್ವಾಮಿ ಅಂಗಳದಲ್ಲಿಂದು ಆರ್‌ಸಿಬಿಗೆ ಟೈಟಾನ್ಸ್‌ ಸವಾಲು – ಹೈವೋಲ್ಟೇಜ್‌ ಕದನಕ್ಕೆ ಮಳೆ ಅಡ್ಡಿ ಆತಂಕ!

    ಚಿನ್ನಸ್ವಾಮಿ ಅಂಗಳದಲ್ಲಿಂದು ಆರ್‌ಸಿಬಿಗೆ ಟೈಟಾನ್ಸ್‌ ಸವಾಲು – ಹೈವೋಲ್ಟೇಜ್‌ ಕದನಕ್ಕೆ ಮಳೆ ಅಡ್ಡಿ ಆತಂಕ!

    ಬೆಂಗಳೂರು: ಐಪಿಎಲ್‌ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಆರ್‌ಸಿಬಿ (IPL 2024) ಮುಂದಿನ ತನ್ನೆಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಇಂದು (ಏ.4) ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Taitans) ಎದುರು ಸೆಣಸಲು ಸಜ್ಜಾಗಿದ್ದು, ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ.

    2024ರ ಐಪಿಎಲ್‌ ಟೂರ್ನಿಯಲ್ಲಿ ಅಸ್ಥಿರ ಪ್ರದರ್ಶನ ನೀಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಕಳೆದ 2 ಪಂದ್ಯಗಳಲ್ಲಿ ಭರ್ಜರಿ ಜಯ ದಾಖಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಅದರಲ್ಲೂ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌ ಎದುರು 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಇದೀಗ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಅಂಥದ್ದೇ ಪ್ರದರ್ಶನ ನೀಡಿ ನಾಕ್‌ಔಟ್‌ ಹಂತಕ್ಕೆ ಮತ್ತಷ್ಟು ಹತ್ತಿರವಾಗಲು ಆರ್‌ಸಿಬಿ ಎದುರು ನೋಡುತ್ತಿದೆ. ಇದನ್ನೂ ಓದಿ: ಟಿ20 ವಿಶ್ವಕಪ್‌ ತಂಡದಿಂದ ರಾಹುಲ್‌ ಬಿಟ್ಟಿದ್ದೇಕೆ? ಕೊಹ್ಲಿ ಸ್ಟ್ರೈಕ್‌ರೇಟ್‌ ಬಗ್ಗೆ ರೋಹಿತ್‌ ಹೇಳಿದ್ದೇನು?

    ಅತ್ತ ಹೊಸ ನಾಯಕ ಶುಭಮನ್ ಗಿಲ್‌ ಸಾರಥ್ಯದಲ್ಲಿ ಆರಂಭಿಕ ಪಂದ್ಯಗಳನ್ನು ಗೆದ್ದು ಉತ್ತಮ ಪ್ರದರ್ಶನ ನೀಡಿದ್ದ ಗುಜರಾತ್‌ ಟೈಟಾನ್ಸ್‌ ತಂಡ ಬಳಿಕ ಸತತ ವೈಫಲ್ಯಗಳೊಂದಿಗೆ ನಿರಾಸೆ ಅನುಭವಿಸಿದೆ. ಕಳೆದ 5 ಪಂದ್ಯಗಳಲ್ಲಿ ಟೈಟಾನ್ಸ್‌ 3 ಸೋಲು ಕಂಡಿದೆ. ಈವರೆಗೆ ಆಡಿರುವ 10 ಪಂದ್ಯಗಳಲ್ಲಿ 4 ಜಯ ಮತ್ತು 6 ಸೋಲಿನೊಂದಿಗೆ 8 ಅಂಕಗಳನ್ನು ಕಲೆಹಾಕಿದ್ದು 8ನೇ ಸ್ಥಾನ ಅಲಂಕರಿಸಿದೆ. ಹೀಗಾಗಿ ಉಳಿದ 4 ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದು ಸುಲಭವಾಗಿ ಪ್ಲೇ-ಆಫ್ಸ್‌ ತಲುಪಲು ಗಿಲ್‌ ಪಡೆ ಎದುರು ನೋಡುತ್ತಿದೆ. ಇತ್ತಂಡಗಳು ಒಟ್ಟು 4 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಉಭಯ ತಂಡಗಳು ತಲಾ ಎರಡರಲ್ಲಿ ಗೆಲುವು ಸಾಧಿಸಿದೆ.

    ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್-11
    ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್‌ ಗ್ರೀನ್‌, ದಿನೇಶ್ ಕಾರ್ತಿಕ್, ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್. ಇದನ್ನೂ ಓದಿ: ಮುಂಬೈ ವಿರುದ್ಧ 24 ರನ್‌ಗಳ ಜಯ – ಎರಡನೇ ಸ್ಥಾನಕ್ಕೆ ಜಿಗಿದ ಕೋಲ್ಕತ್ತಾ

    ಮಳೆ ಅಡ್ಡಿಯಾಗುತ್ತಾ?
    ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಶುಕ್ರವಾರವೂ ಬೆಂಗಳೂರಿನ ಕೆಲವೆಡೆ ಮಳೆಯಾಗಿದ್ದು, ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

  • 10 ಸಿಕ್ಸರ್‌ನೊಂದಿಗೆ ಸ್ಫೋಟಕ ಶತಕ – ಆರ್‌ಸಿಬಿಗೆ ವಿಲ್‌ ಪವರ್‌; ಟೈಟಾನ್ಸ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

    10 ಸಿಕ್ಸರ್‌ನೊಂದಿಗೆ ಸ್ಫೋಟಕ ಶತಕ – ಆರ್‌ಸಿಬಿಗೆ ವಿಲ್‌ ಪವರ್‌; ಟೈಟಾನ್ಸ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

    – ವಿಲ್‌ ಜಾಕ್ಸ್‌ಗೆ ಕಿಂಗ್‌ ಕೊಹ್ಲಿ ಸಾಥ್‌
    – 500 ರನ್‌ ಪೂರೈಸಿ ವಿಶೇಷ ಸಾಧನೆ ಮಾಡಿದ ‌ವಿರಾಟ್‌

    ಅಹಮದಾಬಾದ್‌: ವಿಲ್‌ ಜಾಕ್ಸ್‌ (Will Jacks) ಸ್ಫೋಟಕ ಶತಕ ಹಾಗೂ ವಿರಾಟ್‌ ಕೊಹ್ಲಿ (Virat Kohli) ಅವರ ಅರ್ಧಶತಕದ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಗುಜರಾತ್‌ ಟೈಟಾನ್ಸ್‌ (RCB vs GT) ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಆರ್‌ಸಿಬಿ ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಗುಜರಾತ್‌ ತಂಡಕ್ಕೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌, ಸಾಯಿ ಸುದರ್ಶನ್‌, ಎಂ. ಶಾರುಖ್‌ ಖಾನ್‌ (M Shahrukh Khan) ಅವರ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 200 ರನ್‌ ಬಾರಿಸಿತ್ತು. 201 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಆರ್‌ಸಿಬಿ ಕೇವಲ 16 ಓವರ್‌ಗಳಲ್ಲೇ 206 ರನ್‌ ಚಚ್ಚಿ ಭರ್ಜರಿ ಗೆಲುವು ಸಾಧಿಸಿತು.

    ಚೇಸಿಂಗ್‌ ಆರಂಭಿಸಿದ್ದ ಆರ್‌ಸಿಬಿ 3.5 ಓವರ್‌ಗಳಲ್ಲಿ 40 ರನ್‌ಗಳಿದ್ದಾಗ ಮೊದಲ ವಿಕೆಟ್‌ ಕಳೆದುಕೊಂಡಿತ್ತು. ನಂತರ ಜೊತೆಗೂಡಿದ ಕಿಂಗ್‌ ಕೊಹ್ಲಿ ಹಾಗೂ ವಿಲ್‌ ಜಾಕ್ಸ್‌ ಜೋಡಿ ಅಬ್ಬರಕ್ಕೆ ಗುಜರಾತ್‌ ಭಸ್ಮವಾಯಿತು. 16ನೇ ಓವರ್‌ನಲ್ಲೇ ಬರೋಬ್ಬರಿ 4 ಸಿಕ್ಸರ್‌, 1 ಬೌಂಡರಿ ಸಿಡಿಸಿದ ವಿಲ್‌ ಜಾಕ್ಸ್‌ ಚೊಚ್ಚಲ ಐಪಿಎಲ್‌ ಶತಕ ಪೂರೈಸುವ ಜೊತೆಗೆ ಪಂದ್ಯವನ್ನೂ ಗೆಲ್ಲಿಸಿದರು. ಕೊನೆವರೆಗೂ ಕ್ರೀಸ್‌ನಲ್ಲಿ ಉಳಿದ ವಿಲ್‌ ಜಾಕ್ಸ್‌ 41 ಎಸೆತಗಳಲ್ಲಿ ಸ್ಪೋಟಕ 100 ರನ್‌ (10 ಸಿಕ್ಸರ್‌, 5 ಬೌಂಡರಿ) ಚಚ್ಚಿದರೆ, 44 ಎಸೆತ ಎದುರಿಸಿದ ವಿರಾಟ್‌ ಕೊಹ್ಲಿ 70 ರನ್‌ (3 ಸಿಕ್ಸರ್‌, 6 ಬೌಂಡರಿ) ಗಳಿದರು. ಇದರೊಂದಿಗೆ 17ನೇ ಆವೃತ್ತಿಯ ಐಪಿಎಲ್‌ನಲ್ಲಿ 500 ರನ್‌ ಪೂರೈಸಿದ ಸಾಧನೆಯನ್ನೂ ಕೊಹ್ಲಿ ಮಾಡಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಟೈಟಾನ್ಸ್‌ 6.4 ಓವರ್‌ಗಳಲ್ಲೇ 45 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ ಮಧ್ಯ ಕ್ರಮಾಂಕದಲ್ಲಿ 45 ಎಸೆತಗಳಲ್ಲಿ 86 ರನ್‌ಗಳ ಜೊತೆಯಾಟ ನೀಡುವ ಮೂಲಕ ಇನ್ನಿಂಗ್ಸ್‌ ಕಟ್ಟಿದ್ದರು. ಶಾರುಖ್‌ ಖಾನ್‌ ಔಟಾದ ಬೆನ್ನಲ್ಲೇ ಡೇವಿಡ್‌ ಮಿಲ್ಲರ್‌ ಮತ್ತು ಸುದರ್ಶನ್‌ ಜೋಡಿ ಮುರಿಯದ 4ನೇ ವಿಕೆಟ್‌ಗೆ 36 ಎಸೆತಗಳಲ್ಲಿ ಸ್ಫೋಟಕ 69 ರನ್‌ ಜೊತೆಯಾಟ ನೀಡಿತ್ತು. ಇದು ಗುಜರಾತ್‌ ತಂಡದಲ್ಲಿ ಉತ್ಸಾಹ ಹೆಚ್ಚಿಸಿತ್ತು.

    ಗುಜರಾತ್‌ ಪರ ಸಾಯಿ ಸುದರ್ಶನ್‌ 84 ರನ್‌ (49 ಎಸೆತ, 4 ಸಿಕ್ಸರ್‌, 8 ಬೌಂಡರಿ), ಶಾರುಖ್‌ ಖಾನ್‌ 58 ರನ್‌ (30 ಎಸೆತ, 5 ಸಿಕ್ಸರ್‌, 3 ಬೌಂಡರಿ), ಡೇವಿಡ್‌ ಮಿಲ್ಲರ್‌ 26 ರನ್‌ (19 ಎಸೆತ, 1 ಸಿಕ್ಸರ್‌, 2 ಬೌಂಡರಿ), ವೃದ್ಧಿಮಾನ್‌ ಸಾಹಾ 5 ರನ್‌, ಶುಭಮನ್‌ ಗಿಲ್‌ 16 ರನ್‌ ಗಳಿಸಿದರು.ಆರ್‌ಸಿಬಿ ಪರ ಗ್ಲೆನ್‌ ಮ್ಯಾಕ್ಸ್‌ವೆಲ್‌, ಸ್ವಪ್ನಿಲ್‌ ಸಿಂಗ್‌, ಮೊಹಮ್ಮದ್‌ ಸಿರಾಜ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

  • ಮತ್ತೆ ಕಳಪೆ ಸ್ಟ್ರೈಕ್‌ರೇಟ್‌ ಮುಂದುವರಿಸಿದ ಕೊಹ್ಲಿ – ಹಿರಿಯ ಕ್ರಿಕೆಟಿಗರಿಂದ ವ್ಯಾಪಕ ಟೀಕೆ

    ಮತ್ತೆ ಕಳಪೆ ಸ್ಟ್ರೈಕ್‌ರೇಟ್‌ ಮುಂದುವರಿಸಿದ ಕೊಹ್ಲಿ – ಹಿರಿಯ ಕ್ರಿಕೆಟಿಗರಿಂದ ವ್ಯಾಪಕ ಟೀಕೆ

    – ವಿರಾಟ್‌ ಪರ ಬ್ಯಾಟ್‌ ಬೀಸಿದ ಫಾಫ್‌ ಡು ಪ್ಲೆಸಿಸ್‌

    ಹೈದರಾಬಾದ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ (Virat kohli) ಐಪಿಎಲ್‌ನಲ್ಲಿ ಮತ್ತೆ ಕಳಪೆ ಸ್ಟ್ರೈಕ್‌ರೇಟ್‌ ಮುಂದುವರಿಸಿದ್ದಾರೆ. ಇದರಿಂದ ಹಿರಿಯ ಕ್ರಿಕೆಟಿಗರೂ ವಿರಾಟ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಕೊಹ್ಲಿಯನ್ನು ಟಿ20 ವಿಶ್ವಕಪ್‌ನಿಂದ ಕೈಬಿಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

    ಹೌದು. ಇತ್ತೀಚೆಗೆ ರಾಜಸ್ಥಾನ್‌ ರಾಯಲ್ಸ್‌ (RR) ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 67 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ನಿಧಾನಗತಿಯ ಶತಕವಾಗಿತ್ತು. ಗುರುವಾರ ಹೈದರಾಬಾದ್‌ (SRH) ವಿರುದ್ಧ ನಡೆದ ಪಂದ್ಯದಲ್ಲೂ 118.60 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಕೊಹ್ಲಿ 43 ಎಸೆತಗಳಲ್ಲಿ ಕೇವಲ 51 ರನ್‌ ಸಿಡಿಸಿದ್ದಾರೆ. ಇದರಲ್ಲಿ 4 ಬೌಂಡರಿ, ಒಂದೇ ಒಂದು ಸಿಕ್ಸರ್‌ ದಾಖಲಾಗಿದೆ. ಇದು ಕೆಲ ಅಭಿಮಾನಿಗಳ ಅಸಮಾಧಾನಕ್ಕೂ ಕಾರಣವಾಗಿದೆ.

    ಹೈದರಾಬಾದ್‌ ವಿರುದ್ಧ ಕೊಹ್ಲಿಯೊಂದಿಗೆ ಕಣಕ್ಕಿಳಿದಿದ್ದ ರಜತ್‌ ಪಾಟಿದಾರ್‌ ಕೇವಲ 20 ಎಸೆತಗಳಲ್ಲಿ ಸ್ಫೋಟಕ ಫಿಫ್ಟಿ ಸಿಡಿಸಿದ್ದರು. ನಂತರ ಬಂದ ಕ್ಯಾಮರೂನ್‌ ಗ್ರೀನ್‌ 185 ಸ್ಟ್ರೈಕ್‌ರೇಟ್‌ನಲ್ಲಿ 37 ರನ್‌ ಚಚ್ಚಿದ್ದರು. ಆದ್ರೆ ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ 51 ರನ್‌ ಗಳಿಸಲು 43 ಎಸೆತಗಳನ್ನು ತೆಗೆದುಕೊಂಡರು. ಹಾಗಾಗಿ ಕೊಹ್ಲಿ ಕಳಪೆ ಸ್ಟ್ರೈಕ್‌ರೇಟ್‌ ವಿರುದ್ಧ ಸುನೀಲ್‌ ಗವಾಸ್ಕರ್‌, ಇರ್ಫಾನ್‌ ಪಠಾಣ್‌ ಅಸಮಾಧಾನ ಹೊರಹಾಕಿದ್ದಾರೆ.

    ಕೊಹ್ಲಿ ಬೆನ್ನಿಗೆ ನಿಂತ ಕ್ಯಾಪ್ಟನ್‌:
    ವಿರಾಟ್‌ ಕೊಹ್ಲಿ ಸದ್ಯ ಅಗ್ರ ಸ್ಕೋರರ್‌ ಆಗಿದ್ದಾರೆ. ಇತರ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪರೇಡ್‌ ನಡೆಸುತ್ತಿದ್ದರೂ ಕೊಹ್ಲಿ ರನ್‌ ಕಲೆಹಾಕುತ್ತಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ನಮ್ಮ ಹೋರಾಟ ಉತ್ತಮವಾಗಿತ್ತು. ಕೆಕೆಆರ್‌ ವಿರುದ್ಧ ತೀವ್ರ ಪೈಪೋಟಿ ನೀಡಿದ ಹೊರತಾಗಿಯೂ 1 ರನ್‌ನಿಂದ ಸೋಲಬೇಕಾಯಿತು. ಆರಂಭಿಕ ಪಂದ್ಯಗಳಲ್ಲಿ ಕೊಹ್ಲಿ ಮಾತ್ರ ರನ್‌ ಗಳಿಸುತ್ತಿದ್ದರು. ಈಗ ಇತರ ಆಟಗಾರರು ರನ್‌ ಗಳಿಸುತ್ತಿದ್ದಾರೆ. ಕ್ಯಾಮರೂನ್‌ ಗ್ರೀನ್‌ ಸಹ ಫಾರ್ಮ್‌ಗೆ ಮರಳಿದ್ದಾರೆ ಎಂದು ಶ್ಲಾಘಿಸಿದ್ದಾರೆ.

    ತವರಿನಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್‌ 287 ರನ್‌ ಗಳಿಸಿದ್ದಾಗ ನಮ್ಮ ತಂಡ 262 ರನ್‌ ಗಳಿಸಿತ್ತು. ಇದು ಸಹ ಉತ್ತಮ ಪೈಪೋಟಿ ಆಗಿತ್ತು. ಏಕೆಂದರೆ ಆ ಸಮಯದಲ್ಲಿ ಪ್ರಮುಖ ವಿಕೆಟ್‌ ಕಳೆದುಕೊಂಡಿದ್ದ ಕಾರಣ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಹೈದರಾಬಾದ್‌ನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 206 ರನ್‌ ಬಾರಿಸಿತ್ತು. 207 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಸನ್‌ ರೈಸರ್ಸ್‌ ಹೈದರಾಬಾದ್‌ 8 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

  • IPL 2024: ತವರಿನಲ್ಲೇ ಸನ್‌ ರೈಸರ್ಸ್‌ಗೆ ಚೊಂಬು – ಅಬ್ಬರಿಸಿ ಬೊಬ್ಬರಿದ ಆರ್‌ಸಿಬಿಗೆ 35 ರನ್‌ಗಳ ಭರ್ಜರಿ ಜಯ

    IPL 2024: ತವರಿನಲ್ಲೇ ಸನ್‌ ರೈಸರ್ಸ್‌ಗೆ ಚೊಂಬು – ಅಬ್ಬರಿಸಿ ಬೊಬ್ಬರಿದ ಆರ್‌ಸಿಬಿಗೆ 35 ರನ್‌ಗಳ ಭರ್ಜರಿ ಜಯ

    ಹೈದರಾಬಾದ್‌: ಕೊನೆಗೂ ತವರಿನಲ್ಲಿ ಅನುಭವಿಸಿದ ವಿರೋಚಿತ ಸೋಲಿಗೆ ಆರ್‌ಸಿಬಿ, ಸನ್‌ ರೈಸರ್ಸ್‌ ಹೈದರಾಬಾದ್‌ (SRH) ವಿರುದ್ಧ ಸೇಡು ತೀರಿಸಿಕೊಂಡಿದೆ. ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಹೈದರಾಬಾದ್‌ ವಿರುದ್ಧ 35 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 206 ರನ್‌ ಬಾರಿಸಿತ್ತು. 207 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಸನ್‌ ರೈಸರ್ಸ್‌ ಹೈದರಾಬಾದ್‌ 8 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

    ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ್ದ ಸನ್‌ ರೈಸರ್ಸ್‌ ತಂಡ ಆರಂಭದಿಂದಲೇ ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಂಡಿತು. ಆರ್‌ಸಿಬಿ ತವರು ಕ್ರೀಡಾಂಗಣದಲ್ಲಿ ಅಬ್ಬರಿಸಿ ಬೊಬ್ಬರಿದಿದ್ದ ಸನ್‌ ರೈಸರ್ಸ್‌ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು. 5 ಓವರ್‌ಗಳಲ್ಲಿ 56 ರನ್‌ಗಳಿಗೆ ಹೈದರಾಬಾದ್‌ ತಂಡ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡಿತ್ತು. ನಂತರ ಕ್ರೀಸ್‌ಗಿಳಿದ ಬ್ಯಾಟರ್ಸ್‌ಗಳು ಆರ್‌ಸಿಬಿ ಎದುರು ನೆಲಕಚ್ಚಿದ್ದರಿಂದ ಸನ್‌ರೈಸರ್ಸ್‌ ತಂಡ ಸೋಲು ಎದುರಿಸಬೇಕಾಯಿತು.

    ಹೈದರಾಬಾದ್‌ ಪರ ಅಭಿಷೇಕ್‌ ಶರ್ಮಾ (Abhishek Sharma) 31 ರನ್‌, ನಾಯಕ ಪ್ಯಾಟ್‌ ಕಮ್ಮಿನ್ಸ್‌ (Pat Cummins) 31 ರನ್‌, ನಿತೀಶ್‌ ಕುಮಾರ್‌ ರೆಡ್ಡಿ 13 ರನ್‌, ಟ್ರಾವಿಸ್‌ ಹೆಡ್‌ 1 ರನ್‌, ಹೆನ್ರಿಕ್‌ ಕ್ಲಾಸೆನ್‌, ಏಡನ್‌ ಮಾರ್ಕ್ರಮ್‌ ತಲಾ 7 ರನ್‌, ಅಬ್ದುಲ್‌ ಸಮದ್‌ 10 ರನ್‌, ಭುವನೇಶ್ವರ್‌ ಕುಮಾರ್‌ 13 ರನ್‌, ಶಹಬಾಜ್‌ ಅಹ್ಮದ್‌ 40 ರನ್‌, ಜಯದೇವ್‌ ಉನಡ್ಕಟ್‌ 8 ರನ್‌ ಗಳಿಸಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ ಪರ ನಾಯಕ ಫಾಫ್‌ ಡು ಪ್ಲೆಸಿಸ್‌ ಹಾಗೂ ವಿರಾಟ್‌ ಕೊಹ್ಲಿ (Virat Kohli) ಸ್ಪೋಟಕ ಆರಂಭ ತಂದುಕೊಟ್ಟಿದ್ದರು. ಮೊದಲ ವಿಕೆಟ್‌ಗೆ ಈ ಜೋಡಿ 3.5 ಓವರ್‌ಗಳಲ್ಲೇ ಬರೋಬ್ಬರಿ 48 ರನ್‌ಗಳ ಜೊತೆಯಾಟ ನೀಡಿತ್ತು. ಡುಪ್ಲೆಸಿಸ್‌ (Faf du Plessis) 12 ಎಸೆತಗಳಲ್ಲಿ 25 ರನ್‌ ಚಚ್ಚಿ ಔಟಾದರು. ಈ ಬೆನ್ನಲ್ಲೇ ವಿಲ್‌ ಜಾಕ್ಸ್‌ ಕೇವಲ 6 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ನಂತರ ಕ್ರೀಸ್‌ಗೆ ಬಂದ ರಜತ್‌ ಪಾಟೀದಾರ್‌ ಆರೆಂಜ್‌ ಆರ್ಮಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಬೆಂಡೆತ್ತಿದರು. ಬ್ಯಾಕ್‌ ಟು ಬ್ಯಾಕ್‌ ಸಿಕ್ಸಸ್‌ ಸಿಡಿಸುವ ಮೂಲಕ ಕೇವಲ 20 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಇದರೊಂದಿಗೆ ಪವರ್‌ ಪ್ಲೇನಲ್ಲಿ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದ್ದ ಕೊಹ್ಲಿ ನಿಧಾಗತಿಯ ಅರ್ಧಶತಕ ಪೂರೈಸಿದರು. ಕೊನೆಯಲ್ಲಿ ಗ್ರೀನ್‌ ಮತ್ತಿತರ ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದಿಂದ ಆರ್‌ಸಿಬಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಆರ್‌ಸಿಬಿ ಪರ ರಜತ್‌ ಪಾಟೀದಾರ್‌ 20 ಎಸೆತಗಳಲ್ಲಿ 50 ರನ್‌ (5 ಸಿಕ್ಸರ್‌, 2 ಬೌಂಡರಿ), ವಿರಾಟ್‌ ಕೊಹ್ಲಿ 51 ರನ್‌ (43 ಎಸೆತ, 4 ಬೌಂಡರಿ, 1 ಸಿಕ್ಸರ್‌), ಡುಪ್ಲೆಸಿಸ್‌ 25 ರನ್‌, ಕ್ಯಾಮರೂನ್‌ ಗ್ರೀನ್‌ 37 ರನ್‌, ಮಹಿಪಾಲ್‌ ಲೋಮ್ರೋರ್‌ 7ರನ್‌, ದಿನೇಶ್‌ ಕಾರ್ತಿಕ್‌ 11 ರನ್‌, ಸ್ವಪ್ನಿಲ್ ಸಿಂಗ್‌ 12 ರನ್‌ ಗಳಿಸಿದರು.

  • ಆ 2 ರನ್‌ ಗೆಲುವು ತಂದುಕೊಡ್ತಿತ್ತು; ಆರ್‌ಸಿಬಿ ವಿರೋಚಿತ ಸೋಲಿಗೆ ಇದೇ ಕಾರಣ ಅಂದ್ರು ಫ್ಯಾನ್ಸ್‌!

    ಆ 2 ರನ್‌ ಗೆಲುವು ತಂದುಕೊಡ್ತಿತ್ತು; ಆರ್‌ಸಿಬಿ ವಿರೋಚಿತ ಸೋಲಿಗೆ ಇದೇ ಕಾರಣ ಅಂದ್ರು ಫ್ಯಾನ್ಸ್‌!

    – ನಿಯಮದ ಪ್ರಕಾರ ಕೊಹ್ಲಿ ಔಟ್ – ಅಂಪೈರ್‌ ಪರ ಬ್ಯಾಟ್‌ ಬೀಸಿದ ಡುಪ್ಲೆಸಿಸ್‌
    – ಅಂಪೈರ್‌ ವಿರುದ್ಧ ಫ್ಯಾನ್ಸ್‌ ಫುಲ್‌ ಗರಂ

    ಕೋಲ್ಕತ್ತಾ: ಈಡನ್‌ ಗಾರ್ಡನ್‌ ಮೈದಾನದಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ ಆರ್‌ಸಿಬಿ (RCB) ಕಂಡ ವಿರೋಚಿತ ಸೋಲು ಅಭಿಮಾನಿಗಳ (RCB Fans) ವಲಯದಲ್ಲಿ ಇನ್ನೂ ಬಿಸಿ-ಬಿಸಿ ಚರ್ಚೆಯಾಗುತ್ತಲೇ ಇದೆ. ಆ 2 ರನ್‌ ಇದ್ದಿದ್ದರೇ ಆರ್‌ಸಿಬಿ, ಗೆದ್ದೇ ಗೆಲ್ಲುತ್ತಿತ್ತು, ಪ್ಲೇ ಆಫ್‌ ಕನಸು ಜೀವಂತವಾಗಿರುತ್ತಿತ್ತು ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ವೀಡಿಯೋ ಸಾಕ್ಷಿಯೊಂದನ್ನೂ ಅಭಿಮಾನಿಗಳು ಹಂಚಿಕೊಂಡಿದ್ದಾರೆ.

    223 ರನ್‌ಗಳ ಬೃಹತ್‌ ಮೊತ್ತ ಚೇಸಿಂಗ್‌ ಆರಂಭಿಸಿದ್ದ ಆರ್‌ಸಿಬಿ ಗೆಲುವಿನ ಹಾದಿಯಲ್ಲಿ ನಡೆಯುತ್ತಿತ್ತು. ಆದ್ರೆ 17ನೇ ಓವರ್‌ನ 5ನೇ ಎಸೆತದಲ್ಲಿ ವರುಣ್‌ ಚಕ್ರವರ್ತಿ ಅವರ ಬೌಲಿಂಗ್‌ಗೆ ಸುಯೇಶ್‌ ಪ್ರಭುದೇಸಾಯಿ (Suyash Prabhudesai) ಸಿಕ್ಸರ್‌ ಬಾರಿಸಿದರು. ಆದ್ರೆ ಆನ್‌ಫೀಲ್ಡ್‌ ಅಂಪೈರ್‌ (umpires) ಯಾವುದೇ ನಿರ್ಧಾರ ಪ್ರಕಟಿಸದೇ 3ನೇ ಅಂಪೈರ್‌ ಮೊರೆ ಹೋದರು. ವೀಡಿಯೋನಲ್ಲಿ ಬಾಲ್‌ ಗ್ರೌಂಡ್‌ಗೆ ತಾಕುವ ಮುನ್ನ ಬೌಂಡರಿ ಲೈನ್‌ಗೆ ಬಡಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದಾಗ್ಯೂ ಟಿವಿ ಅಂಪೈರ್‌ ಸಿಕ್ಸರ್‌ ಅನ್ನು ಬೌಂಡರಿ ಎಂದು ತೀರ್ಪು ನೀಡಿದರು. ಈ ವೀಡಿಯೋ ಹಂಚಿಕೊಂಡಿರುವ ಆರ್‌ಸಿಬಿ ಅಭಿಮಾನಿಗಳು, 2 ರನ್‌ ಹೆಚ್ಚುವರಿ ಸೇರಿದ್ದರೆ ಆರ್‌ಸಿಬಿ ಗೆದ್ದೇ ಗೆಲ್ಲುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

    ರೂಲ್ಸ್‌ ಪ್ರಕಾರ ಕೊಹ್ಲಿ ಔಟ್:
    ವೇಗದ ಬೌಲರ್‌ ಹರ್ಷಿತ್‌ ರಾಣಾ ಎಸೆದ ಸ್ಲೋ ಫುಲ್‌ ಟಾಸ್‌ ಎಸೆತವನ್ನು ರಕ್ಷಣಾತ್ಮಕ ಆಟವಾಡುವ ಪ್ರಯತ್ನದಲ್ಲಿ ಕೊಹ್ಲಿ ವಿಫಲರಾದರು. ಅಷ್ಟೇ ಅಲ್ಲದೇ ಆನ್‌ಫೀಲ್ಡ್‌ ಅಂಪೈರ್‌ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಡಿಆರ್‌ಎಸ್‌ (DRS) ತೆಗೆದುಕೊಂಡರು. ಕೊಹ್ಲಿ ಕ್ರೀಸ್‌ ಒಳಗೆ ನಿಂತು ಚೆಂಡನ್ನು ಎದುರಿಸಿದ್ದರೆ, ಆಗ ಅದು ಸೊಂಟದ ಮೇಲ್ಭಾಗಕ್ಕೆ ಬಿದ್ದ ಫುಲ್‌ ಟಾಸ್‌ ನೋಬಾಲ್‌ ಆಗಿರುತ್ತಿತ್ತು. ಆದರೆ ಕೊಹ್ಲಿ ಕ್ರೀಸ್‌ನಿಂದ ಮುಂದಿದ್ದರು. ಇದನ್ನೂ ಓದಿ: ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮಕ್ಕೆ ರೋಹಿತ್‌ ವಿರೋಧ; ಬಿಸಿಸಿಐ ಹೇಳಿದ್ದೇನು? – ಏನಿದು ಇಂಪ್ಯಾಕ್ಟ್‌ ಪ್ಲೇಯರ್‌ ರೂಲ್ಸ್‌?

    ಅಲ್ಲದೇ ಹಾಕ್‌ ಐನಲ್ಲಿ (ಚೆಂಡು ಬೀಳುವ ಕ್ರಮವನ್ನು ಸ್ಕ್ರೀನ್‌ನಲ್ಲಿ ಅಂದಾಜಿಸುವ ಚಿತ್ರಣ) ಚೆಂಡು ವಿಕೆಟ್‌ ನೇರವಾಗಿ ಇರುವು ಕಂಡುಬಂದಿತು. ಆದ್ದರಿಂದ ಕೊಹ್ಲಿ ಅವರ ಕ್ಯಾಚ್‌ ಅನ್ನು ಔಟ್‌ ಎಂದು ತೀರ್ಪು ನೀಡಲಾಯಿತು. ಬಳಿಕ ಅಂಪೈರ್‌ ತೀರ್ಪಿನ ವಿರುದ್ಧವೂ ಆನ್‌ಫೀಲ್ಡ್‌ನಲ್ಲೇ ಅಸಮಾಧಾನ ಹೊರಹಾಕಿದ ಕೊಹ್ಲಿ, ಅಂಪೈರ್‌ಗಳ ಬಳಿ ತೆರಳಿ ವಾದಕ್ಕೆ ಇಳಿದಿದ್ದರು. ಬಳಿಕ ಡ್ರೆಸಿಂಗ್‌ ರೂಮ್‌ನಲ್ಲೂ ಸಹ ಆಟಗಾರರ ಜೊತೆಗೆ ತಮ್ಮ ವಾದ ಮುಂದುವರಿಸಿದರು.

    ನಾಯಕ ಡುಪ್ಲೆಸಿಸ್‌ ಹೇಳಿದ್ದೇನು?
    ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್‌, ಆನ್‌ಫೀಲ್ಡ್‌ ಅಂಪೈರ್‌ಗಳ ಪರ ಬ್ಯಾಟ್‌ ಬೀಸಿದರು. ನಿಯಮಗಳ ಪ್ರಕಾರ ವಿರಾಟ್‌ ಕೊಹ್ಲಿ ಔಟ್‌ ಆಗಿದ್ದಾರೆ. ಅಂಪೈರ್‌ಗಳು ತೆಗೆದುಕೊಂಡ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ. ಶತಾಯ ಗತಾಯ ನಾವು ಪಂದ್ಯ ಗೆಲ್ಲಲೇ ಬೇಕಿತ್ತು. ಟೂರ್ನಿಯಲ್ಲಿ ಪ್ಲೇ ಆಫ್‌ ರೇಸ್‌ನಲ್ಲಿ ಉಳಿಯಲು ಈ ಗೆಲುವು ಅಗತ್ಯವಿತ್ತು. ಆದ್ರೆ ನಾವು ನಮ್ಮ ಅಭಿಮಾನಿಗಳಿಗೂ ನಿರಾಸೆ ಮೂಡಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: IPL 2024: ಹೆಚ್ಚುವರಿ 20 ರನ್‌ ಕೊಟ್ಟಿದ್ದೇ ಆರ್‌ಸಿಬಿಗೆ ಮುಳುವಾಯ್ತಾ? – ಗ್ರೀನ್‌ ಬಾಯ್ಸ್‌ ಎಡವಿದ್ದೆಲ್ಲಿ?

    ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಫೀಲ್ಡಿಂಗ್‌ಗೆ ಇಳಿದ ಆರ್‌ಸಿಬಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಕೋಲ್ಕತ್ತಾ ನೈಟ್‌ರೈಡರ್ಸ್‌ಗೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 222 ರನ್ ಬಾರಿಸಿತ್ತು. 223 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 221 ರನ್‌ ಗಳಿಸಿ ವಿರೋಚಿತ ಸೋಲನುಭವಿಸಿತು. ಇದನ್ನೂ ಓದಿ: ಟಿ20 ವಿಶ್ವಕಪ್‌: ಐರ್ಲೆಂಡ್‌, ಸ್ಕಾಟ್ಲೆಂಡ್‌ ತಂಡಗಳಿಗೆ ಕರ್ನಾಟಕದ ‘ನಂದಿನಿ’ ಪ್ರಯೋಜಕತ್ವ