Tag: Factory

  • ಬಟ್ಟೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ನಾಲ್ವರು ಸಜೀವ ದಹನ!

    ಬಟ್ಟೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ನಾಲ್ವರು ಸಜೀವ ದಹನ!

    ನವದೆಹಲಿ: ಬಟ್ಟೆ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸಜೀವವಾಗಿ ದಹನವಾಗಿರುವ ಘಟನೆ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ನಡೆದಿದೆ.

    ಸೋಮವಾರ ಮಧ್ಯಾಹ್ನ 12.30ರ ವೇಳೆಗೆ ಬಟ್ಟೆ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ನಾಲ್ವರು ಸಜೀವವಾಗಿ ಸುಟ್ಟುಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅಗ್ನಿಶಾಮಕ ಅಧಿಕಾರಿ, ಕಾರ್ಖಾನೆಯಲ್ಲಿ ಕಾರ್ಮಿಕರು ಬಟ್ಟೆಗಳನ್ನು ಸ್ಟೀಮ್ ಮಾಡುವ ಮೂಲಕ ಒಣಗಿಸುವ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಹೊರಬರುತ್ತಿರುವಾಗ ಓರ್ವ ಬಲಶಾಲಿ ವ್ಯಕ್ತಿ ಬಾಗಿಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಇದರಿಂದಾಗಿ ನಾಲ್ವರು ಹೊರಬರಲಾಗದೇ ಬೆಂಕಿಗೆ ಆಹುತಿಯಾಗಿದ್ದಾರೆ. ಕಾರ್ಖಾನೆಯಯಲ್ಲಿ ಒಂದೇ ಒಂದು ದ್ವಾರವನ್ನು ಹೊರತುಪಡಿಸಿ, ಬೇರೆ ಯಾವುದೇ ಮಾರ್ಗಗಳು ಇರಲಿಲ್ಲವೆಂದು ತಿಳಿಸಿದ್ದಾರೆ.

    ಮೃತರನ್ನು ಬಗಾನ್ ಪ್ರಸಾದ್(55), ಆರ್.ಎಂ.ನರೇಶ್(40), ಆರತಿ (20) ಹಾಗೂ ಆಶಾ(40) ಎಂದು ಗುರುತಿಸಲಾಗಿದ್ದು, 25 ವರ್ಷದ ಅಜಿತ್ ಎಂಬವರ ಸ್ಥಿತಿ ಗಂಭೀರವಾಗಿದೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ 6 ಬಲಿ- ತೀವ್ರತೆಗೆ ಹಲವು ದೂರ ಹಾರಿ ಬಿದ್ದವು ದೇಹಗಳು

    ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ 6 ಬಲಿ- ತೀವ್ರತೆಗೆ ಹಲವು ದೂರ ಹಾರಿ ಬಿದ್ದವು ದೇಹಗಳು

    ಲಕ್ನೋ: ಖಾಸಗಿ ಪೆಟ್ರೋಲ್ ಕೆಮಿಕಲ್ ಕಾರ್ಖಾನೆಯೊಂದರಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ 6 ಜನ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ.

    ಕಾರ್ಮಿಕರಾದ ಕಮಲ್‍ವೀರ್, ಲೋಕೇಂದ್ರ, ರವಿ, ಚೇತ್ರಂ, ವಿಕ್ರಾಂತ್ ಹಾಗೂ ಬಾಲ ಗೋವಿಂದ ಮೃತ ದುರ್ದೈವಿಗಳು. ಘಟನೆಯಲ್ಲಿ ಕಪಿಲ್, ಪರ್ವಿಜ್ ಮತ್ತು ರಾಮ್ ಎನ್ನುವರು ನಾಪತ್ತೆಯಾಗಿದ್ದಾರೆ.

    ಈ ಅವಘಡದಲ್ಲಿ 8 ಜನರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ 6 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಬಿಜ್ನೋರ್ ಎಸ್‍ಪಿ ಉಮೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

    ನಡೆದದ್ದು ಏನು?
    ಬುಧವಾರ ಕೊತ್ವಾಲಿ ನಗರದ ನಗಿನಾ ರಸ್ತೆಯ ಮೋಹಿತ್ ಖಾಸಗಿ ಪೆಟ್ರೋಲ್ ಕೆಮಿಕಲ್ ಕಾರ್ಖಾನೆಯಲ್ಲಿ ಕೆಲಸಗಾರರು ಮಿಥೇನ್ ಗ್ಯಾಸ್ ಟ್ಯಾಂಕರ್ ದುರಸ್ತಿ ಮಾಡುತ್ತಿದ್ದರು. ಈ ವೇಳೆ ಬೆಂಕಿ ಕಾಣಿಸಿಕೊಂಡು ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡಿದೆ.

    ಟ್ಯಾಂಕರ್ ಸ್ಫೋಟದ ತೀವ್ರತೆಗೆ ಕಾರ್ಮಿಕರ ದೇಹವು ಸುಮಾರು ಮೀಟರ್ ದೂರಕ್ಕೆ ಸಿಡಿದು ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಮೃತ ಕಾರ್ಮಿಕರ ಕುಟುಂಬದವರು ಹಾಗೂ ಸ್ಥಳೀಯರು ಸೇರಿದಂತೆ ಅನೇಕರು ಘಟನಾ ಸ್ಥಳದಲ್ಲಿ ಸೇರಿದ್ದಾರೆ.

    ಸುರಕ್ಷತೆ ಒದಗಿಸದೇ ಕಾರ್ಮಿಕರ ಸಾವಿಗೆ ಕಾರಣವಾದ ಕಂಪೆನಿ ಮಾಲೀಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಗಂಭೀರವಾಗಿ ಗಾಯಗೊಂಡ ಕಾರ್ಮಿಕರ ಚಿಕಿತ್ಸೆಗೆ ಅವಶ್ಯಕ ವ್ಯವಸ್ಥೆಯನ್ನು ಒದಗಿಸುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಣ್ಣ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ- ತಪ್ಪಿತು ಭಾರೀ ದುರಂತ

    ಬಣ್ಣ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ- ತಪ್ಪಿತು ಭಾರೀ ದುರಂತ

    ಬೆಂಗಳೂರು: ಬಣ್ಣ ತಯಾರಿಕಾ ಕಾರ್ಖಾನೆಯೊಂದಕ್ಕೆ ತಡರಾತ್ರಿ ಬೆಂಕಿ ಬಿದ್ದ ಪರಿಣಾಮ, ಕಾರ್ಖಾನೆಯಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ನಗರದ ಹೊರವಲಯ ಆನೇಕಲ್‍ನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಜಿಗಣಿ ವಡ್ಡರಾಮಚನಹಳ್ಳಿ ರಸ್ತೆಯಲ್ಲಿರುವ ಕಲರ್ ಟೆಕ್  ಪ್ರೋಡಕ್ಷನ್ ಎಂಬ ಬಣ್ಣ ತಯಾರಿಕಾ ಕಾರ್ಖಾನೆಯ ಎರಡನೇ ಮಹಡಿಯಲ್ಲಿ ತಡರಾತ್ರಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಪರಿಣಾಮ ಎರಡನೇ ಮಹಡಿಯಲಿದ್ದ ಲಕ್ಷಾಂತರ ಮೌಲ್ಯದ ಪೀಠೋಪಕರಣಗಳು, ಹಾಗೂ ಬಣ್ಣದ ಕಚ್ಚಾ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿವೆ.

    ಸ್ಥಳಕ್ಕೆ ಆಗಮಿಸಿದ ಎಲೆಕ್ಟ್ರಾನಿಕ್ ಸಿಟಿಯ 2 ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದೆಂದು ಶಂಕೆ ವ್ಯಕ್ತವಾಗಿದ್ದು, ಕಾರ್ಖಾನೆಯಲ್ಲಿ ರಾತ್ರಿ ವೇಳೆ ಕೆಲಸ ಇರದೇ ಇದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಹೊಸಪೇಟೆಯ ತುಂಗಭದ್ರಾ ಸ್ಟೀಲ್ ಫ್ಯಾಕ್ಟರಿ ಇನ್ನು ನೆನಪು ಮಾತ್ರ

    ಹೊಸಪೇಟೆಯ ತುಂಗಭದ್ರಾ ಸ್ಟೀಲ್ ಫ್ಯಾಕ್ಟರಿ ಇನ್ನು ನೆನಪು ಮಾತ್ರ

    ಬಳ್ಳಾರಿ: ಉದ್ಯೋಗ ಸೃಷ್ಠಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಕಾರ್ಖಾನೆಗಳ ಸ್ಥಾಪನೆಗೆ ಅವಕಾಶ ನೀಡುತ್ತೆ. ಆದ್ರೆ ಸ್ವಂತ ಕೇಂದ್ರ ಸರ್ಕಾರಿ ಸ್ವಾಮ್ಯದ ಉಕ್ಕಿನ ಕಾರ್ಖಾನೆಗೇ ಇದೀಗ ಕೇಂದ್ರ ಸರ್ಕಾರ ಬೀಗ ಜಡಿದಿದೆ. ಹೌದು, ಆರ್ಥಿಕ ಮುಗ್ಗಟ್ಟಿನಿಂದ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಸ್ಟೀಲ್ ಫ್ಯಾಕ್ಟರಿಗೆ ಬೀಗ ಬಿದ್ದಿದೆ.

    ತುಂಗಭದ್ರಾ ಜಲಾಶಯ ಸ್ಥಾಪನೆಗೂ ಮುನ್ನ ಅಂದ್ರೆ 1948ರಲ್ಲಿ ಆರಂಭವಾದ ತುಂಗಭದ್ರಾ ಸ್ಟೀಲ್ ಫ್ಯಾಕ್ಟರಿಯಲ್ಲಿ ಇದುವರೆಗೂ ಜಲಾಶಯದ ಕ್ರಸ್ಟ್ ಗ್ರೇಟ್ ಹಾಗೂ ಉಕ್ಕಿನ ವಸ್ತುಗಳನ್ನು ತಯಾರಿಸಲಾಗುತ್ತಿತ್ತು. ಆದ್ರೆ ಇನ್ಮುಂದೆ ಈ ಉಕ್ಕಿನ ಕಾರ್ಖಾನೆ ಅಕ್ಷರಶಃ ನೆನಪು ಮಾತ್ರ.

    ಆರ್ಥಿಕ ಮುಗ್ಗಟ್ಟು ಹಾಗೂ ಅದಿರು ಸರಬರಾಜಿನ ಕೊರೆತೆಯ ನೆಪವೊಡ್ಡಿ ಕೇಂದ್ರ ಸರ್ಕಾರ ಅತ್ಯಂತ ಹಳೆಯದಾದ ಈ ಕಾರ್ಖಾನೆಯನ್ನು ಮುಚ್ಚಲು ಆದೇಶ ನೀಡುವ ಮೂಲಕ ಕಾರ್ಖಾನೆಗೆ ಬೀಗ ಜಡಿದಿದೆ. ಆದ್ರೆ ಖಾಸಗಿ ಅದಿರು ಕಂಪನಿಗಳ ಲಾಭಿಗೆ ಮಣಿದು ಕೇಂದ್ರ ಸರ್ಕಾರ ತುಂಗಭದ್ರಾ ಸ್ಟೀಲ್ ಕಾರ್ಖಾನೆಗೆ ಬೀಗ ಬಿಳುವಂತೆ ಮಾಡಿದೆ ಅಂತಾ ಸ್ಥಳೀಯರು ಆರೋಪಿಸುತ್ತಿದ್ದಾರೆ.

    ಈ ತುಂಗಭದ್ರಾ ಸ್ಟೀಲ್ ಕಾರ್ಖಾನೆಯಲ್ಲಿ ಕೇಂದ್ರ ಸರ್ಕಾರದ ಶೇಕಡಾ 79ರಷ್ಟು ಶೇರು ಹಣವಿದೆ. ಇನ್ನುಳಿದಂತೆ ಶೇಕಡಾ 12ರಷ್ಟು ಆಂಧ್ರಪ್ರದೇಶ ಮತ್ತು 9ರಷ್ಟು ರಾಜ್ಯದ ಪಾಲಿದೆ. ಅಲ್ಲದೇ ಉಕ್ಕಿನ ನಗರಿ, ಅದಿರಿನ ಕಣಜವೆಂದು ಕರೆಯುವ ಗಣಿನಾಡಿನಲ್ಲೇ ಈ ಸರ್ಕಾರಿ ಸ್ವಾಮ್ಯದ ಸ್ಟೀಲ್ ಕಾರ್ಖಾನೆಗೆ ಸರಿಯಾಗಿ ಅದಿರು ಸಿಗದ ಪರಿಣಾಮ ಈ ಕಾರ್ಖಾನೆ ಆರ್ಥಿಕ ಮುಗ್ಗಟ್ಟು ಎದುರಿಸುವಂತಾಯ್ತು. ಹೀಗಾಗಿ ಕಾರ್ಖಾನೆ ಮುಚ್ಚುತ್ತೆ ಅನ್ನೋ ಭಯದಿಂದ ಈಗಾಗಲೇ 350ಕ್ಕೂ ಹೆಚ್ಚು ನೌಕರರು ಸ್ವಯಂ ನಿವೃತ್ತಿ ಪಡೆದಿದ್ದಾರೆ.

    ಅಲ್ಲದೇ ಕಾರ್ಖಾನೆಗೆ ಸೇರಿದ 83 ಎಕರೆ ಜಾಗವನ್ನು ಈಗಾಗಲೇ ಹೌಸಿಂಗ್ ಬೋರ್ಡ್ ಗೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ನೌಕರರು ಇದೀಗ ಬೀದಿಗೆ ಬೀಳುವಂತಾಗಿದೆ.

    ದೀಪದ ಕೆಳಗೆ ಕತ್ತಲು ಎನ್ನುವಂತೆ ಗಣಿ ನಾಡಿನಲ್ಲೇ ಕೇಂದ್ರ ಸರ್ಕಾರಿ ಸ್ವಾಮ್ಯದ ಉಕ್ಕಿನ ಕಾರ್ಖಾನೆಗೆ ಅದಿರು ಸಿಗದಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

  • ಯಲ್ಲಾಪುರದಲ್ಲಿ ಅಪ್ರಾಪ್ತೆಯ ಮೇಲೆ ಐವರಿಂದ ಗ್ಯಾಂಗ್‍ರೇಪ್!

    ಯಲ್ಲಾಪುರದಲ್ಲಿ ಅಪ್ರಾಪ್ತೆಯ ಮೇಲೆ ಐವರಿಂದ ಗ್ಯಾಂಗ್‍ರೇಪ್!

    ತುಮಕೂರು: ಅಪ್ರಾಪ್ತ ಬಾಲಕಿ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ತುಮಕೂರಿನ ಯಲ್ಲಾಪುರದಲ್ಲಿ ನಡೆದಿದೆ.

    ಹರೀಶ್, ಮಧು, ಕೇಶವ್, ಚಿದಾನಂದ, ಚಂದು ಅತ್ಯಾಚಾರ ಮಾಡಿದ ಆರೋಪಿಗಳು. ಬುಧವಾರ ರಾತ್ರಿ ಯಲ್ಲಾಪುರದ ಸ್ಥಗಿತಗೊಂಡ ಫ್ಯಾಕ್ಟರಿ ಒಂದರಲ್ಲಿ ಅತ್ಯಾಚಾರ ನಡೆಸಿದ್ದಾರೆ.

    ಮಹಿಳಾ ಪೊಲೀಸರು ಆರೋಪಿ ಹರೀಶ್ ಹಾಗೂ ಚಿದಾನಂದನನ್ನು ಬಂಧಿಸಿದ್ದು, ಉಳಿದ ಮೂವರು ಆರೋಪಿಗಾಗಿ ಶೋಧ ನಡೆಸಿದ್ದಾರೆ. ಸಂತ್ರಸ್ಥ ಬಾಲಕಿ ಆರೋಪಿ ಹರೀಶನ ಸ್ನೇಹಿತೆಯಾಗಿದ್ದು, ಪುಸಲಾಯಿಸಿಕೊಂಡು ಸಿನಿಮಾಕ್ಕೆಂದು ಆಟೋದಲ್ಲಿ ಕರೆದುಕೊಂಡು ಬಂದಿದ್ದಾನೆ. ಬಳಿಕ ಇನ್ನುಳಿದ ನಾಲ್ವರು ಸ್ನೇಹಿತರೊಂದಿಗೆ ಪಾಳು ಫ್ಯಾಕ್ಟರಿಯಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ.

  • ಪ್ಲಾಸ್ಟಿಕ್ ಬಾಟಲ್ ತಯಾರಿಸೋ ಫ್ಯಾಕ್ಟರಿಯಲ್ಲಿ ಕಬ್ಬಿಣದ ರಾಡ್ ಎದೆಗೆ ಚುಚ್ಚಿ ವ್ಯಕ್ತಿ ಸಾವು

    ಪ್ಲಾಸ್ಟಿಕ್ ಬಾಟಲ್ ತಯಾರಿಸೋ ಫ್ಯಾಕ್ಟರಿಯಲ್ಲಿ ಕಬ್ಬಿಣದ ರಾಡ್ ಎದೆಗೆ ಚುಚ್ಚಿ ವ್ಯಕ್ತಿ ಸಾವು

    ಹೈದರಾಬಾದ್: ಫ್ಯಾಕ್ಟರಿಯಲ್ಲಿ ವ್ಯಕ್ತಿಯೊಬ್ಬರ ಎದೆಗೆ ಯಂತ್ರದ ಕಬ್ಬಿಣದ ರಾಡ್ ಚುಚ್ಚಿಕೊಂಡು ಸಾವನ್ನಪ್ಪಿರೋ ಘಟನೆ ಆಂಧ್ರಪ್ರದೇಶದ ಕರ್ನೂಲ್‍ನಲ್ಲಿ ನಡೆದಿದೆ.

    ಇಲ್ಲಿನ ಪ್ಲಾಸ್ಟಿಕ್ ಬಾಟಲ್ ತಯಾರಿಕಾ ಘಟಕದಲ್ಲಿ ಬುಧವಾರದಂದು ಈ ಅವಘಡ ಸಂಭವಿಸಿದೆ. ಮೃತ ವ್ಯಕ್ತಿಯನ್ನು 22 ವರ್ಷದ ಯಲ್ಲಪ್ಪ ಎಂದು ಗುರುತಿಸಲಾಗಿದೆ. ಯಲ್ಲಪ್ಪ ಅವರು ಇತರೆ ಕೆಲವರೊಂದಿಗೆ ಜಿತೇಶ್ ಪ್ಲಾಸ್ಟಿಕ್ ಬಾಟಲ್ ತಯಾರಿಕಾ ಸಂಸ್ಥೆಯಲ್ಲಿ ಕಾರ್ಕ್ ಮೇಕಿಂಗ್ ಮಷೀನ್ ರಿಪೇರಿ ಮಾಡುತ್ತಿದ್ದರು. ಯಂತ್ರವನ್ನು ಜರುಗಿಸಲು ಪ್ರಯತ್ನಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಯಂತ್ರ ತಿರುಗಿ ಗೋಡೆ ಮತ್ತು ಯಂತ್ರದ ನಡುವೆ ಯಲ್ಲಪ್ಪ ಸಿಲುಕಿದ್ದರು.

    ಯಂತ್ರದಲ್ಲಿದ್ದ ಕಬ್ಬಿಣದ ರಾಡ್ ಯಲ್ಲಪ್ಪ ಅವರ ಎದೆಗೆ ಚುಚ್ಚಿಕೊಂಡು ತೀವ್ರ ರಕ್ತಸ್ರಾವವಾಗಿತ್ತು. ಯಂತ್ರವನ್ನ ತೆಗೆದು ಯಲ್ಲಪ್ಪ ಅವರನ್ನು ಹೊರಗೆಳೆಯುವ ಮುನ್ನವೇ ಅವರು ಸಾವನ್ನಪ್ಪಿದ್ದರು.

    ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಸ್ಟೀಮ್ ಅಕ್ಕಿ ತಯಾರಿಕೆಗೆ ಬಳಸಿದ ರಾಸಾಯನಿಕ ನೀರನ್ನ ಹಳ್ಳಕ್ಕೆ ಬಿಡ್ತಿರೋ ಕಾರ್ಖಾನೆ- ಜಾನುವಾರುಗಳ ಸಾವು, ಬೆಳೆ ಹಾನಿ

    ಸ್ಟೀಮ್ ಅಕ್ಕಿ ತಯಾರಿಕೆಗೆ ಬಳಸಿದ ರಾಸಾಯನಿಕ ನೀರನ್ನ ಹಳ್ಳಕ್ಕೆ ಬಿಡ್ತಿರೋ ಕಾರ್ಖಾನೆ- ಜಾನುವಾರುಗಳ ಸಾವು, ಬೆಳೆ ಹಾನಿ

    ರಾಯಚೂರು: ಜಿಲ್ಲೆಯ ಜನರಿಗೆ ಅದ್ಯಾಕೋ ನೆಮ್ಮದಿ ಅನ್ನೋದೇ ಸಿಗುತ್ತಿಲ್ಲ. ಮಳೆ ಬರಲ್ಲ, ಅಪ್ಪಿತಪ್ಪಿ ಬಂದ್ರೆ ಪ್ರವಾಹ. ನೆಮ್ಮದಿಯಾಗಿ ಬದುಕೋಣ ಅಂದ್ರೆ ಒಳ್ಳೆಯ ಗಾಳಿ ಕೂಡ ಸಿಗುತ್ತಿಲ್ಲ. ಯಾಕಂದ್ರೆ ವಿಷ ಹೊರಹಾಕುವ ಕಂಪನಿಗಳು ಜನರ ಜೀವ ತೆಗೆಯುತ್ತಿವೆ.

    ರಾಯಚೂರು-ಹೈದರಾಬಾದ್ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳು ಮಾಡುವ ಪರಿಸರ ಮಾಲಿನ್ಯವನ್ನು ಪ್ರಶ್ನೆ ಮಾಡುವವರೇ ಇಲ್ಲ. ಈ ಹಿಂದೆ ಶಿಲ್ಪಾ ಫಾರ್ಮಾಸಿಟಿಕಲ್ ಫ್ಯಾಕ್ಟರಿಯ ನಿರ್ಲಕ್ಷ್ಯದ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಆದರೂ ಕಾರ್ಖಾನೆಗಳ ಆಟಾಟೋಪಕ್ಕೆ ಬ್ರೇಕ್ ಬಿದ್ದಿಲ್ಲ.

    ಯರಮರಸ್ ಬಳಿಯ ಮಂಚುಕೊಂಡ ಆಗ್ರೋಟೆಕ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ಸ್ಟೀಮ್ ಅಕ್ಕಿ ತಯಾರಿಕೆಗೆ ಬಳಸಿದ ರಾಸಾಯನಿಕ ನೀರನ್ನು ನೇರವಾಗಿ ಚಿಕ್ಕಸುಗೂರು ಹಳ್ಳಕ್ಕೆ ಬಿಡುತ್ತಿದೆ. ವಿಷದ ನೀರನ್ನು ಕುಡಿಯುವ ಎತ್ತು, ಎಮ್ಮೆ, ಕುರಿಗಳು ಸಾವನ್ನಪ್ಪುತ್ತಿವೆ. ಸುತ್ತಮುತ್ತಲಿನ ಜನರು ನಾನಾ ಚರ್ಮ ರೋಗಕ್ಕೆ ತುತ್ತಾಗಿದ್ದಾರೆ. ವಿಷದ ನೀರಿಗೆ ರೈತರು ಬೆಳೆದ ಹತ್ತಿ, ಮೆಣಸಿನಕಾಯಿ ಬೆಳೆ ಬಾಡಿ ಹೋಗಿವೆ.

    ಕಾರ್ಖಾನೆಗಳ ವಿರುದ್ಧ ಗ್ರಾಮಸ್ಥರು ಎಷ್ಟೇ ಹೋರಾಟ ಮಾಡಿದರೂ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೇವಲ ನೋಟಿಸ್ ಕೊಟ್ಟು ಸುಮ್ಮನಾಗಿದೆ. ಈ ಬಗ್ಗೆ ಶಾಸಕರನ್ನು ಪ್ರಶ್ನಿಸಿದರೆ ಅವರು ತೇಪೆ ಹಚ್ಚುವ ಸ್ಟೇಟ್‍ಮೆಂಟ್ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಕಾರ್ಖಾನೆಗಳಿಂದಾಗಿ ರಾಯಚೂರಿನ ಜನರಿಗೆ ಶುದ್ಧ ನೀರು, ಶುದ್ಧ ಗಾಳಿ ಅನ್ನೋದು ಮರೀಚಿಕೆಯಾಗಿದೆ.

     

  • ಇಟ್ಟಿಗೆ ಕಾರ್ಖಾನೆ ಚಿಮಿಣಿ ಬಿದ್ದು ಒಂದೇ ಕುಟುಂಬದ ಮೂವರ ಸಾವು

    ಇಟ್ಟಿಗೆ ಕಾರ್ಖಾನೆ ಚಿಮಿಣಿ ಬಿದ್ದು ಒಂದೇ ಕುಟುಂಬದ ಮೂವರ ಸಾವು

    ಕೋಲಾರ: ಇಟ್ಟಿಗೆ ಕಾರ್ಖಾನೆಯ ಚಿಮಿಣಿ ಬಿದ್ದು ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ರಾಜ್‍ಪೇಟೆ ಸಮೀಪದಲ್ಲಿ ಇಂದು ಮುಂಜಾನೆ ನಡೆದಿದೆ.

    ಜೋಡಿಕೃಷ್ಣ ಪುರಂನ ನಿವಾಸಿಗಳಾದ ಬಾಷಾ(60), ಫಾತಿಮಾ (50) ಮತ್ತು ಐದು ವರ್ಷದ ಅವರ ಮೊಮ್ಮಗ ನಯಾಜ್ ಮೃತ ದುರ್ದೈವಿಗಳು. ಜೈರಾಜ್ ಎಂಬವರಿಗೆ ಸೇರಿದ ಹಳೆಯ ಇಟ್ಟಿಗೆ ಕಾರ್ಖಾನೆ ಇದಾಗಿದ್ದು, ಇತ್ತೀಚಿಗೆ ಮಳೆ ಬೀಳುತ್ತಿರುವ ಪರಿಣಾಮವಾಗಿ ಚಿಮಿಣಿ ಕುಸಿದು ಬಿದ್ದಿದ್ದೆ.

    ಚಿಮಣಿಯ ಪಕ್ಕದ ಶೆಡ್ ನಲ್ಲಿ ಮಲಗಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಾಷಾ ಮತ್ತು ಫಾತಿಮಾ ಇದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ. ಈ ಸಂಬಂಧ ಅಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಡಿಯೋ: ಕಾರ್ಮಿಕನ ಕೈ ಯಂತ್ರಕ್ಕೆ ಸಿಲುಕಿ ನರಳಾಟ

    ವಿಡಿಯೋ: ಕಾರ್ಮಿಕನ ಕೈ ಯಂತ್ರಕ್ಕೆ ಸಿಲುಕಿ ನರಳಾಟ

    ಕೋಲಾರ: ಕಾರ್ಖಾನೆಯಲ್ಲಿ ಕಾರ್ಮಿಕನ ಕೈ ಯಂತ್ರಕ್ಕೆ ಸಿಲುಕಿ ನರಳಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

    ಕೋಲಾರ ಜಿಲ್ಲೆ ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದ್ವಿಚಕ್ರ ವಾಹನದ ಬಿಡಿಭಾಗಗಳನ್ನು ತಯಾರಿಸುವ ಸಾಯಿನಾಥ ಇಂಡಸ್ಟ್ರೀಸ್‍ನಲ್ಲಿ ಘಟನೆ ನಡೆದಿದೆ. ಆದ್ರೆ ಇದರ ಬಗ್ಗೆ ಎಲ್ಲೂ ಬಾಯಿ ಬಿಡದಂತೆ ಕಾರ್ಖಾನೆ ನೌಕರರಿಗೆ ಮಾಲೀಕರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

    ಬಿಹಾರ ಮೂಲದ ಈ ಕಾರ್ಮಿಕನಿಗೆ ಗಾಯವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://www.youtube.com/watch?v=ncV-kx-M9dQ&feature=youtu.be

  • ಇಲ್ಲಿ ನೀರು ಹಾಯಿಸಿದ್ರೆ ಬೆಳೆ ಒಣಗುತ್ತೆ, ಹಾಲು ಒಡೆದುಹೋಗುತ್ತೆ – ಚಿಕ್ಕಬಳ್ಳಾಪುರದಲ್ಲಿ ಭೂಮಿಯ ಒಡಲಿಗೆ ವಿಷ

    ಇಲ್ಲಿ ನೀರು ಹಾಯಿಸಿದ್ರೆ ಬೆಳೆ ಒಣಗುತ್ತೆ, ಹಾಲು ಒಡೆದುಹೋಗುತ್ತೆ – ಚಿಕ್ಕಬಳ್ಳಾಪುರದಲ್ಲಿ ಭೂಮಿಯ ಒಡಲಿಗೆ ವಿಷ

    ಚಿಕ್ಕಬಳ್ಳಾಪುರ: ನೀರು ಜೀವ ಉಳಿಸೋ ಅಮೃತ ಆದ್ರೆ ಅಂತಹ ಜೀವಾಮೃತವೇ ವಿಷವಾಗಿದೆ. ಕೈಗಾರಿಕೆಗಳ ದುರ್ಮಾರ್ಗದ ಅವಾಂತರಕ್ಕೆ ಜೀವ ಉಳಿಸೋ ಜೀವಜಲವೇ ವಿಷವಾಗಿ ಮಾರ್ಪಾಡಾಗಿದೆ. ಭೂ ತಾಯಿಯ ಒಡಲಿಗೆ ಕಾರ್ಖಾನೆಗಳು ಬಿಡ್ತಿರೋ ರಾಸಾಯನಿಕ ತ್ಯಾಜ್ಯಗಳಿಂದ ಜೀವ ಜಲವೇ ವಿಷವಾಗಿ ಹೋಗಿದೆ. ಕೊಳವೆಬಾವಿಗಳಿಂದ ಬರ್ತಿರೋ ನೀರು ಕುಡಿಯೋಕೂ ಆಗ್ತಿಲ್ಲ, ಅಡುಗೆ ಮಾಡೋಕೂ ಆಗ್ತಿಲ್ಲ. ಕನಿಷ್ಠ ಬೆಳೆ ಬೆಳೆಯೋಣ ಎಂದರೆ ಅದೂ ಸಾಧ್ಯವಾಗ್ತಿಲ್ಲ.

    ಚಿಕ್ಕಬಳ್ಳಾಪುರ ನಗರ ಹೊರವಲಯದ ಕೈಗಾರಿಕಾ ಪ್ರದೇಶದ ಹಿಂಭಾಗದ ರೈತರ ಕೊಳವೆಬಾವಿಗಳಲ್ಲಿ ರಾಸಾಯನಿಕ ಮಿಶ್ರಿತ ನೀರು ಹೊರಬರುತ್ತಿದೆ. ಕೈಗಾರಿಕಾ ಪ್ರದೇಶದ ಅಕ್ಕಪಕ್ಕದ ರೈತರ ಕೊಳವೆಬಾವಿಗಳಲ್ಲಿ ಕೆಮಿಕಲ್ ಮಿಶ್ರಿತ ನೀರು ಹೊರ ಬರುತ್ತಿದ್ದು, ಈ ನೀರು ಕುಡಿದ್ರೆ ಬಾಯಿ ಸುಟ್ಟ ಅನುಭವವಾಗುತ್ತಿದೆಯಂತೆ. ಆಡುಗೆಗೆ ಬಳಸಿದ್ರೆ ಮಾಡಿದ ಆಡುಗೆಯೆಲ್ಲಾ ಹಳಸಿ ಹಾಳಾಗುತ್ತೆ. ಬಟ್ಟೆ ತೊಳೆದ್ರೆ ಬಟ್ಟೆಯ ಮೇಲೆಲ್ಲಾ ಕೆಂಪು ಬಣ್ಣದ ಕಲೆಗಳು ಮೂಡುತ್ತೆ. ಇನ್ನೂ ಕನಿಷ್ಠ ಬೆಳೆ ಬೆಳೆಯೋಣ ಅಂದ್ರೆ ಹಾಕಿದ ಬೆಳೆಗಳೆಲ್ಲಾ ಒಣಗಿ ಹೋಗ್ತಿವೆ ಎಂದು ಸ್ಥಳೀಯ ರೈತರು ಆರೋಪ ಮಾಡುತ್ತಿದ್ದಾರೆ.

    ಕಾರಣವೇನು?: ಕೈಗಾರಿಕಾ ಪ್ರದೇಶದ ರಾಮ ರಾಸಾಯನಿಕ, ಸೌತರ್ನ್ ಆಗ್ರೋ, ಡೈನಾಕ್ಷ್ ಪ್ರೈವೇಟ್ ಹಾಗೂ ಇತರೆ ಕೆಲ ಕಾರ್ಖಾನೆಗಳಲ್ಲಿನ ರಾಸಾಯನಿಕ ನೀರು ಸದ್ದಿಲ್ಲದೇ ಭೂ ತಾಯಿಯ ಒಡಲು ಸೇರುತ್ತಿದೆ. ರೈತರ ಸಹಾಯಕ್ಕೆ ಧಾವಿಸಿರೋ ಮಾನವ ಹಕ್ಕುಗಳು ಜಾಗೃತಿ ಸಮಿತಿ ಸಂಘಟನೆಯ ಸದಸ್ಯರು ಕಾರ್ಖಾನೆಗಳ ಮೇಲೆ ದಾಳಿ ನಡೆಸಿದಾಗ ಇದರ ಆಸಲಿಯತ್ತು ಕೂಡ ಬಯಲಾಯಿತು. ಹಲವು ಕಾರ್ಖಾನೆಗಳ ರಾಸಾಯನಿಕ ನೀರನ್ನು ಭೂಮಿಗೆ ಬಿಟ್ಟಿರೋದು ಕಂಡು ಬಂದಿದೆ.

    ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೊಳವೆಬಾವಿ ಕೊರೆಸಿ ಬೆಳೆ ಬೆಳೆಯೋಣ ಅಂದ್ರೆ ಕೈಗಾರಿಕೆಗಳ ದುಡ್ಡು ಬಾಕತನಕ್ಕೆ ಅನ್ನದಾತರು ಈಗ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಈಗಾಲಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಭೂತಾಯಿಯ ಒಡಲಿಗೆ ಸೇರ್ತಿರೋ ವಿಷಕ್ಕೆ ಬ್ರೇಕ್ ಹಾಕಬೇಕಿದೆ. ಇದನ್ನೆಲ್ಲಾ ನೋಡಬೇಕಾದ ಜಿಲ್ಲಾಡಳಿತ ಅದ್ಯಾವಾಗ ನಿದ್ದೆಯಿಂದ ಎದ್ದೇಳುತ್ತೋ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಚಿಕ್ಕಬಳ್ಳಾಪುರ ಡಿಸಿ ದೀಪ್ತಿ ಆದಿತ್ಯಾ ಕಾನಡೆ ಪ್ರತಿಕ್ರಿಯೆ ನೀಡಿದ್ದು, ಕೈಗಾರಿಕೆಗಳು ರಾಸಾಯನಿಕ ತ್ಯಾಜ್ಯದ ನೀರನ್ನು ಭೂಮಿಗೆ ಬಿಟ್ಟಿರುವುದು ಕಂಡುಬಂದಿದೆ. ದೂರು ಬಂದ ದಿನವೇ ಪರಿಸರ ಮಾಲಿನ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈಗಾಗಲೇ ಎರಡು ಕಾರ್ಖಾನೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಕೊಳವೆಬಾವಿಗಳ ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಹೇಳಿದ್ದಾರೆ.