Tag: Factory

  • ಕೆಮಿಕಲ್ ನೀರಿನಿಂದ ಕೆರೆಯಲ್ಲಿ ಬೆಂಕಿ

    ಕೆಮಿಕಲ್ ನೀರಿನಿಂದ ಕೆರೆಯಲ್ಲಿ ಬೆಂಕಿ

    ಬೆಂಗಳೂರು: ಕೆಲ ದಿನಗಳ ಹಿಂದೆ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿ ವಿಶ್ವದಲ್ಲೇ ಬೆಂಗಳೂರಿನ ಮಾನವನ್ನು ಹರಾಜು ಹಾಕಿತ್ತು. ಇದೀಗ ಬೆಂಗಳೂರಿನ ಮತ್ತೊಂದು ಕೆರೆಯಲ್ಲಿ ಕೆಮಿಕಲ್ ನೀರಿನಿಂದ ಬೆಂಕಿ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ.

    ಬೆಂಗಳೂರು ಹೊರವಲಯದ ಆನೇಕಲ್‍ನ ಬೊಮ್ಮಸಂದ್ರ ಕೆರೆಯ ಸುತ್ತಮುತ್ತ ನೂರಾರು ಕೆಮಿಕಲ್ ಕಾರ್ಖಾನೆಗಳಿದೆ. ಈ ಕಾರ್ಖಾನೆಗಳು ಬಿಡುವ ಕೆಮಿಕಲ್‍ನಿಂದ ಕೆರೆ ಸಂಪೂರ್ಣ ಕಲುಷಿತಗೊಂಡಿದೆ. ಇಂದು ಸಹ ಕೆಲವು ಕಾರ್ಖಾನೆಗಳು ಕೆಮಿಕಲ್ ನೀರನ್ನು ಕಾಲುವೆಗೆ ಬಿಟ್ಟಿದ್ದು, ಕೆಮಿಕಲ್ ಹಾಗೂ ನೀರು ಎರಡು ಬೆರೆತ ತಕ್ಷಣ ಬೆಂಕಿ ಕಾಣಿಸಿ ಕೊಂಡಿದೆ. ಇದರಿಂದ ಕೆರೆ ಒಂದು ಭಾಗ ಸುಟ್ಟು ಹೋಗಿ ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬೆಂಕಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ನೀರನ್ನು ಬಿಟ್ಟರು ಅದು ಮತ್ತಷ್ಟು ಹೆಚ್ಚಾಗುತ್ತಿದೆ. ಕೆರೆಯ ನೀರಿಗೆ ಕೆಮಿಕಲ್ ನೀರು ಬಿಟ್ಟಿರುವುದರಿಂದ ಬೆಂಕಿ ಕಾಣಿಸಿಕೊಳ್ಳುತಿದೆ. ಪ್ರತಿ ಬಾರಿ ಬೆಂಕಿ ಕಾಣಿಸಿಕೊಂಡ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿ ಹೋಗುತ್ತಾರೆ. ಆದರೆ ಇವರೆಗೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇತ್ತ ಸುಳಿಯಲಿಲ್ಲ ಎಂದು ಸ್ಥಳೀಯರು  ಆರೋಪಿಸಿದ್ದಾರೆ.

    ಕೆಮಿಕಲ್ ನೀರಿನಿಂದ ಪ್ರತಿ ವರ್ಷ ಸಾವಿರಾರು ಮೀನುಗಳು ಸಾವನ್ನಪುತ್ತಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ, ಕೆರೆ ಅಭಿವೃಧ್ಧಿ ಪ್ರಾಧಿಕಾರ, ಬೊಮ್ಮಸಂದ್ರ ಪುರಸಭೆಗೆ ದೂರು ನೀಡಿದರೂ ಕ್ರಮ ಜರುಗಿಸುತ್ತಿಲ್ಲ. ಇವರೆಲ್ಲ ಬೊಮ್ಮಸಂದ್ರ ಕೆಮಿಕಲ್ ಕಾರ್ಖಾನೆಗಳ ಜೊತೆ ಶಾಮಿಲಾಗಿರುವ ಬಗ್ಗೆ ಸ್ಥಳೀಯರು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರದಿದ್ದರೆ ಕೆರೆ, ಹಾಗೂ ಕೆರೆಯ ಅಕ್ಕಪಕ್ಕದ ಮನೆಗಳು ಸಂಪೂರ್ಣವಾಗಿ ಸುಟ್ಟು ಹೋಗುವ ಸಾಧ್ಯತೆ ಇದೆ.

  • ಫ್ಯಾಕ್ಟರಿ ಅವಘಡದಲ್ಲಿ ಸಾವಿನ ಸಂಖ್ಯೆ 43ಕ್ಕೆ ಏರಿಕೆ- ಸಿಎಂರಿಂದ ತಲಾ 10 ಲಕ್ಷ ಪರಿಹಾರ

    ಫ್ಯಾಕ್ಟರಿ ಅವಘಡದಲ್ಲಿ ಸಾವಿನ ಸಂಖ್ಯೆ 43ಕ್ಕೆ ಏರಿಕೆ- ಸಿಎಂರಿಂದ ತಲಾ 10 ಲಕ್ಷ ಪರಿಹಾರ

    ನವದೆಹಲಿ: ನಗರದ ಕೃಷಿ ಮಾರುಕಟ್ಟೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 43ಕ್ಕೆ ಏರಿಕೆಯಾಗಿದ್ದು, ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

    ಇಂದು ಮುಂಜಾನೆ 5.22ರ ಸುಮಾರಿಗೆ ನಡೆದ ಈ ಅವಘಡ ಸಂಬಂಧ ತನಿಖೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದು, ವಾರದೊಳಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದಾರೆ.

    ದುರ್ಘಟನೆ ನಡೆದ ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಸಿಎಂ, ಮೃತಪಟ್ಟ ಪ್ರತಿಯೊಬ್ಬ ಕಾರ್ಮಿಕನ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಹಾಗೂ ಗಾಯಗೊಂಡವರ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದಾರೆ.

    ಘಟನೆ ನಡೆದ ಬಳಿಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಂತಾಪ ಸೂಚಿಸಿದ್ದಾರೆ.

    ಉತ್ತರ ದೆಹಲಿಯ ರಾಣಿ ಜಾನ್ಸಿ ರಾಣಿ ರಸ್ತೆಯಲ್ಲಿರುವ ಅನಜ್ ಮಂಡಿ ಪ್ರದೇಶದ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ಘಟನೆಯಲ್ಲಿ ಹೊಗೆಯಿಂದ ಉಸಿರುಗಟ್ಟಿ 8 ಮಂದಿ ಆಸ್ಪತ್ರೆಗೆ ದಾಖಲಾದರೆ, ಸುಮಾರು 15 ಮಂದಿ ದುರ್ಘಟನೆಯಿಂದ ಗಾಯಗೊಂಡಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಓರ್ವನ ದೇಹ ಶೇ.80ರಷ್ಟು ಸುಟ್ಟಿದ್ದು, ಹೀಗೆ ಹಲವಾರು ಮಂದಿ ಗಾಯಗೊಂಡು  ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕೃಷಿ ಮಾರುಕಟ್ಟೆ ಗೋದಾಮಿನಲ್ಲಿ ಅಗ್ನಿ ಅವಘಡ- 35 ಮಂದಿ ಸಾವು

    ಘಟನೆಯ ಬಳಿಕ ಕಟ್ಟಡದ ಮಾಲೀಕ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ಸಂಬಂಧ ಕಟ್ಟಡ ಮಾಲೀಕನ ವಿರುದ್ಧ ಐಪಿಸಿ ಸೆಕ್ಷನ್ 304(ಉದ್ದೇಶ ಪೂರ್ವಕ ಅಲ್ಲದ ಕೊಲೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಕುಮದ್ವತಿ ನದಿ ಕಾಲುವೆಗೆ ರಾಸಾಯನಿಕ ಸೇರ್ಪಡೆ- ಹಸು ಕರುಗಳು ಸಾವು, ರೈತರಲ್ಲಿ ಆತಂಕ

    ಕುಮದ್ವತಿ ನದಿ ಕಾಲುವೆಗೆ ರಾಸಾಯನಿಕ ಸೇರ್ಪಡೆ- ಹಸು ಕರುಗಳು ಸಾವು, ರೈತರಲ್ಲಿ ಆತಂಕ

    ಬೆಂಗಳೂರು: ಕುಮದ್ವತಿ ನದಿಯ ಕಾಲುವೆಗೆ ಕಾರ್ಖಾನೆಗಳ ರಾಸಾಯನಿಕ ವಸ್ತು, ಪ್ಲಾಸ್ಟಿಕ್ ಸೇರಿಕೊಂಡಿದೆ. ಈ ನೀರನ್ನು ಕುಡಿದು ಹಸು, ಕರುಗಳು ಸಾವನ್ನಪ್ಪುತ್ತಿವೆ ಎಂದು ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಅಲ್ಕೂರು ಗ್ರಾಮದ ಬಳಿ ಇರುವ ಕುಮದ್ವತಿ ನದಿ ನೀರಿನ ಮೂಲಕ್ಕೆ ಬೆಂಗಳೂರಿನ ವಿಜಯನಗರ ಮೂಲದ ಕಂಪನಿ ಜೆ.ಎಸ್.ಡಬ್ಲ್ಯು ನಿಂದ ರಾಸಾಯನಿಕ ಮತ್ತು ಪ್ಲಾಸ್ಟಿಕ್ ಹಾಕಿರುವುದಾಗಿ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಈ ತ್ಯಾಜ್ಯದಿಂದ ನೀರಿನ ಮೂಲ ಸಂಪೂರ್ಣ ಕಲುಷಿತವಾಗಿರುವುದಕ್ಕೆ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.

    ಈಗಾಗಲೇ ಈ ನೀರನ್ನು ಕುಡಿದ ಹಸು ಮತ್ತು ಕರುಗಳು ಸಾವುನ್ನಪ್ಪಿದ್ದು, ಕುಮದ್ವತಿ ಕಾಲುವೆ ಪಕ್ಕದ ಕೊಳವೆ ಬಾವಿಯ ನೀರು ಕೂಡ ಕಲುಷಿತವಾಗಿದೆ. ಅದನ್ನು ಸೇವಿಸುವ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗ ಬರುವ ಮುನ್ನ ಸ್ಥಳೀಯ ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿ, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಗ್ರಾಮಸ್ಥರು ಎಚ್ಚರಿಕೆ ಕೊಟ್ಟಿದ್ದಾರೆ.

    ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಜೆ.ಎಸ್.ಡಬ್ಲ್ಯು ಕಂಪನಿ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಕುಮದ್ವತಿ ನದಿಯಿಂದ ಪ್ರಸಿದ್ಧ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ಹರಿಯುತ್ತದೆ. ಈ ಹಿಂದೆ ಹಲವಾರು ಸ್ವಯಂ ಸೇವಕ ಸಂಸ್ಥೆಗಳು ಈ ನದಿ ಪಾತ್ರವನ್ನು ಶುದ್ಧಗೊಳಿಸಿದ್ದರು. ಇದೀಗ ಮತ್ತೆ ನದಿ ಕಲುಷಿತವಾಗುತ್ತಿರುವುದು ಬೇಸರವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

  • ಕೃಷಿ ಮಾರುಕಟ್ಟೆ ಗೋದಾಮಿನಲ್ಲಿ ಅಗ್ನಿ ಅವಘಡ- 35 ಮಂದಿ ಸಾವು

    ಕೃಷಿ ಮಾರುಕಟ್ಟೆ ಗೋದಾಮಿನಲ್ಲಿ ಅಗ್ನಿ ಅವಘಡ- 35 ಮಂದಿ ಸಾವು

    ನವದೆಹಲಿ: ಉತ್ತರ ದೆಹಲಿಯ ಸದರ್ ಬಜಾರ್ ನಲ್ಲಿರುವ ಕೃಷಿ ಮಾರುಕಟ್ಟೆಯ ಗೋದಾಮಿನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ.

    ಮುಂಜಾನೆ 5 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಭಾರೀ ಹೊಗೆಯಿಂದ ಉಸಿರುಗಟ್ಟಿ 35 ಮಂದಿ ಸಾವನ್ನಪ್ಪಿದ್ದು, 22 ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.

    ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು ಅವಘಡದಲ್ಲಿ 52ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದೆ. ಘಟನಾ ಸಂಬಂಧ 30ಕ್ಕೂ ಹೆಚ್ಚು ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

    ಸುಮಾರು 5.22ಕ್ಕೆ ನಮಗೆ ಕರೆ ಬಂತು. ಕೂಡಲೇ 30 ಮಂದಿ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದೆವು. ಈ ವೇಳೆ ಫ್ಯಾಕ್ಟರಿ ಒಳಗಿದ್ದ 20 ಮಮದಿಯನ್ನು ರಕ್ಷಿಸಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಹಾಗೂ ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಿದೆವು ಎಮದು ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

  • ಕಳ್ಳ ಪೊಲೀಸ್ ಆಟ ಆಡ್ತೀರಾ? ಅಕ್ರಮ ಪ್ಲಾಸ್ಟಿಕ್ ಬ್ಯಾಗ್ ತಯಾರಕರಿಗೆ ಅಧಿಕಾರಿ ಅವಾಜ್

    ಕಳ್ಳ ಪೊಲೀಸ್ ಆಟ ಆಡ್ತೀರಾ? ಅಕ್ರಮ ಪ್ಲಾಸ್ಟಿಕ್ ಬ್ಯಾಗ್ ತಯಾರಕರಿಗೆ ಅಧಿಕಾರಿ ಅವಾಜ್

    ಬೆಂಗಳೂರು: ನಾನ್ ಇರೊ ಏರಿಯಾದಲ್ಲಿ ಕಳ್ಳ ಪೊಲೀಸ್ ಆಟ ಆಡುತ್ತೀರಾ? ಎಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಬ್ಯಾಗ್ ತಯಾರಕರಿಗೆ ಲೇಡಿ ಹೆಲ್ತ್ ಇನ್ಸ್ ಪೆಕ್ಟರ್ ಅವಾಜ್ ಹಾಕಿದ್ದಾರೆ.

    ಹೆಲ್ತ್ ಇನ್ಸ್ ಪೆಕ್ಟರ್ ದಿವ್ಯ ಅವರು ಇಂದು ದಾಸರಹಳ್ಳಿ ಪ್ಲಾಸ್ಟಿಕ್ ತಯಾರಿಕಾ ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ್ದರು. ಅಕ್ರಮವಾಗಿ ಕಪ್ಪು ಬಣ್ಣದ ಪ್ಲಾಸ್ಟಿಕ್ ತಯಾರಿಕೆ ಮಾಡುತ್ತಿದ್ದ ಎರಡು ಘಟಕಗಳ ಮಾಲೀಕರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ನಾನ್ ಇರೊ ಏರಿಯಾದಲ್ಲಿ ಕಳ್ಳ ಪೊಲೀಸ್ ಆಟ ಆಡುತ್ತಿರಾ. ಬೇಡ ಬೇಡ ಎಂದರು ಪ್ಲಾಸ್ಟಿಕ್ ಪೇಪರ್ ರೆಡಿ ಮಾಡುತ್ತೀರಾ? ಯಾವ್ ಊರು ನಿನ್ನದು ಬೆಂಗಳೂರು ಹಾಳ್ ಮಾಡಲು ಬಂದಿದ್ದೀರಾ? ಕೋರ್ಟ್ ತಯಾರಿಕೆ ಮಾಡಬೇಡಿ ಎಂದರು ಅಕ್ರಮವಾಗಿ ತಯಾರು ಮಾಡುತ್ತೀರಾ ಇದೇ ಇರು ನಿನಗೆ. ನಿನ್ನ ಮೇಲೆ ಡಬಲ್ ಎಫ್.ಐ.ಆರ್ ಹಾಕುತ್ತೇನೆ ಎಂದು ಪ್ಲಾಸ್ಟಿಕ್ ಫ್ಯಾಕ್ಟರಿ ಮಾಲೀಕರಿಗೆ ಬೆವರಿಳಿಸಿದ್ದಾರೆ.

  • ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಅರ್ಧ ಕೈ ಕಟ್

    ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಅರ್ಧ ಕೈ ಕಟ್

    ಕೋಲಾರ: ಕೆಲಸ ಮಾಡುವ ವೇಳೆ ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಕೈ ಅರ್ಧ ತುಂಡಾದ ಘಟನೆ ಕೋಲಾರದ ನತಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ನಹಾರ್ಸ್ ಎಂಜಿನಿಯರಿಂಗ್ ಇಂಡಿಯಾ ಕಂಪನಿಯಲ್ಲಿಂದು ಈ ಘಟನೆ ನಡೆದಿದೆ. ಹೈದರ್ ಎಂಬ ಕಾರ್ಮಿಕನ ಕೈ ತುಂಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಕಾರ್ಖಾನೆಯ ಆಡಳಿತ ಮಂಡಳಿಯಿಂದ ಸೂಕ್ತ ಚಿಕಿತ್ಸೆ ಹಾಗೂ ಭದ್ರತೆ ನೀಡದ ಆರೋಪ ಕೇಳಿಬಂದಿದೆ. ಕಾರ್ಖಾನೆ ಎದುರು ನೂರಾರು ಕಾರ್ಮಿಕರು ಭದ್ರತೆ ಹಾಗೂ ರಕ್ಷಣೆ ನೀಡುವಂತೆ ಪ್ರತಿಭಟನೆ ನಡೆಸಿದರು. ಗಾಯಾಳುಗೆ ಸೂಕ್ತ ಪರಿಹಾರ ನೀಡುವಂತೆ, ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇಎಸ್‍ಐ ನೀಡುವಂತೆ ಆಗ್ರಹ ಮಾಡಿದರು.

    ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

  • ತುಂಗಭದ್ರಾ ಜಲಾಶಯದ ನೀರು ಕಾರ್ಖಾನೆ ಪಾಲು- ರೈತರ ಮೊದಲ ಬೆಳೆಗಿಲ್ಲ ಜೀವಜಲ!

    ತುಂಗಭದ್ರಾ ಜಲಾಶಯದ ನೀರು ಕಾರ್ಖಾನೆ ಪಾಲು- ರೈತರ ಮೊದಲ ಬೆಳೆಗಿಲ್ಲ ಜೀವಜಲ!

    ಕೊಪ್ಪಳ: ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿ ಪಾತ್ರ ಹೊರತುಪಡಿಸಿದರೆ, ಉಳಿದ ಕಡೆ ಮಳೆ ಸಮರ್ಪಕವಾಗಿ ಆಗದೆ ರೈತರು ಪರದಾಡುತ್ತಿದ್ದಾರೆ. ಇನ್ನೊಂದೆಡೆ ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾದ ಅಲ್ಪ ಸ್ವಲ್ಪ ನೀರನ್ನು ಸಹ ಕಾರ್ಖಾನೆಗೆ ಹರಿಸಲಾಗುತ್ತಿದೆ ಎನ್ನಲಾಗುತ್ತಿದೆ.

    ಜಲಾಶಯಗಳಿಗೆ ನೀರು ಹರಿದು ಬರುತ್ತಿದ್ದರೂ ರೈತರ ಬೆಳೆಗಳಿಗೆ ನೀರು ಸಿಗುತ್ತಿಲ್ಲ. ಬದಲಿಗೆ ಕಾರ್ಖಾನೆಗಳಿಗೆ ಮಾತ್ರ ಹರಿಸಲಾಗುತ್ತಿದೆ. ಹೀಗಾಗಿ ರೈತರ ಮೊದಲ ಬೆಳೆಗೆ ನೀರು ಸಿಗುವುದು ಅನುಮಾನ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಸಂಗ್ರಹವಾದ ನೀರನ್ನು ಸದ್ದಿಲ್ಲದೆ, ಕಾರ್ಖಾನೆಗಳಿಗೆ ಸೇರುತ್ತಿದೆ. ಈ ಮೂಲಕ ಕೊಪ್ಪಳ, ಬಳ್ಳಾರಿ, ರಾಯಚೂರು ಜನರ ಜೀವನಾಡಿ ತುಂಗಭದ್ರಾ ಜಲಾಶಯ ಈ ಬಾರಿ ರೈತರ ಮೊದಲ ಬೆಳೆಗೆ ಜೀವಜಲ ಉಣಿಸುವುದು ಕಷ್ಟ ಎಂಬಂತಾಗಿದೆ.

    ಕಳೆದ ಬಾರಿ ಜಲಾಶಯದಲ್ಲಿ ಸಾಕಷ್ಟು ನೀರು ಇದ್ದರೂ ಸಹ 2ನೇ ಬೆಳೆಗೆ ನೀರು ಬಿಟ್ಟಿರಲಿಲ್ಲ. ಕಾರ್ಖಾನೆಗಳಿಗೆ ನೀರು ಹರಿಸಲಾಗುತ್ತಿದೆ. ಇದೀಗ ವರ್ಷದ ಮೊದಲ ಬೆಳೆಗೆ ನೀರು ಸಿಗುವುದು ಅನುಮಾನ ಎಂಬಂತಾಗಿದೆ. ಹೀಗಾಗಿ ತುಂಗಭದ್ರಾ ಜಲಾಶಯದ ನೀರು ಬಿಡುಗಡೆಗೆ ಹೇಳುವವರಿಲ್ಲ, ಕೇಳುವವರಿಲ್ಲ ಎನ್ನುವಂತಾಗಿದ್ದು, ಮನಸ್ಸಿಗೆ ಬಂದಂತೆ ಕಾರ್ಖಾನೆಗಳಿಗೆ ಅಕ್ರಮವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಸಹ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದ್ದು ನಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ರೈತರು ಕಿಡಿಕಾರಿದ್ದಾರೆ.

    ಸಂಗ್ರಹವಾದ ನೀರನ್ನು ಕಾರ್ಖಾನೆಗಳಿಗೆ ಬಿಟ್ಟರೆ ರೈತರ ಬೆಳೆಗಳಿಗೆ ನೀರು ಸಿಗುವುದಿಲ್ಲ. ಕಳೆದ ಬಾರಿ ಇದೇ ರೀತಿಯಾಗಿದ್ದು, ಕೊನೆಯ ಬೆಳೆಗಳಿಗೆ ನೀರು ಬಿಟ್ಟಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಜಲಾಶಯದಲ್ಲಿ 40 ರಿಂದ 60 ಟಿಎಂಸಿ ನೀರು ಸಂಗ್ರಹವಾಗುವ ವರೆಗೆ ಬೆಳೆಗೆ ನೀರು ಬಿಡುವುದಿಲ್ಲ ಎಂದು ಜಲಾಶಯದ ಆಡಳಿತ ಮಂಡಳಿ ಪಟ್ಟು ಹಿಡಿದಿದೆ. ಜಲಾಶಯದಲ್ಲಿ 20 ಟಿಎಂಸಿ ನೀರು ಇದ್ದರೂ ಸಹ ಆಕ್ರಮವಾಗಿ ಕಾರ್ಖಾನೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ರೈತರ ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.

  • ಹಾಸನದಲ್ಲಿ ದಿಢೀರ್ ಕಾರ್ಮಿಕರ ಪ್ರತಿಭಟನೆ – ಪೊಲೀಸ್ ವಾಹನ ಪಲ್ಟಿ, ಗಾಳಿಯಲ್ಲಿ ಗುಂಡು

    ಹಾಸನದಲ್ಲಿ ದಿಢೀರ್ ಕಾರ್ಮಿಕರ ಪ್ರತಿಭಟನೆ – ಪೊಲೀಸ್ ವಾಹನ ಪಲ್ಟಿ, ಗಾಳಿಯಲ್ಲಿ ಗುಂಡು

    ಹಾಸನ: ಬಟ್ಟೆ ಕಾರ್ಖಾನೆ ವಿರುದ್ಧ ಕಾರ್ಮಿಕರ ಧಿಡೀರ್ ಪ್ರತಿಭಟನೆ ಮಾಡಿದ್ದು, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಜಾರ್ಜ್ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.

    ಹಾಸನದ ಹೊರವಲಯದಲ್ಲಿ ಹಿಮ್ಮತ್ ಸಿಂಕಾ ಹೆಸರಿನ ಬಟ್ಟೆ ಕಾರ್ಖಾನೆ ಇದ್ದು ಇಲ್ಲಿ ಸುಮಾರು ನಾಲ್ಕು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಾರೆ. ಉತ್ತರ ಭಾರತದ ಕಾರ್ಮಿಕರು ಜಾಸ್ತಿ ಇರುವ ಈ ಕಾರ್ಖಾನೆಯಲ್ಲಿ ಕೆಲಸಗಾರರಿಗೆ ದೈಹಿಕವಾಗಿ ಹಿಂಸೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಮಾಡಲಾಗಿದೆ.

    ಈ ಕಾರ್ಖಾನೆಯಲ್ಲಿ ವಿನಾಕಾರಣ ನಮ್ಮ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ ಎಂದು ಇಂದು ಕೆಲಸಕ್ಕೆ ಹಾಜರಾಗದ ಸಾವಿರಾರು ಮಂದಿ ಕಾರ್ಮಿಕರು ಪ್ರತಿಭಟನೆ ಮಾಡಿದ್ದಾರೆ. ಪೊಲೀಸರು ತಡೆಯಲು ಯತ್ನಿಸಿದಾಗ ಕಾರ್ಮಿಕರು ಪೊಲೀಸ್ ಜೀಪ್ ಪಲ್ಟಿ ಮಾಡಿ ಆಕ್ರೋಶ ಹೊರ ಹಾಕಿ ಕಲ್ಲು ತೂರಾಟ ಮಾಡಿದ್ದಾರೆ. ಹೀಗಾಗಿ ಕಾರ್ಮಿಕರ ಮೇಲೆ ಲಾಠಿ ಜಾರ್ಜ್ ಮಾಡಿದ್ದಾರೆ. ಪ್ರತಿಭಟನೆ ಜೋರಾದಾಗ ಗಾಳಿಯಲ್ಲಿ ಗುಂಡು ಹಾರಿಸಿ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿದ್ದಾರೆ.

    ಕಾರ್ಖಾನೆಯಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಯುವಕರನ್ನು ಕೆಲಸಕ್ಕೆ ಕರೆತರಲಾಗಿದೆ. ಆದರೆ ಅವರಿಗೆ ಕನಿಷ್ಠ ಸೌಲಭ್ಯವನ್ನು ನೀಡದೆ, ಕಾರ್ಮಿಕ ಕಾಯ್ದೆ ಉಲ್ಲಂಘಿಸಿ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಕಾರ್ಮಿಕರು ಆರೋಪ ಮಾಡಿದ್ದಾರೆ. ಕಾರ್ಮಿಕ ಸಂಘಟನೆಗಳು ಸಹ ಇಲ್ಲದ ಬೃಹತ್ ಕಾರ್ಖಾನೆಯಲ್ಲಿ ಇಬ್ಬರು ಕಾರ್ಮಿಕರ ಮೇಲೆ ತೀವ್ರವಾಗಿ ಹಲ್ಲೆ ಮಾಡಿರುವ ಫೋಟೋ ಕೂಡ ಸಿಕ್ಕಿದೆ ಎನ್ನಲಾಗಿದೆ.

    ಈ ವಿಚಾರವಾಗಿ ಬೆಳಗ್ಗೆ ಇಂದು ಕಾರ್ಖಾನೆ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಕಾರ್ಮಿಕರನ್ನು ಚದುರಿಸುವಲ್ಲಿ ಯಶ್ವಸಿಯಾಗಿದ್ದಾರೆ.

  • ಟ್ರಾಕ್ಟರ್ ಟಯರ್‌​ಗಳ ಗೋಡೌನ್ ನಲ್ಲಿ ಬೆಂಕಿ – ಮುಗಿಲೆತ್ತರಕ್ಕೆ ಆವರಿಸಿದ ಹೊಗೆ

    ಟ್ರಾಕ್ಟರ್ ಟಯರ್‌​ಗಳ ಗೋಡೌನ್ ನಲ್ಲಿ ಬೆಂಕಿ – ಮುಗಿಲೆತ್ತರಕ್ಕೆ ಆವರಿಸಿದ ಹೊಗೆ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಟಫೆ ಟ್ರಾಕ್ಟರ್ ತಯಾರಿಕಾ ಕಾರ್ಖಾನೆಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ.

    ಹೆದ್ದಾರಿ ಪಕ್ಕದ ಮಮತಾ ಪೆಟ್ರೋಲ್ ಬಂಕ್‍ಗೆ ಹೊಂದಿಕೊಂಡಿರುವ ಟ್ರಾಕ್ಟರ್ ತಯಾರಿಕಾ ಕಾರ್ಖಾನೆಯ ಆವರಣದಲ್ಲಿನ ಟ್ರಾಕ್ಟರ್ ಟಯರ್‌ಗಳ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಸಾವಿರಾರು ಟ್ರಾಕ್ಟರ್‌ನ ಟಯರ್‌ಗಳು ಬೆಂಕಿಗಾಹುತಿಯಾಗಿದ್ದು, ಧಗಧಗನೆ ಹೊತ್ತಿ ಉರಿದಿವೆ.

    ಅಗ್ನಿ ಅವಘಡದಿಂದ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆ ಮುಗಿಲೆತ್ತರಕ್ಕೆ ಆವರಿಸಿದೆ. ಅಗ್ನಿ ಅವಘಡದ ವಿಷಯ ತಿಳಿದು ಸ್ಥಳಕ್ಕೆ ಆಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಹರಸಾಹಸ ಪಟ್ಟು ಬೆಂಕಿನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 4 ಅಗ್ನಿ ಶಾಮಕ ವಾಹನಗಳ ಮೂಲಕ ಬೆಂಕಿನಂದಿಸುವ ಕಾರ್ಯ ಸಾಗಿದ್ದು, ಬೆಂಕಿ ಹತೋಟಿಗೆ ತರಲು ಹರಸಾಹಸ ಪಡುವಂತಾಗಿದೆ.

    ಟಯರ್ ಸುಟ್ಟು ವಾಸನೆಯಿಂದ ಜನ ಕಸಿವಿಸಿಗೊಂಡಿದ್ದಾರೆ. ಮತ್ತೊಂದೆಡೆ ಪೆಟ್ರೋಲ್ ಬಂಕ್ ಸಹ ಪಕ್ಕದಲ್ಲೇ ಇರುವ ಕಾರಣ ಸಾಕಷ್ಟು ಆತಂಕ ಸಹ ಮನೆ ಮಾಡಿದ್ದು, ಸಾರ್ವಜನಿಕರನ್ನ ಹತ್ತಿರ ಸುಳಿಯಲು ಸಹ ಪೊಲೀಸರು ಬಿಟ್ಟಿಲ್ಲ. ಇನ್ನೂ ಈ ಟಯರ್ ಗೋಡೌನ್ ಪಕ್ಕದಲ್ಲೇ ತಯಾರಾದ ಹೊಚ್ಚ ಹೊಸ ಟ್ರಾಕ್ಟರ್​​ಗಳನ್ನ ನಿಲ್ಲಿಸಲಾಗಿದ್ದು, ಅದೃಷ್ಟವಶಾತ್ ಬೆಂಕಿ ನಂದಿಸುವ ಕಾರ್ಯ ನಡೆಸಿ ಟ್ರಾಕ್ಟರ್​​ಗಳಿಗೆ ಬೆಂಕಿ ತಗುಲದಂತೆ ತಡೆಯಲಾಗಿದೆ.

    ಬೆಂಕಿ ಅನಾಹುತಕ್ಕೆ ಕಾರಣ ಏನು ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಶಾರ್ಟ್ ಸರ್ಕ್ಯೂಟ್ ಸಂಭವಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದ್ದು, ಕಿಡಿಗೇಡಿಗಳು ಯಾರಾದರೂ ಬೆಂಕಿ ಹಚ್ಚಿದ್ದಾರ ಎನ್ನುವ ಅನುಮಾನ ಮೂಡಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಕಾರ್ಖಾನೆ ಬೋರ್ಡ್ ಕಾಣದ್ದಕ್ಕೆ 300 ಮರಗಳಿಗೆ ಕೊಡಲಿ ಪೆಟ್ಟು!

    ಕಾರ್ಖಾನೆ ಬೋರ್ಡ್ ಕಾಣದ್ದಕ್ಕೆ 300 ಮರಗಳಿಗೆ ಕೊಡಲಿ ಪೆಟ್ಟು!

    ಬೆಂಗಳೂರು: ಮಾನವ ಸಂಪನ್ಮೂಲ ಅಧಿಕಾರಿಯೊಬ್ಬ ಕಾರ್ಖಾನೆಯೊಂದರ ಬೋರ್ಡ್ ಕಾಣುವುದಿಲ್ಲ ಎಂದು ರಸ್ತೆ ಬದಿಯಲ್ಲಿದ್ದ ನೂರಾರು ಮರಗಳನ್ನು ಕಡಿದು ಹಾಕಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಡಿ.ಶೆಟ್ಟಿಹಳ್ಳಿ ಗೇಟ್ ಬಳಿ ನಡೆದಿದೆ.

    ಮೆಡ್ರಿಕ್ ಕಂಪನಿ ಬೆಂಗಳೂರು-ಕಡಪ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿದ್ದು, ಪ್ರತಿ ದಿನ ಈ ದಾರಿಯಲ್ಲಿ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಆದ್ರೆ ಈ ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿ ಮರಗಳು ಅಡ್ಡಿಯಾಗಿರುವುದರಿಂದ ಕಾರ್ಖಾನೆಯ ಬೋರ್ಡ್ ಕಾಣುವುದಿಲಲ್ಲ ಎನ್ನುವ ಒಂದೇ ಕಾರಣಕ್ಕೆ ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆಯವರು ನೆಟ್ಟು ಪೋಷಣೆ ಮಾಡಲಾಗಿದ್ದ 300 ಮರಗಳನ್ನು ಕಡಿದು ನಾಶ ಮಾಡಿದ್ದಾನೆ ಎಂದು ಸ್ಥಳೀಯ ನಿವಾಸಿ ನಾರಾಯಣ ಗೌಡ ಆರೋಪಿಸಿದ್ದಾರೆ.

    ಸ್ಥಳೀಯ ಪರಿಸರ ಪ್ರೇಮಿಗಳು ಕಾರ್ಖಾನೆಯವರು ಪರಿಸರ ನಾಶ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಪರಿಸರ ಪ್ರೇಮ ಮೆರೆಯಬೇಕಾದ ಕಂಪನಿ ಈ ರೀತಿಯ ಅವಿವೇಕದ ಕೆಲಸ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

    ರಸ್ತೆ ಬದಿಯಲ್ಲಿ ನೆಟ್ಟಿದ್ದ ಮರಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರದೆ 300 ಮೀಟರ್ ವ್ಯಾಪ್ತಿಯಲ್ಲಿ ಬೆಳೆದಿದ್ದ ಮರಗಳನ್ನು ನಾಶ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಮರಗಳನ್ನು ಕಡಿದ ಕಾರ್ಖಾನೆಯವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಿ ಮತ್ತೆ ಸಸಿಗಳನ್ನು ನೆಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv