Tag: Factory

  • ಲಾಕ್‍ಡೌನ್ ನಂತ್ರ ಕಾರ್ಖಾನೆಗೆ ತೆರಳಿದ ಮೊದಲ ದಿನವೇ ಉದ್ಯೋಗಿ ಸಾವು

    ಲಾಕ್‍ಡೌನ್ ನಂತ್ರ ಕಾರ್ಖಾನೆಗೆ ತೆರಳಿದ ಮೊದಲ ದಿನವೇ ಉದ್ಯೋಗಿ ಸಾವು

    ಮೈಸೂರು: ಕೊರೊನಾ ಲಾಕ್‍ಡೌನ್ ನಂತರ ಕಾರ್ಖಾನೆಗೆ ತೆರಳಿದ ಮೊದಲ ದಿನವೇ ಬೈಕಿಗೆ ಕಾರ್ ಡಿಕ್ಕಿ ಹೊಡೆದು ಉದ್ಯೋಗಿ ಮೃತಪಟ್ಟಿರುವ ಘಟನೆ ನಂಜನಗೂಡು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ನಂಜನಗೂಡು ಪಟ್ಟಣದ ಶಿಕ್ಷಕರ ಬಡಾವಣೆ ನಿವಾಸಿ ಪ್ರವೀಣ್ (29) ಮೃತ ದುರ್ದೈವಿ. ನಂಜನಗೂಡು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಲ್ಲನಮೂಲೆ ಮಠದ ಬಳಿ ತಡರಾತ್ರಿ ಈ ಅಪಘಾತ ನಡೆದಿದೆ. ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ಮೃತ ಪ್ರವೀಣ್ ಕೆಲಸ ಮಾಡುತ್ತಿದ್ದರು.

    ಸೋಮವಾರ ಕಾರ್ಖಾನೆಗೆ ಹೋಗಿ ಕೆಲಸ ಮುಗಿಸಿ ವಾಪಸ್ ಬರುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರವೀಣ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯ ಸಿಬಿಐ ಸಮೀಪ ರಸ್ತೆಗಿಳಿದ ಮೊದಲ ದಿನವೇ ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಕಾರು ಚಲಾಯಿಸುತ್ತಿದ್ದ ಮಹಿಳೆ ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಯುವತಿಯ ಕಾಲಿಗೆ ಗಾಯವಾಗಿದೆ. ನಂತರ ಯುವತಿಯನ್ನ ತನ್ನ ಕಾರಿನಲ್ಲೇ ಮಹಿಳೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ ಬಹುದಿನಗಳ ಬಳಿಕ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಿದೆ. ಪ್ರತಿಯೊಬ್ಬ ಪ್ರಯಾಣಿಕರ ಆರೋಗ್ಯ ತಪಾಸಣೆ, ಅವರ ಹೆಸರು, ವಿಳಾಸದ ದಾಖಲೆಯನ್ನು ಬರೆದುಕೊಳ್ಳಲಾಗುತ್ತಿದೆ. ಇವತ್ತು ಮೈಸೂರಿನಿಂದ ಬೆಂಗಳೂರು ಕಡೆಗೆ ಹೆಚ್ಚಿನ ಬಸ್ ಸಂಚಾರ ಇದೆ.

    ಇತ್ತ ಮೈಸೂರಿನಿಂದ ಬೆಂಗಳೂರಿಗೆ ಸಂಜೆ 4 ಗಂಟೆಗೆ ಕೊನೆಯ ಬಸ್. ಸಂಜೆ ಏಳು ಗಂಟೆ ಒಳಗೆ ನಿಗದಿತ ಸ್ಥಳವನ್ನು ಎಲ್ಲರೂ ತಲುಪಲೇಬೇಕಿರುವ ಕಾರಣ ಪ್ರಯಾಣದ ಅವಧಿ ಆಧಾರದ ಮೇಲೆ ಬಸ್ ಸಂಚಾರಕ್ಕೆ ಅಂತಿಮ ಸಮಯ ನಿಗದಿ ಮಾಡಲಾಗಿದೆ. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ.

  • 15 ರಜೆ ಮುಗಿಸಿ ಕೆಲಸಕ್ಕೆ ಬಂದ ಮಹಿಳೆ – 2ನೇ ದಿನವೇ ಅನುಮಾನಾಸ್ಪದವಾಗಿ ಸಾವು

    15 ರಜೆ ಮುಗಿಸಿ ಕೆಲಸಕ್ಕೆ ಬಂದ ಮಹಿಳೆ – 2ನೇ ದಿನವೇ ಅನುಮಾನಾಸ್ಪದವಾಗಿ ಸಾವು

    ಬೆಂಗಳೂರು: ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಇಂಡ್ಲವಾಡಿ ರಸ್ತೆಯ ಸ್ಟ್ರೈಡ್ಸ್ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಇಂಡ್ಲವಾಡಿ ಮೂಲದ ಮಂಜುಳಾ (26) ಮೃತ ಮಹಿಳೆ. ಮೃತ ಮಂಜುಳಾ ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ಬಂದಿದ್ದು, ನಂತರ ಸಾವನ್ನಪ್ಪಿದ್ದಾಳೆಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.

    ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹದಿನೈದು ದಿನ ವಿತರಣೆ ಪಾಳಿಯಂತೆ ರಜೆಯಲ್ಲಿದ್ದು, ಬುಧವಾರ ಕೆಲಸಕ್ಕೆ ಹಾಜರಾಗಿದ್ದಳು. ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದ ಮಂಜುಳಾ ಆರೋಗ್ಯವಾಗಿದ್ದಳು. ಅಲ್ಲದೇ ಕೊರೊನಾ ನಿಯಮದಂತೆ ಪ್ರತಿ ಕಾರ್ಮಿಕರಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಈ ವೇಳೆ ಮಂಜುಳಾ ಪರೀಕ್ಷೆಗೆ ಒಳಗಾಗಿ ಆರೋಗ್ಯ ಪೂರ್ವಕವಾಗಿಯೇ ಕೆಲಸಕ್ಕೆ ಹಾಜರಾಗಿದ್ದಳು ಎಂದು ತಿಳಿದುಬಂದಿದೆ.

    ಇಂದು ಬೆಳಗ್ಗೆ ಕೆಲಸ ಮಾಡುವ ಸಂದರ್ಭದಲ್ಲಿ ಒಬ್ಬಂಟಿಯಾಗಿ ಪಕ್ಕಕ್ಕೆ ತೆರಳಿ ಕುಳಿತುಕೊಂಡಿದ್ದಳು. ಆದರೆ ಮಂಜುಳಾ ಕುಳಿತಯಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ಕಾರ್ಖಾನೆ ಮೂಲಗಳು ತಿಳಿಸಿವೆ. ಇದೀಗ ಸ್ಥಳಕ್ಕೆ ಆಗಮಿಸಿದ ಆನೇಕಲ್ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

  • ವಿಶಾಖಪಟ್ಟಣ ದುರಂತ – ಏನಿದು ಸ್ಟೈರೀನ್? ಸೋರಿಕೆ ಆಗಿದ್ದು ಹೇಗೆ? ದೇಹ ಸೇರಿದ್ರೆ ಏನಾಗುತ್ತೆ?

    ವಿಶಾಖಪಟ್ಟಣ ದುರಂತ – ಏನಿದು ಸ್ಟೈರೀನ್? ಸೋರಿಕೆ ಆಗಿದ್ದು ಹೇಗೆ? ದೇಹ ಸೇರಿದ್ರೆ ಏನಾಗುತ್ತೆ?

    ಹೈದರಾಬಾದ್: ಆಂಧ್ರಪ್ರದೇಶದ ವಿಶಾಖಪಟ್ಟಣದ ಬಹುರಾಷ್ಟ್ರೀಯ ಸಂಸ್ಥೆಯ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆಯಾದ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇದನ್ನೂ ಓದಿ: ನನ್ನಮ್ಮ ಕೂಡ ಏಕಾಏಕಿ ಕೆಳಗೆ ಬಿದ್ರು, ಕೂಡ್ಲೇ ಆಸ್ಪತ್ರೆಗೆ ಕರೆದೊಯ್ದೆ- ಪ್ರತ್ಯಕ್ಷದರ್ಶಿ ವಿವರಣೆ

    ಇಂದು ಮುಂಜಾನೆ ವಿಶಾಖಪಟ್ಟಣಂ ಜಿಲ್ಲೆಯ ಆರ್.ಆರ್.ವೆಂಕಟಪುರಂನ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದೆ. ಈ ದುರ್ಘಟನೆಯಲ್ಲಿ ಇದುವರೆಗೂ 13 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಸುಮಾರು 1,000ಕ್ಕೂ ಅಧಿಕ ಜನ ಈ ವಿಷಾನಿಲ ಗಾಳಿ ಸೇವಿಸಿರಬಹುದು ಎಂದು ತಜ್ಞರು ಅಂದಾಜಿಸಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಲ್ಲಿ ಸೋರಿಕೆಯಾದ ಸ್ಟೈರಿನ್ ಎಷ್ಟು ಅಪಾಯಕಾರಿ? ಯಾವುದಕ್ಕೆ ಬಳಕೆ ಮಾಡುತ್ತಾರೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

    ಏನಿದು ಸ್ಟೈರೀನ್ ಗ್ಯಾಸ್?
    ಎಲ್‍ಜಿ ಪಾಲಿಮರ್ಸ್ ಕಾರ್ಖಾನೆಯಿಂದ ಸೋರಿಕೆಯಾದ ಅನಿಲದ ಹೆಸರು ಸ್ಟೈರೀನ್. ಸ್ಟೈರೀನ್ ಪ್ಲಾಸ್ಟಿಕ್ ತಯಾರಿಕೆಗೆ ಉಪಯೋಗಿಸುವ ರಾಸಾಯನಿಕ ಸಂಯುಕ್ತವಾಗಿದೆ. ಬೆಂಜೀನ್ ರಾಸಾಯನಿಕದಿಂದ ಇದನ್ನು ಪಡೆಯಬಹುದು. C6H5CH=CH2 ಇದರ ರಾಸಾಯನಿಕ ಸೂತ್ರವಾಗಿದೆ.

    ಯಾವುದಕ್ಕೆ ಬಳಕೆಯಾಗುತ್ತದೆ?
    ಸ್ಟೈರೀನ್ ಪ್ಲಾಸ್ಟಿಕ್ ತಯಾರಿಕೆ ಉಪಯೋಗಿಸುವ ರಾಸಾಯನಿಕ ಸಂಯುಕ್ತವಾಗಿದ್ದು, ಇದನ್ನು ಪ್ಲಾಸ್ಟಿಕ್ ಮತ್ತು ಆಟಿಕೆ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ. ಸಿಂಥೆಟಿಕ್ ರಬ್ಬರ್ ಮತ್ತು ಪಾಲಿಸ್ಟೈರೀನ್ ರಾಳಗಳನ್ನು ತಯಾರಿಸಲು ಬಳಕೆ ಮಾಡಲಾಗುತ್ತದೆ. ಜಿಡ್ಡಿನಂತಿರುವ ಈ ಅನಿಲಕ್ಕೆ ಬಣ್ಣವಿಲ್ಲ. ಆದ್ರೆ ಇದನ್ನು ಸೇವಿಸಿದವರಿಗೆ ಸಿಹಿ ವಾಸನೆ ಬರುತ್ತದೆ. ಆದರೆ ಇದು ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಈ ರಾಸಾಯನಿಕ ಅನಿಲ ಗಾಳಿಗೆ ಬಂದ್ರೆ ಬಹು ಬೇಗನೇ ಆವಿಯಾಗುತ್ತದೆ.

    ಅಪಾಯಕಾರಿ ಯಾಕೆ?
    ಭಾರೀ ಪ್ರಮಾಣದಲ್ಲಿ ಸ್ಟೈರೀನ್ ಅನಿಲವನ್ನು ಸೇವಿಸಿದರೆ ಕಣ್ಣು, ಮೂಗು ವಿಪರೀತ ಉರಿಯುತ್ತದೆ. ಗಂಟಲು ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಉಸಿರಾಟಕ್ಕೆ ತೊಂದರೆಯಾಗುತ್ತದೆ. ಒಂದು ವೇಳೆ ಈ ಅನಿಲವನ್ನು ಹೆಚ್ಚಿನ ಪ್ರಮಾಣದಲ್ಲಿ ಉಸಿರಾಡಿದರೆ ತಲೆನೋವು, ಸುಸ್ತು, ನಿಶ್ಯಕ್ತಿ, ಕಿವುಡು, ಖಿನ್ನತೆ ನೋವುಗಳು ಕಾಣಿಸಬಹುದು. ಇದರ ಜೊತೆ ಕಿಡ್ನಿ, ಲಿವರ್ ಸಮಸ್ಯೆಯಾಗುತ್ತದೆ. ಭಾರೀ ಪ್ರಮಾಣದಲ್ಲಿ ದೇಹ ಸೇರಿದರೆ ದೀರ್ಘಕಾಲದವರೆಗೆ ನರಮಂಡಲಕ್ಕೆ ಹಾನಿಯಾಗುವ ಸಾಧ್ಯತೆಯಿದೆ.

    ವಾತಾವರಣದಲ್ಲಿ ಸ್ಟೈರೀನ್ ಇದೆ:
    ಆಮ್ಲಜನಕ ಹೇಗೆ ವಾತಾವರಣದಲ್ಲಿ ಇದೆಯೋ ಅದೇ ರೀತಿಯಾಗಿ ನಮ್ಮ ಸುತ್ತಮುತ್ತಲು ಸ್ಟೈರಿನ್ ಸೇರಿದಂತೆ ಹಲವು ಅನಿಲಗಳು ಇರುತ್ತದೆ. ವಾಹನದ ಎಕ್ಸಾಸ್ಟ್, ಸಿಗರೇಟಿನ ಹೊಗೆಯಲ್ಲೂ ಸ್ಟೈರೀನ್ ಇರುತ್ತದೆ. ಕಟ್ಟಡ ನಿರ್ಮಾಣ ವಸ್ತುಗಳು, ಬಳಕೆದಾರ ವಸ್ತುಗಳಿಂದಲೂ ಬರುತ್ತದೆ. ಇವುಗಳ ಪ್ರಮಾಣ ಕಡಿಮೆ ಇರುವ ಕಾರಣ ದೇಹಕ್ಕೆ ಸೇರಿದರೂ ಅದು ತಿಳಿಯುವುದಿಲ್ಲ. ಪ್ಲಾಸ್ಟಿಕ್ ಕಾರ್ಖಾನೆಗಳಿಂದ ಹೆಚ್ಚಾಗಿ ಸ್ಟೈರೀನ್ ಹೊರ ಬರುತ್ತದೆ.

    ಸೋರಿಕೆಯಾಗಿದ್ದು ಹೇಗೆ?
    ವಿಶಾಖಪಟ್ಟಣಂನ ಸಹಾಯಕ ಪೊಲೀಸ್ ಆಯುಕ್ತ ಸ್ವರೂಪಾ ರಾಣಿ ಮಾತನಾಡಿ, ಮಾರ್ಚ್ ಅಂತ್ಯದಿಂದ ದೇಶವೇ ಕೊರೊನಾ ವೈರಸ್ ಲಾಕ್‍ಡೌನ್ ಆಗಿದ್ದರಿಂದ ಈ ಕಾರ್ಖಾನೆ ಎರಡು ತಿಂಗಳು ಕಾರ್ಯನಿರ್ವಹಿಸಿರಲಿಲ್ಲ. ಆದರೆ ಈಗ ಲಾಕ್‍ಡೌನ್ ಸಡಿಲಿಕೆ ಆದ ಮೇಲೆ ಕಾರ್ಖಾನೆಯನ್ನು ತೆರೆಯಲಾಗಿತ್ತು. ಈ ಟ್ಯಾಂಕ್‍ಗಳಲ್ಲಿ ಮೊದಲೇ ಉಳಿದಿದ್ದ ಅನಿಲ ಈಗ ರಾಸಾಯನಿಕ ಕ್ರಿಯೆಗೆ ಒಳಪಟ್ಟು ಶಾಖೋತ್ಪತ್ತಿಯಾಗಿ ಸೋರಿಕೆಯಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ ಎಂದು ಹೇಳಿದ್ದಾರೆ. ಎಲ್‍ಜಿ ಕಂಪನಿ ಹೇಳಿಕೆ ಬಿಡುಗಡೆ ಮಾಡಿ, ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸದ್ಯ ಈಗ ಎಲ್ಲಿಯೂ ಸೋರಿಕೆ ಆಗುತ್ತಿಲ್ಲ ಎಂದು ತಿಳಿಸಿದೆ.

    ಪರಿಸ್ಥಿತಿ ಹೇಗಿದೆ?
    ಈಗಾಗಲೇ ಎನ್‍ಡಿಆರ್‍ಎಫ್ ತಂಡ ತೊಂದರೆಗೊಳಗಾದ 5 ಗ್ರಾಮಗಳಿಗೆ ಬಂದಿದ್ದು, ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. 5 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲ ಮನೆಗಳಿಗೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೋವಿಡ್ 19 ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದ ಆಮ್ಲಜನಕ ಮತ್ತು ವೆಂಟಿಲೇಟರ್ ಗಳು ಮೊದಲೇ ಸಿದ್ಧವಾಗಿರಿಸಿದ್ದ ಕಾರಣ ಹಲವು ಜೀವಗಳು ಉಳಿದಿದೆ. ಗಾಳಿ ಯಾವ ಕಡೆ ಹೆಚ್ಚು ಬೀಸುತ್ತದೋ ಆ ಪ್ರದೇಶಗಳಿಗೆ ಹೆಚ್ಚಿನ ಸಮಸ್ಯೆಯಾಗಿದೆ.

    ಎಲ್‍ಜಿ ಪಾಲಿಮರ್ಸ್ ಕಾರ್ಖಾನೆ:
    ಹಿಂದೂಸ್ಥಾನ್ ಪಾಲಿಮರ್ಸ್ ಎಂಬ ಹೆಸರಿನೊಂದಿಗೆ 1961ರಲ್ಲಿ ಆರಂಭವಾದ ಈ ಕಾರ್ಖಾನೆಯನ್ನು 1997 ರಲ್ಲಿ ದಕ್ಷಿಣ ಕೊರಿಯಾದ ಎಲ್‍ಜಿ ಸಂಸ್ಥೆ ಖರೀದಿಸಿತ್ತು. ಈ ಹಿನ್ನೆಲೆಯಲ್ಲಿ ಈ ಕಾರ್ಖಾನೆಗೆ ಎಲ್‍ಜಿ ಪಾಲಿಮರ್ಸ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು. ಇದು ಪಾಲಿಸ್ಟೈರೀನ್ ತಯಾರಿಸುವ ಘಟಕವಾಗಿದ್ದು, ಆಟಿಕೆ ಮತ್ತು ವಿವಿಧ ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಹೀಗಾಗಿ ಈ ಕಾರ್ಖಾನೆಯಲ್ಲಿ ಭಾರೀ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ಬಳಕೆಯಾಗದೇ ಸಂಗ್ರಹಿಸಿಟ್ಟಿದ್ದ ಸುಮಾರು 5 ಸಾವಿರ ಟನ್ ರಾಸಾಯನಿಕದಿಂದ ವಿಷಾನಿಲ ಸೋರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.

  • ನನ್ನಮ್ಮ ಕೂಡ ಏಕಾಏಕಿ ಕೆಳಗೆ ಬಿದ್ರು, ಕೂಡ್ಲೇ ಆಸ್ಪತ್ರೆಗೆ ಕರೆದೊಯ್ದೆ- ಪ್ರತ್ಯಕ್ಷದರ್ಶಿ ವಿವರಣೆ

    ನನ್ನಮ್ಮ ಕೂಡ ಏಕಾಏಕಿ ಕೆಳಗೆ ಬಿದ್ರು, ಕೂಡ್ಲೇ ಆಸ್ಪತ್ರೆಗೆ ಕರೆದೊಯ್ದೆ- ಪ್ರತ್ಯಕ್ಷದರ್ಶಿ ವಿವರಣೆ

    – ಜನ ರಸ್ತೆಯಲ್ಲಿ ಬಿದ್ದರೂ ಕಂಪನಿ ಕ್ಯಾರೇ ಎಂದಿಲ್ಲ

    ಹೈದರಾಬಾದ್: ನೋಡನೋಡುತ್ತಿದ್ದಂತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಚಿಕ್ಕಮಕ್ಕಳು ಸೇರಿದಂತೆ ಎಲ್ಲರೂ ಬೀಳುತ್ತಿದ್ದಾರೆ. ಆದರೆ ಕಂಪನಿ ಸಿಬ್ಬಂದಿ ಮಾತ್ರ ಸಹಾಯಕ್ಕೆ ಬರುತ್ತಿಲ್ಲ ಎಂದು ವಿಶಾಖಪಟ್ಟಣಂನಲ್ಲಿ ನಡೆದ ದುರಂತವನ್ನು ಪ್ರತ್ಯಕ್ಷದರ್ಶಿ ಯುವಕನೊಬ್ಬ ವಿವರಿಸಿದ್ದಾನೆ. ಇದನ್ನೂ ಓದಿ: ವಿಶಾಖಪಟ್ಟಣಂ ದುರಂತ- 2 ಟ್ಯಾಂಕಿನ ಒಟ್ಟು 10 ಟನ್ ವಿಷಾನಿಲ ಸೋರಿಕೆ

    ನಾನು ಮನೆಯಿಂದ ಹೊರಗಡೆ ಬಂದ ತಕ್ಷಣ ಯಾವುದೋ ಗಾಳಿ ಬರುತ್ತಿತ್ತು. ಅದು ಏನು ಅಂತ ನನಗೆ ಗೊತ್ತಾಗಿಲ್ಲ. ಆದರೆ ಮಕ್ಕಳು ಸೇರಿದಂತೆ ನಡೆದುಕೊಂಡು ಹೋಗುತ್ತಿದ್ದರೆಲ್ಲಾ ರಸ್ತೆಯ ಮೇಲೆ ಬೀಳುತ್ತಿದ್ದರು. ನಮ್ಮ ಅಮ್ಮ ಕೂಡ ಕೆಳಗೆ ಬಿದ್ದರು. ನನಗೆ ಗಾಬರಿಯಲ್ಲಿ ಏನು ಮಾಡಬೇಕು ಎಂದು ಗೊತ್ತಾಗಿಲ್ಲ. ಆದರೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದೆ ಎಂದಿದ್ದಾನೆ. ಇದನ್ನೂ ಓದಿ: ಲಾಕ್‍ಡೌನ್ ಬಳಿಕ ತೆರೆದ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆ- ಸಾವಿನ ಸಂಖ್ಯೆ 8ಕ್ಕೆ ಏರಿಕೆ

    ಮೈಯೆಲ್ಲಾ ನವೆಯಾಗುತ್ತದೆ. ಕಣ್ಣಲ್ಲಿ ನೀರು ಬರಲು ಶುರುವಾಯ್ತು. ಎಷ್ಟೂ ದೂರ ಓಡಿದರೂ ಗಾಳಿ ಜೋರಾಗಿ ಬರುತ್ತಿತ್ತು. ರಸ್ತೆಯಲ್ಲಿ ಎಲ್ಲೆಂದರಲ್ಲಿ ಜನರು ಬೀಳುತ್ತಿದ್ದಾರೆ. ನಮ್ಮ ಮನೆಯವರನ್ನು 3-4 ಕಿ.ಮೀ ದೂರ ಮನೆಗಳಿಗೆ ಬಿಟ್ಟು ಬಂದಿದ್ದೇವೆ. ಅನೇಕರು ಅಂಬುಲೆನ್ಸ್ ಗಾಗಿ ರಸ್ತೆಯಲ್ಲಿ ಕುಳಿತು ಕಾಯುತ್ತಿದ್ದಾರೆ. ಇಷ್ಟಾದರೂ ಗ್ಯಾಸ್ ಕಂಪನಿ ಸಿಬ್ಬಂದಿ ಕಾರುಗಳಿದ್ದರೂ ಸಹಾಯಕ್ಕೆ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇಂತಹ ಗ್ರಾಮಗಳಿರುವ ನಡುವೆ ಈ ಕಂಪನಿ ಇರುವುದು ಮುಖ್ಯನಾ?. ಹೀಗಾಗಿ ಈಗಲಾದರೂ ಈ ಕಾರ್ಖಾನೆಯನ್ನು ಮುಚ್ಚಿಸಿ ಎಂದು ಮನವಿ ಮಾಡಿಕೊಂಡರು.

    ಇಂದು ಮುಂಜಾನೆ ಜಿಲ್ಲೆಯ ಆರ್.ಆರ್.ವೆಂಕಟಪುರಂನ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಗಾಳಿಯಲ್ಲಿ ವಿಷಾನಿಲ ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡಿದೆ. ಇದುವರೆಗೂ ವಿಷಾನಿಲ ದುರಂತದಿಂದ 11 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿಯಾಗುವ ಸಾಧ್ಯತೆ ಇದೆ. ಇನ್ನೂ 1000ಕ್ಕೂ ಹೆಚ್ಚಿನ ಮಂದಿ ಅಸ್ವಸ್ಥರಾಗಿದ್ದಾರೆ.

    ವಿಷಾನಿಲ ದುರಂತದಿಂದ ಪ್ರಾಣಿ-ಪಕ್ಷಿಗಳು ಕೂಡ ಎಲ್ಲೆಂದರಲ್ಲಿ ಮೃತಪಟ್ಟಿವೆ. ಇನ್ನೂ ಬೈಕಿನಲ್ಲಿ ಹೋಗುತ್ತಿದ್ದವರು ಅಸ್ವಸ್ಥರಾಗಿ ರಸ್ತೆಯಲ್ಲಿಯೇ ಬಿದ್ದಿದ್ದಾರೆ. ಕೆಲವರು ಮನೆಯ ಬಳಿ, ಚರಂಡಿಯೊಳಗೂ ಬಿದ್ದಿದ್ದಾರೆ. ಸದ್ಯಕ್ಕೆ ಕಾರ್ಖಾನೆ ಬಳಿ ಅಂಬುನೆಲ್ಸ್, ರಾಜ್ಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ದಳ ಮತ್ತು ಪೊಲೀಸರು ಜನರನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ.

  • ವಿಶಾಖಪಟ್ಟಣಂ ದುರಂತ- 2 ಟ್ಯಾಂಕಿನ ಒಟ್ಟು 10 ಸಾವಿರ ಟನ್ ವಿಷಾನಿಲ ಸೋರಿಕೆ

    ವಿಶಾಖಪಟ್ಟಣಂ ದುರಂತ- 2 ಟ್ಯಾಂಕಿನ ಒಟ್ಟು 10 ಸಾವಿರ ಟನ್ ವಿಷಾನಿಲ ಸೋರಿಕೆ

    – 13 ಮಂದಿ ಸಾವು, 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥ
    – ನಾಯಿ, ಪಕ್ಷಿ, ಹಸುಗಳು ಅಸ್ವಸ್ಥ

    ವಿಶಾಖಪಟ್ಟಣಂ: ಆಂಧ್ರಪ್ರದೇಶದ ರಾಸಾಯನಿಕ ಕಾರ್ಖಾನೆಯ ವಿಷ ಅನಿಲ ಸೋರಿಕೆ ದುರಂತ ಒಟ್ಟು 13 ಮಂದಿಯನ್ನು ಬಲಿಪಡೆದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳೀವೆ. ಇದರ ಜೊತೆ ಸುಮಾರು 180 ಮಂದಿಯ ಸ್ಥಿತಿ ಗಂಭೀರವಾಗಿದ್ದು, 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥವಾಗಿದ್ದಾರೆ.

    ಇಂದು ಮುಂಜಾನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್.ಆರ್.ವೆಂಕಟಪುರಂನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಇದು ಗಾಳಿಯಲ್ಲಿ ಸೇರಿಕೊಂಡು ಸುತ್ತಮುತ್ತಲಿನ ಹಳ್ಳಿಗಳಿಗೂ ಹರಡಿದೆ. ಕಾರ್ಖಾನೆಯಲ್ಲಿ ಇದ್ದ ಎರಡು ಟ್ಯಾಂಕ್‍ಗಳಲ್ಲಿದ್ದ ವಿಷಾನಿಲ ಸೋರಿಕೆಯಾಗಿದ್ದು, ಒಟ್ಟು 10 ಸಾವಿರ ಟನ್ ವಿಷ ಅನಿಲ ಸೋರಿಕೆಯಾಗಿದೆ.

    ಎರಡು ಟ್ಯಾಂಕ್‍ಗಳಲ್ಲಿ ಇದ್ದ ಸ್ಪೈರಿನ್ ಎಂಬ ಅನಿಲ ಸೋರಿಕೆಯಾಗಿದ್ದು, ಇದು ಗಾಳಿಯಲ್ಲಿ ವೇಗವಾಗಿ ಹರಡಿದೆ. ಪರಿಣಾಮ ಸುತ್ತಮುತ್ತಲಿನ ಹಳ್ಳಿಯ ಜನ, ಬೆಳಗ್ಗಿನ ವೇಳೆ ವಾಕಿಂಗ್ ಬಂದವರು ಮಕ್ಕಳು ರಸ್ತೆಯಲ್ಲಿ ಓಡಾಡುವವರು ನಿಂತಲ್ಲೇ ಕುಸಿದು ಬಿದ್ದಿದ್ದಾರೆ. ಜೊತೆಗೆ ಈ ವಿಷ ಅನಿಲ ಸೇವನೆಯಿಂದ ನಾಯಿಗಳು ಮತ್ತು ಹಸುಗಳು ಪಕ್ಷಿಗಳು ಕೂಡ ಸಾವನ್ನಪ್ಪುತ್ತಿವೆ.

    ಈ ಕಾರ್ಖಾನೆ ವಿಶಾಖಪಟ್ಟಣಂ ನಗರದಿಂದ 14 ಕಿಲೋಮೀಟರ್ ದೂರದಲ್ಲಿರುವ ಆರ್.ಆರ್.ವೆಂಕಟಪುರಂನಲ್ಲಿ ಇದ್ದು, ಈ ಕಂಪನಿ ದಕ್ಷಿಣ ಕೊರಿಯಾದ ಬ್ಯಾಟರಿ ತಯಾರಕ ಎಲ್.ಜಿ ಕೆಮಿಕಲ್ ಲಿಮಿಟೆಡ್ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಮಾತನಾಡಿರುವ ಕಂಪನಿಯ ಅಡಳಿತ ಮಂಡಳಿ, ಸೋರಿಕೆ ಹೇಗೆ ಆಯ್ತು ಮತ್ತು ಅದಕ್ಕೆ ನಿಖರ ಕಾರಣವೇನು? ಜನರು ಸಾಯುವುದಕ್ಕೆ ಕಾರಣ ಮತ್ತು ಘಟನೆಯ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದೆ.

    ವಿಶಾಖಪಟ್ಟಣಂನ ಸಹಾಯಕ ಪೊಲೀಸ್ ಆಯುಕ್ತ ಸ್ವರೂಪಾ ರಾಣಿ ಮಾತನಾಡಿ, ಮಾರ್ಚ್ ಅಂತ್ಯದಿಂದ ದೇಶವೇ ಕೊರೊನಾ ವೈರಸ್ ಲಾಕ್‍ಡೌನ್ ಆಗಿದ್ದರಿಂದ ಈ ಕಾರ್ಖಾನೆ ಎರಡು ತಿಂಗಳು ಕಾರ್ಯನಿರ್ವಹಿಸಿರಲಿಲ್ಲ. ಆದರೆ ಈಗ ಲಾಕ್‍ಡೌನ್ ಸಡಿಲಿಕೆ ಆದ ಮೇಲೆ ಕಾರ್ಖಾನೆಯನ್ನು ತೆರೆಯಲಾಗಿದೆ. ಈ ಟ್ಯಾಂಕ್‍ಗಳಲ್ಲಿ ಮೊದಲೇ ಉಳಿದಿದ್ದ ಅನಿಲ ಈಗ ರಾಸಾಯನಿಕ ಕ್ರಿಯೆಗೆ ಒಳಪಟ್ಟು ಶಾಖೋತ್ಪತ್ತಿಯಾಗಿ ಸೋರಿಕೆಯಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ ಎಂದು ಹೇಳಿದ್ದಾರೆ.

    ಸ್ಥಳೀಯ ಯುವಕನೋರ್ವ ಘಟನೆಯ ಬಗ್ಗೆ ವಿವರಿಸಿ, ನಾವು ಬೆಳಗ್ಗೆ ಎದ್ದಾಗ ಗಾಳಿಯಲ್ಲಿ ದಟ್ಟವಾಗಿ ಏನೋ ಕಾಣಿಸಿಕೊಂಡಿತು. ಆ ಸಮಯದಲ್ಲಿ ನಮಗೆ ಉಸಿರಾಡಲು ಕಷ್ಟವಾಯಿತು. ತಕ್ಷಣ ನಾವು ಮನೆಯಿಂದ ಮೂರು ಕಿ.ಮೀ ಓಡಿ ಬಂದಿವೆ. ಆದರೆ ಅದು ತುಂಬ ವೇಗವಾಗಿ ಗಾಳಿಯಲ್ಲಿ ಹರಡಿತು. ಈಗ ಉಸಿರಾಡಲು ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾನೆ.

    ಈಗ ಕಾರ್ಖಾನೆಯ ಮೂರು ಕಿ.ಮೀ ಅಂತರದಲ್ಲಿ ಇರುವ ಎಲ್ಲಾ ಜನರನ್ನು ಸ್ಥಳಾಂತರ ಮಾಡಿದ್ದೇವೆ ಎಂದು ವಿಶಾಖಪಟ್ಟಣಂ ಮಹಾನಗರ ಪಾಲಿಕೆ ಟ್ವೀಟ್ ಮಾಡಿದೆ. ಜೊತೆಗೆ ಎಲ್‍ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ವಿಷ ಅನಿಲ ಸೋರಿಕೆಯನ್ನು ಗುರುತಿಸಲಾಗಿದೆ. ಹೀಗಾಗಿ ಸುರಕ್ಷತಾ ಮುನ್ನೆಚ್ಚರಿಕೆಗಾಗಿ ಸುತ್ತಮುತ್ತಲಿನ ನಾಗರಿಕರು ಮನೆಗಳಿಂದ ಹೊರಬರದಂತೆ ಪಾಲಿಕೆ ಮನವಿ ಮಾಡಿಕೊಂಡಿದೆ.

    ಈ ವಿಚಾರವಾಗಿ ಮಾತನಾಡಿರುವ ವಿಶಾಖಪಟ್ಟಣಂನ ಎಸಿಪಿ ರಾಣಿ, ಇಂದು ಬೆಳಗ್ಗೆ ಸುಮಾರು 4 ಗಂಟೆಗೆ ನಮ್ಮ ಅಧಿಕಾರಿಯೊಬ್ಬರು ಕರೆ ಮಾಡಿ ವಿಷಯ ತಿಳಿಸಿದರು. ನಾನು ತಕ್ಷಣ ಅಲ್ಲಿಗೆ ಹೋದೆ. ಅಲ್ಲಿ ಹಲವಾರು ಜನರು ಪ್ರಜ್ಞೆ ಇಲ್ಲದೇ ಬಿದ್ದಿದ್ದರು. ನಾನೇ ಸುಮಾರು 15 ಜನರನ್ನು ಅಂಬುಲೆನ್ಸ್ ಗೆ ಹತ್ತಿಸಿ ಕಳುಹಿಸಿದೆ. ಹಳ್ಳಿಗಳಿಂದ ಜನರು ಓಡಿಬಂದು ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ತಿಳಿಸಿದ್ದಾರೆ.

  • ಲಾಕ್‍ಡೌನ್ ಬಳಿಕ ತೆರೆದ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆ- ಸಾವಿನ ಸಂಖ್ಯೆ 8ಕ್ಕೆ ಏರಿಕೆ

    ಲಾಕ್‍ಡೌನ್ ಬಳಿಕ ತೆರೆದ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆ- ಸಾವಿನ ಸಂಖ್ಯೆ 8ಕ್ಕೆ ಏರಿಕೆ

    – ಆಂಧ್ರದ ವಿಶಾಖಪಟ್ಟಣಂನಲ್ಲಿ ದುರಂತ
    – ರಸ್ತೆಯಲ್ಲಿ ಕುಸಿದು ಬೀಳುತ್ತಿರೋ ಜನರು

    ಹೈದರಾಬಾದ್: ಆಂಧ್ರ ಪ್ರದೇಶದ ವಿಶಾಖಪಟ್ಟಣದ ಬಹುರಾಷ್ಟ್ರೀಯ ಸಂಸ್ಥೆಯ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆಯಾದ ಪರಿಣಾಮ ಮಗು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 200ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇಂದು ಮುಂಜಾನೆ ಜಿಲ್ಲೆಯ ಆರ್.ಆರ್.ವೆಂಕಟಪುರಂನ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಗಾಳಿಯಲ್ಲಿ ವಿಷಾನಿಲ ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡಿದೆ. ಪರಿಣಾಮ ಬೆಳಗ್ಗೆ ವಾಕಿಂಗ್ ಮತ್ತು ಇತರೆ ಕೆಲಸಗಳಿಗೆ ಬಂದಿದ್ದ ಜನರು ವಿಷಾನಿಲ ಸೇವಿಸಿ ಕೂಡಲೇ ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈ ದುರ್ಘಟನೆಯಲ್ಲಿ ಇದುವರೆಗೂ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಾಹಿತಿ ತಿಳಿದ ತಕ್ಷಣ ಅಂಬುನೆಲ್ಸ್, ಅಗ್ನಿಶಾಮಕ ದಳ ಮತ್ತು ಪೊಲೀಸರು ರಾಸಾಯನಿಕ ಕಾರ್ಖಾನೆಯತ್ತ ದೌಡಾಯಿಸಿದ್ದು, ಜನರನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ವಿಶಾಖಪಟ್ಟಣಂ ಮಹಾನಗರ ಪಾಲಿಕೆ “ಗೋಪಾಲಪಟ್ಟಣದಲ್ಲಿ ಎಲ್‍ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯನ್ನು ಗುರುತಿಸಲಾಗಿದೆ. ಹೀಗಾಗಿ ಸುರಕ್ಷತಾ ಮುನ್ನೆಚ್ಚರಿಕೆಗಾಗಿ ಸುತ್ತಮುತ್ತಲಿನ ನಾಗರಿಕರು ಮನೆಗಳಿಂದ ಹೊರಬರದಂತೆ” ಮನವಿ ಮಾಡಿಕೊಂಡಿದೆ.

    ಈ ಘಟನೆಯ ಬಗ್ಗೆ ಕೆಲವರು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಅದರಲ್ಲಿ ರಸ್ತೆಯಲ್ಲಿ ನಿಂತಿದ್ದ, ವಾಕಿಂಗ್ ಮಾಡುತ್ತಿದ್ದವರು ಇದ್ದಕ್ಕಿದ್ದಂತೆ ವಿಷಾನಿಲ ಸೇವಿಸಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ಜೊತೆಗೆ ಉಸಿರಾಡಲು ತೊಂದರೆ ಪಡುತ್ತಿರುವ ಜನರನ್ನು ಮಾಸ್ಕ್ ಧರಿಸಿರುವವರು ರಕ್ಷಿಸಿ ಅಂಬುಲೆನ್ಸ್ ಬರುವವರೆಗೂ ರಸ್ತೆಯ ಡಿವೈಡರ್ ಮೇಲೆ ಕೂರಿಸುತ್ತಿರುವುದನ್ನು ಕಾಣಬಹುದಾಗಿದೆ.

    ಇತ್ತ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ”ವಿಶಾಖಪಟ್ಟಣಂನಲ್ಲಿ ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

  • ನಂಜನಗೂಡಿನಿಂದ ಬಂದ ಬಳ್ಳಾರಿಯ ಬಾಲಕನಿಗೆ ಸೋಂಕು – ರಾಜ್ಯದಲ್ಲಿ 124ಕ್ಕೆ ಏರಿಕೆ

    ನಂಜನಗೂಡಿನಿಂದ ಬಂದ ಬಳ್ಳಾರಿಯ ಬಾಲಕನಿಗೆ ಸೋಂಕು – ರಾಜ್ಯದಲ್ಲಿ 124ಕ್ಕೆ ಏರಿಕೆ

    ಬೆಂಗಳೂರು: 14 ವರ್ಷದ ಬಾಲಕ ಸೇರಿದಂತೆ ಇಂದು ಒಟ್ಟು 14 ಮಂದಿಗೆ ಕೊರೊನಾ ಬಂದಿದ್ದು ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 124ಕ್ಕೆ ಏರಿಕೆಯಾಗಿದೆ.

    ಗಣಿ ನಾಡು ಬಳ್ಳಾರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ನಂಜನಗೂಡು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದವರ ರೋಗಿ 81ನೇ ವ್ಯಕ್ತಿ ಪುತ್ರನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದನ್ನೂ ಓದಿ: ದೆಹಲಿಯ ಜಮಾತ್ ಸಭೆಯಿಂದ ದೇಶಾದ್ಯಂತ ಕೊರೊನಾ ಹರಡಿದ್ದು ಹೇಗೆ?

    14 ವರ್ಷದ ಬಾಲಕ ಪೋಷಕರ ಸ್ನೇಹಿತರೊಂದಿಗೆ ವಿವಿಧ ವಾಹನಗಳನ್ನು ಬಳಸಿಕೊಂಡು ನಾಲ್ಕು ದಿನಗಳ ಹಿಂದೆ ನಂಜನಗೂಡಿನಿಂದ ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ನಗರಕ್ಕೆ ಆಗಮಿಸಿದ್ದ. ಹೀಗಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ನಂಜನಗೂಡಿನಿಂದ ಬಂದ ಮೂವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ಮೂವರ ಪರೀಕ್ಷೆ ವರದಿ ಬಂದಿದ್ದು, ಅವರಲ್ಲಿ ಬಾಲಕನಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಮೂಲಕ ಬಳ್ಳಾರಿ ಜಿಲ್ಲೆಯ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆ ಆಗಿದೆ.

    ಜಿಲ್ಲಾಡಳಿತ ನಂಜನಗೂಡಿನಿಂದ ಬಂದ ಈ ಮೂವರನ್ನು ಬಳ್ಳಾರಿಗೆ ಬಂದ ಕೂಡಲೇ ಚಿಕಿತ್ಸೆಗೆ ಒಳಪಡಿಸಿ ಪ್ರತ್ಯೇಕವಾಗಿ ವಾರ್ಡ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿದೆ. ಹೀಗಾಗಿ ಸೋಂಕಿತರು ಬೇರೆ ಯಾರನ್ನು ಸಂಪರ್ಕ ಮಾಡಲು ಬಿಟ್ಟಿಲ್ಲ. ದೆಹಲಿಯ ಜಮಾತ್‍ಗೆ ತೆರಳಿದ್ದ ಬೀದರಿನ 9 ಮಂದಿ ಜೊತೆ ಒಬ್ಬರ ಪತ್ನಿಗೂ ಕೊರೊನಾ ಬಂದಿದೆ. ಇದನ್ನೂ ಓದಿ:  ಎಲ್ಲೆಂದರಲ್ಲಿ, ಡಾಕ್ಟರ್ ಮೇಲೆ ಉಗುಳುತ್ತಿದ್ದಾರೆ ದೆಹಲಿ ಮಸೀದಿಯ ಕ್ವಾರಂಟೈನ್‍ಗಳು

    ರೋಗಿ 111: ಮೈಸೂರಿನ 24 ವರ್ಷದ ಪುರುಷರಾಗಿದ್ದು, ರೋಗಿ 88 (ರೂಮ್‍ಮೇಟ್) ಸಂಪರ್ಕಿತರಾಗಿದ್ದರು. ಅವರನ್ನು ಮೈಸೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಕ್ವಾರಂಟೈನ್‍ಗಳಿಂದ ನಮಾಜ್

    ರೋಗಿ 112: ಮೈಸೂರಿನ 22 ವರ್ಷದ ಪುರುಷರಾಗಿದ್ದು, ರೋಗಿ 88 (ರೂಮ್‍ಮೇಟ್) ಸಂಪರ್ಕಿತರಾಗಿದ್ದು ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 113: ಬಳ್ಳಾರಿಯ 14 ವರ್ಷದ ಬಾಲಕ ರೋಗಿ 81ನೇ ವ್ಯಕ್ತಿಯ ಮಗನಾಗಿದ್ದು ಬಳ್ಳಾರಿ ಆಸ್ಪತ್ರೆ ನಿಗಾ ಇಡಲಾಗಿದೆ. ಇದನ್ನೂ ಓದಿ: ದೇಶದಲ್ಲಿ 2,400ಕ್ಕೂ ಹೆಚ್ಚು ಜನರಿಗೆ ಕೊರೊನಾ – ಇನ್ನೆರಡು ವಾರದಲ್ಲೇ 10,000 ತಲುಪೋ ಸಾಧ್ಯತೆ

     ರೋಗಿ 114: ಬೀದರ್‍ನ ಬಿಲಾಲ್ ಕಾಲೋನಿ ನಿವಾಸಿ 48 ವರ್ಷದ ಪುರುಷನಾಗಿದ್ದು, ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 115: ಬೀದರ್ ಲಾಲ್ವಾಡಿ ರಸ್ತೆಯ ನಿವಾಸಿ 30 ಪುರುಷನಾಗಿದ್ದು, ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 116: 41 ಪುರುಷ ಶಹಗುಂಜ್, ಬೀದರ್ ನಿವಾಸಿಯಾಗಿದ್ದಾರೆ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 117: 66 ಪುರುಷ ಗೊಲೆಕ್ಬಾನಾ, ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 118: 59 ಪುರುಷ ಬಸವಕಲ್ಯಾಣ್, ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 119: 39 ಪುರುಷ ಪಹೇಲಿ ಚೌಕಿ, ಹೈದರಾಬಾದ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 120: 60 ಪುರುಷ ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 121: 63 ಪುರುಷ ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 122: 73 ಪುರುಷ ಕಿರಮಣಿ ಕಾಲೋನಿ, ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

    ರೋಗಿ 123: 45 ಪುರುಷ ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 124: 60 ಮಹಿಳೆ ಕಲಬುರಗಿ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಗೆ ಹಾಜರಾಗಿದ್ದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರು. ಸದ್ಯ ಅವರನ್ನು ಕಲಬುರಗಿಯಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

  • 50 ಲಕ್ಷ ದೇಣಿಗೆ ನೀಡಿದ ಸುತ್ತೂರು ಮಠ

    50 ಲಕ್ಷ ದೇಣಿಗೆ ನೀಡಿದ ಸುತ್ತೂರು ಮಠ

    – ಜ್ಯೂಬಿಲಿಯೆಂಟ್ ಕಾರ್ಖಾನೆಗೆ ಸೋಮಣ್ಣ ಭೇಟಿ

    ಮೈಸೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೋರಿರುವ ಆರ್ಥಿಕ ನೆರವಿಗೆ ಮೈಸೂರಿನ ಶ್ರೀ ಸುತ್ತೂರು ಮಠ ಸ್ಪಂದಿಸಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದೆ.

    ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇವತ್ತು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜೆಎಸ್‍ಎಸ್ ಮಹಾವಿದ್ಯಾಪೀಠ ಹಾಗೂ ಸಂಸ್ಥೆಯ ನೌಕರರಿಂದ 50 ಲಕ್ಷ ರೂ.ಗಳ ದೇಣಿಗೆಯನ್ನು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿಗಳು ಸಚಿವರಿಗೆ ನೀಡಿದರು. ಸಂಸದರಾದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜೆ.ಎಸ್.ಎಸ್. ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಕಾರ್ಯದರ್ಶಿ ಎಸ್.ಶಿವಕುಮಾರಸ್ವಾಮಿ ಉಪಸ್ಥಿತರಿದ್ದರು.

    ಮೈಸೂರು ಭಾಗದಲ್ಲಿ ಕೊರೊನಾ ಭೀತಿ ಹೆಚ್ಚಾಗಲು ಕಾರಣವಾಗಿರುವ ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆಗೆ ಸಚಿವ ವಿ. ಸೋಮಣ್ಣ ಇಂದು ಭೇಟಿ ನೀಡಿ ಪರಿಶೀಲಿಸಿದರು. ಕಾರ್ಖಾನೆ ಲಾಕ್‍ಡೌನ್ ಆಗಿರುವುದನ್ನು ಸಚಿವರು ವೀಕ್ಷಿಸಿದರು.

    ಕಾರ್ಖಾನೆಯಲ್ಲಿ 15 ಜನ ಸೆಕ್ಯೂರಿಟಿ ಗಾರ್ಡ್ ಗಳು ಮಾತ್ರ ಇದ್ದು, ಅವರನ್ನು ಇಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಅವರಿಗೆ ಬೇಕಾದ ಊಟ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧೀಕ್ಷಕರು ಸಚಿವರಿಗೆ ಮಾಹಿತಿ ನೀಡಿದರು.

     

  • ಪರಿಸರ ಮಾಲಿನ್ಯದ ದೂರು- ಎರಡು ಸ್ಪಾಂಜ್ ಐರನ್ ಫ್ಯಾಕ್ಟರಿಗಳಿಗೆ ಬೀಗ ಮುದ್ರೆ

    ಪರಿಸರ ಮಾಲಿನ್ಯದ ದೂರು- ಎರಡು ಸ್ಪಾಂಜ್ ಐರನ್ ಫ್ಯಾಕ್ಟರಿಗಳಿಗೆ ಬೀಗ ಮುದ್ರೆ

    ಬಳ್ಳಾರಿ: ಭಾರೀ ಪ್ರಮಾಣದಲ್ಲಿ ಹೊಗೆ ಹೊರಸೂಸುವುದು ಹಾಗೂ ಧೂಳಿನಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿತ್ತು. ಹೀಗಾಗಿ ಹೆಚ್ಚು ದೂರು ಕೇಳಿ ಬರುತ್ತಿದ್ದವು. ಈ ಹಿನ್ನೆಲೆ ಎರಡು ಸ್ಪಾಂಜ್ ಐರನ್ ಫ್ಯಾಕ್ಟರಿಗಳಿಗೆ ಬೀಗ ಜಡಿಯಲಾಯಿತು.

    ಜಿಲ್ಲೆಯ ಸಂಡೂರು ತಾಲೂಕಿನ ಸುಲ್ತಾನಪುರ ಗ್ರಾಮದ ಬಳಿಯಿರುವ ಪದ್ಮಾವತಿ ಸ್ಪಾಂಜ್ ಐರನ್ ಮತ್ತು ಜೆಎಸ್ ಡಬ್ಲ್ಯು ಪ್ರಾಜೆಕ್ಟ್ ಫ್ಯಾಕ್ಟರಿಗಳಿಗೆ ಬೀಗ ಜಡಿಯಲಾಗಿದೆ. ಸುಲ್ತಾನಪುರ ಗ್ರಾಮದ ಯುವಕ ಕೆ.ಎಸ್.ಜಂಬಯ್ಯ ನೀಡಿದ್ದ ದೂರಿನ ಮೇರೆಗೆ ಸಂಡೂರು ತಹಶೀಲ್ದಾರ್ ಹೆಚ್.ಜೆ.ರಶ್ಮಿ ನೇತೃತ್ವದ ತಂಡ ಬೀಗ ಜಡಿದಿದೆ. ಸೋಮವಾರ ಫ್ಯಾಕ್ಟರಿಗಳಿಗೆ ತೆರಳಿ ತಹಶೀಲ್ದಾರ್ ತಂಡ ಪರಿಶೀಲನೆ ನಡೆಸಿದ್ದು, ಈ ವೇಳೆ ಫ್ಯಾಕ್ಟರಿಗಳಿಂದ ಪರಿಸರ ಮಾಲಿನ್ಯ ಉಂಟಾಗುವುದು ತಿಳಿದಿದೆ. ಈ ಹಿನ್ನೆಲೆ ಎರಡೂ ಫ್ಯಾಕ್ಟರಿಗಳಿಗೆ ಬೀಗಮುದ್ರೆ ಜಡಿದಿದ್ದಾರೆ.

    ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಸೂಚನೆಯ ಮೇರೆಗೆ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಹಾಗೂ ಸಂಡೂರು ತಹಶೀಲ್ದಾರ್ ರಶ್ಮಿ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಫ್ಯಾಕ್ಟರಿಗಳನ್ನು ಸೀಜ್ ಮಾಡಿರುವುದಕ್ಕೆ ಸುತ್ತ ಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮಾಲಿನ್ಯಕಾರಕ ಕಾರ್ಖಾನೆಗಳನ್ನು ಮುಚ್ಚಿಸಿರುವ ರಾಜ್ಯ ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮ ನನಗೂ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಸಂತಸ ತಂದಿದೆ. ಭವಿಷ್ಯದಲ್ಲಿ ಸರ್ಕಾರ ಮಾಲಿನ್ಯಕಾರಕ ಕಾರ್ಖಾನೆಗಳನ್ನು ತೆರೆಯಲು ಅವಕಾಶ ಕೊಡಬಾರದು. ಇಂತಹ ಕಾರ್ಖಾನೆಗಳಿಂದ ಈಗಾಗಲೇ ಪರಿಸರ, ರೈತರ ಬೆಳೆಗಳು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ. ಈ ಬಗ್ಗೆ ಕೂಡಲೇ ತಜ್ಞರ ತಂಡ ರಚಿಸಿ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ ಹಾಳಾಗಿರುವ ಪರಿಸರವನ್ನು ಮರು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸುಲ್ತಾನಪುರ ಗ್ರಾಮದ ಜನ ಆಗ್ರಹಿಸಿದ್ದಾರೆ.

  • ಮೂವತ್ತು ನಂಬರ್ ಬೀಡಿ ಫ್ಯಾಕ್ಟರಿ ಮೇಲೆ ಐಟಿ ದಾಳಿ

    ಮೂವತ್ತು ನಂಬರ್ ಬೀಡಿ ಫ್ಯಾಕ್ಟರಿ ಮೇಲೆ ಐಟಿ ದಾಳಿ

    ಚಿಕ್ಕೋಡಿ: ಬೀಡಿ ಫ್ಯಾಕ್ಟರಿ ಮೇಲೆ ಬೆಳ್ಳಂ ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಬೆಳಗಾವಿ ಜಿಲ್ಲೆ ನಿಪ್ಪಾಣಿ ನಗರದ ಹೊರವಲಯದಲ್ಲಿರುವ ಮೂವತ್ತು ನಂಬರ್ ಬೀಡಿ ಫ್ಯಾಕ್ಟರಿ ಮೇಲೆ ಐಟಿ ದಾಳಿ ನಡೆದಿದೆ. ಮಂಗಳೂರು ಮೂಲದ ರಮೇಶ ಪೈ ಎಂಬುವರಿಗೆ ಸೇರಿದ ಬೀಡಿ ಫ್ಯಾಕ್ಟರಿ ಮೇಲೆ ದಾಳಿ ನಡೆದಿದ್ದು, ಮಂಗಳೂರಿನ ಅವರ ಮನೆ ಮೇಲೂ ದಾಳಿ ನಡೆದಿದೆ.

    ಕರ್ನಾಟಕ ಹಾಗೂ ಗೋವಾ ಆದಾಯ ತೆರಿಗೆ ಇಲಾಖೆಯ 30ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ, ಫ್ಯಾಕ್ಟರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಫ್ಯಾಕ್ಟರಿ ಒಳಗಡೆ ಹಾಗೂ ಹೊರಗೇ ಯಾರನ್ನೂ ಬಿಡದಂತೆ ಪೊಲೀಸರಿಗೆ ಸೂಚಿಸಿ, ನಂತರ ಇಡೀ ಫ್ಯಾಕ್ಟರಿಯನ್ನು ಪರಿಶೀಲಿಸುತ್ತಿದ್ದಾರೆ.

    ಇತ್ತ ಮಂಗಳೂರಿನ ಉದ್ಯಮಿಗಳ ವಿವಿಧ ಕಚೇರಿ ಮತ್ತು ಮನೆಗಳ ಮೇಲೆ ಐಟಿ ದಾಳಿ ನಡೆದಿದ್ದು, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಬೀಡಿ ವರ್ಕ್ಸ್ ಸೇರಿದಂತೆ ವಿವಿಧೆಡೆ ಐಟಿ ದಾಳಿಯಾಗಿದೆ. ಭಾರತ್ ಬೀಡಿ, ಭಾರತ್ ಮೋಟಾರ್ಸ್ ಮೇಲೆ ಐಟಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.