Tag: Face Shield

  • 4 ವರ್ಷಗಳ ನಂತರ ನನಗೆ ಐಪಿಎಲ್‍ನಲ್ಲಿ ಅವಕಾಶ ಸಿಕ್ಕಿದೆ: ರಿಷಿ ಧವನ್

    4 ವರ್ಷಗಳ ನಂತರ ನನಗೆ ಐಪಿಎಲ್‍ನಲ್ಲಿ ಅವಕಾಶ ಸಿಕ್ಕಿದೆ: ರಿಷಿ ಧವನ್

    ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ಆಲ್‍ರೌಂಡರ್ ರಿಷಿ ಧವನ್, ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಮುಖ ಕವಚವನ್ನು ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ಧವನ್ (32) ಅವರನ್ನು ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ರೂ. 55 ಲಕ್ಷಕ್ಕೆ ಆಯ್ಕೆ ಮಾಡಿಕೊಂಡಿತ್ತು. ನಿನ್ನೆ ನಡೆದ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅವರು ತಮ್ಮ ಎರಡನೇ ಓವರ್‍ನಲ್ಲಿ ಸಿಎಸ್‍ಕೆ ತಂಡದ ಪ್ರಮುಖ ಬ್ಯಾಟರ್ ಶಿವಂ ದುಬೆ ಅವರ (8) ವಿಕೆಟ್ ಕಿತ್ತು, ನಂತರ ಇನ್ನಿಂಗ್ಸ್‍ನ ಕೊನೆಯ ಓವರ್‍ನಲ್ಲಿ ಸಿಎಸ್‍ಕೆ ತಂಡದ ಮಾಜಿ ನಾಯಕ ಮಹೇಂದ್ರ್ ಸಿಂಗ್ ಧೋನಿಯನ್ನು ಔಟ್ ಮಾಡುವುದರೊಂದಿಗೆ ಜಡೇಜಾ ಬಳಗವನ್ನು 11 ರನ್‍ಗಳಿಂದ ಸೋಲಿಸಲು ಸಹಾಯ ಮಾಡಿದರು. ಇದನ್ನೂ ಓದಿ: ಕೊನೆಯವರೆಗೆ ಹೋರಾಡಿ ಸೋತ ಚೆನ್ನೈ – ಪಂಜಾಬ್‌ಗೆ 11 ರನ್‌ಗಳ ಜಯ

    ರಿಷಿ ಧವನ್ ಮುಖ ಕವಚವನ್ನು ಹಾಕಿಕೊಂಡು ಆಟವಾಡುವುದಕ್ಕೆ ಒಂದು ಬಲವಾದ ಕಾರಣವಿದೆ. ಅದೇನೆಂದರೆ ಈ ಹಿಂದೆ ಅವರು, ರಣಜಿ ಟ್ರೋಫಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಅವರ ಮುಖಕ್ಕೆ ಬಾಲ್ ಬಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಹೆಚ್ಚುವರಿ ರಕ್ಷಣೆಗಾಗಿ ಈ ರೀತಿಯಾದ ಸೇಫ್ಟಿ ಕಿಟ್‍ಗಳನ್ನು ಧರಿಸಿ ಆಟವಾಡುತ್ತಾರೆ. ಇದನ್ನೂ ಓದಿ: ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

    ಕೆಲವು ದಿನಗಳ ಹಿಂದೆ, ಪಂಜಾಬ್ ಕಿಂಗ್ಸ್ ತಂಡವು ಸಾಮಾಜಿಕ ಜಾಲತಾಣದಲ್ಲಿ ರಿಷಿ ಧವನ್ ಅವರು ಮುಂಬೈನ ಕ್ರಿಕೆಟ್ ಮೈದಾನವೊಂದರಲ್ಲಿ ಅಭ್ಯಾಸ ಮಾಡುತ್ತಿದ್ದ ವೀಡಿಯೋವನ್ನು ಹಂಚಿಕೊಂಡಿತ್ತು. ವೀಡಿಯೋದಲ್ಲಿ ಧವನ್ ಅವರು ಮಾತನಾಡಿ, ನಾನು 4 ವರ್ಷಗಳ ನಂತರ ಐಪಿಎಲ್‍ಗೆ ಮರಳುತ್ತಿದ್ದೇನೆ. ಆದ್ದರಿಂದ ರಣಜಿ ಟ್ರೋಫಿಯಲ್ಲಿ ನಾನು ಗಾಯಗೊಂಡಾಗ ಸ್ವಲ್ಪ ನಿರಾಶೆಯಾಯಿತು. ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಾರಣ ನಾನು ಮೊದಲ ನಾಲ್ಕು ಪಂದ್ಯಗಳಲ್ಲಿ ಲಭ್ಯವಿರಲಿಲ್ಲ. ಆದರೆ ನಾನು ಈಗ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ಈಗ ತಂಡದ ಆಯ್ಕೆಗೆ ನಾನು ಲಭ್ಯವಿದ್ದೇನೆ. ನಾನು ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.

    ಧವನ್ ಐಪಿಎಲ್‍ನಲ್ಲಿ ಹಿಂದಿನ ಬಾರಿ 2016ರಲ್ಲಿ ಅದೇ ಫ್ರಾಂಚೈಸಿ ಪಂಜಾಬ್ ಕಿಂಗ್ಸ್‍ನೊಂದಿಗೆ ಕಾಣಿಸಿಕೊಂಡಿದ್ದರು. ಅವರು 2014ರ ಆವೃತ್ತಿಯಲ್ಲಿ ಫೈನಲ್ ತಲುಪಿದ್ದ ಪಂಜಾಬ್ ತಂಡದ ಭಾಗವಾಗಿದ್ದರು. ಇದನ್ನೂ ಓದಿ: 3.10 ಕೋಟಿ ರೂಪಾಯಿಯ ಐಷಾರಾಮಿ ಕಾರು ಖರೀದಿಸಿದ ಹಿಟ್ ಮ್ಯಾನ್

    ನಾನು ಪಂಜಾಬ್ ತಂಡಕ್ಕೆ ಮರಳಲು ತುಂಬಾ ಶ್ರಮಿಸಿದ್ದೇನೆ. ಅಂತಿಮವಾಗಿ 4 ವರ್ಷಗಳ ನಂತರ ನನಗೆ ಐಪಿಎಲ್‍ನಲ್ಲಿ ಅವಕಾಶ ಸಿಕ್ಕಿದೆ. ದೇಶೀಯ ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ನಾನು ತಂಡಕ್ಕೆ ಮರಳಲು ಸುಮಾರು 3-4 ವರ್ಷಗಳ ಕಾಲ ನಿರಂತರವಾಗಿ ಪ್ರಯತ್ನಿಸಿದೆ. ಆದ್ದರಿಂದ ನನ್ನ ಗಾಯದಿಂದಾಗಿ ನಾನು ಆಟವಾಡುವುದನ್ನು ಕಳೆದುಕೊಳ್ಳುತ್ತೇನೆಯೇ ಎಂದು ನಾನು ಸ್ವಲ್ಪ ಭಯಪಟ್ಟೆ ಎಂದು ಹೇಳಿದರು.

  • ‘ಮಹಾ’ ಪೊಲೀಸರಿಗೆ 25 ಸಾವಿರ ಫೇಸ್‍ಶೀಲ್ಡ್ ನೀಡಿದ ನಟ ಸೋನು ಸೂದ್

    ‘ಮಹಾ’ ಪೊಲೀಸರಿಗೆ 25 ಸಾವಿರ ಫೇಸ್‍ಶೀಲ್ಡ್ ನೀಡಿದ ನಟ ಸೋನು ಸೂದ್

    ಮುಂಬೈ: ಕೊರೊನಾ ಮಹಾಮಾರಿ ದೇಶವನ್ನು ಒಕ್ಕರಿಸಿದ ಬಳಿಕ ದಿನಬೆಳಗಾದರೆ ಸಾಕು ಅನೇಕ ಮಾನವೀಯ ಕಾರ್ಯಗಳು ಬೆಳಕಿಗೆ ಬರುತ್ತಲೇ ಇವೆ. ಅಂತೆಯೇ ಬಾಲಿವುಡ್ ನಟ ಸೋನು ಸೂದ್ ಕೂಡ ಲಾಕ್‍ಡೌನ್ ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೇ ಕೊರೊನಾ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದ ನಟ ಇದೀಗ ಮಹಾರಾಷ್ಟ್ರ ಪೊಲೀಸರ ಸಹಾಯಕ್ಕೆ ನಿಂತಿದ್ದಾರೆ.

    ಹೌದು. ಮಹಾರಾಷ್ಟ್ರ ಪೊಲೀಸರಿಗೆ ಸುಮಾರು 25 ಸಾವಿರ ಫೇಸ್ ಶೀಲ್ಡ್ ನೀಡುವ ಮೂಲಕ ಸೋನು ಸೂದ್ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಈ ಸಂಬಂಧ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‍ಮುಖ್ ಅವರು ಟ್ವೀಟ್ ಮಾಡಿದ್ದು, ನಮ್ಮ ಪೊಲೀಸರಿಗೆ 25 ಸಾವಿರ ಫೇಸ್ ಶೀಲ್ಡ್ ನೀಡಿದ ನಟ ಸೊನು ಸೂದ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಬರೆದುಕೊಂಡು ಜೊತೆಗಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸಿಲುಕಿದ್ದ ನೂರಾರು ಕನ್ನಡಿಗರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ ಸೋನು ಸೂದ್

    ಈ ಹಿಂದೆ ರಾಷ್ಟ್ರವ್ಯಾಪಿ ಲಾಕ್‍ಡೌನ್‍ನಿಂದಾಗಿ ಮೃತ ಮತ್ತು ಗಾಯಗೊಂಡಿರುವ ವಲಸೆ ಕಾರ್ಮಿಕರ 400ಕ್ಕೂ ಹೆಚ್ಚು ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಾಗಿ ನಟ ಸೋನು ಸೂದ್ ಘೋಷಣೆ ಮಾಡಿದ್ದರು. ಈ ಸಂಬಂಧ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ಅಧಿಕಾರಿಗಳನ್ನು ಸಂಪರ್ಕಿಸಿ ಅವರೊಂದಿಗೆ ಮಾತುಕತೆ ಕೂಡ ನಡೆಸಿದ್ದರು. ಅಲ್ಲದೆ ಕೊರೊನಾದಿಂದ ಮೃತ ವಲಸಿಗರ ಸಂಬಂಧಿತ ಮಾಹಿತಿ, ವಿಳಾಸ ಮತ್ತು ಬ್ಯಾಂಕ್ ವಿವರಗಳನ್ನು ಪಡೆದುಕೊಂಡಿದ್ದರು. ಇದನ್ನೂ ಓದಿ: 400ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳಿಗೆ ಸೋನು ಸೂದ್ ಆರ್ಥಿಕ ನೆರವು

    ಮೃತ ಅಥವಾ ಗಾಯಗೊಂಡಿರುವ ವಲಸಿಗರ ಕುಟುಂಬಗಳಿಗೆ ಸುರಕ್ಷಿತ ಭವಿಷ್ಯವನ್ನು ಹೊಂದಲು ನಾನು ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇನೆ. ಅವರನ್ನು ಬೆಂಬಲಿಸುವುದು ನನ್ನ ವೈಯಕ್ತಿಕ ಜವಬ್ದಾರಿ ಎಂದು ನಾನು ಭಾವಿಸುತ್ತೇನೆ ಅಂತ ಸೋನು ಸೂದ್ ಹೇಳಿದ್ದರು.

  • ಫೇಸ್ ಶೀಲ್ಡ್ ತೆಗೆದು ಕೊರೊನಾ ರೋಗಿಯ ಜೀವ ಉಳಿಸಿದ ವೈದ್ಯ

    ಫೇಸ್ ಶೀಲ್ಡ್ ತೆಗೆದು ಕೊರೊನಾ ರೋಗಿಯ ಜೀವ ಉಳಿಸಿದ ವೈದ್ಯ

    – ಏಮ್ಸ್ ವೈದ್ಯ 14 ದಿನ ಕ್ವಾರಂಟೈನ್
    – ತಮ್ಮ ಜೀವವನ್ನ ಪಣಕ್ಕಿಟ್ಟು ರೋಗಿ ಪ್ರಾಣ ಉಳಿಸಿದ ಡಾಕ್ಟರ್

    ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ರೋಗಿಗಳ ಜೀವ ಉಳಿಸಲು ವೈದ್ಯರು ಹಗಲಿರುಳು ಎನ್ನದೇ ಕರ್ತವ್ಯ ನಿಷ್ಠ ಮೆರೆಯುತ್ತಿದ್ದಾರೆ. ಇದೀಗ ಏಮ್ಸ್ ವೈದ್ಯರೊಬ್ಬರು ತಮ್ಮ ರಕ್ಷಣೆಗೆ ಹಾಕಿಕೊಂಡಿದ್ದ ಫೇಸ್ ಶೀಲ್ಡ್ ತೆಗೆದು ಕೋವಿಡ್-19 ರೋಗಿಯ ಜೀವ ಉಳಿಸುವ ಮೂಲಕ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ಘಟನೆ ನಡೆದಿದೆ.

    ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವೈದ್ಯ ಝಹೀದ್ ಅಬ್ದುಲ್ ಮಜೀದ್ ತಮ್ಮ ಫೇಸ್ ಶೀಲ್ಡ್ ತೆಗೆದು ಕೊರೊನಾ ರೋಗಿಯ ಜೀವ ಉಳಿಸಿದ್ದಾರೆ. ಕೊರೊನಾ ಸೋಂಕು ದೃಢಪಟ್ಟಿದ್ದ ರೋಗಿಯನ್ನು ಏಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ರೋಗಿಯ ಸ್ಥಿತಿ ಗಂಭೀರವಾದ ಕಾರಣ ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲು ನಿಗದಿಪಡಿಸಿದ್ದ ಸೆಂಟರ್‌ಗೆ ಸ್ಥಳಾಂತರಿಸಬೇಕಿತ್ತು. ಹೀಗಾಗಿ ರಾತ್ರಿ ಡಾ.ಮಜೀದ್ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಲಾಗಿದೆ.

    ಮಾಹಿತಿ ತಿಳಿದು ತಕ್ಷಣ ಡಾ.ಮಜೀದ್ ತಮ್ಮ ರಂಜಾನ್ ಉಪವಾಸವನ್ನು ಬ್ರೇಕ್ ಮಾಡಿ ರೋಗಿಗೆ ಚಿಕಿತ್ಸೆ ನೀಡಲು ಮುಂದಾದರು. ಈ ವೇಳೆ ಡಾ. ಮಜೀದ್ ಅಂಬ್ಯುಲೆನ್ಸ್‌ನಲ್ಲಿ ರೋಗಿಯನ್ನು ಮಲಗಿಸಿ ಆಕ್ಸಿಜನ್ ಅವಳಡಿಸಬೇಕಿತ್ತು. ಆದರೆ ರಾತ್ರಿ ಕತ್ತಲಾಗಿದ್ದ ಕಾರಣ ಸರಿಯಾಗಿ ಕಾಣುತ್ತಿರಲಿಲ್ಲ. ಅಲ್ಲದೇ ಫೇಸ್ ಶೀಲ್ಡ್‌ನಿಂದ ಸರಿಯಾಗಿ ಕಾಣುತ್ತಿರಲಿಲ್ಲ. ತಡ ಮಾಡಿದರೆ ರೋಗಿಗೆ ಅಪಾಯವಾಗುವ ಸಾಧ್ಯತೆ ಇತ್ತು. ಹೀಗಾಗಿ ಡಾ.ಮಜೀದ್ ತಕ್ಷಣ ತಾವು ಧರಿಸಿದ್ದ ಫೇಸ್ ಶೀಲ್ಡ್ ಆಕ್ಸಿಜನ್ ಅಳವಡಿಸಿದ್ದಾರೆ.

    ರೋಗಿಯನ್ನು ಸುರಕ್ಷಿತವಾಗಿ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾನು ಧರಿಸಿದ್ದ ಫೇಸ್ ಶೀಲ್ಡ್ ಚಿಕಿತ್ಸೆ ನೀಡಲು ಸರಿಯಾಗಿ ಕಾಣಿಸುತ್ತಿರಲಿಲ್ಲ. ಇತ್ತ ರೋಗಿಯ ಸ್ಥಿತಿ ಗಂಭೀರವಾಗಿತ್ತು. ಸ್ವಲ್ಪ ತಡ ಮಾಡಿದ್ದರೂ ರೋಗಿ ಸಾಯುವ ಸಾಧ್ಯತೆ ಇತ್ತು. ಹೀಗಾಗಿ ರೋಗಿಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಫೇಸ್ ಶೀಲ್ಡ್ ತೆಗೆದು ಚಿಕಿತ್ಸೆ ನೀಡಿದೆ ಎಂದು ಡಾ.ಮಜೀದ್ ಹೇಳಿದರು.

    ಹೀಗಾಗಿ ಡಾ.ಮಜೀದ್ ಅವರಿಗೆ ಕೊರೊನಾ ಹಬ್ಬಿರುವ ಶಂಕೆ ಮೇರೆಗೆ ಅವರನ್ನು 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿದೆ ಎಂದು ಏಮ್ಸ್ ಆಸ್ಪತ್ರೆಯ ಕಾರ್ಯದರ್ಶಿ ತಿಳಿಸಿದ್ದಾರೆ. ರೋಗಿಯ ಜೀವವನ್ನು ಉಳಿಸಿದ್ದಕ್ಕೆ ಡಾ. ಮಜೀದ್ ಅವರ ಧೈರ್ಯವನ್ನು ಏಮ್ಸ್ ವೈದ್ಯರ ತಂಡವು ಶ್ಲಾಘಿಸಿದೆ.

    ನನ್ನ ಕೊರೊನಾ ಪರೀಕ್ಷಾ ವರದಿಗಾಗಿ ನಾನು ಕಾಯುತ್ತಿದ್ದೇನೆ. ವರದಿಯಲ್ಲಿ ನೆಗೆಟಿವ್ ಬಂದರೆ ನಾನು ಮತ್ತೆ ಕೆಲಸಕ್ಕೆ ಸೇರುತ್ತೇನೆ. ಇಲ್ಲದಿದ್ದರೆ ನಾನು 14 ದಿನಗಳ ಕಾಲ ಕ್ವಾಂಟೈನ್‍ನಲ್ಲಿ ಇರುತ್ತೇನೆ ಎಂದು ವೈದ್ಯರು ಹೇಳಿದರು.

  • ಮಂಗಳೂರು ಪೊಲೀಸರಿಂದ ಪತ್ರಕರ್ತರಿಗೆ ಫೇಸ್‍ಶೀಲ್ಡ್ ವಿತರಣೆ

    ಮಂಗಳೂರು ಪೊಲೀಸರಿಂದ ಪತ್ರಕರ್ತರಿಗೆ ಫೇಸ್‍ಶೀಲ್ಡ್ ವಿತರಣೆ

    ಮಂಗಳೂರು: ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಫೀಲ್ಡ್ ನಲ್ಲಿರುವ ಪತ್ರಕರ್ತರಿಗೆ ಸೋಂಕು ತಗುಲುತ್ತಿರುವುದು ಆತಂಕವನ್ನು ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೋಲಿಸ್ ಕಮಿಷನರ್ ಡಾ.ಪಿ.ಎಸ್ ಹರ್ಷ ಅವರು ಪತ್ರಕರ್ತರ ಕಾಳಜಿ ಬಗ್ಗೆ ಗಮನ ಹರಿಸಿದ್ದಾರೆ.

    ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಕೊರೊನಾ ಸೋಂಕಿನಿಂದ ರಕ್ಷಣೆಗಾಗಿ ಫೇಸ್‍ಶೀಲ್ಡ್ ಅನ್ನು ವಿತರಿಸಿದ್ದಾರೆ. ಲಾಕ್‍ಡೌನ್ ನಡುವೆಯೂ ಪೊಲೀಸರು, ಪತ್ರಕರ್ತರು, ಆಶಾ ಕಾರ್ಯಕರ್ತೆಯರು, ಸಾಮಾಜಿಕ ಕಾರ್ಯಕರ್ತರು ಜನರ ನಡುವೆ ಇರುತ್ತಾರೆ. ಈ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಫೇಸ್‍ಶೀಲ್ಡ್ ಬಳಕೆ ಸೂಕ್ತ ಎಂಬುದು ಕಮಿಷನರ್ ಹರ್ಷಾ ಅವರ ಅಭಿಪ್ರಾಯವಾಗಿದೆ.

    ಹೀಗಾಗಿ ನಗರದ ಉರ್ವಾ ಸ್ಟೇಷನ್‍ನಲ್ಲಿ ಈ ಫೇಸ್‍ಶೀಲ್ಡ್ ಗಳನ್ನು ಪತ್ರಕರ್ತರಿಗೆ ವಿತರಿಸುವ ಕಾರ್ಯ ನಡೆಯಿತು. ಉರ್ವಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶರೀಫ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ನಗರದ ಎಲ್ಲಾ ಪತ್ರಕರ್ತರಿಗೂ ಫೇಸ್‍ಶೀಲ್ಡ್ ಗಳನ್ನು ಆಯುಕ್ತರ ಪರವಾಗಿ ವಿತರಿಸಿದರು.

  • ಕೊರೊನಾದಿಂದ ರಕ್ಷಣೆ – ಶಿಶುಗಳಿಗಾಗಿ ಸ್ಪೆಷಲ್ ಫೇಸ್ ಶೀಲ್ಡ್

    ಕೊರೊನಾದಿಂದ ರಕ್ಷಣೆ – ಶಿಶುಗಳಿಗಾಗಿ ಸ್ಪೆಷಲ್ ಫೇಸ್ ಶೀಲ್ಡ್

    ಬ್ಯಾಂಕಾಕ್: ಥೈಲ್ಯಾಂಡ್‍ನಲ್ಲಿ ಕೊರೊನಾ ವೈರಸ್‍ನಿಂದ ನವಜಾತ ಶಿಶುಗಳನ್ನು ರಕ್ಷಿಸಲು ಹೊಸ ಪ್ಲಾನ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಹುಟ್ಟಿದ ಶಿಶುಗಳಿಗೆ ಸ್ಪೆಷಲ್ ಫೇಸ್ ಶೀಲ್ಡ್ ಹಾಕುವ ಮೂಲಕ ಮಕ್ಕಳಿಗೆ ವೈರಸ್ ಹರಡುವುದನ್ನು ತಡೆಗಟ್ಟಲು ಆಸ್ಪತ್ರೆ ಸಿಬ್ಬಂದಿ ಮುಂದಾಗಿದ್ದಾರೆ.

    ಬ್ಯಾಂಕಾಕ್‍ನ ಪ್ರರಮ್ 9 ಆಸ್ಪತ್ರೆಯಲ್ಲಿ ಈ ಕ್ರಮವನ್ನು ಜಾರಿಗೆ ತರಲಾಗಿದೆ. ಹೀಗಾಗಿ ಆಸ್ಪತ್ರೆಯ ಹೆರಿಗೆ ವಾರ್ಡಿನಲ್ಲಿರುವ ಶಿಶುಗಳ ಮುಖಕ್ಕೆ ಶೀಲ್ಡ್ ಹಾಕಿ ಕೊರೊನಾ ಸೋಂಕು ತಗುಲದಂತೆ ನಿಗಾವಹಿಸಲಾಗಿದೆ.

    ಈವರೆಗೆ ಥೈಲ್ಯಾಂಡ್‍ನಲ್ಲಿ 2,473 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದೆ. ಅವರಲ್ಲಿ 33 ಮಂದಿ ಸಾವನ್ನಪ್ಪಿದ್ದು, 1,013 ಮಂದಿ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

    ಶುಕ್ರವಾರ ಒಂದೇ ದಿನ ಥೈಲ್ಯಾಂಡ್‍ನಲ್ಲಿ 50 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಈ 50 ಸೋಂಕಿತರಲ್ಲಿ 27 ಮಂದಿ ಹಳೆಯ ಸೋಂಕಿತ ರೋಗಿಗಳ ಸಂಪರ್ಕದಲ್ಲಿ ಇದ್ದವರಾಗಿದ್ದು, 8 ಮಂದಿಗೆ ಸೋಂಕು ಹೇಗೆ ತಗುಲಿತು ಎಂಬ ಮಾಹಿತಿ ಇರದ ಹಿನ್ನೆಲೆ ತನಿಖೆ ನಡೆಸಲಾಗುತ್ತಿದೆ.

    ವಿಶ್ವಾದ್ಯಂತ ಬರೋಬ್ಬರಿ 17,00,951 ಮಂದಿಗೆ ಕೊರೊನಾ ತಗುಲಿದ್ದು, ಈವರೆಗೆ 1,02,789 ಮಂದಿ ಸಾವನ್ನಪ್ಪಿದ್ದಾರೆ, ಅಲ್ಲದೆ 3,76,796 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.