Tag: eye

  • ಸ್ಟಂಟ್ ಮಾಡಲು ಹೋಗಿ ಶಾಶ್ವತವಾಗಿ ಕಣ್ಣಿಗೆ ಗಾಯಮಾಡಿಕೊಂಡ ಜಾಕ್ವೇಲಿನ್!

    ಸ್ಟಂಟ್ ಮಾಡಲು ಹೋಗಿ ಶಾಶ್ವತವಾಗಿ ಕಣ್ಣಿಗೆ ಗಾಯಮಾಡಿಕೊಂಡ ಜಾಕ್ವೇಲಿನ್!

    ಮುಂಬೈ: ಬಾಲಿವುಡ್ ಬೆಡಗಿ ಜಾಕ್ವೇಲಿನ್ ಫರ್ನಾಂಡಿಸ್ ರೇಸ್- 3 ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈಗ ತಮ್ಮ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದಾರೆ.

    ಜಾಕ್ವೇಲಿನ್ ರೇಸ್-3 ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಅವರು ಸಾಕಷ್ಟು ಆ್ಯಕ್ಷನ್ ಸ್ಟಂಟ್ ಮಾಡಿದ್ದಾರೆ. ಹೀಗೆ ಮಾರ್ಚ್ ತಿಂಗಳಲ್ಲಿ ಜಾಕ್ವೇಲಿನ್ ಚಿತ್ರಕ್ಕಾಗಿ ಸಾಹಸ ದೃಶ್ಯ ಮಾಡುವಾಗ ತಮ್ಮ ಕಣ್ಣಿಗೆ ಗಾಯ ಮಾಡಿಕೊಂಡಿದ್ದರು. ಆದರೆ ಈ ಗಾಯ ಈಗ ಶಾಶ್ವತವಾಗಿರುತ್ತದೆ ಎಂದು ಹೇಳುವ ಮೂಲಕ ಜಾಕ್ವೇಲಿನ್ ತಮ್ಮ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದಾರೆ.

    ಜಾಕ್ವೇಲಿನ್ ತಮ್ಮ ಕಣ್ಣಿನ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ “ಈ ಗಾಯ ಈಗ ಶಾಶ್ವತವಾಗಿ ಇರುತ್ತದೆ. ನನ್ನ ಐರಿಸ್ ಎಂದಿಗೂ ವೃತ್ತಾಕಾರ ಆಗುವುದಿಲ್ಲ. ಆದರೆ ನನಗೆ ಸರಿಯಾಗಿ ಕಣ್ಣು ಕಾಣಿಸುತ್ತಿರುವುದು ಸಂತೋಷವಾಗಿದೆ. ಇದು ರೇಸ್-3 ಚಿತ್ರದ ನೆನಪು” ಎಂದು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.

    ರೇಸ್-3 ಚಿತ್ರ ಅಬುಧಾಬಿಯಲ್ಲಿ ಚಿತ್ರೀಕರಿಸುವಾಗ ಜಾಕ್ವೇಲಿನ್ ಸ್ಕ್ವಾಶ್ ಆಡುತ್ತಿದ್ದರು. ಆ ವೇಳೆ ತಮ್ಮ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದರು. ಆಗ ತಕ್ಷಣ ಜಾಕ್ವೇಲಿನ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ನೀಡಿದ್ದರು.

    ಜಾಕ್ವೇಲಿನ್ ಅವರ ಕಣ್ಣಿಗೆ ಗಾಯವಾಗಿದೆ. ಇದು ಒಂದು ಸಾಮಾನ್ಯವಾದ ಗಾಯ. ಸ್ಕ್ವಾಶ್ ಆಡುವಾಗ ಜಾಕ್ವೇಲಿನ್ ಕಣ್ಣಿನ ಮೇಲ್ಭಾಗಕ್ಕೆ ಪೆಟ್ಟು ಮಾಡಿಕೊಂಡಿದ್ದಾರೆ. ಈಗ ಜಾಕ್ವೇಲಿನ್ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ರೇಸ್-3 ಚಿತ್ರದ ನಿರ್ಮಾಪಕ ರಮೇಶ್ ತೌರಾಣಿ ಹೇಳಿದ್ದರು.

    ರೇಸ್-3 ಚಿತ್ರದಲ್ಲಿ ಸಲ್ಮಾನ್ ಖಾನ್, ಬಾಬಿ ಡಿಯೋಲ್, ಅನಿಲ್ ಕಪೂರ್, ಡೈಸಿ ಷಾ ಹಾಗೂ ಸಾಕಿಬ್ ಸಲೀಮ್ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಜೂನ್ 15ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

  • ಕಣ್ಣಿಗೆ ರಾಸಾಯನಿಕ ಎರಚಿ 20 ಲಕ್ಷ ರೂ., ಕಾರು ದರೋಡೆ- ಧರ್ಮದರ್ಶಿ ಆಸ್ಪತ್ರೆಗೆ ದಾಖಲು

    ಕಣ್ಣಿಗೆ ರಾಸಾಯನಿಕ ಎರಚಿ 20 ಲಕ್ಷ ರೂ., ಕಾರು ದರೋಡೆ- ಧರ್ಮದರ್ಶಿ ಆಸ್ಪತ್ರೆಗೆ ದಾಖಲು

    ತುಮಕೂರು: ಶನಿಮಹಾತ್ಮ ದೇವಾಲಯದ ಧರ್ಮದರ್ಶಿ ಧನಂಜಯ್ಯ ಸ್ವಾಮೀಜಿ ಕಣ್ಣಿಗೆ ರಾಸಾಯನಿಕ ಎರಚಿ ದರೋಡೆ ಮಾಡಿದ ಘಟನೆ ಶನಿವಾರ ರಾತ್ರಿ ನಡೆದಿದೆ.

    ಈ ಘಟನೆ ತುಮಕೂರು ಜಿಲ್ಲೆಯ ತುಮಕೂರಿನ ಕುಣಿಗಲ್ ತಾಲೂಕಿನ ಬಿದನಗೆರೆಯಲ್ಲಿ ನಡೆದಿದೆ. ದೇವಾಲಯದ ಧರ್ಮದರ್ಶಿ ಧನಂಜಯ್ಯ ಸ್ವಾಮೀಜಿ ಪೂಜೆ ಮುಗಿಸಿ ವಾಪಸ್ ಆಗುತ್ತಿದ್ರು. ಈ ವೇಳೆ ಭಕ್ತರ ಸೋಗಿನಲ್ಲಿ ಬಂದ 6 ಮಂದಿ ದರೋಡೆಕೋರರು ಕಣ್ಣಿಗೆ ಕೆಮಿಕಲ್ ಸ್ಪ್ರೇ ಮಾಡಿ, 20 ಲಕ್ಷ ನಗದು ಮತ್ತು ಎಸ್‍ಯುವಿ ಕಾರ್ ದರೋಡೆ ಮಾಡಿದ್ದಾರೆ.

    ಧನಂಜಯ್ಯ ಸ್ವಾಮಿಜಿ ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ದೃಷ್ಟಿ ಕಳೆದುಕೊಂಡ ಬಾಲಕ ಪ್ರಕರಣ- ಸ್ಕೇಲ್ ನಿಂದ ಹೊಡೆದ ಮುಖ್ಯ ಶಿಕ್ಷಕ ಅಮಾನತು

    ದೃಷ್ಟಿ ಕಳೆದುಕೊಂಡ ಬಾಲಕ ಪ್ರಕರಣ- ಸ್ಕೇಲ್ ನಿಂದ ಹೊಡೆದ ಮುಖ್ಯ ಶಿಕ್ಷಕ ಅಮಾನತು

    ಚಾಮರಾಜನಗರ: ಮುಖ್ಯ ಶಿಕ್ಷಕ ವಿದ್ಯಾರ್ಥಿಗೆ ಸ್ಕೇಲ್‍ನಿಂದ ಹೊಡೆದ ಪರಿಣಾಮ ವಿದ್ಯಾರ್ಥಿ ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕನ್ನು ಅಮಾನತು ಮಾಡಿರುವ ಘಟನೆ ಚಾಮರಾಜನಗರದಲ್ಲಿ ಜರುಗಿದೆ.

    ಚಾಮರಾಜನಗರದ ರಾಮಸಮುದ್ರದ ಬಾಲರ ಪಟ್ಟಣ ಶಾಲೆಯ ಮುಖ್ಯ ಶಿಕ್ಷಕ ಯುಸೇಫ್, ಗಿರಿಮಲ್ಲೇಶ್ ಎಂಬ ವಿದ್ಯಾರ್ಥಿಗೆ ಸ್ಕೇಲ್‍ನಿಂದ ಹೊಡೆದಿರುವ ಪ್ರಕರಣ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಶಾಲೆಯ ಆಡಳಿತ ಮಂಡಳಿ ಮುಖ್ಯಶಿಕ್ಷಕನನ್ನು ಅಮಾನತು ಮಾಡಿದೆ. ಸ್ಕೇಲ್ ನಿಂದ ಹೊಡೆದ ಪರಿಣಾಮ ವಿದ್ಯಾರ್ಥಿ ಎಡಗಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ.

    ಏನಿದು ಘಟನೆ?;
    ಜನವರಿಯಲ್ಲಿ ಶಾಲೆಯ ಸಮಯದಲ್ಲಿ ಗಿರಿಮಲ್ಲೇಶ್ ಗಲಾಟೆ ಮಾಡುತ್ತಿದ್ದ ಎಂದು ಶಿಕ್ಷಕ ಸ್ಕೇಲ್ ಮೂಲಕ ಹೊಡೆದಿದ್ದಾನೆ. ಈ ವೇಳೆ ವಿದ್ಯಾರ್ಥಿ ಕಣ್ಣಿಗೆ ಸ್ಕೇಲ್ ಬಿದ್ದ ಕಾರಣ ವಿದ್ಯಾರ್ಥಿಯ ಕಣ್ಣಿಗೆ ಪೆಟ್ಟು ಬಿದ್ದಿದೆ. ಇದಾದ ನಂತರ ವಿದ್ಯಾರ್ಥಿ ತನಗೆ ಯಾವುದೇ ನೋವಾಗಿಲ್ಲ ಎಂದು ತಿಳಿದುಕೊಂಡಿದ್ದಾನೆ. ಇದೀಗ ವಿದ್ಯಾರ್ಥಿಗೆ ಕಣ್ಣಿನ ನೋವು ಕಾಡುತ್ತಿದ್ದ ಕಾರಣ ತಂದೆ ಸೋಮೇಶ್ ಮೈಸೂರಿನ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿದ್ದಾರೆ. ಈ ವೇಳೆ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ. ಹೀಗಾಗಿ ಈತನ ದೃಷ್ಟಿ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ನಂತರ ಗಿರಿಮಲ್ಲೇಶ್‍ನನ್ನು ಪೋಷಕರು ವಿಚಾರಿಸಿದಾಗ ಐದು ತಿಂಗಳ ಹಿಂದೆ ಶಾಲೆಯಲ್ಲಿ ಹೀಗೆ ಆಗಿದೆ ಎಂದು ಹೇಳಿದ್ದಾನೆ. ಈ ಬಗ್ಗೆ ಗಿರಿಮಲ್ಲೇಶ್ ಪೋಷಕರು ಶಾಲೆಯ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಇದ್ದನ್ನು ಒಪ್ಪಿಕೊಳ್ಳದ ಶಾಲಾ ಆಡಳಿತ ಮಂಡಳಿ ಮುಖ್ಯ ಶಿಕ್ಷಕ ಯುಸೇಫ್‍ರನ್ನು 10 ದಿನಗಳ ರಜೆ ಮೇಲೆ ಕಳುಹಿಸಿತ್ತು. ಆದರೆ ಇದೀಗ ಪ್ರಕರಣ ವ್ಯಾಪಕ ಚರ್ಚೆ ಆದ ಕಾರಣ ಶಾಲೆಯ ಆಡಳಿತ ಮಂಡಳಿ ಯುಸೇಫ್ ನನ್ನು ಅಮಾನತುಗೊಳಿಸಿದೆ. ಸದ್ಯ ಗಿರಿಮಲ್ಲೇಶ್ ತಮಿಳುನಾಡಿನ ಕೊಯಮತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

  • ಬ್ಯಾಟಿನಿಂದ ಹೊಡೆದ ಕಲ್ಲು ಓದುತ್ತ ಕುಳಿತಿದ್ದ ವಿದ್ಯಾರ್ಥಿಗೆ ತಾಗಿ ದೃಷ್ಟಿ ಹೋಯ್ತು!

    ಬ್ಯಾಟಿನಿಂದ ಹೊಡೆದ ಕಲ್ಲು ಓದುತ್ತ ಕುಳಿತಿದ್ದ ವಿದ್ಯಾರ್ಥಿಗೆ ತಾಗಿ ದೃಷ್ಟಿ ಹೋಯ್ತು!

    ಮಂಡ್ಯ: ಸಹಪಾಠಿಗಳು ಆಟವಾಡುತ್ತ ಬ್ಯಾಟಿನಿಂದ ಹೊಡೆದ ಕಲ್ಲು ಕಣ್ಣಿಗೆ ತಾಗಿ ವಿದ್ಯಾರ್ಥಿ ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ಮದ್ದೂರು ತಾಲೂಕಿನ ಭಾರತೀನಗರದಲ್ಲಿರುವ ಡಾಕ್ಟರ್ ಬಿಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪವನ್‍ಕುಮಾರ್ ಕಣ್ಣು ಕಳೆದುಕೊಂಡ ವಿದ್ಯಾರ್ಥಿ. ವಸತಿ ನಿಲಯದ ಆವರಣದಲ್ಲಿ ಪವನ್ ಕುಮಾರ್ ಓದಿಕೊಳ್ಳುತ್ತಿದ್ದ. ಈ ವೇಳೆ ಪವನ್ ಕುಮಾರ್ ಸಹಪಾಠಿಗಳು ಆಟವಾಡಿ ಬ್ಯಾಟ್‍ನಿಂದ ಕಲ್ಲನ್ನು ಜೋರಾಗಿ ಹೊಡೆದಿದ್ದಾರೆ. ಇದರಿಂದ ವೇಗವಾಗಿ ಬಂದ ಕಲ್ಲು ಪವನ್ ಕುಮಾರ್ ಎಡಗಣ್ಣಿಗೆ ಬಡಿದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ.

    ಮಕ್ಕಳು ಕಲ್ಲನ್ನು ಬಾಲ್‍ನಂತೆ ಬಳಸಿ ಕ್ರಿಕೆಟ್ ಆಡುತ್ತಿದ್ದರು. ವಸತಿ ಶಾಲೆಯ ಶಿಕ್ಷಕರ ಬೇಜವಾಬ್ದಾರಿಯಿಂದಾಗಿ ನಮ್ಮ ಮಗ ಕಣ್ಣು ಕಳೆದುಕೊಂಡಿದ್ದಾನೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

    ಈ ಬಗ್ಗೆ ತನಿಖೆ ನಡೆಸಿ ನಿರ್ಲಕ್ಷ್ಯ ವಹಿಸಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮ ಮಗನ ಭವಿಷ್ಯಕ್ಕೆ ಅನುಕೂಲವಾಗುವಂತೆ ಪರಿಹಾರ ನೀಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮೇಘನಾ ಪೋಷಕರು

    ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮೇಘನಾ ಪೋಷಕರು

    ಬೆಂಗಳೂರು: ರ‍್ಯಾಗಿಂಗ್ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಮೇಘನಾಳ ಕಣ್ಣನ್ನು ಪೋಷಕರು ದಾನ ಮಾಡಿದ್ದಾರೆ.

    ಕುಮಾರಸ್ವಾಮಿ ಲೇಔಟ್‍ನ ದಯಾನಂದಸಾಗರ ಕಾಲೇಜಿನಲ್ಲಿ 2ನೇ ಸೆಮಿಸ್ಟರ್ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದ ಮೇಘನಾ(18) ರಾಜರಾಜೇಶ್ವರಿ ನಗರದ ಚನ್ನಸಂದ್ರದ ಶಬರಿ ಅಪಾರ್ಟ್ ಮೆಂಟ್ ನಲ್ಲಿ ಇಂದು ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು.

    ಮೇಘನಾ ತಂದೆ ಚಂದ್ರಶೇಖರ್ ಅಂಧರಾಗಿದ್ದು, ಅವರ ಪತ್ನಿ ಲತಾ ಪತಿಯನ್ನ ಕೆಲಸಕ್ಕೆ ಬಿಡಲು ಹೋಗಿದ್ದ ವೇಳೆ ಮೇಘನಾ ಆತ್ಮಹತ್ಯೆಗೆ ಶರಣಾಗಿದ್ದಳು. ಈ ವೇಳೆ ಮೇಘನಾ ಪೋಷಕರು ಮೇಘನಾ ಕಣ್ಣನ್ನು ದಾನ ಮಾಡಿ, ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಆರ್‍ಆರ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    ಮೇಘನಾ ಕ್ಲಾಸ್ ರೆಪ್ರೆಸೆಂಟೇಟಿವ್ ಎಲೆಕ್ಷನ್‍ನಲ್ಲಿ ಸೋತಿದ್ದ ಹಿನ್ನೆಲೆ ತರಗತಿಯಲ್ಲಿ ಬೇರೆ ವಿದ್ಯಾರ್ಥಿಗಳು ರ‍್ಯಾಗ್ ಮಾಡುತ್ತಿದ್ದರು. ನೀನು ಬ್ಯಾಡ್ ಗರ್ಲ್ ಎಂದು ಪದೇ-ಪದೇ ಹೇಳುತ್ತಿದ್ದರಂತೆ. ಅದಕ್ಕೆ ಮನನೊಂದ ಮೇಘನಾ ರಾಜರಾಜೇಶ್ವರಿ ನಗರದ ಚನ್ನಸಂದ್ರದ ಶಬರಿ ಅಪಾರ್ಟ್ ಮೆಂಟ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ರೇಗಿಸುತ್ತಿದ್ದ ವಿದ್ಯಾರ್ಥಿಗಳಿಗೆ ಹೆಚ್‍ಒಡಿ ರಾಜಕುಮಾರ ಬೆಂಬಲ ನೀಡುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.

  • ಸ್ಪಷ್ಟವಾಗಿ ಕಣ್ಣು ಕಾಣಿಸ್ತಿಲ್ಲ ಎಂದ ರೋಗಿಗೆ ಆಪರೇಶನ್ ಮಾಡಿ ಕಣ್ಣೆ ಕಾಣದಂತೆ ಮಾಡಿದ ವೈದ್ಯ

    ಸ್ಪಷ್ಟವಾಗಿ ಕಣ್ಣು ಕಾಣಿಸ್ತಿಲ್ಲ ಎಂದ ರೋಗಿಗೆ ಆಪರೇಶನ್ ಮಾಡಿ ಕಣ್ಣೆ ಕಾಣದಂತೆ ಮಾಡಿದ ವೈದ್ಯ

    ವಿಜಯಪುರ: ವೈದ್ಯೋ ನಾರಾಯಣೋ ಹರಿ ಎಂದು ಹೇಳುತ್ತಾರೆ. ಆದರೆ ಕೆಲ ವೈದ್ಯರು ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದೆ ಹಣವನ್ನ ಮಾತ್ರ ದೋಚಿ ನಂತರ ರೋಗಿಗಳು ಪರದಾಡುವಂತೆ ಮಾಡುತ್ತಾರೆ. ಅದೇ ರೀತಿ ವಿಜಯಪುರದಲ್ಲಿ ಕಣ್ಣನ್ನು ತೋರಿಸಲು ಬಂದ ರೋಗಿಯ ಕಣ್ಣೆ ಕಾಣದಂತೆ ವೈದ್ಯ ಯಡವಟ್ಟು ಮಾಡಿದ್ದಾನೆ.

    ವಿಜಯಪುರದ ವಜ್ರ ಹನುಮನ ಬಡಾವಣೆಯ ನಿವಾಸಿಯಾದ ವೃದ್ಧ ರಂಗಪ್ಪ ಕೆಂಗಾರ್ ನಗರದ ವೈದ್ಯ ಕಣ್ಣು ತಜ್ಞ ಆನಂದ ಕಣಬೂರ ಹತ್ತಿರ ಕಣ್ಣು ಸರಿಯಾಗಿ ಕಾಣುತ್ತಿಲ್ಲವೆಂದು ಹೇಳಿದ್ದಾನೆ. ಆಗ ವೈದ್ಯ ಆನಂದ ರಂಗಪ್ಪಗೆ ಕಣ್ಣನಿಲ್ಲಿ ಪೊರೆ ಬಂದಿದೆ ಆಪರೇಷನ್ ಮಾಡಬೇಕೆಂದು ಹೇಳಿ ಆಪರೇಷನ್ ಮಾಡಿದ್ದಾನೆ. ಆದರೆ ಅದ್ಯಾಕೋ ಗೊತ್ತಿಲ್ಲ ಆಪರೇಷನ್ ಆದ ನಂತರ ರಂಗಪ್ಪ ಅವರ ಕಣ್ಣು ಕಾಣಿಸುತ್ತಿಲ್ಲ. ಇದರಿಂದ ಆಕ್ರೋಶಗೊಂಡ ರಂಗಪ್ಪರ ಮಗ ಪ್ರಭು ವೈದ್ಯ ಆನಂದ ರನ್ನು ತರಾಟೆಗೆ ತಗೆದುಕೊಂಡಿದ್ದಾರೆ.

    ತನ್ನ ತಪ್ಪನ್ನು ವೈದ್ಯ ಆನಂದ್ ಒಪ್ಪಿಕೊಂಡು ಮಾಧ್ಯಮಗಳಿಗೆ ಹೋಗದಂತೆ ಅಂಗಲಾಚಿದ್ದಾರೆ. ಆದರೆ ರಂಗಪ್ಪ ಮತ್ತೆ ಕುಟುಂಬಸ್ಥರು ನಿಮಗೆಷ್ಟು ಹಣ ಬೇಕು ಕೇಳಿ ಕೊಡುತ್ತೇವೆ ಆದರೆ ನನ್ನ ಕಣ್ಣು ಮರುಕಳಿಸಿ ಎಂದು ಅಂಗಲಾಚುತ್ತಿದ್ದಾರೆ. ಇನ್ನು ಗಾಂಧಿಚೌಕ ಠಾಣೆಯಲ್ಲಿ ಹಾಗೂ ಜಿಲ್ಲಾ ಆರೋಗ್ಯ ಕೇಂದ್ರ ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲು ರಂಗಪ್ಪರ ಕುಟುಂಬ ಮುಂದಾಗಿದೆ.

    ರಂಗಪ್ಪರನ್ನು ಕೇಳಿದರೆ ಕಣಬೂರ ಡಾಕ್ಟರ್ ನನ್ನ ಕಣ್ಣು ತೆಗೆದು ಕಾಣದಂತಹ ಬೇರೊಂದು ಕಣ್ಣು ಹಾಕಿದ್ದಾನೆ. ಗಂಡ ಮಾಡಿರುವ ತಪ್ಪುಗಳಿಗೆ ಪತ್ನಿಯ ಸಹಕಾರ ಕೂಡಾ ಇದೆ. ಇಂತಹ ಘಟನೆಗಳು ನಡೆದಾಗ ಡಾಕ್ಟರ್ ಪತ್ನಿ ಲಕ್ಷ್ಮಿ ಅವರ ಕುಟುಂಬಗಳಿಗೆ ಕಾಲ್ ಮಾಡಿ ವ್ಯವಹಾರ ಸೆಟಲ್‍ಮೆಂಟ್ ಮಾಡುತ್ತಾಳೆ ಎಂದು ರಂಗಪ್ಪ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

  • ಹೆತ್ತವರ ಮೇಲಿನ ದ್ವೇಷ ತೀರಿಸಿಕೊಳ್ಳಲು 4ರ ಬಾಲಕಿಗೆ ಕಬ್ಬಿಣ ರಾಡ್ ನಿಂದ ಹಲ್ಲೆಗೈದ!

    ಹೆತ್ತವರ ಮೇಲಿನ ದ್ವೇಷ ತೀರಿಸಿಕೊಳ್ಳಲು 4ರ ಬಾಲಕಿಗೆ ಕಬ್ಬಿಣ ರಾಡ್ ನಿಂದ ಹಲ್ಲೆಗೈದ!

    ಮುಂಬೈ: ತನ್ನದಲ್ಲದ ತಪ್ಪಿಗೆ 4 ವರ್ಷದ ಬಾಲಕಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರೋ ಅಮಾನವೀಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಘಟನೆಗೆ ಸಂಬಂಧಿಸಿದಂತೆ 19 ವರ್ಷದ ರಹೀಮ್ ಶೌಕರ್ ಅಲಿ ಶೇಕ್ ಎಂಬಾತನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಈತ ಭಯಾಂಡರ್ ಪೂರ್ವದ ಆಜಾದ್ ನಗರದ ನಿವಾಸಿ ಅಂತ ಪೊಲೀಸರು ತಿಳಿಸಿದ್ದಾರೆ.

    ಏನಿದು ಘಟನೆ?: ಹೆತ್ತವರ ಮೇಲಿನ ದ್ವೇಷವನ್ನು ತೀರಿಸಿಕೊಳ್ಳಲು ಅವರ 4 ವರ್ಷದ ಬಾಲಕಿಯ ತಲೆಗೆ ಆರೋಪಿ ಕಬ್ಬಿಣದ ರಾಡ್ ನಿಂದ ಹೊಡೆದು ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಮನೆಯ ಪಕ್ಕದಲ್ಲಿರೋ ಕಸದ ರಾಶಿಯ ಬಳಿ ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಹೆತ್ತವರು ಗಮನಿಸಿದ್ದಾರೆ. ಬಳಿಕ ಅವರು ಆಕೆಯನ್ನು ಕೂಡಲೇ ಸ್ಥಳಿಯ ಕಸ್ತೂರಿ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಬಾಲಕಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾಳೆ.

    ಹಲ್ಲೆಗೆ ಕಾರಣವೇನು?: ಆರೋಪಿ ಬಾಲಕಿಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದನು. ಹೀಗಾಗಿ ಹೆತ್ತವರು ಆತನ ಜೊತೆ ಸಲುಗೆಯಿಂದ ವರ್ತಿಸದಂತೆ ಎಚ್ಚರಿಕೆ ನೀಡಿದ್ದರು. ಈ ವಿಚಾರ ಆರೋಪಿಗೆ ತಿಳಿದು ಹೆತ್ತವರ ಮೇಲಿನ ಸಿಟ್ಟಿಗೆ ಬಾಲಕಿಯ ಮೇಲೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

    ಆರೋಪಿ ಕಬ್ಬಿಣದ ರಾಡ್ ನಿಂದ ಬಾಲಕಿಯ ತಲೆಗೆ ಹೊಡೆದಿದ್ದರಿಂದ ಆಕೆ ಗಂಭೀರ ಗಾಯಗೊಂಡಿದ್ದಾಳೆ. ಅಲ್ಲದೇ ಆಕೆಯ ಮುಖ ಹಾಗೂ ಕಣ್ಣುಗಳಿಗೂ ಗಂಭೀರ ಗಾಯಗಳಾಗಿವೆ. ಹೀಗಾಗಿ ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಅಂತ ವೈದ್ಯ ರಾಜೀವ್ ಅಗರ್ ವಾಲ್ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 307(ಹತ್ಯೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಡಿಸೆಂಬರ್ 18ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.

     

  • ಸತತ 24 ಗಂಟೆ ವಿಡಿಯೋ ಗೇಮ್ ಆಡಿ ಕಣ್ಣು ಕಳೆದುಕೊಂಡ ಯುವತಿ

    ಸತತ 24 ಗಂಟೆ ವಿಡಿಯೋ ಗೇಮ್ ಆಡಿ ಕಣ್ಣು ಕಳೆದುಕೊಂಡ ಯುವತಿ

    ಬೀಜಿಂಗ್: 21 ವರ್ಷದ ಯುವತಿಯೊಬ್ಬಳು ಸತತ 24 ಗಂಟೆ ವಿಡಿಯೋ ಗೇಮ್ ಆಡಿ ಒಂದು ಕಣ್ಣು ಕಳೆದುಕೊಂಡಿರುವ ಘಟನೆ ಭಾನುವಾರದಂದು ಚೀನಾದಲ್ಲಿ ನಡೆದಿದೆ.

    ಇಲ್ಲಿನ ಗಾಂಗ್‍ಡಾಂಗ್ ಪ್ರಾಂತ್ಯದ ಡಾಂಗ್ಯೂನ್ ನಲ್ಲಿರುವ ತನ್ನ ಮನೆಯಲ್ಲಿ ಯುವತಿ ಇಡೀ ದಿನ ಹಾನರ್ ಆಫ್ ಕಿಂಗ್ಸ್ ಎಂಬ ವಿಡಿಯೋ ಗೇಮ್ ಆಡಿ ತನ್ನ ಬಲಗಣ್ಣು ಕಳೆದುಕೊಂಡಿದ್ದಾಳೆ. ನಾನ್‍ಚಾಂಗ್‍ನ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆಯನ್ನು ನೀಡಲು ಕರೆದುಕೊಂಡು ಹೋಗಿದ್ದು, ಆಕೆಗೆ ರೆಟಿನಲ್ ಆರ್ಟರಿ ಅಕ್ಲೂಷನ್ ಸಮಸ್ಯೆ ಉಂಟಾಗಿದೆ ಎಂದು ಬುಧವಾರದಂದು ವೈದ್ಯರು ಹೇಳಿದ್ದಾರೆ. ಇದಕ್ಕೂ ಮೊದಲು ನಗರದ ಹಲವಾರು ಆಸ್ಪತ್ರೆಯಲ್ಲಿ ಯುವತಿಯನ್ನು ಚಿಕಿತ್ಸೆ ಕೊಡಿಸಲು ಕರೆದೂಯ್ಯಲಾಗಿತ್ತು. ಆದರೆ ಆಕೆಗೆ ಉಂಟಾಗಿದ್ದ ಸಮಸ್ಯೆ ಬಗ್ಗೆ ಎಲ್ಲೂ ತಿಳಿದುಬಂದಿರಲಿಲ್ಲ.

    ರೆಟಿನಲ್ ಆರ್ಟರಿ ಅಕ್ಲೂಷನ್ ಸಾಮಾನ್ಯವಾಗಿ ಹಿರಿಯರಿಗೆ ಬರುತ್ತೆ. ಯುವಕರಲ್ಲಿ ಈ ಸಮಸ್ಯೆ ಕಾಣುವುದು ತುಂಬಾನೇ ಅಪರೂಪ. ಕಣ್ಣಿಗೆ ಸಾಕಷ್ಟು ಒತ್ತಡ ಬಿದಿದ್ದರಿಂದ ಯುವತಿ ತನ್ನ ಕಣ್ಣು ಕಳೆದುಕೊಂಡಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

    ಗೇಮ್‍ಗೆ ಅಡಿಕ್ಟ್ ಆಗಿದ್ದೆ: ಕಣ್ಣು ಕಳೆದುಕೊಂಡಿದ್ದಕ್ಕೆ ಏನು ಕಾರಣ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ, ಬಿಡುವಿಲ್ಲದೆ ಒಂದೇ ಸಮನೆ ಗೇಮ್ ಆಡುತ್ತಿದ್ದೆ. ಹಾಗಾಗಿ ನಾನು ನನ್ನ ಕಣ್ಣು ಕಳೆದುಕೊಂಡಿದ್ದೇನೆ ಎಂದು ಯುವತಿ ಉತ್ತರಿಸಿದ್ದಾಳೆ.

    ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರೋ ಯುವತಿ, ಗೇಮ್‍ಗೆ ತುಂಬಾ ಅಡಿಕ್ಟ್ ಆಗಿದ್ದು, ಕೆಲಸದಿಂದ ಬಂದ ಕೂಡಲೇ ಮತ್ತು ವೀಕೆಂಡ್‍ಗಳಲ್ಲಿ ಇಡೀ ದಿನ ವಿಡಿಯೋ ಗೇಮ್ ಆಡುತ್ತಿದ್ದೆ ಎಂದು ಹೇಳಿದ್ದಾಳೆ. ನನಗೆ ಕೆಲಸ ಇಲ್ಲದ ಸಮಯದಲ್ಲಿ ಬೆಳಗ್ಗೆ 6 ಗಂಟೆಗೆ ಎದ್ದು ತಿಂಡಿ ತಿಂದು ಸಂಜೆ 4 ಗಂಟೆ ತನಕ ಆಡುತ್ತಿದ್ದೆ. ನಂತರ ಸ್ಯ್ನಾಕ್ಸ್ ತಿಂದು ಮತ್ತೆ ರಾತ್ರಿ 1 ಗಂಟೆ ತನಕ ಆಡುತ್ತಿದ್ದೆ. ಕೆಲವು ಬಾರಿ ಗೇಮ್ ನಲ್ಲಿ ಮುಳುಗಿ ಊಟ ಮಾಡುವುದನ್ನೂ ಮರೆತು ಹೋಗುತ್ತಿದ್ದೆ. ನನ್ನನ್ನು ರಾತ್ರಿ ಊಟಕ್ಕೆ ಕರೆದರೂ ಕಿವಿಗೊಡುತ್ತಿರಲಿಲ್ಲ. ಕೆಲವೊಮ್ಮೆ ಸತತ 7-8 ಗಂಟೆ ತನಕ ಸೋಫಾದಿಂದ ಮೇಲೇಳದೆ ಗೇಮ್ ಆಡುತ್ತಿದ್ದೆ ಎಂದು ಯುವತಿ ಹೇಳಿದ್ದಾಳೆ.

    ನನ್ನ ಪೋಷಕರು ಗೇಮ್ ಆಡುವುದನ್ನು ಕಡಿಮೆ ಮಾಡು ಎಂದು ಹೇಳುತ್ತಿದ್ದರು. ಆದರೆ ನಾನು ಅವರ ಮತನ್ನು ಕಡೆಗಣಿಸುತ್ತಿದ್ದೆ ಎಂದು ಯುವತಿ ಪಶ್ಚಾತ್ತಾಪ ಪಟ್ಟಿದ್ದಾಳೆ. ಯುವತಿ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲೇ ಇದ್ದು, ವೈದ್ಯರು ಯುವತಿಯ ಕಣ್ಣು ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯೊಂದರಿಂದ ತಿಳಿದುಬಂದಿದೆ.

    ಯಾಕೆ ಈ ಗೇಮ್ ಇಷ್ಟೊಂದು ಫೇಮಸ್?: ಹಾನರ್ ಆಫ್ ಕಿಂಗ್ಸ್ ಒಂದು ಐತಿಹಾಸಿಕ ಯುದ್ಧದ ಗೇಮ್ ಆಗಿದ್ದು, ಚೀನಾದ ಇಂಟರ್‍ನೆಟ್ ಜೇಂಟ್ ಟೆನ್ಸೆಂಟ್ ಮಾಲೀಕತ್ವದಲ್ಲಿದೆ. ಚೀನಾದ ಮೇನ್‍ಲ್ಯಾಡ್‍ವೊಂದರಲ್ಲೇ 20 ಕೋಟಿಯಷ್ಟು ರೆಜಿಸ್ಟರ್ಡ್ ಆಟಗಾರರಿದ್ದಾರೆ. ಈ ಗೇಮ್ ತುಂಬಾ ಅಡಿಕ್ಟೀವ್ ಆಗಿರೋದ್ರಿಂದ ಇದನ್ನ ವಿಷ ಎಂದು ಇಲ್ಲಿನ ಪತ್ರಿಕೆಗಳು ಟೀಕಿಸಿದ್ದವು. ಈ ಗೇಮ್‍ಗೆ ಸೈನಿಕರು ಕೂಡ ಅಡಿಕ್ಟ್ ಆಗುತ್ತಿದ್ದಾರೆ. ಇದರಿಂದ ಅವರ ಹೋರಾಟ ಸಾಮಥ್ರ್ಯ ಕ್ಷೀಣಿಸೋ ಸಾಧ್ಯತೆಯಿದೆ ಎಂದು ಇಲ್ಲಿನ ಸೇನಾ ಮುಖವಾಣಿ ಪಿಎಲ್‍ಎ ಡೈಲಿ ಎಚ್ಚರಿಕೆ ನೀಡಿತ್ತು.

    ಜುಲೈ ತಿಂಗಳಲ್ಲಿ ಟೆನ್ಸೆಟ್ ಈ ಗೇಮ್‍ಗೆ ಕೆಲವು ನಿರ್ಬಂಧಗಳನ್ನ ಪರಿಚಯಿಸಿದೆ. 12 ರಿಂದ 18 ವರ್ಷದವರು ದಿನಕ್ಕೆ 2 ಗಂಟೆಗಳ ಕಾಲ ಮಾತ್ರ ಈ ಗೇಮ್ ಆಡಲು ಅವಕಾಶ ನೀಡಲಾಗಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ದಿನಕ್ಕೆ 1 ಗಂಟೆ ಅದ್ರಲ್ಲೂ ರಾತ್ರಿ 9 ಗಂಟೆಯೊಳಗೆ ಮಾತ್ರ ಈ ಗೇಮ್ ಆಡಬಹುದು.

    ಆನ್‍ಲೈನ್ ಗೇಮ್ ಆಡುವಾಗ ಕಣ್ಣುಗಳ ಮೇಲೆ ಸಾಕಷ್ಟು ಒತ್ತಡ ಬೀಳುತ್ತದೆ. ಅದಕ್ಕೆ 30 ನಿಮಿಷ ಬ್ರೇಕ್ ತೆಗೆದುಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

  • `ಥರ್ಡ್ ಕ್ಲಾಸ್’ ಚಿತ್ರದ ನಾಯಕ ನಟ ಆಸ್ಪತ್ರೆಗೆ ದಾಖಲು!

    `ಥರ್ಡ್ ಕ್ಲಾಸ್’ ಚಿತ್ರದ ನಾಯಕ ನಟ ಆಸ್ಪತ್ರೆಗೆ ದಾಖಲು!

    ಬೆಂಗಳೂರು: `ಥರ್ಡ್ ಕ್ಲಾಸ್’ ಚಿತ್ರದ ಶೂಟಿಂಗ್ ವೇಳೆ ಕಣ್ಣಿಗೆ ಮಣ್ಣು ಬಿದ್ದು ನಾಯಕ ನಟ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

    ಜಗದೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ನಟರಾಗಿದ್ದು, ಇವರೊಂದಿಗೆ ಎಂಟು ಜನರ ಕಣ್ಣಿಗೂ ಗಾಯಗಳಾಗಿವೆ.

    ನಡೆದಿದ್ದೇನು?: ಘಾಟಿ ಸುಬ್ರಹ್ಮಣ್ಯದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಫೈಟಿಂಗ್ ವೇಳೆ ನಾಯಕ ನಟ ಕಣ್ಣಿಗೆ ಮಣ್ಣು ಬಿದ್ದಿದೆ. ಹೀಗಾಗಿ ಕಳೆದ ಮೂರು ದಿನಗಳಿಂದ ನಟ ಕಣ್ಣು ತೆರೆಯಲಾರದೆ ನೋವಿನಲ್ಲೇ ಒದ್ದಾಡುತ್ತಿದ್ದರು. ಇವರೊಂದಿಗೆ ಫೈಟ್ ನಲ್ಲಿದ್ದ 8 ಮಂದಿಯ ಕಣ್ಣಿಗೂ ಸ್ವಲ್ಪ ಮಟ್ಟಿನ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಜಗದೀಶ್ ಸದ್ಯ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಥರ್ಡ್ ಕ್ಲಾಸ್ ಸಿನಿಮಾಕ್ಕೆ ಅಶೋಕ್ ಆಕ್ಷನ್ ಕಟ್ ಹೇಳಿದ್ದು, ಚಿತ್ರಕ್ಕೆ ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪರಿಂದ ಕ್ಲಾಪ್ ಮಾಡಲಾಗಿತ್ತು.