Tag: eye donation

  • ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ

    ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ

    ಬೆಂಗಳೂರು: ದೊಡ್ಮನೆ ಹುಡುಗ ನಟ ಪುನೀತ್ ರಾಜ್‍ಕುಮಾರ್ ನಿಧನದ ನಂತರ ನೇತ್ರದಾನ ಮಾಡಲು ನೂರಾರು ಸಂಖ್ಯೆಯಲ್ಲಿ ಜನ ಮುಂದಾಗಿದ್ದಾರೆ.

     puneeth rajkumar

    ಪುನೀತ್ ರಾಜ್‍ಕುಮಾರ್ ಅವರು, ವಿಧಿವಶರಾದ ಬಳಿಕ ನೇತ್ರದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ. ಇದೀಗ ಪ್ರತಿದಿನ ನಾರಾಯಣ ನೇತ್ರಾಲಯದಲ್ಲಿ ನೇತ್ರದಾನ ಮಾಡಲು ಜನರ ದಂಡು ಹರಿದು ಬರುತ್ತಿದ್ದು, ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ನೇತ್ರದಾನ ಮಾಡಲು ಜನ ನೊಂದಾಯಿಸಿದ್ದಾರೆ ಎಂದು ಡಾ. ಭುಜಂಗ ಶೆಟ್ಟಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು

     puneeth rajkumar

    ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಪುನೀತ್ ಸಮಾಧಿಗೆ ಭೇಟಿ ಕೊಟ್ಟು ಬಂದವರೆಲ್ಲ ಬಹುತೇಕರು ನೇರವಾಗಿ ನಾರಾಯಣ ನೇತ್ರಾಲಯಕ್ಕೆ ಬಂದು ಕಣ್ಣಿನ ದಾನ ಮಾಡುತ್ತಿದ್ದಾರೆ. ದಿನಕ್ಕೆ 3 ರಿಂದ 4 ಜನ ನೇತ್ರದಾನ ಮಾಡಿದರೆ ಅದೇ ದೊಡ್ಡದು. ಆದರೀಗ ನಿತ್ಯ 200 ಜನದಂತೆ ನೇತ್ರದಾನ ಮಾಡಲು ಬರುತ್ತಿದ್ದಾರೆ. ಇದು ಅಪ್ಪು ಬಿಟ್ಟು ಹೋದ ಸ್ಫೂರ್ತಿ. ಪುನೀತ್ ಸಾವಿನ ಬಳಿಕ 30 ಜನರ ಕಣ್ಣನ್ನು ನಾವು ಬೇರೆಯವರಿಗೆ ಜೋಡಿಸಿದ್ದೇವೆ. ಸಾವಿನ ಮನೆಯಿಂದಲೂ ಕರೆ ಬರುತ್ತಿದೆ. ಇಷ್ಟರಮಟ್ಟಿಗೆ ಜನ ಜಾಗೃತಿಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

  • ಪುನೀತ್ ರಾಜ್‍ಕುಮಾರರಂತೆ ನೇತ್ರ ದಾನ ಮಾಡಲು ನೇಣಿಗೆ ಶರಣಾದ ಅಭಿಮಾನಿ!

    ಪುನೀತ್ ರಾಜ್‍ಕುಮಾರರಂತೆ ನೇತ್ರ ದಾನ ಮಾಡಲು ನೇಣಿಗೆ ಶರಣಾದ ಅಭಿಮಾನಿ!

    ಆನೇಕಲ್: ನಟ ಪುನೀತ್ ರಾಜ್‍ಕುಮಾರ್ ಅವರಂತೆಯೇ ನಿಧನ ನಂತರ ತಾನೂ ನೇತ್ರ ದಾನ ಮಾಡುವುದಕ್ಕಾಗಿ ಅಭಿಮಾನಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಬನ್ನೇರುಘಟ್ಟ ಸಮೀಪದ ಶ್ಯಾನುಬೋಗನಹಳ್ಳಿಯಲ್ಲಿ ನಡೆದಿದೆ.

    ರಾಜೇಂದ್ರ (40) ನೇಣಿಗೆ ಶರಣಾದ ಅಭಿಮಾನಿ. ಪುನೀತ್ ರಾಜಕುಮಾರರಂತೆಯೇ ತನ್ನ ಕಣ್ಣನ್ನು ದಾನ ಮಾಡಿ ಎಂದು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು

    ಭಾನುವಾರ ಸಂಜೆ ಸಾವನ್ನಪ್ಪಿದ ರಾಜೇಂದ್ರನ ಮೃತದೇಹವನ್ನು ಕಂಡ ಸಂಬಂಧಿಗಳು ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ನಟ ಪುನೀತ್ ಸಾವಿನಿಂದ ಕಂಗಾಲಾಗಿದ್ದ ರಾಜೇಂದ್ರ, ಇದೇ ದುಃಖದಲ್ಲಿ ಪುನೀತ್ ಕಣ್ಣು ದಾನ ಮಾಡಿದ್ದನ್ನು ಆದರ್ಶವಾಗಿ ತೆಗೆದುಕೊಂಡು ವಿಷಯವನ್ನು ಮನೆಯವರಿಗೆ ತಿಳಿಸುತ್ತಲೇ ಇದ್ದ. ವರ್ಷದ ಹಿಂದೆ ಮದುವೆಯಾಗಿದ್ದ ರಾಜೇಂದ್ರ ತಮ್ಮ ನೆಚ್ಚಿನ ನಾಯಕನ ಮಾದರಿಯನ್ನು ಜೀವಂತವಾಗಿಡಲು ಜೀವ ಬಿಟ್ಟಿದ್ದಾನೆ ಎಂದು ಸಹೋದರ ಲೋಹಿತ್ ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ – ಅಭಿಮಾನಿಗಳಿಗಾಗಿ ಥಿಯೇಟರ್‌ಗೆ ಬಂದ `ರಾಜಕುಮಾರ’

     

    ಭಾನುವಾರ ಮಧ್ಯಾಹ್ನ ತನ್ನ ತಾಯಿಯೊಂದಿಗೆ ನೇತ್ರದಾನ ಮಾಡಿದ ನೆಚ್ಚಿನ ನಟನ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದ. ಆತ್ಮಹತ್ಯೆ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಸಚಿವ ಆನಂದ್ ಸಿಂಗ್ ತಂದೆ ವಿಧಿವಶ

    ಸಚಿವ ಆನಂದ್ ಸಿಂಗ್ ತಂದೆ ವಿಧಿವಶ

    ಬಳ್ಳಾರಿ: ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ತಂದೆ ಪೃಥ್ವಿರಾಜ್ ಸಿಂಗ್ ಇಂದು ನಿಧನರಾಗಿದ್ದಾರೆ.

    ಹೊಸಪೇಟೆಯ ರಾಣಿಪೇಟೆಯಲ್ಲಿ ಮಧ್ಯಾಹ್ನ 12.30ಕ್ಕೆ ಪೃಥ್ವಿರಾಜ್ ಸಿಂಗ್ (84) ನಿಧನರಾಗಿದ್ದಾರೆ. ಪೃಥ್ವಿ ರಾಜ್ ಸಿಂಗ್ ಅವರು ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ಹೊಸಪೇಟೆ ರಾಣಿಪೇಟೆಯ ಮನೆಗೆ ಕರೆ ತರಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

    ಪೃಥ್ವಿರಾಜ್ ಸಿಂಗ್ ಅವರ ಕಣ್ಣುಗಳನ್ನು ಆಸ್ಪತ್ರೆಗೆ ದಾನ ಮಾಡಲು ನಿರ್ಧರಿಸಲಾಗಿದೆ. ಸಾವಿಗೂ ಮುಂಚೆಯೇ ಕಣ್ಣು ದಾನ ಮಾಡಲು ಪೃಥ್ವಿ ರಾಜ್ ಸಿಂಗ್ ಅವರು ನಿರ್ಧಾರ ಮಾಡಿದ್ದರು. ರಾಣಿಪೇಟೆಯಲ್ಲಿ ಇಂದು ಸಂಜೆ 4 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಸಂಜೆ 6 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜುಲೈ 18 ರಿಂದ 22ರವರೆಗೆ ಭಾರೀ ಮಳೆ- ಹವಾಮಾನ ಇಲಾಖೆ

  • ಹುಕ್ಕೇರಿಮಠದ ಜಾತ್ರೆಯ ಪ್ರಯುಕ್ತ ಉಚಿತ ನೇತ್ರ ತಪಾಸಣೆ ಶಿಬಿರ

    ಹುಕ್ಕೇರಿಮಠದ ಜಾತ್ರೆಯ ಪ್ರಯುಕ್ತ ಉಚಿತ ನೇತ್ರ ತಪಾಸಣೆ ಶಿಬಿರ

    ಹಾವೇರಿ: ಹುಕ್ಕೇರಿಮಠದ ಜಾತ್ರೆಯ ಪ್ರಯುಕ್ತ ಉಚಿತ ನೇತ್ರ ತಪಾಸಣೆ ಶಿಬಿರ ನಡೆಸಲಾಯ್ತು.

    ನಮ್ಮ ಜಗತ್ತು ಅತೀ ಸುಂದರವಾಗಿದ್ದು ಅದನ್ನು ಆಸ್ವಾದಿಸಲು ಭಗವಂತ ನೀಡಿರುವ ಕಣ್ಣುಗಳು ಅಮೂಲ್ಯ ಸಂಪತ್ತುಗಳಾಗಿದ್ದು ಅವುಗಳನ್ನು ಸೂಕ್ತವಾಗಿ ಕಾಪಾಡಬೇಕೆಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

    ನಗರದ ಹುಕ್ಕೇರಿಮಠದಲ್ಲಿ ಲಿಂ.ಶಿವಬಸವ ಸ್ವಾಮಿಗಳ 74 ನೇ ಮತ್ತು ಲಿಂ.ಶಿವಲಿಂಗ ಸ್ವಾಮಿಗಳ 11 ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಉತ್ಸವ ಸಮಿತಿ, ಲಯನ್ಸ ಕ್ಲಬ್, ದಿಶಾ ಪೌಂಡೇಶನ್, ಜಿಲ್ಲಾ ನೇತ್ರ ಘಟಕ ಹಾವೇರಿ, ಶಂಕರ ಕಣ್ಣಿನ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಉಚಿತ ನೇತ್ರ ಚಿಕಿತ್ಸೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಮಾನವ ಶರೀರವು ಅದ್ಭುತ ರಚನೆಯಾಗಿದ್ದು, ಪ್ರತಿ ಅಂಗವು ವಿಶಿಷ್ಟತೆಯನ್ನು ಹೊಂದಿದೆ. ಅದರಲ್ಲಿಯೂ ಕಣ್ಣುಗಳು ಅತೀ ಮುಖ್ಯವಾಗಿದ್ದು, ಕುರುಡನನ್ನು ಕೇಳಿದರೆ ಕಣ್ಣಿನ ಮಹತ್ವ ಗೊತ್ತಾಗುತ್ತದೆ. ಅದನ್ನು ಧೂಳಿನಿಂದ, ವಿಕಿರಣಗಳಿಂದ, ಪಟಾಕಿಗಳಿಂದ ನಾವೇ ಹಾಳು ಮಾಡಿಕೊಳ್ಳುತ್ತೇವೆ. 40ರ ನಂತರ ನಿಯಮಿತವಾಗಿ ನುರಿತ ವೈದ್ಯರಿಂದ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.

    ಅಕ್ಕಿ ಆಲೂರಿನ ಶಿವಬಸವ ಸ್ವಾಮೀಜಿ ಮಾತನಾಡಿ, ನೇತ್ರದಾನವು ಅತೀ ಶ್ರೇಷ್ಠವಾಗಿದ್ದು, ಮರಣದ ನಂತರವೂ ನಾವು ಈ ಜಗತ್ತನ್ನು ನೋಡಲು ಸಾಧ್ಯವಾಗುತ್ತದೆ. ಆದ್ದರಿಂದ ಮಣ್ಣಲ್ಲಿ ಮಣ್ಣಾಗುವ ಬದಲು ಪ್ರತಿಯೊಬ್ಬರೂ ನೇತ್ರದಾನ ಮಾಡಬೇಕೇಂದು ಹೇಳಿದರು. ಜಿಲ್ಲಾ ನೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಎಂರಾಜಶೇಖರ್, ಡಾ. ನಾಗರಾಜ್ ನಾಯಕ್, ಡಾ. ರಾಜೇಂದ್ರ ದೊಡ್ಡಮನಿ, ಡಾ. ಸಿ.ಎಸ್.ವಿರಕ್ತಮಠ ಮತ್ತು ಡಾ. ದಾಕ್ಷಾಯಣಿ ಕಣ್ಣಿನ ತಪಾಸಣೆ ಮಾಡಿದರು.

    ಸಮಾರಂಭದಲ್ಲಿ ಬಸವರಾಜ್ ಕೇಸರಿ, ಸುನಿಲ್ ಸನಣೂರ, ರೇಖಾ ಬಿ ಶೆಟ್ಟಿ, ಲಯನ್ಸ್ ಕ್ಲಬ್‍ನ ಪ್ರೋ ಪಿ.ಸಿ.ಹಿರೇಮಠ, ನಿತೀನ್ ಹೊರಡಿ, ನವೀನಕುಮಾರ್ ಹಾವನೂರು, ಶಿವಮೂರ್ತಿ ಸಾದರ, ಮಹಾಂತೇಶ್ ಮಳಿಮಠ, ಮಹೇಶ್ ಹೆಬ್ಬಳ್ಳಿ, ರಾಚಣ್ಣ ಮಾಗನೂರ, ಅಶೋಕ್ ಹೇರೂರ, ದಯಾನಂದ್ ಯಡ್ರಾಮಿ, ಆನಂದ್ ಅಟವಾಳಗಿ, ಶಂಕರ್ ಆಸ್ಪತ್ರೆಯ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು. ಒಟ್ಟು 342 ರೋಗಿಗಳು ನೇತ್ರ ಚಿಕಿತ್ಸೆಗೆ ಒಳಪಟ್ಟರು. 154 ಜನರು ಶಸ್ತ್ರ ಚಿಕಿತ್ಸೆ ನೋಂದಣಿಯಾದರು.

  • ಮನೆಯವರೆಲ್ಲರಿಂದ್ಲೂ ನೇತ್ರದಾನಕ್ಕೆ ಸಹಿ – ತಂದೆಯ ಆಸೆ ಈಡೇರಿಸಿದ ಕುಟುಂಬಸ್ಥರು

    ಮನೆಯವರೆಲ್ಲರಿಂದ್ಲೂ ನೇತ್ರದಾನಕ್ಕೆ ಸಹಿ – ತಂದೆಯ ಆಸೆ ಈಡೇರಿಸಿದ ಕುಟುಂಬಸ್ಥರು

    ಕೊಪ್ಪಳ: ಮೃತ ತಂದೆಯ ಆಸೆಯಂತೆ ಇಲ್ಲೊಂದು ಕುಟುಂಬದ ಎಲ್ಲಾ ಸದಸ್ಯರು ನೇತ್ರದಾನಕ್ಕೆ ಸಹಿ ಮಾಡುವ ಮೂಲಕ ಹಿರಿಯರ ಆಸೆ ಈಡೇರಿಸಿದ್ದಾರೆ.

    ಕೊಪ್ಪಳ ನಗರದ ಸುಣಗಾರ ಭಾವಿ ಹತ್ತಿರದ ಗೌರಿ ಅಂಗಳದ ನಿವಾಸಿ ದಿ. ತಿಮ್ಮಪ್ಪ ಹಡಪದ ಅವರ ಕುಟುಂಬವೇ ಈ ಮಹತ್ಕಾರ್ಯಕ್ಕೆ ಮುಂದಾಗಿದೆ. ತಿಮ್ಮಪ್ಪ ಹಡಪದ ಅವರ ಪತ್ನಿ ನಾಗರತ್ನಮ್ಮ ಹಾಗೂ ಮಕ್ಕಳಾದ ಪ್ರಕಾಶ್, ವೀರೇಶ್, ವಿಜಯಕುಮಾರ್, ಯಮನೂರಪ್ಪ ಇವರು ನೇತ್ರದಾನ ಮಾಡಿದವರು. ತಂದೆಯ ಮೊದಲ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ನೇತ್ರದಾನ ಮಾಡುವ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಮುಂಬರುವ ದಿನಗಳಲ್ಲಿ ಹಾಗೂ ಮರಣದ ನಂತರ ತಮ್ಮ ಕಣ್ಣು ಮಣ್ಣಿನಲ್ಲಿ ಮಣ್ಣಾಗುವ ಬದಲಾಗಿ ಅಂಧರ ಬಾಳಿಗೆ ದಾರಿಯಾಗುವ ಮಹತ್ಕಾರ್ಯಕ್ಕೆ ಇಡೀ ಕುಟುಂಬ ಮುಂದಾಗಿರುವುದು ಹೆಮ್ಮೆಯ ಸಂಗತಿ.

    ಕಳೆದ ವರ್ಷ ದಿವಂಗತ ತಿಮ್ಮಪ್ಪನವರು ಅನಾರೋಗ್ಯದಿಂದ ಮೃತರಾಗಿದ್ದರು. ಅವರ ಆಸೆ ನೇತ್ರದಾನ ಮಾಡಬೇಕೆನ್ನುವುದಾಗಿತ್ತು. ಮನೆಯ ಎಲ್ಲಾ ಸದಸ್ಯರಲ್ಲಿಯೂ ಈ ವಿಷಯ ಹಂಚಿಕೊಂಡಿದ್ದರು. ಅವರ ಆಸೆಯನ್ನು ಹೆಂಡತಿ, ಮಕ್ಕಳು ಸೇರಿದಂತೆ ಇಡೀ ಕುಟುಂಬ ಇಂದು ಈಡೇರಿಸುವ ಮೂಲಕ ತಿಮ್ಮಪ್ಪನ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ದಿ. ತಿಮ್ಮಪ್ಪ ಹಡಪದ ಅವರ ಮೇಲಿರುವ ಪ್ರೀತಿ ಎಂತದ್ದು ಎನ್ನುವುದು ಈ ಮಕ್ಕಳ ಕಾರ್ಯದಿಂದ ಗೊತ್ತಾಗುತ್ತದೆ. ತಂದೆಯವರ ಸಮಾಜ ಸೇವೆ, ಅವರಿಗಿದ್ದ ಸಾಮಾಜಿಕ ಕಳಕಳಿಯ ಆಧಾರದ ಮೇಲೆ ಇಂದು ಮಕ್ಕಳು ಕೂಡ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ.

    ಪ್ರತಿಯೊಬ್ಬ ಮಕ್ಕಳಿಗೆ ಅವರ ತಂದೆ ತಾಯಿಯೇ ಅವರ ಪಾಲಿಗೆ ದೇವರುಗಳು. ನಮ್ಮ ಜನ್ಮಕ್ಕೆ ಕಾರಣ ಕರ್ತರಾದ ಅವರಿಗೆ ನಾವು ಕೊಡುವ ಕಾಣಿಕೆ ಎಂದರೆ ಸಮಾಜಕ್ಕೆ ಒಳ್ಳೆಯವರಾಗಿ ಬದುಕಿ ಅವರಿಗೆ ಕೀರ್ತಿ ತರುವುದು. ಹಾಗಾಗಿ ಕಣ್ಣಿಲ್ಲದವರ ಬಾಳಿಗೆ ಬೆಳಕಾಗಿ, ಅವರೂ ಕತ್ತಲಿನಿಂದ ಬೆಳಕಿಗೆ ಬರಲಿ, ಜಗತ್ತು ನೋಡಿದರೆ ಅದಕ್ಕಿಂತ ಖುಷಿ ಬೇರೆನಿದೆ. ಇದರಿಂದ ಹೆತ್ತವರಿಗೂ ಖುಷಿಯಾಗುತ್ತದೆ. ಇದಕ್ಕೆಲ್ಲ ಕಾರಣ ನಮ್ಮ ತಂದೆಯವರ ಆದರ್ಶ ಗುಣಗಳು ಎಂದು ಮೃತನ ಮಕ್ಕಳು ಹೇಳಿದ್ದಾರೆ.

    ಪ್ರಥಮ ವರ್ಷದ ಪುಣ್ಯಸ್ಮರಣೆಗಾಗಿ ಏನಾದರೂ ಮಾಡಬೇಕೆನ್ನುವುದು ನನ್ನ ಆಸೆಯಾಗಿತ್ತು. ಮನೆಯವರೊಡನೆ ಚರ್ಚಿಸಿ ನಾವೆಲ್ಲರೂ ನೇತ್ರದಾನ ಮಾಡುವ ನಿರ್ಧಾರ ತೆಗೆದುಕೊಂಡೆವು. ಇದಕ್ಕೆ ಸ್ಪೂರ್ತಿ ನಮ್ಮ ತಂದೆಯವರು. ಅವರು ಇದ್ದಾಗಲೇ ಅವರೊಡನೆ ನಾವೆಲ್ಲರೂ ಸಹ ನೇತ್ರದಾನ ಮಾಡಲು ತೀರ್ಮಾನಿಸಿದ್ದೆವು. ಆದರೆ ಈಗ ಅವರಿಲ್ಲ, ಅವರ ಸವಿನೆನಪಿಗಾಗಿ ಇದನ್ನು ಮಾಡುತ್ತಿರುವೆವು. ನಾವು ಮಾಡುವ ಈ ಕೆಲಸದಿಂದ ಅಂಧರ ಬಾಳಲ್ಲಿ ಬೆಳಕು ಬಂದಂತಾಗುವುದು. ನಾವು ಸತ್ತ ಮೇಲೂ ಬದುಕಿರಬೇಕೆಂದರೆ ಈ ತರಹದ ಕೆಲಸವೊಂದೇ ದಾರಿ. ಇಂದು ನಾವು ಕುಟುಂಬದ ಐದೂ ಸದಸ್ಯರು ನೇತ್ರದಾನ ಮಾಡಿದ್ದೇವೆ. ಇದು ನಾವು ನಮ್ಮ ತಂದೆಯವರಿಗೆ ಅರ್ಪಿಸಿದ ಕಿರು ಕಾಣಿಕೆ ಅಷ್ಟೆ. ಇದೇ ತರಹದ ಕೆಲಸಗಳನ್ನು ನಮ್ಮ ಜೀವನದುದ್ದಕ್ಕೂ ಮಾಡಲು ನಮ್ಮ ತಂದೆಯವರು ನಮಗೆ ಶಕ್ತಿ ಕೊಡಲಿ ಎಂದು ಮಗ ಪ್ರಕಾಶ್ಶ ಹೇಳಿದ್ದಾನೆ.

    ಕುಟುಂಬದ ಕಳಕಳಿಗೆ ಮೆಚ್ಚುಗೆಯ ಮಾತನ್ನಾಡಿರುವ ಗವಿಮಠದ ಅಭಿನವ ಗವಿಶ್ರೀಗಳು, ನಿಮ್ಮ ಕಾರ್ಯಕ್ಕೆ ಗವಿಸಿದ್ದೇಶ ನಿಮ್ಮ ಕಣ್ಣು ಮುಂದಿನ ಬೆಳಕಾಗಿ ನಿಮ್ಮ ಕುಟುಂಬವನ್ನು ಮುನ್ನೆಡಸಲಿ, ಆತನ ಶ್ರೀರಕ್ಷೆ ಸದಾ ತಮ್ಮ ಕುಟುಂಬದ ಮೇಲಿರಲಿ ಎಂದು ಆಶೀರ್ದಿವಾಸಿದ್ದಾರೆ.

  • ಮದ್ವೆ ದಿನದಂದೆ ವಧು, ವರ ಸೇರಿದಂತೆ ಕುಟುಂಬದ 28 ಮಂದಿಯಿಂದ ನೇತ್ರದಾನಕ್ಕೆ ಸಹಿ!

    ಮದ್ವೆ ದಿನದಂದೆ ವಧು, ವರ ಸೇರಿದಂತೆ ಕುಟುಂಬದ 28 ಮಂದಿಯಿಂದ ನೇತ್ರದಾನಕ್ಕೆ ಸಹಿ!

    – ವರನಟ ರಾಜ್‍ಕುಮಾರ್ ಅವರೇ ಪ್ರೇರಣೆ ಅಂತಿದೆ ಕುಟುಂಬ

    ಬಳ್ಳಾರಿ: ಮದುವೆ ಅಂದ್ರೆ ಆ ಮನೆಯಲ್ಲಿ ಸಂಭ್ರಮ ಸಡಗರ ಮನೆ ಮಾಡಿರುತ್ತೆ. ಮದುವೆ ಮನೆಯಲ್ಲಿ ಎಲ್ಲರೂ ಸಂಭ್ರಮಿಸುತ್ತಿರುತ್ತಾರೆ. ಆದ್ರೆ ಇಲ್ಲೊಂದು ಕುಟುಂಬದ ಸದಸ್ಯರು ಮಗನ ಮದುವೆಯ ದಿನದಂದೇ ಇಡೀ ಕುಟುಂಬದ ಸದಸ್ಯರೆಲ್ಲಾ ನೇತ್ರದಾನ ಮಾಡೋ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಜಿಲ್ಲೆಯ ಹೊಸಪೇಟೆ ತಾಲೂಕಿನ ಕಡ್ಡಿರಾಂಪುರ ಗ್ರಾಮದ ಅವಿಭಕ್ತ ಕುಟುಂಬವೊಂದು ಮನೆಯ ಮಗನ ಮದುವೆ ದಿನವನ್ನೂ ಅರ್ಥಪೂರ್ಣವಾಗಿ ಮಾಡಿದೆ. ಮನೆಯ ಮಗ ಆನಂದ್ ವ್ಯವಸಾಯ ಮಾಡುತ್ತಿದ್ದರೂ, ಆರತಿಯೊಂದಿಗೆ ಮದುವೆಯಾಗುವ ದಿನದಂದ್ದೆ ಮನೆಯ ಎಲ್ಲ 28 ಸದಸ್ಯರು ನೇತ್ರದಾನ ಮಾಡುವ ಎಲ್ಲರಿಗೂ ಮಾದರಿಯಾಗಿದ್ದಾರೆ.

    ತಮ್ಮ ಮದುವೆಯ ದಿನವನ್ನು ಅರ್ಥಪೂರ್ಣವಾಗಿ ಮಾಡಿಕೊಳ್ಳಬೇಕೆಂದು ಆಸೆ ಹೊಂದಿದ್ದ ಆನಂದ್ ನೇತ್ರದಾನ ಮಾಡಲು ನಿರ್ಧರಿಸಿದ್ದಾರೆ. ಆನಂದರ ಅವಿಭಕ್ತ ಕುಟುಂಬದ ಸದಸ್ಯರೆಲ್ಲರೂ ತಮ್ಮ ಮನೆಯವರೆಲ್ಲಾ ನೇತ್ರದಾನ ಮಾಡಲು ಈ ಹಿಂದೆಯೇ ನಿರ್ಧರಿಸಿದ್ದರು. ಆದ್ರೆ ಕಾಲ ಕೂಡಿ ಬಂದಿರಲಿಲ್ಲ. ತಮ್ಮ ಕಣ್ಣುಗಳು ಅಂಧರ ಬಾಳಿಗೆ ಬೆಳಕಾಗುತ್ತವೆ ಅನ್ನೋ ಉದ್ದೇಶ ಹೊಂದಿದ್ದ ವರನಟ ಡಾಕ್ಟರ್ ರಾಜ್‍ಕುಮಾರ್ ಅವರ ಪ್ರೇರಣೆಯಿಂದಲೇ ಈ ಕುಟುಂಬದ ಸದಸ್ಯರೆಲ್ಲರೂ ಇದೀಗ ನೇತ್ರದಾನಕ್ಕೆ ಒಪ್ಪಿ ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದಾರೆ. ಅಲ್ಲದೇ ನಮ್ಮ ಮನೆಯವರಿಗೆಲ್ಲ ರಾಜ್‍ಕುಮಾರ್ ಅವರೇ ಪ್ರೇರಣೆ ಅಂತ ವರನ ಸಹೋದರ ಪ್ರಶಾಂತ್ ಹೇಳುತ್ತಾರೆ. ಇದನ್ನೂ ಓದಿ: ಮದುವೆಗೆ ಬಂದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿದ ದಂಪತಿ!

    ಆನಂದ್ ಅವರ ಮದುವೆಯ ದಿನವೇ ಅವಿಭಕ್ತ ಕುಟುಂಬದ 28 ಸದಸ್ಯರು ನೇತ್ರದಾನದ ವಾಗ್ದಾನ ಮಾಡೋ ಮೂಲಕ ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದಾರೆ, ಇದೂ ನಿಜಕ್ಕೂ ಅರ್ಥಪೂರ್ಣ ಮದುವೆ ಅಂತಾ ಮದುವೆಗೆ ಬಂದವರೆಲ್ಲಾ ಹರಸಿ ಹಾರೈಸಿದರು. ಇದೇ ವೇಳೆ ಮದುವೆಯ ವೇಳೆ ಸಸಿಗಳನ್ನು ಸಹ ವಿತರಣೆ ಮಾಡಿರುವುದು ಕೂಡ ವಿಶೇಷವಾಗಿತ್ತು. ಇದನ್ನೂ ಓದಿ: ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದ ವರ- ಜೆಸಿಬಿಯಲ್ಲೇ ದಿಬ್ಬಣ!