Tag: ExxonMobil

  • ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ವಿಶ್ವದ ನಂ.2 ಇಂಧನ ಕಂಪನಿ

    ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ವಿಶ್ವದ ನಂ.2 ಇಂಧನ ಕಂಪನಿ

    – ಅಮೆರಿಕದ ಕಂಪನಿಯನ್ನು ಹಿಂದಿಕ್ಕಿದ ರಿಲಯನ್ಸ್‌

    ಮುಂಬೈ: ವಿಶ್ವದ 5ನೇ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ಜಗತ್ತಿನ  ಎರಡನೇ ಅತಿ ದೊಡ್ಡ ಇಂಧನ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಮಾರುಕಟ್ಟೆ ಮೌಲ್ಯದಲ್ಲಿ ಅಮೆರಿಕದ ಎಕ್ಸೋನ್‌ಮೊಬಿಲ್‌ ಕಾರ್ಪೊರೇಷನ್‌ ಕಂಪನಿಯನ್ನು ಹಿಂದಿಕ್ಕಿ ರಿಲಯನ್ಸ್‌ ಈ ಸಾಧನೆ ನಿರ್ಮಿಸಿದೆ. ಈಗ ಸೌದಿ ಅರೇಬಿಯಾದ ಅರಾಮ್ಕೋ ಬಳಿಕ ವಿಶ್ವದ ಎರಡನೇ ಅತಿ ದೊಡ್ಡ ಕಂಪನಿಯಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಹೊರ ಹೊಮ್ಮಿದೆ.

    ಅತಿದೊಡ್ಡ ತೈಲ ಸಂಸ್ಕರಣಾ ಸಂಕೀರ್ಣವನ್ನು ನಿರ್ವಹಿಸುತ್ತಿರುವ ರಿಲಯನ್ಸ್‌ ಮಾರುಕಟ್ಟೆ ಮೌಲ್ಯ ಶುಕ್ರವಾರ ಶೇ.4.3ರಷ್ಟುಏರಿಕೆ ಆಗಿತ್ತು. ಇದರಿಂದ ಸಂಸ್ಥೆಗೆ 8 ಶತಕೋಟಿ ಡಾಲರ್‌ ಸೇರ್ಪಡೆಯಾಗಿ ರಿಲಯನ್ಸ್‌ನ ಮಾರುಕಟ್ಟೆಮೌಲ್ಯ 189 ಶತಕೋಟಿ ಡಾಲರ್‌ಗೆ ಏರಿಕೆ ಆಗುವುದರೊಂದಿಗೆ ನಂ.2 ಪಟ್ಟವನ್ನು ಅಲಂಕರಿಸಿದೆ.

    ಎಕ್ಸೋನ್‌ಮೊಬಿಲ್‌ ಷೇರುಗಳು ಶೇ.39ರಷ್ಟು ಇಳಿಕೆಯಾಗಿದ್ದು, 1 ಶತಕೋಟಿ ಡಾಲರ್‌ ಮಾರುಕಟ್ಟೆ ಮೌಲ್ಯ ಕಳೆದುಕೊಂಡಿದೆ. ಕೋವಿಡ್‌ 19 ನಿಂದಾಗಿ ತೈಲ ಬೇಡಿಕೆ ಕಡಿಮೆಯಾಗುತ್ತಿರುವ ಕಾರಣ ಎಕ್ಸೋನ್‌ಮೊಬಿಲ್‌ ಮಾರುಕಟ್ಟೆ ಮೌಲ್ಯ ಇಳಿಕೆಯಾಗಿದೆ. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ರಿಲಯನ್ಸ್ – ಒಂದು ಒಪ್ಪಂದ, ಒಂದು ಹೇಳಿಕೆಯಿಂದ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ.ಗೆ ಏರಿಕೆ

    1.75 ಟ್ರಿಲಿಯನ್‌ ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿರುವ ಅರಾಮ್ಕೋ ವಿಶ್ವದ ನಂ.1 ಇಂಧನ ಕಂಪನಿಯಾಗಿದೆ. ಮಾರ್ಚ್‌ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನಲ್ಲಿ ಶೇ.80ರಷ್ಟು ಆದಾಯ ಇಂಧನ ಉದ್ಯಮದಿಂದಲೇ ಹರಿದುಬಂದಿದೆ. ಇದನ್ನೂ ಓದಿ: ಗೂಗಲ್‌ ಜೊತೆ ಸೇರಿ ಕಡಿಮೆ ಬೆಲೆಗೆ ಜಿಯೋ ಫೋನ್‌ – ಕಡಿಮೆ ಬೆಲೆಗೆ ಫೋನ್‌ ನಿರ್ಮಾಣ ಹೇಗೆ?

    2019ರ ಅಗಸ್ಟ್ ತಿಂಗಳಿನಲ್ಲಿ ನಡೆದ ಕಂಪನಿಯ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ, ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋ ಜೊತೆ ರಿಲಯನ್ಸ್ ಆಯಿಲ್ ಟು ಕೆಮಿಕಲ್ಸ್(ಒಟಿಸಿ) ಕಂಪನಿ ತನ್ನ ಶೇ.20 ರಷ್ಟು ಪಾಲನ್ನು ಮಾರಾಟ ಮಾಡಲು ಸಮ್ಮತಿ ಸೂಚಿಸಿದೆ. ಒಟ್ಟು 75 ಶತಕೋಟಿ ಡಾಲರ್(5.3 ಲಕ್ಷ ಕೋಟಿ ರೂ.) ಒಪ್ಪಂದಕ್ಕೆ ರಿಲಯನ್ಸ್ ಸಹಿ ಹಾಕಲಿದೆ. ಸೌದಿ ಅರಾಮ್ಕೊ ಕಂಪನಿಗೆ ರಿಲಯನ್ಸ್ ಷೇರುಗಳನ್ನು ಮಾರಾಟ ಮಾಡುವ ಮೂಲಕ 18 ತಿಂಗಳಲ್ಲಿ ಸಂಸ್ಥೆಯನ್ನು ಸಾಲಮುಕ್ತಗೊಳಿಸುವುದಾಗಿ ಘೋಷಿಸಿದ್ದರು.

    ಈ ಒಪ್ಪಂದದ ಅನ್ವಯ ಸೌದಿ ಅರಾಮ್ಕೋ ಕಂಪನಿ ಜಾಮ್ ನಗರದಲ್ಲಿರುವ ರಿಲಾಯನ್ಸ್ ರಿಫೈನಿಂಗ್ ಘಟಕಕ್ಕೆ ಪ್ರತಿದಿನ 5 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಪೂರೈಸಲಿದೆ. ಸೌದಿ ಅರಾಮ್ಕೋ ಸೌದಿ ಅರೇಬಿಯಾದ ರಾಷ್ಟ್ರೀಯ ಪೆಟ್ರೋಲ್ ಮತ್ತು ನೈಸರ್ಗಿಕ ಗ್ಯಾಸ್ ಕಂಪನಿಯಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಮತ್ತು ವಿಶ್ವದಲ್ಲೇ ಅತಿ ಹೆಚ್ಚು ಲಾಭಗಳಿಸುವ ತೈಲ ಕಂಪನಿಯಾಗಿ ಹೊರಹೊಮ್ಮಿದೆ.

    ಜಾಮ್ ನಗರದಲ್ಲಿರುವ ಘಟಕ ಸದ್ಯ ಪ್ರತಿ ದಿನ 14 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದ್ದು 2030ರ ವೇಳೆಗೆ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ಕಂಪನಿ ತಿಳಿಸಿದೆ.