Tag: extradition

  • ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ!

    ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ!

    ಲಂಡನ್: ಬ್ಯಾಂಕ್‍ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ಮರುಪಾವತಿ ಮಾಡದೇ ಲಂಡನ್‍ನಲ್ಲಿ ತಲೆಮರೆಸಿಕೊಂಡಿದ್ದ ಮದ್ಯದ ದೊರೆ ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್ ಆಂತರಿಕ ಸಂಸತ್ತು ಒಪ್ಪಿಗೆ ನೀಡಿದೆ.

    ಉದ್ಯಮಿ ಮಲ್ಯರನ್ನು ಗಡಿಪಾರು ಮಾಡಲು ಭಾರತ ಸರ್ಕಾರ ಮಾಡಿದ್ದ ಮನವಿಗೆ ಬ್ರಿಟನ್ ಸಚಿವಾಲಯ ಸಮ್ಮತಿಸಿದೆ. ಭಾರತದ ಮನವಿಗೆ ಬ್ರಿಟನ್ ಗೃಹ ಕಾರ್ಯದರ್ಶಿ ಸಜೀದ್ ಜಾವಿದ್ ಫೆಬ್ರವರಿ 3 ರಂದು ಸಹಿ ಹಾಕಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಬ್ರಿಟನ್ ಸರ್ಕಾರದ ಈ ನಿರ್ಣಯದಿಂದ ಮಲ್ಯಗೆ ಭಾರೀ ಹಿನ್ನಡೆ ಆಗಿದೆ.

    ಕಳೆದ ವರ್ಷದ ಡಿಸೆಂಬರಿನಲ್ಲಿ ಈ ಕುರಿತು ವಿಚಾರಣೆ ನಡೆಸಿ ತೀರ್ಪು ನೀಡಿದ್ದ ಲಂಡನ್ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಮಲ್ಯ ಗಡಿಪಾರಿಗೆ ಅನುಮತಿ ನೀಡಿತ್ತು. ಅಲ್ಲದೇ ಗಡಿಪಾರು ಆದೇಶ ನೀಡುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ನ್ಯಾಯಾಲಯದ ತೀರ್ಪಿಗೆ ಸಂಸತ್ ಒಪ್ಪಿಗೆ ಮಾತ್ರ ಬಾಕಿ ಇತ್ತು. ಆದರೆ ಮಲ್ಯ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿ ಬ್ಯಾಂಕ್ ಸಾಲ ಮರು ಪಾವತಿ ಮಾಡಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದರು.

    ಮುಂದಿನ ನಡೆ ಏನು?
    ಮಲ್ಯ ಗಡಿಪಾರಿನ ಕುರಿತು ಲಂಡನ್ ಸಂಸತ್ ಕೈಗೊಂಡಿರುವ ನಿರ್ಣಯದಿಂದ ಭಾರತ ಸರ್ಕಾರಕ್ಕೆ ಮತ್ತೊಂದು ಗೆಲುವು ಸಿಕ್ಕಂತಾಗಿದೆ. ಸದ್ಯ ಲಂಡನ್ ಆಂತರಿಕ ಸಂಸತ್ತಿನ ನಿರ್ಣಯವನ್ನು ಪ್ರಶ್ನಿಸಿ 14 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಲು ವಿಜಯ್ ಮಲ್ಯಗೆ ಅವಕಾಶ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಲ್ಯ ಗಡಿಪಾರು ಆಗ್ತಾರಾ? ಮುಂದಿನ ಕಾನೂನು ಪ್ರಕ್ರಿಯೆ ಹೇಗೆ ನಡೆಯುತ್ತದೆ?

    ಮಲ್ಯ ಗಡಿಪಾರು ಆಗ್ತಾರಾ? ಮುಂದಿನ ಕಾನೂನು ಪ್ರಕ್ರಿಯೆ ಹೇಗೆ ನಡೆಯುತ್ತದೆ?

    ಲಂಡನ್: ಮದ್ಯದೊರೆ ವಿಜಯ್ ಮಲ್ಯರನ್ನು ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಭಾರತಕ್ಕೆ ಗಡಿಪಾರು ಗೊಳಿಸಿದ್ದರ ಬೆನ್ನಲ್ಲೇ, ಮಲ್ಯರ ಮುಂದಿನ ನಡೆ ಏನೆಂಬುದು ಕುತೂಹಲ ಮೂಡಿಸಿದೆ.

    ಹಣಕಾಸಿನ ವಿಚಾರದಲ್ಲಿ ಹಾಗೂ ವಂಚನೆಗೆ ಸಂಬಂಧಪಟ್ಟಂತೆ ಮಲ್ಯ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಗಳು ಲಭ್ಯವಾಗಿದ್ದರಿಂದ ಮಲ್ಯರನ್ನು ಗಡಿಪಾರು ಮಾಡಲು ನ್ಯಾಯಾಧೀಶರು ಆದೇಶ ನೀಡಿದ್ದರು.

    ಮಲ್ಯ ಮುಂದಿನ ನಡೆ ಏನು?
    * ಬ್ರಿಟನ್ ಕೋರ್ಟ್ ಗಡಿಪಾರಿನ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿಯನ್ನು ಸಲ್ಲಿಸಬಹುದು.
    * ಮೇಲ್ಮನವಿ ಸಲ್ಲಿಸಲು 14 ದಿನಗಳ ಕಾಲಾವಕಾಶ ಇದೆ.

    ಮೇಲ್ಮನವಿ ಸಲ್ಲಿಸದೇ ಇದ್ರೆ ಏನಾಗುತ್ತೆ?
    ಮಲ್ಯ ಗಡಿಪಾರಿನ ಆದೇಶವನ್ನು ಪ್ರಶ್ನಿಸಿ 14 ದಿನಗಳೊಳಗಾಗಿ ಮೇಲ್ಮನವಿ ಸಲ್ಲಿಸದೇ ಇದ್ದರೆ, 22 ದಿನಗೊಳಗೆ ಅಲ್ಲಿನ ಗೃಹ ಕಾರ್ಯದರ್ಶಿಗಳು ಮಲ್ಯ ಗಡಿಪಾರಿಗೆ ಆದೇಶ ನೀಡುತ್ತಾರೆ. ಈ ಆದೇಶ ಪ್ರಕಟಗೊಂಡ ಬಳಿಕ ಸಿಬಿಐ ಅಧಿಕಾರಿಗಳು ಲಂಡನ್ ನಿಂದ ಮಲ್ಯರನ್ನು ಭಾರತಕ್ಕೆ ಕರೆತರುತ್ತಾರೆ.

    ಗಡಿಪಾರು ಆಗ್ತಾರಾ?
    ಅಪರಾಧಿಗಳ ಗಡಿಪಾರು ಸಂಬಂಧ 1992 ರಲ್ಲಿ ಭಾರತ ಮತ್ತು ಬ್ರಿಟನ್ ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದೂವರೆಗೂ ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ಭಾರತ ಸ್ವದೇಶಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು. ಭಾರತಕ್ಕೆ ಗಡಿಪಾರು ಮಾಡುವವರ ಪಟ್ಟಿಯಲ್ಲಿ ಲಲಿತ್ ಮೋದಿ, ಟೈಗರ್ ಹನೀಫ್, ನದೀಪ್ ಸೈಫ್, ರವಿ ಶಂಕರಮ್ ಹಾಗೂ ವಿಜಯ್ ಮಲ್ಯ ಹೆಸರಿದೆ.

    ಪ್ರಪ್ರಥಮವಾಗಿ 2002ರಲ್ಲಿ ಗುಜರಾತ್ ದಂಗೆಗೆ ಸಂಬಂಧಿಸಿದಂತೆ 2016ರ ಅಕ್ಟೋಬರ್ ನಲ್ಲಿ ಸಮೀರ್ ಭಾಯ್ ವಿನುಭಾಯ್ ಪಟೇಲ್ ನನ್ನು ಬ್ರಿಟನ್ ಭಾರತಕ್ಕೆ ಹಸ್ತಾಂತರಿಸಿತ್ತು. 2018ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ಅಧಿಕಾರಿಗಳು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕಾರಿಗಳೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸಿ, ಮಾತುಕತೆಯನ್ನು ಸಹ ನಡೆಸಿದ್ದರು. ಈ ವೇಳೆ ಭಾರತ 17 ಮಂದಿಯ ಮಾಹಿತಿಯನ್ನು ಹಂಚಿಕೊಂಡಿತ್ತು.

    ಇದರಲ್ಲಿ ಪ್ರಮುಖವಾಗಿ ರವಿ ಶಂಕರನ್ (ಭಾರತೀಯ ಜಲಂತರ್ಗಾಮಿ ಯುದ್ಧ ನೌಕೆಯಲ್ಲಿ ನೀರು ಸೋರಿಕೆಯ ಪ್ರಮುಖ ಆರೋಪಿ), ಟೈಗರ್ ಹನೀಫ್ (1993ರಲ್ಲಿ ಗುಜರಾತ್ ನಲ್ಲಿ ನಡೆದ 2 ಸ್ಫೋಟ ಪ್ರಕರಣಕ್ಕೆ ಬೇಕಾದ ಆರೋಪಿ), ಸಂಗೀತ ನಿರ್ದೇಶಕ ನದೀಮ್ ಸೈಫ್ (ಗುಲ್ಷನ್ ಕುಮಾರ್ ಕೊಲೆ ಪ್ರಕರಣ ಆರೋಪಿ)ಯ ಹೆಸರುಗಳು ಪ್ರಸ್ತಾಪವಾಗಿದ್ದವು.

    ಬ್ರಿಟನ್ ನ್ಯಾಯಾಲಯ ಸಾಮಾನ್ಯವಾಗಿ ರಾಜಕೀಯ ಕಾರಣ ಹಾಗೂ ವ್ಯಕ್ತಿಗೆ ಚಿತ್ರ ಹಿಂಸೆ ಅಥವಾ ಮರಣದಂಡನೆಗೆ ಒಳಪಟ್ಟ ವ್ಯಕ್ತಿಗಳನ್ನು ಗಡಿಪಾರು ಮಾಡಲು ನಿರಾಕರಿಸುತ್ತದೆ. ಇಂತಹ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ಬ್ರಿಟನ್ ತಿರಸ್ಕರಿಸಿದೆ. ಯೂರೋಪಿನ್ ಮಾನವ ಹಕ್ಕುಗಳ ಆರ್ಟಿಕಲ್ 8ರ ಪ್ರಕಾರ ಯಾವುದೇ ವ್ಯಕ್ತಿಗೂ ಸಹ ಕುಟುಂಬ ಜೀವನವನ್ನು ನಡೆಸುವ ಹಕ್ಕು ಇದೆ ಎಂದು ಅದು ಪ್ರತಿಪಾದಿಸುತ್ತದೆ. ಬ್ಯಾಂಕ್ ಗಳಿಗೆ ವಂಚಿಸಿದ ಆರೋಪ ಇರುವ ಕಾರಣ ಮಲ್ಯ ಗಡಿಪಾರಿಗೆ ಕೋರ್ಟ್ ಒಪ್ಪಿಗೆ ನೀಡಬಹುದು ಎನ್ನುವ ನಿರೀಕ್ಷೆಯನ್ನು ಮೊದಲೇ ಭಾರತ ಸರ್ಕಾರ ಇಟ್ಟುಕೊಂಡಿತ್ತು.

    ಕೋರ್ಟ್ ಆದೇಶಕ್ಕೂ ಮುನ್ನ ಮಲ್ಯ ಹೇಳಿದ್ದೇನು?
    ನನ್ನ ನೌಕಕರಿಗೆ ನನ್ನ ಮೊದಲ ಆದ್ಯತೆ ನೀಡುತ್ತೇನೆ. ಕಳೆದ ಎರಡು ವರ್ಷಗಳಲ್ಲಿ ನಮ್ಮ ಸಂಸ್ಥೆಯ ನೌಕರರಿಗೆ ಸಂಬಳ ನೀಡುವುದಕ್ಕಾಗಿ ನಾವು ನ್ಯಾಯಾಲಯದಲ್ಲಿ ಠೇವಣಿಯ ಹಣ ಬಳಸಬೇಕು. ಈ ಸಂಬಂಧ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದೆವು. ಆದರೆ ಈ ಬಗ್ಗೆ ನ್ಯಾಯಾಲಯ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಒಂದು ವೇಳೆ ನ್ಯಾಯಾಲಯ ಪ್ರಕರಣ ಇತ್ಯರ್ಥ ಮಾಡಲು ಒಪ್ಪಿದರೆ, ಮೊದಲು ನನ್ನ ನೌಕರರಿಗೆ ಸಂಬಳ ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ. ಅಲ್ಲದೇ ನ್ಯಾಯಾಲಯ ಯಾವ ರೀತಿ ತೀರ್ಪು ನೀಡುತ್ತದೆಯೋ, ಅದನ್ನು ಸ್ವೀಕರಿಸಲು ನಾನು ಸಿದ್ಧ. ಅಲ್ಲದೇ ಈ ಬಗ್ಗೆ ನನ್ನ ಕಾನೂನು ಸಲಹಗಾರರ ಬಳಿ ಚರ್ಚಿಸಿ, ಸೂಕ್ತ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬ್ರಿಟನ್‍ನಿಂದ ವಿಜಯ್ ಮಲ್ಯ ಭಾರತಕ್ಕೆ ಗಡಿಪಾರು

    ಬ್ರಿಟನ್‍ನಿಂದ ವಿಜಯ್ ಮಲ್ಯ ಭಾರತಕ್ಕೆ ಗಡಿಪಾರು

    ಲಂಡನ್: ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿ ಲಂಡನ್‍ಗೆ ಪರಾರಿಯಾಗಿರುವ ಮದ್ಯದೊರೆ ವಿಜಯ್ ಮಲ್ಯ ಭಾರತಕ್ಕೆ ಗಡಿಪಾರು ಮಾಡಲು ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಅನುಮತಿ ನೀಡಿದೆ.

    ಇತ್ತೀಚೆಗಷ್ಟೆ ಯುಪಿಎ ಅವಧಿಯ ಹೆಲಿಕಾಪ್ಟರ್ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್‍ನನ್ನು ಸಿಬಿಐ ಭಾರತಕ್ಕೆ ಯುಎಯಿಯಿಂದ ಗಡಿಪಾರು ಮಾಡಲಾಗಿತ್ತು. ಈಗ ವಿಜಯ್ ಮಲ್ಯ ಗಡಿಪಾರಿಗೆ ಕೋರ್ಟ್ ಆದೇಶ ನೀಡಿದ್ದು ಸಾಲ ಮಾಡಿ ಪರಾರಿಯಾದವರನ್ನು ದೇಶಕ್ಕೆ ಕರೆ ತರುವ ಕೇಂದ್ರ ಸರ್ಕಾರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. ಈ ಹಿಂದೆ ಮಲ್ಯ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸೋಮವಾರಕ್ಕೆ ತೀರ್ಪು ಕಾಯ್ದಿರಿಸಿತ್ತು.

    ಮುಂದೇನು?
    ಒಂದು ವೇಳೆ ಮಲ್ಯ ಗಡಿಪಾರು ಮಾಡುವಂತೆ ಕೋರ್ಟ್ ತೀರ್ಪು ನೀಡಿದರೆ, ಈ ಆದೇಶ ಬ್ರಿಟನ್ ಗೃಹ ಕಾರ್ಯದರ್ಶಿಗೆ ತಲುಪುತ್ತದೆ. ಸರ್ಕಾರದ ಪರವಾಗಿ ಕಾರ್ಯದರ್ಶಿ ಗಡಿಪಾರು ಆದೇಶ ಹೊರಡಿಸಿ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ. ಕೋರ್ಟ್ ನೀಡಿದ ಆದೇಶವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲು ಮಲ್ಯಗೆ ಅವಕಾಶವಿದೆ. ಒಂದು ವೇಳೆ ಮೇಲ್ಮನವಿ ಸಲ್ಲಿಸಿದರೆ ಮತ್ತೆ ಸಿಬಿಐ ಕಾನೂನು ಹೋರಾಟ ನಡೆಸಬೇಕಾಗುತ್ತದೆ.

    ನಾನು ಸಾಲಗಾರನಲ್ಲ. ಕಿಂಗ್ ಫಿಷರ್ ಏರ್ ಲೈನ್ಸ್ ತೆಗೆದುಕೊಂಡಿದ್ದ ಸಾಲಕ್ಕೆ ಜಾಮೀನು ನಿಂತಿದ್ದೆ. ಆದರೆ ಕಿಂಗ್ ಫಿಷರ್ ಏರ್ ಲೈನ್ಸ್ ಉದ್ಯಮದಿಂದ ನಷ್ಟವಾಯಿತು. ಹೀಗಾಗಿ ಸಂಸ್ಥೆ ನಷ್ಟದ ಪಾಲಾಗಿದ್ದು, ನಾನು ಆ ನಷ್ಟದ ಜವಾಬ್ದಾರನಾಗಿದ್ದೇನೆ ಎಂದು ಮಲ್ಯ ಹೇಳಿದ್ದಾರೆ.

    ಇತ್ತೀಚೆಗಷ್ಟೆ ಯುಪಿಎ ಅವಧಿಯ ಹೆಲಿಕಾಪ್ಟರ್ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್‍ನನ್ನು ಸಿಬಿಐ ಭಾರತಕ್ಕೆ ಕರೆತರುತ್ತಿದ್ದಂತೆ, ಸಾರ್ವಜನಿಕ ಬ್ಯಾಂಕ್‍ಗಳಿಗೆ ವಂಚಿಸಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಎಚ್ಚೆತ್ತು ಸರಣಿ ಟ್ವೀಟ್ ಮಾಡಿದ್ದರು. ತಮ್ಮ ಟ್ವೀಟ್ ನಲ್ಲಿ ನಾನು ಪಡೆದಿರುವುದು ಸಾರ್ವಜನಿಕ ಹಣ. ಹೀಗಾಗಿ ಶೇ.100 ರಷ್ಟು ಸಾಲವನ್ನು ಮರು ಪಾವತಿ ಮಾಡುತ್ತೇನೆಂದು ಹೇಳಿ, ರಾಜಕಾರಣಿಗಳು ಹಾಗೂ ಮಾಧ್ಯಮಗಳ ವಿರುದ್ಧವೂ ಕಿಡಿಕಾರಿದ್ದರು.

    ಟ್ವೀಟ್‍ನಲ್ಲಿ ಏನಿತ್ತು?
    ನಾನು ಸಾರ್ವಜನಿಕರ ಹಣವನ್ನು ದೋಚಿ ಪರಾರಿಯಾಗಿದ್ದೇನೆ ಎಂದು ರಾಜಕಾರಣಿಗಳು ಹಾಗೂ ಮಾಧ್ಯಮಗಳು ನನ್ನ ವಿರುದ್ಧ ಜೋರಾಗಿ ಮಾತನಾಡುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಕರಣವಿರುವಾಗಲೇ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ.

    ಕಿಂಗ್‍ಫಿಶರ್ ಅದ್ಭುತ ವಿಮಾನಯಾನ ಸಂಸ್ಥೆಯಾಗಿತ್ತು. ಆದರೆ ವಿಮಾನಕ್ಕೆ ಬಳಸುವ ಇಂಧನದ ಬೆಲೆಯು ಪ್ರತಿ ಬ್ಯಾರೆಲ್‍ಗೆ 140 ಅಮೆರಿಕನ್ ಡಾಲರ್ ಹೆಚ್ಚಾಗಿತ್ತು. ಇದನ್ನು ಸಂಸ್ಥೆ ಎದುರಿಸುವಲ್ಲಿ ವಿಫಲವಾಗಿತ್ತು. ಇದರಿಂದಾಗಿ ಬ್ಯಾಂಕ್ ಹಣವೆಲ್ಲವೂ ಅಲ್ಲಿ ಹೋಗಿತ್ತು. ನಾನು ಶೇಕಡಾ 100ರಷ್ಟು ಹಣ ಮರು ಪಾವತಿ ಮಾಡಲು ಸಿದ್ಧವಾಗಿದ್ದೇನೆ. ದಯವಿಟ್ಟು ಸ್ವೀಕರಿಸಿ.

    ಕಳೆದ ಮೂರು ದಶಕಗಳಿಂದ ಕಿಂಗ್‍ಫಿಶರ್ ಮದ್ಯದ ಕಂಪನಿ ಉತ್ತಮ ಪ್ರಗತಿಯಲ್ಲಿದೆ. ಆದರೆ ವಿಮಾನ ಯಾನದಿಂದ ನಷ್ಟಕ್ಕೆ ಒಳಗಾಗಬೇಕಾಯಿತು. ಅನೇಕ ರಾಜ್ಯಗಳ ಪ್ರಗತಿಗೆ ಹಣವನ್ನು ನೀಡಿರುವೆ. ಎಂದಿಗೂ ಬ್ಯಾಂಕ್‍ಗೆ ಮೋಸ ಮಾಡುವುದಿಲ್ಲ. ಎಲ್ಲ ಹಣವನ್ನು ಪಾವತಿ ಮಾಡುತ್ತೇನೆಂದು ಹೇಳಿದ್ದರು.

    ಏನಿದು ಪ್ರಕರಣ?
    ಭಾರತದ ವಿವಿಧ ಬ್ಯಾಂಕ್ ಗಳಿಗೆ ಮಲ್ಯ 9 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡದೇ ಇಂಗ್ಲೆಂಡ್ ಗೆ ಪಲಾಯನ ಮಾಡಿದ್ದ ವಿಜಯ್ ಮಲ್ಯರನ್ನು ಭಾರತಕ್ಕೆ ವಾಪಸ್ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿತ್ತು. ಅಲ್ಲದೇ ಇಂಗ್ಲೆಂಡಿನಿಂದ ಗಡಿಪಾರು ಮಾಡುವಂತೆ ಅಲ್ಲಿನ ಸರ್ಕಾರಕ್ಕೂ ಮನವಿ ಮಾಡಿಕೊಂಡಿತ್ತು. ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಮುಂಬೈ ಕೋರ್ಟ್ ಸೆಪ್ಟೆಂಬರ್ 3ರಂದು ಮಲ್ಯರಿಗೆ ನೋಟಿಸ್ ಜಾರಿ ಮಾಡಿ 1 ವಾರದೊಳಗೆ ಉತ್ತರಿಸುವಂತೆ ಸೂಚಿಸಿತ್ತು. ಆದರೂ ಸಹ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.

    ಈ ಹಿಂದೆ ಭಾರತಕ್ಕೆ ಮಲ್ಯರನ್ನು ಗಡಿಪಾರು ಮಾಡುವ ಕುರಿತು ಲಂಡನ್ ನ್ಯಾಯಾಲಯ ಮುಂಬೈ ಜೈಲಿನ ಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡಿತ್ತು. ನ್ಯಾಯಾಲಯದ ಸೂಚನೆಯಂತೆ ಸಿಬಿಐ ಅಧಿಕಾರಿಗಳು ಮುಂಬೈ ಆರ್ಥರ್ ರೋಡ್ ಜೈಲಿನ ವಿಡಿಯೋವನ್ನು ಸಲ್ಲಿಸಿದ್ದರು. ಆದರೆ ಮಲ್ಯ ಭಾರತದ ಜೈಲುಗಳು ಅಮಾನವೀಯವಾಗಿದೆ, ಅಲ್ಲಿ ಬೆಳಕು ಸರಿ ಇಲ್ಲ ಎಂದು ಮಲ್ಯ ಪರ ವಕೀಲರು ದೂರಿದ್ದರು. ಸಿಬಿಐ ಪರ ವಕೀಲರು ಎಲ್ಲಾ ವ್ಯವಸ್ಥೆಗಳು ಸರಿಯಾಗಿಯೇ ಇವೆ. ಎಲ್ಲವನ್ನು ಸರಿಮಾಡಿದ್ದೇವೆಂದು ಕೋರ್ಟ್ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಲ್ಯ ಹಸ್ತಾಂತರಿಸಲು ಭಾರತದ ಜೈಲುಗಳ ಸ್ಥಿತಿ-ಗತಿಗಳ ಬಗ್ಗೆ ವಿಡಿಯೋ ಕಳಿಸಿ: ಲಂಡನ್ ಕೋರ್ಟ್

    ಮಲ್ಯ ಹಸ್ತಾಂತರಿಸಲು ಭಾರತದ ಜೈಲುಗಳ ಸ್ಥಿತಿ-ಗತಿಗಳ ಬಗ್ಗೆ ವಿಡಿಯೋ ಕಳಿಸಿ: ಲಂಡನ್ ಕೋರ್ಟ್

    ನವದೆಹಲಿ: ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿ ಲಂಡನ್‍ಗೆ ಪರಾರಿಯಾಗಿರುವ ಮದ್ಯದೊರೆ ವಿಜಯ್ ಮಲ್ಯನನ್ನು ಭಾರತಕ್ಕೆ ಹಸ್ತಾಂತರಿಸಲು ಲಂಡನ್ ಕೋರ್ಟ್ ದೇಶದಲ್ಲಿರುವ ಜೈಲುಗಳ ಸ್ಥಿತಿಗತಿಗಳ ಬಗ್ಗೆ ತಿಳಿಸುವಂತೆ ಸೂಚಿಸಿದೆ.

    ಕೋಟ್ಯಾಂತರ ರೂಪಾಯಿ ಸಾಲ ಮಾಡಿ ಭಾರತದಿಂದ ಲಂಡನ್ ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್‍ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯದಲ್ಲಿ ವಿಚಾರಣೆ ಕೈಗೆತ್ತಿಕೊಂಡಿದೆ.

    ಭಾರತಕ್ಕೆ ಹಸ್ತಾಂತರಿಸುವ ಕುರಿತು ವಿಜಯ್ ಮಲ್ಯ ಪರ ವಕೀಲರು, ಭಾರತದಲ್ಲಿನ ಜೈಲುಗಳಲ್ಲಿ ಸರಿಯಾದ ಗಾಳಿ-ಬೆಳಕು ಇಲ್ಲ. ಹೀಗಾಗಿ ಹಸ್ತಾಂತರ ಮಾಡಲು ಅನುಮತಿ ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.

    ಈ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು, ವ್ಯಕ್ತಿಯೊಬ್ಬ ಜೈಲಿನೊಳಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಚಿತ್ರಿಸಿ ಕಳುಹಿಸಿ. ಅದು ಮಧ್ಯಾಹ್ನದ ಹೊತ್ತಿನಲ್ಲಿ ಸೂರ್ಯನ ಬೆಳಕು ಜೈಲಿನಲ್ಲಿ ಅಗಾಧವಾಗಿ ಪ್ರವೇಶಿಸುವಂತಿರಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

    ಭಾರತ ಸರ್ಕಾರದ ಪರ ವಾದಿಸಿದ ವಕೀಲ ಮಾರ್ಕ್ ಸಮ್ಮರ್, ಮಾನವ ಹಕ್ಕು ಆಯೋಗ ನಿಗದಿಪಡಿಸಿದ ಮಾನದಂಡದ ಆಧಾರದಲ್ಲಿ ಜೈಲುಗಳನ್ನು ನಿರ್ಮಿಸಲಾಗಿದೆ. ವಿಜಯ್ ಮಲ್ಯ ಕೂಡಿ ಹಾಕುವ ಬ್ಯಾರಕ್ ನಲ್ಲಿ ಶುದ್ಧವಾದ ಗಾಳಿ ಬೆಳಕು ಇರಲಿದೆ. ಅಷ್ಟೇ ಅಲ್ಲದೇ ಪಾಶ್ಚಿಮಾತ್ಯ ಶೈಲಿಯ ಶೌಚಾಲಯ, ಶುಭ್ರವಾದ ಬೆಡ್ ನೀಡಲಾಗುವುದು ಎಂದು ತಿಳಿಸಿದರು.

    ಮುಂಬೈನ ಆರ್ಥರ್ ರೋಡ್ ಜೈಲಿನ ವಿಡಿಯೋಗಳನ್ನು ಸಲ್ಲಿಸುವಂತೆ ತಿಳಿಸಿದ್ದು, ಮುಂದಿನ ವಿಚಾರಣೆಯಲ್ಲಿ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಮದ್ಯದೊರೆ ಮಲ್ಯಗೆ 6 ವಾರಗಳ ಸಮಯ ಬಿಗ್ ರಿಲೀಫ್ ಸಿಕ್ಕಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ಪರ ವಾದಿಸುತ್ತಿರುವ ವಕೀಲರ ತಂಡ ಮುಂಬೈ ಅರ್ಥರ್ ರೋಡ್ ಜೈಲಿನ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಭಾರತ ಸರ್ಕಾರ ಪರ ಆದೇಶ ನೀಡಿದರೆ, ವಿಜಯ ಮಲ್ಯ ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ.