Tag: extortion case

  • ರಾ..ರಾ.. ರಕ್ಕಮ್ಮಗೆ ಶುರುವಾಯ್ತು ಸಂಕಷ್ಟ – ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ

    ರಾ..ರಾ.. ರಕ್ಕಮ್ಮಗೆ ಶುರುವಾಯ್ತು ಸಂಕಷ್ಟ – ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ

    ನವದೆಹಲಿ: ಸುಕೇಶ್ ಚಂದ್ರಶೇಖರ್ (Sukesh Chandrashekar) ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರನ್ನು ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್‌ಗೆ ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಎರಡು ಬಾರಿ ಸಮನ್ಸ್ ಜಾರಿ ಮಾಡಲಾಗಿತ್ತು. ಸಮನ್ಸ್ ಹಿನ್ನೆಲೆ ಅವರು ಇಂದು ವಿಚಾರಣೆಗೆ ಹಾಜರಾಗಿದ್ದರು.

    ಬೆಳಗ್ಗೆ 11:30 ರಿಂದ ವಿಚಾರಣೆ ಆರಂಭವಾಗಿದ್ದು, ರಾತ್ರಿ 8:30 ವರೆಗೆ ವಿಚಾರಣೆ ನಡೆಯುವ ಸಾಧ್ಯತೆಗಳಿದೆ. ಒಟ್ಟು ಮೂರು ಹಂತಗಳಲ್ಲಿ ವಿಚಾರಣೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ನಿಂದ ಬೆಲೆ ಬಾಳುವ ಗಿಫ್ಟ್ ಪಡೆದಿರುವ ಹಿನ್ನೆಲೆಯಲ್ಲಿ ನಟಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: 200 ಕೋಟಿ ವಂಚನೆ ಕೇಸ್ : ಸುಕೇಶ್ ಬಗ್ಗೆ ಎಲ್ಲವೂ ಗೊತ್ತಿದ್ದೂ ಸ್ನೇಹ ಬೆಳೆಸಿ ಇಕ್ಕಟ್ಟಿಗೆ ಸಿಲುಕಿಕೊಂಡ್ರಾ ನಟಿ ಜಾಕ್ವೆಲಿನ್

    ಜಾಕ್ವೆಲಿನ್, ಸುಕೇಶ್ ಚಂದ್ರಶೇಖರ್‌ರಿಂದ 2.5 ಕೋಟಿ ಮೌಲ್ಯದ ಮೂರು ಕಾರುಗಳನ್ನು, ಮೂಬೈಲ್ ಫೋನ್‍ಗಳನ್ನು, ನಾಲ್ಕು ಪರ್ಷಿಯನ್ ಬೆಕ್ಕುಗಳು, ಗುಸ್ಸಿ ಮತ್ತು ಶನೆಲ್‍ನಿಂದ ಡಿಸೈನರ್ ಬ್ಯಾಗ್‍ಗಳು ಮತ್ತು ಒಂದು ಜೋಡಿ ಲೂಯಿ ವಿಟಾನ್ ಶೂಗಳನ್ನು ಸೇರಿ ಹಲವು ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಇದನ್ನೂ ಓದಿ: ಹುಡುಗರ ಸಾಮರ್ಥ್ಯನ 2 ನಿಮಿಷದ ಮ್ಯಾಗಿಗೆ ಹೋಲಿಸಿದ್ದ ನಟಿಗೆ, ತೆಲುಗು ನಟ ಅಡಿವಿ ಶೇಷ್ ಕೊಟ್ಟ ಟಾಂಗ್ ಇನ್ನೂ ಭಯಂಕರ

    ಪ್ರಸ್ತುತ ಜೈಲಿನಲ್ಲಿರುವ ಚಂದ್ರಶೇಖರ್ ಫೋರ್ಟಿಸ್ ಹೆಲ್ತ್‌ಕೇರ್‌ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಪತ್ನಿ ಅದಿತಿ ಸಿಂಗ್ ಅವರಂತಹ ಉನ್ನತ ವ್ಯಕ್ತಿಗಳು ಸೇರಿದಂತೆ ಹಲವು ಶ್ರೀಮಂತ ಜನರನ್ನು ವಂಚಿಸಿದ ಆರೋಪ ಹೊತ್ತಿದ್ದಾರೆ. ಆಗಸ್ಟ್ 17 ರಂದು ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಆರೋಪಿ ಎಂದು ಹೆಸರಿಸಿ ಇಡಿ (ED) ಚಾರ್ಜ್ ಶೀಟ್ ಸಲ್ಲಿಸಿತು. ಕರ್ನಾಟಕದ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಪ್ರಸ್ತುತ ದೆಹಲಿ ಜೈಲಿನಲ್ಲಿದ್ದು 10ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸುಲಿಗೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸೇರಿದ 7 ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಸುಲಿಗೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸೇರಿದ 7 ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಸುಕೇಶ್ ಚಂದ್ರಶೇಖರ್ ವಿರುದ್ಧದ ಸುಲಿಗೆ ಪ್ರಕರಣದಲ್ಲಿ ಬಾಲಿವುಡ್ ತಾರೆ ಜಾಕ್ವೆಲಿನ್ ಫರ್ನಾಂಡೀಸ್ ಅವರ 7.27 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ಜಪ್ತಿ ಮಾಡಿದೆ. ಜಾಕ್ವೆಲಿನ್ ಕನ್ನಡದಲ್ಲೂ ನಟಿಸಿದ್ದು, ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ  ನಟಿಸಿದ್ದಾರೆ. ಇನ್ನಷ್ಟೇ ಈ ಸಿನಿಮಾ ರಿಲೀಸ್ ಆಗಬೇಕಿದೆ.

    ಜಾಕ್ವೆಲಿನ್ ಹೆಸರಿನಲ್ಲಿ 7.12 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಠೇವಣಿಗಳನ್ನು ಲಗತ್ತಿಸಲಾದ ಆಸ್ತಿಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ. ಜಾಕ್ವೆಲಿನ್ ಫೆರ್ನಾಂಡಿಸ್ ಸುಲಿಗೆ ಮಾಡಿದ ಹಣದ ಫಲಾನುಭವಿಯಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಸುಕೇಶ್ ಚಂದ್ರಶೇಖರ್ ಸುಲಿಗೆ ಮಾಡಿದ ಹಣವನ್ನು ಬಳಸಿಕೊಂಡು ಜಾಕ್ವೆಲಿನ್ ಫರ್ನಾಂಡೀಸ್‌ಗೆ 5.71 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ನೀಡಿದ್ದ ಎಂಬ ಪುರಾವೆಗಳು ಅಧಿಕಾರಿಗಳಿಗೆ ಸಿಕ್ಕಿವೆ. ಉಡುಗೊರೆಗಳ ಹೊರತಾಗಿ, ಅವನು ಜಾಕ್ವೆಲಿನ್ ಅವರ ಕುಟುಂಬ ಸದಸ್ಯರಿಗೆ 173,000 ಯುಎಸ್ ಡಾಲರ್ ಮತ್ತು ಸುಮಾರು 27,000 ಆಸ್ಟ್ರೇಲಿಯನ್ ಡಾಲರ್‌ಗಳನ್ನು ನೀಡಿದ್ದನು.

    ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಸುಕೇಶ್ ಚಂದ್ರಶೇಖರ್ ಜೊತೆಗಿನ ಸಂಪರ್ಕಕ್ಕಾಗಿ ಇಡಿ ಹಲವು ಬಾರಿ ಪ್ರಶ್ನಿಸಿತ್ತು. ಜಾಕ್ವೆಲಿನ್ ಸದ್ಯಕ್ಕೆ ಆರೋಪಿಯಲ್ಲ. ಆದರೆ ತನಿಖಾಧಿಕಾರಿಗಳು ಇನ್ನೂ ಜಾಕ್ವೆಲಿನ್‌ಗೆ ಕ್ಲೀನ್ ಚಿಟ್ ನೀಡಿಲ್ಲ. ಶ್ರೀಲಂಕಾ ಮೂಲದ ನಟಿಗೆ ದೇಶ ತೊರೆಯದಂತೆ ನಿಷೇಧ ಹೇರಲಾಗಿತ್ತು.

    ದೆಹಲಿಯ ಉದ್ಯಮಿಯೊಬ್ಬರ ಪತ್ನಿಯಿಂದ ಸ್ಪೂಫ್ ಕರೆಗಳ ಮೂಲಕ ಸುಕೇಶ್ ಚಂದ್ರಶೇಖರ್ 215 ಕೋಟಿ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಸುಕೇಶ್ ದೆಹಲಿಯ ಜೈಲಿನಲ್ಲಿದ್ದಾಗ, ಪ್ರಧಾನಿ ಕಚೇರಿ, ಕಾನೂನು ಸಚಿವಾಲಯ ಮತ್ತು ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸಿ ಸಂತ್ರಸ್ತ ಮಹಿಳೆಯಿಂದ ಹಣ ವಸೂಲಿ ಮಾಡಿದ್ದಾನೆ. ಸಂತ್ರಸ್ತೆಯ ಪತಿಗೆ ಜಾಮೀನು ದೊರಕಿಸಿಕೊಡುವುದಾಗಿ ಮತ್ತು ಅವರ ಔಷಧ ವ್ಯಾಪಾರವನ್ನು ನಡೆಸುವುದಾಗಿ ಸುಕೇಶ್ ದೂರವಾಣಿ ಕರೆಗಳಲ್ಲಿ ಹೇಳಿಕೊಂಡಿದ್ದನು.

    ರಾಜಕಾರಣಿ ಟಿಟಿವಿ ದಿನಕರನ್ ಒಳಗೊಂಡ ಐದು ವರ್ಷಗಳ ಹಿಂದಿನ ವಂಚನೆ ಪ್ರಕರಣದಲ್ಲಿ ಸುಕೇಶ್ ಕೂಡ ಭಾಗಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 4 ರಂದು ಇಡಿ ಅವರನ್ನು ಬಂಧಿಸಿತ್ತು.

  • ಮೋದಿ ಸರ್ಕಾರ ಬಂದ್ಮೇಲೆ ಪಾಕಿಸ್ತಾನದಲ್ಲಿ 4 ಬಾರಿ ಮನೆ ಬದಲಿಸಿದ್ದಾನೆ ದಾವೂದ್: ಸಹೋದರನೇ ಬಾಯ್ಬಿಟ್ಟ ಸತ್ಯ

    ಮೋದಿ ಸರ್ಕಾರ ಬಂದ್ಮೇಲೆ ಪಾಕಿಸ್ತಾನದಲ್ಲಿ 4 ಬಾರಿ ಮನೆ ಬದಲಿಸಿದ್ದಾನೆ ದಾವೂದ್: ಸಹೋದರನೇ ಬಾಯ್ಬಿಟ್ಟ ಸತ್ಯ

    ಮುಂಬೈ: 1993ರ ಮುಂಬೈ ಸರಣಿ ಸ್ಫೋಟದ ಆರೋಪಿಯಾದ ಭೂಗತ ದೊರೆ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಸಹೋದರ ಇಕ್ಬಾಲ್ ಕಸ್ಕರ್ ಬಾಯ್ಬಿಟ್ಟಿದ್ದಾನೆ.

    ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿ 8 ದಿನಗಳ ಪೊಲೀಸ್ ವಶದಲ್ಲಿರೋ ಕಸ್ಕರ್, ವಿಚಾರಣೆ ವೇಳೆ ಹಲವಾರು ಸಂಗತಿಗಳನ್ನ ಬಹಿರಂಗಪಡಿಸಿದ್ದಾನೆ. ಡಿ ಕಂಪೆನಿ ಮುಖ್ಯಸ್ಥನಾದ ದಾವೂದ್ ಪಶ್ಚಿಮ ಮತ್ತು ಪೂರ್ವ ಆಫ್ರಿಕಾ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿದ್ದಾನೆಂದು ತಿಳಿಸಿದ್ದಾನೆ. ಅಲ್ಲದೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಾವೂದ್ ಪಾಕಿಸ್ತಾನದಲ್ಲಿ 4 ಬಾರಿ ತನ್ನ ವಿಳಾಸವನ್ನ ಬದಲಾಯಿಸಿದ್ದಾನೆ ಎಂದು ಕಸ್ಕರ್ ಹೇಳಿದ್ದಾನೆ.

    ಜೊತೆಗೆ ಪಾಕಿಸ್ತಾನದಲ್ಲಿ ದಾವೂದ್‍ನ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ದಾವೂದ್ ತನ್ನ ಕುಟುಂಬ ಸದಸ್ಯರೊಂದಿಗೆ ಫೋನ್‍ನಲ್ಲಿ ಮಾತನಾಡುವುದಿಲ್ಲ. ಆತನಿಗೆ ಲ್ಯಾಟಿನ್ ಅಮೆರಿಕದ ಡ್ರಗ್ಸ್ ದೊರೆಗಳೊಂದಿಗೆ ಸಂಪರ್ಕವಿದೆ ಎಂದು ಹೇಳಿದ್ದಾನೆ.

    ದಾವೂದ್ ನೇರವಾಗಿ ಅಥವಾ ಪರೋಕ್ಷವಾಗಿ ಸುಲಿಗೆ ದಂಧೆಯಲ್ಲಿ ಭಾಗಿಯಾಗಿದ್ದಾನಾ? ಆತನನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿಸಬಹುದಾ ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಈ ವೇಳೆ ಕಸ್ಕರ್ ಈ ಎಲ್ಲಾ ವಿಚಾರವನ್ನ ಬಹಿರಂಗಪಡಿಸಿದ್ದಾನೆ.

    ಸೋಮವಾರದಂದು ಮುಂಬೈನ ಮನೆಯಿಂದ ಇಕ್ಬಾಲ್ ಕಸ್ಕರ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಭಾರೀ ಭದ್ರತೆಯೊಂದಿಗೆ ನಡೆದ ಈ ಕಾರ್ಯಾಚರಣೆಯಲ್ಲಿ ಹಲವಾರು ಪೊಲೀಸ್ ಸಂಸ್ಥೆಗಳು ಭಾಗಿಯಾಗಿದ್ದವು. 2003ರಲ್ಲಿ ಯುನೈಟೆಡ್ ಅರಬ್ ಎಮಿರೈಟ್ಸ್ ನಿಂದ ಗಡಿಪಾರಾದ ಇಕ್ಬಾಲ್ ನಗರದಲ್ಲಿ ತನ್ನ ಸಹೋದರನ ರಿಯಲ್ ಎಸ್ಟೇಟ್ ಉದ್ಯಮವನ್ನ ನೋಡಿಕೊಳ್ಳುತ್ತಿದ್ದಾನೆ ಎಂದು ಹೇಳಲಾಗಿದೆ ಅಂತ ಪೊಲೀಸರು ಹೇಳಿದ್ದಾರೆ.

    ಸರಣಿ ಸ್ಫೋಟಗಳ ನಂತರ ಪಾಕಿಸ್ತಾನಕ್ಕೆ ಪರಾರಿಯಾಗಿರುವ ದಾವೂದ್ ಕರಾಚಿಯಲ್ಲಿ ಬಂಗ್ಲೋ ನಂ. 13, ಬ್ಲಾಕ್ 4 ಕ್ಲಿಫ್ಟನ್- ಈ ವಿಳಾದಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದೆ. 1986ರಲ್ಲಿ ಭಾರತದಿಂದ ಪರಾರಿಯಾದ ದಾವೂದ್‍ನನ್ನು ಸೆರೆಹಿಡಿಯಲು ಭಾರತ ತನ್ನ ಪ್ರಯತ್ನವನ್ನ ಮತ್ತಷ್ಟು ತೀವ್ರಗೊಳಿಸಿದೆ. ದಾವೂದ್ ಪಾಕಿಸ್ತಾನದಲ್ಲೇ ಇದ್ದು, ಆತನನ್ನು ಭಾರತಕ್ಕೆ ವಾಪಸ್ ಕರೆತರಲು ಭಾರತ ನಿಶ್ಚಯಿಸಿದೆ ಎಂದು ನರೇಂದ್ರ ಮೋದಿ ಸರ್ಕಾರ ನಿರಂತರವಾಗಿ ಹೇಳುತ್ತಾ ಬಂದಿದೆ. ಆದ್ರೆ ದಾವೂದ್ ಪಾಕಿಸ್ತಾನಲ್ಲಿ ಇದ್ದಾನೆ ಎಂಬುದನ್ನ ಪಾಕಿಸ್ತಾನ ನಿರಾಕರಿಸುತ್ತಲೇ ಬಂದಿದೆ.

    ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಕರ್, ಹತ್ತಿರದ ಸಂಬಂಧಿ ಮುಮ್ತಾಜ್ ಈಜಾಝ್ ಶೇಕ್ ಹಾಗೂ ಮತ್ತೊಬ್ಬ ಸಹಚರ ಇಸ್ರಾರ್ ಜಮೀಲ್ ಸಯ್ಯದ್‍ನನ್ನು ಥಾಣೆ ಪೊಲೀಸ್‍ನ ಆ್ಯಂಟಿ ಎಕ್ಟಾರ್ಷನ್ ಸೆಲ್ ಬಂಧಿಸಿದೆ. 2013ರಿಂದ ಸುಲಿಗೆ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಮೂವರನ್ನೂ ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿ ಮತ್ತಷ್ಟು  ವಿಚಾರಣೆ ನಡೆಯುತ್ತಿದೆ.

    ಕಸ್ಕರ್ ಹಾಗೂ ಆತನ ಸಹಚರರು 2013ರಿಂದಲೂ ದಾವೂದ್ ಹೆಸರಿನಲ್ಲಿ ಥಾಣೆಯ ಪ್ರಮುಖ ಬಿಲ್ಡರ್‍ವೊಬ್ಬರನ್ನ ಬೆದರಿಸಿ 30 ಲಕ್ಷ ರೂ. ಹಾಗೂ ನಾಲ್ಕು ಫ್ಲಾಟ್‍ಗಳನ್ನ ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಮಂಗಳವಾರದಂದು ದಾವೂದ್ ಸಹೋದರ ಇಕ್ಬಾಲ್‍ನನ್ನು 8 ದಿನಗಳ ಕಾಲ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.