Tag: Experts

  • ಶಿರೂರು ಭೂ ಕುಸಿತ ದುರಂತ – ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ

    ಶಿರೂರು ಭೂ ಕುಸಿತ ದುರಂತ – ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ

    ಕಾರವಾರ: ಶಿರೂರು ಭೂ ಕುಸಿತ ದುರಂತದ (Shiruru LandSlide) ಹಿನ್ನೆಲೆ ನಡೆಯುತ್ತಿದ್ದ ಮೂರನೇ ಹಂತದ ಡ್ರಜ್ಜಿಂಗ್ ಕಾರ್ಯಾಚರಣೆಯನ್ನು (Dregding Operation) ಸ್ಥಗಿತಮಾಡಲಾಗಿದೆ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲದ (Ankola) ಶಿರೂರು ಭೂ ಕುಸಿತದ ಹಿನ್ನೆಲೆ ಮೂರನೇ ಹಂತದ ಕಾರ್ಯಾಚರಣೆಯು ನಡೆಯುತ್ತಿತ್ತು. 13 ದಿನ ಪೂರೈಸಿದ ಡ್ರಜ್ಜಿಂಗ್ ಬೋಟ್ ಮೂಲಕ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ಇಂದು ಸ್ಥಗಿತಮಾಡಲಾಗಿದೆ.ಇದನ್ನೂ ಓದಿ: ಒಳಮೀಸಲಾತಿಗೆ ಆಗ್ರಹಿಸಿ ರಾಯಚೂರು ಬಂದ್: ಬಸ್ ಸಂಚಾರ ಸಂಪೂರ್ಣ ಸ್ಥಗಿತ

    ಕಳೆದ 13 ದಿನದಿಂದ ಅಂಕೋಲದ ಗಂಗಾವಳಿ ನದಿಯಲ್ಲಿ ಓಷಿಯನ್ ಕಂಪನಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿತ್ತು. 90 ಲಕ್ಷದ ಮೊತ್ತದಲ್ಲಿ 13 ದಿನ ಕಾರ್ಯಾಚರಣೆ ಪೂರ್ಣಗೊಂಡಿದೆ. 13 ದಿನದ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ ಶವ ಹಾಗೂ ಲಾರಿ ಹೊರತೆಗೆದಿದ್ದು, ನಂತರ ಮನುಷ್ಯನ ಮೂಳೆಗಳು ಹಾಗೂ ಕೆಲವು ವಸ್ತುಗಳನ್ನು ಸಹ ಹೊರತೆಗೆಯಲಾಗಿದೆ.

    ಇದಾದ ಬಳಿಕ ಗಂಗಾವಳಿ ನದಿಯಲ್ಲಿ ಬಿದ್ದಿದ್ದ ಬೃಹತ್ ಆಲದ ಮರ ಹೊರತೆಗೆಯಲಾಗಿತ್ತು. ಆದರೆ ಇದೀಗ ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ ಮಾಡಲು ನಿರ್ಧರಿಸಿದ್ದಾರೆ. ಇದರ ಬದಲಿಗೆ ಇಂದಿನಿಂದ ಇಬ್ಬರು ಮುಳುಗು ತಜ್ಞರು ಹಾಗೂ ಪೋಕ್ ಲೈನ್ ಮೂಲಕ ಹೋಟೆಲ್ ಕುಸಿದುಹೋದ ಸ್ಥಳದಲ್ಲಿ ನಿಗದಿ ಮಾಡಿದ ಎರಡನೇ ಪಾಯಂಟ್‌ನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

    ಭೂಕುಸಿತ ದುರಂತದಲ್ಲಿ ಸತತ 77 ದಿನದ ದೀರ್ಘ ಕಾರ್ಯಾಚರಣೆ ಇದಾಗಿದ್ದು, ಒಟ್ಟು ಮೂರು ಹಂತದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯ ಸಿಕ್ಕ ಮೂಳೆಗಳ ಡಿ.ಎನ್.ಎ ವರದಿ ಬರಬೇಕಿದ್ದು, ಕಾಣೆಯಾದ ಜಗನ್ನಾಥ್, ಲೋಕೇಶ್ ಶವ ಶೋಧ ನಡೆಯಬೇಕಿದೆ.ಇದನ್ನೂ ಓದಿ: 1 ವರ್ಷ ದೇವಿಯ ಆಶೀರ್ವಾದ ಸಿಗಲಿ ಎನ್ನುತ್ತಾ ಅಧಿಕಾರ ಹಂಚಿಕೆಯ ಸುಳಿವು ನೀಡಿದ್ರಾ? – ಕುತೂಹಲ ಮೂಡಿಸಿದ ಸಿಎಂ ಮಾತು

  • ಶಿರೂರು ಗುಡ್ಡ ಕುಸಿತ ದುರಂತ: ಮತ್ತೆ ಶವಗಳಿಗೆ ಶೋಧ – ಕಾರವಾರ ಬಂದರಿಗೆ ಡ್ರಜ್ಜಿಂಗ್ ಬೋಟ್!

    ಶಿರೂರು ಗುಡ್ಡ ಕುಸಿತ ದುರಂತ: ಮತ್ತೆ ಶವಗಳಿಗೆ ಶೋಧ – ಕಾರವಾರ ಬಂದರಿಗೆ ಡ್ರಜ್ಜಿಂಗ್ ಬೋಟ್!

    – 90 ಲಕ್ಷ ರೂ. ವೆಚ್ಚದಲ್ಲಿ ಕಾಣೆಯಾದವರ ಶೋಧ ಕಾರ್ಯ

    ಕಾರವಾರ: ಜುಲೈ ತಿಂಗಳಿನಲ್ಲಿ ಸಂಭವಿಸಿದ್ದ ಶಿರೂರು ಭೂಕುಸಿತ ದುರಂತದ (Shiruru LandSlide) ಹಿನ್ನಲೆ ಇದೀಗ ಮತ್ತೆ ಶವಗಳ ಶೋಧ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲಾದ (Ankola) ಶಿರೂರಿನಲ್ಲಿ (Shiruru) ಜುಲೈ 16ರಂದು ಭೂಕುಸಿತವಾಗಿ 11 ಜನ ಮೃತಪಟ್ಟಿದ್ದು, 8 ಜನರ ಶವ ಶೋಧ ಮಾಡಲಾಗಿತ್ತು. ಆದರೆ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಮೃತದೇಹಗಳು ದೊರೆಯದೇ ಮುಳುಗು ತಜ್ಞರು ಶೋಧ ನಡೆಸಿದರೂ ಮಳೆಯ ಕಾರಣ ಯತ್ನಗಳು ವಿಫಲವಾಗಿದ್ದವು. ಹೀಗಾಗಿ ಜುಲೈ 28 ರಂದು ಕಾರ್ಯಾಚರಣೆ ಸ್ಥಗಿತ ಮಾಡಲಾಗಿತ್ತು. ಇದರ ನಂತರ ಶೋಧಕ್ಕೆ ಪ್ರಯತ್ನ ನಡೆಸಿದರೂ ಗಂಗಾವಳಿ ನದಿಯಲ್ಲಿ ಮಳೆಯಿಂದ ನೀರು ಹೆಚ್ಚಾದ ಪರಿಣಾಮ ಮುಳುಗು ತಜ್ಞರು ಸಹ ಕೈಚೆಲ್ಲಿ ಕೂರುವಂತಾಗಿತ್ತು.ಇದನ್ನೂ ಓದಿ: ಪೇಜರ್‌ ಆಯ್ತು ಈಗ ಹಿಜ್ಬುಲ್ಲಾ ಘಟಕಗಳಲ್ಲಿ ವಾಕಿಟಾಕಿಗಳ ಸ್ಫೋಟ – 14 ಸಾವು, 300 ಕ್ಕೂ ಹೆಚ್ಚು ಮಂದಿಗೆ ಗಾಯ

    ಈ ಹಿನ್ನೆಲೆಯಲ್ಲಿ ಗೋವಾದ ಅಭಿಷೇನಿಯ ಓಷನ್ ಸರ್ವಿಸಸ್ ಕಂಪನಿಗೆ 90 ಲಕ್ಷದ ಟೆಂಡರ್ ನೀಡಿ ಇದೀಗ ಕಾರವಾರಕ್ಕೆ ಡ್ರಜ್ಜಿಂಗ್ ಬೋಟ್ (Dredging Boat) ತರಿಸಲಾಗಿದ್ದು, ಶುಕ್ರವಾರದಿಂದ ಕಾರ್ಯಾಚರಣೆ ನಡೆಸಲಿದೆ.

    ಇನ್ನೂ ಹೆದ್ದಾರಿ ಪ್ರಾಧಿಕಾರ, ಶಾಸಕರ ನಿಧಿ ಹಾಗೂ ದಾನಿಗಳ ಸಹಾಯದಿಂದ 90 ಲಕ್ಷ ಹಣ ಒದಗಿಸಲಾಗಿದ್ದು, ಮುಂಗಡವಾಗಿ ಡ್ರಜ್ಜಿಂಗ್ ಬೋಟ್‌ಗೆ 40 ಲಕ್ಷ ರೂ. ಹಣ ಸಂದಾಯ ಮಾಡಲಾಗಿದೆ. ಈ ಮೊದಲು ಶವ ಶೋಧದ ನಂತರ ಗಂಗಾವಳಿ ನದಿಯಲ್ಲಿ ಭೂ ಕುಸಿತದಿಂದ ಉಂಟಾದ ಗುಡ್ಡದ ಮಣ್ಣನ್ನು ತೆರವು ಮಾಡುವುದಾಗಿ ಕಾರವಾರದ ಶಾಸಕ ಸತೀಶ್ ಸೈಲ್ ತಿಳಿಸಿದ್ದರು. ಕಾರವಾರದ ಬಂದರಿನಿಂದ ಗಂಗಾವಳಿ ನದಿಯವರೆಗೆ ಸಮುದ್ರದ ಮೂಲಕ ಡ್ರಜ್ಜಿಂಗ್ ಬೋಟ್ ಕೊಂಡೊಯ್ಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲು

    ಸದ್ಯ ಅಬ್ಬರದ ಮಳೆ ನಿಂತಿದೆ. ಈಗಾಗಲೇ ಭೂ ಕುಸಿತದಿಂದ ಹಾನಿಯಾಗಿರುವ ಪ್ರದೇಶದ ಮಣ್ಣು ತೆರವಿಗೆ ಕೋಟಿಗಟ್ಟಲೇ ಹಣ ವ್ಯಯಿಸಲಾಗಿದೆ. ಜೊತೆಗೆ ದೆಹಲಿಯಿಂದ ಬಂದ ಕ್ವಿಕ್ ಸೆಕ್ಯುರಿಟಿ ಸರ್ವಿಸ್ ಸೆಲ್ಯೂಷನ್‌ನ ದ್ರೋಣ್ ವಿಶೇಷ ತಂಡಕ್ಕೆ ಲಕ್ಷಗಟ್ಟಲೆ ಹಣ ನೀಡಬೇಕಿದ್ದು, ಇದೀಗ ಹಣದ ಕೊರತೆಯಿದ್ದರೂ ದಾನಿಗಳು, ಶಾಸಕರ ನಿಧಿಯ ಹಣ ಬಳಸಿ ಶೋಧ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.

  • ಸದ್ಯಕ್ಕಿಲ್ಲ ಮೂರನೇ ಅಲೆಯ ಆತಂಕ – ತಜ್ಞರ ಅಭಿಪ್ರಾಯ ಏನು ಗೊತ್ತಾ?

    ಸದ್ಯಕ್ಕಿಲ್ಲ ಮೂರನೇ ಅಲೆಯ ಆತಂಕ – ತಜ್ಞರ ಅಭಿಪ್ರಾಯ ಏನು ಗೊತ್ತಾ?

    ಬೆಂಗಳೂರು: ಕೊರೊನಾ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಕೂಡ ಕಡಿಮೆಯಾಗುತ್ತಿದ್ದು, ಡಿಸೆಂಬರ್ ಅಂತ್ಯದ ವೇಳಗೆ ಕೊರೊನಾ ಎರಡನೇ ಅಲೆ ಸಂಪೂರ್ಣವಾಗಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

    ಹೌದು, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಮೂರನೇ ಅಲೆಯ ಅಬ್ಬರ ಭಾರತದಲ್ಲಿ ಶುರುವಾಗಲಿದೆ ಎನ್ನುವ ಅಭಿಪ್ರಾಯ ಬಹುತೇಕ ತಜ್ಞರಲ್ಲಿತ್ತು. ಹಾಗಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನವಹಿಸುವಂತೆ ಸಲಹೆ ಸೂಚನೆಗಳನ್ನು ನೀಡಲಾಗಿತ್ತು. ಆದರೆ ಇದೀಗ ಕೊರೊನಾ ಮೂರನೇ ಅಲೆಯ ಆತಂಕ ಸದ್ಯಕ್ಕೆ ಇಲ್ಲವಾಗಿದೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ತುಂಬಿ ಹರಿಯುತ್ತಿದ್ದ ನಾಲೆಗೆ ಬಿದ್ದ ಟ್ರ್ಯಾಕ್ಟರ್

    ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಹೇಳಲಾಗಿತ್ತು. ಈಗ ತಜ್ಞರು ಮೂರನೇ ಅಲೆಯ ಬಗ್ಗೆ ಕೊಂಚ ನಿರಾಳ ಮತ್ತು ಸಂತಸದ ವಿಚಾರವನ್ನು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮೂರನೇ ಅಲೆಯ ಆತಂಕ ದೂರವಾಗಿದೆ ಅಂತ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೊನಾ ವಿರುದ್ಧ ಭಾರತದಲ್ಲಿ ಲಸಿಕೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ಜನರಲ್ಲಿ ರೋಗ ನಿರೋಧಕ ಶಕ್ತಿ ಬೆಳವಣಿಗೆ ಆಗಿದೆ. ಹಾಗಾಗಿ ಸದ್ಯಕ್ಕೆ ಮೂರನೇ ಅಲೆಯ ಆತಂಕವಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ. ಇದನ್ನೂ ಓದಿ: ಆರ್ಥಿಕ ಸಂಕಷ್ಟದಿಂದ ಮನನೊಂದು KSRTC ನೌಕರ ವಿಷ ಸೇವಿಸಿ ಆತ್ಮಹತ್ಯೆ

    ಆದರೂ ಜನವರಿ ಬಳಿಕ ಮೂರನೇ ಅಲೆ ದೇಶಕ್ಕೆ ಬರುವ ಸಾಧ್ಯತೆಗಳು ಹೆಚ್ಚಾಗಿದೆ. ಎರಡನೇ ಅಲೆ ಹೇಗೆ ಧಿಡಿರನೇ ಶುರುವಾಯಿತೋ, ಅದೇ ರೀತಿ ಮೂರನೇ ಅಲೆ ಜನವರಿ ಬಳಿಕ ಶುರುವಾಗುವ ಸಾಧ್ಯತೆ ಇದೆ. ಜೊತೆಗೆ ಮೂರನೇ ಅಲೆ ಮೊದಲ ಎರಡು ಅಲೆಯಂತೆ ಭೀಕತೆ ಇರುವುದಿಲ್ಲ. ಕಾರಣ ಭಾರತದಲ್ಲಿ ಮೂರನೇ ಅಲೆ ಪ್ರಾರಂಭದ ವೇಳೆಗೆ ಬಹುತೇಕ ವ್ಯಾಕ್ಸಿನ್ ಎರಡು ಡೋಸ್ ಆಗಿರುತ್ತದೆ. ಇದರಿಂದಾಗಿ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೂ ಜನ ಮಾತ್ರ ಕೊರೊನಾ ನಿಯಮಗಳನ್ನು ಮೀರಬಾರದು ಎಂಬ ಸಲಹೆಯನ್ನು ತಜ್ಞರು ನೀಡಿದ್ದಾರೆ.

  • ನೆರೆಯ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ವೈರಾಣು ಪತ್ತೆ – ಸರ್ಕಾರಕ್ಕೆ ತಜ್ಞರ ಎಚ್ಚರಿಕೆ

    ನೆರೆಯ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ವೈರಾಣು ಪತ್ತೆ – ಸರ್ಕಾರಕ್ಕೆ ತಜ್ಞರ ಎಚ್ಚರಿಕೆ

    ಬೆಂಗಳೂರು: ರಾಜ್ಯದಲ್ಲಿ ಎರಡನೇ ಅಲೆ ಮುಗಿದು ನಿಟ್ಟುಸಿರು ಬಿಡುವ ಹೊತ್ತಲ್ಲೇ ಡೆಲ್ಟಾ ಪ್ಲಸ್ (Delta Plus) ವೈರಸ್ ಆತಂಕ ಆರಂಭಗೊಂಡಿದೆ.

    ಕೊರೋನಾ ವೈರಸ್ ನ ರೂಪಾಂತರಿ ಕೊರೋನಾ ಡೆಲ್ಟಾ ವೈರಸ್ ಈಗಾಗಲೇ ನೆರೆ ರಾಜ್ಯಗಳಲ್ಲಿ ಪತ್ತೆಯಾಗಿದ್ದು, ಕರ್ನಾಟಕದಲ್ಲೂ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶದಲ್ಲಿ 1, ಕೇರಳದಲ್ಲಿ 3 ಪ್ರಕರಣಗಳು ಪತ್ತೆಯಾಗಿದೆ.

    ನೆರೆ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ವೈರಾಣು ಪತ್ತೆ ಬೆನ್ನಲ್ಲೆ ಸರ್ಕಾರಕ್ಕೆ ತಜ್ಞರು ಎಚ್ಚರಿಕೆ ನೀಡಿದ್ದು, ವೈರಸ್ ಪರಿಣಾಮದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಮ್ಯೂಟೆಂಟ್ ವೇರಿಯೆಂಟ್ ವೈರಸೇ ಡೆಲ್ಟಾ ಪ್ಲಸ್ ವೈರಸ್ ಆಗಿದೆ. ಈಗಾಗಲೇ ಚೀನಾ ಬ್ರಿಟನ್ ಸೇರಿದಂತೆ 9 ದೇಶಗಳಲ್ಲಿ ಡೆಲ್ಟಾ ಪ್ಲಸ್ ವೈರಸ್ ಕಾಡುತ್ತಿದೆ.

    ಸದ್ಯ ಭಾರತದಲ್ಲೂ 3 ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ವೇರಿಯಂಟ್(Delta Plus Variant) ಕಾಟ ಶುರುವಾಗಿದೆ. ಈ ಡೆಲ್ಟಾ ವೇರಿಯಂಟ್ ರೆಸ್ಪರೆಟರಿ ವೇರಿಯಂಟ್ ಅಲ್ಲ, ಬದಲಾಗಿ ಬಹಳ ತೊಂದರೆ ಕೊಡಲಿದೆ. ಹೊಟ್ಟೆ ನೋವು, ವಾಂತಿ, ಬೇಧಿ, ರಕ್ತ ಹೆಪ್ಪುಗಟ್ಟುವುದೇ ಇದರ ಆತಂಕಕಾರಿ ಲಕ್ಷಣವಾಗಿದೆ. ರಕ್ತ ಹೆಪ್ಪುಗಟ್ಟುವುದರಿಂದ ರಕ್ತನಾಳಗಳು ಬಂದ್ ಆಗಲಿವೆ. ಇದರಿಂದ ಗ್ಯಾಂಗ್ರೀನ್ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ ಈ ಹಿಂದಿನ ವೈರಸ್ ಗಿಂತ ಈ ವೈರಸ್ ಎಫೆಕ್ಟ್ 60 ಪಟ್ಟು ಹೆಚ್ಚು ಆಗಿರಲಿದೆ. ಸರ್ಕಾರ ತಕ್ಷಣ ಈ ವೈರಾಣು ತಡೆಗಟ್ಟುವ ಬಗ್ಗೆ ಕ್ರಮಕ್ಕೆ ಮುಂದಾಗಬೇಕು.

    ಡೆಲ್ಟಾ ಪ್ಲಸ್ ಕಂಡು ಬಂದಿರುವ ರಾಜ್ಯದಿಂದ ಬಂದವರಲ್ಲಿ ಸೋಂಕು ಪತ್ತೆಯಾದರೆ ಅವರ ದೇಹದಲ್ಲಿ ಡೆಲ್ಟಾ ವೈರಸ್ ಇರುವಿಕೆ ಬಗ್ಗೆ ಪರೀಕ್ಷೆಗಳನ್ನ ನಡೆಸಬೇಕು. ಜಿನಮ್ಸ್ ಸ್ಟಡಿ ಹೆಚ್ಚಳ ಮಾಡಿ ಕೂಡಲೇ ಡೆಲ್ಟಾ ಪ್ಲಸ್ ರೂಪಾಂತರಿ ಕಂಡು ಬಂದಲ್ಲಿ, ತಪ್ಪದೆ ಹರಡದಂತೆ ತಡೆಹಿಡಿಯಲು ಕ್ರಮಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ತಜ್ಞರ ಸಲಹೆ ನೀಡಿದ್ದಾರೆ.

  • ಮಾಸ್ಕ್ ಧರಿಸುವುದರಿಂದ ಬರುತ್ತೆ ಮಾಸ್ಕ್ ಮೌತ್ ಸಿಂಡ್ರೋಮ್ – ತಡೆಯೋದು ಹೇಗೆ?

    ಮಾಸ್ಕ್ ಧರಿಸುವುದರಿಂದ ಬರುತ್ತೆ ಮಾಸ್ಕ್ ಮೌತ್ ಸಿಂಡ್ರೋಮ್ – ತಡೆಯೋದು ಹೇಗೆ?

    – ಯಾರಿಗೆ ಬರುತ್ತೆ ಈ ಸಿಂಡ್ರೋಮ್?
    – ಗಂಟೆಗೊಮ್ಮೆ 5 ನಿಮಿಷ ವಿರಾಮ ತೆಗೆದುಕೊಳ್ಳಿ

    ಕೊಚ್ಚಿ: ಮಾಸ್ಕ್ ಬಳಕೆ ಇತ್ತೀಚೆಗೆ ಜೀವನದ ಭಾಗವಾಗಿ ಹೋಗಿದೆ. ಕೊರೊನಾ ತಡೆಯುವಲ್ಲಿ ಮಾಸ್ಕ್ ಅಗತ್ಯ ಎಂದು ತಜ್ಞರು ಸಹ ತಿಳಿಸಿದ್ದಾರೆ. ಇದೆಲ್ಲದ ಮಧ್ಯೆ ಇದೀಗ ಮಾಸ್ಕ್ ಹಾಕುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ಸಹ ತಜ್ಞರು ತಿಳಿಸಿದ್ದಾರೆ. ಹೆಚ್ಚು ಕಾಲ ಮಾಸ್ಕ್ ಧರಿಸುವುದರಿಂದ ಮಾಸ್ಕ್ ಮೌತ್ ಸಿಂಡ್ರೋಮ್ ಬರುತ್ತದೆ ಎಂದು ಎಚ್ಚರಿಸಿದ್ದಾರೆ.

    ದೀರ್ಘ ಕಾಲ ಮಾಸ್ಕ್ ಬಳಸುವುದರಿಂದ ದುರ್ವಾಸನೆಯುಂಟಾಗುತ್ತದೆ, ಬಾಯಿ ಒಣಗುತ್ತದೆ, ತಲೆ ನೋವಿನ ಸಮಸ್ಯೆ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಬಳಕೆದಾರರು ಸ್ವಲ್ಪ ಕಾಳಜಿ ವಹಿಸಿದರೆ ಈ ಸಮಸ್ಯೆಗಳು ಬೇಗ ಕಾಡುವುದಿಲ್ಲ ಎಂದಿದ್ದಾರೆ.

    ಪ್ರಸ್ತುತ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಇತರರೊಂದಿಗೆ ಮಾತನಾಡುವಾಗ ಮಾಸ್ಕ್ ಕಡ್ಡಾಯವಾಗಿದೆ. ಆದರೆ ಫೇಸ್ ಮಾಸ್ಕ್ ಗಳನ್ನು 8-10 ಗಂಟೆಗಳ ಕಾಲ ಧರಿಸುವ ಅನೇಕರು ಕೆಟ್ಟ ವಾಸನೆ ಹಾಗೂ ಬಾಯಿ ಒಣಗುವ ಕುರಿತು ದೂರಿದ್ದಾರೆ. ಈ ಸಮಸ್ಯೆಗಳನ್ನು ‘ಮಾಸ್ಕ್ ಮೌತ್ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ. ಸಾರ್ವಜನಿಕರಲ್ಲಿ ಶೇ.20ಕ್ಕೂ ಹೆಚ್ಚು ಜನ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ದಂತ ವೈದ್ಯರು ಹೇಳಿದ್ದಾರೆ.

    ಮಾಸ್ಕ್ ಧರಿಸುವುದರಿಂದ ಕಿವಿ ನೋವು, ತಲೆ ನೋವು ಹಾಗೂ ಉಸಿರಾಡಲು ಕಷ್ಟವಾಗುವುದು ಹಾಗೂ ದಂತ ಸಮಸ್ಯೆಗಳು ಸಾಮಾನ್ಯವಾಗಿವೆ. ಆದರೆ ಮಾಸ್ಕ್ ಗಳು ನಮ್ಮ ದೈನಂದಿನ ಜೀವನದ ಭಾಗವಾಗಿವೆ. ಮಾಸ್ಕ್ ನಿಂದ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗಗಳಿಲ್ಲ. ಸೂಕ್ತ ಕ್ರಮಗಳನ್ನು ವಹಿಸಿದರೆ ಕೆಟ್ಟ ವಾಸನೆ ಹಾಗೂ ಬಾಯಿ ಒಣಗುವುದನ್ನು ತಪ್ಪಿಸಬಹುದು ಎಂದು ದಂತವೈದ್ಯ ಡಾ.ಮನೋಜ್ ಚಾಂಡಿ ತಿಳಿಸಿದ್ದಾರೆ.

    ಎಂಟು ಗಂಟೆಗೂ ಅಧಿಕ ಕಾಲ ಮಾಸ್ಕ್ ಧರಿಸಿ ಕೆಲಸ ಮಾಡುವ ಹಲವು ಸ್ನೇಹಿತರು ಹಾಗೂ ಸಂಬಂಧಿಕರು ಕೆಟ್ಟ ವಾಸನೆ ಹಾಗೂ ಬಾಯಿ ಒಣಗುವ ಕುರಿತು ದೂರುತ್ತಿದ್ದಾರೆ. ಇತ್ತೀಚೆಗೆ ನಾನು ನಡೆಸಿದ ಆನ್‍ಲೈನ್ ಅಧ್ಯಯನದ ಪ್ರಕಾರ ಶೇ.16ರಷ್ಟು ಜನ ಕೆಟ್ಟ ವಾಸನೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ ಶೇ.22ರಷ್ಟು ಜನಕ್ಕೆ ಬಾಯಿ ಒಣಗುವ ಅನುಭವವಾಗಿದೆ. ಸುಮಾರು 514 ಜನ ಈ ಪ್ರಶ್ನಾವಳಿಗೆ ಪ್ರತಿಕ್ರಿಯಿಸಿದ್ದಾರೆ. ಅಧ್ಯಯನದಲ್ಲಿ ಭಾಗವಹಿಸಿದವರ ಸಂಖ್ಯೆ ಹೆಚ್ಚಾಗಿದ್ದರೆ, ಸಮಸ್ಯೆ ಎದುರಿಸುತ್ತಿರುವವರ ಶೇಕಡಾವಾರು ಹೆಚ್ಚಾಗುತ್ತಿತ್ತು ಎಂದು ಡಾ.ಮಣಿಕಂಠನ್ ಜಿ.ಆರ್. ತಿಳಿಸಿದ್ದಾರೆ.

    ಸಾಮಾನ್ಯವಾಗಿ ಬಾಯಿಯ ಮೂಲಕ ಉಸಿರಾಡುವ ಜನ ಮತ್ತು ಬಾಯಿಯ ಸ್ವಚ್ಛತೆ ಕಾಪಾಡದವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇಂತಹವರಿಗೆ ಒಸಡುಗಳ ಊರಿಯೂತ ಹಾಗೂ ಹಲ್ಲು ನೋವು ಹೆಚ್ಚಾಗುವ ಸಾಧ್ಯತೆ ಇದೆ. ಬಾಯಿಯ ಮೂಲಕ ಉಸಿರಾಡುವುದರಿಂದ ಒಸಡುಗಳು ಒಣಗಬಹುದು. ಒಣ ಬಾಯಿಯ ಸಂದರ್ಭದಲ್ಲಿ ಲಾಲಾರಸ ಕಡಿಮೆಯಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾ ಹೆಚ್ಚಾಗಿ ಬಾಯಿಯ ಸಮಸ್ಯೆಗಳು ಉಂಟಾಗುತ್ತವೆ. ಮಾಸ್ಕ್ ಹಾಕಿದಾಗ ಕೆಲವರು ತಮಗೆ ಅರಿವಾಗದಂತೆ ಬಾಯಿಯ ಮೂಲಕ ಉಸಿರಾಡುತ್ತಾರೆ. ಇದು ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಡಾ.ಮಣಿಕಂಠನ್ ಅಭಿಪ್ರಾಯಪಟ್ಟಿದ್ದಾರೆ.

    ಸಮಸ್ಯೆಗೆ ಪರಿಹಾರವೇನು?
    ಅಂಗಡಿಗಳಲ್ಲಿ ಕೆಲಸ ಮಾಡುವವರು, ಖಾಸಗಿ ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಮಾತ್ರವಲ್ಲ ಆರೋಗ್ಯ ವಲಯದಲ್ಲಿ ಕೆಲಸ ಮಾಡುವವರು ಸಹ ಬಾಯಿಯ ಸಮಸ್ಯೆ ಕುರಿತು ದೂರುತ್ತಿದ್ದಾರೆ. ದೈನಂದಿನ ಆಹಾರ ಕ್ರಮದಲ್ಲಿ ಸಂಸ್ಕರಿಸಿದ ಆಹಾರಕ್ಕಿಂತ ಹೈಡ್ರೆಟೆಡ್ ಹಾಗೂ ಫೈಬರ್‍ಯುಕ್ತ ಆಹಾರ ಸೇವಿಸುವುದರಿಂದ ಸಮಸ್ಯೆಯಿಂದ ದೂರವಿರಬಹುದಾಗಿದೆ. ಅಲ್ಲದೆ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರು ಒಂದು ಗಂಟೆಗೊಮ್ಮೆ ಮಾಸ್ಕ್ ತೆಗೆದು 5 ನಿಮಿಷಗಳ ವಿರಾಮ ತೆಗೆದುಕೊಳ್ಳಬಹುದು. ಒಬ್ಬರೇ ಇದ್ದಾಗ ಮಾತ್ರ ಈ ರೀತಿ ಮಾಡಬೇಕು ಎಂದು ಡಾ.ಮನೋಜ್ ಸಲಹೆ ನೀಡಿದ್ದಾರೆ.

  • ಐಎಂಎ ಬಳಿಕ ಭಾರತದಲ್ಲಿ ಕೊರೊನಾ ಸಮುದಾಯಕ್ಕೆ ಹಬ್ಬಿದೆ ಎಂದ ಮತ್ತೊಬ್ಬ ತಜ್ಞ

    ಐಎಂಎ ಬಳಿಕ ಭಾರತದಲ್ಲಿ ಕೊರೊನಾ ಸಮುದಾಯಕ್ಕೆ ಹಬ್ಬಿದೆ ಎಂದ ಮತ್ತೊಬ್ಬ ತಜ್ಞ

    ನವದೆಹಲಿ: ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ) ದೇಶದಲ್ಲಿ ಕೊರೊನಾ ಸಮುದಾಯ ಮಟ್ಟಕ್ಕೆ ಹಬ್ಬಿದೆ ಎಂದು ಎಚ್ಚರಿಸಿದ ಬೆನ್ನಲ್ಲೇ ಇದೀಗ ಸರ್ ಗಂಗಾರಾಮ್ ಆಸ್ಪತ್ರೆಯ ತಜ್ಞರೊಬ್ಬರು ಸಮುದಾಯಕ್ಕೆ ಹಬ್ಬಿರುವ ಕುರಿತು ತಿಳಿಸಿದ್ದಾರೆ.

    ಐಎಂಎ ವರದಿ ಬಳಿಕ ಈ ಕುರಿತು ಪ್ರತಿಕ್ರಿಯಿಸಿರುವ ಸರ್ ಗಂಗಾರಾಮ್ ಆಸ್ಪತ್ರೆಯ ಚೆಸ್ಟ್ ಸರ್ಜರಿ ಕೇಂದ್ರದ ಅಧ್ಯಕ್ಷ ಡಾ.ಅರವಿಂದ್ ಕುಮಾರ್, ಆರಂಭದಲ್ಲಿ ಸಮುದಾಯ ಹರಡುವಿಕೆ ಧಾರಾವಿ ಹಾಗೂ ದೆಹಲಿಯ ಹಲವು ಭಾಗಗಳಲ್ಲಿ ಅಂದರೆ ಸ್ಥಳೀಯ ಮಟ್ಟದಲ್ಲಿ ಮಾತ್ರ ಇತ್ತು. ಆದರೆ ಇದೀಗ ಅದು ಎಲ್ಲೆಡೆ ವ್ಯಾಪಿಸಿದೆ ಎಂದು ಹೇಳಿದ್ದಾರೆ.

    ಭಾರತದಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ ಎಂಬ ಐಎಂಎ ವರದಿಯನ್ನು ನಾನು ಶೇ.100ರಷ್ಟು ಒಪ್ಪುತ್ತೇನೆ. ಅಲ್ಲದೆ ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ನೋಡಿದರೆ ಇದು ಆಶ್ಚರ್ಯವೂ ಅಲ್ಲ. ಎಲ್ಲರೂ ಕಣ್ಣಾರೆ ನೋಡುತ್ತಿರುವುದನ್ನು ಐಎಂಎ ಬಹಿರಂಗವಾಗಿ ಹೇಳಿದೆ. ದೇಶದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದು ಮಾರಣಾಂತಿಕ ವೈರಸ್ ಸಮುದಾಯಕ್ಕೆ ಹರಡಿರುವ ಕುರಿತ ಫಲಿತಾಂಶವಾಗಿದೆ ಎಂದು ಅರವಿಂದ್ ಕುಮಾರ್ ತಿಳಿಸಿದ್ದಾರೆ.

    ಅಲ್ಲದೆ ಐಎಂಎ ಆಸ್ಪತ್ರೆಗಳ ಮಂಡಳಿಯ ಅಧ್ಯಕ್ಷ ಡಾ.ವಿ.ಕೆ.ಮೊಂಗಾ ಅವರು ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿ, ಇದೀಗ ಕೊರೊನಾ ಭಾರೀ ಪ್ರಮಾಣದಲ್ಲಿ ಬೆಳೆದಿದೆ. ಪ್ರತಿ ದಿನ ಸುಮಾರು 30 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ನಿಜವಾಗಿಯೂ ರಾಷ್ಟ್ರಕ್ಕೆ ಇದು ಕೆಟ್ಟ ಪರಿಸ್ಥಿತಿಯಾಗಿದೆ. ಗ್ರಾಮೀಣ ಪ್ರದೇಶಗಳಿಗೂ ಸೋಂಕು ಹಬ್ಬುತ್ತಿದೆ. ಇದು ಕೆಟ್ಟ ಸಂಕೇತ, ಇದೀಗ ಸಮುದಾಯಕ್ಕೆ ಹಬ್ಬಿರುವುದನ್ನು ಇದು ತೋರಿಸುತ್ತಿದೆ ಎಂದು ಡಾ.ಮೊಂಗಾ ಕಳವಳ ವ್ಯಕ್ತಪಡಿಸಿದ್ದಾರೆ.

    ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 38902 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10.77 ಲಕ್ಷಕ್ಕೆ ಏರಿಕೆಯಾಗಿದೆ. ಇದರಲ್ಲಿ 677422 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 373379 ಸಕ್ರಿಯ ಪ್ರಕರಣಗಳಿವೆ. ಅಲ್ಲದೆ ಕೊರೊನಾಗೆ ಸಂಬಂಧಿಸಿದ 543 ಜನ ಸೇರಿ ಒಟ್ಟು 26816 ಜನ ಕಳೆದ 24 ಗಂಟೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಪಷ್ಟಪಡಿಸಿದೆ.

  • ಬೆಂಗಳೂರಿಗೆ ಪ್ರತ್ಯೇಕ ಅಸ್ತ್ರ ಬಳಸ್ತಾರಾ ಸಿಎಂ ಯಡಿಯೂರಪ್ಪ?

    ಬೆಂಗಳೂರಿಗೆ ಪ್ರತ್ಯೇಕ ಅಸ್ತ್ರ ಬಳಸ್ತಾರಾ ಸಿಎಂ ಯಡಿಯೂರಪ್ಪ?

    – ತಜ್ಞರಿಂದ ಇಂದು ಸಿಎಂಗೆ 2 ವರದಿ

    ಬೆಂಗಳೂರು: ಲಾಕ್‍ಡೌನ್ ವಿಚಾರದಲ್ಲಿ ರಾಜ್ಯ ಸರ್ಕಾರ ಪದೇಪದೇ ಎಡವುತ್ತಿದೆ. ತಜ್ಞರು ಕೆಲವೊಂದು ಸಲಹೆಗಳನ್ನು ಸಿಎಂಗೆ ನೀಡಿದ್ದಾರಾದರೂ ಅಷ್ಟಾಗಿ ಸಕ್ಸಸ್ ಆಗಿರಲಿಲ್ಲ. ಈಗ ಮತ್ತೆ ತಜ್ಞರಿಗೆ ವರದಿ ನೀಡುವಂತೆ ಸರ್ಕಾರ ಕೇಳಿದ್ದು ಇಂದು ತಜ್ಞರು ಏನೇನೆಲ್ಲಾ ವರದಿ ನೀಡಬಹುದು ಎಂಬುದು ಕುತೂಹಲ ಮೂಡಿಸಿದೆ.

    ಹೌದು. ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ತಜ್ಞರು ಪದೇ ಪದೇ ಮುಖ್ಯಮಂತ್ರಿಯನ್ನು ಭೇಟಿಯಾಗಿ ಚರ್ಚೆ ನಡೆಸ್ತಿದ್ದಾರೆ. ಇನ್ನೂ 15 ದಿನ ಕೊರೊನಾ ಕಂಟಕ ಇದೆ. ಇದನ್ನು ತಡೆಯೋ ಸಂಬಂಂಧ ಹಲವು ಶಿಫಾರಸುಗಳನ್ನು ಕೊರೊನಾ ತಜ್ಞರ ತಂಡ ಮಾಡಿತ್ತು. ಆದರೆ ಎಲ್ಲವನ್ನು ಕೇಳಿಸಿಕೊಂಡ ಸಿಎಂ ನೋಡೋಣ ನೋಡೋಣ.. ಆಲ್ ಈಸ್ ವೆಲ್ ಎಂದು ಹೇಳಿ ಕಳಿಸಿದ್ದರು. ಈಗ ಮತ್ತೆ ತಜ್ಞರಿಗೆ ವರದಿ ನೀಡುವಂತೆ ಸರ್ಕಾರ ಸೂಚಿಸಿದ್ದು ಇಂದು ತಜ್ಞರ ತಂಡದಿಂದ ಮತ್ತೊಂದು ವರದಿ ಬರಲಿದೆ.

    ಕೊರೊನಾ ಪರಿಸ್ಥಿತಿ, ನಿಯಂತ್ರಣದ ಬಗ್ಗೆ ತಜ್ಞರ ಸಮಿತಿ ಇಂದು ಸಿಎಂ ಯಡಿಯೂರಪ್ಪಗೆ ಇನ್ನೊಂದು ವರದಿ ನೀಡಲಿದೆ. ಮೊನ್ನೆ ತಾನೆ ವರದಿ ನೀಡುವಂತೆ ತಜ್ಞರಿಗೆ ಸೂಚಿಸಲಾಗಿತ್ತು. ಈಗ ತಜ್ಞರ ಸಮಿತಿ ಒಟ್ಟು ಎರಡು ವರದಿ ನೀಡಲಿದ್ದು, ಬೆಂಗಳೂರಿಗೆ ಪ್ರತ್ಯೇಕ ವರದಿ ತಯಾರಿಸಲಾಗಿದೆ. ತಜ್ಞರ ಸಮಿತಿ ವರದಿ ನೋಡಿಕೊಂಡು ಶನಿವಾರವೂ ಲಾಕ್ ಡೌನ್ ಬಗ್ಗೆ ನಿರ್ಧಾರ ಸಾಧ್ಯತೆ ಇದೆ ಎನ್ನಲಾಗಿದೆ.

    ಎರಡು ವಾರ ಭಾನುವಾರ ಕರ್ಫ್ಯೂ ನೋಡಿ ಬಳಿಕ ಶನಿವಾರದ ಲಾಕ್ ಡೌನ್ ಬಗ್ಗೆ ಚಿಂತಿಸೋಣ ಎಂದು ಮಾತ್ರ ವರದಿ ನೀಡಿದರೆ ಬಚಾವ್. ಇಲ್ಲದಿದ್ರೆ ಶನಿವಾರಕ್ಕೂ ಕರ್ಫ್ಯೂ ವ್ಯಾಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ಲಾಕ್‌ಡೌನ್‌ ಮಾಡಲು ಸಾಧ್ಯವೇ ಇಲ್ಲ – ತಜ್ಞರ ಸಲಹೆಗೆ ಸಿಎಂ ಹೇಳಿದ್ದೇನು? ಇನ್‌ಸೈಡ್‌ ಸುದ್ದಿ

    ತಜ್ಞರ ವರದಿಯಲ್ಲಿ ಏನಿರಬಹುದು..?
    ಬೆಂಗಳೂರಿಗೆ ಅಂತರ್ ಜಿಲ್ಲೆಯ ವಾಹನ ಓಡಾಟ ನಿರ್ಬಂಧಕ್ಕೆ ಶಿಫಾರಸು ಮಾಡಬಹುದು. ಕನಿಷ್ಠ 15 ದಿನಗಳ ಕಾಲ ನಿರ್ಬಂಧಕ್ಕೆ ಸಲಹೆ ಕೊಡಬಹುದು. ಬೆಂಗಳೂರಿನಲ್ಲಿ ಭಾನುವಾರದ ಜತೆಗೆ ಶನಿವಾರವೂ ಲಾಕ್‍ಡೌನ್ ಮಾಡಿ ಎನ್ನಬಹುದು. ಅಂತಾರಾಜ್ಯ ಸಂಚಾರಕ್ಕೆ 15 ದಿನಗಳ ಕಾಲ ನಿರ್ಬಂಧಕ್ಕೆ ಸಲಹೆ ನೀಡಬಹುದು. ಬೆಂಗಳೂರಿನಲ್ಲಿ ಏರಿಯಾಗಳ ಬಂಚ್ ಸೀಲ್‍ಡೌನ್ ಮಾಡಿ ಎಂದು ಸಲಹೆ ಕೊಡಬಹುದು. ಸೋಂಕು ಹೆಚ್ಚಿರುವ ಏರಿಯಾಗಳಲ್ಲಿ ಕಡ್ಡಾಯವಾಗಿ ರ‌್ಯಾಂಡಮ್ ಟೆಸ್ಟ್ ಗೆ ಹೇಳಬಹುದು.

    ಒಟ್ಟಿನಲ್ಲಿ ತಜ್ಞರ ವರದಿ ಏನು ಬರಬಹುದು ಎಂದು ಜನ ತಲೆಕೆಡಿಸಿಕೊಂಡಿದ್ದು ಇಂದಿನ ವರದಿ ಮೇಲೆ ಬೆಂಗಳೂರಿನ ಮುಂದಿನ ದಿನಗಳ ಬಗ್ಗೆ ನಿರ್ಧಾರವಾಗಲಿದೆ.

  • ತಜ್ಞರ ಸಲಹೆ ಪಾಲಿಸಿ ಧೈರ್ಯವಾಗಿ ಬರೆಯಿರಿ ಪರೀಕ್ಷೆ- ಭಯಬೇಡ ವಿದ್ಯಾರ್ಥಿಗಳೇ ಆಲ್‍ದಿ ಬೆಸ್ಟ್

    ತಜ್ಞರ ಸಲಹೆ ಪಾಲಿಸಿ ಧೈರ್ಯವಾಗಿ ಬರೆಯಿರಿ ಪರೀಕ್ಷೆ- ಭಯಬೇಡ ವಿದ್ಯಾರ್ಥಿಗಳೇ ಆಲ್‍ದಿ ಬೆಸ್ಟ್

    ಬೆಂಗಳೂರು: ನಾಳೆಯಿಂದ ಹತ್ತನೇ ತರಗತಿ ಪರೀಕ್ಷೆ ನಡೆಯಲಿದೆ. ಕೊರೊನಾ ವೈರಸ್ ಭಯದ ನಡುವೆಯೇ ಎಕ್ಸಾಂ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಈ ಸಲಹೆಗಳನ್ನು ಪಾಲಿಸಿಕೊಂಡು ಮಕ್ಕಳು ಧೈರ್ಯವಾಗಿ ಪರೀಕ್ಷೆ ಬರೆಯಿರಿ.

    ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮುನ್ನ ಯಾವೆಲ್ಲ ಮುಂಜಾಗ್ರತೆ ವಹಿಸಬೇಕು ಎಂಬುದನ್ನು ನುರಿತ ತಜ್ಞರು ವಿವರಿಸಿದ್ದಾರೆ. ತಜ್ಞರ ಸಲಹೆ ಪಾಲಿಸಿದ್ರೆ ಕೊರೊನಾ ಆತಂಕ ಮಾಯವಾಗಬಹುದು.

    ತಜ್ಞರು ಕೊಟ್ಟಿರುವ ಸಲಹೆ ಏನು..?
    ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಹೊರಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು. ವಿದ್ಯಾರ್ಥಿಗಳು ಸ್ನೇಹಿತರ ಜೊತೆ ಗುಂಪು ಗುಂಪು ಚರ್ಚೆಯಲ್ಲಿ ತೊಡಗಿಸಿಕೊಳ್ಳಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಧ್ಯವಾದಷ್ಟು ಬೇಗ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ. ಆರೋಗ್ಯ ತಪಾಸಣೆ ಮಾಡಿಸಿಕೊಂಡು ನಿಮ್ಮ ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ಕುಳಿತುಕೊಳ್ಳಿ.

    ಮಾಸ್ಕ್ ಧರಿಸಿ ಪರೀಕ್ಷೆ ಬರೆಯೋದು ಕಿರಿಕಿರಿ ಎನಿಸಿದಲ್ಲಿ ಆಗಾಗ ಮಾಸ್ಕ್ ತೆಗೆಯಿರಿ. ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಂದಲೇ ಕುಡಿಯುವ ನೀರು ತೆಗೆದುಕೊಂಡು ಹೋಗುವುದು ಉತ್ತಮ. ವಿದ್ಯಾರ್ಥಿಗಳೇ ಸಾಧ್ಯವಾದರೆ ನಿಮ್ಮ ಬಳಿ ಸ್ಯಾನಿಟೈಸರ್ ಇಟ್ಟುಕೊಳ್ಳಿ. ಆಗಾಗ ಸ್ಯಾನಿಟೈಸರ್ ಬಳಕೆ ಮಾಡಿಕೊಳ್ಳಿ.

    ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಪರೀಕ್ಷಾ ಸಿಬ್ಬಂದಿಗೆ ತಿಳಿಸಿ. ಅಲ್ಲದೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಿರಿ. ಪರೀಕ್ಷೆ ಮುಗಿದ ನಂತರವೂ ಗುಂಪು ಗುಂಪಾಗಿ ಹೊರಗೆ ಬರಬೇಡಿ. ಸಾಮಾಜಿಕ ಅಂತರ ಪಾಲನೆ ಮಾಡಿ. ಪರೀಕ್ಷಾ ಹಿಂದಿನ ದಿನ ಮಿತವಾದ ಊಟ ಮಾಡಿ. ಕಣ್ಣು ತುಂಬಾ ನಿದ್ರೆ ಮಾಡಿ. ಸ್ಪೈಸಿ ಪದಾರ್ಥಗಳನ್ನ ಎಕ್ಸಾಂ ಮುಗಿಯೋವರೆಗೂ ತಿನ್ನೊದನ್ನು ಕಡಿಮೆ ಮಾಡಿಕೊಳ್ಳಿ. ಪರೀಕ್ಷಾ ಕೇಂದ್ರಕ್ಕೆ ಬರೋವಾಗ ಸಾರಿಗೆ ವ್ಯವಸ್ಥೆ ಬಗ್ಗೆ ಜಾಗೃತರಾಗಿರಿ.

    ಸಾಧ್ಯವಾದಷ್ಟು ತಮ್ಮ ತಮ್ಮ ಖಾಸಗಿ ವಾಹನಗಳನ್ನು ಉಪಯೋಗಿಸಿ. ಸಾಮೂಹಿಕ ಸಾರಿಗೆ ಉಪಯೋಗ ಮಾಡೋರು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಮನೆಯಲ್ಲಿ ಸೋಂಕಿತರಿದ್ದರೆ, ಕ್ವಾರೈಂಟೇನ್‍ನಲ್ಲಿದ್ದರೆ ಕೂಡಲೇ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿ. ಪರೀಕ್ಷೆ ಬರೆಯದ ಪರಿಸ್ಥಿತಿ ಇದ್ದರೆ ಚಿಂತೆ ಬೇಡ. ಪೂರಕ ಪರೀಕ್ಷೆಯಲ್ಲಿ ನಿಮಗೆ ಅವಕಾಶ ಸಿಗುತ್ತೆ.

    ಪರೀಕ್ಷೆ ಆತಂಕದಿಂದ ವಿದ್ಯಾರ್ಥಿಗಳು ಕೆಟ್ಟ ನಿರ್ಧಾರಗಳನ್ನು ಮಾಡೋದು ಬೇಡ. ಈ ಪರೀಕ್ಷೆ ಬರೆಯದೇ ಹೋದ್ರು ಚಿಂತೆ ಇಲ್ಲ. ಇನ್ನೊಂದು ಪರೀಕ್ಷೆ ಬರೆಯಬಹುದು. ಪರೀಕ್ಷಾ ಕೇಂದ್ರದಲ್ಲಿ ವ್ಯವಸ್ಥೆ ಸರಿ ಇಲ್ಲದೆ ಹೋದ್ರೆ ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿ.

    ಒಟ್ಟಿನಲ್ಲಿ ಕೊರೊನಾ ಭೀಕರತೆಯ ಮಧ್ಯೆಯೂ ಸರ್ಕಾರ ಪರೀಕ್ಷೆ ನಡೆಸಲು ತೀರ್ಮಾನ ಮಾಡಿದ್ದು, ಮಕ್ಕಳು ಧೈರ್ಯದಿಂದ ಪರೀಕ್ಷೆ ಬರೆಯಿರಿ ಅನ್ನೊದೇ ಎಲ್ಲರ ಆಶಯ.

  • ಮತ್ತೆ ಲಾಕ್‍ಡೌನ್ ಗೊಂದಲಕ್ಕೆ ಸಚಿವ ಅಶೋಕ್ ಸ್ಪಷ್ಟನೆ

    ಮತ್ತೆ ಲಾಕ್‍ಡೌನ್ ಗೊಂದಲಕ್ಕೆ ಸಚಿವ ಅಶೋಕ್ ಸ್ಪಷ್ಟನೆ

    – ಕೇಂದ್ರ ಸರ್ಕಾರದ ನಿರ್ದೇಶನ ಇಲ್ಲದೆ ಲಾಕ್‍ಡೌನ್ ಮಾಡಲ್ಲ

    ಬೆಂಗಳೂರು: ಲಾಕ್‍ಡೌನ್ ಬೇಕು ಅಂದಾಗ ಹಾಕೋದು, ಬೇಡ ಅಂದಾಗ ಬಿಡೋದು ಮಾಡಲ್ಲ. ತಜ್ಞರ ಜೊತೆ ಚರ್ಚೆ ನಡಿಯುತ್ತಿದೆ. ನುರಿತ ತಜ್ಞರ ಅಭಿಪ್ರಾಯದ ಮೇಲೆ ಸರ್ಕಾರ ಕ್ರಮಕೈಗೊಳ್ಳುತ್ತೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ್, ರಾಜ್ಯ ಸರ್ಕಾರದ ನೀತಿ-ನಿಯಮಗಳಿವೆ. ಅಲ್ಲದೇ ಕೇಂದ್ರ ಸರ್ಕಾರ ಮಿನಿಟ್ ಟು ಮಿನಿಟ್ ರಾಜ್ಯ ಸರ್ಕಾರದ ಕಾರ್ಯ ವೈಖರಿಯನ್ನು ಫಾಲೋ ಮಾಡುತ್ತಿದೆ. ಜೊತೆಗೆ ಅಲ್ಲಿಂದ ನಿರ್ದೇಶನ ಕೂಡ ಬರುತ್ತಿದೆ. ಇದಕ್ಕೆ ಎಂದು ಒಂದು ನುರಿತ ತಜ್ಞರ ಸಮಿತಿ ಇದೆ. ಆ ಸಮಿತಿಯಲ್ಲಿ ವೈದ್ಯರು, ಐಎಎಸ್ ಅಧಿಕಾರಿಗಳು, ಪೊಲೀಸರು, ಮಂತ್ರಿಗಳು ಇದ್ದಾರೆ. ಪ್ರತಿದಿನ ನಾವು, ಹಿರಿಯ ಸಚಿವರು ಸಿಎಂ ಯಡಿಯೂರಪ್ಪ ಮನೆಯಲ್ಲಿ ಸಭೆ ಮಾಡುತ್ತಿದ್ದೇವೆ ಎಂದು ತಿಳಿದರು.

    ಲಾಕ್‍ಡೌನ್ ಬೇಕು ಅಂದಾಗ ಹಾಕೋದು, ಬೇಡ ಅಂದಾಗ ಬಿಡೋದು ಮಾಡಲ್ಲ. ತಜ್ಞರ ಜೊತೆ ಚರ್ಚೆ ನಡಿಯುತ್ತಿದೆ. ನಂತರ ಸಭೆಗಳನ್ನ ಮಾಡುತ್ತೇವೆ. ಜೊತೆಗೆ ಕೇಂದ್ರ ಸರ್ಕಾರದ ನಿರ್ದೇಶನ ಇಲ್ಲದೆ ರಾಜ್ಯ ಸರ್ಕಾರ ಲಾಕ್‍ಡೌನ್ ಮಾಡಲ್ಲ. ನುರಿತ ತಜ್ಞರ ಅಭಿಪ್ರಾಯದ ಮೇಲೆ ಸರ್ಕಾರ ಕ್ರಮಕೈಗೊಳ್ಳುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

    ವಾರ್ಡ್ ಆಧಾರದ ಮೇಲೆ ಸೀಲ್‍ಡೌನ್ ಮಾಡಬೇಕಾ? ವಿಧಾನಸಭೆ ಆಧಾರದ ಮೇಲೆ ಸೀಲ್‍ಡೌನ್ ಮಾಡಬೇಕಾ? ಎಂಬುದನ್ನು ಚರ್ಚೆ ಮಾಡುತ್ತಿದ್ದೇವೆ. ಸದ್ಯಕ್ಕೆ ತಜ್ಞರ ವರದಿ ಆಧಾರದ ಮೇಲೆ ನಿರ್ಧಾರ ಮಾಡುತ್ತೇವೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ. ಸಭೆಯಲ್ಲಿ ಏರಿಯಾ ಲಾಕ್‍ಡೌನ್ ವಿಚಾರವಾಗಿಯೂ ಚರ್ಚೆ ಮಾಡುತ್ತೇವೆ ಎಂದರು.

    ಈಗಾಗಲೇ ನಗರದ ಕೆಲ ಭಾಗಗಳಲ್ಲಿ ಕಠಿಣ ಕ್ರಮವನ್ನ ಸರ್ಕಾರ ತೆಗೆದುಕೊಂಡಿದೆ. ಜನರಿಗೆ ಅನುಕೂಲವಾಗುವ ನಿರ್ಧಾರವನ್ನ ಸರ್ಕಾರ ತೆಗೆದುಕೊಳ್ಳಲಿದೆ. ಒಂದು ವೇಳೆ ಈ ಕೊರೊನಾ ಸೋಂಕು ಕಡಿಮೆಯಾಗದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನಮಗೆ ಜನರ ಆರೋಗ್ಯ ಮತ್ತು ಜೀವ ಮುಖ್ಯ. ಹೀಗಾಗಿ ಮುಂದೆ ಕಠಿಣ ಕ್ರಮತೆಗೆದುಕೊಳ್ಳಬೇಕಾಗುತ್ತದೆ. ಸದ್ಯಕ್ಕೆ ಈಗ ತಜ್ಞರ ವರದಿ ಬರಬೇಕಿದೆ ಎಂದು ಆರ್.ಅಶೋಕ್ ಹೇಳಿದರು.

    ಈಗಾಗಲೇ ಪೊಲೀಸ್ ಇಲಾಖೆಗೂ ಆದೇಶ ನೀಡಲಾಗಿದೆ. ಕ್ವಾರಂಟೈನ್ ಆದ ವ್ಯಕ್ತಿಗಳು ಮೊಬೈಲ್ ಮನೆಯಲ್ಲೇ ಬಿಟ್ಟು ಓಡಾಡುತ್ತಿದ್ದಾರೆ. ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಅಶೋಕ್ ಹೇಳಿದರು.

    ರೋಗಿಯನ್ನ ನಡು ರಸ್ತೆಯಲ್ಲಿ ನಿಲ್ಲಿಸಿ ಬೆಡ್ ಇಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಬೆಡ್ ಇಲ್ಲ ಅಂತ ಹೇಳುವ ಸಮಸ್ಯೆ ಬರಬಾರದು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್ ಇಲ್ಲದಿರುವ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಬೆಂಗಳೂರಲ್ಲಿ 2 ಸಾವಿರ ಬೆಡ್ ಇವೆ. ಸರ್ಕಾರದಿಂದ ರೆಫರ್ ಆಗಿ ಹೋಗುವ ರೋಗಿಗಳಿಗೆ ಚಿಕಿತ್ಸೆ ಕೊಡಬೇಕು. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಮಾಡುತ್ತೇವೆ. ಖಾಸಗಿ ಆಸ್ಪತ್ರೆಗಳಲ್ಲಿಯೂ ನಿಗದಿತ ದರದೊಂದಿಗೆ ಚಿಕಿತ್ಸೆ ನೀಡುವ ಬಗ್ಗೆ ಈಗಾಗಲೇ ಆದೇಶ ಹೊರಡಿಸಿದ್ದೇವೆ ಎಂದರು.

  • ಕೊರೊನಾ ಶೀಘ್ರ ಗುಣಮುಖಕ್ಕೆ ಸೂರ್ಯರಶ್ಮಿಗೆ ಮೈ ಒಡ್ಡಿ: ತಜ್ಞರ ಅಭಿಪ್ರಾಯ

    ಕೊರೊನಾ ಶೀಘ್ರ ಗುಣಮುಖಕ್ಕೆ ಸೂರ್ಯರಶ್ಮಿಗೆ ಮೈ ಒಡ್ಡಿ: ತಜ್ಞರ ಅಭಿಪ್ರಾಯ

    – ಕೊರೊನಾ ವಿರುದ್ಧ ಹೋರಾಟಲು ದೇಹಕ್ಕೆ ವಿಟಮಿನ್ ಡಿ ಅತ್ಯಗತ್ಯ
    – ಬೆಳ್ಳಂಬೆಳಗ್ಗೆ ಸೂರ್ಯನ ದರ್ಶನದಿಂದ ದೇಹಕ್ಕೆ ವಿಟಮಿನ್ ಡಿ ಲಭ್ಯ

    ಬೆಂಗಳೂರು: ವಿಶ್ವವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ಹಲವು ತಜ್ಞರು ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇತ್ತ ಕೊರೊನಾ ದಿನದಿಂದ ದಿನಕ್ಕೆ ತನ್ನ ಕಬಂಧಬಾಹುಗಳನ್ನು ಚಾಚಿಕೊಳ್ಳುತ್ತಿರುವುದು ಬಹುದೊಡ್ಡ ಸವಾಲಾಗಿದೆ. ಲಾಕ್‍ಡೌನ್, ಸಾಮಾಜಿಕ ಅಂತರ, ಶುಚಿತ್ವ ಕುರಿತು ಜಾಗೃತಿ ಮೂಡಿಸಿದರು ಕೊರೊನಾ ನಿಯಂತ್ರಣ ಮಾತ್ರ ಕಷ್ಟಸಾಧ್ಯವಾಗಿದೆ. ಕೊರೊನಾ ಸೋಂಕಿಗೆ ತುತ್ತಾಗಿರುವವರಿಗೆ ಚಿಕಿತ್ಸೆ ನೀಡುವುದು ಕೂಡ ವೈದ್ಯ ಲೋಕಕ್ಕೆ ಸವಾಲಾಗಿದೆ. ಪರಿಣಾಮ ಮಾನವನ ದೇಹದಲ್ಲಿನ ರೋಗ ನಿರೋಧ ಶಕ್ತಿ ಹೆಚ್ಚಿಸುವ ಮೂಲಕ ಕೊರೊನಾ ವಿರುದ್ಧ ಹೋರಾಟ ನಡೆಸಲು ತಜ್ಞರು ಸಲಹೆ ನೀಡಿದ್ದಾರೆ.

    ಕೊರೊನಾ ಸೋಂಕು ವ್ಯಕ್ತಿಯ ದೇಹಕ್ಕೆ ಪ್ರವೇಶಿಸುತ್ತಿದಂತೆ ಆತನ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಈ ಹಿನ್ನೆಲೆಯಲ್ಲಿ ಕೊರೊನಾದಿಂದ ಗುಣಮುಖರಾಗಲು ವ್ಯಕ್ತಿಯ ದೇಹಕ್ಕೆ ವಿಟಮಿನ್ ಡಿ ಅಗತ್ಯವಿರುತ್ತದೆ. ವಿಟಮಿನ್ ಡಿ ವ್ಯಕ್ತಿಯ ರೋಗಿ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಾವು ಸೇವಿಸುವ ಮೊಟ್ಟೆ, ಮೀನು, ಮಶ್ರೂಮ್‍ನಲ್ಲಿ ಸಿಗುವ ವಿಟಮಿನ್ ಡಿ ದೇಹಕ್ಕೆ ಸಾಲುವುದಿಲ್ಲ. ಆದ್ದರಿಂದ ಬೆಳಂಬೆಳಗ್ಗೆ ಸೂರ್ಯರಶ್ಮಿಗೆ ಮೈ ಒಡ್ಡುವ ಪರಿಪಾಟ ಬೆಳೆಸಿಕೊಂಡರೆ ಕೊರೊನಾ ವಿರುದ್ಧ ಸಮರ ಸಾರಲು ವಿಟಮಿನ್ ಡಿ ದೇಹಕ್ಕೆ ಲಭ್ಯವಾಗುತ್ತೆ ಎಂಬುವುದು ಬಯೋ ವಿಜ್ಞಾನಿ ದಿವ್ಯಾ ಚಂದ್ರಧರ್ ಅವರ ಅಭಿಪ್ರಾಯವಾಗಿದೆ.

    ಕೊರೊನಾ ವೈರಸ್‍ನಿಂದ ದೂರ ಉಳಿಯಲು ಸೂರ್ಯನ ದರ್ಶನ ಮಾಡಿದರೆ ಉತ್ತಮ. ಕೊರೊನಾ ವೈರಸ್ ಪ್ರಭಾವವನ್ನು ಕಡಿಮೆಗೊಳಿಸುವ ಅದ್ಭುತ ಶಕ್ತಿ ಸೂರ್ಯ ಕಿರಣದಲ್ಲಿದೆ. ನಿತ್ಯ ಹದಿನೈದು ನಿಮಿಷ ಸೂರ್ಯನ ಎದುರು ನಿಂತರೆ ಸಾಕು ವ್ಯಕ್ತಿಯ ದೇಹ ಕೊರೊನಾ ವಿರುದ್ಧ ಸಮರ ಸಾರಲು ಸಜ್ಜಾಗುತ್ತೆ. ಹೀಗಾಗಿ ಕೋವಿಡ್ 19 ಸಂಕಟದ ಸಮಯದಲ್ಲಿ ಸೂರ್ಯನ ರಶ್ಮಿಗೆ ಮೈ ಒಡ್ಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

    ವಿಟಮಿನ್ ಡಿ ಮೀನು, ಚೀಸ್, ಮೊಟ್ಟೆ, ಮೊಸರು, ಮಶ್ರೂಮ್‍ನಲ್ಲಿ ವಿಟಮಿನ್ ಡಿ ಲಭ್ಯವಿದ್ದರೂ ಅಗತ್ಯ ಪ್ರಮಾಣದಲ್ಲಿ ಸಾಕಾಗುವುದಿಲ್ಲ. ಪರಿಣಾಮ ಸೂರ್ಯನ ಕಿರಣಗಳಿಗೆ ಮೈ ಒಡ್ಡುವುದರಿಂದ ದೇಹಕ್ಕೆ ಅಗತ್ಯವಿರೋ ಶೇ.90 ರಷ್ಟು ವಿಟಮಿನ್ ಡಿ ಲಭ್ಯವಾಗುತ್ತದೆ. ಈ ವಿಟಮಿನ್ ಡಿ ದೇಹದಲ್ಲಿ ಆ್ಯಂಟಿ ಮೈಕ್ರೊಬಿಯಲ್ ಪೆಪ್ಪೈಡ್ಸ್ ಉತ್ಪಾದಿಸುತ್ತದೆ. ಇದು ಉಸಿರಾಟದ ಸೋಂಕಿನ ಸಮಸ್ಯೆ ವಿರುದ್ಧ ಹೋರಾಟ ಮಾಡುತ್ತದೆ. ಅಲ್ಲದೇ ದೇಹದ ಬಿಳಿ ರಕ್ತ ಕಣಗಳಿಗೆ ಹೊಸ ಚೈತನ್ಯ ನೀಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

    ಇತ್ತೀಚೆಗೆ ಹಾರ್ವರ್ಡ್ ವಿಶ್ವವಿದ್ಯಾಲಯ ವಿಶ್ವದ ವಿವಿಧ ದೇಶಗಳ ಜನರ ದೇಹದಲ್ಲಿನ ವಿಟಮಿನ್ ಡಿ ಪ್ರಮಾಣದ ಕುರಿತು ಸಮೀಕ್ಷೆ ನಡೆಸಿತ್ತು. ಇದರಲ್ಲಿ ಕಡಿಮೆ ವಿಟಮಿನ್ ಡಿ ಹೊಂದಿದ್ದ ದೇಶದ ಪ್ರಜೆಗಳು ಸೋಂಕಿಗೆ ಹೆಚ್ಚು ಬಲಿಯಾಗಿರುವುದು ಸ್ಪಷ್ಟವಾಗಿತ್ತು. ಅಲ್ಲದೇ ಅಂತಹ ದೇಶಗಳಲ್ಲಿ ವೈರಸ್ ಸೋಂಕಿನ ಸಂಖ್ಯೆಯೂ ಹೆಚ್ಚಿತ್ತು. ಆದರೆ ಭಾರತದಲ್ಲಿ ಸೂರ್ಯನ ಕಿರಣಗಳು ಹೆಚ್ಚು ಲಭ್ಯವಾಗುವ ಅವಕಾಶವಿರುವುದರಿಂದ ಸೂರ್ಯನ ಕಿರಣಗಳಿಗೆ ದೇಹ ಒಡ್ಡುವುದರಿಂದ ವಿಟಮಿನ್ ಡಿ ಲಭಿಸುತ್ತದೆ. ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವುದರೊಂದಿಗೆ ಪ್ರತಿದಿನ ಬೆಳಗ್ಗೆ 6:30 ರಿಂದ 8:30ರ ಅವಧಿಯಲ್ಲಿ ಸೂರ್ಯನಿಗೆ ಮೈ ಒಡ್ಡುವುದು ಕೊರೊನಾ ವಿರುದ್ಧದ ಹೋರಾಟಕ್ಕೆ ಸಹಕಾರಿ ಎಂದು ವಿವರಿಸಿದ್ದಾರೆ.