Tag: Experiment

  • ಅಂತರಿಕ್ಷ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ – ಭಾರತದಿಂದ ‘ಸಪ್ತ ಸಂಶೋಧನೆ’

    ಅಂತರಿಕ್ಷ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ – ಭಾರತದಿಂದ ‘ಸಪ್ತ ಸಂಶೋಧನೆ’

    ನವದೆಹಲಿ: ಬಹುನಿರೀಕ್ಷಿತ ಆಕ್ಸಿಯಮ್-4 ಮಿಷನ್‌ನ (Axiom-4 Mission) ಸ್ಪೇಸ್‌ಎಕ್ಸ್ ಫಾಲ್ಕನ್-9 ರಾಕೆಟ್ ಸುದೀರ್ಘ ಪ್ರಯಾಣದ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಿದೆ. ಭಾರತೀಯ ಕಾಲಮಾನ ಸಂಜೆ 5:50ರ ಹೊತ್ತಿಗೆ ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ (Shubhanshu Shukla) ಪಾತ್ರವಾಗಿದ್ದಾರೆ.

    ಅಂತರಿಕ್ಷ ತಲುಪಿದ ಗಗನಯಾತ್ರಿಗಳಿಗೆ ವೆಲ್‌ಕಮ್ ಡ್ರಿಂಕ್ ಕೊಟ್ಟು ಬರ ಮಾಡಿಕೊಳ್ಳಲಾಯಿತು. ನಾಲ್ವರು ಗಗನಯಾತ್ರಿಗಳು 14 ದಿನ ಅಂತರಿಕ್ಷದಲ್ಲಿ ಉಳಿಯಲಿದ್ದಾರೆ. ಈ ಅವಧಿಯಲ್ಲಿ ವೈಜ್ಞಾನಿಕ ಸಂಶೋಧನೆ, ತಂತ್ರಜ್ಞಾನ ಪ್ರದರ್ಶನ, ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಿದೆ. ಈ ತಂಡವು 31 ದೇಶಗಳನ್ನು ಒಳಗೊಂಡ 60ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದೆ. ಇದನ್ನೂ ಓದಿ: ಇಲ್ಲಿಂದ ಭೂಮಿಯನ್ನು ನೋಡುವುದೇ ಸೌಭಾಗ್ಯ – ಬಾಹ್ಯಾಕಾಶ ನಿಲ್ದಾಣದಿಂದ ಶುಭಾಂಶು ಮೊದಲ ಸಂದೇಶ!

    ಇವುಗಳಲ್ಲಿ ಜೈವಿಕ ವಿಜ್ಞಾನ, ಭೂಮಿಯ ವೀಕ್ಷಣೆ, ಮತ್ತು ವಸ್ತು ವಿಜ್ಞಾನ ಸೇರಿವೆ. ಭಾರತ ಇಲ್ಲಿ ಏಳು ಸಂಶೋಧನೆಗಳನ್ನು ಮಾಡಲಿದ್ದು ಇದು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

    ಆಕ್ಸಿಯಮ್-4 ಭಾರತದ ಮೈಕ್ರೋಗ್ರಾವಿಟಿ ಪ್ರಯೋಗಗಳು
    1.ತಿನ್ನಬಹುದಾದ ಸೂಕ್ಷ್ಮಪಾಚಿ ಅಧ್ಯಯನ (ಐಸಿಜಿಇಬಿ& ಬ್ರಿಕ್-ನವದೆಹಲಿ)
    *ತಿನ್ನಬಹುದಾದ ಸೂಕ್ಷ್ಮಪಾಚಿ ಜಾತಿಗಳ ಬೆಳವಣಿಗೆ ಅಧ್ಯಯನ
    *ಆಹಾರ ಉತ್ಪಾದನೆ, ಇಂಗಾಲ, ಆಮ್ಲಜನಕ ಉತ್ಪಾದನೆ ಸಾಮರ್ಥ್ಯಗಳ ಪರೀಕ್ಷೆ

    2.ಮೊಳಕೆ ಕಾಳುಗಳ ಅಧ್ಯಯನ (ಯುಎಸ್, ಐಐಟಿ ಧಾರವಾಡ)
    *ಮೊಳಕೆ ಕಾಳುಗಳ ಬೆಳವಣಿಗೆ & ಪೋಷಕಾಂಶಗಳ ಅಧ್ಯಯನ
    *ಚಂದ್ರ, ಇತರೆ ಗ್ರಹಗಳಲ್ಲಿ ಬೆಳೆ ಬೆಳೆಯುವ ಸಾಧ್ಯತೆಯ ಅನ್ವೇಷಣೆ

    3.ಸ್ನಾಯುಗಳ ಅಧ್ಯಯನ (ಬ್ರಿಕ್,ಇನ್‌ಸ್ಟೆಮ್ ಬೆಂಗಳೂರು)
    *ಸ್ನಾಯುಗಳ ಅಧ್ಯಯನ & ಸ್ನಾಯು ನಷ್ಟ ಪರಿಹಾರಗಳ ಅಭಿವೃದ್ಧಿ
    *ದೀರ್ಘಕಾಲೀನ ಬಾಹ್ಯಾಕಾಶ ಪ್ರಯಾಣದಲ್ಲಿ ಸಂಭವಿಸುವ ಸ್ನಾಯು ಕ್ಷಯ ಅಧ್ಯಯನ

    4.ಟಾರ್ಡಿಗ್ರೇಡ್ಸ್ – ನೀರಿನ ಕರಡಿಗಳು (ಐಐಎಸ್‌ಸಿ ಬೆಂಗಳೂರು)
    *ನೀರಿನ ಕರಡಿಗಳ ಜೀವನ ಮತ್ತು ಪ್ರಯೋಜನ ಸಾಮರ್ಥ್ಯ ಅಧ್ಯಯನ
    *ಮಾನವರ ಬಾಹ್ಯಾಕಾಶ ಉಳಿವಿಗೆ ತಂತ್ರಗಳ ಅಭಿವೃದ್ಧಿಗೆ ಸಹಾಯ

    5.ಎಲೆಕ್ಟ್ರಾನಿಕ್ ಡಿಸ್‌ಪ್ಲೇ (ಐಐಎಸ್‌ಸಿ, ಬೆಂಗಳೂರು)
    *ಮಾನವ-ಯಂತ್ರ ಸಂವಾದ & ಎಲೆಕ್ಟಾçನಿಕ್ ಡಿಸ್‌ಪ್ಲೇಗಳ ಪರಿಣಾಮ ಅಧ್ಯಯನ
    *ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವಾಗ ಎದುರಿಸುವ ಸವಾಲುಗಳ ಅನ್ವೇಷಣೆ

    6.ಸಯಾನೋಬ್ಯಾಕ್ಟೀರಿಯಾ – ನೀಲಿ, ಹಸಿರು ಪಾಚಿ (ಐಸಿಜಿಇಬಿ, ನವದೆಹಲಿ)
    *ಸಯಾನೋಬ್ಯಾಕ್ಟೀರಿಯಾ ಬೆಳವಣಿಗೆ & ನೈಟ್ರೋಜನ ಮೂಲದೊಂದಿಗೆ ಸಂವಾದ
    *ಬಾಹ್ಯಾಕಾಶದಲ್ಲಿ ನೈಟ್ರೋಜನ ಚಕ್ರೀಕರಣದ ಸಾಮರ್ಥ್ಯವನ್ನು ಅನ್ವೇಷಿಸುತ್ತದೆ

    7.ಆಹಾರ ಬೀಜಗಳು (ಐಐಎಸ್‌ಟಿ&ಕೆಎಯು, ತಿರುವನಂತಪುರ)
    *ಮೆಣಸು, ಕಾಳು, ಟೊಮೋಟೋ, ಬೀಜಗಳ ಬೆಳವಣಿಗೆ ಅಧ್ಯಯನ
    *ಬಾಹ್ಯಾಕಾಶ ಕೃಷಿಗೆ ಮಾರ್ಗ ತೋರಿಸುವ ಅಧ್ಯಯನ

  • ಪಾಟ್ನಾದ ಏಮ್ಸ್‌ನಲ್ಲಿ ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ ಆರಂಭ

    ಪಾಟ್ನಾದ ಏಮ್ಸ್‌ನಲ್ಲಿ ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ ಆರಂಭ

    ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯಲ್ಲಿ ಮಕ್ಕಳ ಮೇಲೆ ಭಾರತ್ ಬಯೋಟೆಕ್ ಕಂಪನಿಯ ಕೊವಾಕ್ಸಿನ್ ಲಸಿಕೆಯ ಪ್ರಯೋಗ ಆರಂಭವಾಗಿದೆ.

    ಮೇ 18 ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ ವಿಭಾಗ) ಡಾ.ವಿ.ಕೆ.ಪೌಲ್, ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗ 10-12 ದಿನಗಳಲ್ಲಿ ಆರಂಭವಾಗಲಿದೆ ಎಂದು ತಿಳಿಸಿದ್ದರು.

    ಕೊವಾಕ್ಸಿನ್ ಲಸಿಕೆಯನ್ನು 2ರಿಂದ 18 ವರ್ಷದವರ ಮೇಲೆ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮತಿ ನೀಡಿದೆ ಎಂದು ವಿವರಿಸಿದ್ದರು. ಭಾರತದ ಹಲವು ವೈದ್ಯಕೀಯ ಸಂಸ್ಥೆಗಳಲ್ಲಿ 525 ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ ನಡೆಸಲು ಸಿದ್ಧತೆ ನಡೆದಿದೆ.

    ಕೆಲವು ಷರತ್ತುಗಳನ್ನು ವಿಧಿಸಿ ಲಸಿಕೆಯ ಪ್ರಯೋಗಕ್ಕೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಒ) ವಿಷಯ ತಜ್ಞರ ಸಮಿತಿ ಶಿಫಾರಸು ಮಾಡಿತ್ತು. ಶಿಫಾರಸಿನ ಹಿನ್ನೆಲೆಯಲ್ಲಿ ಮೇ 11 ರಂದು ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಡಿಸಿಜಿಐ ಕೊವಾಕ್ಸಿನ್ ಲಸಿಕೆಗೆ ಅನುಮತಿ ನೀಡಿತ್ತು. ಇದನ್ನು ಓದಿ:ವ್ಯಾಕ್ಸಿನ್ ಖರೀದಿಗೆ ಮೀಸಲಿಟ್ಟ 35,000 ಕೋಟಿ ಏನಾಯ್ತು? ಲೆಕ್ಕ ಪರಿಶೋಧನೆಗೆ ಸುಪ್ರೀಂಕೋರ್ಟ್ ಆದೇಶ

    5 ರಿಂದ 18 ವರ್ಷದ ಒಳಗಿನವರಲ್ಲಿ ಲಸಿಕೆ ಪ್ರಯೋಗ ನಡೆಸಲು ಅನುಮತಿ ನೀಡುವಂತೆ ಫೆಬ್ರುವರಿಯಲ್ಲಿ ಭಾರತ್ ಬಯೋಟೆಕ್ ಮನವಿ ಮಾಡಿತ್ತು. ಈ ಸಮಯದಲ್ಲಿ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಒ) ವಯಸ್ಕರ ಮೇಲೆ ಈ ಲಸಿಕೆಯ ಪರಿಣಾಮದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು.

    ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಬೀಳಲಿದೆ. ಹೀಗಾಗಿ ಕೂಡಲೇ ಮಕ್ಕಳಿಗೆ ಲಸಿಕೆ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಈ ಆಗ್ರಹಕ್ಕೆ ಕೇಂದ್ರ ಸರ್ಕಾರ ಕಳೆದ ವಾರ ಸ್ಪಷ್ಟನೆ ನೀಡಿತ್ತು.

    ವಿಶ್ವದ ಯಾವುದೇ ದೇಶವು ಮಕ್ಕಳಿಗೆ ಲಸಿಕೆಗಳನ್ನು ನೀಡುತ್ತಿಲ್ಲ. ಅಲ್ಲದೆ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಶಿಫಾರಸು ಮಾಡಿಲ್ಲ. ಮಕ್ಕಳಲ್ಲಿ ಲಸಿಕೆಗಳ ಸುರಕ್ಷತೆಯ ಬಗ್ಗೆ ಅಧ್ಯಯನಗಳು ನಡೆದಿದೆ ಎಂದು ತಿಳಿಸಿತ್ತು. ಇದನ್ನು ಓದಿ:ರಾಜ್ಯದಲ್ಲಿ 1 ಸಾವಿರ ವೆಂಟಿಲೇಟರ್ ಕೊಳೆಯುತ್ತಿವೆ: ಶಾಸಕ ಡಾ.ಅಜಯ್ ಸಿಂಗ್

    ಭಾರತದಲ್ಲಿ ಮಕ್ಕಳ ಮೇಲೆ ಶೀಘ್ರವೇ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ. ಪ್ರಯೋಗಗಳ ಆಧಾರದ ಮೇಲೆ ಸಾಕಷ್ಟು ದತ್ತಾಂಶಗಳು ಲಭ್ಯವಾದ ನಂತರ ಈ ಬಗ್ಗೆ ನಮ್ಮ ವಿಜ್ಞಾನಿಗಳು ನಿರ್ಧಾರ ಕೈಗೊಳ್ಳಬೇಕೇ ಹೊರತು, ವಾಟ್ಸಪ್ ಗ್ರೂಪ್‍ಗಳಲ್ಲಿ ಸೃಷ್ಟಿಸಲಾಗುವ ಭೀತಿ ಮತ್ತು ಕೆಲವು ರಾಜಕಾರಣಿಗಳ ರಾಜಕೀಯ ಆಧರಿಸಿ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗದು ಎಂದಿತ್ತು.

  • ಸಿದ್ಧವಾಗ್ತಿದೆ ಮತ್ತೊಂದು ದೇಶಿಯ ಕೊರೊನಾ ಲಸಿಕೆ – ಇಲಿಗಳ ಮೇಲೆ ನಡೆದ ಪ್ರಯೋಗ ಯಶಸ್ವಿ

    ಸಿದ್ಧವಾಗ್ತಿದೆ ಮತ್ತೊಂದು ದೇಶಿಯ ಕೊರೊನಾ ಲಸಿಕೆ – ಇಲಿಗಳ ಮೇಲೆ ನಡೆದ ಪ್ರಯೋಗ ಯಶಸ್ವಿ

    ನವದೆಹಲಿ: ಕೊರೊನಾ ನಿಗ್ರಹಕ್ಕಾಗಿ ದೇಶಿಯವಾಗಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ವಿಚಾರದಲ್ಲಿ ಮತ್ತೊಂದು ಮಹತ್ವದ ಬೆಳೆವಣಿಯಾಗಿದೆ. ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಆರಂಭಿಕ ಪ್ರಯೋಗಗಳು ಯಶಸ್ವಿಯಾಗಿದೆ.

    ಈ ಬಗ್ಗೆ ಎನ್‍ಐಐ ನಿರ್ದೇಶಕ ಅಮೂಲ್ಯ ಪಾಂಡಾ ಮಾಹಿತಿ ನೀಡಿದ್ದಾರೆ. ಆರಂಭಿಕವಾಗಿ ಜುಲೈನಲ್ಲಿ ಇಲಿಗಳ ಮೇಲೆ ಈ ಲಸಿಕೆ ಪ್ರಯೋಗ ನಡೆಸಲಾಗಿತ್ತು. ಪ್ರಯೋಗದ ಬಳಿಕ ಉತ್ತಮ ಫಲಿತಾಂಶ ಬಂದಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

    ಜೈವಿಕ ತಂತ್ರಜ್ಞಾನ ವಿಭಾಗದ ಅಡಿಯಲ್ಲಿರುವ ಎನ್‍ಐಐ, ಕೊರೊನಾ ವೈರಸ್ ವಿರುದ್ಧ ಪ್ರೋಟೀನ್ ಆಧಾರಿತ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಇದು ಇಲಿಗಳಲ್ಲಿ ವೈರಸ್ ಗಳನ್ನು ತಟಸ್ಥಗೊಳಿಸಿದೆ ಮತ್ತು ಪ್ರತಿಕಾಯಗಳನ್ನು ಉತ್ಪಾದಿಸುವಲ್ಲಿ ಸಮರ್ಥವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ಆರಂಭದಲ್ಲಿ ಕೆಲವು ಇಲಿಗಳ ಮೇಲೆ ಮಾತ್ರ ಈ ಪ್ರಯೋಗ ನಡೆದಿತ್ತು. ಆರಂಭಿಕ ಪ್ರಯೋಗ ಯಶಸ್ವಿಯಾದ ಹಿನ್ನೆಲೆ ದೊಡ್ಡ ಪ್ರಮಾಣ ಇಲಿಗಳ ಸಮೂಹದ ಮೇಲೆ ಪ್ರಯೋಗ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಪ್ರಯೋಗ ಯಶಸ್ಸು ಕಂಡಲ್ಲಿ ಮಾನವರ ಮೇಲೆ ಪ್ರಯೋಗ ಮಾಡುವ ಯೋಚನೆಯನ್ನು ಸಂಸ್ಥೆ ಮಾಡಿದೆ.

    ಇದು ಭಾರತದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಮೂರನೇ ಲಸಿಕೆಯಾಗಿದೆ. ಇದಕ್ಕೂ ಮೊದಲ ಭಾರತ್ ಬಯೋಟೆಕ್‍ನ ಕೊವ್ಯಾಕ್ಸಿನ್ ಮತ್ತು ಝೈಡುಸ್ ಕ್ಯಾಡಿಲಾ ಸಂಸ್ಥೆ ಮತ್ತೊಂದು ಲಸಿಕೆ ಅಭಿವೃದ್ಧಿ ಪಡಿಸಿದೆ. ಸದ್ಯ ಈ ಎರಡು ಸಲಿಕೆಗಳು ಮಾನವರ ಮೇಲೆ ಎರಡನೇ ಹಂತದ ಪ್ರಯೋಗದಲ್ಲಿದೆ.

  • ಚಿತ್ರದುರ್ಗದ ಕಾದಂಬರಿಕಾರನ ಮೇಲೆ ಕೊರೊನಾ ಲಸಿಕೆ ಪ್ರಯೋಗ

    ಚಿತ್ರದುರ್ಗದ ಕಾದಂಬರಿಕಾರನ ಮೇಲೆ ಕೊರೊನಾ ಲಸಿಕೆ ಪ್ರಯೋಗ

    – ಸ್ವ ಇಚ್ಛೆಯಿಂದ ವ್ಯಾಕ್ಸಿನ್ ಪ್ರಯೋಗಕ್ಕೆ ಒಳಗಾದ ಡಿ.ಸಿ.ಪಾಣಿ

    ಚಿತ್ರದುರ್ಗ: ವಿಶ್ವದೆಲ್ಲೆಡೆ ತಾಂಡವಾಡುತ್ತಿರುವ ಕೊರೊನಾ ಮಹಾಮಾರಿ ಓಡಿಸಲು ಲಸಿಕೆ ಕಂಡು ಹಿಡಿಯುವ ಕಾರ್ಯ ಭರದಿಂದ ಸಾಗಿದ್ದು, ದೇಶದಲ್ಲಿ ಸಹ ವ್ಯಾಕ್ಸಿನ್ ಕಂಡುಹಿಡಿಯಲಾಗುತ್ತಿದೆ. ಇದರ ಭಾಗವಾಗಿ ಪ್ರಯೋಗಗಳನ್ನು ನಡೆಸುತ್ತಿದ್ದು, ಚಿತ್ರದುರ್ಗದ ಕಾದಂಬರಿಕಾರ ಡಿ.ಸಿ.ಪಾಣಿ ಅವರಿಗೆ ವ್ಯಾಕ್ಸಿನ್ ಪ್ರಯೋಗ ಮಾಡಲಾಗಿದೆ.

    ಕೋವಿಡ್-19 ಲಸಿಕೆಯನ್ನು ಜಿಲ್ಲೆ ಹಿರಿಯೂರು ಪಟ್ಟಣದ ಕಾದಂಬರಿಕಾರ ಡಿ.ಸಿ.ಪಾಣಿ ಅವರ ಮೇಲೆ ಪ್ರಯೋಗ ಮಾಡಲಾಗಿದೆ. ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ಮೊದಲನೇ ಹಂತದ ಪ್ರಾಯೋಗಿಕ ಲಸಿಕೆಯನ್ನು ಪಡೆದಿರುವ ಪಾಣಿಯವರು ಸ್ವಯಂ ಪ್ರೇರಿತರಾಗಿ ಈ ಲಸಿಕೆ ಪಡೆದಿದ್ದಾರೆ. ಇವರಿಗೆ ಡಾ.ಪಾರಿತೋಷ್.ವಿ.ದೇಸಾಯಿ ಅವರು ವಿಶೇಷ ಫಾರ್ಮಜೆಟ್ ಮೆಷಿನ್ ಮೂಲಕ ಪ್ರಾಯೋಗಿಕ ಲಸಿಕೆಯನ್ನು ನೀಡಿದ್ದಾರೆ. ಇದೊಂದು ಅವಿಸ್ಮರಣೀಯ ಘಟನೆಯಾಗಿದ್ದು, ಈ ಪ್ರಯೋಗ ಯಶಸ್ವಿಯಾದರೆ ಅತ್ಯಂತ ಪರಿಣಾಮಕಾರಿಯಾಗಲಿದೆ.

    ವ್ಯಾಕ್ಸಿನ್ ಪ್ರಯೋಗಕ್ಕೆ ಒಳಗಾಗಿರುವ ಪಾಣಿಯವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ನಮ್ಮ ದೇಶದಲ್ಲೇ ಲಸಿಕೆ ಉತ್ಪಾದನೆಯಾಗುವ ಮೂಲಕ ಶೀಘ್ರದಲ್ಲೇ ಕೋವಿಡ್ ಅಂತ್ಯವಾಗಲಿ ಎಂಬ ಸದುದ್ದೇಶದಿಂದ ಈ ಪ್ರಯೋಗಕ್ಕೆ ಒಳಗಾಗಿದ್ದೇನೆ. ಲಸಿಕೆ ಪಡೆಯುವಾಗ ನನಗೆ ಯಾವುದೇ ಭಯವಾಗಲಿಲ್ಲ. ಅಲ್ಲದೆ ಈ ಪ್ರಾಯೋಗಿಕ ಲಸಿಕೆ ಯಶಸ್ವಿಯಾದರೆ ನಮ್ಮ ದೇಶಕ್ಕೆ ಬಂದಿರುವ ಕಂಟಕ ದೂರವಾಗಲಿದೆ ಎಂಬ ಆಶಾಭಾವದಿಂದ ಈ ಪ್ರಯೋಗಕ್ಕೆ ಒಳಗಾದೆ. ಪ್ರಯೋಗ ಯಶಸ್ವಿಯಾದರೆ ನನ್ನ ಜನ್ಮಸಾರ್ಥಕ ಎನಿಸಲಿದೆ. ನಮ್ಮ ದೇಶದ ಜನರ ಭಯ ದೂರವಾಗಲಿದೆ. ದೇಶಕ್ಕೆ ಕಂಟಕವೆನಿಸಿರುವ ಕೊರೊನಾ ಅಂತ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಹೈದರಾಬಾದ್‍ನ ಭಾರತ ಬಯೋಟೆಕ್ ಕೋವ್ಯಾಕ್ಸಿನ್ ಸಂಸ್ಥೆ ಈ ಲಸಿಕೆ ಸಿದ್ಧಪಡಿಸಿದ್ದು, ದೇಶದ ವಿವಿಧ ಭಾಗಗಳಲ್ಲಿ ಪ್ರಯೋಗ ನಡೆಸುತ್ತಿದೆ. ಇದರ ಭಾಗದಲ್ಲಿ ರಾಜ್ಯದಲ್ಲಿ ಸಹ ಪ್ರಯೋಗ ನಡೆಸಿದೆ.

  • ಮಾನವ ಸಹಿತ ಬಾಹ್ಯಾಕಾಶ ಪ್ರಯಾಣ ಮತ್ತಷ್ಟು ಹತ್ತಿರ: ಇಸ್ರೋ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

    ಮಾನವ ಸಹಿತ ಬಾಹ್ಯಾಕಾಶ ಪ್ರಯಾಣ ಮತ್ತಷ್ಟು ಹತ್ತಿರ: ಇಸ್ರೋ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಕನಸಿನ ಯೋಜನೆ `ಮಾನವ ಸಹಿತ ಬಾಹ್ಯಾಕಾಶ ಪಯಣ’ ಮತ್ತಷ್ಟು ಹತ್ತಿರವಾಗಿದ್ದು, ಇಸ್ರೋ ನಡೆಸಿದ ಪರೀಕ್ಷೆ ಅಭೂತಪೂರ್ವ ಯಶಸ್ಸು ಸಾಧಿಸಿದೆ.

    ಇಂದು ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಲ್ಲಿ ಬೆಳಿಗ್ಗೆ 7 ಗಂಟೆಗೆ ಇಸ್ರೋ ಈ ಪರೀಕ್ಷೆ ಮಾಡಿದ್ದು, ನಿರೀಕ್ಷೆಯಂತೆಯೇ ನೌಕೆ ಉಡಾವಣಾ ವಾಹಕದಿಂದ ಬೇರ್ಪಟ್ಟು ಪ್ಯಾರಾಚೂಟ್ ಗಳ ಮೂಲಕ ಸುರಕ್ಷಿತವಾಗಿ ಭೂಮಿಗೆ ಇಳಿದಿದೆ.

    ಭವಿಷ್ಯದಲ್ಲಿ ಮಾನವರನ್ನು ಬಾಹ್ಯಕಾಶಕ್ಕೆ ಕಳುಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳಲು ಮುಂದಾಗಿರುವ ಇಸ್ರೋ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು ಯಾನಿಗಳ ಮಾದರಿಗಳನ್ನು ಹೊತ್ತ ನೌಕೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಬಾಹ್ಯಾಕಾಶ ಪಯಣದ ವೇಳೆ ತುರ್ತು ಪರಿಸ್ಥಿತಿಯಲ್ಲಿ ತುರ್ತು ನಿರ್ಗಮನ ಮಾಡುವುದು ಹೇಗೆ ಎಂಬ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿದೆ.

    ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾದ ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ ಶಿವನ್, ನೌಕೆಯನ್ನು ರಾಕೆಟ್ ಇಂಜಿನ್‍ಗೆ ನೌಕೆಯನ್ನು  ಜೋಡಣೆಮಾಡಲಾಗಿತ್ತು. ಈ ನೌಕೆಯಲ್ಲಿ ಅಂತರಿಕ್ಷ ಯಾನಿಗಳ ದೇಹದ ಮಾದರಿಗಳನ್ನು ಇರಿಸಿ ಉಡಾವಣೆ ಮಾಡಲಾಯಿತು. ಕೆಲವೇ ಕ್ಷಣಗಳಲ್ಲಿ ರಾಕೆಟ್‍ನಿಂದ ಬೇರ್ಪಟ್ಟ ನೌಕೆ ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಲಾಯಿತು ಎಂದು ಹೇಳಿದರು.

    ಪ್ರಯೋಗಾರ್ಥವಾಗಿ ನಡೆದ ಪರೀಕ್ಷೆ ಯಶಸ್ವಿಯಾಗಿದ್ದು, 259 ಸೆಕೆಂಡ್‍ಗಳ ಕಾಲ ನಡೆದ ಪರೀಕ್ಷೆಯ ಯಶಸ್ವಿನೊಂದಿಗೆ ಮುಂದಿನ ದಿನಗಳಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಹಾಯಕವಾಗುತ್ತದೆ. ಅಂತರಿಕ್ಷಯಾನಕ್ಕೆ ಇನ್ನಷ್ಟು ಹಾದಿ ಸುಗಮವಾಗಿದೆ. ಉಡಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ನೌಕೆ ಒಳಗಿನ ಸಿಬ್ಬಂದಿಯನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ನಿಟ್ಟಿನಲ್ಲಿ ನಡೆಸಿದ ಮೊದಲ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿಸಿದರು.

    1962ರಲ್ಲಿ ಪ್ರಾರಂಭಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕೈಗೊಳ್ಳಲು ಹಲವಾರು ಪ್ರಯೋಗಗಳನ್ನು ನಡೆಸುತ್ತಾ ಬಂದಿದೆ. ವಿಶ್ವದಲ್ಲಿ ಇಲ್ಲಿಯವರೆಗೂ ಕೇವಲ ಮೂರು ರಾಷ್ಟ್ರಗಳಾದ ರಷ್ಯಾ, ಅಮೆರಿಕ ಹಾಗೂ ಚೀನಾವು ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕೈಗೊಂಡಿದ್ದವು. ಇಂದು ನಡೆದ ಪ್ರಯೋಗ ಯಶಸ್ವಿಯಾಗಿದ್ದರಿಂದ ಭಾರತದ ಮಾನವಸಹಿತ ಅಂತರಿಕ್ಷ ಯಾನದ ಕನಸು ನನಸಾಗುವ ಸಮಯಯ ಸನ್ನಿಹಿತವಾಗಿದೆ.