Tag: Expensive wedding

  • ಮದುವೆಗೆ 500, ಎಂಗೇಜ್ಮೆಂಟ್‍ಗೆ 100 ಜನರನ್ನ ಮಾತ್ರ ಕರೆಯಿರಿ!

    ಮದುವೆಗೆ 500, ಎಂಗೇಜ್ಮೆಂಟ್‍ಗೆ 100 ಜನರನ್ನ ಮಾತ್ರ ಕರೆಯಿರಿ!

    – ಪಟಾಕಿ ಸಿಡಿಸಂಗಿಲ್ಲ, ಲೌಡ್ ಸ್ಪೀಕರ್ ಹಾಕುವಂತಿಲ್ಲ
    – ಮದುವೆ ಇನ್ವಿಟೇಷನ್ ಜೊತೆ ಸ್ವೀಟ್ಸ್, ಡ್ರೈ ಫ್ರೂಟ್ಸ್ ಕೊಡಂಗಿಲ್ಲ
    – ಜಮ್ಮು ಕಾಶ್ಮೀರದಲ್ಲಿ ಏಪ್ರಿಲ್ 1ರಿಂದ ನೂತನ ಕಾನೂನು ಜಾರಿ

    ಶ್ರೀನಗರ: ಕರ್ನಾಟಕದಲ್ಲಿ ದುಬಾರಿ ಮದುವೆಗೆ ಕಡಿವಾಣ ಹಾಕಬೇಕು ಎಂಬ ಚಿಂತನೆಯಲ್ಲೇ ಮೀನ ಮೇಷ ಎಣಿಸುತ್ತಾ ರಾಜ್ಯ ಸರ್ಕಾರ ತೊಳಲಾಡುತ್ತಿರಬೇಕಾದರೆ ದೂರದ ಜಮ್ಮು ಮತ್ತು ಕಾಶ್ಮೀರ ಎಲ್ಲಾ ರಾಜ್ಯಗಳಿಗೂ ಮಾದರಿಯಾಗುವ ದಿಟ್ಟ ಹೆಜ್ಜೆ ಇಟ್ಟಿದೆ.

    ದುಬಾರಿ ಮದುವೆ ಜೊತೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜಮ್ಮು ಕಾಶ್ಮೀರ ಸರ್ಕಾರ ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳ ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕುವ ಹೊಸ ನಿಯಮಗಳನ್ನು ರೂಪಿಸಿದೆ.

    ಶ್ರೀನಗರದಲ್ಲಿ ಈ ವಿಚಾರವನ್ನು ಘೋಷಿಸಿದ ಗ್ರಾಹಕ ವ್ಯವಹಾರಗಳ ಸಚಿವ ಚೌಧರಿ ಜುಲ್ಫಿಕರ್ ಅಲಿ, ಖಾಸಗಿ, ಸರ್ಕಾರಿ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಲೌಡ್ ಸ್ಪೀಕರ್‍ಗಳು ಹಾಗೂ ಪಟಾಕಿಗಳನ್ನು ಸಿಡಿಸುವುದಕ್ಕೆ ಇನ್ನು ಮುಂದೆ ಅನುಮತಿ ಸಿಗಲ್ಲ ಎಂದು ಹೇಳಿದ್ದಾರೆ.

    ಪುತ್ರಿಯ ಮದುವೆಗೆ 500 ಹಾಗೂ ಪುತ್ರನ ಮದುವೆಗೆ 400 ಅತಿಥಿಗಳ ಆಹ್ವಾನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಎಂಗೇಜ್‍ಮೆಂಟ್ ಮುಂತಾದ ಸಣ್ಣ ಪುಟ್ಟ ಸಮಾರಂಭಗಳಿಗೆ 100ಕ್ಕಿಂತ ಹೆಚ್ಚು ಜನರನ್ನು ಆಹ್ವಾನಿಸುವಂತಿಲ್ಲ. ಮದುವೆ ಕರೆಯೋಲೆ ಜೊತೆ ಇನ್ನು ಮುಂದೆ ಸಿಹಿ ತಿಂಡಿ ಹಾಗೂ ಡ್ರೈ ಫ್ರೂಟ್ಸ್‍ಗಳನ್ನೂ ನೀಡುವಂತಿಲ್ಲ ಎಂಬ ನಿಯಮಾವಳಿ ರೂಪಿಸಲಾಗಿದೆ. ಈ ಎಲ್ಲಾ ಬದಲಾವಣೆಗಳು ಮುಂದಿನ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು ಅಲಿ ಅವರು ತಿಳಿಸಿದ್ದಾರೆ.