Tag: Excise Officers

  • ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ- ಇಬ್ಬರ ಬಂಧನ

    ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ- ಇಬ್ಬರ ಬಂಧನ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ವಿವಿಧೆಡೆ ದಾಳಿ ನಡೆಸಿದ ಅಬಕಾರಿ ಪೊಲೀಸರು 12 ಬ್ಯಾರಲ್ ಗಳಲ್ಲಿನ 1,500 ಲೀಟರ್ ಬೆಲ್ಲದ ಕೊಳೆ, 50 ಲೀಟರ್ ಕಳ್ಳಭಟ್ಟಿ ಜಪ್ತಿ ಮಾಡಿದ್ದಾರೆ.

    ತಾಲೂಕಿನ ಗೋರೆಬಾಳ ಹಾಗೂ ಗೋರೆಬಾಳ ತಾಂಡಾದಲ್ಲಿ ದಾಳಿ ಮಾಡಿ ಕಳ್ಳಭಟ್ಟಿ ವಶಕ್ಕೆ ಪಡೆದಿದ್ದು, ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ರಾಯಚೂರು ಮತ್ತು ಲಿಂಗಸಗೂರು ಅಬಕಾರಿ ವಲಯದ ಅಧಿಕಾರಿಗಳ ನೇತೃತ್ವದ ತಂಡದಿಂದ ದಾಳಿ ನಡೆದಿದೆ.

    ಕಳ್ಳಭಟ್ಟಿ ತಯಾರಿಸಿ, ಮಾರಾಟಕ್ಕೆ ಯತ್ನಿಸಿದ್ದ ಅರುಣಕುಮಾರ್ ಹಾಗೂ ಖೂಬಣ್ಣ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ದಾಳಿ ವೇಳೆ ಕಳ್ಳಭಟ್ಟಿ ತಯಾರಿಕೆಗೆ ಬಳಕೆ ಮಾಡುತಿದ್ದ ಸಲಕರಣೆಗಳು ಹಾಗೂ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.

  • ದುಡ್ಡಿನ ಆಮಿಷ ಒಡ್ಡಿ ರೈತರ ಜಮೀನಿನಲ್ಲಿ ಅಕ್ರಮ ಗಾಂಜಾ ಬೆಳೆ

    ದುಡ್ಡಿನ ಆಮಿಷ ಒಡ್ಡಿ ರೈತರ ಜಮೀನಿನಲ್ಲಿ ಅಕ್ರಮ ಗಾಂಜಾ ಬೆಳೆ

    – 5 ಎಕ್ರೆಯಲ್ಲಿ ಬೆಳೆದಿದ್ದ 70 ಕೆಜಿ ಗಾಂಜಾ ವಶ

    ಹಾಸನ: ಜಿಲ್ಲೆಯ ಅಬಕಾರಿ ಡಿಸಿ ಗೋಪಾಕೃಷ್ಣಗೌಡ ನೇತೃತ್ವದ ತಂಡ ದಾಳಿ ಮಾಡಿ ಹಾಸನದಲ್ಲಿ ಸುಮಾರು ಐದು ಎಕರೆ ಜಮೀನಿನಲ್ಲಿ ಬೆಳೆಗಳ ಮಧ್ಯೆ ಯಾರಿಗೂ ತಿಳಿಯದಂತೆ ಬೆಳೆಯಲಾಗಿದ್ದ ಸುಮಾರು 15 ಲಕ್ಷ ಮೌಲ್ಯದ 70 ಕೆಜಿ ಅಕ್ರಮ ಗಾಂಜಾ ಬೆಳೆಯನ್ನು ವಶಪಡಿಸಿಕೊಂಡಿದ್ದಾರೆ.

    ಅರಕಲಗೂಡು ತಾಲೂಕಿನ ಹೊಡೆನೂರು ಗ್ರಾಮದ ಮೂವರು ರೈತರ ಜಮೀನಿನ ಮೇಲೆ ದಾಳಿ ನಡೆಸಿ ಅಕ್ರಮ ಗಾಂಜಾ ಬೆಳೆದಿರೋದನ್ನು ಬಯಲು ಅಧಿಕಾರಿಗಳು ಮಾಡಿದ್ದಾರೆ. ಶುಂಠಿ ಬೆಳೆಯಲು ಕರ್ನಾಟಕಕ್ಕೆ ಬಂದ ಕೆಲವು ಕೇರಳ ಮೂಲದ ಮಂದಿಯೇ ರೈತರಿಗೆ ಗಾಂಜಾ ಬೀಜ ನೀಡಿ ಅವರ ಜಮೀನಿನಲ್ಲಿ ಗಾಂಜಾ ಬೆಳೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

    ಅಷ್ಟೇ ಅಲ್ಲದೆ ತಾವೇ ಬೀಜ ನೀಡಿ ಬೆಳೆಸಿದ ಗಾಂಜವನ್ನು ಕೇರಳ ಮೂಲದವರೇ ಕೊಂಡು ಹಲವೆಡೆಗೆ ಕಳ್ಳಸಾಗಾಣೆ ಮಾಡುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸೋಮೇಶ್, ದೇವರಾಜ್, ಹಾಗೂ ಪ್ರಕಾಶ್‍ನನ್ನು ಬಂಧಿಸಲಾಗಿದೆ. ಇವರು ತಮ್ಮ ಜಮೀನಿನಲ್ಲಿ ಶುಂಠಿ, ಕೋಸು ಹಾಗೂ ಜೋಳದ ಬೆಳೆಗಳ ಮಧ್ಯೆ ಅಲ್ಲಲ್ಲಿ ಗಾಂಜಾ ಗಿಡವನ್ನು ಹುಲುಸಾಗಿ ಬೆಳೆಸಿದ್ದರು.

    ಇದೇ ರೀತಿ ಕೆಲವು ದಿನಗಳ ಹಿಂದೆ ಆಲೂರು ತಾಲೂಕಿನಲ್ಲೂ ಕೂಡ ವ್ಯಕ್ತಿಯೊಬ್ಬ ಜಮೀನಿನಲ್ಲಿ ಗಾಂಜಾ ಬೆಳೆದು ಪೊಲೀಸರ ಅತಿಥಿಯಾಗಿದ್ದ. ಇತ್ತೀಚಿನ ಕೆಲ ಪ್ರಕರಣ ಗಮನಿಸಿದರೆ ರೈತರಿಗೆ ಕೆಲವರು ಹಣದಾಸೆ ತೋರಿಸಿ, ಅವರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುವಂತೆ ಮಾಡುತ್ತಿರುವ ಅಂಶ ಬೆಳಕಿಗೆ ಬರುತ್ತಿದೆ. ಅಂತಹವರ ಬಗ್ಗೆ ರೈತರು ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

  • ಮಾನ್ವಿಯಲ್ಲಿ ಮದ್ಯದಂಗಡಿಗಳಿಗೆ ಸೀಲ್ ಇಲ್ಲ: 4 ಪಟ್ಟು ದುಬಾರಿ ಬೆಲೆಗೆ ಮಾರಾಟ

    ಮಾನ್ವಿಯಲ್ಲಿ ಮದ್ಯದಂಗಡಿಗಳಿಗೆ ಸೀಲ್ ಇಲ್ಲ: 4 ಪಟ್ಟು ದುಬಾರಿ ಬೆಲೆಗೆ ಮಾರಾಟ

    – ಮಾಜಿ ಸಂಸದರ ಸಂಬಂಧಿಯ ಕಾರಿನಲ್ಲಿ ಮದ್ಯ ಸಾಗಾಟ

    ರಾಯಚೂರು: ಮಾನ್ವಿಯಿಂದ ರಾಯಚೂರು ನಗರಕ್ಕೆ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಕಾರೊಂದನ್ನು ರಾಯಚೂರು ಅಬಕಾರಿ ಪೊಲೀಸರು ಜಪ್ತಿಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ.

    ಮಾಜಿ ಸಂಸದ ಬಿ.ವಿ.ನಾಯಕ್ ಸಂಬಂಧಿ ಶ್ರೀನಿವಾಸ್ ನಾಯಕ್‍ಗೆ ಸೇರಿದ ಫೋರ್ಡ್ ಎಂಡಿವಿಯರ್ ಕಾರ್ (ಸಂಖ್ಯೆ ಕೆ.ಎ36 ಎಂಸಿ 0005) ನಲ್ಲಿ 750 ಎಂ.ಎಲ್‍ನ 10 ಬಾಟಲ್ ವಿಸ್ಕಿ, 650 ಎಂ.ಎಲ್‍ನ 24 ಬಾಟಲ್ ಬಿಯರ್ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ತಾಲೂಕಿನ ಕಲ್ಲೂರು ಬಳಿ ಪರಿಶೀಲನೆ ಮಾಡಿದ ಅಬಕಾರಿ ಪೊಲೀಸರು ಮದ್ಯದ ಬಾಟಲಿಗಳನ್ನ ಜಪ್ತಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಕೇಶ್ ಹಾಗೂ ಅಜಯ್‍ಕುಮಾರ್ ಬಂಧಿತ ಆರೋಪಿಗಳು.

    ಲಾಕ್‍ಡೌನ್ ಹಿನ್ನೆಲೆ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿದೆಯಾದರೂ ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಮಾತ್ರ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಯಾಕೆಂದರೆ ಇಲ್ಲಿನ ಮದ್ಯದ ಅಂಗಡಿಗಳಿಗೆ ಅಬಕಾರಿ ಅಧಿಕಾರಿಗಳು ಇದುವರೆಗೂ ಸೀಲ್ ಹಾಕಿಲ್ಲ. ಮಾನ್ವಿಯ ಬಸ್ ನಿಲ್ದಾಣ ಹಾಗೂ ಸಿಂಧನೂರು ರಸ್ತೆಯಲ್ಲಿರುವ ಬಾರ್ ಗಳಿಗೆ ಕೇವಲ ಬೀಗ ಮಾತ್ರ ಹಾಕಲಾಗಿದೆ.

    ಕೇವಲ ಬೀಗ ಹಾಕಿರುವುದರಿಂದ ರಾತ್ರಿ ವೇಳೆ ಮದ್ಯದಂಗಡಿಯಿಂದ ಮದ್ಯ ರಾಜಾರೋಷವಾಗಿ ಹೊರಹೋಗುತ್ತಿದೆ. ಇದರಿಂದ ಬೇಸತ್ತಿರುವ ಸ್ಥಳೀಯರು ಕೂಡಲೇ ಬಾರ್ ಗಳನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ. ತಾಲೂಕು ಅಬಕಾರಿ ಇನ್ಸ್ ಪೆಕ್ಟರ್ ಸಹಕಾರದಿಂದಲೇ ಅಗ್ಗದ ಮದ್ಯವನ್ನು ನಾಲ್ಕು ಪಟ್ಟು ದುಬಾರಿಗೆ ಮಾರಾಟ ಮಾಡಲಾಗುತ್ತಿದೆ ಅಂತ ಆರೋಪಿಸಿದ್ದಾರೆ. ಮಾನ್ವಿಯ ಮಲ್ಲಯ್ಯ ಹಾಗೂ ಸೋಮು ಎಂಬುವವರಿಗೆ ಸೇರಿದ 11 ಮದ್ಯದ ಅಂಗಡಿಗಳಿಗೆ ಮಾತ್ರ ಸೀಲ್ ಹಾಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಈ ಮಧ್ಯೆ ಕಳಭಟ್ಟಿ ಹಾಗೂ ಸಿಎಚ್ ಪೌಡರ್ ಸೇಂದಿ ಮಾರಾಟ ಕೂಡ ಜೋರಾಗಿದ್ದು ಅಬಕಾರಿ ಇಲಾಖೆ ಅಧಿಕಾರಿಗಳು ಲಿಂಗಸುಗೂರು ತಾಲೂಕಿನ ಬಗಾಡಿ ತಾಂಡದಲ್ಲಿ 250 ಕೊಡಗಳಲ್ಲಿದ್ದ 1500 ಲೀಟರ್ ಕಳ್ಳಭಟ್ಟಿ ಜಪ್ತಿ ಮಾಡಿದ್ದಾರೆ. ಮಾನ್ವಿ ತಾಲೂಕಿನ ಕುರಡಿ ಗ್ರಾಮದ ಬಳಿ 10 ಲೀಟರ್ ಕಳ್ಳಭಟ್ಟಿ ಹಾಗೂ ಒಂದು ಬೈಕ್ ಜಪ್ತಿಮಾಡಲಾಗದ್ದು ಆರೋಪಿಗಳು ಪರಾರಿಯಾಗಿದ್ದಾರೆ.

  • ಯಾದಗಿರಿಯಲ್ಲಿ ಅಬಕಾರಿ ಅಧಿಕಾರಿಗಳ ದಾಳಿ 14 ಪ್ರಕರಣ ದಾಖಲು

    ಯಾದಗಿರಿಯಲ್ಲಿ ಅಬಕಾರಿ ಅಧಿಕಾರಿಗಳ ದಾಳಿ 14 ಪ್ರಕರಣ ದಾಖಲು

    – 1 ಲಕ್ಷ ರೂ. ಅಬಕಾರಿ ಪದಾರ್ಥ ಜಪ್ತಿ

    ಯಾದಗಿರಿ: ಜಿಲ್ಲೆಯಾದ್ಯಂತ ಖಚಿತ ಬಾತ್ಮಿ ಮಾಹಿತಿ ಹಾಗೂ ದೂರಿನ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಈವರೆಗೆ ಒಟ್ಟು 14 ಪ್ರಕರಣಗಳನ್ನು ದಾಖಲಿಸಿಕೊಂಡು, ಸುಮಾರು 98,650 ರೂ. ಮೌಲ್ಯದ ಅಬಕಾರಿ ಪದಾರ್ಥಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

    ಈ ವರೆಗೆ ಜಿಲ್ಲೆಯಲ್ಲಿ 30.600 ಲೀಟರ್ ಮದ್ಯ, 9.120 ಲೀಟರ್ ಬೀಯರ್, 455 ಲೀಟರ್ ಸೇಂದಿ, 25 ಲೀಟರ್ ಕಳ್ಳಭಟ್ಟಿ ಸಾರಾಯಿ, 290 ಲೀಟರ್ ಬೆಲ್ಲದ ಕೊಳೆ, 20 ಕೆ.ಜಿ ಕೊಳೆತ ಬೆಲ್ಲ, 25 ಕೆ.ಜಿ ಸಿ.ಹೆಚ್.ಪೌಡರ್ ಮತ್ತು 8 ಕೆ.ಜಿ.ಕಳ್ಳಭಟ್ಟಿ ಸಾರಾಯಿಗೆ ಬಳಸುವ ಗಿಡದ ಚಕ್ಕೆ ಸೇರಿದಂತೆ ಸುಮಾರು 98,650 ರೂ. ಮೌಲ್ಯದ ಅಬಕಾರಿ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಅಬಕಾರಿ ಉಪ ಆಯುಕ್ತರ ಕಚೇರಿಯ ಪ್ರಭಾರಿ ಅಬಕಾರಿ ಉಪ ಅಧೀಕ್ಷಕ ಶ್ರೀರಾಮ ರಾಠೋಡ, ರಾಜ್ಯಾದ್ಯಂತ ಕೊರೊನಾ ವೈರಸ್ (ಕೋವಿಡ್-19) ನಿಯಂತ್ರಿಸಲು ಅನುಕೂಲವಾಗುವಂತೆ ಸಂಪೂರ್ಣ ಲಾಕ್‍ಡೌನ್ ಪರಿಸ್ಥಿತಿ ಘೋಷಿಸಲಾಗಿದೆ. ಈ ಹಿನ್ನೆಲೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಯುತ್ತಿವೆ. ಇವುಗಳನ್ನು ತಡೆಯಲು ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಎಸ್.ಕೆ.ಕುಮಾರ ಅವರ ಆದೇಶಾನುಸಾರ ಅಬಕಾರಿ ಉಪ ಆಯುಕ್ತೆ ಶಶಿಕಲಾ ಒಡೆಯರ್ ಅವರ ಮಾರ್ಗದರ್ಶನದಲ್ಲಿ ಶಹಾಪೂರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹಮ್ಮದ್ ಇಸ್ಮಾಯಿಲ್ ಇನಾಮದಾರ ನೇತೃತ್ವದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಈ ತಂಡ ಅಕ್ರಮ ಮದ್ಯ ಹಾಗೂ ಸಂಬಂಧಿಸಿದ ಒಟ್ಟು 14 ಪ್ರಕರಣಗಳನ್ನು ದಾಖಲಿಸಿಕೊಂಡಿದೆ ಎಂದರು.

    ದಾಳಿಗಳಲ್ಲಿ ಅಬಕಾರಿ ನಿರೀಕ್ಷಕ ಪ್ರಕಾಶ ಮಾಕೊಂಡ, ಭೀಮಣ್ಣ ರಾಠೋಡ, ಶ್ರೀಶೈಲ್ ಒಡೆಯರ್, ಭಾರತಿ ಹಾಗೂ ಕೇದಾರನಾಥ ಇದ್ದರು.

  • ಹಾಲಾಯ್ತು, ಈಗ ಆಲ್ಕೋಹಾಲ್‍ನಲ್ಲೂ ಕಲಬೆರಕೆ – ಅರ್ಧ ಬಾಟಲ್ ಖಾಲಿ ಮಾಡ್ದಾಗ ಗೊತ್ತಾಯ್ತು ಸತ್ಯ

    ಹಾಲಾಯ್ತು, ಈಗ ಆಲ್ಕೋಹಾಲ್‍ನಲ್ಲೂ ಕಲಬೆರಕೆ – ಅರ್ಧ ಬಾಟಲ್ ಖಾಲಿ ಮಾಡ್ದಾಗ ಗೊತ್ತಾಯ್ತು ಸತ್ಯ

    ಕೋಲಾರ: ಬಿಯರ್ ಕುಡಿಯುವಾಗ ಬಾಟಲಿಯಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದ್ದು, ಕೋಲಾರದ ಗ್ರಾಹಕರೊಬ್ಬರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ಕೋಲಾರ ಜಿಲ್ಲೆಯ ಮಾಲೂರಿನ ಬೈರಸಂದ್ರ ಬಳಿಯ ಶ್ರೀ ಲಕ್ಷ್ಮೀ ವೈನ್ಸ್‍ನಲ್ಲಿ ಖರೀದಿಸಿದ ಬಿಯರ್ ನಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದೆ. ಚಿಲ್ಡ್ ಬಿಯರ್ ನಲ್ಲಿ ಕಲಬೆರಕೆಯಾಗಿದ್ದು, ಅರ್ಧ ಬಾಟಲಿ ಕುಡಿದ ಬಳಿಕ ಇದು ಗ್ರಾಹಕನ ಅರಿವಿಗೆ ಬಂದಿದೆ. ಈ ಕುರಿತು ಬಾರ್ ಮಾಲೀಕರ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಿಕ್ಸ್ ಮಾಡುವ ವೇಳೆ ಏನೋ ಬಿದ್ದಿದೆ ಎಂದು ಬಾರ್ ಮಾಲೀಕರು ಸಮರ್ಥಿಸಿಕೊಂಡಿದ್ದಾರೆ.

    ಕೋಲಾರದಲ್ಲಿ ಈ ಪ್ರಕರಣ ನಡೆದಿದ್ದು, ಟ್ಯೂಬರ್ಗ್ ಬಿಯರ್‍ಗೆ ಕಲಬೆರಕೆ ಮಾಡಲಾಗಿದೆ. ಇದನ್ನು ಕಂಡ ಗ್ರಾಹಕರು ಗಾಬರಿಯಾಗಿದ್ದು, ಮಾಲೀಕರ ವಿರುದ್ಧ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

    ಈ ಕುರಿತು ತನಿಖೆ ನಡೆಸಿ ಬಾರ್ ಅಥವಾ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರು ಅಬಕಾರಿ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ. ಘಟನೆ ನಂತರ ಅಬಕಾರಿ ಸಬ್ ಇನ್ಸ್‍ಪೆಕ್ಟರ್ ನಾರಾಯಣಸ್ವಾಮಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಗ್ರಾಹಕರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ಪ್ರಾರಂಭಿಸಿದ್ದಾರೆ.

  • ಅಬಕಾರಿ ಅಧಿಕಾರಿ ವಿರುದ್ಧ ಏಕವಚನದಲ್ಲಿ ಆಕ್ರೋಶ ಹೊರಹಾಕಿದ ಶಾಸಕ ಸುರೇಶ್ ಗೌಡ

    ಅಬಕಾರಿ ಅಧಿಕಾರಿ ವಿರುದ್ಧ ಏಕವಚನದಲ್ಲಿ ಆಕ್ರೋಶ ಹೊರಹಾಕಿದ ಶಾಸಕ ಸುರೇಶ್ ಗೌಡ

    ಮಂಡ್ಯ: ಅಕ್ರಮ ಮದ್ಯ ಮಾರಾಟದ ವಿರುದ್ಧ ದೂರುಗಳ ಸರಮಾಲೆ ಕೇಳಿ ಬಂದ ಹಿನ್ನೆಲೆಯಲ್ಲಿ, ಅಬಕಾರಿ ಅಧಿಕಾರಿ ಚಂದ್ರಶೇಖರ್ ಗೆ ಕರೆ ಮಾಡಿದ ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್‍ಗೌಡ ಏಕವಚನದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

    ನಾಗಮಂಗಲ ತಾಲೂಕಿನ ಪಾಲಗ್ರಹಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರವಾಸಿ ತಾಣ ಕೋಟೆಬೆಟ್ಟದಲ್ಲಿ ಶಾಸಕ ಸುರೇಶ್‍ಗೌಡ ಗ್ರಾಮ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಅಕ್ರಮ ಮದ್ಯ ಮಾರಾಟದ ಬಗ್ಗೆ ಮಹಿಳೆಯರು ಶಾಸಕರ ಬಳಿ ನೋವು ತೋಡಿಕೊಂಡಿದ್ದಾರೆ.

    ಈ ಹಿಂದೆ ನಡೆದ ಎರಡು ಪಂಚಾಯ್ತಿಗಳ ವ್ಯಾಪ್ತಿಯ ಗ್ರಾಮದರ್ಶನ ಕಾರ್ಯಕ್ರಮದಲ್ಲೂ ಸಹ ಇದೇ ದೂರುಗಳು ಕೇಳಿಬಂದಿದ್ದವು. ಇದನ್ನು ಅಬಕಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರವಾಗಿರಲಿಲ್ಲ. ಹೀಗಾಗಿ ಗ್ರಾಮಸ್ಥರೆದುರೇ ಅಬಕಾರಿ ಅಧಿಕಾರಿಗೆ ಕರೆ ಮಾಡಿ ಶಾಸಕ ಸುರೇಶ್‍ಗೌಡ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಅಬಕಾರಿ ನಿರೀಕ್ಷಕ ಜ್ಞಾನಪ್ರಕಾಶ ಏನು ಕತ್ತೆ ಮೇಯಿಸುತ್ತಿದ್ದಾನಾ. ಮೊನ್ನೆ 144 ಸೆಕ್ಷನ್ ಜಾರಿ ಇದ್ದರೂ ಬಾರ್ ಗಳಲ್ಲಿ ಡ್ರಿಂಕ್ಸ್ ಮಾರಿದ್ದಾರೆ. ಏನ್ ಕ್ರಮ ತಗೊಂಡಿದ್ದೀರಿ. ಏನ್ ತಮಾಷೆ ಆಡ್ತಿದ್ದೀರ. ಹಳ್ಳಿಗಳನ್ನು ಹಾಳು ಮಾಡುತ್ತಿದ್ದೀರಿ. ಲೋ… ಮಾರುತ್ತಿರುವುದು ಸಾರ್ವಜನಿಕರಿಗೆ ಗೊತ್ತಿದೆ ನಿಮಗೆ ಗೊತ್ತಿಲ್ವ. ಬರೀ ಕಥೆ ಹೇಳಬೇಡಿ. ಮಾರುವ ಅಂಗಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಮೊದಲು ಅದನ್ನು ವಿತರಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಆಕ್ರೋಶ ಹೊರಹಾಕಿದರು.

    ಶಾಸಕರ ಸಿಟ್ಟಿಗೆ ಹೆದರಿ ಸ್ಥಳಕ್ಕೆ ಬಂದ ಅಬಕಾರಿ ಅಧಿಕಾರಿ ಚಂದ್ರಶೇಖರ್ ಬಂದಿದ್ದಾರೆ. ಇನ್ನೂ ಕ್ರಮ ಕೈಗೊಳ್ಳದೇ ಇದ್ದರೆ ನಿಮ್ಮನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಸುರೇಶ್ ಗೌಡ ಎಚ್ಚರಿಕೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv