Tag: Ex Prime Minister HD Deve Gowda

  • ಮಾಜಿ ಪ್ರಧಾನಿ ಎಚ್‍ಡಿಡಿಗೆ ಶಾಂತಿ ಪದಕ ಪ್ರದಾನ

    ಮಾಜಿ ಪ್ರಧಾನಿ ಎಚ್‍ಡಿಡಿಗೆ ಶಾಂತಿ ಪದಕ ಪ್ರದಾನ

    ಸಿಯೋಲ್/ಬೆಂಗಳೂರು: ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ದಕ್ಷಿಣ ಕೊರಿಯಾ ಪ್ರವಾಸ ಕೈಗೊಂಡಿದ್ದಾರೆ. ಇವತ್ತು ದಕ್ಷಿಣ ಕೊರಿಯಾದಲ್ಲಿ ನಡೆದ ಯುಎನ್‍ನ ಶಾಂತಿಗಾಗಿ ಅಂತಾರಾಷ್ಟ್ರೀಯ ಶೃಂಗಸಭೆ ಹೆಸರಿನ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಯುಎನ್‍ನ ಅಂಗಸಂಸ್ಥೆ, ಅಂತಾರಾಷ್ಟ್ರೀಯ ಸಂಸ್ಥೆಯಾದ ಯುನಿವರ್ಸಲ್ ಪೀಸ್ ಫೆಡರೇಶನ್ ಆಯೋಜಿಸಿದ್ದ 2020ರ ಸಮ್ಮೇಳದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

    ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ಭಾರತದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಎಚ್‍ಡಿಡಿ ಮಾತನಾಡಿದರು. ಕಳೆದ ವರ್ಷದಿಂದ ಹೆಚ್ಚಾಗಿರುವ ಪ್ರತಿಭಟನೆಗಳು ಹಾಗೂ ಅವುಗಳು ಹೆಚ್ಚಾಗಲು ಸರ್ಕಾರ ಮತ್ತು ಜನರ ನಡುವೆ ಬಂದಿರುವ ಭಿನ್ನಾಭಿಪ್ರಾಯವೇ ಕಾರಣ. ಅದು ಸರಿಯಾದರೇ ಪ್ರತಿಭಟನೆಗಳ ಸಂಖ್ಯೆ ಬಹುತೇಕ ಇಳಿಕೆಯಾಗುವಲ್ಲಿ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟರು.

    ಎಲ್ಲಾ ಚರ್ಚೆಗಳ ನಂತರ ಎಚ್‍ಡಿಡಿಗೆ ಶಾಂತಿ ಪದಕ (ಐಎಸ್‍ಸಿಪಿ) ಕೊಟ್ಟು ಗೌರವಿಸಲಾಯಿತು. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಎಚ್‍ಡಿಡಿ ಅವರಿಗೆ ಸಂದ ಬಹು ದೊಡ್ಡ ಗೌರವವಾಗಿದೆ.

  • ಮಧ್ಯಂತರ ಚುನಾವಣೆ ಬಂದ್ರೆ ಏಕಾಂಗಿಯಾಗಿ ಸ್ಪರ್ಧೆ: ಎಚ್‍ಡಿಡಿ

    ಮಧ್ಯಂತರ ಚುನಾವಣೆ ಬಂದ್ರೆ ಏಕಾಂಗಿಯಾಗಿ ಸ್ಪರ್ಧೆ: ಎಚ್‍ಡಿಡಿ

    ಬೆಂಗಳೂರು: ರಾಜ್ಯದಲ್ಲಿ ಯಾವಾಗಬೇಕಾದರು ಮಧ್ಯಂತರ ಚುನಾವಣೆ ಬರಬಹುದು ಕಾರ್ಯಕರ್ತರು ಸಿದ್ಧವಾಗಿ ಇರುವಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

    ಪಕ್ಷ ಸಂಘಟನೆಗೆ ನಡೆದ ಇಂದಿನ ಸಭೆಯಲ್ಲಿ ಮುಖಂಡರಿಗೆ ಮಧ್ಯಂತರ ಚುನಾವಣೆ ಸುಳಿವು ನೀಡಿದ ದೇವೇಗೌಡರು, ಶಿವಮೊಗ್ಗ, ಚಿಕ್ಕಮಗಳೂರು, ಕೊಡುಗು ಜಿಲ್ಲೆಯ ಜೆಡಿಎಸ್ ಮುಖಂಡರೊಂದಿಗೆ ಸಭೆ ನಡೆಸಿದರು.

    ಸಭೆಯಲ್ಲಿ ಮಧ್ಯಂತರ ಚುನಾವಣೆ ಬಂದೇ ಬರುತ್ತೆ ಎಂದರು ಭವಿಷ್ಯ ನುಡಿದ ಎಚ್‍ಡಿಡಿ, ಇಂದಿನ ರಾಜಕೀಯ ಪರಿಸ್ಥಿತಿ ನೋಡಿದರೆ ಮಧ್ಯಂತರ ಚುನಾವಣೆ ಸಾಧ್ಯತೆ ಹೆಚ್ಚಿದೆ. ಮುಖಂಡರು ಮೈಮರಿಯದೆ ಪಕ್ಷ ಸಂಘಟನೆ ಮಾಡಿ. ಮಧ್ಯಂತರ ಚುನಾವಣೆ ಬಂದರೆ ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಸ್ಪಷ್ಟಪಡಿಸಿದರು.

    ಮಧ್ಯಂತರ ಚುನಾವಣೆ ಬಂದರೆ ನಾವು ಏಕಾಂಗಿ ಸ್ಪರ್ಧೆ ಮಾಡೋಣ. ಈ ಬಾರಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಜನವರಿ, ಫೆಬ್ರವರಿಯಲ್ಲಿ ಚುನಾವಣೆ ಬಂದರು ಯಾವುದೇ ಅಚ್ಚರಿ ಬೇಡ. ಹೀಗಾಗಿ ಸಿದ್ಧರಾಗಿದ್ದು, ಜಿಲ್ಲಾ ಪದಾಧಿಕಾರಿಗಳ ಬದಲಾವಣೆ ಮಾಡುವುದಾದರೆ ಮಾಡಿ. ಈ ತಿಂಗಳು ಆದ ಮೇಲೆ ನಾನು ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ಕುಮಾರಸ್ವಾಮಿ ಅವರು ಕೂಡಾ ಜಿಲ್ಲೆಗಳ ಪ್ರವಾಸ ಮಾಡುತ್ತಾರೆ ಎಂದು ಪಕ್ಷದ ಮುಖಂಡರಿಗೆ ವಿಶ್ವಾಸ ತುಂಬಿದರು.

    ಸಮ್ಮಿಶ್ರ ಸರ್ಕಾರದಲ್ಲಿ ಎಚ್‍ಡಿಕೆ ಒಳ್ಳೆ ಕೆಲಸ ಮಾಡಿದ್ದರು. ಆದರೆ ಯಾರು ಬೆಂಬಲ ಕೊಡಲಿಲ್ಲ. ಕುಮಾರಸ್ವಾಮಿ ಸಿಎಂ ಆದಾಗ ಮಾಡಿದ ಕೆಲಸವನ್ನು ಮನೆ ಮನೆಗೆ ತಲುಪಿಸಿ. ಮಧ್ಯಂತರ ಚುನಾವಣೆ ನಡೆದರೆ ಜೆಡಿಎಸ್ ಗೆಲುವು ನಿಶ್ಚಿತ. ಪಕ್ಷ ಬಿಟ್ಟು ಹೋದವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ತುಂಬಾ ಜನ ಹೀಗೆ ಪಕ್ಷ ಬಿಟ್ಟು ಹೋಗಿದ್ದಾರೆ. ಪಕ್ಷದಲ್ಲಿ ಬೆಳೆದು ಇವತ್ತು ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ನನಗೆ ಪಕ್ಷ ಕಟ್ಟೋದು ಗೊತ್ತು. ಕಾರ್ಯಕರ್ತರು ನನ್ನ ಜೊತೆ ಇದ್ದರೆ ಸಾಕು. ಮತ್ತೆ ಪಕ್ಷ ಅಧಿಕಾರಿಕ್ಕೆ ತರುತ್ತೇನೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

  • ಬಿಎಸ್‍ವೈ ಹೇಳಿದಂತೆ ಡಿಕೆಶಿಯನ್ನ ಅಪ್ಪ-ಮಕ್ಕಳು ಬೀದಿಯಲ್ಲಿ ನಿಲ್ಲಿಸಿದ್ದಾರೆ: ಎ.ಮಂಜು

    ಬಿಎಸ್‍ವೈ ಹೇಳಿದಂತೆ ಡಿಕೆಶಿಯನ್ನ ಅಪ್ಪ-ಮಕ್ಕಳು ಬೀದಿಯಲ್ಲಿ ನಿಲ್ಲಿಸಿದ್ದಾರೆ: ಎ.ಮಂಜು

    – ಕೆಎಂಎಫ್ ನಲ್ಲಿ ಭಾರೀ ಹಗರಣ
    – ರೇವಣ್ಣ ವರ್ಗಾವಣೆ ಮಂತ್ರಿ

    ಹಾಸನ: ಸದನದಲ್ಲಿ ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದಂತೆ ಇಂದು ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಅಪ್ಪ-ಮಕ್ಕಳು ಮುಂಬೈ ಬೀದಿಯಲ್ಲಿ ನಿಲ್ಲಿಸಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಹೇಳಿದ್ದಾರೆ.

    ನಗರದಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಪ್ಪ-ಮಕ್ಕಳ ಜೊತೆ ಹೋದರೆ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಯಾವುದೋ ಕಾಲದಿಂದಲೂ ಹೇಳಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಈ ಬಗ್ಗೆ ನೇರವಾಗಿ ಹೇಳಿದ್ದೆ. ಈಗ ಅವರು ಇದನ್ನು ಅರ್ಥೈಸಿಕೊಂಡಂತೆ ಕಾಣಿಸುತ್ತಿದೆ. ಆದರೆ ಈಗಲೂ ಕೂಡ ಸಿದ್ದರಾಮಯ್ಯ ಅವರ ಮೇಲೆಯೇ ಆರೋಪ ಮಾಡಲಾಗುತ್ತಿದೆ. ಜೆಡಿಎಸ್ ಪಕ್ಷದಿಂದ ಹೋದ ಶಾಸಕರ ಬಗ್ಗೆ ಮಾತನಾಡುತ್ತಿಲ್ಲ ಎಂದರು.

    ಇದೇ ಸಂದರ್ಭದಲ್ಲಿ ಕೆಎಂಎಫ್ ನಲ್ಲಿ ಭಾರೀ ಹಗರಣ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಈ ಹಗರಣಗಳು ಹಾಸನ ಜಿಲ್ಲೆಯ ರೈತರಿಗೆ ಮಾರಕವಾಗಿದೆ. ಕೆಎಂಎಫ್ ಆಡಳಿತ ಮಂಡಳಿಯಿಂದ ಒಂದು ಲೀಟರ್ ಗೆ 23 ರೂ. ನೀಡುತ್ತಿದೆ. ಮಂಡ್ಯ, ಮೈಸೂರಿನಲ್ಲಿ 25 ರೂ. ಲೀಟರ್ ನೀಡಲಾಗುತ್ತಿದೆ. ಒಬ್ಬ ರೈತನಿಗೆ ಎರಡು ರೂಪಾಯಿ ಕಡಿಮೆ ಹಣ ನೀಡುತ್ತಿದ್ದಾರೆ. ಪ್ರತಿ ದಿನ 10 ಲಕ್ಷ ಲೀಟರ್ ಹಾಲು ಸಂಗ್ರಹಣೆ ಆಗುತ್ತಿದೆ. ದಿನಕ್ಕೆ 20 ಲಕ್ಷ ರೂ. ತಿಂಗಳಿಗೆ 6 ಕೋಟಿ ರೂ. ರೈತರಿಗೆ ನಷ್ಟ ಆಗುತ್ತಿದೆ ಎಂದರು.

    ಸಚಿವ ರೇವಣ್ಣ ಅವರಿಗೆ ಕೆಎಂಎಫ್ ಮೇಲೆ ವ್ಯಾಮೋಹವಿದೆ. ಅದು ಕೂಡ ಸರ್ಕಾರ ಅಭದ್ರತೆಗೆ ಇದು ಒಂದು ಕಾರಣವಾಗಿದ್ದು, ಆದರೂ ಅವರು ತಮ್ಮ ಹಳೇ ಚಾಳಿ ಬಿಟ್ಟಿಲ್ಲ. ಸರ್ಕಾರ ಸಂಕಷ್ಟದಲ್ಲಿದ್ದರೂ ಲೋಕೋಪಯೋಗಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಸಚಿವರ ಸ್ಥಾನ ಬದಲಾಗಿದ್ದು, ಅವರು ವರ್ಗಾವಣೆ ಮಂತ್ರಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಸುಪ್ರೀಂಕೋರ್ಟ್ ನ ಎಲ್ಲಾ ಆದೇಶಗಳನ್ನು ಗಾಳಿಗೆ ತೂರಿ ಬಡ್ತಿ ನೀಡಿ ವರ್ಗಾವಣೆ ಮಾಡಲಾಗುತ್ತಿದೆ. ಇದಕ್ಕೆ ರಾಜ್ಯಪಾಲರು ಕೂಡಲೇ ತಡೆ ನೀಡಬೇಕು ಎಂದು ಒತ್ತಾಯಿಸಿದರು.

    ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ ತನ್ನ ಸ್ಥಾನಗಳನ್ನು ಕಳೆದುಕೊಂಡಿದೆ. ಅಲ್ಲದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದಿಂದ ಅಭಿವೃದ್ಧಿಯಾಗಲ್ಲ ಎಂದು ಜನ ಮನಗಂಡಿದ್ದಾರೆ. ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಜನಪರವಾದ ಕೆಲಸವನ್ನು ಮಾಡುತ್ತದೆ. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಮಧ್ಯಂತರ ಚುನಾವಣೆ ಬೇಡ, ಸರ್ಕಾರ ನಡೆಸಲು ಆಗಲಿಲ್ಲ ಅಂದ್ರೆ ಬಿಟ್ಟು ಹೋಗಿ – ಯಡಿಯೂರಪ್ಪ ಗುಡುಗು

    ಮಧ್ಯಂತರ ಚುನಾವಣೆ ಬೇಡ, ಸರ್ಕಾರ ನಡೆಸಲು ಆಗಲಿಲ್ಲ ಅಂದ್ರೆ ಬಿಟ್ಟು ಹೋಗಿ – ಯಡಿಯೂರಪ್ಪ ಗುಡುಗು

    ಬೆಂಗಳೂರು: ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಮಧ್ಯಂತರ ಚುನಾವಣೆ ನಡೆಯುವ ಬಗ್ಗೆ ನೀಡಿರುವ ಹೇಳಿಕೆ ವಿರುದ್ಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕಿಡಿಕಾರಿದ್ದಾರೆ. ಅಲ್ಲದೇ ಸರ್ಕಾರ ನಡೆಸಲು ಸಾಧ್ಯವಾಗದಿದ್ದರೆ ಬಿಟ್ಟು ಹೋಗಲಿ. ನಾವು ಸರ್ಕಾರ ರಚಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‍ವೈ, ನಾವು ಸರ್ಕಾರ ರಚಿಸಲು ಸಿದ್ಧರಾಗಿದ್ದು, ಯಾವುದೇ ಕಾರಣಕ್ಕೆ ಮಧ್ಯಂತರ ಚುನಾವಣೆ ಬೇಡ. ಜನರು ನೀಡಿರುವ ಜನಾದೇಶಕ್ಕೆ ವಿರೋಧವಾಗಿ ನಡೆಯುವುದು ಸೂಕ್ತವಲ್ಲ. ನಾವು 105 ಶಾಸಕರನ್ನು ಹೊಂದಿದ್ದು, ಸರ್ಕಾರ ರಚನೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧವಾಗಿಲ್ಲ ಎಂದರು.

    ಈ ಬಗ್ಗೆ ನಾನು ಈಗಾಗಲೇ ಸ್ಪಷ್ಟನೆ ನೀಡಿದ್ದು, 37 ಶಾಸಕರನ್ನು ಇಟ್ಟುಕೊಂಡು ಸರ್ಕಾರ ರಚನೆ ಮಾಡಿ ಈಗ ಚುನಾವಣೆ ಹೋಗೋಣ ಎನ್ನುತ್ತಾರೆ. 11 ತಿಂಗಳಿನಿಂದ ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆಯಾಗಿದ್ದು, ಅವರ ತೀಟೆ ತಿರಿಸಿಕೊಳ್ಳಲು ಮತ್ತೊಂದು ಚುನಾವಣೆ ಬೇಕಾ ಎಂದು ಪ್ರಶ್ನಿಸಿದರು. ಅಲ್ಲದೇ ಇಂದು ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಎಂದು ತೆರಳಿದ್ದರೆ, ಆದರೆ ಇತ್ತ ಅವರ ತಂದೆ ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುತ್ತಾರೆ. ಆದರೆ ಈ ಮಾತಿಗೆ ಕಾಂಗ್ರೆಸ್, ಸಿದ್ದರಾಮಯ್ಯ ಅವರ ಒಪ್ಪಿಗೆ ಅಗತ್ಯವಿದೆ. ಆದರೆ ಈ ರೀತಿ ಹೇಳಿಕೆ ನೀಡುವುದರಿಂದ ಅಧಿಕಾರಿಗಳಲ್ಲಿ ಗೊಂದಲ ಉಂಟಾಗುತ್ತದೆ ಎಂದರು.

    ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರ ಆಪರೇಷನ್ ಕಮಲ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್‍ವೈ ಅವರು, ಅವರ ಬಳಿ 135 ರಿಂದ 136 ಮಂದಿ ಶಾಸಕರಿದ್ದಾರೆ. ಆದರೆ ಅವರಲ್ಲಿ ಸುಮಾರು 20 ಜನ ಅತೃಪ್ತ ಶಾಸಕರಿದ್ದಾರೆ. ಅವರಾಗಿಯೇ ಸರ್ಕಾರವನ್ನು ಬಿಟ್ಟು ಹೋದರೆ ನಾವು ಜವಾಬ್ದಾರಿ ಅಲ್ಲ. ಈ ಹಿಂದೆ ಸ್ಪಷ್ಟಪಡಿಸಿರುವಂತೆ ಯಾವುದೇ ಶಾಸಕರನ್ನು ಸಂಪರ್ಕ ಮಾಡಿಲ್ಲ. ಅವರಾಗಿಯೇ ಸರ್ಕಾರ ಬಿಟ್ಟು ಬಂದರೆ ಮಾತ್ರ ವಿಚಾರಣೆ ಮಾಡುತ್ತೇವೆ. ಅಲ್ಲಿಯವರೆಗೂ ನಾವು ಕಾದು ನೋಡುತ್ತೇವೆ ಎಂದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಲೋಟಸ್ vs ಲೂಟ್ ಅಸ್ ನಡುವಿನ ಚುನಾವಣೆ – ಉಡುಪಿಯಲ್ಲಿ ಸಿಟಿರವಿ ಟಾಂಗ್

    ಲೋಟಸ್ vs ಲೂಟ್ ಅಸ್ ನಡುವಿನ ಚುನಾವಣೆ – ಉಡುಪಿಯಲ್ಲಿ ಸಿಟಿರವಿ ಟಾಂಗ್

    ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಬಿಜೆಪಿ ಶಾಸಕ ಸಿಟಿ ರವಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ಮಾಡಿದರು.

    ಸಿದ್ದರಾಮಯ್ಯ ಕುಂಕುಮ ಹಾಕುವವರನ್ನು ಕಂಡರೆ ಭಯವಾಗುತ್ತೆ ಅಂತಾರೆ. ಅವರ ಮನೆಯವರೂ ಕುಂಕುಮ ಅಳಿಸೇ ಓಡಾಡ್ತಾರೆ ಅಂದ್ಕೊಂಡೆ ಎಂದು ನಾಲಗೆ ಹರಿಯಬಿಟ್ಟ ಸಿಟಿ ರವಿ ಅವರು, ರಾಹುಲ್ ಗಾಂಧಿ ಮಾರಮ್ಮನ ಹರಕೆಯ ಕುರಿ ತರ ಕುಂಕುಮ ಹಾಕಿಕೊಂಡಿದ್ದರು. ಕಾಂಗ್ರೆಸ್ ಹರಕೆಯ ಕುರಿಯಾಗಲಿ ರಾಹುಲ್ ಆಗೋದು ಬೇಡ ಎಂದು ಹೇಳಿದರು.

    ಎಚ್‍ಡಿಡಿಗೆ ತಿರುಗೇಟು: ದೇವೇಗೌಡರು ಅಪ್ಪನಾಣೆ ಮೋದಿ ಪ್ರಧಾನಿ ಆಗಲ್ಲ ಎಂದಿದ್ದರು. ಅಪ್ಪನಾಣೆ ಮೋದಿ ಪ್ರಧಾನಿಯಾಗಲ್ಲ ಅಂತ ಓಡಾಡಿದರು. ಆದರೆ ಮೋದಿ 5 ವರ್ಷ ಪ್ರಧಾನಿಯಾದರು. ಈಗ ರೇವಣ್ಣ ಅಪ್ಪನಾಣೆ ಹಾಕುತ್ತಾರೆ. ನಿಮ್ಮ ನಿಂಬೆ ಹಣ್ಣು, ಮಾಟ ಮಂತ್ರ ನಮ್ಮಲ್ಲಿ ನಡೆಯಲ್ಲ. ನಿಂಬೆ ಹಣ್ಣು ಹೊಳೆನರಸೀಪುರಕ್ಕೆ ಮಾತ್ರ ಸಿಮೀತ ಎಂದರು.

    ಕರಾವಳಿ ಜನಕ್ಕೆ ತಿಳುವಳಿಕೆ, ಬುದ್ಧಿ ಇಲ್ಲವೆಂದು ಸಿಎಂ ಕುಮಾರಸ್ವಾಮಿ ಹೇಳುತ್ತಾರೆ. ಆದರೆ ನಿಮ್ಮ ತರದ ತಿಳುವಳಿಕೆ ನಮಗೆ ಏಳು ಜನ್ಮಕ್ಕೂ ಬರುವುದು ಬೇಡ. ಮೋಸ ಮಾಡುವುದು ನಿಮ್ಮ ಜಾಯಿಮಾನ. ನಿಮ್ಮ ತಿಳುವಳಿಕೆ ಬುದ್ಧಿ ನೋಡಿ ಜನ ಬದಲಾಗುತ್ತಾರೆ. ಕುಟುಂಬದ ರಾಜಕಾರಣ ಸೋಲಿಸುತ್ತಾರೆ ಎಂದು ಭವಿಷ್ಯ ನುಡಿದರು.

    ಈ ಬಾರಿಯ ಚುನಾವಣೆ ಚೌಕಿದಾರ ಮತ್ತು ಚೋರರ ನಡುವಿನ ಚುನಾವಣೆಯಾಗಿದೆ. ಪ್ರಜಾಪ್ರಭುತ್ವ ಮತ್ತು ಕುಟುಂಬದ ನಡುವಿನ ಚುನಾವಣೆ ಇದಾಗಿದ್ದು, ಪ್ರಧಾನಿ ಮೋದಿಗೆ 130 ಕೋಟಿ ಜನವೇ ಕುಟುಂಬ. ಕರ್ನಾಟಕದ ಅಪ್ಪ, ಮಕ್ಕಳ ಕುಟುಂಬ ಉಡುಪಿ ಅಭ್ಯರ್ಥಿ ಪ್ರಮೋದ್ ಮಧ್ವರಾಜರನ್ನು ಹರಕೆಯ ಕುರಿ ಮಾಡಿದ್ದಾರೆ. ಪ್ರಮೋದ್ ಮದ್ವರಾಜ್ ಗೆ ತಾಯತ ಕಟ್ಟಿಸಿ. ಜೆಡಿಎಸ್ ಅವರು ಯಾರನ್ನು ಬದುಕಲು ಬಿಟ್ಟಿಲ್ಲ. ಪ್ರಮೋದ್ ಅವರಿಗೆ ತಾಯತ ಕಟ್ಟಿಸಲು ಅವರ ತಾಯಿಗೆ ಮನವಿ ಮಾಡುತ್ತೇನೆ ಎಂದರು.

    ಮೋದಿ ಮನೆ ಹಾಳಾಗ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಮೋದಿಗೆ ದೇಶವೇ ಮನೆ. ದೇಶ ಹಾಳಾಗಲಿ ಎಂದು ಅವರು ಹೇಳಿದ್ದಾರೆ. ಲೋಟಸ್ vs ಲೂಟ್ ಅಸ್ ನಡುವಿನ ಚುನಾವಣೆ ಇದು ಸಿಟಿ ರವಿ ಹೇಳಿದರು.

  • ಈಗಿನ ಯುವಕರು ಮೋದಿ, ಮೋದಿ ಅಂತಾರೆ – ನಾನು ನೋಡದ ಮೋದಿನಾ: ಎಚ್‍ಡಿಡಿ ಗುಡುಗು

    ಈಗಿನ ಯುವಕರು ಮೋದಿ, ಮೋದಿ ಅಂತಾರೆ – ನಾನು ನೋಡದ ಮೋದಿನಾ: ಎಚ್‍ಡಿಡಿ ಗುಡುಗು

    ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಮತದಾನಕ್ಕೆ ಕೆಲ ದಿನಗಳು ಬಾಕಿ ಇದ್ದು, ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯವನ್ನು ಹೆಚ್ಚಿಸಿದೆ. ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಈಗಿನ ಯುವಕರು ಮೋದಿ, ಮೋದಿ ಅಂತಿದ್ದಾರೆ. ಆದರೆ ನಾನು ನೋಡದ ಮೋದಿನಾ ಎಂದು ಹೇಳಿ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಜನರ ಆಶೀರ್ವಾದದಿಂದ ನಾನು ಪಾರ್ಲಿಮೆಂಟ್ ಹೋಗೋದು ಸತ್ಯ. ಮೋದಿ ಅವರನ್ನು ಎದುರಿಸುವ ಕಿಚ್ಚು ಈ ರೈತನ ಮಗನಿಗೆ ಇದೆ. ಸ್ವರ್ಗವನ್ನ ಈ ದೇಶಕ್ಕೆ ತರುತ್ತೇನೆ ಎಂದ ಆ ಮನುಷ್ಯ ರೈತರಿಗೆ ಏನು ಮಾಡಿದ್ದಾರೆ. ಮೋದಿ ಸೈನಿಕರಿಗೆ ಶೂ, ಬಟ್ಟೆ ಜಾಕೆಟ್ ಇರಲ್ಲಿಲ್ಲ ನಾವು ಕೊಟ್ಟೆವು ಅಂತಿದ್ದಾರೆ. ವಾಜಪೇಯಿ ಇದ್ದಾಗ ಕಾರ್ಗಿಲ್ ಯುದ್ದ ಮಾಡುವಾಗ ನಮ್ಮ ಸೈನಿಕರಿಗೆ ಏನು ಇರಲಿಲ್ವಾ ಎಂದು ಪ್ರಶ್ನೆ ಮಾಡಿ, ಸೈನಿಕರಿಗೆ ನಾವೇ ಎಲ್ಲವನ್ನು ನೀಡಿದ್ದೇವೆ ಎನ್ನುವವರಿಗೆ ನಾಚಿಕೆ ಆಗಬೇಕು ಎಂದರು.

    ಯುವಕರು ಸಾಮಾಜಿಕ ಜಾಲತಾಣಗಳ ಹಿಂದೆ ಬಿದ್ದು ಮೋಸ ಹೋಗಬಾರದು. ನಾವೇ ಯುದ್ಧ ಮಾಡಿದ್ದು ಎಂದು ಮಾಧ್ಯಮಗಳನ್ನು ಮುಂದಿಟ್ಟುಕೊಂಡು ಬೊಬ್ಬೆ ಹಾಕುತ್ತಿದ್ದಾರೆ. ಏನು ಇವರೊಬ್ಬರೇ ಯುದ್ಧ ಮಾಡಿದರಾ ಎಂದು ಪ್ರಶ್ನಿಸಿದರು. ಅಲ್ಲದೇ ಈ ಹಿಂದೆ ಹಿಂದೆ ಕಾಂಗ್ರೆಸ್ ಬೇರೆ ಪಕ್ಷಗಳು ಇದ್ದಾಗಲೂ ದೇಶದಲ್ಲಿ ಯುದ್ಧ ನಡೆದಿದೆ. ಇದು ಸೈನ್ಯದ ಶಕ್ತಿ ಹಾಗೂ ಸಾಮಥ್ರ್ಯ ಆಗಿದ್ದು, ಇದರಿಂದ ರೈತರ ಮಕ್ಕಳು ಮೋಸ ಹೋಗಬಾರದು. ಈ ದೇಶ ಆಳುವ ಶಕ್ತಿ ನಮಗೆ ಅಥವಾ ಸಿದ್ದರಾಮಯ್ಯ ರಂತಹ ನಾಯಕರಿಗೆ ಇಲ್ವಾ ಎಂದರು.

    ಏನೋ ದೊಡ್ಡದಾಗಿ ಕಡಿದು ಕಟ್ಟೆ ಹಾಕಿದ್ದೇನೆಂದು ಮಾಧ್ಯಮಗಳನ್ನು ಮುಂದಿಟ್ಟುಕೊಂಡು ಮೋದಿ-ಮೋದಿ ಅಂತರೆ ಎಂದು ದೇವೇಗೌಡರು ತಲೆ ಚಚ್ಚಿಕೊಂಡರು. ನಾಲ್ಕು ವರ್ಷದ ಹಿಂದ ರಾಹುಲ್ ಏನೂ ಪ್ರಯೋಜನವಿಲ್ಲ ಎಂದು ಬಿಂಬಿಸಿದ್ದಾರೆ. ಆತ ಇಂದು ರಫೆಲ್‍ನಲ್ಲಿ 30 ಸಾವಿರ ಕೋಟಿ ಅಕ್ರಮ ಮಾಡಿದ್ದಾರೆ ಎಂದು ಸವಾಲು ಮಾಡುತ್ತಾರೆ. ಈ ಸಂದರ್ಭದಲ್ಲಿ ಈ ಮನುಷ್ಯ ಪಾರ್ಲಿಮೆಂಟ್ ಒಳಗೆ ಬರಲಿಲ್ಲ ಎಂದು ವ್ಯಂಗ್ಯವಾಡಿದರು.

  • ನಿಖಿಲ್ ಪಟ್ಟಾಭಿಷೇಕದ ವೇಳೆ ಎಚ್‍ಡಿಕೆ ಸಿಎಂ ಆದ ಕಥೆ ಬಿಚ್ಚಿಟ್ಟ ಎಚ್‍ಡಿಡಿ

    ನಿಖಿಲ್ ಪಟ್ಟಾಭಿಷೇಕದ ವೇಳೆ ಎಚ್‍ಡಿಕೆ ಸಿಎಂ ಆದ ಕಥೆ ಬಿಚ್ಚಿಟ್ಟ ಎಚ್‍ಡಿಡಿ

    ಮಂಡ್ಯ: ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ರಚನೆ ವೇಳೆ ಕುಮಾರಸ್ವಾಮಿ ಸಿಎಂ ಆಗಿದ್ದು ಹೇಗೆ ಎನ್ನುವ ಕಥೆಯನ್ನು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

    ಮಂಡ್ಯ ಲೋಕಸಭಾ ಚುನಾವಣೆಗೆ ಮೊಮ್ಮಗ ನಿಖಿಲ್ ರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ ಬಳಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಜೆಡಿಎಸ್ ಪಕ್ಷಕ್ಕೆ 37 ಸ್ಥಾನ ಲಭ್ಯವಾದ ವೇಳೆ ಕಾಂಗ್ರೆಸ್ ಹೈಕಮಾಂಡ್ ತನ್ನ ನಾಯಕರನ್ನು ನಮ್ಮ ಬಳಿಗೆ ಕಳುಹಿಸಿ ಕುಮಾರಸ್ವಾಮಿ ಅವರೇ ಸಿಎಂ ಆಗುವಂತೆ ಮನವಿ ಮಾಡಿದ್ದರು. ಆದರೆ ನಾನು ವಾಸ್ತವ ತಿಳಿಸಿ ಸಿಎಂ ಬೇಡ ಎಂದು ತಿಳಿಸಿದೆ. ಏಕೆಂದರೆ ಕುಮಾರಸ್ವಾಮಿ ಅವರಿಗೆ ಆ ವೇಳೆಗೆ 2 ಆಪರೇಷನ್ ಆಗಿತ್ತು. ಅದಕ್ಕೆ ಸಿಎಂ ಸ್ಥಾನಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಆಗ ಪಕ್ಕದಲ್ಲೇ ಇದ್ದ ಖರ್ಗೆಗೆ ಬೆಂಬಲ ನೀಡುತ್ತೇನೆ ಸಿಎಂ ಮಾಡಿ ಎಂದಿದ್ದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ಒಪ್ಪಿಗೆ ನೀಡಲಿಲ್ಲ ಎಂದರು ವಿವರಿಸಿದರು.

    ನನ್ನ ಮೊಮ್ಮಗನನ್ನು ರಾಜಕೀಯಕ್ಕೆ ತರುವುದು ಜನರ ಒತ್ತಡವೇ ಕಾರಣ. ನಿಖಿಲ್ ಸಿನಿಮಾ ರಂಗದಲ್ಲೇ ಚೆನ್ನಾಗಿದ್ದ, ಆದರೆ ಕುಮಾರಸ್ವಾಮಿ ಅವರಿಗೆ ಅನಾರೋಗ್ಯ ಕಾಡಿದ್ದ ವೇಳೆ ನಿಖಿಲ್ ತಂದೆಗೆ ಬೆಂಬಲ ನೀಡಿ ಪಕ್ಷ ಕಟ್ಟುವ ಕೆಲಸ ಮಾಡುವ ಆಸೆಯಿಂದ ಈ ನಿರ್ಧಾರ ಮಾಡಿದ್ದೇನೆ. ನಾನು ನಮ್ಮ ತಂದೆಗೆ 2ನೇ ಹೆಂಡತಿಯ ಮಗ, ನಮ್ಮ ಕುಟುಂಬಕ್ಕೆ ಅಂದು ನೀವು ಬೆಂಬಲ ಇಂದಿಗೂ ಇದೆ ಎಂದು ನೆನಪಿಸಿಕೊಂಡರು. ನಿಮ್ಮ ಸೇವೆ ಮುಂದುವರಿಸಲು ನಿಮ್ಮ ಬೆಂಬಲ ಅಗತ್ಯ ಇದೆ ಎಂದರು.

    ನಾನು ಪ್ರಧಾನಿಯಾಗಿ ಮಾಡಿದ ಕಾರ್ಯ ಇಂದು ಗುರುತಿಸುವ ಕಾರ್ಯ ನಡೆಯುತ್ತಿದೆ. ನಾನು ಮಾಡಿದ ಕಾರ್ಯದ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಅವಧಿಯಲ್ಲೇ ಯೂರಿಯಾ ಬೆಲೆ ಕಡಿಮೆ ಮಾಡಿದ್ದೆ. ನನ್ನ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ದೇಶದಲ್ಲಿ ಇಂತಹ ಸಂದಿಗ್ಧ ಸ್ಥಿತಿ ನಿರ್ಮಾಣ ಆಗಿದೆ. ಬಿಜೆಪಿಯ ದುರಾಡಳಿತಕ್ಕೆ ಈಗಾಗಲೇ ಜನ ಉತ್ತರ ನೀಡಿದ್ದಾರೆ. ಅದಕ್ಕೆ 5 ರಾಜ್ಯಗಳ ಚುನಾವಣೆಯೇ ನಿಮ್ಮ ಮುಂದಿದೆ. ಕಾಂಗ್ರೆಸ್ ಮುಕ್ತ ಭಾರತ ಎಂದಿದ್ದ ಮೋದಿ ಅವರಿಗೆ ಜನರು ಸೂಕ್ತ ಸಂದೇಶ ನೀಡಿದ್ದಾರೆ. ಈಗ ಕಾಂಗ್ರೆಸ್, ಜೆಡಿಎಸ್ ಎಲ್ಲವನ್ನು ಮರೆತು ಒಂದೇ ತಾಯಿಯ ಮಕ್ಕಳಂತೆ ಮುನ್ನಡೆಯ ಬೇಕು ಎಂದು ಕರೆ ನೀಡಿದರು.

    ಬುಧವಾರ ನಡೆದ ಕಾರ್ಯಕ್ರಮದಲ್ಲಿ ನಾನು ಭಾವುಕನಾಗಿದ್ದೆ, ಆದರೆ ಇಂದು ಆಗಲ್ಲ. ಹಾಸನದಲ್ಲಿ ನಾನು 60 ವರ್ಷದ ಹಿಂದೆ ಯುವಕನಾಗಿ ಬಂದ ನನಗೆ ಮೂಡಲಹಿಪ್ಪೆ ಜನ ಬೆಂಬಲ ನೀಡಿದ್ದರು. ಅವರನ್ನು ನೋಡಿ ನಾನು ಭಾವುಕನಾದೆ. ಆದರೆ ಇದನ್ನು ಮಾಧ್ಯಮಗಳು ಅಪಹಾಸ್ಯ ಮಾಡಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಭಾವನೆಗಳನ್ನು ಅಪಹಾಸ್ಯ ಮಾಡುವ ಸ್ಥಿತಿ ರಾಜಕೀಯಕ್ಕೆ ಬಂದಿದೆ. ಆ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಳೆ ಬಂದ್ರು ನಾವೇ ಬರ್ಸಿದ್ವಿ ಅಂತಾರೆ, ರೋಡ್ ಮಾಡಿದ್ರು ನಾವೇ ಅಂತಾರೆ: ಎಚ್‍ಡಿಡಿ ವಿರುದ್ಧ ಬಿಜೆಪಿ ಶಾಸಕ ಗರಂ

    ಮಳೆ ಬಂದ್ರು ನಾವೇ ಬರ್ಸಿದ್ವಿ ಅಂತಾರೆ, ರೋಡ್ ಮಾಡಿದ್ರು ನಾವೇ ಅಂತಾರೆ: ಎಚ್‍ಡಿಡಿ ವಿರುದ್ಧ ಬಿಜೆಪಿ ಶಾಸಕ ಗರಂ

    ಹಾಸನ: ಮಳೆ ಬಂದರು ನಾವೇ ಮಳೆ ಬರುವಂತೆ ಮಾಡಿದ್ದು ಎಂದು ಹೇಳುತ್ತಾರೆ. ಕ್ಷೇತ್ರದಲ್ಲಿ ರಸ್ತೆ ಕೆಲಸ ಮಾಡಿಸಿದರು ನಮ್ಮದೇ ಎಂದು ಹೇಳುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ಹಾಸನ ಲೋಕಸಭಾ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಶಕ್ತಿ ಕೊಟ್ಟಿದ್ದು, ಆದರೆ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಸಮಸ್ಯೆ ಪರಿಹರಿಸಲು ಮಾತ್ರ ವಿಫಲರಾಗಿದ್ದಾರೆ ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಮಾಜಿ ಪ್ರಧಾನಿಗಳ ಹೆಸರು ಹೇಳದೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

    ಆನೆ ದಾಳಿ ನಿಯಂತ್ರಣ ಹಾಗೂ ಪರಿಹಾರ ಕೋರಿ ಸಕಲೇಶಪುರದ ಬಾಳ್ಳುಪೇಟೆಯಲ್ಲಿ ನಡೆಯುತ್ತಿರುವ ರೈತರ ಹೋರಾಟ 5ನೇ ದಿನಕ್ಕೆ ಕಾಲಿಟ್ಟಿದ್ದು, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಇಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ನಾಲ್ಕು ದಶಕದಿಂದ ಹಾಸನ ಲೋಕಸಭಾ ಪ್ರತಿನಿಧಿಯಾಗಿದ್ದು, ದೇವರ ಆಶೀರ್ವಾದದಿಂದ ಅವರು ಪಧಾನಿಯೂ ಆಗಿದ್ದಾರೆ. ಆದರೆ ಕ್ಷೇತ್ರದ ಸಂಸದರು ಮಾತ್ರ ಕಾಡಾನೆ ಹಾವಳಿ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ. ಈ ಹೋರಾಟ ಕಳೆದ 3 ವರ್ಷಗಳಿಂದ ನಡೆಯುತ್ತಿದ್ದು, ಈ ಸಮಸ್ಯೆ ಬಗೆಹರಿಸಲು ಬೇಕಿರುವುದು ಇಚ್ಛಾಶಕ್ತಿ ಎಂದು ಹೇಳಿದ್ದಾರೆ.

    ಆನೆ ಹಾವಳಿಯಲ್ಲಿ ರಾಜಕೀಯ ಮಾಡಲ್ಲ ಎನ್ನುತ್ತಲೇ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಪ್ರೀತಂಗೌಡ, ಹಾಸನ ಸಂಸದರೂ ಕಾಡಾನೆ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ. ಹೆದ್ದಾರಿಗೆ ನಿತಿನ್ ಗಡ್ಕರಿ ಭೇಟಿ ಮಾಡಿದಂತೆ ಕೇಂದ್ರ ಅರಣ್ಯ ಸಚಿವರನ್ನ ಭೇಟಿ ಮಾಡಿ ಸಮಸ್ಯೆ ಪರಿಹರಿಸಬಹುದಿತ್ತು. ಅವರದ್ದೇ ಶಾಸಕರೂ, ಸಚಿವರು, ಸಂಸದರು ಹಾಗೂ ಸಿಎಂ ಆಗಿದ್ದರು ಏನು ಮಾಡುತ್ತಾರೋ ಮಾಡಲಿ. ಆನೆ ಹಾವಳಿ ಎಂದಾಕ್ಷಣ ಕೇಂದ್ರ ಸರ್ಕಾರದ ಕಡೆ ಕೈ ತೋರಿಸುತ್ತಾರೆ. ಈ ರೀತಿ ಬುದ್ಧಿವಂತಿಕೆ ಮಾತುಗಳನ್ನ ಬಿಟ್ಟು ಕ್ಷೇತ್ರದ ಕಡೆ ಗಮನಹರಿಸಿ ಎಂದು ವ್ಯಂಗ್ಯ ಮಾಡಿದರು. ಇದನ್ನು ಓದಿ : 4 ದಿನದಿಂದ ಪ್ರತಿಭಟನೆ ನಡೆಸಿದ್ರು ಕೇರ್ ಮಾಡ್ತಿಲ್ಲ : ಸಿಎಂಗೆ ಹಾಸನ ಮಹಿಳೆ ಅವಾಜ್

    ರೈತರ ಸಮಸ್ಯೆ ಬಗೆ ಹರಿದರೆ ನಾವೇ ಬೇಕಿದ್ದರೆ ಗಂಧದ ಹಾರ ಹಾಕಿ, ಜೇನು ತುಪ್ಪದ ಅಭಿಷೇಕ ಮಾಡಿ ದೆಹಲಿವರೆಗೂ ಕರೆದುಕೊಂಡು ಹೋಗುತ್ತೇವೆ. ಹೆಸರಿಗೆ ಮಾತ್ರ ರೈತರ ಮಗ, ಮೊದಲು ರೈತರ ಹೆಸರಿನಲ್ಲಿ ಪ್ರಮಾಣ ಮಾಡುವುದನ್ನ ಬಿಡಿ. ನಿಜವಾದ ರೈತರ ಸಮಸ್ಯೆ, ನಿಮ್ಮನ್ನ ಆಯ್ಕೆ ಮಾಡಿದವರ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯ ಮಾಡಿದರು.

    ಕಾಡಾನೆ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದ್ದು, ಕೈಯಲ್ಲಿ ವಿಷದ ಬಾಟಲ್ ಹಿಡಿದ ರೈತರು ನಾಳೆ ಬೆಂಗಳೂರಿನಲ್ಲಿ ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸೂಕ್ತ ತೀರ್ಮಾನಕ್ಕೆ ಬರುವಂತೆ ಒತ್ತಾಯ ಮಾಡಿದ್ದಾರೆ. ಸಮಸ್ಯೆ ಬಗೆಹರಿಸಲು ವಿಫಲವಾದರೆ ಸಾಮೂಹಿಕವಾಗಿ ವಿಷ ಸೇವನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಪ್ರಧಾನಿ ಎಚ್‍ಡಿಡಿ, ಸಚಿವ ಮನಗೂಳಿ ಪುತ್ಥಳಿಗೆ ಬೆಂಕಿ..!

    ಮಾಜಿ ಪ್ರಧಾನಿ ಎಚ್‍ಡಿಡಿ, ಸಚಿವ ಮನಗೂಳಿ ಪುತ್ಥಳಿಗೆ ಬೆಂಕಿ..!

    ವಿಜಯಪುರ: ಮಾಜಿ ಪ್ರಧಾನಿ ದೇವೇಗೌಡ ಹಾಗೂ ಹಾಲಿ ಸಚಿವ ಎಂ.ಸಿ.ಮನಗೂಳಿ ಕಂಚಿನ ಪುತ್ಥಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ನಾಶಮಾಡಲು ಯತ್ನಿಸಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ನಡೆದಿದೆ.

    ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಹೊರಭಾಗದಲ್ಲಿದ್ದ ಮೂರ್ತಿಗಳಿಗೆ ಬೆಂಕಿ ಹಚ್ಚಿದ್ದು, ವಿಗ್ರಹಗಳು ಬೆಂಕಿಯ ಕೆನ್ನಾಲಿಗೆಗೆ ಹಾನಿಯಾಗೀಡಾಗಿವೆ. ಇಂದು ನಸುಕಿನ ಜಾವ ದುಷ್ಕರ್ಮಿಗಳು ಪುತ್ಥಳಿಗೆ ಬೆಂಕಿ ಹಚ್ಚಿರುವ ಅನುಮಾನ ವ್ಯಕ್ತವಾಗಿದೆ.

    ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕಾರಣರಾಗಿದ್ದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಎಂ.ಸಿ. ಮನಗೂಳಿ ಅವರ ಹೋರಾಟದ ನೆನಪಿಗಾಗಿ ಈ ಪುತ್ಥಳಿಗಳನ್ನು ನಿರ್ಮಾಣ ಮಾಡಲಾಗಿತ್ತು. 2014 ಫೆಬ್ರವರಿ 12 ರಂದು ಎರಡು ಪುತ್ಥಳಿಗಳನ್ನು ಉದ್ಘಾಟನೆ ಮಾಡಲಾಗಿತ್ತು. ಆದ್ರೆ ಇದೀಗ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ.

    ಈ ಕುರಿತು ಮಾಹಿತಿ ಪಡೆದು ಸಿಂಧಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ರಾಜಕಾರಣದ ದ್ವೇಷದಿಂದ ಈ ರೀತಿ ಮಾಡಿದ್ದಾರೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆಗೆ ಕಾರಣರಾದವರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಈ ಘಟನೆ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv