Tag: Ex Minister Ramesh Jarkiholi

  • ಯುವತಿಯನ್ನ ಪತ್ತೆ ಹಚ್ಚದಿರೋದು ನಾಚಿಕೆಗೇಡಿನ ಸಂಗತಿ: ಸಿದ್ದರಾಮಯ್ಯ

    ಯುವತಿಯನ್ನ ಪತ್ತೆ ಹಚ್ಚದಿರೋದು ನಾಚಿಕೆಗೇಡಿನ ಸಂಗತಿ: ಸಿದ್ದರಾಮಯ್ಯ

    – ರಾಜ್ಯ ಸರ್ಕಾರ, ಪೊಲೀಸರ ವೈಫಲ್ಯವೇ ಕಾರಣ

    ಬೆಂಗಳೂರು: ಸಿಡಿ ಪ್ರಕರಣದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಆಗುತ್ತಿರುವುದಕ್ಕೆ ರಾಜ್ಯ ಸರ್ಕಾರ ಮತ್ತು ಪೊಲೀಸರ ವೈಫಲ್ಯವೇ ಕಾರಣ. ಸಿಡಿ ಮಾಧ್ಯಮದಲ್ಲಿ ಕಾಣಿಸಿಕೊಂಡು 26 ದಿನಗಳು ಕಳೆದರೂ ಸಂತ್ರಸ್ತೆ ಯುವತಿಯನ್ನು ಪೊಲೀಸರಿಗೆ ಪತ್ತೆಹಚ್ಚಲಿಕ್ಕಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ದಿನಕ್ಕೊಂದು ತಿರುವು ಪಡೆದು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿರುವ ಸಿಡಿ ಹಗರಣದ ತನಿಖೆ ತಾರ್ಕಿಕ ಅಂತ್ಯ ಕಾಣಬೇಕಾದರೆ ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದ ಹೊರಬಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕು. ಕಾನೂನುಬದ್ಧವಾದ ಅವಳ ಹಕ್ಕನ್ನು ಚಲಾಯಿಸದಂತೆ ತಡೆಯುತ್ತಿರುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

    ಸಿಡಿಯಲ್ಲಿರುವ ಯುವತಿ ಅಜ್ಞಾತ ಸ್ಥಳದಿಂದ ನಿರಂತರವಾಗಿ ತನ್ನ ಹೇಳಿಕೆಗಳ ಸಿಡಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದ್ದಾಳೆ. ತನ್ನ ವಕೀಲನ ಮೂಲಕ ಪೊಲೀಸರಿಗೆ ದೂರು ಕಳುಹಿಸಿಕೊಡುತ್ತಿದ್ದಾಳೆ, ತಂದೆ-ತಾಯಿ ಜೊತೆ ಮಾತನಾಡುತ್ತಿದ್ದಾಳೆ. ಹೀಗಿದ್ದರೂ ಪೊಲೀಸರ ಕೈಗೆ ಮಾತ್ರ ಸಿಗುತ್ತಿಲ್ಲ ಎಂದರೆ ಏನು ಅರ್ಥ?

    ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಯುವತಿಯದ್ದೆನ್ನಲಾದ ಹೇಳಿಕೆಗಳನ್ನು ಗಮನಿಸಿದರೆ ಆಕೆಗೆ ರಾಜ್ಯ ಸರ್ಕಾರದ ಮೇಲಾಗಲಿ, ಪೊಲೀಸರ ಮೇಲಾಗಲಿ ನಂಬಿಕೆ ಇಲ್ಲ. ಪೊಲೀಸರು ತನ್ನ ವಿರುದ್ಧವೇ ಸಂಚು ಮಾಡುತ್ತಿದ್ದಾರೆಂಬ ಅರ್ಥದಲ್ಲಿ ಯುವತಿ ಮಾತನಾಡುತ್ತಿದ್ದಾಳೆ. ಗೃಹಸಚಿವ ಬಸವರಾಜ್ ಬೊಮ್ಮಾಯಿ ಈ ಬಗ್ಗೆ ಗಮನಹರಿಸಬೇಕು.

    ರಾಜ್ಯದ ಪೊಲೀಸ್ ಇಲಾಖೆಯೂ ಸೇರಿದಂತೆ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದಕ್ಕೆ ಈ ಸಿಡಿ ಹಗರಣ ಸಾಕ್ಷಿ. ಸಾಮಾನ್ಯ ಕುಟುಂಬದಿಂದ ಬಂದಿರುವ ಯುವತಿಯನ್ನು ಇಷ್ಟು ದಿನಗಳ ನಂತರವೂ ಪತ್ತೆ ಹಚ್ಚಲಾಗಿಲ್ಲವೆಂದರೆ ಏನು ಅರ್ಥ? ಆಕೆಯೇನು ವಿಜಯಮಲ್ಯನೋ ಇಲ್ಲವೇ ನೀರವ್ ಮೋದಿಯೋ ಎಂದು ಸಿದ್ದರಾಮಯ್ಯನವರು ವಾಗ್ದಾಳಿ ನಡೆಸಿದ್ದಾರೆ.

  • ಯಾವ ಪಕ್ಷದಲ್ಲಾದರೂ ಇರಿ, ನಮ್ಮ ಕಣ್ಮುಂದೆ ಇರಿ

    ಯಾವ ಪಕ್ಷದಲ್ಲಾದರೂ ಇರಿ, ನಮ್ಮ ಕಣ್ಮುಂದೆ ಇರಿ

    – ರಮೇಶ್ ಜಾರಕಿಹೊಳಿಗೆ ಸ್ನೇಹಿತ ಬರೆದ ಪತ್ರ ವೈರಲ್

    ಬೆಳಗಾವಿ: ಸಮ್ಮಿಶ್ರ ಸರ್ಕಾರ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸಂಪುಟದಿಂದ ಕೈಬಿಟ್ಟ ಪರಿಣಾಮ ಪಕ್ಷದ ಮುಖಂಡರು, ಮಾಧ್ಯಮ ಹಾಗೂ ಸ್ನೇಹಿತ ಕೈಗೆ ಸಿಗದೆ ಇರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸ್ನೇಹಿತರೊಬ್ಬರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ವಾಟ್ಸಾಪ್ ಮೂಲಕ ವೈರಲ್ ಆಗಿರುವ ಪತ್ರದಲ್ಲಿ ರಮೇಶ್ ಜಾರಕಿ ಹೊಳಿ ಅವರಿಗೆ ಮನವಿ ಮಾಡಿರುವ ಸ್ನೇಹಿತ, ನಿಮ್ಮ ನೇರಮಾತು, ನಿಷ್ಕಪಟ ನಡೆಯನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನೀವು ಎಂಟು ದಿನಗಳಿಂದ ನಮ್ಮೆಲ್ಲರಿಂದ ದೂರ ಉಳಿದಿರುವುದು ಸರಿಯಲ್ಲ. ನಿಮ್ಮನ್ನು ಹುಡುಕಿ ಸಾಕಾಗಿದೆ ಎಂದು ಅಶೋಕ್ ಚಂದರಗಿ ಎಂಬವರು ಮಾತ್ರ ಬರೆದಿದ್ದಾರೆ.

    ನೀವು ಕಾಂಗ್ರೆಸ್, ಬಿಜೆಪಿ ಯಾವುದೇ ಪಕ್ಷದಲ್ಲಾದರೂ ಇರಿ, ಆದರೆ ಸದಾ ನಮ್ಮ ಕಣ್ಣು ಮುಂದೆಯೇ ಇರಿ. ರಮೇಶ್ ಜಾರಕಿಹೊಳಿ ಎಂದು ನಿಂತ ನೀರಲ್ಲ. ನಿಮ್ಮ ದೀರ್ಘಕಾಲದ ಕಣ್ಮರೆ ನಮಗಷ್ಟೇ ಅಲ್ಲ. ನಿಮ್ಮಿಂದ ದೂರ ಸರಿದವರಿಗೆ ಎಲ್ಲರಿಗೂ ದುಃಖ ಉಂಟು ಮಾಡಿದೆ. ತಾವು ಎಲ್ಲಿದ್ದರೂ ಬೆಳಗಾವಿಗೆ ಮರಳಿ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಬೆಳಗಾವಿ ಗಂಡುಮೆಟ್ಟಿನ ನಾಡು. ನಾವು ಅಡಗಿ ಕುಳಿತುಕೊಳ್ಳುವ ಬೆಕ್ಕುಗಳಲ್ಲ. ಘರ್ಜಿಸುವ ಸಿಂಹಗಳು ಇದ್ದಂಗೆ ಎಂದು ರಮೇಶ್ ಅವರ ಸ್ನೇಹಿತ ಅಶೋಕ್ ಪತ್ರ ಬರೆದು ಬೆನ್ನಿಗೆ ನಿಂತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv