Tag: Ex CM Siddaramaiah

  • ‘ಪ್ರಚೋದನಕಾರಿ ಹೇಳಿಕೆ ನೀಡುವವರು ಈ ಮಣ್ಣಿನಲ್ಲಿ ಇರಬಾರದು’- ಸಿದ್ದರಾಮಯ್ಯ ವಿರುದ್ಧ ರಾಮುಲು ಕಿಡಿ

    ‘ಪ್ರಚೋದನಕಾರಿ ಹೇಳಿಕೆ ನೀಡುವವರು ಈ ಮಣ್ಣಿನಲ್ಲಿ ಇರಬಾರದು’- ಸಿದ್ದರಾಮಯ್ಯ ವಿರುದ್ಧ ರಾಮುಲು ಕಿಡಿ

    ಚಿತ್ರದುರ್ಗ: ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಕೇಂದ್ರ ಸರ್ಕಾರ ಚಿಂತನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಆರೋಗ್ಯ ಸಚಿವ ಶ್ರೀರಾಮುಲು ಕಿಡಿಕಾರಿದ್ದು, ವೀರ ಸಾವರ್ಕರ್ ಬಗ್ಗೆ ಓದಿಕೊಂಡು ಮಾತನಾಡಲಿ ಎಂದು ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಜನರನ್ನು ಪ್ರಚೋದಿಸಿ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಅವರು ಅದೇ ಸಂಸ್ಕಾರದಿಂದ ಬೆಳೆದು ಬಂದ ಕಾರಣದಿಂದ ಈ ರೀತಿ ಮಾತನಾಡುತ್ತಿದ್ದಾರೆ. ಆದರೆ ಅವರು ಸಾರ್ವಕರ್ ಅವರ ಬಗ್ಗೆ ಓದಿಕೊಂಡು ಮಾತನಾಡಲಿ. ಆದರೆ ಈ ರೀತಿ ಮಾತನಾಡುವವರನ್ನು ಜನರು ಸಹಿಸಬಾರದು. ಹಗುರವಾಗಿ ಮಾತನಾಡುವವರು ಈ ಮಣ್ಣಿನಲ್ಲಿ ಇರಬಾರದು ಎಂದರು.

    ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಮೂಲಕ ಜನರನ್ನು ಪ್ರಚೋದಿಸುವ ಕೆಲಸವನ್ನು ಮಾಡುವವರು ಈ ಮಣ್ಣಿನಲ್ಲಿ ಇರಬಾರದರು. ಅಲ್ಲದೇ ಇಂತಹ ಹೇಳಿಕೆಗಳನ್ನು ಜನರು ಕೂಡ ಸಹಿಸಿಕೊಳ್ಳಬಾರದು. ಪ್ರಶಸ್ತಿ ನೀಡುವುದನ್ನು ಸರ್ಕಾರ ನಿರ್ಧರಿಸುತ್ತದೆ. ಆದರೆ ಇಷ್ಟು ಮಾತನಾಡುವವರು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಲು ಆಗಲಿಲ್ಲ. ಇಂತಹವರಿಗೆ ಪ್ರಶಸ್ತಿ ಕೊಡುವ ಬಗ್ಗೆ ಮಾತಾಡುವ ನೈತಿಕತೆ ಏನಿದೆ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಸಿದ್ದಗಂಗಾ ಶ್ರೀಗಳು ಹಾಗೂ ಪುಟ್ಟರಾಜ ಗವಾಯಿ ಅವರಿಗೂ ಭಾರತರತ್ನ ಕೊಡಬೇಕಿತ್ತು ಎಂದರು.

    ಇದೇ ವೇಳೆ ವಿಜಯಪುರ ಆಸ್ಪತ್ರೆ ಹೊರ ಆವರಣದಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಘಟನೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಆ ಆಸ್ಪತ್ರೆಯಲ್ಲಿ 24 ಗಂಟೆ ಇರುವ ಆಸ್ಪತ್ರೆ ವ್ಯವಸ್ಥೆ ಇಲ್ಲ. ಬೆಳಗ್ಗೆ ತಡವಾಗಿ ಬಂದ ಕಾರಣ ಇಂತಹ ಘಟನೆ ನಡೆದಿದ್ದು, ನಿರ್ಲಕ್ಷ ತೋರಿದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ತಾಯಿ ಮಗು ಸುರಕ್ಷಿತವಾಗಿದ್ದಾರೆ, ಅವರಿಗೆ ಸೂಕ್ತ ಸೌಲಭ್ಯ ಕೊಡುವ ವ್ಯವಸ್ಥೆ ಮಾಡುತ್ತೇವೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದರು.

    ಸಿದ್ದರಾಮಯ್ಯ ಹೇಳಿದ್ದೇನು?: ಗಾಂಧೀಜಿ ಹತ್ಯೆಗೆ ಸ್ಕೆಚ್ ಹಾಕಿದ್ದ ಸಾವರ್ಕರ್ ಗೆ ಬಿಜೆಪಿ ಭಾರತ ರತ್ನ ನೀಡಲು ಮುಂದಾಗುತ್ತಿದೆ. ಸಾವರ್ಕರ್, ಗೋಡ್ಸೆಯ ಹಿಂದೆ ನಿಂತು ಹತ್ಯೆಗೆ ಸಂಚು ರೂಪಿಸಿದ್ದರು. ಸೂಕ್ತ ಸಾಕ್ಷ್ಯ ಇಲ್ಲದೆ ಆರೋಪಿಯಾಗಿ ಗುರುತಿಸಿರಲಿಲ್ಲ ಅಷ್ಟೇ. ಆದರೆ ಅಂಥ ವ್ಯಕ್ತಿಗೆ ಭಾರತ ರತ್ನ ಕೊಡಲು ಬಿಜೆಪಿ ಮುಂದಾಗಿದೆ. ಗೋಡ್ಸೆಗೂ ಭಾರತ ರತ್ನ ನೀಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

  • ಗಾಂಧೀಜಿ ಹತ್ಯೆಗೆ ಸಂಚು ರೂಪಿಸಿದ್ದ ಸಾವರ್ಕರ್‌ಗೆ ಬಿಜೆಪಿಯಿಂದ ಭಾರತ ರತ್ನ: ಸಿದ್ದರಾಮಯ್ಯ ಕಿಡಿ

    ಗಾಂಧೀಜಿ ಹತ್ಯೆಗೆ ಸಂಚು ರೂಪಿಸಿದ್ದ ಸಾವರ್ಕರ್‌ಗೆ ಬಿಜೆಪಿಯಿಂದ ಭಾರತ ರತ್ನ: ಸಿದ್ದರಾಮಯ್ಯ ಕಿಡಿ

    – ನಳಿನ್‌ಕುಮಾರ್‌ಗೆ ರಾಜ್ಯದ ಜ್ಞಾನ ಇಲ್ಲ
    – ಬಿಎಸ್‍ವೈ ಒಲ್ಲದ ಶಿಶು

    ಮಂಗಳೂರು: ಗಾಂಧೀಜಿ ಹತ್ಯೆಗೆ ಸ್ಕೆಚ್ ಹಾಕಿದ್ದ ಸಾವರ್ಕರ್ ಗೆ ಬಿಜೆಪಿ ಭಾರತ ರತ್ನ ನೀಡಲು ಮುಂದಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಗೋಡ್ಸೆಯ ಹಿಂದೆ ನಿಂತು ಹತ್ಯೆಗೆ ಸಂಚು ರೂಪಿಸಿದ್ದರು. ಸೂಕ್ತ ಸಾಕ್ಷ್ಯ ಇಲ್ಲದೆ ಆರೋಪಿಯಾಗಿ ಗುರುತಿಸಿರಲಿಲ್ಲ ಅಷ್ಟೇ. ಆದರೆ ಅಂಥ ವ್ಯಕ್ತಿಗೆ ಭಾರತ ರತ್ನ ಕೊಡಲು ಬಿಜೆಪಿ ಮುಂದಾಗಿದೆ. ಗೋಡ್ಸೆಗೂ ಭಾರತ ರತ್ನ ನೀಡಲಿ ಎಂದು ಟೀಕಿಸಿದರು.

    ರಾಜ್ಯ ಬಿಜೆಪಿ ಸರ್ಕಾರಕ್ಕೆ ಯಾರು ಹೇಳುವವರು, ಕೇಳುವವರು ಇಲ್ಲ. ಕೇವಲ ವರ್ಗಾವಣೆ ದಂಧೆ ನಡೆಸುವುದನ್ನು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕಾರ್ಯವನ್ನು ಸರ್ಕಾರದಲ್ಲಿ ನಡೆಯುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದರು. ಇದನ್ನು ಓದಿ: ಕಾಂಗ್ರೆಸ್ ಸಾವರ್ಕರ್‌ಗೆ ಭಾರತರತ್ನ ನೀಡದೆ ಅವಮಾನಿಸಿದೆ – ಮೋದಿ

    ರಾಜ್ಯ ಸರ್ಕಾರ ಡಿಸೆಂಬರ್ ವರೆಗೂ ಸರ್ಕಾರ ಉಳಿಯುವುದು ಹೆಚ್ಚು. ಆ ಬಳಿಕ ಚುನಾವಣೆ ಬರುವುದು ಪಕ್ಕಾ. ಸಿಎಂ ಬಿಎಸ್ ವೈ ಅವರು ಒಲ್ಲದ ಶಿಶು ಅಷ್ಟೇ. ಅವರನ್ನ ಸಿಎಂ ಮಾಡುವುದಕ್ಕೆ ಕೇಂದ್ರ ಬಿಜೆಪಿಗೆ ಇಷ್ಟ ಇರಲಿಲ್ಲ. ಅನಿವಾರ್ಯ ಕಾರಣದಿಂದ ಮುಖ್ಯಮಂತ್ರಿಗಳಾಗಿ ಮಾಡಿದೆ ಅಷ್ಟೇ. ಬಿಎಸ್‍ವೈ ಅವರು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಒಲ್ಲದ ಶಿಶು ಎಂದರು.

    ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ. ಹಸಿವಿನ ರೇಟಿಂಗ್‍ನಲ್ಲಿ ಭಾರತ 102ನೇ ಸ್ಥಾನಕ್ಕೆ ಮುಟ್ಟಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಪಟ್ಟಿಯಲ್ಲಿ ನಮ್ಮಿಂದ ಮುಂದಿದೆ. ಕಳೆದ ಐದು ವರ್ಷದಲ್ಲಿ ಮೋದಿ ಮಾಡಿದ ಸಾಧನೆ ಇದು ಮಾತ್ರ. ಆದರೆ ಅಮೆರಿಕಕ್ಕೆ ಹೋಗಿ ಭಾರತದಲ್ಲಿ ಎಲ್ಲರೂ ಸುಖವಾಗಿದ್ದಾರೆ ಎಂದು ಹೇಳುತ್ತಾರೆ.

    ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಳಿನ್ ಕುಮಾರ್ ಅವರಿಗೆ ರಾಜ್ಯದಲ್ಲಿ ಜಿಲ್ಲೆಗಳೆಷ್ಟಿವೆ ಎಂದೇ ಗೊತ್ತಿಲ್ಲ. ಅವರಿಗೆ ಮಂಗಳೂರು ಮಾತ್ರ ಗೊತ್ತು. ಅವರ ಜ್ಞಾನ ಇರೋದು ಅಷ್ಟೇ. ಈ ಪುಣ್ಯಾತ್ಮ ರಾಜ್ಯದಲ್ಲಿ ಎಷ್ಟು ತಾಲೂಕುಗಳಿವೆ ಎಂದು ಹೇಳಲಿ ನೋಡೋಣ ಎಂದು ಲೇವಡಿ ಮಾಡಿದರು. ಇದನ್ನು ಓದಿ: ಪಕ್ಷ ಸಂಘಟನೆಗೆ ಬಿಜೆಪಿ ರಾಜ್ಯವನ್ನು 36 ಜಿಲ್ಲೆಗಳನ್ನಾಗಿ ಮಾಡಿದೆ – ಕಟೀಲ್

    ಉಪಚುನಾವಣೆ ಹೊತ್ತಲ್ಲಿ ಬಿಜೆಪಿಯಿಂದ ಅಪರೇಷನ್ ಕಮಲ ನಡೆಸುವ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿಗೆ ಆಪರೇಷನ್ ಮಾಡೋದಷ್ಟೇ ಕೆಲಸ. ನಮ್ಮವರನ್ನು ಹಣ ಕೊಟ್ಟು ಖರೀದಿಸುತ್ತಾರೆ. ಆದರೆ ಬಿಜೆಪಿಗೆ ಆಪರೇಷನ್ ಮಾಡೋಕೆ ಹಣ ಎಲ್ಲಿಂದ ಬರುತ್ತೆ? ಭ್ರಷ್ಟಾಚಾರ ಹಣದಲ್ಲಿ ಆಪರೇಷನ್ ಮಾಡುತ್ತಾರೆ. ದೇಶದಲ್ಲಿ ಬೇರೆ ಪಕ್ಷದವರನ್ನು ಖರೀದಿಸುವುದು ಬಿಜೆಪಿ ಕೆಲಸವಾಗಿದೆ. ಇಲ್ಲ ಅಂದರೆ ಐಟಿ, ಇಡಿ ಬಳಸಿ ಹೆದರಿಸುತ್ತಾರೆ. ಈ ಮೂಲಕ ದೇಶ ಆಳ್ವಿಕೆ ಮಾಡುತ್ತೇವೆ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ ಎಂದು ಕಿಡಿಕಾರಿದರು.

    ಮಹಾರಾಷ್ಟ್ರ ಚುನಾವಣೆಗಾಗಿ ಸಿಎಂ ಬಿಎಸ್‍ವೈ ನೀರು ಬಿಡುತ್ತೇವೆ ಎಂದು ಹೇಳಿದ್ದಾರೆ. ಮತಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಎರಡು ರಾಜ್ಯಗಳ ನಡುವೆ ಮಾತುಕತೆಯಾಗಿದೆ. ಇನ್ನು ಮಹಾರಾಷ್ಟ್ರಕ್ಕೆ ನೀರು ಕೊಡುವುದನ್ನು ನಿಲ್ಲಿಸಲು ಆಗಲ್ಲ ಎಂದರು.

  • ‘ಹೋಗೋಲೋ ಸಿದ್ದರಾಮಯ್ಯ’ – ಸಿದ್ದು ವಿರುದ್ಧ ಮುನಿಯಪ್ಪ ಏಕವಚನದಲ್ಲೇ ಗರಂ

    ‘ಹೋಗೋಲೋ ಸಿದ್ದರಾಮಯ್ಯ’ – ಸಿದ್ದು ವಿರುದ್ಧ ಮುನಿಯಪ್ಪ ಏಕವಚನದಲ್ಲೇ ಗರಂ

    ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಸಿದ್ದು, ಈ ಸಭೆಯಲ್ಲಿ ಕೈ ನಾಯಕರ ನಡುವಿನ ಅಸಮಾಧಾನ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರ ಎದುರೇ ಸ್ಫೋಟಗೊಂಡಿದೆ.

    ಸಭೆಗೆ ಡಿಸಿಎಂ ಪರಮೇಶ್ವರ್ ಗೈರು ಹಾಜರಿ ಸೇರಿದಂತೆ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯ ಸೋಲಿನ ಹೊಣೆ, ಪಕ್ಷದಲ್ಲಿನ ನಾಯಕರ ಗುಂಪುಗಾರಿಕೆ, ತಾರತಮ್ಯ ವಿಚಾರದಲ್ಲಿ ನಾಯಕರ ನಡುವೆ ಇದ್ದ ಮುನಿಸು ಸ್ಫೋಟಗೊಂಡಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಸಭೆ ಆರಂಭಕ್ಕೂ ಮುನ್ನ ಕೈ ನಾಯಕರ ನಡುವೆ ಗಲಾಟೆ ನಡೆದಿದ್ದು, ಪರಮೇಶ್ವರ್ ಗೆ ಕಾಯುತ್ತಿರುವಾಗಲೇ ಸಂಸದ ಬಿ.ಕೆ.ಹರಿಪ್ರಸಾದ್ ಅವರು ದಿನೇಶ್ ಗುಂಡೂರಾವ್ ಗೆ ಕ್ಲಾಸ್ ತಗೆದುಕೊಂಡಿದ್ದರು. ಪಕ್ಷ ಮುನ್ನಡೆಸಿ ಅಂದರೆ ನಿಮ್ಮ ಗುಂಪನ್ನು ಮುನ್ನಡೆಸುತ್ತಿದ್ದೀರೇನ್ರಿ ಎಂದು ಪ್ರಶ್ನಿಸಿ ದಿನೇಶ್ ರನ್ನು ತರಾಟೆಗೆ ತೆಗೆದುಕೊಂಡು, ಒಂದಾದರೂ ಸಭೆಯನ್ನ ಸರಿಯಾಗಿ ನಡೆಸಿದ್ದೀರಾ. ನೀವು ಪಕ್ಷದ ಅಧ್ಯಕ್ಷರಾ ಅಥವಾ ಪಕ್ಷದ ಒಳಗಿನ ಗುಂಪುಗಾರಿಕೆ ತಂಡದ ಅಧ್ಯಕ್ಷರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನಿಮ್ಮ ವರ್ತನೆಯೆ ಈ ಎಲ್ಲಾ ಬೆಳವಣಿಗೆಗೆ ಕಾರಣ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಹರಿಪ್ರಸಾದ್ ಮಾತಿಗೆ ಕಕ್ಕಾಬಿಕ್ಕಿಯಾದ ದಿನೇಶ್, ಏನೂ ಮಾತನಾಡಿದೆ ಮೌನ ವಹಿಸಿದ್ದರು ಎಂಬುದಾಗಿ ತಿಳಿದುಬಂದಿದೆ. ಇದನ್ನು ಓದಿ: ನಾನು ರಿಸೈನ್ ಮಾಡ್ತೀನಿ, ಯಾರು ಬೇಕಾದ್ರೂ ಅಧ್ಯಕ್ಷರಾಗಿ- ದಿನೇಶ್ ಗುಂಡೂರಾವ್

    ಇದರ ಬೆನ್ನಲ್ಲೇ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ರೋಷನ್ ಬೇಗ್ ವಿರುದ್ಧ ಕ್ರಮ ತೆಗೆದುಕೊಂಡಿದ್ದೀರಿ. ನನ್ನನ್ನು ಸೋಲಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ತಂಡದ ವಿರುದ್ಧ ದೂರು ಕೊಟ್ಟರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಇದೇ ವೇಳೆ ಮುನಿಯಪ್ಪ ಕೂಡ ಗರಂ ಆದರು. ರಮೇಶ್ ಕುಮಾರ್ ರನ್ನ ಪಕ್ಕದಲ್ಲಿ ಕೂರಿಸಿಕೊಂಡು ಮೀಟಿಂಗ್ ಮಾಡುತ್ತೀರಲ್ವ. ಪಕ್ಷದಲ್ಲಿ ಒಬ್ಬೊಬ್ಬರಿಗೆ ಒಂದು ನ್ಯಾಯನಾ ಎಂದು ಪ್ರಶ್ನಿಸಿ ದಿನೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಿದ್ದರಾಮಯ್ಯ ವಿರುದ್ಧವೂ ಮುನಿಯಪ್ಪ ಕಿಡಿಕಾರಿದ್ದು, 2018 ರ ಚುನಾವಣೆ ಮತ್ತು ಲೋಕಸಭಾ ಚುನಾವಣೆ ನಿಮ್ಮ ನೇತೃತ್ವದಲ್ಲಿ ಹೋದೆವು. ಆದರೆ ಎರಡರಲ್ಲೂ ಸೋಲನುಭವಿಸದೆವು. ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರು. ರಾಜ್ಯದಲ್ಲಿ ಯಾರು ನೈತಿಕ ಹೊಣೆ ಹೊತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಟಿಕೆಟ್ ನಿಮಗೆ ಬೇಕಾದವರಿಗೆ ಕೊಟ್ಟುಕೊಳ್ತೀರಿ. ಪಕ್ಷದ ಸೋಲಿಗೆ ಯಾರು ಹೊಣೆ ಎಂದು ಕೆಎಚ್ ಮುನಿಯಪ್ಪ ಖಡಕ್ಕಾಗಿ ಮಾತನಾಡಿದ್ದಾರೆ. ಇದನ್ನು ಓದಿ: ಉಪಕದನಕ್ಕೆ ಕಾಂಗ್ರೆಸ್ ಪಕ್ಷದ 10 ಅಭ್ಯರ್ಥಿಗಳ ಪಟ್ಟಿ ಅಂತಿಮ

    ಸಿದ್ದರಾಮಯ್ಯ ಎದುರು ಅವಾಜ್ ಹಾಕಿರುವ ಮುನಿಯಪ್ಪ ಅವರು, “ಕಳ್ಳರನ್ನ ಪಕ್ಕದಲ್ಲಿ ಕೂರಿಸಿಕೊಳ್ಳುವ ನೀನ್ಯಾವ ಯಾವ ಸೀಮೆ ನಾಯಕ” ಎಂದಿದ್ದಾರೆ. ಇದಕ್ಕೆ ಗರಂ ಆದ ಸಿದ್ದರಾಮಯ್ಯ ಅವರು,”ಮುನಿಯಪ್ಪ ನೀನು ಸರಿಯಾಗಿ ಮಾತನಾಡು, ಗೆಲ್ಲಲು ಆಗದಿದ್ದರು ಮಾತನಾಡುತ್ತೀಯಾ” ಎಂದಿದ್ದು, ಇದಕ್ಕೆ ಮತ್ತಷ್ಟು ಕೋಪಗೊಂಡ ಮಾಜಿ ಸಂಸದರು, “ಸಾಕು ಕೂತ್ಕೋಳೋ, ನೀನ್ ಯಾವನೋ ಹೇಳೋಕೆ. ಎಲ್ಲಿಂದಲೋ ಬಂದು ನನ್ ಎದುರೇ ಮಾತಾಡ್ತಿಯಾ. ನನ್ನನ್ನು ಸೋಲಿಸಿದ್ದು ನೀನೇ, ಕಳ್ಳಾಟ ಆಡುತ್ತೀಯಾ” ಎಂದು ಏಕವಚನದಲ್ಲೇ ಕಿತ್ತಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನು ಓದಿ: ಮುನಿಯಪ್ಪಗೆ ನನ್ನ ಪಕ್ಕ ಮಲಗಲು ಇಷ್ಟವಿರಬಹುದು, ಆದರೆ ನನಗಿಲ್ಲ: ರಮೇಶ್ ಕುಮಾರ್ ವ್ಯಂಗ್ಯ

    ಇಂದು ನಡೆದ ಸಭೆಯಲ್ಲಿ ಈಶ್ವರ್ ಖಂಡ್ರೆ, ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿಗಳಾದ ವಿಷ್ಣು ನಾಥನ್, ಸಾಕೇಜ್ ಶೈಲಜನಾಥನ್, ಕೆ.ಜೆ.ಜಾರ್ಜ್, ಜಮೀರ್ ಅಹಮ್ಮದ್ ಉಪಸ್ಥಿತರಿದ್ದರು. ಆದರೆ ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಬಗ್ಗೆ ಉತ್ತಮ ಜನಾಭಿಪ್ರಾಯವಿಲ್ಲ. ಬಿಜೆಪಿಯಲ್ಲಿ ಅಸಮಾಧಾನ ಗೊಂದಲಗಳು ಇರುವುದು ಬಿಜೆಪಿಯಲ್ಲಿ ನಮ್ಮಲ್ಲಿ ಅಲ್ಲ ಎಂದು ಹೇಳಿದರು.

  • ಸಿಎಂ ಆಗಿದ್ದಾಗ ಸಿದ್ದರಾಮಯ್ಯ ನಮ್ಮ ಪತ್ರಗಳನ್ನು ಗಾಳಿಗೆ ತೂರುತ್ತಿದ್ದರು – ಜೆಡಿಎಸ್ ಶಾಸಕ

    ಸಿಎಂ ಆಗಿದ್ದಾಗ ಸಿದ್ದರಾಮಯ್ಯ ನಮ್ಮ ಪತ್ರಗಳನ್ನು ಗಾಳಿಗೆ ತೂರುತ್ತಿದ್ದರು – ಜೆಡಿಎಸ್ ಶಾಸಕ

    ನೆಲಮಂಗಲ: ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ಉರುಳಿಬಿದ್ದ ಬಳಿಕ ಎರಡು ಪಕ್ಷಗಳ ನಡುವೆ ಮುಸುಕಿನ ಗುದ್ದಾಟ ನಡೆದಿದೆಯಾ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಸದ್ಯ ನೆಲಮಂಗಲ ಜೆಡಿಎಸ್ ಪಕ್ಷದ ಶಾಸಕ ಶ್ರೀನಿವಾಸ್ ಅವರು ನೀಡಿರುವ ಬಹಿರಂಗ ಹೇಳಿಕೆ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಕುಲವನಹಳ್ಳಿಯಲ್ಲಿ ಜನರೊಂದಿಗೆ ಸಭೆ ನಡೆಸಿ ಮಾತನಾಡಿದ ಶಾಸಕರು, ನೇರವಾಗಿ ಸಿದ್ದರಾಮಯ್ಯ ಅವರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

    ರಸ್ತೆ ಅಭಿವೃದ್ಧಿ ಕಾರ್ಯ ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಾನು 5 ವರ್ಷಗಳ ಕಾಲ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಅನುದಾನ ಪಡೆಯಲು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಬಳಿ ಅಲೆಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅಂದು ನಾವು ಮನವಿ ಪತ್ರಗಳನ್ನು ತೆಗೆದುಕೊಂಡು ಅವರಿಗೆ ನೀಡಿದರೆ ಗಾಳಿಗೆ ತೂರುತ್ತಿದ್ದರು. ಯಾವುದೇ ಅಭಿವೃದ್ಧಿಗೆ ಸಹಕರಿಸುತ್ತಿರಲಿಲ್ಲ, ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದರು ಎಂದು ಸಾರ್ವಜನಿಕ ವೇದಿಕೆಯಲ್ಲೇ ಆರೋಪ ಮಾಡಿದರು.

    ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೇವಣ್ಣ ಅವರು ಸಚಿವರಾದ ಮೇಲೆ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಕುಮಾರಸ್ವಾಮಿ ಅವರು ಕ್ಷೇತ್ರ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಿದ್ದರು. ಅವರಿಂದಲೇ ಸದ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂದರು. ರಾಜ್ಯದ ರಾಜಕೀಯದಲ್ಲಿ ಹೈಡ್ರಾಮಾ ಮುಗಿದು ಮೈತ್ರಿ ಸರ್ಕಾರ ಪತನವಾದರೂ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಗುದ್ದಾಟ ಮುಂದುವರಿದಿದೆ.

    ಸಭೆ ಬಳಿಕ ಮಾಧ್ಯಮಗಳೊಂದಿಗೆ ಬಿಜೆಪಿ ಸರ್ಕಾರದ ಕುರಿತು ಮಾತನಾಡಿದ ಅವರು, ಸಾರ್ವಜನಿಕರು ಬಿಜೆಪಿ ಸರ್ಕಾರದ ನಡೆ ನೋಡುತ್ತಿದ್ದಾರೆ. ಬಿಜೆಪಿ ಸಚಿವ ಸಂಪುಟ ವಿಸ್ತರಣೆಯಲ್ಲೇ ತೊಡಗಿದ್ದು, ಅವರ ಮುಂದಿನ ನಡೆ ಮತ್ತಷ್ಟು ಕಷ್ಟ ಇದೆ. ಏನೆಲ್ಲಾ ನಡೆಯಲಿದೆ ಎಂಬುವುದನ್ನು ಕಾದು ನೋಡುತ್ತೇವೆ ಎಂದರು.

  • ಜೈಪಾಲ್ ರೆಡ್ಡಿಗೆ ಹೆಗಲು ಕೊಟ್ಟ ಸಿದ್ದರಾಮಯ್ಯ, ರಮೇಶ್ ಕುಮಾರ್

    ಜೈಪಾಲ್ ರೆಡ್ಡಿಗೆ ಹೆಗಲು ಕೊಟ್ಟ ಸಿದ್ದರಾಮಯ್ಯ, ರಮೇಶ್ ಕುಮಾರ್

    ಹೈದರಾಬಾದ್: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಜೈಪಾಲ್ ರೆಡ್ಡಿ ಅವರಿಗೆ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅಂತಿಮ ನಮನ ಸಲ್ಲಿಸಿದರು.

    ಜೈಪಾಲ್ ರೆಡ್ಡಿ ಅವರ ಅಂತಿಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಅಂತಿಮ ಯಾತ್ರೆ ವೇಳೆಗೆ ಹೆಗಲು ಕೊಟ್ಟರು. ಭಾನುವಾರ ಮುಂಜಾನೆ ಹೈದರಾಬಾದಿನ ಆಸ್ಪತ್ರೆಯಲ್ಲಿ 77 ವರ್ಷದ ಜೈಪಾಲ್ ರೆಡ್ಡಿ ನಿಧನರಾಗಿದ್ದರು.

    ನ್ಯೂಮೋನಿಯಾದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಜೈಪಾಲ್ ರೆಡ್ಡಿ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. 1984 ರಿಂದ ಐದು ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ಅವರು 2 ಬಾರಿ ರಾಜ್ಯಸಭೆಗೂ ಆಯ್ಕೆ ಆಗಿದ್ದರು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದರು.

    ಹೈದರಾಬಾದ್ ನೆಕ್ಲೇಸ್ ರೋಡ್‍ನಲ್ಲಿರುವ ಸರ್ಕಾರಿ ಸ್ಥಳದಲ್ಲಿ ಅವರ ಅಂತಿಮ ವಿಧಿ ವಿಧಾನಗಳು ನಡೆಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರಿಗೆ ಅಂತಿಮ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಅಂತಿಮ ಕಾರ್ಯದಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಹಾಗೂ ಮಾಜಿ ಸ್ಪೀಕರ್ ಅವರು ಅಂತಿಮ ವಿಧಿ ವಿಧಾನದ ವೇಳೆ ಹೆಗಲು ನೀಡಿ ಅವರೊಂದಿಗೆ ಇದ್ದ ಅನುಬಂಧವನ್ನು ನೆನಪಿಸಿಕೊಂಡಿದ್ದಾರೆ. ಒಂದು ಕಡೆ ರಮೇಶ್ ಕುಮಾರ್ ಮತ್ತೊಂದು ಬದಿಯಲ್ಲಿ ಸಿದ್ದರಾಮಯ್ಯ ಅವರು ಹೆಗಲು ನೀಡಿರುವುದನ್ನು ಕಾಣಬಹುದಾಗಿದೆ.

    ವಿಧಾನಸೌಧದಲ್ಲಿ ನಿನ್ನೆ ತುರ್ತು ಸುದ್ದಿಗೋಷ್ಠಿ ನಡೆಸಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು, ಜೈಪಾಲ್ ರೆಡ್ಡಿ ಅವರನ್ನು ಕಳೆದುಕೊಂಡಿದ್ದು ನನಗೆ ಅತ್ಯಂತ ದುಃಖದ ದಿನವಾಗಿದೆ. ನನ್ನ ಸಾರ್ವಜನಿಕ ಬದುಕಿಗೆ ಬಹಳಷ್ಟು ಪರಿಣಾಮಕಾರಿಯಾದ ಸಲಹೆ, ಮಾರ್ಗದರ್ಶನ ಕೊಟ್ಟಿದ್ದರು. ವೈಯಕ್ತಿಕ ಬದುಕಿನಲ್ಲಿ ಸುಮಾರು 35 ವರ್ಷದಿಂದ ನನಗೆ ಹಿರಿಯ ಸಹೋದರನಂತೆ ನನ್ನನ್ನು ಪ್ರೀತಿಸಿದ್ದರು. ಅಲ್ಲದೇ ಅತ್ಯುತ್ತಮ ಸಂಸದೀಯ ಪಟುವಾಗಿದ್ದರು ಎಂದು ನೆನೆದು ಕಣ್ಣೀರಿಟ್ಟಿದ್ದರು.

    ಇಂದು ಸಿಎಂ ಬಿಎಸ್ ಯಡಿಯೂರಪ್ಪನವರು ವಿಶ್ವಾಸ ಮತಯಾಚನೆಗೂ ಮುನ್ನ ವಿಧಾನಸಭೆಯಲ್ಲಿ ಮಾತನಾಡಿದ್ದ ರಮೇಶ್ ಕುಮಾರ್, ಜೈಪಾಲ್ ರೆಡ್ಡಿ ಅವರ ಅಂತ್ಯ ಸಂಸ್ಕಾರ ಕಾರ್ಯಕ್ರಮಕ್ಕೆ ತೆರಳಬೇಕಿದೆ. ಹೀಗಾಗಿ ಸದನವನ್ನು ಬೇಗನೇ ಮುಗಿಸಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಆರಂಭದಲ್ಲೇ ಹೇಳಿ ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದರು. ಸದಸ್ಯರ ನಡುವೆ ಚರ್ಚೆ ಜಾಸ್ತಿಯಾದಾಗ ಈ ವಿಚಾರವನ್ನು ಮತ್ತೆ ಪ್ರಸ್ತಾಪ ಮಾಡುತ್ತಿದ್ದರು. ಹೀಗಾಗಿ ಇಂದು ಸದನದಲ್ಲಿ ಜಾಸ್ತಿ ಚರ್ಚೆಯಾಗದೇ ಧನ ವಿಧೇಯಕ ಮತ್ತು ಪೂರಕ ಬಜೆಟ್ ಧ್ವನಿ ಮತದ ಮೂಲಕ ಅಂಗೀಕಾರಗೊಂಡಿತ್ತು. ಬಳಿಕ ರಮೇಶ್ ಕುಮಾರ್ ವಿದಾಯ ಭಾಷಣ ಮಾಡಿ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದರು. ವಿಧಾನಸಭಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ರಮೇಶ್ ಕುಮಾರ್ ಮತ್ತು ಸಿದ್ದರಾಮಯ್ಯ ಹೈದರಾಬಾದಿಗೆ ತೆರಳಿದ್ದರು.

    https://www.youtube.com/watch?v=KyifPvdzz9A

  • ನನ್ನ ನಾಯಕ ಸಿದ್ದರಾಮಯ್ಯ, ಈಗಲೂ ಅಡ್ಡಗೋಡೆ ಮೇಲಿದ್ದೀನಿ : ಎಂಟಿಬಿ ನಾಗರಾಜ್

    ನನ್ನ ನಾಯಕ ಸಿದ್ದರಾಮಯ್ಯ, ಈಗಲೂ ಅಡ್ಡಗೋಡೆ ಮೇಲಿದ್ದೀನಿ : ಎಂಟಿಬಿ ನಾಗರಾಜ್

    ಬೆಂಗಳೂರು: ಸಿದ್ದರಾಮಯ್ಯ ಅವರ ಜೊತೆಯಲ್ಲಿಯೇ ಇದ್ದ ಕೆಲ ಆಪ್ತರು ಈಗ ರಾಜೀನಾಮೆ ನೀಡಿದ್ದಾರೆ. ಇದರಿಂದ ಅವರಿಗೆ ನೋವಾಗಿದೆ, ಆದ್ದರಿಂದಲೇ ಬ್ಲಾಕ್ ಶಿಪ್ ಎಂದು ಹೇಳಿದ್ದಾರೆ. ಆದರೆ ಈಗಲೂ ನನ್ನ ನಾಯಕ ಸಿದ್ದರಾಮಯ್ಯ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್ ಅವರು, ಮೈತ್ರಿ ಸರ್ಕಾರದ ವೈಫಲ್ಯಗಳ ಕಾರಣದಿಂದಲೇ ನಾವು ರಾಜೀನಾಮೆ ನೀಡಿದ್ದೇನೆ. ಮುಂಬೈಗೂ ತೆರಳಿಲ್ಲ, ದೆಹಲಿಗೂ ಹೋಗಿಲ್ಲ. ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ನಮ್ಮ ಬಳಿ ಮಾತನಾಡಿದ್ದಾರೆ. ಆದರೆ ರಾಜೀನಾಮೆ ಹಿಂಪಡೆಯುವ ನಿರ್ಧಾರ ಮಾಡಿಲ್ಲ ಎಂದರು.

    ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಕಾರಣ ನಾನೇ ಹಲವು ಬಾರಿ ಶಾಸಕರ ಅಸಮಾಧಾನದ ಬಗ್ಗೆ ಮಾತನಾಡಿದ್ದೆ. ಆದರೆ ಸಮ್ಮಿಶ್ರ ಸರ್ಕಾರ ನಾಯಕತ್ವದಲ್ಲಿ ಸರ್ಕಾರ ವೈಫಲ್ಯ ಅನುಭವಿಸಿದೆ. ಆದ್ದರಿಂದಲೇ ನಾನು ಪಕ್ಷ ತೊರೆಯುವ ತೀರ್ಮಾನ ಮಾಡಿದ್ದೆ. ನಾವು ರಾಜೀನಾಮೆ ನೀಡುವ ಮುನ್ನ ಯಾರು ನಮ್ಮ ಬೇಸರ ಬಗೆಹರಿಸುವ ಕಾರ್ಯ ಮಾಡಿಲ್ಲ. ಶಾಸಕರಾದ ಡಾ.ಸುಧಾಕರ್ ಸೇರಿದಂತೆ ನಮ್ಮೊಂದಿಗೆ ಮತ್ತಷ್ಟು ಶಾಸಕರು ಇದ್ದು, ಎಲ್ಲರೊಂದಿಗೂ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.

    ಅಡ್ಡಗೋಡೆ ಮೇಲಿದ್ದೀನಿ: ನಾವು ಇಬ್ಬರು ಶಾಸಕರು ಬೆಂಗಳೂರಿನಲ್ಲೂ ಇದ್ದು, ಸಿದ್ದರಾಮಯ್ಯ ಅವರಿಗೆ ನಮ್ಮ ಮೇಲೆ ವಿಶ್ವಾಸ ಇದೆ. ಸಿದ್ದರಾಮಯ್ಯ ಅವರ ಬಗ್ಗೆ ಬೇಸರ ಇಲ್ಲ. ಮೈತ್ರಿ ಸರ್ಕಾರ ವೈಫಲ್ಯಗಳ ಬಗ್ಗೆ ಬೇಸರ ಇದೆ. ಮೈತ್ರಿ ಸರ್ಕಾರ ಸಮಾನತೆ ಧರ್ಮ ಪಾಲಿಸಿಲ್ಲ. ಅಲ್ಲದೇ ನಾವು ಮುಖ್ಯಮಂತ್ರಿಗಳ ಬದಲಾವಣೆಗೂ ಕೇಳಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಾನು ರಾಜೀನಾಮೆ ಹಿಂಪಡೆಯುವ, ಪಡೆಯದಿರುವ ಬಗ್ಗೆಯೂ ಯಾವುದೇ ಗಟ್ಟಿ ತೀರ್ಮಾನ ಮಾಡಿಲ್ಲ. ಅಡ್ಡಗೋಡೆ ಮೇಲೆ ನಿಂತಿದ್ದೇನೆ. ಎಲ್ಲರೂ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

  • ಮೈತ್ರಿ ಮುರಿದುಕೊಳ್ಳುವುದೇ ಉತ್ತಮ, ಸಿಎಂ, ಡಿಸಿಎಂ ಸರ್ಕಾರ ಉಳಿಸಲಿ- ಸಿದ್ದರಾಮಯ್ಯ

    ಮೈತ್ರಿ ಮುರಿದುಕೊಳ್ಳುವುದೇ ಉತ್ತಮ, ಸಿಎಂ, ಡಿಸಿಎಂ ಸರ್ಕಾರ ಉಳಿಸಲಿ- ಸಿದ್ದರಾಮಯ್ಯ

    ಬೆಂಗಳೂರು: ಮೈತ್ರಿ ಸರ್ಕಾರ 14 ಶಾಸಕರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ಉಳಿಸುವ ಪ್ರಯತ್ನಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನು ಹೈಕಮಾಂಡ್ ಬೆಂಗಳೂರಿಗೆ ಕಳುಹಿಸಿ ಕೊಟ್ಟಿದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರೊಂದಿಗೆ ವೇಣುಗೋಪಾಲ್ ಚರ್ಚೆ ನಡೆಸಿದ್ದಾರೆ.

    ಈ ಚರ್ಚೆ ವೇಳೆ ಸಿದ್ದರಾಮಯ್ಯ ಅವರು ಖಡಕ್ ಸಂದೇಶ ನೀಡಿದ್ದಾರೆ ಎನ್ನಲಾಗಿದ್ದು, ಮೈತ್ರಿ ಸರ್ಕಾರವನ್ನು ಮುಂದುವರಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆ ಆಗಲಿದೆ. ಸಿಎಂ ಹಾಗೂ ಡಿಸಿಎಂ ಅವರು ಬೇಕಾದರೆ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಲಿ ನನ್ನಿಂದ ಆಗಲ್ಲ ಎಂದು ಹೇಳಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ವೇಣುಗೌಪಾಲ್ ಅವರೊಂದಿಗೆ ಖಡಕ್ ಮಾಹಿತಿ ನೀಡಿರುವ ಸಿದ್ದರಾಮಯ್ಯ ಅವರು, ಪರಿಸ್ಥಿತಿ ಕೈಮೀರಿ ಹೋಗಿದ್ದು, ಮೈತ್ರಿ ಮುರಿದುಕೊಳ್ಳುವುದೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಈ ಹಿಂದೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ ಅವರು ಅಂದು ಕೂಡ ನೇರವಾಗಿ ರಾಹುಲ್ ಅವರ ಮುಂದೆಯೇ ಮೈತ್ರಿ ಅಂತ್ಯಗೊಳಿಸುತ್ತಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೇ ದೆಹಲಿಯ ಪ್ರಮುಖ ಕಾಂಗ್ರೆಸ್ ನಾಯಕರಿಗೂ ವರದಿಯನ್ನು ಸಿದ್ದರಾಮಯ್ಯ ಅವರು ನೀಡಿದ್ದರು. ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಭಾರೀ ಹೊಡೆತ ಬೀಳುತ್ತಿದೆ. ಮತ್ತೆ ಪಕ್ಷವನ್ನು ಸಂಘಟನೆ ಮಾಡುವುದು
    ಅಸಾಧ್ಯವಾಗಲಿದೆ. ಪಕ್ಷ ಒಡೆದು ಹೋಗುವ, ಬೇರೆ ಬೇರೆ ಸಮಸ್ಯೆಗಳು ಎದುರಾಗಲಿದೆ ಎಂದು ವರದಿಯಲ್ಲಿ ತಿಳಿಸಿದ್ದರು. ಆದರೆ ಅಂದು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ಮಾತಿಗೆ ಮಣೆ ಹಾಕಿರಲಿಲ್ಲ.

    ಆಪ್ತ ಶಾಸಕರೇ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಅಸಹಾಯಕರಾಗಿದ್ದಾರೆ. ಶಾಸಕರ ರಾಜೀನಾಮೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ಅವರು, ಶಾಸಕರ ಮನವೊಲಿಕೆಗೆ ಡಿಕೆ ಶಿವಕುಮಾರ್ ಅವರು ತೆರಳಿದ್ದಾರೆ. ಕಾದು ನೋಡೋಣ. ನಾನು ಶಾಸಕರಿಗೆ ಕರೆ ಮಾಡಿದ್ದೆ, ಆದರೆ ಶಾಸಕರ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿಸಿದ್ದರು.

  • ಮೈತ್ರಿ ಸರ್ಕಾರ 1 ವರ್ಷದ ಸಾಧನೆ ತೃಪ್ತಿ ತಂದಿದೆ: ಸಿಎಂ ಎಚ್‍ಡಿ ಕುಮಾರಸ್ವಾಮಿ

    ಮೈತ್ರಿ ಸರ್ಕಾರ 1 ವರ್ಷದ ಸಾಧನೆ ತೃಪ್ತಿ ತಂದಿದೆ: ಸಿಎಂ ಎಚ್‍ಡಿ ಕುಮಾರಸ್ವಾಮಿ

    ಬೆಂಗಳೂರು: ಮೇ 23ಕ್ಕೆ ರಾಜ್ಯ ಸಮ್ಮಿಶ್ರ ಸರ್ಕಾರ ರಚನೆಯಾಗಿ 1 ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವರ್ಷದ ಸಾಧನೆಯ ಬಗ್ಗೆ ಸಿಎಂ ಕುಮಾರಸ್ವಾಮಿ ಅವರು ತೃಪ್ತಿ ವ್ಯಕ್ತಪಡಿಸಿದ್ದಾರೆ.

    ಸರ್ಕಾರ ಒಂದು ವರ್ಷದ ಸಾಧನೆಗಳನ್ನು ಜನತೆಗೆ ತಿಳಿಸಿರುವ ಸಿಎಂ ಕುಮಾರಸ್ವಾಮಿ ಅವರು, ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವೇಣುಗೋಪಾಲ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಂಪುಟ ಸದಸ್ಯರು ಸೇರಿದಂತೆ ರಾಜ್ಯದ ಜನರಿಗೆ ಕೃತಜ್ಞತೆ ತಿಳಿಸಿದ್ದಾರೆ.

    ಸಿಎಂ ಪತ್ರಿಕಾ ಹೇಳಿಕೆ ಇಂತಿದೆ:
    ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಹೊಂಗನಸಿನೊಂದಿಗೆ ನಮ್ಮ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗುತ್ತಿದೆ. ಈ ಅವಧಿಯಲ್ಲಿ ನಾವು ಮಂಡಿಸಿದ ಎರಡು ಆಯವ್ಯಯಗಳು ನಮ್ಮ ಸರ್ಕಾರದ ಒಲವು, ನಿಲುವುಗಳು, ಸಾಗಬೇಕಾದ ಹಾದಿಯನ್ನು ಸ್ಪಷ್ಟಪಡಿಸಿವೆ. ಈ ಅವಧಿಯಲ್ಲಿ ನಾವು ರೂಪಿಸಿರುವ ಕಾರ್ಯಕ್ರಮಗಳು ಜನರಲ್ಲಿ ಜನಪರ ಸರ್ಕಾರ, ರೈತರ ಪರವಾದ ಸರ್ಕಾರ, ಎಲ್ಲ ವರ್ಗದವರ ಆಶೋತ್ತರಗಳಿಗೆ ಸ್ಪಂದಿಸುವ ಸರ್ಕಾರ ಎಂಬ ಭಾವನೆ ಮೂಡಿಸಿರುವುದು ತೃಪ್ತಿ ತಂದಿದೆ. ಜೊತೆಗೆ ನಮ್ಮ ಮುಂದಿನ ನಡೆಗೆ ಸ್ಫೂರ್ತಿಯೂ ಆಗಿದೆ.

    ರೈತರ ನೋವಿಗೆ ಸ್ಪಂದಿಸಿದ ನಮ್ಮ ಮೈತ್ರಿ ಸರ್ಕಾರ ಈ ನಿಟ್ಟಿನಲ್ಲಿ ಕೆಲವು ಮಹತ್ವಪೂರ್ಣ ಹೆಜ್ಜೆಗಳನ್ನಿಟ್ಟಿದೆ. ಕೃಷಿ ಸಾಲ ಮನ್ನಾ ಯೋಜನೆಯನ್ನು ಅತ್ಯಂತ ಪಾರದರ್ಶಕವಾಗಿ ಜಾರಿಗೊಳಿಸಲಾಗುತ್ತಿದ್ದು, ಈಗಾಗಲೇ 15.5 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಲ್ಲ ಅರ್ಹ ರೈತರಿಗೂ ಈ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ಇಸ್ರೇಲ್ ಮಾದರಿ ಕೃಷಿ, ಸಾವಯವ ಕೃಷಿಗೆ ಒತ್ತು, ರೈತ ಸಲಹಾ ಸಮಿತಿ ಸ್ಥಾಪನೆ ಮತ್ತಿತರ ಉಪಕ್ರಮಗಳು ರೈತರಲ್ಲಿ ಹೊಸ ಭರವಸೆ ಮೂಡಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಪ್ರಯತ್ನಗಳು. ಮುಂದಿನ ದಿನಗಳಲ್ಲಿಯೂ ಇಂತಹ ಹಲವಾರು ಉಪಕ್ರಮಗಳ ಮೂಲಕ ರೈತರ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯುವ ಆಶಯ ನಮ್ಮದು.

    ಅಂತೆಯೇ ಕೈಗಾರಿಕೆಗಳ ಮೂಲಕ ಉದ್ಯೋಗ ಸೃಷ್ಟಿ, ಬೆಂಗಳೂರು ನಗರ, ಎರಡನೇ ಹಂತದ ನಗರಗಳ ಅಭಿವೃದ್ಧಿ, ನಾಡಿನ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡುವ ಮೂಲಕ ರಾಜ್ಯದ ಆರ್ಥಿಕ ಅಭಿವೃದ್ಧಿ ಉತ್ತಮಪಡಿಸುವತ್ತ ಅಡಿಯಿಟ್ಟಿದ್ದೇವೆ. ಶಾಲೆಗಳ ಮೂಲಸೌಕರ್ಯಕ್ಕೆ ಆದ್ಯತೆ, ಶಿಕ್ಷಣದ ಗುಣಮಟ್ಟದ ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು, ಆಶಾದಾಯಕ ಬೆಳವಣಿಗೆಯನ್ನೂ ಸಾಧಿಸಿದ್ದೇವೆ. ಕಡು ಬಡವರಿಗೂ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿ ಮುಂದುವರಿದಿದೆ.

    ಸಾಮಾಜಿಕ ವಲಯದಲ್ಲಿಯೂ ನಮ್ಮ ಕಳಕಳಿ, ಕಾರ್ಯಕ್ರಮಗಳ ರೂಪು ತಳೆದು ದಮನಿತರ ಬದುಕು ಹಸನುಗೊಳಿಸಲು ಮುಂದಾಗಿದೆ. ನಮ್ಮ ಮಿತ್ರ ಪಕ್ಷ ತನ್ನ ಆಡಳಿತಾವಧಿಯಲ್ಲಿ ಜಾರಿಗೊಳಿಸಿರುವ ಮಹತ್ವಾಕಾಂಕ್ಷಿ ಹಾಗೂ ಜನಪ್ರಿಯ ಯೋಜನೆಗಳನ್ನೂ ಸಹ ಮುಂದುವರೆಸಿಕೊಂಡು ಜನಪರ ಆಡಳಿತದ ಹೊಸ ಮಾದರಿ ಸೃಷ್ಟಿಸುವತ್ತ ಮುನ್ನಡೆದಿದ್ದೇವೆ.

    ಪ್ರಕೃತಿ ಮಾತೆಯ ಮುನಿಸಿನಿಂದ ನಾಡು ಪ್ರವಾಹ, ಭೂಕುಸಿತ ಹಾಗೂ ತೀವ್ರ ಬರದಂತಹ ವೈರುಧ್ಯವನ್ನು ಈ ವರ್ಷ ನಮ್ಮ ನಾಡು ಎದುರಿಸಿದೆ. ಈ ಪರಿಸ್ಥಿತಿಯನ್ನು ನಮ್ಮ ಸರ್ಕಾರ, ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ನೆರವಿನೊಂದಿಗೆ ಯಶಸ್ವಿಯಾಗಿ ನಿರ್ವಹಿಸಿದೆ. ಕಳೆದ ಎರಡು ತಿಂಗಳಿನಿಂದ ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ನಂತರವೂ ಅಧಿಕಾರಿಗಳು ಬರ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

    ಈ ನಿಟ್ಟಿನಲ್ಲಿ ನಮ್ಮ ಸರ್ಕಾರವನ್ನು ಬೆಂಬಲಿಸಿ ಸಹಕರಿಸಿದ ನಾಡಿನ ಜನತೆಗೆ, ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ, ನನ್ನ ಮಾರ್ಗದರ್ಶಕರೂ ಆದ ನನ್ನ ತಂದೆ, ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡ ಅವರಿಗೆ, ಮಿತ್ರ ಪಕ್ಷದ ನೇತಾರರಾದ ಶ್ರೀ ರಾಹುಲ್ ಗಾಂಧಿ, ಶ್ರೀ ಕೆ.ಸಿ. ವೇಣುಗೋಪಾಲ್, ಶ್ರೀ ಸಿದ್ದರಾಮಯ್ಯನವರಿಗೆ, ಎಲ್ಲ ಜನಪ್ರತಿನಿಧಿಗಳಿಗೆ ಹಾಗೂ ಎಲ್ಲ ಅಧಿಕಾರಿ ವೃಂದದವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನಿಮ್ಮೆಲ್ಲರ ಸಹಕಾರ, ಸ್ಫೂರ್ತಿ ನಮ್ಮ ಸರ್ಕಾರದ ಮುಂದಿನ 4 ವರ್ಷಗಳ ಅವಧಿಯಲ್ಲಿ ಹೀಗೇ ಮುಂದುವರಿಯಲಿ. ನಾಡಿನ ಪ್ರಗತಿಗೆ ಕೈಜೋಡಿಸಿ ದುಡಿಯೋಣ. ಕಲ್ಯಾಣ ಕರ್ನಾಟಕದ ಆಶಯ, ಸಾಕಾರಗೊಳಿಸೋಣ.

  • ಸಿಎಂ ಹೇಳಿದ್ದಕ್ಕೆಲ್ಲ ನಾನು ರಿಯಾಕ್ಟ್ ಮಾಡಬೇಕೇ – ಸಿದ್ದರಾಮಯ್ಯ ಗರಂ

    ಸಿಎಂ ಹೇಳಿದ್ದಕ್ಕೆಲ್ಲ ನಾನು ರಿಯಾಕ್ಟ್ ಮಾಡಬೇಕೇ – ಸಿದ್ದರಾಮಯ್ಯ ಗರಂ

    – ಪಕ್ಷಾಂತರ ನಿಷೇಧ ಕಾಯ್ದೆ ಮತ್ತಷ್ಟು ಬಲಗೊಳ್ಳಬೇಕು

    ಹುಬ್ಬಳ್ಳಿ: ಸಂಸದ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಬೇಕಿತ್ತು ಎಂಬ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಿದ್ದರಾಮಯ್ಯ ಅವರು ನಿರಾಕರಿಸಿದರು.

    ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊದಿಗೆ ಮಾತನಾಡಿದ ಅವರು, ಸಿಎಂ ಕುರಿತ ಪ್ರಶ್ನೆಗೆ ಗರಂ ಆದರು. ನಾನು ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದು, ಎರಡು ಪಕ್ಷಗಳನ್ನ ಉತ್ತಮವಾಗಿ ನಡೆಸಿಕೊಂಡು ಹೋಗುವುದು ನನ್ನ ಕೆಲಸ, ಅದನ್ನು ನಾನು ಮಾಡುತ್ತಿದ್ದೇನೆ. ಸಿಎಂ ಆಗಬೇಕಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿಕೆ ನೀಡಿಲ್ಲ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಮಾತನಾಡಿಲ್ಲ. ಆದ್ದರಿಂದ ಸಿಎಂ ಹೇಳಿಕೆಗೆ ನಾನು ರಿಯಾಕ್ಟ್ ಮಾಡಬೇಕೇ? ಇದು ನನ್ನ ಕೆಲಸವಲ್ಲ ಎಂದು ಹೇಳಿ ಕೆಂಡಾಮಂಡಲರಾದರು.

    ಇದಕ್ಕೂ ಮುನ್ನ ಸ್ವಾರ್ಥ, ಹಣದ ಆಮಿಷಕ್ಕೆ ಅನೇಕರು ಬಲಿಯಾಗುತ್ತಿದ್ದು, ರಾಜಕೀಯ ವ್ಯವಸ್ಥೆ ಹಾಳಾಗುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಶಾಸಕರನ್ನು ಖರೀದಿಸುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಮಾಜಿ ಶಾಸಕ ಉಮೇಶ ಜಾಧವ್ ಪ್ಯಾಕೇಜ್ ಡೀಲ್‍ಗೆ ಒಳಗಾಗಿದ್ದಾರೆ. ಆದರೆ ಬೇರೆ ಶಾಸಕರು ರಾಜೀನಾಮೆ ಕೊಟ್ಟು ಹೋಗುವುದಕ್ಕೆ ಆಗುವುದಿಲ್ಲ. ಆದರೂ ಪಕ್ಷಾಂತರ ನಿಷೇಧ ಕಾಯ್ದೆ ಮತ್ತಷ್ಟು ಬಲಗೊಳ್ಳಬೇಕು. ಜನರು ಆಯ್ಕೆ ಮಾಡಿ ಕಳುಹಿಸುತ್ತಾರೆ, ಆದರೆ ಶಾಸಕರು ರಾಜೀನಾಮೆ ನೀಡಿದರೆ ಜನರಿಗೆ ಮೋಸ ಮಾಡಿದಂತೆ. ನಮ್ಮಂತಹ ನಾಯಕರೇ ಇಂತಹ ಸಂಸ್ಕೃತಿ ಬೆಳೆಸಿದ್ದಾರೆ. ನಾವು ಇದರತ್ತ ಗಮನಹರಿಸ ಬೇಕಿದೆ ಎಂದರು.

    ಇದೇ ವೇಳೆ ಈಶ್ವರಪ್ಪ ಅವರ ನರಸತ್ತವರು ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಾನು ಈಗಾಗಲೇ ಈಶ್ವರಪ್ಪ ಅವರ ನಾಲಿಗೆ ಹಾಗೂ ಬ್ರೈನ್‍ಗೆ ಸಂಪರ್ಕ ಕಡಿತ ಆಗಿದೆ ಅಂತ ಹೇಳಿದ್ದೆನೆ. ಸಚಿವ ಡಿಕೆ ಶಿವಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಆದ್ದರಿಂದ ನಾನು ಏನು ಮಾತನಾಡಲ್ಲ ಎಂದರು.

    ಮೇ 23ರ ಗಡುವಿನ ಬಗ್ಗೆ ಪ್ರತಿಕ್ರಿಯೆ ನೀಡಿ ಸಮ್ಮಿಶ್ರ ಸರ್ಕಾರ ರಚನೆ ಆದ ದಿನದಿಂದ ಇದೇ ಹೇಳಿಕೆಯನ್ನ ಬಿಜೆಪಿ ನಾಯಕರು ನೀಡುತ್ತಿದ್ದಾರೆ. ಜನರು ಕೂಡ ಅವರ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಮಾಜಿ ಸಚಿವ ರಮೇಶ ಜಾರಕಿಹೊಳಿ ಪಕ್ಷ ಬಿಡಲ್ಲ. ಸರ್ಕಾರದಲ್ಲಿ ಅವರನ್ನು ಡಿಸಿಎಂ ಮಾಡುವ ಪ್ರಶ್ನೆಯೇ ಉದ್ಭವಿಸಲ್ಲ ಎಂದರು.

  • ಮೇ 23ರ ಬಳಿಕ ಸಿದ್ದು ‘ಕಂಡೀಷನ್’ ಮೇಲೆಯೇ ಸರ್ಕಾರದ ಆಡಳಿತ?

    ಮೇ 23ರ ಬಳಿಕ ಸಿದ್ದು ‘ಕಂಡೀಷನ್’ ಮೇಲೆಯೇ ಸರ್ಕಾರದ ಆಡಳಿತ?

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮೇ 23ರ ನಂತರ ಮಹತ್ವದ ಬೆಳಣಿಗೆಗಳು ನಡೆಯಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ಸಿಎಂ ಸ್ಥಾನದ ಚರ್ಚೆ ಮಹತ್ವ ಪಡೆದುಕೊಂಡಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಹೇಳುವ ಮೂಲಕ “ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಲಿ” ಎಂಬ ಆಪ್ತರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ ಆಪ್ತ ಶಾಸಕರು ತಮ್ಮ ಕನಸ್ಸನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದ್ದು, ಲೋಕ ಫಲಿತಾಂಶದ ಬಳಿಕ ಸಿಎಂ ಸ್ಥಾನ ಬದಲಾಗುವುದಿಲ್ಲ. ಆದರೆ ಸಿಎಂ ಸ್ಥಾನ ಬೇಡ ಎಂದು ಮೈತ್ರಿ ಮುಂದೆ 9 ಷರತ್ತುಗಳನ್ನು ಸಿದ್ದರಾಮಯ್ಯ ಅವರು ಇಟ್ಟಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ದೋಸ್ತಿ ಸರ್ಕಾರವನ್ನ ಉಳಿಸಿಕೊಳ್ಳುವ ಸಲುವಾಗಿ ಹಾಗೂ 37 ಜೆಡಿಎಸ್ ಶಾಸಕರಿಗೆ ಇರುವ ಲಾಭ ತಪ್ಪಿಸಲು ಷರತ್ತುಗಳನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಇದರಲ್ಲಿ ಸರ್ಕಾರದಲ್ಲಿ 2 ಡಿಸಿಎಂ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ 26 ಸಚಿವ ಸ್ಥಾನ ನೀಡುವುದು ಪ್ರಮುಖ ಬೇಡಿಕೆಗಳಾಗಿದೆ. ಜೆಡಿಎಸ್ ಪಕ್ಷಕ್ಕೆ ಸದ್ಯ ನೀಡಿರುವ 12 ಸಚಿವ ಸ್ಥಾನದ ಬದಲಾಗಿ 5 ಸ್ಥಾನ ನೀಡುವುದು ಹಾಗೂ ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‍ಗೆ ನೀಡುವುದು ಷರತ್ತುಗಳ ಪಟ್ಟಿಯಲ್ಲಿ ಸೇರಿದೆ.

    ದೋಸ್ತಿ ಸರ್ಕಾರದ ಆಡಳಿತ ಕಾರ್ಯದಲ್ಲೂ ಕೆಲ ಷರತ್ತುಗಳನ್ನು ವಿಧಿಸಿದ್ದು, ಪ್ರತಿ ಸಂಪುಟ ಸಭೆಗೂ ಮುನ್ನ ಸಮನ್ವಯ ಸಮಿತಿ ಸಭೆ ಕಡ್ಡಾಯ ಸೇರಿದಂತೆ ಪ್ರಮುಖ ನೀತಿ ನಿರ್ಧಾರಗಳು ಜಂಟಿ ಘೋಷಣೆ ಮಾಡಬೇಕೆಂಬ ಬೇಡಿಕೆ ಇದೆ. ಸರ್ಕಾರದ ಆಡಳಿತದಲ್ಲಿ ಆಯಾ ಸಚಿವರು ತಮ್ಮ ಇಲಾಖೆಯಲ್ಲಿನ ಕಾರ್ಯಗಳನ್ನೇ ನಿರ್ವಹಿಸಿ ಬೇಕೆ ವಿನಃ ಇತರೇ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಗೃಹ ಇಲಾಖೆ ವಿಚಾರದಲ್ಲಿ ಮಾತ್ರ ಸ್ವತಂತ್ರವಾಗಿ ಇರಬೇಕು ಎಂಬುದು ಬೇಡಿಕೆಗಳ ಪಟ್ಟಿಯಲ್ಲಿದೆ. ಅಂತಿಮವಾಗಿ ಯಾವುದೇ ಇಲಾಖೆಗಳಲ್ಲಿ ಅಧಿಕಾರಿಗಳ ವರ್ಗಾವಣೆ ನಡೆಯಬೇಕಾದರೆ ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಆ ಬಳಿಕ ವರ್ಗಾವಣೆ ಮಾಡಬೇಕೆಂಬ ಷರತ್ತಗಳನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ.