Tag: Ex CM Kumaraswamy

  • ಶಾಸಕರ ಭಿನ್ನಮತ ಶಮನಕ್ಕೆ ಎಚ್‍ಡಿಕೆ ಪ್ಲಾನ್- ಮಲೇಷಿಯಾಗೆ ದಳ ನಾಯಕರ ಪ್ರವಾಸ

    ಶಾಸಕರ ಭಿನ್ನಮತ ಶಮನಕ್ಕೆ ಎಚ್‍ಡಿಕೆ ಪ್ಲಾನ್- ಮಲೇಷಿಯಾಗೆ ದಳ ನಾಯಕರ ಪ್ರವಾಸ

    ಬೆಂಗಳೂರು: ಮೈತ್ರಿ ಸರ್ಕಾರ ಪತನ ಬಳಿಕ 2ನೇ ಹಂತದ ಆಪರೇಷನ್ ಕಮಲ ನಡೆಸಲು ತೆರೆಮರೆಯಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂಬ ಸುದ್ದಿ ಈ ಹಿಂದೆಯೇ ಕೇಳಿ ಬಂದಿತ್ತು. ಸದ್ಯ ಜೆಡಿಎಸ್ ಪಕ್ಷದ ಶಾಸಕರು, ಪರಿಷತ್ ಸದಸ್ಯರು ಹಾಗೂ ಪಕ್ಷದ ವರಿಷ್ಠರ ನಡುವೆ ಉಂಟಾಗಿರುವ ಅಸಮಾಧಾನವನ್ನು ಶಮನ ಮಾಡಲು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ವಿಶೇಷ ಪ್ಲಾನ್ ಮಾಡಿದ್ದಾರೆ.

    ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಶಾಸಕರು ಹಾಗೂ ಪರಿಷತ್ ಸದಸ್ಯರು, ಮುಖಂಡರು ಮಲೇಷಿಯಾ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಪ್ರವಾಸ ತೆರಳಲು ಬೇಕಾದ ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

    ನ.3 ರಿಂದ ನ.6ವರೆಗೂ ಜೆಡಿಎಸ್ ಮುಖಂಡರು ಮಲೇಷಿಯಾ ಪ್ರವಾಸಕ್ಕೆ ತೆರಳಿದ್ದು, ಪಕ್ಷದಲ್ಲಿ ಒಗ್ಗಟ್ಟು ಸಾಧಿಸುವ ಉದ್ದೇಶ ಈ ಪ್ರವಾಸ ಹಿಂದಿದೆ ಎನ್ನಲಾಗಿದೆ. ಪ್ರವಾಸ ವೇಳೆ ಪಕ್ಷದ ನಾಯಕರ ಸಮಸ್ಯೆಗಳು ಹಾಗೂ ಅವರ ಅಸಮಾಧಾನಕ್ಕೆ ಕಾರಣಗಳನ್ನು ತಿಳಿದು ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ವರಿಷ್ಠರು ನೀಡಲಿದ್ದಾರೆ. ಸದ್ಯ ಎಚ್‍ಡಿಕೆಯವರ ಈ ನಿರ್ಧಾರಕ್ಕೆ ಕೆಲ ಅಪ್ತ ಶಾಸಕರು ಒಪ್ಪಿಗೆ ನೀಡಿದ್ದು, ಪಕ್ಷದ ನಾಯಕರ ಸಮಸ್ಯೆ ಕೇಳಲು ಈ ಪ್ರವಾಸ ಶಾಸಕರಿಗೆ ಹೊಸ ಅನುಭವ ಹಾಗೂ ಹೊಸತನ ನೀಡಲಿದೆ ಎಂಬುವುದು ಅವರ ಪ್ಲಾನ್ ಆಗಿದೆ.

    ಎಚ್‍ಡಿಕೆರ ಪ್ಲಾನ್ ನಂತೆ ಪ್ರವಾಸ ತೆರಳುವ ಕುರಿತು ಇನ್ನು ಕೆಲ ನಾಯಕರು ನಿರ್ಧಾರ ತೆಗೆದುಕೊಳ್ಳಬೇಕಿದ್ದು, ನಾಳೆ ಬಸವರಾಜ್ ಹೊರಟ್ಟಿ ಅವರ ನೇತೃತ್ವದಲ್ಲಿ ಅಸಮಾಧಾನಿತ ನಾಯಕರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮಲೇಷಿಯಾ ಪ್ರವಾಸಕ್ಕೆ ತೆರಳುವ ಅಥವಾ ನಿರಾಕರಿಸುವ ಕುರಿತ ನಿರ್ಧಾರ ಅಂತಿಮವಾಗಲಿದೆ ಎಂಬ ಮಾಹಿತಿ ಲಭಿಸಿದೆ.

    ಈಗಾಗಲೇ ಜೆಡಿಎಸ್‍ನ ಹಲವು ಶಾಸಕರು ಹಾಗೂ ಪರಿಷತ್ ನಾಯಕರು, ನಾಯಕರು ಜೆಡಿಎಸ್ ವರಿಷ್ಠರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದಾರೆ. ಆದರೆ ಎಚ್‍ಡಿಕೆಯವರ ಈ ಮಲೇಷಿಯಾ ಪ್ರವಾಸ ಪ್ಲಾನ್ ಯಾವ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

  • ಜೆಡಿಎಸ್‍ನಲ್ಲಿ ಬಂಡಾಯದ ಕಹಳೆ- ವರಿಷ್ಠ ವಿರುದ್ಧ ಹೊರಟ್ಟಿ ಅಸಮಾಧಾನ

    ಜೆಡಿಎಸ್‍ನಲ್ಲಿ ಬಂಡಾಯದ ಕಹಳೆ- ವರಿಷ್ಠ ವಿರುದ್ಧ ಹೊರಟ್ಟಿ ಅಸಮಾಧಾನ

    ಬೆಂಗಳೂರು: ಜೆಡಿಎಸ್ ಪಕ್ಷದಲ್ಲಿ ಮತ್ತೆ ಬಂಡಾಯದ ಕಹಳೆ ಮೊಳಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಪಕ್ಷದ ಹಿರಿಯ ಮುಖಂಡ, ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.

    ನಮ್ಮ ಮೇಲೆ ಕುಮಾರಸ್ವಾಮಿಗೆ ಸರ್ಕಾರ ಇದ್ದಾಗ ಇದ್ದ ಕಾಳಜಿ ಈಗಿಲ್ಲ. ನಮ್ಮ ಸಮಸ್ಯೆ ಕೇಳೋರು ಕೂಡ ಯಾರು ಇಲ್ಲ, ವರಿಷ್ಠರು ಕೂಡ ನಮ್ಮ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ನಿನ್ನೆ ನಮ್ಮೆಲ್ಲಾ ಪಕ್ಷದ ಸದಸ್ಯರು ಒಂದು ಸಭೆ ಮಾಡಿದ್ದೇವೆ. ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ. ಮತ್ತೆ ಸೋಮವಾರ ಸಭೆ ಕರೆದಿದ್ದು, ಮುಂದಿನ ತೀರ್ಮಾನ ತೆಗೆದುಕೊಳ್ತೇವೆ ಎಂದರು.

    ಇದೇ ವೇಳೆ ಪಕ್ಷ ಬಿಡುವ ಬಗ್ಗೆ ಆಲೋಚನೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಇದೆ ರೀತಿ ವರ್ತನೆ ಮುಂದುವರಿದರೆ ಕಷ್ಟ. ನಮ್ಮ ದಾರಿ ನಾವು ನೋಡಿಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆಯನ್ನು ನೀಡಿದರು.

    ನೆರೆ ಕುರಿತ ಸರ್ಕಾರದ ಕ್ರಮಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ನೀಡಿದ ಉತ್ತರ ತೃಪ್ತಿ ತಂದಿದೆ. ನಾವು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಅವರು ಉತ್ತರ ಕೊಟ್ಟಿದ್ದಾರೆ. ಸರ್ಕಾರ ಕೂಡ ಪರಿಹಾರ ಕಾರ್ಯಗಳನ್ನು ಸಮರ್ಥವಾಗಿ ಮಾಡಿದೆ. ಆದರೆ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಬಗ್ಗೆ ಅವರು ಹೇಳಿಲ್ಲ. ಅದಕ್ಕಾಗಿ ಕಾಂಗ್ರೆಸ್ ಪಕ್ಷದವರು ಧರಣಿ ಮಾಡಿದರು. ಆದರೆ ನಾವು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಅವರು ಉತ್ತರ ಕೊಟ್ಟಿದ್ದರು. ಆದ್ದರಿಂದಲೇ ನಾವು ಸದನದಲ್ಲಿ ಹೋರಾಟ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬಲಿ ಪಶು ಆಗುವಂತಾಯಿತು. ಇದಕ್ಕೆ ಉದಾಹರಣೆ ಈ ರಮೇಶ್ ಆತ್ಮಹತ್ಯೆ. ಹೀಗಾಗಿ ಮುಂದೆ ಆದರೂ ರಾಜಕಾರಣಿಗಳ ಪಿಎಗಳು, ಪಿಎಸ್ ಗಳು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

  • ಅಲೋಕ್‍ ಕುಮಾರ್ ಈಗ್ಲೂ ದಕ್ಷ ಅಧಿಕಾರಿ – ಸಿಬಿಐ ದಾಳಿಗೂ ನನಗೂ ಸಂಬಂಧವಿಲ್ಲ: ಎಚ್‍ಡಿಕೆ

    ಅಲೋಕ್‍ ಕುಮಾರ್ ಈಗ್ಲೂ ದಕ್ಷ ಅಧಿಕಾರಿ – ಸಿಬಿಐ ದಾಳಿಗೂ ನನಗೂ ಸಂಬಂಧವಿಲ್ಲ: ಎಚ್‍ಡಿಕೆ

    ಬೆಂಗಳೂರು: ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ನಿವಾಸದಲ್ಲಿ ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ ಕುರಿತ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ, ಸಿಬಿಐ ದಾಳಿಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

    ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಫೋನ್ ಕದ್ದಾಲಿಕೆ ಕುರಿತ ವಿಚಾರಣೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಎಚ್‍ಡಿಕೆ, ಯಾರ ಮನೆ ಮೇಲಾದರೂ ದಾಳಿ ನಡೆಯಲಿ. ನನ್ನನ್ನು ಯಾಕೆ ಕೇಳುತ್ತೀರಿ. ಅದಕ್ಕೂ ನನಗೂ ಏನು ಸಂಬಂಧ? ಎಲ್ಲರ ಅವಧಿಯಲ್ಲೂ ಫೋನ್ ಟ್ಯಾಪಿಂಗ್ ನಡೆದಿದೆ. ಯಾರ ಯಾರ ಅವಧಿಯಲ್ಲಿ ಹೇಗೆ ನಡೆಸಿದ್ದಾರೆ ಎಂದು ತನಿಖೆ ನಡೆಸುತ್ತಿದ್ದಾರೆ. ಅದಕ್ಕೆ ನಾನು ಏಕೆ ತಲೆ ಕೆಡಿಸಿಕೊಳ್ಳಲಿ ಎಂದರು.

    ಈಗಲೂ ನಾನು ಹೇಳುತ್ತಿದ್ದೇನೆ. ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರು ದಕ್ಷ ಅಧಿಕಾರಿಯಾಗಿದ್ದಾರೆ. ಪ್ರಕರಣದಲ್ಲಿ ನನ್ನ ಮನೆಗೂ ವಿಚಾರಣೆಗೆ ಬಂದರೆ ಬರಲಿ. ದೇಶದ ಕಾನೂನು ವ್ಯವಸ್ಥೆಯ ಅಡಿ ಯಾರನ್ನು ಬೇಕಾದರು ತನಿಖೆ ಮಾಡಬಹುದು. ಇದಕ್ಕೆ ಗಾಬರಿ ಪಡುವ ಅಗತ್ಯವಿಲ್ಲ ಎಂದರು.

    ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆಯ್ಕೆ ಕುರಿತು ಇಂದು ಜೆಡಿಎಸ್ ಕಚೇರಿಯಲ್ಲಿ ಸಭೆ ನಡೆಸಿದರು. ಜೆಡಿಎಸ್ ವರಿಷ್ಠರಾದ ದೇವೇಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 15 ಕ್ಷೇತ್ರಗಳ ಅಭ್ಯರ್ಥಿ ಬಗ್ಗೆ ನಿರ್ಧಾರವಾಗಲಿದೆ. ಈಗಾಗಲೇ ಎಲ್ಲಾ ಕ್ಷೇತ್ರಗಳ ಮುಖಂಡರ ಸಭೆ ಮಾಡಿ ಅಭ್ಯರ್ಥಿಗಳನ್ನ ಕುಮಾರಸ್ವಾಮಿ ಫೈನಲ್ ಮಾಡಿದ್ದು, ಇಂದಿನ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಮಂಡಿಸಿ ಚರ್ಚೆ ಮಾಡಿ ಅಂತಿಮವಾಗಿ ಅಭ್ಯರ್ಥಿ ಗಳನ್ನ ಘೋಷಣೆ ಮಾಡಲಾಗುತ್ತೆ ಎಂಬ ಮಾಹಿತಿ ಲಭಿಸಿದೆ.