Tag: ex-CM

  • ಬಿಎಸ್‌ವೈ ವಿರುದ್ಧ ದೂರು ಕೊಟ್ಟ ಮಹಿಳೆ ಮಾನಸಿಕ ಅಸ್ವಸ್ಥೆ ಅಂತಾ ಹೇಳ್ತಿದ್ದಾರೆ: ಪರಂ

    ಬಿಎಸ್‌ವೈ ವಿರುದ್ಧ ದೂರು ಕೊಟ್ಟ ಮಹಿಳೆ ಮಾನಸಿಕ ಅಸ್ವಸ್ಥೆ ಅಂತಾ ಹೇಳ್ತಿದ್ದಾರೆ: ಪರಂ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ (B S Yediyurappa) ವಿರುದ್ಧ ಕೊಟ್ಟ ಮಹಿಳೆ ಮಾನಸಿಕ ಅಸ್ವಸ್ಥೆ ಅಂತಾ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಪ್ರಕರಣದ ಕುರಿತು ತನಿಖೆ ಆಗುವವರೆಗೂ ಯಾವುದೇ ವಿಷಯ ತಿಳಿಸೋಕೆ ಆಗಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ (G Parameshwar) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ರಾತ್ರಿ ಒಬ್ಬ ಮಹಿಳೆ ದೂರು ಕೊಟ್ಟಿದ್ದಾರೆ. ಅದನ್ನು ಪರಿಶೀಲಿಸಿ ಕೇಸ್ ರಿಜಿಸ್ಟರ್ ಮಾಡಿದ್ದಾರೆ. ಪೊಲೀಸರು ಅದರ ಬಗ್ಗೆ ತನಿಖೆ ಮಾಡ್ತಿದ್ದಾರೆ. ತನಿಖೆ ಆಗುವವರೆಗೂ ಯಾವುದೇ ವಿಷಯ ತಿಳಿಸೋಕೆ ಆಗಲ್ಲ. ಇದು ಒಬ್ಬ ಮಾಜಿ ಸಿಎಂ ವಿಷಯಕ್ಕೆ ಸಂಬಂಧಿಸಿದ್ದು, ಇದು ಬಹಳ ಸೂಕ್ಷ್ಮ ವಿಷಯ ಎಂದಿದ್ದಾರೆ.

    ಯಡಿಯೂರಪ್ಪ ಒಬ್ಬ ಹಿರಿಯ ರಾಜಕಾರಣಿ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ಅವರು ಯಾರೋ ಮಹಿಳೆ ದೂರು ಕೊಟ್ಟಿದ್ದಾರೆ. ಕಾನೂನು ಪ್ರಕಾರ ಪೊಲೀಸರು ತನಿಖೆ ಮಾಡ್ತಿದ್ದಾರೆ. ಇದರ ಬಗ್ಗೆ ಡಿಸಿಎಂ, ಸಿಎಂ ಜೊತೆಗೂ ಚರ್ಚೆ ಮಾಡಿದ್ದೇವೆ. ಮುಖ್ಯಮಂತ್ರಿಗಳು ಕೂಡ ಇದರ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದರು.

    ಮಹಿಳೆಗೆ ರಕ್ಷಣೆ ಅಗತ್ಯ ಬಿದ್ದರೆ ಕೊಡ್ತೀವಿ. ವಶಕ್ಕೆ ಸಂಬಂಧಿಸಿದಂತೆ ತನಿಖೆಯ ಮೇಲೆ ನಿರ್ಧಾರವಾಗುತ್ತದೆ. ಆ ಮಹಿಳೆ ಮಾನಸಿಕ ಅಸ್ವಸ್ಥರು ಅಂತಾ ಹೇಳ್ತಾರೆ. ಅವರು ದೂರನ್ನು ಟೈಪ್ ಮಾಡಿ ಕೊಟ್ಟಿದ್ದಾರೆ. ಆದರೆ ಕೈಯಿಂದ ಬರೆದು ದೂರು ಕೊಟ್ಟಿದ್ದಲ್ಲ. ಟೈಪ್ ಕಾಫಿ ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ನನಗೆ ಹೇಳಿದ್ದಾರೆ. ಒಬ್ಬ ಮಾಜಿ ಸಿಎಂ ವಿಷಯಕ್ಕೆ ಸೇರಿದ್ದಂತದ್ದು, ಯಾವುದೇ ವಿಷಯ ಆದರೂ ಬಹಳ ಎಚ್ಚರಿಕೆಯಿಂದ ಹೇಳಬೇಕಾಗುತ್ತದೆ. ಹೆಚ್ಚು ಮಾಹಿತಿ ತಗೆದುಕೊಳ್ಳೋವರೆಗೂ ಏನು ಬಹಿರಂಗ ಮಾಡೋಕೆ ಆಗಲ್ಲ ಎಂದು ಹೇಳಿದರು.

  • ಕಾಂಗ್ರೆಸ್ ಹಿರಿಯ ಮುಖಂಡ ಮಾಧವ್ ಸಿಂಗ್ ಸೋಲಂಕಿ ಇನ್ನಿಲ್ಲ

    ಕಾಂಗ್ರೆಸ್ ಹಿರಿಯ ಮುಖಂಡ ಮಾಧವ್ ಸಿಂಗ್ ಸೋಲಂಕಿ ಇನ್ನಿಲ್ಲ

    ಗಾಂಧಿನಗರ: ನಾಲ್ಕು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮಾಧವ್ ಸಿಂಗ್ ಸೋಲಂಕಿಯವರು ಇಂದು ತಮ್ಮ ಗಾಂಧಿನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ (93) ಮಾಧವ್ ಸಿಂಗ್ ಸೋಲಂಕಿ ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರ ಆಡಳಿತಾವಧಿಯಲ್ಲಿ ವಿದೇಶಾಂಗ ವ್ಯವಹಾರ ಸಚಿವರಾಗಿದ್ದರು.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಮಾಧವ್ ಸಿಂಗ್ ಸೋಲಂಕಿ ಅವರು ಅಸಾಧಾರಣ ನಾಯಕರಾಗಿದ್ದರು. ಗುಜರಾತ್ ರಾಜಕೀಯದಲ್ಲಿ ದಶಕಗಳ ಕಾಲ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯಕ್ಕೆ ಅವರು ನೀಡಿದ್ದ ಕೊಡುಗೆ ಮತ್ತು ಅಭಿವೃದ್ಧಿ ಸೇವೆಗಳು ಅಪಾರ. ಇಂದು ಅವರ ನಿಧನ ಬಹಳ ದುಃಖ ತಂದಿದೆ. ಓಂ ಸಾಂತಿ ಎಂದು ಹೇಳುವ ಮೂಲಕ ಸಂತಾಪ ಸೂಚಿಸಿದ್ದಾರೆ.

    ಮಾಧವ್ ಸಿಂಗ್ ಸೋಲಂಕಿಯವರ ನಿಧನ ವಿಷಯ ಕೇಳಿ ಬೇಸರವಾಗಿದೆ. ಕಾಂಗ್ರೆಸ್ ಸಿದ್ಧಾಂತವನ್ನು ಬಲಪಡಿಸುವಲ್ಲಿ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವಲ್ಲಿ ಅವರು ನೀಡಿದ ಕೊಡುಗೆಗಳು ಅಪಾರ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸೋಲಂಕಿಯವರ ಸಾವನ್ನು ಸಹಿಸಿಕೊಳ್ಳಲು ಶಕ್ತಿ ದೇವರು ನೀಡಲಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

    ಗುಜರಾತ್ ಮಾಜಿ ಮುಖ್ಯಮಂತ್ರಿ, ದೇಶದ ಮಾಜಿ ವಿದೇಶಾಂಗ ಸಚಿವ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಮಾಧವ್ ಸಿಂಗ್ ಸೋಲಂಕಿ ಅವರ ಸಾವು ದುರಂತ. ದೇವರು ಅವರ ಪವಿತ್ರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಜೀವಿತಾವಧಿಯಲ್ಲಿ ಸ್ವಭಾವ ಮತ್ತು ಕಾರ್ಯಗಳು ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದು, ಅವರು ಎಂದಿಗೂ ಮರೆಯಾಗುವುದಿಲ್ಲ ಎಂದು ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಅಮಿತ್ ಚಾವ್ಡಾ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

    ದಿವಂಗತ ರಾಜಕಾರಣಿಯ ಮಗ ಭಾರತ್ ಸೋಲಂಕಿ ಗುಜರಾತ್‍ನ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಕೇಂದ್ರ ಸಚಿವರಾಗಿದ್ದರು. ಮಾಧವ್ ಸಿಂಗ್ ಸೋಲಂಕಿ 1976 ಮತ್ತು 1990ರ ನಡುವೆ ನಾಲ್ಕು ಬಾರಿ ಗುಜರಾತ್ ಸಿಎಂ ಆಗಿದ್ದರು.

  • ಜೆಡಿಎಸ್ ಬಾವುಟ ಹಿಡಿದಿದ್ದಕ್ಕೆ ಯಾವುದೇ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ: ಹೆಚ್‍ಡಿಕೆ

    ಜೆಡಿಎಸ್ ಬಾವುಟ ಹಿಡಿದಿದ್ದಕ್ಕೆ ಯಾವುದೇ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ: ಹೆಚ್‍ಡಿಕೆ

    ಹುಬ್ಬಳ್ಳಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಜೆಡಿಎಸ್ ಬಾವುಟ ಹಿಡಿದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನವೀಯತೆ ದೃಷ್ಟಿಯಿಂದ ನಮ್ಮ ಕಾರ್ಯಕರ್ತರು ಡಿಕೆಶಿಗೆ ಬೆಂಬಲ ನೀಡಿರಬಹುದು. ಅದಕ್ಕೆ ಅವರು ಬಾವುಟ ಹಿಡಿದಿರಬಹುದು. ಆದರೆ ಅದಕ್ಕೆ ಯಾವುದೇ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ. ಈ ವಿಚಾರವಾಗಿ ಡಿಕೆಶಿಯವರನ್ನೇ ಕೇಳಬೇಕು ಎಂದರು.

    ಸಿದ್ದರಾಮಯ್ಯನವರು ಸರ್ಕಾರ ಬೀಳಿಸುವ ಕೆಲಸ ಮಾಡೋದಾದ್ರೆ ಮಾಡಲಿ, ಸಿದ್ದರಾಮಯ್ಯ ಜಾತ್ಯಾತೀತ ವ್ಯಕ್ತಿ. ಅವರು ಪಕ್ಕಾ ಸೆಕ್ಯೂಲರ್ ಬಿಡಿ. ನಾವೂ ಕೋಮುವಾದಿಗಳು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

    ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದಬೇಕು ಅಂದುಕೊಂಡವನು. ಆದರೆ ನಾನು ಇನ್ನೂ ಅಲ್ವ-ಸ್ವಲ್ಪ ಮಾನವೀಯತೆ ಉಳಿಸಿಕೊಂಡಿರುವೆ. ಜನರ ಕಷ್ಟಗಳಿಗೆ ಯಾರು ಸ್ಪಂದಿಸುವ ಭರವಸೆ ನೀಡುತ್ತಾರೆಯೋ ಅವರಿಗೆ ನನ್ನ ಬೆಂಬಲ ಇದ್ದೇ ಇರುತ್ತದೆ. ಅದು ಬಿಜೆಪಿಗೋ ಅಥವಾ ಕಾಂಗ್ರೆಸ್ಸಿಗೋ ಗೊತ್ತಿಲ್ಲ. ಸರ್ಕಾರ ಬಿದ್ದಾಗ ಮುಂದೆ ಯೋಚನೆ ಮಾಡೋಣ ಎಂದು ಸಿದ್ದರಾಮಯ್ಯಗೆ ಎಚ್‍ಡಿಕೆ ತಿರುಗೇಟು ನೀಡಿದರು. ಇದನ್ನೂ ಓದಿ: ದೋಸ್ತಿ ಮುಗಿದ ಮೇಲೆ ಇವರಿಗ್ಯಾಕೆ ಅವ್ರ ಉಸಾಬರಿ: ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಕಿಡಿ

    ಸರ್ಕಾರದ ಮುಂದೆ ಸಾಕಷ್ಟು ಸವಾಲುಗಳಿವೆ. ಜನರ ಸಮಸ್ಯೆಗಳಿಗೆ ಎಲ್ಲ ಪಕ್ಷಗಳು ಒಂದಾಗಿ ಕೆಲಸ ಮಾಡಲಿ. ರಾಜಕಾರಣ ಬೇರೆ ಮಾಡೋಣ. ನಾನು ನೆರೆ ಪ್ರವಾಹ ವೀಕ್ಷಣೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲು ಬೆಂಗಳೂರಿಗೆ ಹೋದ ನಂತರ ಕಾಲಾವಕಾಶ ಕೋರುತ್ತೇನೆ ಎಂದು ನುಡಿದರು. ಇದನ್ನೂ ಓದಿ: ಸಿದ್ದರಾಮಯ್ಯರ ಮೇಲೆ ನಂಬಿಕೆ ಇದೆ, ಅವ್ರು ಆ ರೀತಿ ಹೇಳಿರಲ್ಲ: ಡಿಕೆಶಿ ತಿರುಗೇಟು

    ನಾನು ಬರೀ ಎಚ್ಚರಿಕೆ ಕೊಟ್ಟರೆ ಎಲ್ಲವೂ ಸರಿಯಾಗುತ್ತಾ, ಸಿದ್ದರಾಮಯ್ಯನವರು ಸರ್ಕಾರ ಬೀಳುವ ಕನಸು ಕಾಣುತ್ತಿದ್ದಾರೆ. ಮಾರ್ಚ್, ಏಪ್ರಿಲ್ ನಲ್ಲಿ ಚುನಾವಣೆಗೆ ಹೋದರೆ ಜನರ ಬಗ್ಗೆ ಯೋಚಿಸುವವರು ಯಾರು, ನಾನು ಹತಾಶನಾಗಿಲ್ಲ, ಅಲ್ಲದೆ ಸಾಫ್ಟ್ ಕಾರ್ನರ್ ಕೂಡ ಆಗಿಲ್ಲ. ನಾನು ಬಿಜೆಪಿ ಜೊತೆ ಹೋಗುವೆ ಎಂದು ಎಲ್ಲೂ ಹೇಳಲ್ಲ. ಸರ್ಕಾರವನ್ನು ಅಭದ್ರಗೊಳಿಸಲು ಮುಂದಾಗಿಲ್ಲ. ಸ್ಥಿರ ಸರ್ಕಾರದ ಬಗ್ಗೆ ಯೋಚಿಸುತ್ತೇನೆ. ಜನರ ಪರವಾಗಿ ಚಿಂತನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

  • ಟಿಪ್ಪು ವೈಭವೀಕರಿಸಿದವ್ರು ಸಾವರ್ಕರನ್ನು ಹಿಂದೂ ಅಂತಿರೋದು ಅಚ್ಚರಿ ಮೂಡಿಸಿದೆ: ಸಿ.ಟಿ ರವಿ

    ಟಿಪ್ಪು ವೈಭವೀಕರಿಸಿದವ್ರು ಸಾವರ್ಕರನ್ನು ಹಿಂದೂ ಅಂತಿರೋದು ಅಚ್ಚರಿ ಮೂಡಿಸಿದೆ: ಸಿ.ಟಿ ರವಿ

    ವಿಜಯಪುರ: ಸಾವರ್ಕರ್ ಗೆ ಭಾರತ ರತ್ನ ನೀಡುವ ವಿಚಾರಕ್ಕೆ ಸಂಬಧಿಸಿದಂತೆ ರಾಜ್ಯ ರಾಜಕೀಯ ನಾಯಕರುಗಳ ಸಮರ ಮುಂದುವರಿದಿದ್ದು, ಟಿಪ್ಪು ಸುಲ್ತಾನನ್ನು ವೈಭವೀಕರಿಸಿದವರು ಸಾವರ್ಕರ್ ಅವರನ್ನು ಹಿಂದೂ ಎಂದು ಹೇಳುತ್ತಿರುವುದು ಅಚ್ಚರಿಸಿ ಮೂಡಿಸಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.

    ವಿಜಯಪುರ ಜಿಲ್ಲಾ ಪ್ರವಾಸದಲ್ಲಿದ್ದ ಸಚಿವರು ನಗರದ ಹೊರ ಭಾಗದಲ್ಲಿರುವ ಜಯ ಶಾಂತಲಿಂಗೇಶ್ವರ ಮಠಕ್ಕೆ ಭೇಟಿ ನೀಡಿ ಮಠದ ಆವರಣದಲ್ಲಿರುವ ದ್ವಾದಶ ಲಿಂಗಗಳಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಠದ ಪೀಠಾಧೀಪತಿ ಶ್ರೀ ಜಯಶಾಂತಲಿಂಗೇಶ್ವರ ಸ್ವಾಮೀಜಿ ಭೇಟಿ ಮಾಡಿ ಕೆಲ ಕಾಲ ಮಾತುಕತೆ ನಡೆಸಿದ್ದಾರೆ.


    ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವೀರಸಾವರ್ಕರ್ ಕುರಿತು ಸಿದ್ದರಾಮಯ್ಯ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ವೀರ್ ಸಾವರ್ಕರ್, ಸಿದ್ದಗಂಗಾ ಶ್ರೀ ವ್ಯಕ್ತಿತ್ವ ತುಲನೆ ಸರಿಯಲ್ಲ. ಇಬ್ಬರಿಗೂ ಭಾರತ ರತ್ನ ನೀಡುವುದರಿಂದ ಪ್ರಶಸ್ತಿಯ ಬೆಲೆ ಹೆಚ್ಚಲಿದೆ ಎಂದರು. ಇದನ್ನೂ ಓದಿ: ಸಿಟಿ ರವಿ ಯಾಕೆ ಹೆಗಲು ಮುಟ್ಟಿ ನೋಡ್ಕೊಳ್ತಿದ್ದಾರೆ ಅರ್ಥವಾಗಿಲ್ಲ- ಸಿದ್ದರಾಮಯ್ಯ

    ಸಿದ್ದರಾಮಯ್ಯ ತಿಹಾರ್ ಜೈಲಿಗೆ ಹೋಗಲಿ. ಕರಿ ನೀರಿನ ಶಿಕ್ಷೆಯನ್ನ ಹೇಗೆ ಕೊಟ್ಟಿದ್ದರು ಅನ್ನೋದನ್ನ ನೋಡಲಿ. ಆಗ ಸತ್ಯ ಗೊತ್ತಾಗುತ್ತದೆ. ಟಿಪ್ಪು ವೈಭವೀಕರಿಸಿದವರಿಗೆ ಸಾವರ್ಕರ್ ಹಿಂದೂ ಅಂತಿರೋದು ಅಚ್ಚರಿ ಮೂಡಿಸಿದೆ. ಟಿಪ್ಪು ವೈಭವೀಕರಿಸುವಾಗ ಸಿದ್ದರಾಮಯ್ಯಗೆ ತತ್ವ ಸಿದ್ಧಾಂತ ಅಡ್ಡಿ ಆಗಲ್ಲ. ಸಿದ್ದರಾಮಯ್ಯ ತನ್ನ ಹೆಸರಲ್ಲಿ ಸಿದ್ದ-ರಾಮ ಇಬ್ಬರು ಇದ್ದಾರೆ ಅಂತ ಡೈಲಾಗ್ ಹೊಡೆಯುತ್ತಾರೆ. ಈಗ ಹೀಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಮಾತಿನ ಹಿಂದೆ ತಂತ್ರಗಾರಿಕೆ ಇದೆ. ಅಂದು ಅಂಬೇಡ್ಕರ್ ಗೆ ಅಪಮಾನ, ಇಂದು ಸಾವರ್ಕರ್ ಗೆ ಅಪಮಾನ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಅಪಮಾನವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:  ಅಧಿಕಾರದಲ್ಲಿ ಮುಂದುವರಿದಿದ್ರೆ ಕೊಲೆಗಡುಕರಿಗೆ ಪ್ರಶಸ್ತಿ ಕೊಡ್ತಿದ್ರು: ಸಿದ್ದುಗೆ ಸಿಟಿ ರವಿ ತಿರುಗೇಟು

    ಕಾಂಗ್ರೆಸ್ ನಲ್ಲಿ ಇದ್ದವರು ಮಾತ್ರ ಸ್ವಾತಂತ್ರ್ಯ ಹೋರಾಟಗಾರರು ಅಂತ ಬಿಂಬಿಸಲು ಹೊರಟಿದ್ದಾರೆ. ಹೀಗೆ ಮುಂದೆ ಹೋದ್ರೆ ಸುಭಾಷ್ ಚಂದ್ರ ಭೋಸ್ ರನ್ನ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಅಂತ ಹೇಳಿದರೂ ಅಚ್ಚರಿಯಿಲ್ಲ. ಗಾಂಧಿಜೀ, ಚಂದ್ರಶೇಖರ್, ಆಸ್ಪಾಕ್ ಕಲಾಕಾನ್ ಸೇರಿದಂತೆ ಎಲ್ಲಾ ಹೋರಾಟಗಾರರ ಬಗ್ಗೆ ಗೌರವ ಇದೆ. ಒಂದು ಮುಖವನ್ನ ಮಾತ್ರ ಗೌರವಿಸುತ್ತಿದ್ದಾರೆ ಎನ್ನುವ ಮೂಲಕ ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ಗರಂ ಆದರು. ಇದನ್ನೂ ಓದಿ: ಮದ್ಯ ಕುಡಿದು ಕೊಂದವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿ: ಸಿಟಿ ರವಿಗೆ ಸಿದ್ದರಾಮಯ್ಯ ತಿರುಗೇಟು

  • ನಳಿನ್ ಕುಮಾರ್‌ಗೆ ಕನಿಷ್ಠ ಜ್ಞಾನ ಇಲ್ಲ- ಸಿದ್ದರಾಮಯ್ಯ

    ನಳಿನ್ ಕುಮಾರ್‌ಗೆ ಕನಿಷ್ಠ ಜ್ಞಾನ ಇಲ್ಲ- ಸಿದ್ದರಾಮಯ್ಯ

    – ಸಿಎಂ ವಿರುದ್ಧ ಮಾಜಿ ಸಿಎಂ ಕಿಡಿ

    ಬೆಂಗಳೂರು: ಬಿಜೆಪಿಯವರು ನಳಿನ್ ಕುಮಾರ್ ಕಟೀಲ್ ಅವರನ್ನು ಯಾಕೆ ಅಧ್ಯಕ್ಷರನ್ನಾಗಿ ಮಾಡಿದ್ದಾರೋ ಗೊತ್ತಿಲ್ಲ. ಅವರಿಗೆ ಕನಿಷ್ಠ ಜ್ಞಾನ ಅಲ್ಲದೆ ರಾಜಕೀಯ ಜ್ಞಾನವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

    ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಿಕೆ ಶಿವಕುಮಾರ್ ಜೈಲಿಗೆ ಹೋಗಲು ಸಿದ್ದರಾಮಯ್ಯ ಕಾರಣ ಅನ್ನೋ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ತಿರುಗೇಟು ನೀಡಿದರು. ನಳಿನ್ ಕುಮಾರ್ ಗೆ ಕನಿಷ್ಠ ಜ್ಞಾನ ಇಲ್ಲ. ಇಡಿ, ಐಟಿ, ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿ ಇರುತ್ತದೆ. ಈಗ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇದೆ. ಬಿಜೆಪಿಯವರು ಇಂತಹ ಹೇಳಿಕೆ ಕೊಟ್ಟು ರಾಜಕೀಯವಾಗಿ ಬೆಂಕಿ ಹಚ್ಚೋ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಬಿಜೆಪಿಯವರು ಯಾಕೆ ನಳಿನ್ ಕುಮಾರ್ ನನ್ನ ಅಧ್ಯಕ್ಷ ಮಾಡಿದ್ದಾರೋ ಗೊತ್ತಿಲ್ಲ. ಕನಿಷ್ಠ ಜ್ಞಾನ ಅವ್ರಿಗೆ ಇಲ್ಲ. ಅಲ್ಲದೆ ರಾಜಕೀಯ ಜ್ಞಾನವೂ ಇಲ್ಲ. ಕರ್ನಾಟಕದ ರಾಜಕೀಯದ ಬಗ್ಗೆಯೂ ಗೊತ್ತಿಲ್ಲ. ಇದು ರಾಜಕೀಯ ಪ್ರೇರಿತ ಹೇಳಿಕೆ ಅಷ್ಟೆ. ಈ ಹೇಳಿಕೆ ದುರುದ್ದೇಶದಿಂದ ಕೂಡಿದೆ ಎಂದು ನಳಿನ್ ಕುಮಾರ್ ಕಟೀಲು ವಿರುದ್ಧ ವಾಗ್ದಾಳಿ ನಡೆಸಿದರು.

    ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಅವಧಿಯ 5 ಯೋಜನೆಗಳ ತನಿಖೆಗೆ ವಹಿಸಿದ ಸಿಎಂ ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು. ಯಡಿಯೂರಪ್ಪ ಸಿಎಂ ಆದ ಮೇಲೆ ಟ್ರಾನ್ಸ್ ಫರ್, ದ್ವೇಷದ ರಾಜಕಾರಣ ಮಾತ್ರ ಮಾಡುತ್ತಿದ್ದಾರೆ. ನೆರೆಗೆ ತುತ್ತಾದ ಜನರಿಗೆ ಯಾವುದೇ ಪರಿಹಾರ ಕೊಟ್ಟಿಲ್ಲ. ಈಶ್ವರಪ್ಪ ಅವರು ಕೊಟ್ಟಿರೋ ಹಣನೇ ಜಾಸ್ತಿ ಅಂತಾರೆ. ಜನರ ಬಗ್ಗೆ ಬಿಜೆಪಿ ಅವರಿಗೆ ಕಾಳಜಿ ಇಲ್ಲ ಎಂದು ಗರಂ ಆದರು.

    ಸುಮ್ಮನೆ ಎಲ್ಲಾ ಯೋಜನೆಗಳ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಇದು ದ್ವೇಷದ ರಾಜಕಾರಣ ಅಲ್ಲದೆ ಮತ್ತೇನು ಎದು ಪ್ರಶ್ನಿಸಿದರು. ಯಡಿಯೂರಪ್ಪ ವಿಧಾನಸೌಧದಲ್ಲಿ ದ್ವೇಷದ ರಾಜಕಾರಣ ಮಾಡಲ್ಲ ಎಂದಿದ್ದರು. ಆದರೆ ಇವತ್ತು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    4 ಕೋಟಿಯಲ್ಲಿ ವೈಟ್ ಟಾಪಿಂಗ್ ಮಾಡಬಹುದು ಅನ್ನೋ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಅದೆಲ್ಲವನ್ನೂ ಹೇಳೋದಕ್ಕೆ ಯಡಿಯೂರಪ್ಪ ಎಂಜಿನಿಯರ್ ಅಲ್ಲ. ಕಡಿಮೆ ಹಣದಲ್ಲಿ ಮಾಡೋದಾದರೆ ಯಡಿಯೂರಪ್ಪ ಮಾಡಲಿ ಎಂದರು.

    ಕೃಷಿ ಹೊಂಡ ತನಿಖೆಗೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಿಎಂ, ಕೃಷಿ ಹೊಂಡ ರೈತರಿಗೆ ಅನುಕೂಲ ಆಗಿದೆ. ಯಾರೋ ಹೇಳಿದರು ಎಂದು ತನಿಖೆ ಮಾಡೋದು ಸರಿಯಲ್ಲ. ಇದು ದ್ವೇಷದ ರಾಜಕಾರಣ. ಇದು ಜಾಸ್ತಿ ದಿನ ಇರುವುದಿಲ್ಲ. ನಾನು ಸಿಎಂ ಆಗಿದ್ದಾಗ ದ್ವೇಷದ ರಾಜಕಾರಣ ಮಾಡಿಲ್ಲ. ಆದರೆ ಯಡಿಯೂರಪ್ಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

  • ನೀವು ಇನ್ನೂ ಯುವಕರು, ಹೆಚ್ಚು ಸ್ಪೀಡಾಗಿ ಹೋಗ್ಬೇಡಿ- ರವಿಗೆ ಸಿದ್ದರಾಮಯ್ಯ ತಿರುಗೇಟು

    ನೀವು ಇನ್ನೂ ಯುವಕರು, ಹೆಚ್ಚು ಸ್ಪೀಡಾಗಿ ಹೋಗ್ಬೇಡಿ- ರವಿಗೆ ಸಿದ್ದರಾಮಯ್ಯ ತಿರುಗೇಟು

    ಬೆಂಗಳೂರು: ಸಿದ್ದರಾಮಯ್ಯ ಅವರು ಕಾಲು ಜಾರದೆ ಎಚ್ಚರದಿಂದಿರಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರು ಟಾಂಗ್ ನೀಡಿದ್ದು, ಈ ಹೇಳಿಕೆಗೆ ಇಂದು ಮಾಜಿ ಮುಖ್ಯಮಂತ್ರಿಯವರು ತಿರುಗೇಟು ನೀಡಿದ್ದಾರೆ.

    ಪಬ್ಲಿಕ್ ಟಿವಿ ವೆಬ್‍ಸೈಟ್ ನಲ್ಲಿ ಪ್ರಕಟಿಸಿದ ಸುದ್ದಿಯ ಹೆಡ್‍ಲೈನ್ ಸ್ಕ್ರೀನ್ ಶಾಟ್ ತೆಗೆದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ನೀವು ಇನ್ನೂ ಯುವಕರಾಗಿದ್ದು ಹೆಚ್ಚು ಸ್ಪೀಡಾಗಿ ಹೋಗಬೇಡಿ. ಜೋಪಾನ ಎಂದು ಹೇಳಿದ್ದಾರೆ.

    ಟ್ವಿಟ್ ನಲ್ಲೇನಿದೆ..?
    ಸನ್ಮಾನ್ಯ ಸಿಟಿ ರವಿಯವರೇ, ನಾನು ಕಾಲು ಜಾರದ ಹಾಗೆ ಎಚ್ಚರದಿಂದ ನಾಲ್ಕು ದಶಕಗಳ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನೀವು ಇನ್ನೂ ಯುವಕರು, ಹೆಚ್ಚು ಸ್ಪೀಡಾಗಿ ಹೋಗ್ಬೇಡಿ, ಜೋಪಾನ. ಅಪಘಾತ ಮಾಡಿಬಿಟ್ಟರೆ ಎಲ್ಲ ಸಂದರ್ಭಗಳಲ್ಲಿಯೂ ರಕ್ಷಣೆಗೆ ಹಿತೈಷಿಗಳಿರುವುದಿಲ್ಲ ಎಂದು ಬರೆದು ಸಿಟಿ ರವಿ ಹಾಗೂ ಐಎನ್‍ಸಿ ಕರ್ನಾಟಕಕ್ಕೆ ಟ್ಯಾಗ್ ಮಾಡಿದ್ದಾರೆ.

    ಸಿಟಿ ರವಿ ಹೇಳಿದ್ದೇನು?
    ಸರ್ಕಾರ ಟೇಕಾಫ್ ಆಗಿಲ್ಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಉತ್ತರಿಸಿದ್ದ ಸಚಿವರು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ಪ್ರಶ್ನಾತೀತ ನಾಯಕ ಅಂದುಕೊಂಡಿದ್ದೆವು. ಅವರಲ್ಲಿ ಇನ್ನೂ ಪ್ರತಿಪಕ್ಷ ನಾಯಕ ಯಾರೆಂದು ನಿರ್ಧಾರ ಆಗಿಲ್ಲ. ಕಾಂಗ್ರೆಸ್ಸಿನಲ್ಲೇ ಸಿದ್ದರಾಮಯ್ಯ ಅವರ ಕಾಲೆಳೆಯೋರು ಜಾಸ್ತಿಯಾಗಿದ್ದಾರೆ. ಸಿದ್ದರಾಮಯ್ಯ ಮೊದಲು ತಮ್ಮ ಕಾಲು ಯಾರೂ ಎಳೆಯದಂತೆ ನೋಡಿಕೊಳ್ಳಲಿ. ನಮ್ಮ ಸರ್ಕಾರ ಟೇಕಾಫ್ ಆಗಿದೆ. ನಮ್ಮ ಸರ್ಕಾರ ಕಾರ್ಯಾರಂಭ ಮಾಡಿ ತಿಂಗಳಾಗಿದೆ ಎಂದು ಟಾಂಗ್ ನೀಡಿದ್ದರು.

  • ನೀನು ಮದ್ವೆಯಾಗಲ್ವಮ್ಮ- ಕೆಲಸ ಕೊಡಿಸಿ ಎಂದ ಯುವತಿಗೆ ನಗುತ್ತಲೇ ಮಾಜಿ ಸಿಎಂ ಪ್ರಶ್ನೆ

    ನೀನು ಮದ್ವೆಯಾಗಲ್ವಮ್ಮ- ಕೆಲಸ ಕೊಡಿಸಿ ಎಂದ ಯುವತಿಗೆ ನಗುತ್ತಲೇ ಮಾಜಿ ಸಿಎಂ ಪ್ರಶ್ನೆ

    ಮೈಸೂರು: ಕೆಲಸ ಕೊಡಿಸಿ ಎಂದು ಕೇಳಿಕೊಂಡು ಬಂದ ಯುವತಿಯನ್ನು ನಗುತ್ತಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದ ಪ್ರಸಂಗ ನಡೆಯಿತು.

    ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಪೋರೇಟರ್ ಮಗಳು, ನನಗೆ ವಿಲೇಜ್ ಅಕೌಂಟೆಂಟ್ ಕೆಲಸ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ. ಈ ವೇಳೆ ಸಿದ್ದರಾಮಯ್ಯ ಅವರು ನೀನು ಮದುವೆಯಾಗಲ್ವಮ್ಮ ಎಂದು ನಗುತ್ತಲೇ ಪ್ರಶ್ನಿಸಿದ್ದಾರೆ. ಈ ವೇಳೆ ಯುವತಿ ಮದುವೆಯಾಗುತ್ತೇನೆ, ಈಗ ನನಗೆ ವಿಎ ಕೆಲಸ ಕೊಡಿಸಿ ಎಂದು ಕೇಳಿಕೊಂಡಿದ್ದಾಳೆ.

    ಆಗ ಸಿದ್ದರಾಮಯ್ಯ ಅವರು ವಿಎ ಪೋಸ್ಟ್ ನೇರ ನೇಮಕಾತಿಯಾಗಿರುತ್ತದೆ. ಅದಕ್ಕೆ ಹೆಚ್ಚು ಮಾಕ್ರ್ಸ್ ಪಡೆದಿರಬೇಕು. ನಿನಗಿಂತ ಹೆಚ್ಚು ಬೇರೆಯವರಿಗೆ ಇದ್ದರೆ ಅವರಿಗೆ ಸಿಗುತ್ತದೆ. ನೀನು ಕೆ.ಎ.ಎಸ್ ಎಕ್ಸಾಂಗೆ ತಯಾರಿ ಮಾಡಿಕೋ ಎಂದು ಸಲಹೆ ನೀಡಿದ್ದಾರೆ.

    ಇದೇ ವೇಳೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಇಡಿ ಸಮನ್ಸ್ ನೀಡಿದ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಡಿಕೆಶಿ ಕಾನೂನು ಹೋರಾಟ ಮಾಡುತ್ತಿದ್ದಾರೆ. ಅರ್ಜಿ ಹೈಕೋರ್ಟಿನಲ್ಲಿ ವಜಾ ಆಗಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿಗೆ ಹೋಗುತ್ತಾರೆ. ಯಾರು ಅಧಿಕಾರ ದುರುಪಯೋಗ ಮಾಡುವಂತ ಕೆಲಸ ಮಾಡಬಾರದು. ಅಧಿಕಾರ ದುರುಪಯೋಗವಾಗುವಂತಹ ಕೆಲಸವಾಗುತ್ತಿದೆ ಎಂದು ಅನಿಸುತ್ತಿದೆ ಎಂದರು.

    ಚಿದಂಬರಂ ಅವರನ್ನು ಅರೆಸ್ಟ್ ಮಾಡುವಂತ ಕೇಸಲ್ಲ. ನ್ಯಾಚುರಲ್ ಜಸ್ಟಿಸ್ ಇರಬೇಕು. ಅದು ಕಾಣೆಯಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

  • ಸ್ವಪಕ್ಷಿಯರಿಂದ್ಲೇ ಸಂಕಷ್ಟಕ್ಕೆ ಗುರಿಯಾಗ್ತಾರಾ ಮಾಜಿ ಸಿಎಂ ಸಿದ್ದರಾಮಯ್ಯ?

    ಸ್ವಪಕ್ಷಿಯರಿಂದ್ಲೇ ಸಂಕಷ್ಟಕ್ಕೆ ಗುರಿಯಾಗ್ತಾರಾ ಮಾಜಿ ಸಿಎಂ ಸಿದ್ದರಾಮಯ್ಯ?

    ಬೆಂಗಳೂರು: ಹಾಲಿ ಸಿಎಂ ಸಹವಾಸ ಮಾಡಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂಕಷ್ಟಕ್ಕೆ ಸಿಲುಕಿದ್ರಾ ಅನ್ನೋ ಅನುಮಾನವೊಂದು ಎದ್ದಿದ್ದು, ಈ ಮೂಲಕ ಹಳೆ ದೋಸ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಸಿಎಂ ಈಗ ಸ್ವಪಕ್ಷಿಯರಿಂದಲೇ ಸಂಕಷ್ಟಕ್ಕೆ ಗುರಿಯಾಗ್ತಾರಾ ಅನ್ನೋ ಪ್ರಶ್ನೆ ಎದ್ದಿದೆ.

    ಹೌದು. ದೋಸ್ತಿ ಸರ್ಕಾರ ಕೆಡವಿದ ನಂತರ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ನಡುವಿನ ಸ್ನೇಹ ಹೆಚ್ಚಿರುವ ಬಗ್ಗೆ ರಾಜ್ಯ ಹಿರಿಯ ಕಾಂಗ್ರೆಸ್ ನಾಯಕರಿಂದ ಕಾಂಗ್ರೆಸ್ ಹೈಕಮಾಂಡ್‍ಗೆ ದೂರು ತಲುಪಿದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ದೂರಿನಲ್ಲೇನಿದೆ?
    ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಫೋನ್ ಟ್ಯಾಪಿಂಗ್ ಪ್ರಕರಣ ನಡೆದಿದ್ದು, ಅದನ್ನ ಸ್ವತಃ ಸಿದ್ದರಾಮಯ್ಯ ಅವರೇ ಸಿಬಿಐ ತನಿಖೆಗೆ ಕೊಡಿ ಎಂದು ಹೇಳಿದ್ದಾರೆ ಅನ್ನೋದು ದೂರಿನ ಪ್ರಮುಖ ಅಂಶವಾಗಿದೆ.

    ಸಮ್ಮಿಶ್ರ ಸರ್ಕಾರದ ಪತನದ ನಂತರ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಸ್ನೇಹ ಇನ್ನೂ ಗಟ್ಟಿಯಾಗಿದ್ದು, ಸಿದ್ದರಾಮಯ್ಯ ಯಡಿಯೂರಪ್ಪ ಸ್ನೇಹದ ಫಲವಾಗಿಯೇ ಫೋನ್ ಟ್ಯಾಪಿಂಗ್ ಪ್ರಕರಣ ಸಿಬಿಐ ಅಂಗಳಕ್ಕೆ ಹೋಗಿದೆ. ಕಾಂಗ್ರೆಸ್ ಸರ್ಕಾರ ಹಾಗೂ ಸಮ್ಮಿಶ್ರ ಸರ್ಕಾರದ ಅವಧಿಯ ಕೆಲವು ಯೋಜನೆ ಕೈ ಬಿಡಲು ಯಡಿಯೂರಪ್ಪ ಮುಂದಾಗಿದ್ದರು. ಆದರೆ ಸಿದ್ದರಾಮಯ್ಯ ಒತ್ತಾಯಿಸುತ್ತಿದ್ದಂತೆ ಅರ್ಧಗಂಟೆಯಲ್ಲೇ ಅನ್ನಭಾಗ್ಯ ಹಾಗೂ ಇಂದಿರ ಕ್ಯಾಂಟಿನ್ ನಂತಹ ಯೋಜನೆ ಕೈ ಬಿಡಲ್ಲ ಎಂದು ಯಡಿಯೂರಪ್ಪ ಪ್ರಕಟಿಸುತ್ತಾರೆ.

    ಈ ಮೂಲಕ ಸಿದ್ದರಾಮಯ್ಯ ಅವರು ಪಕ್ಷಕ್ಕಿಂತ ನಾನೇ ದೊಡ್ಡವನು ಎಂಬಂತೆ ವರ್ತಿಸುತ್ತಿದ್ದಾರೆ. ಪಕ್ಷದ ಸಾಧನೆಯು ನಮ್ಮ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇದೆಲ್ಲಾ ಅವರಿಬ್ಬರ ಸ್ನೇಹದ ಸಂಕೇತವಾಗಿದೆ. ಈ ಸ್ನೇಹವೇ ಸಮ್ಮಿಶ್ರ ಸರ್ಕಾರವನ್ನ ಪತನ ಮಾಡಿತು ಎಂದು ಕೈ ನಾಯಕರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

    ಸಮಯ ನೋಡಿ ದಾಳ ಉರುಳಿಸಿರುವ ವಿರೋಧಿ ಬಣ ಸಿದ್ದರಾಮಯ್ಯ ಅವರ ವಿಪಕ್ಷ ನಾಯಕನ ಕನಸಿಗೆ ಕಲ್ಲು ಹಾಕಲು ಮುಂದಾಗಿದೆ. ಇತ್ತ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಅನ್ನೋ ಸಿಟ್ಟಲ್ಲಿರುವ ಹೈಕಮಾಂಡ್‍ಗೆ ಈ ದೂರು ಮತ್ತಷ್ಟು ಪುಷ್ಠಿ ನೀಡಿದೆ.

    ಯಡಿಯೂರಪ್ಪರ ಆತ್ಮೀಯರಾದ ಸಿದ್ದರಾಮಯ್ಯರನ್ನ ವಿಪಕ್ಷದಲ್ಲಿ ಕೂರಿಸಿದರೆ ಹೊಂದಾಣಿಕೆ ರಾಜಕಾರಣ ಫಿಕ್ಸ್ ಅನ್ನೋದು ಕೈ ಪಾಳಯದ ಹಿರಿಯ ನಾಯಕರ ಗುಮಾನಿಯಾಗಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯರನ್ನು ಹಣಿಯಲು ಸ್ವಪಕ್ಷಿಯರೇ ಸಮಯ ನೋಡಿ ದಾಳ ಉರುಳಿಸಿದ್ದಾರೆ.

  • ಅಧ್ಯಕ್ಷಗಿರಿನೇ ಮಾಡಕ್ಕಾಗದೆ ರಾಜೀನಾಮೆ ಕೊಟ್ಟಿದ್ದಾನೆ- ವಿಶ್ವನಾಥ್‍ಗೆ ಸಿದ್ದರಾಮಯ್ಯ ಟಾಂಗ್

    ಅಧ್ಯಕ್ಷಗಿರಿನೇ ಮಾಡಕ್ಕಾಗದೆ ರಾಜೀನಾಮೆ ಕೊಟ್ಟಿದ್ದಾನೆ- ವಿಶ್ವನಾಥ್‍ಗೆ ಸಿದ್ದರಾಮಯ್ಯ ಟಾಂಗ್

    – ಏಕವಚನದಲ್ಲೇ ಮಾಜಿ ಸಿಎಂ ತಿರುಗೇಟು

    ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್ ವಿಶ್ವನಾಥ್ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕವಚನದಲ್ಲಿ ಮಾತನಾಡಿದ್ದಾರೆ.

    ಮೈತ್ರಿ ಮುನ್ನಡೆಸುವಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ ವಿಫಲರಾಗಿದ್ದಾರೆ ಎಂಬ ಎಚ್. ವಿಶ್ವನಾಥ್ ಆರೋಪ ವಿಚಾರದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಏಕವಚನದಲ್ಲೇ ತಿರುಗೇಟು ನೀಡಿದ್ದಾರೆ.

    ನೆಟ್ಟಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನಿರ್ವವಣೆ ಮಾಡಲು ಅವನ ಕೈಲಿ ಆಗಲಿಲ್ಲ. ಅವರೇನ್ರಿ, ನಮ್ಮ ಬಗ್ಗೆ ಮಾತನಾಡೋದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಅವನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು 6 ತಿಂಗಳು ನಿರ್ವಹಿಸದೇ ರಾಜೀನಾಮೆ ಕೊಟ್ಟಿದ್ದಾನೆ. ಅವನ ಮಾತಿಗೆ ಏನಂಥ ಪ್ರತಿಕ್ರಿಯೆ ಕೊಡೋದು ಎಂದು ತಿಳಿಸಿದ್ದಾರೆ.

    ವಿಶ್ವನಾಥ್ ಹೇಳಿದ್ದೇನು..?
    ಬುಧವಾರ ದೆಹಲಿಯಲ್ಲಿ ಮಾತನಾಡಿದ್ದ ಎಚ್ ವಿಶ್ವನಾಥ್, ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದನ್ನು ಟಿವಿಯಲ್ಲಿ ನೋಡಿದ್ದೇನೆ. ಮೈತ್ರಿ ಸರ್ಕಾರ ಪ್ರಯೋಗವಿದ್ದಂತೆ ಅದನ್ನು ನಿಭಾಯಿಸುವುದು ರಾಜಕೀಯ ಚತುರತೆ. ಈ ಪ್ರಯೋಗ ಯಶಸ್ವಿ ಮಾಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಯತ್ನ ಮಾಡುತ್ತಿಲ್ಲ. ಮೈತ್ರಿ ನಿಭಾಯಿಸುವಲ್ಲಿ ರಾಜ್ಯ ನಾಯಕರು ವಿಫಲವಾಗಿದ್ದು, ರಾಷ್ಟ್ರ ರಾಜಕಾರಣದ ಮುಂದೆ ರಾಜ್ಯ ನಾಯಕರು ಬೆತ್ತಲಾಗಿದ್ದಾರೆ ಬೇಸರ ವ್ಯಕ್ತಪಡಿಸಿದ್ದರು.

    ಮೈತ್ರಿ ಸರ್ಕಾರ ನಿಭಾಯಿಸುವ ಸಾಮರಸ್ಯ ಇಲ್ಲ. ರಾಷ್ಟ್ರದ ಮಟ್ಟದಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಸಿಎಂ ಇಬ್ಬರೂ ವಿಫಲರಾಗಿದ್ದಾರೆ ಎಂದು ಸಿಎಂ ಮತ್ತು ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದರು.

  • ಯಾರದ್ದೋ ಮನೆಗೆ ಹೋಗಿ ನಾವು ಅಕ್ಕಿ ತಿಂದಿಲ್ಲ: ಮುನಿಯಪ್ಪಗೆ ಮುನಿಸ್ವಾಮಿ ಟಾಂಗ್

    ಯಾರದ್ದೋ ಮನೆಗೆ ಹೋಗಿ ನಾವು ಅಕ್ಕಿ ತಿಂದಿಲ್ಲ: ಮುನಿಯಪ್ಪಗೆ ಮುನಿಸ್ವಾಮಿ ಟಾಂಗ್

    ಕೋಲಾರ: ಸೋತ ನಂತರ ಹತಾಷರಾಗಿ ಹೀಗೆ ಮಾತನಾಡುತ್ತಿದ್ದಾರೆ. ಯಾರ ಮನೆ ಅಕ್ಕಿಯನ್ನೂ ನಾವು ತಿಂದಿಲ್ಲ. ಸರ್ಕಾರದ ಅಕ್ಕಿ ತಿಂದಿದ್ದೇವೆ ಎಂದು ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪಗೆ ಟಾಂಗ್ ನೀಡಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ನಿವೃತ್ತ ಯೋಧರ ಕುಟುಂಬ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಮುನಿಯಪ್ಪ ಅವರು ಹಿರಿಯರು. 28 ವರ್ಷಗಳ ಕಾಲ ಸಂಸದರಾಗಿದ್ದವರು. ಅವರ ಬಗ್ಗೆ ಮಾತನಾಡಲ್ಲ ಎನ್ನುತ್ತಲೇ ತಿರುಗೇಟು ನೀಡಿದ್ದಾರೆ.

    ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿರುವುದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹೇಳಿದ್ದಾರೆ. ಈ ಮೂಲಕ ಶಾಸಕರು ರಾಜೀನಾಮೆಗೆ ಸಿದ್ಧರಾಗಲಿ, ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ಮುನಿಸ್ವಾಮಿ ತಿಳಿಸಿದರು.

    ಮಾಜಿ ಸಂಸದರು ಹೇಳಿದ್ದೇನು?:
    ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು, ಕಳೆದ ಚುನಾವಣೆಯಲ್ಲಿ ನಾನು ಗೆಲ್ಲಿಸಿದಂಥವರು ಬಿಜೆಪಿ ಅವರೊಂದಿಗೆ ಶಾಮೀಲಾಗಿದ್ದಾರೆ ಎಂಬ ನೋವು ನನಗಿದೆ. ಅಲ್ಲದೆ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಅಕ್ಕಿ ತಿಂದು ಮೋದಿಗೆ ವೋಟ್ ಹಾಕಿದ್ದಾರೆ. ಅವರು ಇದುವರೆಗೂ ಒಬ್ಬ ಯುವಕನಿಗೆ ಉದ್ಯೋಗ ಕೊಡಿಸಿಲ್ಲ. ಪುಲ್ವಾಮಾ ಹಾಗೂ ಏರ್‍ಸ್ಟ್ರೈಕ್‍ನ ತಂತ್ರಗಾರಿಕೆಯಿಂದ ಮೋದಿ ಜನರನ್ನ ಮೋಡಿ ಮಾಡಿ ಗೆದ್ದಿದ್ದಾರೆ ಎಂದು ಕಿಡಿಕಾರಿದ್ದರು.

    ನಾನು ಮಂತ್ರಿಯಾಗಿದ್ದಾಗ ಕೈಗಾರಿಕಾ ಯೋಜನೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕೆ.ಸಿ.ವ್ಯಾಲಿ ಯೋಜನೆಗೆ ಶ್ರಮಿಸಿದ್ದೇನೆ. ಇನ್ನೂ ನಾನು ಗೆಲ್ಲಸಿದ ನನ್ನ ಹಿತೈಷಿಗಳೇ, ಪಕ್ಷದ ಶಾಸಕರೇ ನನ್ನ ಸೋಲಿಗೆ ಕಾರಣವಾದರು. ಹೈಕಮಾಂಡ್‍ನಲ್ಲಿ ನಿರ್ಧಾರವಾಗಿದೆ. ಸರ್ಕಾರ ಸುಭದ್ರವಾಗಿರಬೇಕು ಎನ್ನುವ ಕಾರಣಕ್ಕೆ ಅಂತಹವರ ಬಗ್ಗೆ ನಾನು ಮಾತನಾಡಲ್ಲ. ಕೆ.ಸಿ.ಯೋಜನೆಯ ಜನಕರೇ ಬೇರೆ, ಲಾಲಿ ಹಾಡಿದವರೇ ಬೇರೆ. ಈ ಕಥೆಯನ್ನ ಸಂಪೂರ್ಣವಾಗಿ ಬಿಚ್ಚಿಡುವೆ ಕಾಯಬೇಕು ಎಂದು ಪರೋಕ್ಷವಾಗಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.