Tag: Evaluation

  • SSLC ಮೌಲ್ಯಮಾಪನದಲ್ಲಿ ಲೋಪ ಮಾಡಿದ್ರೆ ಶಿಕ್ಷಕರು ಕಪ್ಪು ಪಟ್ಟಿಗೆ

    SSLC ಮೌಲ್ಯಮಾಪನದಲ್ಲಿ ಲೋಪ ಮಾಡಿದ್ರೆ ಶಿಕ್ಷಕರು ಕಪ್ಪು ಪಟ್ಟಿಗೆ

    ಬೆಂಗಳೂರು: ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಲೋಪ ಮಾಡುವ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಎಚ್ಚರಿಕೆ ಸಂದೇಶ ಕೊಟ್ಟಿದೆ. ಈ ಬಾರಿ ಶಿಕ್ಷಕರು ಮೌಲ್ಯಮಾಪನದಲ್ಲಿ ಲೋಪ ಮಾಡಿದರೆ ಅಂತಹ ಶಿಕ್ಷಕರನ್ನು ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆಯನ್ನು ಎಸ್‍ಎಸ್‍ಎಲ್‍ಸಿ ಬೋರ್ಡ್ ನೀಡಿದೆ.

    ಪ್ರತಿ ವರ್ಷವೂ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನದಲ್ಲಿ ಲೋಪಗಳು ಹೆಚ್ಚಾಗಿ ಕಂಡು ಬರುತ್ತಿತ್ತು. ಶಿಕ್ಷಕರು ಮಾಡುವ ಲೋಪದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆ ಆಗುತ್ತಿತ್ತು. ಇದನ್ನು ಸರಿಪಡಿಸಲು ಶಿಕ್ಷಣ ಇಲಾಖೆ ಈ ಮಹತ್ವದ ನಿರ್ಧಾರ ಮಾಡಿದೆ. ಈ ವರ್ಷದ ಮೌಲ್ಯಮಾಪನದಲ್ಲಿ ಲೋಪ ಮಾಡುವ ಶಿಕ್ಷಕರನ್ನು ಕಪ್ಪು ಪಟ್ಟಿಗೆ ಸೇರಿಸುವ ಜೊತೆಗೆ ಮುಂದಿನ ವರ್ಷದ ಮೌಲ್ಯಮಾಪನ ಕೆಲಸದಿಂದಲೂ ಇಂತಹ ಶಿಕ್ಷಕರನ್ನ ಕೈ ಬಿಡಲು ಎಸ್‍ಎಸ್‍ಎಲ್‍ಸಿ ಬೋರ್ಡ್ ನಿರ್ಧಾರ ಮಾಡಿದೆ.ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

    BC Nagesh

    ಈ ವರ್ಷದ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಪ್ರಕ್ರಿಯೆ ಏಪ್ರಿಲ್ 21ರಿಂದ ಪ್ರಾರಂಭ ಆಗಲಿದೆ. ಮೌಲ್ಯಮಾಪನಕ್ಕೆ 60 ಸಾವಿರ ಶಿಕ್ಷಕರನ್ನು ಎಸ್‍ಎಸ್‍ಎಲ್‍ಸಿ ಬೋರ್ಡ್ ನಿಯೋಜನೆ ಮಾಡಿದೆ. ಒಬ್ಬ ವಿದ್ಯಾರ್ಥಿಗೂ ಅನ್ಯಾಯ ಆಗಬಾರದು ಅಂತ ಇಲಾಖೆ ಈ ಕ್ರಮ ತೆಗೆದುಕೊಂಡಿದೆ. ಕಪ್ಪು ಪಟ್ಟಿಯ ಜೊತೆಗೆ ದಂಡದ ಪ್ರಮಾಣವನ್ನು ಇಲಾಖೆ ಹೆಚ್ಚಳ ಮಾಡಿದೆ. ಮೌಲ್ಯಮಾಪನ ಲೋಪ ಮಾಡುವ ಶಿಕ್ಷಕರಿಗೆ 2 ಸಾವಿರ ರೂಪಾಯಿವರೆಗೂ ದಂಡ ವಿಧಿಸಲು ನಿರ್ಧಾರ ಮಾಡಿದೆ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    2019-20 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನದಲ್ಲಿ ಅನೇಕ ಶಿಕ್ಷಕರು ಹೆಚ್ಚು ಲೋಪಗಳನ್ನು ಮಾಡಿದ್ದರು. ವಿಧಾನ ಪರಿಷತ್ ಕಲಾಪದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರೇ ಮೌಲ್ಯಮಾಪನದಲ್ಲಿ ಸಮಸ್ಯೆ ಆಗಿರುವುದು ಸತ್ಯ ಅಂತ ಒಪ್ಪಿಕೊಂಡಿದ್ದರು. 4317 ಶಿಕ್ಷಕರು ಅಸಮರ್ಪಕ ಮೌಲ್ಯಮಾಪನ ಮಾಡಿದ್ದಾರೆ. ಇವರಿಗೆ 51,26,600 ದಂಡ ವಿಧಿಸಲಾಗಿದೆ. ಇದರಲ್ಲಿ 10,56,400 ದಂಡ ವಸೂಲಿ ಮಾಡಲಾಗಿದೆ ಅಂತ ಸದನಕ್ಕೆ ಮಾಹಿತಿ ನೀಡಿದ್ದರು. ಈ ಬಾರಿ ಇಂತಹ ಸಮಸ್ಯೆ ಆಗದೇ ಇರಲು ಶಿಕ್ಷಣ ಇಲಾಖೆ ಕಠಿಣ ಕ್ರಮ ತೆಗೆದುಕೊಂಡಿದೆ.

  • SSLC ಮೌಲ್ಯಮಾಪನಕ್ಕೆ ಹಾಜರಾಗಿದ್ದ ಶಿಕ್ಷಕ ಸಾವು

    SSLC ಮೌಲ್ಯಮಾಪನಕ್ಕೆ ಹಾಜರಾಗಿದ್ದ ಶಿಕ್ಷಕ ಸಾವು

    ಶಿವಮೊಗ್ಗ : ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕರೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಇಂದು ನಡೆದಿದೆ.

    ಮೃತಪಟ್ಟ ಶಿಕ್ಷಕ ಭದ್ರಾವತಿಯ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಕುಮಾರ್ (48) ಎಂದು ಗುರುತಿಸಲಾಗಿದೆ. ಮೃತ ಶಿಕ್ಷಕ ಕುಮಾರ್ ಶಿವಮೊಗ್ಗದ ಎನ್.ಇ.ಎಸ್ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ಸಮಾಜ ವಿಜ್ಞಾನ ವಿಷಯದ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ್ದರು. ಇಂದು ಮಧ್ಯಾಹ್ನದವರೆಗೂ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ್ದ ಮೃತ ಶಿಕ್ಷಕ ಕುಮಾರ್ ಮಧ್ಯಾಹ್ನ ಊಟಕ್ಕೆ ತೆರಳಲು ಹೊರಡುತ್ತಿದ್ದರು. ಈ ವೇಳೆ ಶಾಲಾ ಆವರದಲ್ಲಿಯೇ ಕುಸಿದು ಬಿದ್ದ ಶಿಕ್ಷಕನನ್ನು ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿಯೇ ಶಿಕ್ಷಕ ಕುಮಾರ್ ಮೃತಪಟ್ಟಿದ್ದಾರೆ.

    ಮೃತ ಶಿಕ್ಷಕ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೃತ ಶಿಕ್ಷಕನ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಸ್ಥಳಕ್ಕೆ ಡಿಡಿಪಿಐ ರಮೇಶ್ ಭೇಟಿ ನೀಡಿ ಮೃತ ಶಿಕ್ಷಕನ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

  • ಲಾಕ್‍ಡೌನ್ ನಡುವೆಯೇ ನಾಳೆಯಿಂದ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ

    ಲಾಕ್‍ಡೌನ್ ನಡುವೆಯೇ ನಾಳೆಯಿಂದ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ

    – ಶಿಕ್ಷಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಎಸ್‍ಎಸ್‍ಎಲ್ ಬೋರ್ಡ್

    ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಇದೀಗ ಎಸ್‍ಎಸ್‍ಎಲ್‍ಸಿ ಮೌಲ್ಯಮಾನಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಲಾಕ್‍ಡೌನ್ ನಡುವೆಯೇ ಅಂದರೆ ನಾಳೆಯಿಂದಲೇ ಮೌಲ್ಯಮಾಪನ ಪ್ರಾರಂಭವಾಗಲಿದೆ.

    ಈಗಾಗಲೇ ಶಿಕ್ಷಕರು, ಡಿಡಿಪಿಐ ಹಾಗೂ ಪ್ರಾಥಮಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷ ಮಂಡಳಿಯಿಂದ ನೋಟಿಸ್ ನೀಡಲಾಗಿದ್ದು, ನಾಳೆಯಿಂದಲೇ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಲಾಕ್‍ಡೌನ್ ನಡುವೆಯೇ ನಾಳೆಯಿಂದ ಮೌಲ್ಯಮಾಪನ ಪ್ರಾರಂಭವಾಗಲಿದ್ದು, ಮೌಲ್ಯಮಾಪನಕ್ಕೆ ವಿನಾಯಿತಿ ನೀಡಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.

    ಲಾಕ್‍ಡೌನ್ ಜಾರಿಯಲ್ಲಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ನಾಳೆಯಿಂದ ಮೌಲ್ಯಮಾಪನ ನಡೆಯಲಿದೆ. ಎಲ್ಲ ಶಿಕ್ಷಕರು, ಅಧಿಕಾರಿಗಳಿಗೆ ಈ ಕುರಿತು ಎಸ್‍ಎಸ್‍ಎಲ್ಸಿ ಬೋರ್ಡ್ ನಿರ್ದೇಶಕಿ ಎಂ.ಕನಗವಲ್ಲಿ ಸೂಚನೆ ನೀಡಿದ್ದು, ಮೌಲ್ಯಮಾಪನಕ್ಕೆ ಹಾಜರಾಗುವ ಎಲ್ಲ ಶಿಕ್ಷಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವುದಾಗಿಯೂ ತಿಳಿಸಿದ್ದಾರೆ. ಡಿಡಿಪಿಐಗಳು ಮತ್ತು ಬಿಇಓಗಳು ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಲಾಗಿದೆ.

    ಮೌಲ್ಯಮಾಪನಕ್ಕೆ ಆಗಮಿಸುವ ಶಿಕ್ಷಕರಿಗೆ ಪಿಕ್ ಅಪ್ ಮತ್ತು ಡ್ರಾಪ್ ವ್ಯವಸ್ಥೆ ಮಾಡಲು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿ ಸೂಚನೆ ನೀಡಿದೆ. ಅಲ್ಲದೆ ಶಿಕ್ಷಕರ ಸಾರಿಗೆ ವ್ಯವಸ್ಥೆ ಜವಾಬ್ದಾರಿಯನ್ನು ಡಿಡಿಪಿಐಗಳು ಮತ್ತು ಬಿಇಓಗಳಿಗೆ ವಹಿಸಲಾಗಿದೆ.

  • ಕೇವಲ ಶಿಕ್ಷಕಿ ಮಾತ್ರವಲ್ಲ, SSLC ಮಕ್ಕಳ ತಾಯಿ – ಸುರೇಶ್ ಕುಮಾರ್ ಅಭಿನಂದನೆ

    ಕೇವಲ ಶಿಕ್ಷಕಿ ಮಾತ್ರವಲ್ಲ, SSLC ಮಕ್ಕಳ ತಾಯಿ – ಸುರೇಶ್ ಕುಮಾರ್ ಅಭಿನಂದನೆ

    ಮಡಿಕೇರಿ: ತಾಯಿ ಮೃತಪಟ್ಟಿದ್ದರೂ ಎಸ್‍ಎಸ್‍ಎಲ್‍ಸಿ ಪರಿಕ್ಷಾ ಮೌಲ್ಯ ಮಾಪನಕ್ಕೆ ಹಾಜರಾಗಿ ವೃತ್ತಿ ಬದ್ಧತೆ ಮೆರೆದಿದ್ದ ಶಿಕ್ಷಕಿ ಕವಿತಾ ಅವರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿಕ್ಷಣ ಇಲಾಖೆಯ ಪರವಾಗಿ ಧನ್ಯವಾದ ತಿಳಿಸಿದ್ದಾರೆ.

    ಸುರೇಸ್ ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿ ಶಿಕ್ಷಕಿ ಕವಿತಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. “ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವೂ ಮುಖ್ಯ ಎಂಬ ಭಾವನೆಯಿಂದ ತನ್ನ ವೈಯಕ್ತಿಕ ನೋವನ್ನು ನುಂಗಿಕೊಂಡು ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನಕ್ಕೆ ಹಾಜರಾಗಿರುವ ಮಡಿಕೇರಿ ತಾಲೂಕಿನ ಶಿಕ್ಷಕಿ ಶ್ರೀಮತಿ ಕವಿತಾ ಅವರಿಗೆ ಶಿಕ್ಷಣ ಇಲಾಖೆಯ ಪರವಾಗಿ ಧನ್ಯವಾದಗಳು. ಈಕೆ ಕೇವಲ ಶಿಕ್ಷಕಿ ಮಾತ್ರವಲ್ಲ. ಎಸ್‍ಎಸ್‍ಎಲ್‍ಸಿ ಮಕ್ಕಳ ತಾಯಿ ಸಹ ಎಂದು ತೋರಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮಡಿಕೇರಿ ತಾಲೂಕಿನ ಬೆಟ್ಟಗೇರಿ ನಿವಾಸಿ ಶಿಕ್ಷಕಿ ಕವಿತಾ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರೂ ಎಸ್‍ಎಸ್‍ಎಲ್‍ಸಿ ಪರಿಕ್ಷೆಯ ಮೌಲ್ಯ ಮಾಪನಕ್ಕೆ ಹಾಜರಾಗಿದ್ದರು. ಕವಿತಾ ಅವರ ತಾಯಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಆದರೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಪರಿಕ್ಷಾ ಮೌಲ್ಯ ಮಾಪನಕ್ಕೆ  ಆಗಮಿಸಿದ್ದರು. ಈ ಮೂಲಕ ಶಿಕ್ಷಕಿ ತಮ್ಮ ವೃತ್ತಿ ಬದ್ಧತೆ ತೋರಿದ್ದರು.

  • ‘ಮೌಲ್ಯಮಾಪನ ಮಾಡಲ್ಲ’ – ಪಿಯು ವಿಜ್ಞಾನ ಉಪನ್ಯಾಸಕರು

    ‘ಮೌಲ್ಯಮಾಪನ ಮಾಡಲ್ಲ’ – ಪಿಯು ವಿಜ್ಞಾನ ಉಪನ್ಯಾಸಕರು

    ಬೆಂಗಳೂರು: ಪಿಯುಸಿ ಮೌಲ್ಯಮಾಪನಕ್ಕೂ ಕೊರೊನಾ ಭೀತಿ ತಟ್ಟಿದ್ದು, ದ್ವಿತೀಯ ಪಿಯುಸಿ ವಿಜ್ಞಾನ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡದಿರಲು ಉಪನ್ಯಾಸಕರು ನಿರ್ಧಾರ ಮಾಡಿದ್ದಾರೆ.

    ಕೊರೊನಾ ಹಿನ್ನೆಲೆಯಲ್ಲಿ ಮೌಲ್ಯಮಾಪನ ಕೇಂದ್ರಗಳನ್ನು ಆಯಾ ಜಿಲ್ಲೆಗಳಲ್ಲಿ ವಿಕೇಂದ್ರಿಕರಣಗೊಳಿಸುವಂತೆ ಉಪನ್ಯಾಸಕರ ಸಂಘ ಮನವಿ ಮಾಡಿತ್ತು. ಕೊರೊನಾ ಸಮುದಾಯಕ್ಕೆ ಹರಡುತ್ತಿದೆ ಎಂದು ಈ ಮನವಿ ಮಾಡಲಾಗಿತ್ತು. ಆದರೆ ಸರ್ಕಾರ ಉಪನ್ಯಾಸಕರ ಬೇಡಿಕೆಗೆ ಈಡೇರಿಸದ ಕಾರಣ ನಾಳೆಯಿಂದ ಪ್ರಾರಂಭವಾಗಬೇಕಿದ್ದ ವಿಜ್ಞಾನ ವಿಷಯದ ಮೌಲ್ಯಮಾಪನ ಮಾಡದೇ ಇರಲು ಉಪನ್ಯಾಸಕರ ಸಂಘದಿಂದ ನಿರ್ಧಾರ ಮಾಡಿದೆ.

    ಬೆಂಗಳೂರಿಗೆ ಬಂದು ಮೌಲ್ಯಮಾಪನ ಮಾಡುವ ಉಪನ್ಯಾಸಕರಿಗೆ ಸರ್ಕಾರ ಸರಿಯಾದ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಕೊರೊನಾ ಸಮಯದಲ್ಲಿ ಸರ್ಕಾರದ ಈ ನಡೆಗೆ ಉಪನ್ಯಾಸಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಿಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನಕ್ಕೆ ಅವಕಾಶ ಕೊಡಿ. ಇಲ್ಲವೇ ಕೊರೊನಾ ಕಡಿಮೆ ಆಗುವವರೆಗೂ ಮೌಲ್ಯಮಾಪನ ಸ್ಥಗಿತ ಮಾಡಿ ಎಂದು ಸರ್ಕಾರಕ್ಕೆ ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ ಆಗ್ರಹಿಸಿದ್ದಾರೆ.

  • ಪಿಯುಸಿಗೆ ಮೌಲ್ಯಮಾಪನ ಸಂಕಟ – ಎಸ್‍ಎಸ್‍ಎಲ್‍ಸಿ ಹಾದಿ ಸುಗಮ

    ಪಿಯುಸಿಗೆ ಮೌಲ್ಯಮಾಪನ ಸಂಕಟ – ಎಸ್‍ಎಸ್‍ಎಲ್‍ಸಿ ಹಾದಿ ಸುಗಮ

    ಬೆಂಗಳೂರು: ದ್ವೀತಿಯ ಪಿಯುಸಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬಂದ ಕೂಡಲೇ ಮೌಲ್ಯಮಾಪನ ಬಹಿಷ್ಕಾರ ಎನ್ನುವ  ಪದ ಕೇಳ್ತಾನೆ ಇರುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಮೌಲ್ಯಮಾಪನ ಬಹಿಷ್ಕಾರ ಮಾಡಲು ಪಿಯುಸಿ ಉಪನ್ಯಾಸಕರು ನಿರ್ಧಾರ ಮಾಡಿದ್ದಾರೆ. ಆದರೆ ಎಸ್‍ಎಸ್‍ಎಲ್‍ಸಿ ಶಿಕ್ಷಕರು ಮಾತ್ರ ನಾವು ಮೌಲ್ಯಮಾಪನ, ಪರೀಕ್ಷಾ ಕೆಲಸ ಬಹಿಷ್ಕಾರ ಮಾಡದೇ ಇರಲು ನಿರ್ಧಾರ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪನ್ಯಾಸಕ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಬೇಡಿಕೆ ಈಡೇರದೇ ಇದ್ದರೆ ಮೌಲ್ಯಮಾಪನ ಬಹಿಷ್ಕಾರ ಗ್ಯಾರಂಟಿ ಅಂತಿದ್ದಾರೆ. ವೇತನ ತಾರತಮ್ಯ ಸೇರಿದಂತೆ 20 ಬೇಡಿಕೆಗಳನ್ನು ಅನೇಕ ವರ್ಷಗಳಿಂದ ಸರ್ಕಾರದ ಮುಂದೆ ಇಟ್ಟುಕೊಂಡು ಬರುತ್ತಿದ್ದೇವೆ. ಆದರೆ ಸರ್ಕಾರ ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದೆ. ಹೀಗಾಗಿ ಈ ಬಾರಿ ಹೋರಾಟ ಶತಸಿದ್ಧ ಅಂತ ಎಚ್ಚರಿಕೆ ನೀಡಿದ್ದಾರೆ. ಜನವರಿ 30ರಂದು ಎರಡನೇ ಹಂತದ ಹೋರಾಟ ಫ್ರೀಡಂ ಪಾರ್ಕ್ ನಲ್ಲಿ ಮಾಡುತ್ತಿದ್ದೇವೆ. ಸರ್ಕಾರ ಅಷ್ಟರಲ್ಲಿ ಬೇಡಿಕೆ ಈಡೇರಿಸದೇ ಇದ್ದರೆ ಮೌಲ್ಯಮಾಪನ ಬಹಿಷ್ಕಾರ ಗ್ಯಾರಂಟಿ ಅಂತ ಎಚ್ಚರಿಕೆ ನೀಡಿದ್ದಾರೆ.

    ಉಪನ್ಯಾಸಕರ ಬೇಡಿಕೆಗಳು ಏನು?
    1. ವೇತನ ತಾರತಮ್ಯ ಸರಿಪಡಿಸಬೇಕು. ಕುಮಾರ್ ನಾಯಕ್ ವರದಿ ಜಾರಿ ಮಾಡಬೇಕು.
    2. ಉಪನ್ಯಾಸಕರ ಕಾರ್ಯಭಾರ ಕುರಿತು ನಿರ್ಧಾರಕ್ಕೆ ಉನ್ನತ ಮಟ್ಟದ ಪರಿಷತ್ ಸಮಿತಿ ರಚಿಸಬೇಕು. ಉಪನ್ಯಾಸಕರಿಗೆ 16 ಗಂಟೆ ಬೋಧನಾ ಅವಧಿ ಮುಂದುವರಿಸಬೇಕು.
    3. ಪ್ರೌಢಶಾಲೆಯಿಂದ ಪದೋನ್ನತಿ ಹೊಂದಿದ ಪಿಯುಸಿ ಉಪನ್ಯಾಸಕರಿಗೆ 10, 15, 20, 25 ವರ್ಷಗಳ ಕಾಲಮಿತಿ ಬಡ್ತಿ ಕೂಡಲೇ ನೀಡಬೇಕು.
    4. ಪಿಯುಸಿ ಉಪನ್ಯಾಸಕರಿಗೆ ಪದವಿ ಕಾಲೇಜಿಗೆ ಬಡ್ತಿ ನೀಡಬೇಕು. ಕರ್ನಾಟಕ ಪಬ್ಲಿಕ್ ಶಾಲೆಯಿಂದ ಆಗಿರುವ ಸಮಸ್ಯೆ ಪರಿಹಾರ ಮಾಡಬೇಕು.
    5. ಅನುದಾನಿತ ಪದವಿ ಪೂರ್ವ ಕಾಲೇಜುಗಳ ಕಾಲ್ಪನಿಕ ವೇತನ ಸಮಸ್ಯೆ ಪರಿಹಾರ ಮಾಡಬೇಕು.
    6. ಪಿಯು ಕಾಲೇಜಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆ ತುಂಬಬೇಕು.

    ಬೆಂಬಲ ನೀಡಲ್ಲ: ಪಿಯುಸಿ ಉಪನ್ಯಾಸಕರ ಹೋರಾಟಕ್ಕೆ ಪ್ರೌಢಶಾಲಾ ಸಹ ಶಿಕ್ಷಕರು ಕೈ ಜೋಡಿಸದೇ ಇರಲು ನಿರ್ಧರಿಸಿದ್ದಾರೆ. ಮೌಲ್ಯಮಾಪನಕ್ಕೆ ಗೈರಾಗದೇ ಇರಲು ನಿರ್ಧಾರ ಮಾಡಿದ್ದು, ಪರೀಕ್ಷಾ ಕೆಲಸಕ್ಕೂ ಹಾಜರಾಗಲು ನಿರ್ಧಾರ ಮಾಡಿದ್ದೇವೆ. ಜೂನ್ ನಂತರ ನಮ್ಮ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

  • ಮೌಲ್ಯಮಾಪಕರ ಎಡವಟ್ಟು- 79ರ ಬದಲು 10 ಅಂಕ ಕೊಟ್ರು!

    ಮೌಲ್ಯಮಾಪಕರ ಎಡವಟ್ಟು- 79ರ ಬದಲು 10 ಅಂಕ ಕೊಟ್ರು!

    ತುಮಕೂರು: ಮೌಲ್ಯಮಾಪಕರ ಎಡವಟ್ಟಿನಿಂದಾಗಿ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯೋರ್ವಳು ಕನ್ನಡ ಭಾಷೆಯಲ್ಲೇ ಅನುತ್ತೀರ್ಣವಾದ ಪ್ರಕರಣ ಬೆಳಕಿಗೆ ಬಂದಿದೆ.

    ಜಿಲ್ಲೆಯ ಪಾವಗಡ ಪಟ್ಟಣದ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿ ವೀಣಾಬಾಯಿ ಕಲಾ ವಿಭಾಗದ ಉಳಿದ ಎಲ್ಲಾ ವಿಷಯಗಳಲ್ಲಿ 90 ಅಂಕ ಪಡೆದಿದ್ದಾಳೆ. ಆದರೆ ಕನ್ನಡದಲ್ಲಿ ಮಾತ್ರ ಕೇವಲ 10 ಅಂಕ ನೀಡಲಾಗಿದೆ. ಫಲಿತಾಂಶ ನೋಡಿ ಕಂಗಾಲಾದ ವೀಣಾಬಾಯಿ, ಶಿಕ್ಷಕರ ಸಲಹೆಯಂತೆ ಉತ್ತರ ಪತ್ರಿಕೆಯ ಫೋಟೋ ಪ್ರತಿ ತರಿಸಿಕೊಂಡಿದ್ದಾಳೆ. ಆಗ ಮೌಲ್ಯಮಾಪಕರ ಎಡವಟ್ಟು ಬಹಿರಂಗವಾಗಿದೆ.

    ಅಸಲಿಗೆ ವೀಣಾಬಾಯಿಗೆ 79 ಅಂಕ ಬಂದಿದೆ. ಉತ್ತರ ಪತ್ರಿಕೆಯಲ್ಲಿ ಅದು ಸರಿಯಾಗಿಯೇ ನಮೂದಾಗಿದೆ. ಆದರೆ ಮೌಲ್ಯ ಮಾಪಕ ಮಹಾಶಯ ರಿಸಲ್ಟ್ ಶೀಟಲ್ಲಿ ಮಾತ್ರ ಕೇವಲ 10 ಅಂಕವನಷ್ಟೇ ನಮೂದಿಸಿದ್ದಾನೆ.

    ಇದೇ ಕಾಲೇಜಿನ ಇನ್ನೊಬ್ಬ ವಿದ್ಯಾರ್ಥಿ ಆರ್.ರವಿ, ಕನ್ನಡ ವಿಷಯದಲ್ಲಿ ಇದೇ ರೀತಿ ಎಡವಟ್ಟಾಗಿ 15 ಅಂಕ ಕಡಿಮೆ ಬಂದಿದೆ. ಒಂದು ಫೋಟೋ ಪ್ರತಿ ತರಿಸಲು 530 ಕಟ್ಟಬೇಕಾಗುತ್ತದೆ. ಬಡ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸುವುದೇ ಕಷ್ಟ ಅಂತಹ ಸ್ಥಿತಿಯಲ್ಲಿ ಪರೀಕ್ಷಾ ಮಂಡಳಿಯವರು ಮಾಡುವ ತಪ್ಪಿಗೆ ವಿದ್ಯಾರ್ಥಿಗಳು ಮತ್ತೆ ಬೆಲೆ ತೆರಬೇಕೇ ಅನ್ನೋದು ಪೋಷಕರ ಪ್ರಶ್ನೆಯಾಗಿದೆ.

  • ಪಿಯುಸಿಯಲ್ಲಿ 99 ಅಂಕ ಪಡೆದ ವಿದ್ಯಾರ್ಥಿನಿಗೆ 0 ಅಂಕ ನೀಡಿದ್ದ ಶಿಕ್ಷಕಿ ಅಮಾನತು

    ಪಿಯುಸಿಯಲ್ಲಿ 99 ಅಂಕ ಪಡೆದ ವಿದ್ಯಾರ್ಥಿನಿಗೆ 0 ಅಂಕ ನೀಡಿದ್ದ ಶಿಕ್ಷಕಿ ಅಮಾನತು

    ಹೈದರಾಬಾದ್: ತೆಲಂಗಾಣದ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಕಳೆದ 10 ದಿನಗಳಲ್ಲಿ 23 ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ, ಮೌಲ್ಯಮಾಪನದಲ್ಲಿ ಶಿಕ್ಷಕಿ ಮಾಡಿದ ಎಡವಟ್ಟೊಂದು ಬೆಳಕಿಗೆ ಬಂದಿದೆ.

    ತೆಲುಗು ಭಾಷೆ ಪರೀಕ್ಷೆಯಲ್ಲಿ 99 ಅಂಕ ಗಳಿಸಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಮೌಲ್ಯಮಾಪಕಿ ಶೂನ್ಯ ಅಂಕ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಲೋಪದ ಬಗ್ಗೆ ಮತ್ತೊಬ್ಬ ಮೌಲ್ಯಮಾಪಕ ಪರಿಶೀಲನೆ ನಡೆಸಬೇಕಿತ್ತು. ಆದರೆ ಆತ ಕೂಡ ನಿರ್ಲಕ್ಷ್ಯ ತೋರಿದ್ದಾನೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಮೌಲ್ಯಮಾಪಕರನ್ನು ಅಮಾನತುಗೊಳಿಸಲಾಗಿದೆ.

    12 ನೇ ತರಗತಿ ವಿದ್ಯಾರ್ಥಿಯ ತೆಲುಗು ಪತ್ರಿಕೆಯ ಮೌಲ್ಯಮಾಪನ ಮಾಡುವಾಗ 99 ಅಂಕದ ಬದಲಿಗೆ ಶೂನ್ಯ ಅಂಕಗಳನ್ನು ನೀಡಿದ್ದ ಖಾಸಗಿ ಶಾಲೆಯ ಶಿಕ್ಷಕಿಯ ಮೇಲೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಅಲ್ಲದೆ ಶಿಕ್ಷಕಿಯನ್ನು ಶಾಲೆಯ ಆಡಳಿತ ಮಂಡಳಿ ವಜಾ ಮಾಡಿದೆ.

    ಪಿಯು ಮಂಡಳಿ ಏಪ್ರಿಲ್ 18 ರಂದು ಫಲಿತಾಂಶವನ್ನು ಪ್ರಕಟಗೊಳಿಸಿತ್ತು. ಪರೀಕ್ಷೆಗಳಲ್ಲಿ ಫೇಲ್ ಆದ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.

    ಪಿಯುಸಿ ಪರೀಕ್ಷೆ ಫಲಿತಾಂಶ ಬಂದ ನಂತರ ರಾಜ್ಯದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ಇದನ್ನು ಖಂಡಿಸಿ ಬೃಹತ್ ಪ್ರತಿಭಟನೆಗಳು ಕೂಡ ಎಲ್ಲೆಡೆ ನಡೆದಿತ್ತು. ಅಲ್ಲದೇ ಫೇಲ್ ಆಗಿರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಉಚಿತವಾಗಿ ಮರು-ಮೌಲ್ಯಮಾಪನವನ್ನು ಮಾಡಬೇಕು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಒತ್ತಾಯಿಸಿದ್ದರು. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.

    ಪೋಷಕರು, ವಿದ್ಯಾರ್ಥಿ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿ, ಪಿಯು ಬೋರ್ಡ್ ಮತ್ತು ಫಲಿತಾಂಶದ ಎಡವಟ್ಟಿಗೆ ಕಾರಣವಾದ ಐಟಿ ಕಂಪನಿ ಗ್ಲೋಬರೆನಾ ಟೆಕ್ನಾಲಜೀಸ್, ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ.

  • ಕನ್ನಡ ಮೀಡಿಯಂ ಶಿಕ್ಷಕರು – ಇಂಗ್ಲೀಷ್ ಮೀಡಿಯಂ ಮೌಲ್ಯಮಾಪನ!

    ಕನ್ನಡ ಮೀಡಿಯಂ ಶಿಕ್ಷಕರು – ಇಂಗ್ಲೀಷ್ ಮೀಡಿಯಂ ಮೌಲ್ಯಮಾಪನ!

    ಶಿವಮೊಗ್ಗ: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಕನ್ನಡ ಮಾಧ್ಯಮ ಶಿಕ್ಷಕರಿಂದ ಮಾಡಿಸುತ್ತಿರುವ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆಯುತ್ತಿದೆ.

    ಶಿವಮೊಗ್ಗ ನಗರದ ಏಳು ಕೇಂದ್ರಗಳಲ್ಲಿ ವಿವಿಧ ವಿಷಯಗಳ ಪರೀಕ್ಷೆಯ ಮೌಲ್ಯಮಾಪನ ನಡೆಯುತ್ತಿದೆ. ಎನ್‍ಇಎಸ್ ಕೇಂದ್ರದಲ್ಲಿ ಸಮಾಜ ವಿಜ್ಞಾನ ಮೌಲ್ಯಮಾಪನ ನಡೆಯುತ್ತಿದೆ. ಈ ಕೇಂದ್ರಕ್ಕೆ 24 ಸಾವಿರ ಉತ್ತರ ಪತ್ರಿಕೆಗಳು ಬಂದಿದ್ದು, ಇದರಲ್ಲಿ 4 ಸಾವಿರ ಮಾತ್ರ ಕನ್ನಡ ಮಾಧ್ಯಮದಲ್ಲಿವೆ. ಉಳಿದ 20 ಸಾವಿರ ಪತ್ರಿಕೆಗಳು ಇಂಗ್ಲೀಷ್ ಮಾಧ್ಯಮದಲ್ಲಿವೆ.

    ಈ ಕೇಂದ್ರದಲ್ಲಿ ಮೌಲ್ಯಮಾಪನದಲ್ಲಿ ತೊಡಗಿರುವ 400 ಶಿಕ್ಷಕರಲ್ಲಿ 300ಕ್ಕೂ ಹೆಚ್ಚು ಜನ ಕನ್ನಡ ಮಾಧ್ಯಮದಲ್ಲೇ ಬೋಧನೆ ಮಾಡಿದವರು. ಇವರಿಗೆ ಇಂಗ್ಲೀಷ್ ಮಾಧ್ಯಮದ ಉತ್ತರ ಪತ್ರಿಕೆಗಳನ್ನು ಸರಾಗವಾಗಿ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತಿಲ್ಲ.

    ಹತ್ತಾರು ವರ್ಷಗಳ ಕಾಲ ಕನ್ನಡ ಮಾಧ್ಯಮದಲ್ಲೇ ಪಾಠ ಮಾಡಿದವರಿಗೆ ಸಮಾಜ ವಿಜ್ಞಾನದಂತ ಉತ್ತರ ಇರುವ ಪತ್ರಿಕೆಗಳ ಮೌಲ್ಯಮಾಪನ ಮಾಡುವುದು ಕಷ್ಟವಾಗುತ್ತಿದೆ. ಕೀ ಉತ್ತರಗಳು ಇದ್ದರೂ ಸಹ ಗಣಿತ, ವಿಜ್ಞಾನದಷ್ಟು ಸಲೀಸಾಗಿ ಸಮಾಜ ವಿಜ್ಞಾನ ಪತ್ರಿಕೆ ಮೌಲ್ಯ ಮಾಪನ ಮಾಡುವುದು ಕಷ್ಟವಾಗುತ್ತಿದೆ. ಆದರೂ ಮೌಲ್ಯ ಮಾಪನ ಮಾಡಲು ನಿರಾಕರಿಸುವ ಕನ್ನಡ ಮಾಧ್ಯಮ ಶಿಕ್ಷಕರನ್ನು ಬೆದರಿಸಿ, ಬಲವಂತದಿಂದ ಮೌಲ್ಯ ಮಾಪನ ಮಾಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಪ್ರೌಢ ಶಿಕ್ಷಣ ಮಂಡಳಿ ಈ ಬಗ್ಗೆ ಸ್ಪಷ್ಟ ಸುತ್ತೋಲೆ ಹೊರಡಿಸಿದ್ದರೂ ಶಿವಮೊಗ್ಗದಲ್ಲಿ ಅದಕ್ಕೆ ಬೆಲೆ ಇಲ್ಲದಂತಾಗಿದೆ. ಇಂಗ್ಲೀಷ್ ಮಾಧ್ಯಮದ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಇಂಗ್ಲೀಷ್ ಮಾಧ್ಯಮದ ಶಿಕ್ಷಕರನ್ನೇ ನೇಮಿಸುವಲ್ಲಿ ಮಂಡಳಿ ವಿಫಲವಾಗಿದೆ. ಇತ್ತ ಕನ್ನಡ ಮಾಧ್ಯಮದ ಶಿಕ್ಷಕರಿಂದ ಬಲವಂತವಾಗಿ ಮೌಲ್ಯಮಾಪನ ಮಾಡಿಸಿ, ಇಚ್ಛೆ ಇದ್ದವರು ಮಾತ್ರ ಮಾಡಬಹುದು ಎಂಬ ಹೇಳಿಕೆ ನೀಡಿದೆ. ಈ ರೀತಿಯ ಮೌಲ್ಯಮಾಪನದಿಂದ ವಿದ್ಯಾರ್ಥಿಗಳ ಉತ್ತರಕ್ಕೆ ಸರಿಯಾದ ಅಂಕಗಳು ಸಿಗದೇ ಅವರ ಭವಿಷ್ಯಕ್ಕೆ ಕುತ್ತಾಗುವ ಸಾಧ್ಯತೆ ಇದೆ.

  • ಬೋರ್ಡ್ ಎಕ್ಸಾಂನಲ್ಲಿ `ಐ ಲವ್ ಯೂ ಪೂಜಾ’ ಎಂದು ಬರೆದ ವಿದ್ಯಾರ್ಥಿ!

    ಬೋರ್ಡ್ ಎಕ್ಸಾಂನಲ್ಲಿ `ಐ ಲವ್ ಯೂ ಪೂಜಾ’ ಎಂದು ಬರೆದ ವಿದ್ಯಾರ್ಥಿ!

    ಲಕ್ನೋ: ವಿದ್ಯಾರ್ಥಿಯೊಬ್ಬ ತಾನು ಪ್ರೀತಿಯಲ್ಲಿ ಬಿದ್ದ ಕಾರಣ ಪರೀಕ್ಷೆಗೆ ಓದಲು ಸಾಧ್ಯವಾಗಿಲ್ಲ ಎಂದು ಉತ್ತರ ಪತ್ರಿಕೆಯಲ್ಲಿ ಬರೆದಿಟ್ಟು ಉತ್ತೀರ್ಣಗೊಳಿಸುವಂತೆ ಮನವಿ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆ ಮೌಲ್ಯ ಮಾಪನದ ವೇಳೆ ಬೆಳಕಿಗೆ ಬಂದಿದೆ.

    ಉತ್ತರ ಪ್ರದೇಶದ ಶಿಕ್ಷಣ ಕ್ಷೇತ್ರದಲ್ಲಿ ಕಟ್ಟುನಿಟ್ಟಿನ ಪರೀಕ್ಷೆ ನಡೆಸಲು ಸೂಚಿಸಿದ್ದ ಸಿಎಂ ಯೋಗಿ ಆದಿತ್ಯನಾಥ್ ಅದೇಶದ ಬಳಿಕ ಲಕ್ಷ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ಸದ್ಯ ಬೋರ್ಡ್ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಆಂಭವಾಗಿದ್ದು, ವಿದ್ಯಾರ್ಥಿಗಳು ವಿಚಿತ್ರ ಉತ್ತರಗಳನ್ನು ಬರೆದು ಪರೀಕ್ಷೆಯಲ್ಲಿ ಉತೀರ್ಣ ಮಾಡಲು ಕೇಳಿಕೊಂಡಿದ್ದಾರೆ.

    ಕೆಲ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯೊಂದಿಗೆ ಹಣವನ್ನು ಇಟ್ಟು ಉತೀರ್ಣ ಮಾಡಲು ಅಮಿಷ ಒಡ್ಡಿದ್ದಾರೆ. ಅಲ್ಲದೇ ತನಗೆ ತಾಯಿ ಇಲ್ಲ, ಈ ಬಾರಿ ಪರೀಕ್ಷೆಯಲ್ಲಿ ನಾನು ಅನುತ್ತೀರ್ಣವಾದರೆ ತಂದೆ ತನ್ನನ್ನು ಕೊಲೆ ಮಾಡುವುದಾಗಿ ಮತ್ತೊಬ್ಬ ವಿದ್ಯಾರ್ಥಿ ಬರೆದಿದ್ದಾನೆ. ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ತನ್ನ ಪ್ರೇಮದ ಬಗ್ಗೆ ಬರೆದಿದ್ದು, ತಾನು ಪ್ರೀತಿ ಮಾಡುವ ಯುವತಿಯ ಹೆಸರು ಹಾಗೂ ಹೃದಯದ ಚಿಹ್ನೆ ಬರೆದಿಟ್ಟಿದ್ದಾನೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಕರೊಬ್ಬರು ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರ ಅನುಕಂಪ ಪಡೆಯಲು ಈ ರೀತಿ ಮಾಡಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಹಣ ಅಮಿಷ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ಉತ್ತರ ಪ್ರದೇಶದ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗೆ ಮಾರ್ಚ್ 17 ರಿಂದ ಮಾಲ್ಯ ಮಾಪನ ಆರಂಭವಾಗಿದ್ದು, 248 ಕೇಂದ್ರಗಳಲ್ಲಿ ನಡೆಯುತ್ತಿದೆ. ಸುಮಾರು 5.5 ಕೋಟಿ ಉತ್ತರ ಪತ್ರಿಗಳನ್ನು 1.46 ಲಕ್ಷ ಶಿಕ್ಷಕರು ಮೌಲ್ಯ ಮಾಪನ ಮಾಡುತ್ತಿದ್ದಾರೆ.

    ಬೋರ್ಡ್ ಪರೀಕ್ಷೆಯ ಫಲಿತಾಂಶ ಏಪ್ರಿಲ್ ಮೂರನೇ ವಾರದಲ್ಲಿ ಬಿಡುಗಡೆಯಾಗುವ ಸಂಭವವಿದೆ ಎಂದು ಯುಪಿ ಶಿಕ್ಷಣ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆಯ ಸ್ಟ್ರಿಕ್ಟ್ ರೂಲ್ಸ್ ಗೆ ಹೆದರಿ 10 ಲಕ್ಷ ವಿದ್ಯಾರ್ಥಿಗಳು ಗೈರು!