Tag: euthanasia

  • ಜಾಗದಿಂದ ಒಕ್ಕಲೆಬ್ಬಿಸಲು ಗ್ರಾಮಸ್ಥರಿಂದ ಕಿರುಕುಳ ಆರೋಪ- ದಯಾಮರಣ ಕೋರಿ ಬಡಕುಟುಂಬ ಅರ್ಜಿ

    ಜಾಗದಿಂದ ಒಕ್ಕಲೆಬ್ಬಿಸಲು ಗ್ರಾಮಸ್ಥರಿಂದ ಕಿರುಕುಳ ಆರೋಪ- ದಯಾಮರಣ ಕೋರಿ ಬಡಕುಟುಂಬ ಅರ್ಜಿ

    ಮೈಸೂರು: ಗ್ರಾಮಸ್ಥರು ತಮ್ಮ ಜಾಗದಿಂದ ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕುಟುಂಬವೊಂದು ದಯಾಮರಣಕ್ಕೆ (Euthanasia) ಅರ್ಜಿ ಸಲ್ಲಿಸಿರುವ ಘಟನೆ ಸಿಎಂ ಸಿದ್ದರಾಮಯ್ಯ ( Siddaramaiah) ಅವರ ವರುಣ (Varuna) ಕ್ಷೇತ್ರದ ರಾಂಪುರದಲ್ಲಿ ನಡೆದಿದೆ.

    90 ವರ್ಷಗಳಿಂದ ವಾಸವಿರುವ ಕುಟುಂಬವನ್ನು ಗ್ರಾಮಸ್ಥರು ಎತ್ತಂಗಡಿ ಮಾಡಲು ಹುನ್ನಾರ ಮಾಡುತ್ತಿದ್ದಾರೆ. ಇದು ನಮ್ಮ ಪೂರ್ವಿಕರಿದ್ದ ಜಾಗವಾಗಿದ್ದು, ಬೇಕಾದರೆ ಇದೇ ನೆಲದಲ್ಲಿಯೇ ನಾವು ಪ್ರಾಣ ಬಿಡಲು ಸಿದ್ಧರಿದ್ದೇವೆ ಎಂದು ಇಡೀ ಕುಟುಂಬ ದಯಾಮರಣ ಕೋರಿ ತಹಶೀಲ್ದಾರ್‍ಗೆ ಅರ್ಜಿ ಸಲ್ಲಿಸಿದೆ. ಇದನ್ನೂ ಓದಿ: ಆಹ್ವಾನ ಬಂದಿದ್ದು, ಜ.22 ರ ಬಳಿಕ ರಾಮಮಂದಿರಕ್ಕೆ ಭೇಟಿ ನೀಡುತ್ತೇನೆ: ಅಖಿಲೇಶ್‌ ಯಾದವ್‌

    ನಮ್ಮ ಮುತ್ತಾತನ ಕಾಲದಿಂದಲೂ ಈ ಜಾಗದಲ್ಲಿ ವಾಸವಾಗಿದ್ದೇವೆ. ಸುಮಾರು 90 ವರ್ಷಗಳಿಂದ ಈ ಖರಾಬು ಜಮೀನಿನಲ್ಲಿ ನಮ್ಮ ಕುಟುಂಬ ವಾಸವಿದೆ. ಈಗ ಗ್ರಾಮಸ್ಥರು ಒಕ್ಕಲೆಬ್ಬಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ಗ್ರಾಮದ ಜ್ಯೋತಿ ಎಂಬ ಮಹಿಳೆ ಹಾಗೂ ಅವರ ಕುಟುಂಬ ಆರೋಪಿಸಿದೆ.

    ಸರ್ವೇ ನಂಬರ್ 39ರಲ್ಲಿ ಈಗಾಗಲೇ ಒಂದು ಎಕರೆ ಪ್ರದೇಶದಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಇನ್ನುಳಿದಿರುವ 18 ಗುಂಟೆ ಪ್ರದೇಶದಲ್ಲಿ ವಾಸವಿದ್ದ ಜಮೀನಿನಲ್ಲಿ ಗ್ರಾಮಸ್ಥರು ಸಮುದಾಯ ಭವನ ನಿರ್ಮಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆ ಈಗಾಗಲೇ ಒಂದು ಎಕರೆ ಜಮೀನು ಸ್ವಾಧೀನಕ್ಕೆ ಪಡೆದಿದ್ದಾರೆ. ಉಳಿದ 18 ಗುಂಟೆ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ನಡೆಸುತ್ತಿದ್ದೇವೆ. ಈ ಜಾಗದಲ್ಲಿ ಜನತಾ ಮನೆ ನಿರ್ಮಿಸಲು ನಮಗೆ ಮಂಜೂರಾತಿ ಪತ್ರ ದೊರೆತಿದೆ. ಈಗ ಈ ಜಾಗದಲ್ಲಿ ಅಡುಗೆ ಮನೆ ನಿರ್ಮಿಸಲು ಗ್ರಾಮಸ್ಥರು ಮುಂದಾಗಿದ್ದು, ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಮಣಿಪುರಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ

  • ಸಂಪೂರ್ಣ ಕುಸಿದ ಮನೆಗೆ 50 ಸಾವಿರ ರೂ. ಪರಿಹಾರ – ನೊಂದ ಕುಟುಂಬದಿಂದ ರಾಷ್ಟ್ರಪತಿಗೆ ದಯಾಮರಣ ಅರ್ಜಿ

    ಸಂಪೂರ್ಣ ಕುಸಿದ ಮನೆಗೆ 50 ಸಾವಿರ ರೂ. ಪರಿಹಾರ – ನೊಂದ ಕುಟುಂಬದಿಂದ ರಾಷ್ಟ್ರಪತಿಗೆ ದಯಾಮರಣ ಅರ್ಜಿ

    ಹಾವೇರಿ: ಕೆಲವು ದಿನಗಳ ಹಿಂದೆ ಸುರಿದ ಮಳೆಗೆ (Rain) ಮನೆ ಕುಸಿದು ಬಿದ್ದಿದೆ. ಇತ್ತ ಸೂರಿಲ್ಲದೆ ಪರದಾಡಿದ ತಾಯಿ (Mother), ಮಗ (Son) ಮನೆ ಬಿದ್ದಿದೆ ಎಂದು ಸ್ಥಳೀಯಾಡಳಿತಕ್ಕೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಅವರಿಗೆ ಸೂಕ್ತ ಪರಿಹಾರ ದೊರಕಿಸಿಕೊಟ್ಟಿಲ್ವಂತೆ. ಹೀಗಾಗಿ ನಮಗೆ ಸೂಕ್ತ ಪರಿಹಾರ ಕೊಡಿಸಿ ಇಲ್ಲವೆ ದಯಾಮರಣ (Euthanasia) ಕೊಡಿ ಎಂದು ತಾಯಿ ಮತ್ತು ಮಗ ರಾಷ್ಟ್ರಪತಿಗಳಿಗೆ (President) ಪತ್ರ ಬರೆದಿರುವ ಘಟನೆ ಹಾವೇರಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

    ಹಾವೇರಿ ತಾಲೂಕಿನ ಹೊಸಳ್ಳಿ ಗ್ರಾಮದ ಶಾಂತವ್ವ ನಿಂಬಕ್ಕನವರ ಮತ್ತು ಮಗ ಪ್ರಕಾಶ್ ನಿಂಬಕ್ಕನವರ ಮನೆ ಕಳೆದುಕೊಂಡು ಕಚೇರಿಯಿಂದ ಕಚೇರಿ ಪರಿಹಾರಕ್ಕಾಗಿ ಅಲೆದಾಡಿ ಬೇಸತ್ತು ದಯಾಮರಣಕ್ಕೆ ಅರ್ಜಿ ಹಾಕಿರುವ ನೊಂದ ಜೀವಗಳು. ಇವರಿಗೆ ವಾಸಕ್ಕೆ ಅಂತಾ ಒಂದು ಮನೆ ಇತ್ತು. ಜೀವನೋಪಾಯಕ್ಕೆ ಅಂತಾ ಒಂದು ಎಕರೆ ಜಮೀನಿದೆ. ಆದರೆ ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಮನೆ ಕುಸಿದು ಬಿದ್ದಿದೆ. ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳೆಲ್ಲವೂ ಸಂಪೂರ್ಣ ನಾಶವಾಗಿದೆ. ಇದನ್ನೂ ಓದಿ: ಅನಾರೋಗ್ಯದ ಮಗುವಿದ್ರೆ ಲೈಫ್ ಎಂಜಾಯ್ ಮಾಡಲು ಸಾಧ್ಯವಿಲ್ಲ – ವೈದ್ಯೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

    ಮನೆ ಕೂಡಾ ನಿರಂತರ ಮಳೆಗೆ ಸಂಪೂರ್ಣವಾಗಿ ಬಿದ್ದು ಹೋಗಿದೆ. ಕಳೆದ ಮೂರು ತಿಂಗಳಿನಿಂದ ಮೂರು ಬಾರಿ ಅರ್ಜಿ ಸಲ್ಲಿಸಿದರೂ, ಅಧಿಕಾರಿಗಳು ‘ಸಿ’ ವರ್ಗಕ್ಕೆ ಹಾಕಿ 50 ಸಾವಿರ ರೂ. ಪರಿಹಾರದ ಆದೇಶ ಹೊರಡಿಸಿದ್ದಾರೆ. ಮನೆ ಸಂಪೂರ್ಣ ಬಿದ್ದು ಹೋಗಿದೆ. ಅದರೂ ತಾರತಮ್ಯ ಮಾಡುತ್ತಿದ್ದಾರೆ. ಇದರಿಂದ ನೊಂದು ತಾಯಿ, ಮಗ ಜಿಲ್ಲಾಧಿಕಾರಿ ಹಾಗೂ ರಾಷ್ಟ್ರಪತಿಗೆ ದಯಾಮರಣ ನೀಡಿ ಎಂದು ಪತ್ರವನ್ನು ಬರೆದಿದ್ದಾರೆ. ನಮಗೆ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂ. ನೀಡಿ ಇಲ್ಲದಿದ್ದರೆ ದಯಾಮರಣ ನೀಡಿ ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪ – ಎಲ್ಲ ಮಾದರಿಯ ಕ್ರಿಕೆಟ್‌ನಿಂದ ದನುಷ್ಕ ಅಮಾನತು

    ಕಳೆದ ಮೂರು ತಿಂಗಳಿನಿಂದ ಮನೆ ಇಲ್ಲದೆ, ಅಲ್ಲಿ ಇಲ್ಲಿ ಇದ್ದು ಜೀವನ ಮಾಡುತ್ತಿದ್ದೇವೆ. ಗ್ರಾಮ ಪಂಚಾಯತ್‌ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರನ್ನು ಕೇಳಿದರೆ ಜಿಲ್ಲಾಡಳಿತ ಹಾಗೂ ತಹಶೀಲ್ದಾರ್ ಕಡೆ ತೋರಿಸುತ್ತಾರೆ. ಸಂಪೂರ್ಣವಾಗಿ ಬಿದ್ದ ಮನೆಯನ್ನು ‘ಸಿ’ ಕೆಟಗರಿಗೆ ಸೇರಿಸಿ 50 ಸಾವಿರ ರೂ. ಪರಿಹಾರ ನೀಡಿದ್ದಾರೆ. ನಮಗೆ ಸರ್ಕಾರದ ಹಣ ಬೇಡ. ನಮಗೆ ಮನೆ ಕಟ್ಟಿಸಿಕೊಡಿ ಸಾಕು. ಕಚೇರಿಯಿಂದ ಕಚೇರಿಗೆ ಅಧಿಕಾರಿಗಳಿಂದ ಅಧಿಕಾಗಳ ಬಳಿ ಹೋಗಿ ಸಾಕಾಗಿದೆ. ನಿಜವಾದ ಫಲಾನುಭವಿಗಳಿಗೆ ಮನೆ ಮಂಜೂರು ಮಾಡುತ್ತಿಲ್ಲ. ಹೀಗಾಗಿ ನೊಂದು ದಯಾಮರಣ ಅರ್ಜಿಯನ್ನು ಹಾಕಿದ್ದೇವೆ. ನಮಗೆ ನ್ಯಾಯ ಕೊಡಿ ಇಲ್ಲವೆ ದಯಾಮರಣ ನೀಡಿ ಎಂದು ಶಾಂತವ್ವ ಅಂಗಲಾಚಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 11 ಮಂದಿ ಮಕ್ಕಳಿದ್ರೂ ತಾಯಿಗೆ ಊಟ ಹಾಕುವವರಿಲ್ಲ- ದಯಾಮರಣಕ್ಕೆ ಮನವಿ ಸಲ್ಲಿಸಿದ ವೃದ್ಧೆ

    11 ಮಂದಿ ಮಕ್ಕಳಿದ್ರೂ ತಾಯಿಗೆ ಊಟ ಹಾಕುವವರಿಲ್ಲ- ದಯಾಮರಣಕ್ಕೆ ಮನವಿ ಸಲ್ಲಿಸಿದ ವೃದ್ಧೆ

    ಹಾವೇರಿ: ಆ ಹೆತ್ತಮ್ಮಳಿಗೆ 11 ಜನ ಮಕ್ಕಳು, ಒಂದಿಷ್ಟು ಮೊಮ್ಮಕ್ಕಳೂ ಇರೋ ತುಂಬು ಸಂಸಾರ. ಹಣ್ಣು ಹಣ್ಣಾಗಿರೋ ಆಕೆಗೀಗ 75 ವಯಸ್ಸು. ಆದರೆ ಅಷ್ಟೊಂದು ಮಕ್ಕಳು, ಮೊಮ್ಮಕ್ಕಳು ಇದ್ರೂ ಇಳಿ ವಯಸ್ಸಿನಲ್ಲಿರೋ ಆಕೆಯನ್ನು ಯಾರೂ ನೋಡಿಕೊಳ್ಳುತ್ತಿಲ್ಲ. ಸಾಕಷ್ಟು ಆಸ್ತಿ ಇದ್ದರೂ ತುತ್ತು ಊಟಕ್ಕಾಗಿ ಪರದಾಡುತ್ತಿರುವ 11 ಮಕ್ಕಳ ತಾಯಿ ದಯಾಮರಣ (Euthanasia) ಕೋರಿ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ, ಅರ್ಜಿ ಸಲ್ಲಿಸಿದ್ದಾರೆ.

    ವಯೋವೃದ್ಧೆಯ ಹೆಸರು ಪುಟ್ಟವ್ವ ಕೊಟ್ಟೂರ. ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರು ನಗರದ ರಂಗನಾಥ ನಗರದ ನಿವಾಸಿ. ಪುಟ್ಟವ್ವಳಿಗೆ 7 ಜನ ಗಂಡು ಹಾಗೂ 4 ಜನ ಹೆಣ್ಣು ಮಕ್ಕಳಿದ್ದಾರೆ. ಎಲ್ಲಾ ಮಕ್ಕಳಿಗೂ ಮದುವೆಯಾಗಿದ್ದು, ಅವರೆಲ್ಲರಿಗೂ 1-2 ಎಂಬಂತೆ ಮಕ್ಕಳಿದ್ದಾರೆ. ಪುಟ್ಟವ್ವಳ ಪತಿ ರಾಣೆಬೆನ್ನೂರು ನಗರದಲ್ಲಿ 7 ಮನೆಗಳು, ಸೈಟು ಮತ್ತು ಜಮೀನಿದೆ. ತಾಲೂಕಿನ ಹುಲ್ಲತ್ತಿ ಗ್ರಾಮದ ಹದ್ದಿನಲ್ಲಿರೋ 28 ಎಕರೆ ಜಮೀನು ವ್ಯಾಜ್ಯದಲ್ಲಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆಯಂತೆ.

    ಪುಟ್ಟವ್ವಳ ಪತಿ ಹನುಮಂತಪ್ಪ ಕೆಲವು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ಆದರೆ ಈಗಲೂ ಮನೆಗಳು, ಜಮೀನು ಸೇರಿದಂತೆ ಎಲ್ಲವೂ ಪುಟ್ಟವ್ವಳ ಪತಿ ಹನುಮಂತಪ್ಪನ ಹೆಸರಿನಲ್ಲೇ ಇವೆ. ಇಷ್ಟೆಲ್ಲಾ ಇದ್ದರೂ ಇಳಿ ವಯಸ್ಸಿನಲ್ಲಿರೋ ಹೆತ್ತ ತಾಯಿಯನ್ನು ಯಾರೂ ನೋಡಿಕೊಳ್ಳುತ್ತಿಲ್ಲ. ಪುಟ್ಟವ್ವಳಿಗೆ ಹಲವು ವಯೋಸಹಜ ಕಾಯಿಲೆಗಳೂ ಇವೆ. ಗಂಡು, ಹೆಣ್ಣು ಮಕ್ಕಳು, ಮೊಮ್ಮಕ್ಕಳು ಇದ್ದರೂ ಯಾರೂ ಪುಟ್ಟವ್ವಳಿಗೆ ಒಂದು ಹೊತ್ತಿನ ಊಟ ಹಾಕುತ್ತಿಲ್ಲ. ಆರೋಗ್ಯ ಸಮಸ್ಯೆಯಾದಾಗ ಆಸ್ಪತ್ರೆಗೂ ಕರೆದುಕೊಂಡು ಹೋಗುತ್ತಿಲ್ಲ. ಹೀಗಾಗಿ ನನಗೆ ಈ ಜೀವನ ಸಾಕಾಗಿದೆ. ದಯಾಮರಣ ಕೊಡಿ ಅಂತ ವೃದ್ಧೆ ಪುಟ್ಟವ್ವ ದಯಾಮರಣದ ಪತ್ರ ಹಿಡಿದುಕೊಂಡು ಜಿಲ್ಲಾಡಳಿತ ಭವನಕ್ಕೆ ಬಂದಿದ್ದಾಳೆ. ಇದನ್ನೂ ಓದಿ: ಉತ್ಸವ ಮೂರ್ತಿಯ ಗುಜ್ಜುಕೋಲನ್ನು ಮುಟ್ಟಿದ್ದಕ್ಕೆ ದಲಿತ ಕುಟುಂಬದ ಮೇಲೆ ದೌರ್ಜನ್ಯ – 8 ಮಂದಿ ಅರೆಸ್ಟ್

    ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆ ಸೇರಿದ್ದಾರೆ. 7 ಜನ ಗಂಡು ಮಕ್ಕಳ ಪೈಕಿ ಕಿರಿಯ ಮಗ ಗೋವಿಂದರಾಜ ಮಾತ್ರ ಪುಟ್ಟವ್ವಳಿಗೆ ಕೆಲವು ವರ್ಷಗಳ ಕಾಲ ನೋಡಿಕೊಂಡಿದ್ದರು. ಆದರೆ ಅವರ ಆರ್ಥಿಕ ಪರಿಸ್ಥಿತಿ ಪ್ರಸ್ತುತ ಸರಿ ಇಲ್ಲ. ಪತಿಯ ಹೆಸರಿನಲ್ಲಿರೋ ಆಸ್ತಿಗಳಲ್ಲಿ ಅಲ್ಪಸ್ವಲ್ಪ ಮಾರಾಟ ಮಾಡಿ ಜೀವನ ಸಾಗಿಸಬೇಕು ಎಂದರೆ ಗಂಡು ಮಕ್ಕಳು ಅದಕ್ಕೂ ಬಿಡುತ್ತಿಲ್ಲ. ಎರಡು ಹೊತ್ತಿನ ಊಟವನ್ನೂ ಹಾಕುತ್ತಿಲ್ಲ. ಹೀಗಾಗಿ 11 ಜನ ಮಕ್ಕಳಿದ್ರೂ ಅಕ್ಕಪಕ್ಕದ ಮನೆಯವರು, ಅವರಿವರು ಕೊಟ್ಟ ಊಟ ಮಾಡಿ ಬದುಕಬೇಕಾಗಿದೆ ಎಂದು ಪುಟ್ಟವ್ವ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

    ಮಕ್ಕಳು ನೋಡಿಕೊಳ್ಳದೇ ಇರೋದನ್ನು ಕಂಡು ಜೀವನವೇ ಸಾಕು ಸಾಕು ಅನ್ನಿಸಿದೆ. ನನಗೆ ದಯಾಮರಣ ಕೊಡಿಸಿ ಅಂತ ವೃದ್ಧ ತಾಯಿ ಪುಟ್ಟವ್ವ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಬಳಿ ತನ್ನ ಅಳಲು ತೋಡಿಕೊಂಡಿದ್ದಾಳೆ. ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಬರೆದಿರೋ ಪತ್ರ ಹಿಡಿದು ಬಂದಿರೋ ವೃದ್ಧೆಯನ್ನು ಭೇಟಿಯಾಗಿ ಹಿರಿಯ ನಾಗಕರಿಕರ ಕಲ್ಯಾಣ ಇಲಾಖೆ ಅಧಿಕಾರಿ ಆಶು ನದಾಫ ಸಮಸ್ಯೆ ಆಲಿಸಿದರು. ಪುಟ್ಟವ್ವಳಿಗೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು. ಉಳಿದಂತೆ ಪುಟ್ಟವ್ವಳಿಗೆ ಯಾವುದೇ ಸಮಸ್ಯೆ ಆಗದಂತೆ ಉಳಿದುಕೊಳ್ಳಲು ವೃದ್ಧಾಶ್ರಮದಲ್ಲಿ ವ್ಯವಸ್ಥೆ ಕಲ್ಪಿಸೋದಾಗಿ ಹೇಳಿದ್ದಾರೆ. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ – ಕುಟುಂಬದ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ

    ಪುಟ್ಟವ್ವ ದಯಾಮರಣ ಕೋರಿ ಪತ್ರ ಹಿಡಿದುಕೊಂಡು ಬಂದಿದ್ದು ಗಮನಿಸಿ ಹಿರಿಯ ನಾಗರಿಕ ಕಲ್ಯಾಣ ಇಲಾಖೆ ಅಧಿಕಾರಿ ವೃದ್ಧೆಗೆ ಧೈರ್ಯ ತುಂಬಿದ್ದಾರೆ. ನಂತರ ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ಪುಟ್ಟವ್ವ ಮಕ್ಕಳಿಂದ ಆಗಿರೋ ಸಮಸ್ಯೆ ವಿವರಿಸಿದ್ದಾಳೆ. ಆದರೆ 11 ಜನ ಮಕ್ಕಳಿದ್ರೂ ಇಳಿ ವಯಸ್ಸಿನಲ್ಲಿರೋ ಆಕೆಯನ್ನು ನೋಡಿಕೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮನೆಯ ಸುತ್ತ ಕಂದಕ ತೋಡಿ ಕಾರ್ಮಿಕನಿಗೆ ಹಿಂಸೆ – ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ

    ಮನೆಯ ಸುತ್ತ ಕಂದಕ ತೋಡಿ ಕಾರ್ಮಿಕನಿಗೆ ಹಿಂಸೆ – ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ

    ಮಡಿಕೇರಿ: ಮನೆಯ ಸುತ್ತಲೂ ಕಂದಕ ತೋಡಿ ಕಾರ್ಮಿಕನಿಗೆ ಹಿಂಸೆ ನೀಡುತ್ತಿರುವ ತೋಟದ ಮಾಲೀಕರ ಕ್ರಮದಿಂದ ಬೇಸತ್ತು ಕಾರ್ಮಿಕನ ಕುಟುಂಬದ ಸದಸ್ಯರು ದಯಾಮರಣ ನೀಡಬೇಕೆಂದು ರಾಷ್ಟ್ರಪತಿಗೆ ಪತ್ರ ಬರೆದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

    ಹೌದು, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾಮದಲ್ಲಿ ದುಬಾರಿ ಗ್ರೂಪ್‌ಗೆ ಸೇರಿದ ಮಸ್ಕಲ್ ಕಾಫಿ ತೋಟದಲ್ಲಿ ವಾಸವಿರುವ ಕಾರ್ಮಿಕ ಸುಬ್ರಮಣಿ ಎಸ್ ಕಳೆದ 25 ವರ್ಷದಿಂದ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದರು. 2016ರಲ್ಲಿ ಯಾವುದೇ ನೋಟೀಸ್ ನೀಡದೇ ತೋಟದ ಮಾಲೀಕರು ಸುಬ್ರಮಣಿಯನ್ನು ಕೆಲಸದಿಂದ ತೆಗೆದುಹಾಕಿದ್ದರು. ಈ ಬಗ್ಗೆ ಜಿಲ್ಲಾ ಕಾರ್ಮಿಕ ನ್ಯಾಯಾಲಯದಲ್ಲಿ ದೂರು ನೀಡಿದ್ದರು.

    ನ್ಯಾಯಾಲಯದ ತೀರ್ಪು ಬರುವವರೆಗೂ ಕಾಫಿ ತೋಟದ ಮನೆಯಲ್ಲೇ ವಾಸವಿದ್ದ ಸುಬ್ರಮಣಿ ಕುಟುಂಬಕ್ಕೆ ಇದೀಗ ಮಾಲೀಕರು ತೊಂದರೆ ನೀಡುತ್ತಿದ್ದಾರೆ. ತೋಟದ ಮನೆಯಿಂದ ಕಾರ್ಮಿಕ ಹಾಗೂ ಅವರ ಕುಟುಂಬ ಹೊರಬರದಂತೆ ಮನೆಯ ಸುತ್ತಲೂ ಕಂದಕ ತೋಡಿದ್ದಾರೆ. ಈ ಬಗ್ಗೆ ಸುಬ್ರಮಣಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮನನೊಂದ ಕಾರ್ಮಿಕ ರಾಷ್ಟ್ರಪತಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ – ಪೈಲಟ್‌ಗಳ ಸ್ಥಿತಿ ಚಿಂತಾಜನಕ

    ಕಾರ್ಮಿಕ ಸುಬ್ರಮಣಿಗೆ ತೋಟದ ವತಿಯಿಂದ ನೀಡಿದ್ದ ಮನೆಯಲ್ಲಿ ಪತ್ನಿ, ಮಗಳೊಂದಿಗೆ ವಾಸವಾಗಿದ್ದಾರೆ. ಮೊದಲ ಮಹಡಿಯಲ್ಲಿ ಮನೆ ಇದ್ದು, ಕೆಳಭಾಗದಲ್ಲಿ ತೋಟದ ಸಾಮಗ್ರಿಗಳ ಕೊಠಡಿ ಇದೆ. ತೋಟದ ಮನೆಯನ್ನು ಬಿಟ್ಟು ತೆರಳಬೇಕೆಂದು ತೋಟದ ಮಾಲೀಕರು ಹಾಗೂ ವ್ಯವಸ್ಥಾಪಕರು ಆಗಿಂದಾಗ್ಗೆ ಕಿರುಕುಳ ನೀಡುತ್ತಿದ್ದರು ಎಂದು ಸುಬ್ರಮಣಿ ಆರೋಪಿಸಿದ್ದಾರೆ.

    ಸುಬ್ರಮಣಿ ಹಾಗೂ ಅವರ ಕುಟುಂಬ ಮನೆ ಖಾಲಿ ಮಾಡದ ಹಿನ್ನೆಲೆಯಲ್ಲಿ ಮಾಲೀಕರು 2 ಹಿಟಾಚಿ ಹಾಗೂ 2 ಜೆಸಿಬಿ ಬಳಸಿ ಮನೆಯ ಸುತ್ತಲೂ ಕಂದಕ ನಿರ್ಮಾಣ ಮಾಡಿದ್ದಾರೆ. ಇದೀಗ ಸುಬ್ರಮಣಿ ಮನೆಗೆ ತೆರಳುವ ರಸ್ತೆಯಲ್ಲಿ ಗುಂಡಿ ತೋಡಲಾಗಿದ್ದು, ಮನೆಯಿಂದ ಹೊರಬರಲು ಹಾಗೂ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಹೃದಯ ಸಂಬಂಧಿ ಸಮಸ್ಯೆಯಿಂದ ತೆಲಂಗಾಣ ಸಿಎಂ ಆಸ್ಪತ್ರೆಗೆ ದಾಖಲು

    ಈ ಬಗ್ಗೆ ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಸುಬ್ರಮಣಿ ಮನವಿ ಸಲ್ಲಿಸಿದ್ದರು. ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ನೀಡಿದ ದೂರಿನನ್ವಯ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

    ಮನೆಯ ಸುಮಾರು 15 ಅಡಿ ಕೆಳಕ್ಕೆ ಕಂದಕ ನಿರ್ಮಾಣ ಮಾಡಿರುವ ಕಾರಣ ಮನೆಗೆ ತೆರಳಲು ಹಾಗೂ ಮನೆಯಿಂದ ಹೊರಹೋಗಲು ಸುಬ್ರಮಣಿ ಕುಟುಂಬಕ್ಕೆ ಸಾಧ್ಯವಾಗದೇ ಗೃಹಬಂಧನದಲ್ಲಿ ಇದ್ದಾರೆ. ಇದೀಗ ಏಣಿಯ ಸಹಾಯದಿಂದ ಸುಬ್ರಮಣಿ ಹಾಗೂ ಮಗಳು ಅಗತ್ಯ ಸಾಮಗ್ರಿಗಳ ಖರೀದಿಗೆ ತೆರಳುತ್ತಿದ್ದಾರೆ. ಆದರೆ ಗ್ಯಾಸ್ ಸೇರಿದಂತೆ ಭಾರವಾದ ವಸ್ತುಗಳನ್ನು ಮನೆಗೆ ಸಾಗಿಸುವುದು ಅಸಾಧ್ಯವಾಗಿದೆ. ಇದನ್ನೂ ಓದಿ: ಕೋವಿಡ್ ರೋಗಿಗಳಿಂದ ಪಡೆದ ಹೆಚ್ಚುವರಿ ಶುಲ್ಕ ಮರು ಪಾವತಿಗೆ ಜಿಲ್ಲಾಧಿಕಾರಿ ಆದೇಶ

    ಇನ್ನೂ ತನಗೆ ಸಿಗಬೇಕಾದ ಬೋನಸ್, ವೇತನ ಸೇರಿದಂತೆ ಅಂದಾಜು 19 ಲಕ್ಷ ರೂ. ಹಣ ತೋಟದ ಮಾಲೀಕರಿಂದ ಸಿಗಬೇಕು. ನ್ಯಾಯಾಲಯದಲ್ಲಿ ಈ ಬಗ್ಗೆ ದಾವೆ ಕೂಡ ಹೂಡಲಾಗಿದೆ. ಹೀಗಿರುವಾಗ ಏಕಾಏಕಿ ಮನೆಯ ಸುತ್ತಲೂ ಕಂದಕ ನಿರ್ಮಿಸಿ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಅನಾರೋಗ್ಯದಲ್ಲಿರುವ ಪತ್ನಿ, ಮಗಳ ಮುಖ ನೋಡಿ ಆತ್ಮಹತ್ಯೆಗೂ ಮನಸ್ಸು ಬರುತ್ತಿಲ್ಲ. ಹೀಗಾಗಿ ದಯಾಮರಣ ನೀಡಬೇಕೆಂದು ರಾಷ್ಟ್ರಪತಿಗಳಿಗೆ ಈ ಕುಟುಂಬ ಮನವಿ ಮಾಡಿದೆ.

  • ದಯಾಮರಣ ಕೋರಿ ಧರಣಿ ಕುಳಿತ ರೈತ ಕುಟುಂಬ

    ದಯಾಮರಣ ಕೋರಿ ಧರಣಿ ಕುಳಿತ ರೈತ ಕುಟುಂಬ

    ಚಾಮರಾಜನಗರ: ದಯಾಮರಣ ಕೋರಿ ರೈತ ಕುಟುಂಬ ಜಿಲ್ಲಾಡಳಿತ ಭವನದ ಮುಂದೆ ಧರಣಿ ಕುಳಿತಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಇದನ್ನೂ ಓದಿ:  ಒಂದೇ ತನಿಖೆಗೆ ಎರಡು ರೀತಿ ತನಿಖಾ ವರದಿ ಬರೆದ ಮೈಸೂರು ಪ್ರಾದೇಶಿಕ ಆಯುಕ್ತ

    ಗುಂಡ್ಲುಪೇಟೆಯ ಮಾಡ್ರಹಳ್ಳಿಯ ಎಂ.ನವೀನ, ಸಹೋದರ ಮಾದಪ್ಪ, ತಾಯಿ ಮಹಾದೇವಮ್ಮ ಎಂಬುವರು ಜಿಲ್ಲಾಡಳಿತ ಭವನದ ಮುಂದೆ ಗಾಂಧೀಜಿ ಫೋಟೋ ಇಟ್ಟು ಧರಣಿ ನಡೆಸಿದ್ದಾರೆ. ತಮ್ಮ ತಂದೆ ಹಾಗೂ ಎರಡನೇ ಹೆಂಡತಿ ಮಕ್ಕಳು ಕಿರುಕುಳ ನೀಡುತ್ತಿದ್ದಾರೆ. ನಮಗೆ ದಯಾಮರಣ ನೀಡಿ ಎಂದು ಧರಣಿ ಮಾಡಿದ್ದಾರೆ. ಇದನ್ನೂ ಓದಿ: ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ

    ತಮ್ಮ ಹೆಸರಿನಲ್ಲಿರುವ ಜಮೀನಿನನಲ್ಲಿ ಉಳುಮೆ ಮಾಡಲು ಹೋದರೆ ಹಲ್ಲೆ ಮಾಡುತ್ತಿದ್ದಾರೆ. ಪದೇಪದೇ ಅಡ್ಡಿಪಡಿಸುತ್ತಾ ಕಿರುಕುಳ ನೀಡಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಹಲವು ಬಾರಿ ದೂರು ನೀಡಿದರು ತಮಗರ ರಕ್ಷಣೆ ಸಿಗುತ್ತಿಲ್ಲ, ತಮಗೆ ದಯಾಮರಣ ನೀಡಿ ಎಂದು ಅವರು ಆಗ್ರಹಿಸಿದ್ದಾರೆ.

  • ಸ್ಥಳೀಯ ಪುಂಡರು, ಅಧಿಕಾರಿಗಳಿಗೆ ಹೆದರಿ ದಯಾಮರಣಕ್ಕೆ ಮುಂದಾದ ಮಾಜಿ ಸೈನಿಕ

    ಸ್ಥಳೀಯ ಪುಂಡರು, ಅಧಿಕಾರಿಗಳಿಗೆ ಹೆದರಿ ದಯಾಮರಣಕ್ಕೆ ಮುಂದಾದ ಮಾಜಿ ಸೈನಿಕ

    – ಕುಟುಂಬ ಸಮೇತ ದಯಾಮರಣಕ್ಕೆ ಅರ್ಜಿ

    ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸುರ ಗ್ರಾಮದ ಯೋಧನೋರ್ವ 17 ವರ್ಷಗಳ ದೇಶಸೇವೆ ಮಾಡಿ ಸದ್ಯ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿ ಬಳಿಕ ಯೋಧನಿಗೆ ಏನಾದ್ರೂ ಸಮಾಜಮುಖಿ ಕೆಲಸ ಮಾಡಬೇಕೆಂಬ ಹಂಬಲ. ಸೇನೆಗೆ ಸೇರಬೇಕೆಂಬ ಹಂಬಲವಿರುವ ಬಡ ಮಕ್ಕಳಿಗೆ ಉಚಿತ ಸೈನಿಕ ತರಬೇತಿ ಕೇಂದ್ರ ಕಟ್ಟಡ ಕಟ್ಟಲು ಸ್ಥಳೀಯ ಅಧಿಕಾರಿಗಳು ಹಾಗೂ ಪುಡಿ ರೌಡಿಗಳ ದೌರ್ಜನ್ಯಕ್ಕೆ ಬೇಸತ್ತಿದ್ದಾನೆ.

    ಸೇನೆಯಲ್ಲಿ ವೈರಿಗಳಿಗೆ, ನಕ್ಸಲ್‍ಗಳಿಗೆ ಹೆದರದ ಸೈನಿಕ, ಸ್ಥಳೀಯ ಪುಂಡರ ಜೀವ ಬೆದರಿಕೆಗೆ ಬೇಸತ್ತು ಕುಟುಂಬದ ಎಂಟು ಜನ ರಾಷ್ಟ್ರಪತಿಗೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹೌದು ಈರಣ್ಣ ಅಣ್ಣಿಗೇರಿ ಕುಟುಂಬ ಸದ್ಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ವಾಸವಿದ್ದಾರೆ. ಈ ಮಾಜಿ ಸೈನಿಕ ತನ್ನ ಕುಟುಂಬದ ಎಂಟು ಜನರು ರಾಷ್ಟ್ರಪತಿಗೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಾರಣ ಲಕ್ಷ್ಮೇಶ್ವರ ಪಟ್ಟಣದ ಈಶ್ವರ ನಗರದಲ್ಲಿ 16.ಡ ವ್ಯಾಪ್ತಿಯ ಪ್ಲ್ಯಾಟ್ ನಂಬರ್ 127/197 ಎಂಬುದನ್ನು ಸುಮಾರು 8 ವರ್ಷಗಳ ಹಿಂದೆಯೇ ಖರೀದಿಸಿದ್ದಾರೆ.

    ಈ ಜಾಗದಲ್ಲಿ ಮನೆ ಹಾಗೂ ಸೈನ್ಯಕ್ಕೆ ಸೇರಬೇಕೆಂಬ ಬಡ ಮಕ್ಕಳಿಗೆ ಉಚಿತ ಸೈನಿಕ ತರಬೇತಿ ಕೇಂದ್ರ ಆರಂಭಿಸಲು ಮುಂದಾಗಿದ್ದಾರೆ. ಆದರೆ ಸ್ಥಳೀಯ ಗಂಗಾಧರ ಗುಡಗೇರಿ ಹಾಗೂ ಮಂಜುನಾಥ ಮಾಗಡಿ ಎಂಬುವರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂಬುದು ಮಾಜಿ ಸೈನಿಕನ ಕುಟುಂಬದ ಆರೋಪವಾಗಿದೆ. ಯಾವುದೇ ಹುರುಳಿಲ್ಲದೇ ಕಟ್ಟಡ ಕಟ್ಟಲು ಅನುಮತಿ ನೀಡದೇ, ಸೈನಿಕನ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ. ಇದರಿಂದ ಹಂತಕರ ಕೈಯಲ್ಲಿ ಸಾವನ್ನಪ್ಪುವುದಕ್ಕಿಂತ ಸರ್ಕಾರದ ಎದುರು ಸಾವಿಗೆ ಶರಣಾಗುವುದೇ ಒಳ್ಳೆಯದು ಎಂದು ನೊಂದು ದಯಾಮರಣಕ್ಕೆ ಮುಂದಾಗಿದ್ದೇವೆ ಎಂದು ಮಾಜಿ ಸೈನಿಕ ಹೇಳಿದ್ದಾರೆ.

    ಮಾಜಿ ಸೈನಿಕ ಈರಣ್ಣ 17 ವರ್ಷ ಸೈನಿಕನಾಗಿ ಸೇವೆ ಸಲ್ಲಿಸಿದ್ದಾರೆ. ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ನಾಗಾಲ್ಯಾಂಡ್, ವೆಲ್ಲಿಂಗ್ಟನ್, ಸಿಯಾಚಿನ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಸೇನೆಯಿಂದ ನಿವೃತ್ತಿ ಹೊಂದಿದ್ದಾರೆ. ದಯಾಮರಣಕ್ಕೆ ಮಾಜಿ ಸೈನಿಕ 38 ವರ್ಷ ಈರಣ್ಣ ಅವರ ಪತ್ನಿ 32 ವರ್ಷದ ಕವಿತಾ, 3 ವರ್ಷದ ಪ್ರಕೃತಿ ಹಾಗೂ 5 ತಿಂಗಳ ಪ್ರಣಿತ್ ಜೊತೆಗೆ ಮಾಜಿ ಸೈನಿಕನ ಸಹೋದರ ಶಿವಲಿಂಗಪ್ಪ, ಅವರ ಪತ್ನಿ 34 ವರ್ಷದ ಶೋಭಾ, ಮಕ್ಕಳಾದ 13 ವರ್ಷದ ಶಿವಯೋಗಿ, 11 ವರ್ಷದ ಆದಿತ್ಯ ಹೀಗೆ ಒಟ್ಟು 8 ಜನ ದಯಾಮರಣ ಅರ್ಜಿಯಲ್ಲಿ ಹೆಸರು ನೋಂದಾಯಿಸಿದ್ದಾರೆ.

  • ಒಂದೇ ಗೋತ್ರದವನ ಜೊತೆ ಮದ್ವೆ – ರೊಚ್ಚಿಗೆದ್ದು ಮಗಳನ್ನು ಕೊಂದು 80 ಕಿ.ಮೀ ದೂರದಲ್ಲಿ ಎಸೆದ್ರು

    ಒಂದೇ ಗೋತ್ರದವನ ಜೊತೆ ಮದ್ವೆ – ರೊಚ್ಚಿಗೆದ್ದು ಮಗಳನ್ನು ಕೊಂದು 80 ಕಿ.ಮೀ ದೂರದಲ್ಲಿ ಎಸೆದ್ರು

    – 25 ವರ್ಷ ಮಗಳನ್ನು ಹತ್ಯೆಗೈದ ಪೋಷಕರು
    – ಪ್ರಿಯಕರನ ಜೊತೆ ರಹಸ್ಯ ವಿವಾಹ
    – ಪೋಷಕರು ಸೇರಿದಂತೆ 6 ಮಂದಿಯಿಂದ ಕೃತ್ಯ

    ನವದೆಹಲಿ: ಒಂದೇ ಗೋತ್ರದ ಹುಡುಗನನ್ನು ರಹಸ್ಯವಾಗಿ ಮದುವೆಯಾಗಿದ್ದಕ್ಕೆ ಪೋಷಕರೇ ಮಗಳನ್ನು ಕೊಲೆ ಮಾಡಿದ ಪ್ರಕರಣವನ್ನು ದೆಹಲಿ ಪೊಲೀಸರು 20 ದಿನಗಳ ನಂತರ ಬೇಧಿಸಿಸಿದ್ದಾರೆ.

    ಶೀತಲ್ ಚೌಧರಿ(25) ಕೊಲೆಯಾದ ಮಹಿಳೆ. ಪೋಷಕರಾದ ರವೀಂದರ್, ಸುಮನ್ ಜೊತೆಗೆ ಕೃತ್ಯಕ್ಕೆ ಸಹಕರಿಸಿದ್ದಕ್ಕೆ ನಾಲ್ವರು ಸಂಬಂಧಿಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಕಿಡ್ನಾಪ್ ದೂರು:
    ಜನವರಿ 31ರಂದು ಶೀತಲ್ ಚೌಧರಿ ಕಾಣಿಸದೇ ಇದ್ದಾಗ ಪತಿ ಅಂಕಿತ್ ಭಾಟಿ ಅತ್ತೆ, ಮಾವನ ಮನೆಗೆ ಹೋಗಿ ವಿಚಾರಿಸಿದ್ದಾರೆ. ಶೀತಲ್ ಚೌಧರಿಯ ಸಂಬಂಧಿಕರು, ಸ್ನೇಹಿತರನ್ನು ವಿಚಾರಿಸಿದಾಗಲೂ ಎಲ್ಲೂ ಪತ್ತೆಯಾಗದೇ ಇದ್ದಾಗ ಫೆ.17 ರಂದು ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪತಿ ಅಂಕಿತ್ ಭಾಟಿ ಅಪಹರಣ ದೂರು ದಾಖಲಿಸುತ್ತಾರೆ.

    ಜನವರಿ 20 ರಂದು ಪತ್ನಿಯ ತಾನು ಮದುವೆಯಾದ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾಳೆ. ಈ ವಿಚಾರ ತಿಳಿದು ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

    ರಹಸ್ಯ ಮದುವೆ: ಶೀತಲ್ ಚೌಧರಿ ಮತ್ತು ಅಂಕಿತ್ ಭಾಟಿ ಕುಟುಂಬ ಡೈರಿ ಉದ್ಯಮ ನಡೆಸುತ್ತಿದ್ದು ಎರಡು ಕುಟುಂಬಗಳು ಸಮೀಪವೇ ನೆಲೆಸಿತ್ತು. ಇಬ್ಬರು ಪರಿಚಯದಲ್ಲಿದ್ದ ಕಾರಣ ಮೂರು ವರ್ಷದ ಹಿಂದೆ ಶೀತಲ್ ಮತ್ತು ಅಂಕಿತ್ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದರು.

    ರಹಸ್ಯವಾಗಿ ಸುತ್ತಾಡುತ್ತಿದ್ದ ಇವರಿಬ್ಬರು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮದುವೆಯಾಗಿದ್ದರು. ಮದುವೆಯಾಗಿದ್ದರೂ ದಂಪತಿ ಪ್ರತ್ಯೇಕವಾಗಿ ಪೋಷಕರ ಜೊತೆ ನೆಲೆಸಿದ್ದರು.

    ಜನವರಿ 29 ರಂದು ಮನೆಯಲ್ಲಿ ಮದುವೆ ವಿಚಾರ ಪ್ರಸ್ತಾಪಗೊಂಡಾಗ ಶೀತಲ್ ತಾನು ರಹಸ್ಯವಾಗಿ ಮದುವೆಯಾದ ವಿಚಾರವನ್ನು ತಿಳಿಸಿದ್ದಾಳೆ. ಈ ವಿಚಾರ ಕೇಳಿ ಕೋಪಗೊಂಡ ಪೋಷಕರು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

    ಕಾಲುವೆಗೆ ಎಸೆದ್ರು:
    ಕೊಲೆ ಮಾಡಿದ ಮೃತದೇಹವನ್ನು ಏನು ಮಾಡುವುದು ತಿಳಿಯದೇ ಇದ್ದಾಗ ಕಾರಿನಲ್ಲಿ ಎಸೆದು ಬರುವ ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಎರಡು ಕಾರಿನಲ್ಲಿ 6 ಮಂದಿ 80 ಕಿ.ಮೀ ದೂರ ಪ್ರಯಾಣಿಸಿ ಉತ್ತರ ಪ್ರದೇಶದ ಸಿಕಂದರಾಬಾದ್ ಬಳಿಯ ಕಾಲುವೆಯಲ್ಲಿ ಎಸೆದು ಮನೆಗೆ ಬಂದಿದ್ದಾರೆ.

    ಕಾಲುವೆಗೆ ಬಿದ್ದ ಶೀತಲ್ ಮೃತ ದೇಹ ನೀರಿನಲ್ಲಿ ತೇಲಿಕೊಂಡು ಅಲಿಘಢಕ್ಕೆ ಬಂದಿತ್ತು. ಗ್ರಾಮಸ್ಥರು ಶವವನ್ನು ನೋಡಿ ಪೊಲೀಸರಿಗೆ ತಿಳಿಸಿದ್ದರು. ಕಾಲುವೆಯಲ್ಲಿ ಅಪರಚಿತ ಮಹಿಳೆಯ ಶವಪತ್ತೆಯಾದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಹೆಣವನ್ನು ಸುಟ್ಟಿದ್ದರು. ಈ ವೇಳೆ ಶವದಲ್ಲಿದ್ದ ಉಡುಪು ಮತ್ತು ಆಕೆ ದೇಹದಲ್ಲಿದ್ದ ಇತರೇ ವಸ್ತುಗಳನ್ನು ರಕ್ಷಿಸಿಟ್ಟಿದ್ದರು.

    ಫೆ.17 ರಂದು ಪ್ರಕರಣ ದಾಖಲಿಸಿದ ನಂತರ ದೆಹಲಿ ಪೊಲೀಸರು ಶೀತಲ್ ಆಪ್ತರನ್ನು ಸ್ನೇಹಿತರನ್ನು ವಿಚಾರಿಸಿದ್ದಾರೆ. ಬಳಿಕ ಪೋಷಕರನ್ನು ವಿಚಾರಿಸಿದಾಗ ಗೊಂದಲದ ಹೇಳಿಕೆ ನೀಡಿದ್ದಾರೆ. ಅನುಮಾನ ಬಂದು ಮತ್ತಷ್ಟು ವಿಚಾರಿಸಿದಾಗ ಪುತ್ರಿಯನ್ನು ಸಂಬಂಧಿಕರ ಜೊತೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.

    ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಶೀತಲ್ ಕುಟುಂಬದ ಒಬ್ಬ ಸದಸ್ಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದೆವು. ಈ ವೇಳೆ ಒಬ್ಬರ ಹೇಳಿಕೆಗೂ ಮತ್ತೊಬ್ಬರ ಹೇಳಿಕೆಗೂ ತಾಳೆ ಆಗುತ್ತಿರಲಿಲ್ಲ. ಒಬ್ಬ ಸಂಬಂಧಿ ಅವಳು ಈಗಾಗಲೇ ಸತ್ತಿದ್ದಾಳೆ, ಅವಳು ಬರುವುದಿಲ್ಲ ಎಂದು ಬಾಯಿಬಿಟ್ಟಿದ್ದ. ಈ ಹೇಳಿಕೆ ಬರುತ್ತಿದ್ದಂತೆ ಆಕೆಯನ್ನು ಕೊಲೆ ಮಾಡಿರುವುದು ದೃಢವಾಯಿತು ಎಂದು ತಿಳಿಸಿದ್ದಾರೆ.

    ಒಂದೇ ಗೋತ್ರ:
    ಮಗಳ ಮತ್ತು ಆಕೆಯ ಪತಿ ಗೋತ್ರ ಒಂದೇ ಆಗಿದೆ. ಈ ಕಾರಣಕ್ಕೆ ನಾವು ಕೊಲೆ ಮಾಡಿ ಸಂಬಂಧಿಕರ ಸಹಾಯದಿಂದ ಕಾಲುವೆಗೆ ಶವವವನ್ನು ಎಸೆದಿದ್ದೆವು ಎಂದು ತಿಳಿಸಿದ್ದಾರೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ ನೆಟ್‍ವರ್ಕ್ ಪರಿಶೀಲನೆ ವೇಳೆ ಜ.29 ರಂದು ಕೊಲೆ ಮಾಡಿದ ಸ್ಥಳದಲ್ಲೇ ಆರೋಪಿಗಳು ಓಡಾಡಿದ್ದರು ಎನ್ನುವುದಕ್ಕೆ ಮೊಬೈಲ್ ಟವರ್ ಲೋಕೇಶನ್ ಸಾಕ್ಷ್ಯ ಸಿಕ್ಕಿತ್ತು.

  • ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ, ಮಗನಿಂದ ತಾಯಿಯ ದಯಾಮರಣಕ್ಕೆ ಮನವಿ

    ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ, ಮಗನಿಂದ ತಾಯಿಯ ದಯಾಮರಣಕ್ಕೆ ಮನವಿ

    ತುಮಕೂರು:ನಿಗೂಢ ಖಾಯಿಲೆಯಿಂದ ನರಳುತಿದ್ದ ತಾಯಿಯ ದಯಾಮರಣಕ್ಕೆ ಅನುಮತಿ ಕೊಡುವಂತೆ ಮಗನೊಬ್ಬ ತುಮಕೂರು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.

    ನಿಸ್ತೇಜ ಸ್ಥಿತಿಯಲ್ಲಿರುವ ತಾಯಿಯನ್ನು ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ ದಯಾಮರಣಕ್ಕಾಗಿ ಮಗ ಅಂಗಲಾಚಿದ್ದಾರೆ. ತುಮಕೂರು ನಗರದ ಗಾರ್ಡನ್ ರಸ್ತೆಯ ನಿವಾಸಿ ನಾಗರಾಜ್ ತನ್ನ ತಾಯಿ ನಾಗರತ್ನಮ್ಮಾರ ದಯಾಮರಣಕ್ಕಾಗಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದಯಾಮರಣಕ್ಕೆ ಸುಪ್ರೀಂ ಅನುಮತಿ: ಏನಿದು ಲಿವಿಂಗ್ ವಿಲ್? ತೀರ್ಪಿನಲ್ಲಿ ಏನಿದೆ? ತಪ್ಪು ಮಾಡಿದ್ರೆ ಶಿಕ್ಷೆ ಏನು?

    ಕೈಕಾಲು ಸ್ವಾದೀನ ಕಳೆದುಕೊಂಡ ನಾಗರತ್ನಮ್ಮ ಕಳೆದ 10 ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ನಾಗರತ್ನಮ್ಮ ಅವರಿಗೆ ಎಷ್ಟೇ ಚಿಕಿತ್ಸೆ ಕೊಡಿಸಿದರೂ ಕಾಯಿಲೆ ಮಾತ್ರ ಗುಣಮುಖವಾಗಿರಲಿಲ್ಲ. ಇದರಿಂದ ಬೇಸತ್ತ ಮಗ ನಾಗರಾಜು ತಾಯಿಯನ್ನು ಕರೆದುಕೊಂಡು ಡಿಸಿ ಕಚೇರಿ ಬಳಿ ಹೋಗಿ ತಾಯಿಯ ದಯಾಮರಣಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.

    ನಂತರ ತಾಯಿ ಮಗನ ಪರಿಸ್ಥಿತಿ ನೋಡಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರು ತಕ್ಷಣ ನಾಗರತ್ನಮ್ಮಾಳರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಯಾಮರಣಕ್ಕೆ ಸುಪ್ರೀಂ ಅನುಮತಿ: ಏನಿದು ಲಿವಿಂಗ್ ವಿಲ್? ತೀರ್ಪಿನಲ್ಲಿ ಏನಿದೆ? ತಪ್ಪು ಮಾಡಿದ್ರೆ ಶಿಕ್ಷೆ ಏನು?

    ದಯಾಮರಣಕ್ಕೆ ಸುಪ್ರೀಂ ಅನುಮತಿ: ಏನಿದು ಲಿವಿಂಗ್ ವಿಲ್? ತೀರ್ಪಿನಲ್ಲಿ ಏನಿದೆ? ತಪ್ಪು ಮಾಡಿದ್ರೆ ಶಿಕ್ಷೆ ಏನು?

    ನವದೆಹಲಿ: ದಯಾಮರಣ ಆಯ್ಕೆ ಮಾಡುವುದು ಮೂಲಭೂತ ಹಕ್ಕು ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

    ಮುಖ್ಯ ನ್ಯಾ. ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಪಂಚ ಪೀಠದ ನ್ಯಾಯಾಧೀಶರಾದ ಎಕೆ ಸಿಕ್ರಿ, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಅವರಿದ್ದ ಪೀಠ ಕೆಲ ಮಾರ್ಗಸೂಚಿಗಳನ್ನು ತಿಳಿಸಿ ದಯಾಮರಣಕ್ಕೆ ಅನುಮತಿ ನೀಡಿದೆ.

    ಯಾವುದೇ ಒಬ್ಬ ವ್ಯಕ್ತಿ ವೈದ್ಯಕೀಯ ಮಂಡಳಿ ಮತ್ತು ಹೈಕೋರ್ಟ್ ಅನುಮತಿ ಪಡೆದ ನಂತರ ದಯಾಮರಣ ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ಅಲ್ಲದೇ ಆ ವ್ಯಕ್ತಿಗೆ ತನ್ನ ಜೀವ ರಕ್ಷಿಸಲು ಬೇಕಾದ ಮದ್ದು ಮತ್ತು ವೈದ್ಯಕೀಯ ಸವಲತ್ತು ನಿರಾಕರಿಸುವ ಹಕ್ಕಿದೆ ಎಂದು ತಿಳಿಸಿದೆ. ಆದರೆ ಚುಚ್ಚುಮದ್ದು ನೀಡಿ ಸಾಯಿಸಲು ಅನುಮತಿ ನೀಡುವುದಿಲ್ಲ ಎಂದು ನ್ಯಾಯಾಲಯ ತನ್ನ ಐತಿಹಾಸಿಕ ತೀರ್ಪಿನಲ್ಲಿ ಉಲ್ಲೇಖಿಸಿದೆ.

    ದಯಾಮರಣ ಎಂದರೇನು?
    ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಯೊಬ್ಬ ಮುಂದೆ ಈ ಸಮಸ್ಯೆಯನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲದ ಸಂದರ್ಭದಲ್ಲಿ ತನಗೆ ಮರಣದ ದಯೆಯನ್ನು ನೀಡಿ ಎಂದು ಅರ್ಜಿ ಮೂಲಕ ಕೇಳಿಕೊಳ್ಳುವುದೆ ದಯಾಮರಣ. ಹಲವು ರಾಷ್ಟ್ರಗಳಲ್ಲಿ ದಯಾಮರಣಕ್ಕೆ ಅನುಮತಿ ಇದೆ.

    ಯುಥೆನೇಸಿಯಾ ಎಂದು ಕರೆಯುವುದು ಯಾಕೆ?
    ಯುಥೆನೇಸಿಯಾ ಮತ್ತು ದಯಾಮರಣ ಎರಡೂ ಒಂದೇ. ಗ್ರೀಕ್ ಭಾಷೆಯಲ್ಲಿ ಒಳ್ಳೆಯ ಸಾವು ಎನ್ನುವುದಕ್ಕೆ ಯುಥೆನೇಸಿಯಾ ಎಂದು ಕರೆಯಲಾಗುತ್ತದೆ.

    ಸುಪ್ರೀಂ ಹೇಳಿದ್ದು ಏನು?
    ವ್ಯಕ್ತಿಯ ಕಾಯಿಲೆ ಗುಣಮುಖವಾಗುವುದೇ ಇಲ್ಲ ಎಂದು ವೈದ್ಯಕೀಯ ಮಂಡಳಿ ದೃಢಪಡಿಸಿದರೆ ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸುವ ಮೂಲಕ ನಿಷ್ಕ್ರಿಯ ದಯಾಮರಣ ಮಾತ್ರ ನೀಡಬಹುದು. ಆದರೆ ಚುಚ್ಚುಮದ್ದು ನೀಡಿ ಸಾಯಿಸುವಂತಿಲ್ಲ. ಇದೇ ವೇಳೆ ವೈದ್ಯಕೀಯ ಮಂಡಳಿ ವ್ಯಕ್ತಿಯ ಗುಣಪಡಿಸದ ಕಾಯಿಲೆ ಕುರಿತು ದೃಢಪಡಿಸಿದರೆ ವ್ಯಕ್ತಿಯ ಜೀವ ರಕ್ಷಿಸುವ ವೈದ್ಯಕೀಯ ಸವಲತ್ತು ನಿರಾಕರಿಸಬಹುದು ಎಂದು ಹೇಳಿದೆ.

    ಅರ್ಜಿ ಸಲ್ಲಿಸಿದವರು ಯಾರು?
    2005 ರಲ್ಲಿ ‘ಕಾಮನ್ ಕಾಸ್’ ಹೆಸರಿನ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು `ಲಿವಿಂಗ್ ವಿಲ್’ ಮೂಲಕ ದಯಾಮರಣ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಬಹು ವರ್ಷಗಳಿಂದ ಕಾಯಿಲೆಯಿಂದ ನರಳುತ್ತಿರುವ ರೋಗಿಗಳಿಗೆ ಪರೋಕ್ಷ ದಯಾಮರಣಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿತ್ತು. 2011ರಲ್ಲಿ ಭಾರತದ ಸುಪ್ರೀಂಕೋರ್ಟ್ 37 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ನರಳಿದ್ದ ನರ್ಸ್ ಅರುಣಾ ಶಾನ್‍ಭಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ `ಪರೋಕ್ಷ ದಯಾಮರಣ’ಕ್ಕೆ ಅನುಮತಿ ನೀಡಿರಲಿಲ್ಲ. ಈ ತೀರ್ಪು ಪ್ರಕಟವಾದ ಬಳಿಕ ದಯಾಮರಣವನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎನ್ನುವ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಕೋರ್ಟ್ ಐದು ಮಂದಿ ನ್ಯಾಯಧೀಶರ ಪಂಚಪೀಠವನ್ನು ರಚಿಸಿತ್ತು.

    ಪ್ರತ್ಯಕ್ಷ ಮತ್ತು ಪರೋಕ್ಷ ದಯಾಮರಣ ಎಂದರೇನು?
    ಅಂಗಾಂಗಗಳು ನಿಷ್ಕ್ರೀಯಗೊಂಡಿರುವ ರೋಗಿಗೆ ನೀಡಿರುವ ವೆಂಟಿಲೇಟರ್ ಸಹಿತ ಜೀವಾಧಾರ ವ್ಯವಸ್ಥೆಯನ್ನು ತೆಗೆಯುವುದು ಪರೋಕ್ಷ ದಯಾಮರಣ. ಒಬ್ಬ ವ್ಯಕ್ತಿಗೆ ಮಾರಣಾಂತಿಕ ರಾಸಾಯನಿಕವನ್ನು ನೀಡಿ ಹತ್ಯೆ ಮಾಡುವುದು ಪ್ರತ್ಯಕ್ಷ ದಯಾಮರಣ. ಪ್ರತ್ಯಕ್ಷ ದಯಾಮರಣ ಕಾನೂನುಬಾಹಿರ.

    ಏನಿದು ಲಿವಿಂಗ್ ವಿಲ್?
    ವ್ಯಕ್ತಿಯೊಬ್ಬ ನಾನು ಮೃತಪಟ್ಟ ನಂತರ ನನ್ನ ಆಸ್ತಿಯನ್ನು ಯಾರಿಗೆ ಹಂಚಬೇಕು ಇತ್ಯಾದಿ ವಿಚಾರಗಳನ್ನು ಲಿಖಿತವಾಗಿ ಬರೆಯುವುದಕ್ಕೆ ವಿಲ್ ಎಂದು ಕರೆಯುತ್ತಾರೆ. ಈ ವಿಲ್ ಎಲ್ಲರಿಗೂ ತಿಳಿದಿದ್ದರೂ ಲಿವಿಂಗ್ ವಿಲ್ ಸ್ವಲ್ಪ ಅದೇ ರೀತಿಯಾಗಿ ಬರುತ್ತದೆ. ಗಂಭೀರ ಚಿಕಿತ್ಸೆಗೆ ದಾಖಲಾಗುವ ಮೊದಲು ಅಥವಾ ಅನುಮತಿಯನ್ನು ನೀಡಲಾಗದ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ತನಗೆ ಯಾವ ರೀತಿಯ ಚಿಕಿತ್ಸೆಯನ್ನು ನೀಡಬೇಕು ಎನ್ನುವ ನಿರ್ಧಾರಗಳನ್ನು ಮುಂದೆ ಯಾರು ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿಸುವ ಲಿಖಿತ ದಾಖಲೆಯೇ ಲಿವಿಂಗ್ ವಿಲ್. ಶುಕ್ರವಾರ ಕೋರ್ಟ್ ರೋಗಿ ಲಿವಿಂಗ್ ವಿಲ್ ನೀಡಿದ್ದರೆ ದಯಾಮರಣ ಕಲ್ಪಿಸಬಹುದು ಎಂದು ಹೇಳಿದೆ. ಲಿವಿಂಗ್ ವಿಲ್ ಮೂಲಕ ದಯಾಮರಣ ಕಲ್ಪಿಸಿದ್ದರೆ ರೋಗಿ, ವೈದ್ಯರು ಹಾಗೂ ಪರಿಚಾರಕರರಿಗೆ ಕಾನೂನು ರಕ್ಷಣೆ ಇರುತ್ತದೆ.

    ದಯಾಮರಣ ವಿರೋಧಿಗಳ ವಾದ ಏನಿತ್ತು?
    ಒತ್ತಡ ಹೇರಿ ಲಿವಿಂಗ್ ವಿಲ್ ಬರೆದುಕೊಂಡು ರೋಗಿಯ ದೇಹದ ಅಂಗಾಂಗವನ್ನು ದುರುಪಯೋಗ ಮಾಡಬಹುದು. ಒಂದು ವೇಳೆ ಅವಕಾಶ ನೀಡಿದರೆ ಇದು ಹಣ ಮಾಡುವ ದಂಧೆಯಾಗಬಹುದು. ಹೀಗಾಗಿ ಅವಕಾಶ ನೀಡಬಾರದು ಎಂದು ವಾದಿಸಿದ್ದರು.

    ಕೇಂದ್ರದ ತಿದ್ದುಪಡಿ ಮಸೂದೆಯಲ್ಲಿ ಏನಿದೆ?
    ದೀರ್ಘ ಕಾಲದ ವಾಸಿಯಾಗದ ಕಾಯಿಲೆಗಳಿಂದ ಮರಣಶಯ್ಯೆಯಲ್ಲಿರುವ ರೋಗಿಗಳಿಗೆ ದಯಾಮರಣ ನೀಡುವ ಸಂಬಂಧ, ಕಳೆದ ವರ್ಷ ಮಸೂದೆಗೆ ಸರ್ಕಾರ ತಿದ್ದುಪಡಿ ತಂದಿತ್ತು. ಈ ಮಸೂದೆಯಲ್ಲಿ ದಯಾಮರಣಕ್ಕೆ ಅನುಮತಿ ನೀಡಲು ಆಸ್ಪತ್ರೆಗಳಲ್ಲಿ ಸಮಿತಿ ರಚಿಸಿ ಗುಣಮುಖವಾಗದ ಕಾಯಿಲೆ ಎಂದು ವೈದ್ಯಕೀಯ ಮಂಡಳಿ ದೃಢಪಡಿಸಬೇಕು. ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸಿ ದಯಾಮರಣ ಮಾತ್ರ ನೀಡಬಹುದು. ಆದರೆ ಚುಚ್ಚುಮದ್ದು ನೀಡಿ ಸಾಯಿಸುವಂತಿಲ್ಲ. ದಯಾಮರಣವನ್ನು ಸಹಜ ಮರಣ ಎಂದು ಪರಿಗಣಿಸಲಾಗುವುದು ಎನ್ನುವ ಅಂಶವಿತ್ತು.

    ಅಷ್ಟೇ ಅಲ್ಲದೇ ದಯಾಮರಣಕ್ಕೊಳಗಾದ ರೋಗಿ, ವೈದ್ಯರು, ಪರಿಚಾರಕರರಿಗೆ ಕಾನೂನು ರಕ್ಷಣೆ ಇರುತ್ತದೆ. ರೋಗಿಗೆ ಸ್ವಯಂ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಚಿಕಿತ್ಸೆ ಬೇಡ ಎಂದು ಆಪ್ತ ಸಂಬಂಧಿಕರ ಮನವಿ ಅಗತ್ಯ. ಎಲ್ಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ದಯಾಮರಣ ಮನವಿ ಸ್ವೀಕರಿಸಿ ಅದಕ್ಕೆ ಅನುಮತಿ ನೀಡುವ ಸಮತಿ ರಚಿಸಬೇಕು. ಬದುಕುವ ಸಾಧ್ಯತೆ ಇಲ್ಲ, ಆಯಸ್ಸು ಮುಂದೂಡಲು ಇಷ್ಟವಿಲ್ಲ ಎನ್ನುವ `ಲಿವಿಂಗ್‍ವಿಲ್’ ಅರ್ಜಿಯನ್ನು ಸಮಿತಿ ಪರಿಶೀಲಿಸಬೇಕು. ಸಮಿತಿಗೆ ತಪ್ಪು ಮಾಹಿತಿ ನೀಡಿ ದಯಾ ಮರಣಕ್ಕೆ ಅನುಮತಿ ಪಡೆದಿರುವುದು ಸಾಬೀತಾದರೆ 5-10 ವರ್ಷ ಜೈಲು ಶಿಕ್ಷೆಯ ಜೊತೆ 20 ಲಕ್ಷದಿಂದ 1 ಕೋಟಿ ರೂ. ದಂಡ ವಿಧಿಸಲು ಪರಿಷ್ಕೃತ ಕರಡು ಮಸೂದೆಯಲ್ಲಿ ಅವಕಾಶವಿದೆ.

  • ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಹಟ್ಟಿ ಚಿನ್ನದ ಗಣಿ ಕಾರ್ಮಿಕರು

    ರಾಯಚೂರು: ದೇಶದ ಏಕೈಕ ಚಿನ್ನ ಉತ್ಪಾದನಾ ಗಣಿ ಸಂಸ್ಥೆಯಾದ ರಾಯಚೂರಿನ ಹಟ್ಟಿ ಚಿನ್ನದ ಗಣಿ ಕಂಪೆನಿಯ ಕಾರ್ಮಿಕರು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

    ಕಂಪೆನಿಯು ವಿಭಾಗೀಯ ಸ್ಟೋರ್ ಪ್ರಾರಂಭಿಸಲು ಸಹಕಾರ ಸಂಘದ ವ್ಯವಹಾರಗಳನ್ನ ನಿಲ್ಲಿಸಿದ್ದು ಸುಮಾರು ವರ್ಷಗಳಿಂದ ದುಡಿದ ಕಾರ್ಮಿಕರನ್ನ ಕೈಬಿಟ್ಟಿದೆ. ಹೀಗಾಗಿ ಹಟ್ಟಿ ಚಿನ್ನದ ಗಣಿ ಸಹಕಾರ ಸಂಘದ 37 ಜನ ಕಾರ್ಮಿಕರಿಗೆ 22 ತಿಂಗಳಿನಿಂದ ಕೆಲಸವೂ ಇಲ್ಲ ಸಂಬಳವೂ ಇಲ್ಲ. 750 ದಿನಗಳಿಂದ ಶಾಂತಿಯುತ ಹೋರಾಟ ನಡೆಸಿದರೂ ಕಾರ್ಮಿಕರ ಸಮಸ್ಯೆಗೆ ಗಣಿ ಆಡಳಿತ ಮಂಡಳಿ ಸ್ಪಂದನೆ ನೀಡಿಲ್ಲ. ಹೀಗಾಗಿ ಕಾರ್ಮಿಕರು ಗಣಿಯ ಪ್ರಧಾನ ವ್ಯವಸ್ಥಾಪಕರ ಮೂಲಕ ಉದ್ಯೋಗ ಕೊಡಿ ಇಲ್ಲವೇ 37 ಜನ ಕಾರ್ಮಿಕರ ಕುಟುಂಬಳಿಗೆ ದಯಾಮರಣಕ್ಕೆ ಅವಕಾಶ ಕೊಡಿ ಅಂತ ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.

    ಫೆಬ್ರವರಿ 14 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಕಾರ್ಮಿಕರು ನಿರ್ಧರಿಸಿದ್ದಾರೆ. ಹೋರಾಟದಲ್ಲಿ ಯಾರಿಗೆ ಏನೇ ಆದ್ರೂ ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿಯೇ ಕಾರಣ ಅಂತ ಕಾರ್ಮಿಕರು ಎಚ್ಚರಿಸಿದ್ದಾರೆ.

    ಈಗಾಗಲೇ ಸಹಕಾರ ಸಂಘವನ್ನ ಸಮಾಪನಗೊಳಿಸಿ ಕಂಪೆನಿಯೇ ಸ್ಟೋರ್ ಪ್ರಾರಂಭಿಸಿದೆ. ಆದ್ರೆ ಕೆಲಸಗಾರರನ್ನ ಕಂಪೆನಿಯಲ್ಲಿ ಸೇರಿಸಿಕೊಳ್ಳದೇ ಸಂಬಳವನ್ನೂ ನೀಡದೆ ವೇತನ ಒಡಂಬಡಿಕೆಯ ನಿಯಮವನ್ನ ಉಲ್ಲಂಘನೆ ಮಾಡಿದೆ. ಕಾರ್ಮಿಕ ನೀತಿಯನ್ನ ಬದಿಗೊತ್ತಿ ತೆಗೆದುಕೊಂಡಿರುವ ನಿರ್ಧಾರದಿಂದ 37 ಜನ ಕಾರ್ಮಿಕ ಕುಟುಂಬಗಳು ಬೀದಿಗೆ ಬಂದಿವೆ ಎಂದು ದಿ ಕೋ-ಆಪರೇಟಿವ್ ಸ್ಟೋರ್ ಎಂಪ್ಲಾಯಿಸ್ ಅಸೋಸಿಯೇಷನ್ ಅಧ್ಯಕ್ಷ ಇಮಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.