Tag: European Union

  • ಯುರೋಪಿಯನ್‌ ಒಕ್ಕೂಟದೊಂದಿಗೆ ಟ್ರಂಪ್‌ ಬಿಗ್‌ ಡೀಲ್‌ – ಆಮದುಗಳ ಮೇಲೆ 15% ಸುಂಕ

    ಯುರೋಪಿಯನ್‌ ಒಕ್ಕೂಟದೊಂದಿಗೆ ಟ್ರಂಪ್‌ ಬಿಗ್‌ ಡೀಲ್‌ – ಆಮದುಗಳ ಮೇಲೆ 15% ಸುಂಕ

    – ಅಮೆರಿಕದಿಂದ 750 ಶತಕೋಟಿ ಡಾಲರ್‌ ಮೌಲ್ಯದ ಇಂಧನ ಖರೀದಿ
    – ಯುಎಸ್‌ನಲ್ಲಿ 600 ಶತಕೋಟಿ ಡಾಲರ್‌ ಹೂಡಿಕೆ ಮಾಡಲು ಡೀಲ್‌

    ವಾಷಿಂಗ್ಟನ್‌: ಯುರೋಪಿಯನ್‌ ಒಕ್ಕೂಟದೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಇದುವರೆಗಿನ ಅತಿದೊಡ್ಡ ವ್ಯಾಪಾರ ಒಪ್ಪಂದವನ್ನ (Biggest Trade Deal) ಘೋಷಣೆ ಮಾಡಿದ್ದಾರೆ. ಈ ಒಪ್ಪಂದದ ಅಡಿಯಲ್ಲಿ ಒಕ್ಕೂಟದಿಂದ ಬರುವ ಆಮದುಗಳ ಮೇಲೆ 15% ಸುಂಕ ವಿಧಿಸಲಾಗುತ್ತದೆ.

    ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಟ್ರಂಪ್‌ ತನ್ನ ದೇಶದ ವ್ಯಾಪಾರ ಸುಧಾರಿಸುವ ದೃಷ್ಟಿಯಲ್ಲಿ ಹಲವು ದೇಶಗಳ ಮೇಲೆ ಸುಂಕ ಸಮರ (Tariffs war) ಸಾರಿದ್ದಾರೆ. ಕೆಲ ದಿನಗಳ ಹಿಂದೆ ಟ್ರಂಪ್‌ 14 ದೇಶಗಳ ಮೇಲೆ ಸುಂಕ ವಿಧಿಸಿದ್ದರು. ಆಗಸ್ಟ್ 1 ರಿಂದಲೇ ಹೊಸ ಸುಂಕ ಜಾರಿಗೆ ಬರಲಿದೆ ಎಂದು ಘೋಷಿಸಿದ್ದರು. ಆದ್ರೆ ಈ ಪಟ್ಟಿಯಲ್ಲಿ ಭಾರತವನ್ನ ಹೊರಗಿಟ್ಟಿದ್ದರು. ಮುಂಬರುವ ಆಗಸ್ಟ್‌ 1ರಿಂದ ಯುರೋಪಿಯನ್‌ ಒಕ್ಕೂಟದ (European Union) ರಫ್ತಿನ ಮೇಲೆ 30% ಸುಂಕ ವಿಧಿಸುವುದಾಗಿ ಟ್ರಂಪ್‌ ಘೋಷಿದ್ದರು. ಈ ನಡುವೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, 30% ಸುಂಕದಿಂದ ಬಚಾವ್‌ ಆಗಿದೆ. ಇದನ್ನೂ ಓದಿ: ಆಸ್ಟ್ರೇಲಿಯಾದ ನೈಸರ್ಗಿಕ ವಿಪತ್ತಾದ ‘ಆಲ್ಗಲ್ ಬ್ಲೂಮ್’ – ಈ ಬಿಕ್ಕಟ್ಟಿನ ಹಿಂದಿನ ಕಾರಣವೇನು?

    ಸ್ಕಾಟ್ಲೆಂಡ್‌ನಲ್ಲಿರುವ ತಮ್ಮ ಗಾಲ್ಫ್ ರೆಸಾರ್ಟ್‌ನಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್‌ ನಡುವಿನ ಮಹತ್ವದ ಸಭೆಯಲ್ಲಿ ಇದುವರೆಗಿನ ಅತಿದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರನ್ವಯ ಯುರೋಪಿನ್‌ನಿಂದ ರಫ್ತಾಗುವ ಆಟೋಮೊಬೈಲ್, ಔಷಧಗಳು ಮತ್ತು ಅರೆವಾಹಕ ಸೇರಿದಂತೆ ಇತರೇ ಸರಕುಗಳ ಮೇಲೆ 15% ಸುಂಕವನ್ನಷ್ಟೇ ವಿಧಿಸಲಾಗುತ್ತದೆ.

    ನಾವು ಒಂದೊಳ್ಳೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಯಾವುದೇ ಸಾಮರ್ಥಯದಲ್ಲೂ ಈವರೆಗಿನ ಅತಿದೊಡ್ಡ ಒಪ್ಪಂದ ಇದೆಂದು ಟ್ರಂಪ್‌ ಹೇಳಿದ್ದಾರೆ. ಇದನ್ನೂ ಓದಿ: ಟೇಕಾಫ್‌ ವೇಳೆ ಕೈಕೊಟ್ಟ ಲ್ಯಾಂಡಿಂಗ್‌ ಗೇರ್‌ – ಬೋಯಿಂಗ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ

    ಮುಂದುವರಿದು… ಜೊತೆಗೆ ಒಪ್ಪಂದದ ಭಾಗವಾಗಿ 27 ರಾಷ್ಟ್ರಗಳ ಯುರೋಪಿಯನ್‌ ಒಕ್ಕೂಟ ಅಮೆರಿಕದಿಂದ 750 ಶತಕೋಟಿ ಡಾಲರ್‌ ಮೌಲ್ಯದ ಇಂಧನ ಖರೀದಿಸಲಿದೆ. ಜೊತೆಗೆ ಅಮೆರಿಕದಲ್ಲಿ 600 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಹೂಡಿಕೆ ಮಾಡಲಿವೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ನಂತೆಯೇ ಥಾಯ್ಲೆಂಡ್‌-ಕಾಂಬೋಡಿಯಾ ಯುದ್ಧ ನಿಲ್ಲಿಸಿದ್ದು ನಾನೇ: ಟ್ರಂಪ್‌

  • ಭಾರತದತ್ತ ಯುರೋಪಿಯನ್ ರಾಷ್ಟ್ರಗಳ ಹೆಜ್ಜೆ – ತಿಂಗಳಾಂತ್ಯಕ್ಕೆ 27 ರಾಷ್ಟ್ರಗಳ ಆಯುಕ್ತರ ತಂಡ ಭೇಟಿ

    ಭಾರತದತ್ತ ಯುರೋಪಿಯನ್ ರಾಷ್ಟ್ರಗಳ ಹೆಜ್ಜೆ – ತಿಂಗಳಾಂತ್ಯಕ್ಕೆ 27 ರಾಷ್ಟ್ರಗಳ ಆಯುಕ್ತರ ತಂಡ ಭೇಟಿ

    – 27 ರಾಷ್ಟ್ರಗಳ ಯುರೋಪಿಯನ್ ಆಯುಕ್ತರು ಇದೇ ಮೊದಲ ಬಾರಿ ಭಾರತಕ್ಕೆ

    ನವದೆಹಲಿ: ಆರ್ಥಿಕತೆಯಲ್ಲಿ ಜಗತ್ತಿಗೆ ಸ್ಪೂರ್ತಿಯಂತೆ ತೋರುವ ಭಾರತದತ್ತ ಈಗ ಯುರೋಪಿಯನ್ ರಾಷ್ಟ್ರಗಳೂ ಹೆಜ್ಜೆ ಹಾಕುತ್ತಿವೆ. ಇದೇ ತಿಂಗಳ ಅಂತ್ಯದ ವೇಳೆಗೆ 27 ಯುರೋಪಿಯನ್ ಯೂನಿಯನ್ (European Union) ಆಯುಕ್ತರ ತಂಡ ಭಾರತಕ್ಕೆ (India) ಭೇಟಿ ನೀಡಲಿದೆ.

    ಕೇಂದ್ರ ಸರ್ಕಾರದ ಅಧಿಕೃತ ಮೂಲಗಳಿಂದ ಈ ಮಾಹಿತಿ ಲಭ್ಯವಾಗಿದ್ದು, ಭಾರತದ ಆರ್ಥಿಕ ಬೆಳವಣಿಗೆಗೆ ಮಾರು ಹೋಗಿರುವ ಯುರೋಪಿಯನ್ ರಾಷ್ಟ್ರಗಳು ಒಟ್ಟಾಗಿ ಇದೇ ಮೊದಲ ಬಾರಿಗೆ ಭಾರತ ಭೇಟಿ ಕಾರ್ಯಕ್ರಮ ಹಾಕಿಕೊಂಡಿವೆ.

    ವಿಶ್ವದ ಅನೇಕ ರಾಷ್ಟ್ರಗಳು ಇಂದು ತೀರಾ ಆರ್ಥಿಕ ಹಿಂಜರಿತ ಕಾಣುತ್ತಿವೆ. ನಿಶ್ಚಲವಾದ ಯೂರೋ ಪ್ರದೇಶಕ್ಕೆ ಹೋಲಿಸಿದರೆ ಭಾರತದ ಆರ್ಥಿಕತೆ ಪ್ರತಿ ವರ್ಷ ಶೇ.5.4ರಷ್ಟು ವೃದ್ಧಿಸುತ್ತಿದೆ. ಇದನ್ನು ಮನಗಂಡಿರುವ 27 ಯುರೋಪಿಯನ್ ಯೂನಿಯನ್ ಆಯುಕ್ತರ ತಂಡವು ಭಾರತಕ್ಕೆ ಅನಿರೀಕ್ಷಿತ ಭೇಟಿ ಹಮ್ಮಿಕೊಂಡಿದೆ.

    ಆರ್ಥಿಕತೆಯಲ್ಲಿ ಭಾರತ ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಹೊಂದುತ್ತಿದ್ದು, ಯುರೋಪಿಯನ್ ರಾಷ್ಟ್ರಗಳಿಗೆ ಪ್ರೇರಣೆ ಮತ್ತು ಸ್ಫೂರ್ತಿಯಾಗಿ ಗೋಚರಿಸಿದೆ. ಹೀಗಾಗಿ 27 ಯುರೋಪಿಯನ್ ಯೂನಿಯನ್‌ ಆಯುಕ್ತರು ಒಟ್ಟಾಗಿ ಇದೇ ಪ್ರಥಮ ಬಾರಿಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ.

    ನಿಶ್ಚಲವಾದ ಯುರೋಪ್ ಪ್ರದೇಶಕ್ಕೆ ಹೋಲಿಸಿದರೆ ಭಾರತ ಆರ್ಥಿಕತೆಯಲ್ಲಿ ಹೆಜ್ಜೆ ಹೆಜ್ಜೆಗೂ ಪ್ರಗತಿ ಕಾಣುತ್ತಿದೆ. ಭಾರತದ ಈ ಕ್ರಿಯಾತ್ಮಕ ಬೆಳವಣಿಗೆ ಅಧ್ಯಯನದಿಂದ ಯುರೋಪ್ ರಾಷ್ಟ್ರಗಳ ಆರ್ಥಿಕ ಚೇತರಿಕೆಗೆ ಮದ್ದು ಗೋಚರಿಸಬಹುದು ಎಂಬ ಇಂಗಿತ ಈ 27 EU ಗಳದ್ದಾಗಿದೆ.

    2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಹೊಂದಿದೆ. ಕಳೆದ ದಶಕದಲ್ಲಿ ಭಾರತ ವಾರ್ಷಿಕ ಸರಾಸರಿ ಶೇ.7ರ ದರದಲ್ಲಿ ಬೆಳೆದಿದೆ. ಇದು ಭಾರತೀಯರ ಜೀವನ ಮಟ್ಟ ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತಿದ್ದು, ಯುರೋಪಿಯನ್ ರಾಷ್ಟ್ರಗಳ ಗಮನ ಸೆಳೆಯುತ್ತಿದೆ.

    ಭಾರತ 2017ರಲ್ಲಿ ಪರಿಚಯಿಸಿದ ಸರಕು ಮತ್ತು ಸೇವಾ ತೆರಿಗೆಯು ಆಂತರಿಕವಾಗಿ ಇದ್ದಂಥ ಆರ್ಥಿಕ ಮಿತಿ, ಗಡಿಗಳನ್ನು ತೆಗೆದುಹಾಕುವ ಮೂಲಕ ಒಂದೇ ಮಾರುಕಟ್ಟೆಯನ್ನು ಸೃಷ್ಟಿಸಿತು. ಭಾರತದ ಈ ಮಾದರಿಯನ್ನು ಅಳವಡಿಸಿಕೊಳ್ಳಲು ಯುರೋಪಿಯನ್ ಒಕ್ಕೂಟ ರಾಷ್ಟ್ರಗಳು ಶ್ರಮಿಸುತ್ತಿವೆ.

    ಭಾರತದಲ್ಲಿ ನಾಗರಿಕರ ಗುರುತನ್ನು ಅವರವರ ಫೋನ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗಳೊಂದಿಗೆ ಸಂಪರ್ಕಿಸುವ “ಇಂಡಿಯಾ ಸ್ಟ್ಯಾಕ್” ನಂತಹ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಯುರೋಪಿಯನ್ ಆಯುಕ್ತರು ಪ್ರಮುಖವಾಗಿ ಗಮನಿಸುತ್ತಾರೆ.

    ಭಾರತದ 28 ರಾಜ್ಯಗಳ ಸುಸಂಘಟಿತ ಆಡಳಿತವು ಈ ಯುರೋಪಿಯನ್ ಯೂನಿಯನ್ ಆಯುಕ್ತರನ್ನು ಪ್ರಮುಖವಾಗಿ ಸೆಳೆದಿದೆ. ಯುರೋಪಿಯನ್ ರಾಷ್ಟ್ರಗಳಿಗಿಂತ ಹೆಚ್ಚೇ ರಾಜ್ಯಗಳನ್ನು ಒಳಗೊಂಡಿದ್ದರೂ ಭಾರತದ “ವಿವಿಧತೆಯಲ್ಲಿ ಏಕತೆ” ಧ್ಯೇಯ ಮತ್ತು ಪರಿಣಾಮಕಾರಿ ಆಡಳಿತ ವ್ಯವಸ್ಥೆ ಯುರೋಪಿಯನ್ ಯೂನಿಯನ್ ಆಯುಕ್ತರ ಗಮನ ಸೆಳೆದಿದೆ.

    ಯುರೋಪಿಯನ್ 27 ರಾಷ್ಟ್ರಗಳ ಒಕ್ಕೂಟದ್ದು ವಿಚಿತ್ರ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ. ಹಾಗಾಗಿ ಯುರೋಪಿಯನ್ ನಾಗರಿಕರು ಸಾಮಾನ್ಯವಾಗಿ ಯುರೋಪಿಯನ್ ಯೂನಿಯನ್ ಹೆಚ್ಚು ಬಾಂಧವ್ಯ ಹೊಂದಿರುವುದಿಲ್ಲ. ಅವರು ತಮ್ಮ ಪ್ರತ್ಯೇಕ ದೇಶಗಳಿಗೆ ಆದ್ಯತೆ ನೀಡುತ್ತಾರೆ. ಹೀಗಾಗಿ ಈ ಅನಿರೀಕ್ಷಿತ ಭಾರತ ಭೇಟಿಯಿಂದ EU ಆಯುಕ್ತರು ಭಾರತದ ಏಕತೆ ಮತ್ತು ಬೆಳವಣಿಗೆ ವಿಧಾನದಲ್ಲಿ ಅಡಕವಾಗಿರುವ ಅಮೂಲ್ಯವಾದ ಅಂಶಗಳನ್ನು ಕಂಡುಕೊಳ್ಳಲಿದ್ದಾರೆ.

  • ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾಗೆ 7,100 ಕೋಟಿ ದಂಡ ವಿಧಿಸಿದ ಯುರೋಪ್‌

    ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾಗೆ 7,100 ಕೋಟಿ ದಂಡ ವಿಧಿಸಿದ ಯುರೋಪ್‌

    ಬ್ರಸೆಲ್ಸ್: ಯುರೋಪಿಯನ್‌ ಯೂನಿಯನ್‌ (European Union) ಫೇಸ್‌ಬುಕ್‌ (Facebook) ಕಂಪನಿಯ ಮಾತೃಂಸ್ಥೆ ಮೆಟಾಗೆ (Meta) 800 ಮಿಲಿಯನ್‌ ಯೂರೋ (ಅಂದಾಜು 7,100 ಕೋಟಿ ರೂ) ದಂಡವನ್ನು ವಿಧಿಸಿದೆ.

    ಆನ್‌ಲೈನ್ ವರ್ಗೀಕೃತ ಜಾಹೀರಾತುಗಳ ಸೇವೆಯಾದ Facebook Marketplace ಅನ್ನು ಅದರ ವೈಯಕ್ತಿಕ ಸಾಮಾಜಿಕ ನೆಟ್‌ವರ್ಕ್ ಫೇಸ್‌ಬುಕ್‌ಗೆ ಜೋಡಿಸಿದೆ. ಅಷ್ಟೇ ಅಲ್ಲದೇ ಇತರ ಆನ್‌ಲೈನ್ ವರ್ಗೀಕೃತ ಜಾಹೀರಾತುಗಳ ಸೇವಾ ಪೂರೈಕೆದಾರರ ಮೇಲೆ ವ್ಯಾಪಾರದ ಷರತ್ತನ್ನು ವಿಧಿಸುವ ಮೂಲಕ ತನ್ನ ಆಂಟಿಟ್ರಸ್ಟ್ ನಿಯಮವನ್ನು ಉಲ್ಲಂಘಿಸಿದೆ ಎಂದು ಯುರೋಪಿಯನ್‌ ಯೂನಿಯನ್‌ ಹೇಳಿದೆ.

    ಎಲ್ಲಾ ಫೇಸ್‌ಬುಕ್‌ ಬಳಕೆದಾರರು ಇಷ್ಟವಿಲ್ಲದಿದ್ದರೂ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ಗೆ ಭೇಟಿ ನೀಡುವಂತೆ ರೂಪಿಸಲಾಗಿದೆ. ಯುರೋಪಿಯನ್‌ ಯೂನಿಯನ್‌ ನಿಯಮದ ಪ್ರಕಾರ ಒಂದೇ ವೇದಿಕೆಯಲ್ಲಿ ಎರಡು ಸೇವೆಗಳನ್ನು ನೀಡುವಂತಿಲ್ಲ. ಇದನ್ನೂ ಓದಿ: ಐಫೋನ್‌ 16 ಆಯ್ತು ಈಗ ಇಂಡೋನೇಷ್ಯಾದಲ್ಲಿ ಗೂಗಲ್‌ ಪಿಕ್ಸೆಲ್‌ ಮಾರಾಟಕ್ಕೆ ನಿಷೇಧ

    ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಮೆಟಾ ತಿಳಿಸಿದೆ. ಫೇಸ್‌ಬುಕ್‌ ತನ್ನ ಮಾರ್ಕೆಟ್‌ಪ್ಲೇಸ್‌ ಸೇವೆಯನ್ನು 2016ರಲ್ಲಿ ಆರಂಭಿಸಿತ್ತು. ಒಂದು ವರ್ಷದ ಬಳಿಕ ಹಲವಾರು ಯುರೋಪ್‌ ರಾಷ್ಟ್ರಗಳಲ್ಲಿ ಈ ಸೇವೆಯನ್ನು ನೀಡತೊಡಗಿದೆ.

    27 ರಾಷ್ಟ್ರಗಳ ಯುರೋಪಿಯನ್ ಯೂನಿಯನ್  ಆಯೋಗವು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ದೊಡ್ಡ ಟೆಕ್‌ ಕಂಪನಿಗಳ ಮೇಲೆ ಭಾರೀ ದಂಡವನ್ನು ವಿಧಿಸುತ್ತಿದೆ. ಕಳೆದ ವರ್ಷ ಮೆಟಾ ಒಟ್ಟು125 ಬಿಲಿಯನ್ ಯುರೋ ಆದಾಯ ಗಳಿಸಿತ್ತು.

     

  • ಯುದ್ಧಪೀಡಿತ ಉಕ್ರೇನ್‌ಗೆ ಯುರೋಪಿಯನ್ ಯೂನಿಯನ್‌ನಲ್ಲಿ ಅಭ್ಯರ್ಥಿ ಸ್ಥಾನ

    ಯುದ್ಧಪೀಡಿತ ಉಕ್ರೇನ್‌ಗೆ ಯುರೋಪಿಯನ್ ಯೂನಿಯನ್‌ನಲ್ಲಿ ಅಭ್ಯರ್ಥಿ ಸ್ಥಾನ

    ಕೀವ್: ರಷ್ಯಾ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್‌ಗೆ ಯುರೋಪಿಯನ್ ಯೂನಿಯನ್(EU) ಅಭ್ಯರ್ಥಿ ಸ್ಥಾನ ನೀಡಿದೆ. ಯುರೋಪಿಯನ್ ಯೂನಿಯನ್ ನಾಯಕರು ಗುರುವಾರ ಉಕ್ರೇನ್ ಹಾಗೂ ಮಾಲ್ಡೋವಾಗೆ ಅಭ್ಯರ್ಥಿ ಸ್ಥಾನವನ್ನು ನೀಡಿದ್ದಾರೆ.

    ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದ 4 ದಿನಗಳ ಬಳಿಕ ಫೆಬ್ರವರಿ 28ರಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ದೇಶಕ್ಕೆ ತಕ್ಷಣವೇ ಒಕ್ಕೂಟದ ಸದಸ್ಯ ಸ್ಥಾನ ನೀಡುವಂತೆ ಕೋರಿಕೊಂಡಿದ್ದರು. ಬಳಿಕ ಉಕ್ರೇನ್‌ಗೆ ಅಭ್ಯರ್ಥಿ ಸ್ಥಾನ ನೀಡಬೇಕೆಂದು ಜೂನ್ 17ರಂದು ಯುರೋಪಿಯನ್ ಕಮಿಷನ್ ಶಿಫಾರಸು ಮಾಡಿತ್ತು. ಇದೀಗ ಉಕ್ರೇನ್ ಇಯುನ ಅಭ್ಯರ್ಥಿಯಾಗಿದೆ. ಇದನ್ನೂ ಓದಿ: ಸಾರ್ವಜನಿಕವಾಗಿ ಗನ್‌ ಒಯ್ಯುವುದು ಅಮೆರಿಕನ್ನರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್‌

    ಈ ಬಗ್ಗೆ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ತಮ್ಮ ದೇಶ ಹಾಗೂ ಮಾಲ್ಡೋವಾ ಮೇಲಿನ EU ನಿರ್ಧಾರ ಅನನ್ಯ ಹಾಗೂ ಐತಿಹಾಸಿಕ ಕ್ಷಣ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಚರ್ಚ್‌ಗಳೂ ಸೇರಿ 4 ತಿಂಗಳಲ್ಲಿ 150ಕ್ಕೂ ಹೆಚ್ಚು ಸ್ಮಾರಕಗಳು ನೆಲಸಮ – ಯುನೆಸ್ಕೋ ವರದಿ

    ಉಕ್ರೇನ್ ಭವಿಷ್ಯ ಇದೀಗ EU ನಲ್ಲಿದೆ. ಇನ್ನು ನಮಗೆ ನೆಮ್ಮದಿ ಸಿಗಬಹುದು ಅಥವಾ ಸಿಗದೇ ಹೋಗಬಹುದು. ಆದರೂ ನಾವಿನ್ನು ಗೆಲ್ಲುತ್ತೇವೆ ಹಾಗೂ ದೇಶವನ್ನು ಪುನರ್ ನಿರ್ಮಾಣ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    Live Tv

  • ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಎಲ್ಲದಕ್ಕೂ ಇನ್ಮುಂದೆ ಒಂದೇ ಚಾರ್ಜರ್!

    ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಎಲ್ಲದಕ್ಕೂ ಇನ್ಮುಂದೆ ಒಂದೇ ಚಾರ್ಜರ್!

    ಲಂಡನ್: ಇಲ್ಲಿಯವರೆಗೆ ಹೆಚ್ಚಾಗಿ ಬಳಸುವ ಗ್ಯಾಜೆಟ್‌ಗಳಲ್ಲಿ ಬೇರೆ ಬೇರೆ ರೀತಿಯ ಚಾರ್ಜಿಂಗ್ ಪೋರ್ಟ್‌ಗಳು ಕಾಣಸಿಗುತ್ತಿದ್ದವು. ಅದಕ್ಕೆ ಸರಿ ಹೊಂದುವಂತಹ ಬೇರೆ ಬೇರೆ ಚಾರ್ಜಿಂಗ್ ಕೇಬಲ್‌ಗಳನ್ನು ಯಾವಾಗಲೂ ಇಟ್ಟುಕೊಳ್ಳುವ ಅಗತ್ಯವೂ ಇತ್ತು. ಆದರೆ ಇನ್ನು ಮುಂದೆ ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಹೀಗೆ ಮೊದಲಾದ ಗ್ಯಾಜೆಟ್‌ಗಳಲ್ಲೂ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಇರಲಿದೆ. ಬೇರೆ ಬೇರೆ ರೀತಿಯ ಚಾರ್ಜಿಂಗ್ ಕೇಬಲ್‌ಗಳ ರಾಶಿ ಇಟ್ಟುಕೊಳ್ಳುವ ಅಗತ್ಯ ಬೀಳುವುದಿಲ್ಲ.

    ಹೌದು, ಎಲ್ಲಾ ರೀತಿಯ ಗ್ಯಾಜೆಟ್‌ಗಳಿಗೂ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಅನ್ನು ಕಡ್ಡಾಯಗೊಳಿಸಲು ಯುರೋಪಿಯನ್ ಯೂನಿಯನ್(ಇಯು) ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಇದರ ಪರಿಣಾಮವಾಗಿ ಇನ್ನು ಮುಂದೆ ತಯಾರಾಗಲಿರುವ ಎಲ್ಲಾ ರೀತಿಯ ಗ್ಯಾಜೆಟ್‌ಗಳಲ್ಲೂ ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಇರಲಿದೆ. ಇದನ್ನೂ ಓದಿ: ಸಂದೇಶ ಕಳುಹಿಸಿದ ಬಳಿಕವೂ ಎಡಿಟ್‌ಗೆ ಅವಕಾಶ ನೀಡಲಿದೆ ವಾಟ್ಸಪ್

    ಇಲ್ಲಿಯವರೆಗೆ ಬಿಡುಗಡೆಯಾಗಿರುವ ಗ್ಯಾಜೆಟ್‌ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಆದರೆ 2024ರ ಒಳಗಾಗಿ ಬಹುತೇಕ ಎಲ್ಲಾ ರೀತಿಯ ಸಾಧನಗಳಲ್ಲೂ ಟೈಪ್ ಸಿ ಪೋರ್ಟ್ ನೋಡಲು ಸಿಗಲಿದೆ. ಮುಖ್ಯವಾಗಿ ತನ್ನದೇ ಪ್ರತ್ಯೇಕ ಚಾರ್ಜಿಂಗ್ ಪೋರ್ಟ್ ರಚಿಸುವ ಆಪಲ್‌ಗೂ ಈ ನೀತಿ ಅನ್ವಯಿಸುವುದು ವಿಶೇಷ.

    ನಿಯಮ ಯಾಕೆ?
    ಒಂದೊಂದು ಸಾಧನಗಳಿಗೆ ಒಂದೊಂದು ಚಾರ್ಜಿಂಗ್ ಕೇಬಲ್‌ಗಳು ಇರುವುದರಿಂದ ಹಾಳಾದ ಬಳಿಕ ಹೆಚ್ಚು ಹೆಚ್ಚು ಎಲೆಕ್ಟ್ರಾನಿಕ್ ತ್ಯಾಜವಾಗಿ(ಇ-ತ್ಯಾಜ್ಯ) ಪರಿಸರಕ್ಕೆ ಭಾರೀ ಹಾನಿ ಉಂಟುಮಾಡುತ್ತದೆ. ಎಲ್ಲಾ ಸಾಧನಗಳಿಗೂ ಒಂದೇ ರೀತಿಯ ಕೇಬಲ್ ಅನ್ನು ಬಳಕೆ ಮಾಡಲು ಪ್ರಾರಂಭಿಸಿದ್ದಲ್ಲಿ, ಇ-ತ್ಯಾಜ್ಯವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ. ಹೀಗಾಗಿ ಇಯು ಇದೀಗ ಪರಿಸರ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದವರು ಷಂಡರು: ಯಶ್‌ಪಾಲ್ ಸುವರ್ಣ

    ಈ ಹೊಸ ನಿಯಮ ಜಾಗತಿಕ ಸ್ಮಾರ್ಟ್ ಫೋನ್ ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸದ್ಯ ಐಫೋನ್ ಹೊರತುಪಡಿಸಿ ಬಹುತೇಕ ದೈತ್ಯ ಸ್ಮಾರ್ಟ್ ಫೋನ್ ಕಂಪನಿಗಳು ಟೈಪ್ ಸಿ ಪೋರ್ಟ್ ಹೊಂದಿರುವ ಮೊಬೈಲ್‌ಗಳನ್ನೇ ತಯಾರಿಕೆ ಮಾಡುತ್ತವೆ. ಆದರೂ ಆಪಲ್ ಕಂಪನಿ ಈಗಾಗಲೇ ತನ್ನ ಕೆಲವು ಐಪ್ಯಾಡ್ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಟೈಪ್ ಸಿ ಪೋರ್ಟ್‌ಗಳನ್ನೇ ತಯಾರಿಸುತ್ತಿವೆ.

  • ಯುರೋಪಿಯನ್ ಒಕ್ಕೂಟದ ಒಂದು ನಿರ್ಧಾರದಿಂದ ತೈಲ ಬೆಲೆ ಭಾರೀ ಏರಿಕೆ

    ಯುರೋಪಿಯನ್ ಒಕ್ಕೂಟದ ಒಂದು ನಿರ್ಧಾರದಿಂದ ತೈಲ ಬೆಲೆ ಭಾರೀ ಏರಿಕೆ

    ಲಂಡನ್: ಯುರೋಪಿಯನ್ ಒಕ್ಕೂಟ(ಇಯು) ಈ ವರ್ಷದ ಅಂತ್ಯದ ವೇಳೆಗೆ ರಷ್ಯಾದಿಂದ ಆಮದಾಗುವ ತೈಲವನ್ನು ಶೇ.90 ರಷ್ಟು ಕಡಿತಗೊಳಿಸಲು ಒಪ್ಪಿಕೊಂಡಿದೆ. ಇಯು ನಿರ್ಧಾರದ ಬೆನ್ನಲ್ಲೇ ಮಂಗಳವಾರ ಕಚ್ಚಾ ತೈಲದ ಬೆಲೆ ಭಾರೀ ಏರಿಕೆಯಾಗಿದೆ.

    ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಈ ಬಗ್ಗೆ ತಮ್ಮ ಟ್ವಿಟ್ಟರ್‌ನಲ್ಲಿ, ರಷ್ಯಾದಿಂದ ಆಮದಾಗುವ ತೈಲದ ನಿರ್ಬಂಧದ ಒಪ್ಪಂದವನ್ನು ನಾನು ಸ್ವಾಗತಿಸುತ್ತೇನೆ. ಇದು ಈ ವರ್ಷದ ಅಂತ್ಯದ ವೇಳೆ ರಷ್ಯಾದಿಂದ ಸುಮಾರು ಶೇ.90 ರಷ್ಟು ಆಮದನ್ನು ಕಡಿತಗೊಳಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸತ್ಯೇಂದ್ರ ಜೈನ್ ಬಂಧನ ರಾಜಕೀಯ ಪ್ರೇರಿತ, ನಮ್ಮದು ಪ್ರಾಮಾಣಿಕ ಸರ್ಕಾರ: ಕೇಜ್ರಿವಾಲ್

    ಈ ನಿರ್ಧಾರದಿಂದ ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪರಿಣಾಮ ಬೀರಲಿದೆ. ಆದರೆ ಹಂಗೇರಿ, ಸ್ಲೋವಾಕಿಯಾ ಹಾಗೂ ಜೆಕ್ ರಿಪಬ್ಲಿಕ್‌ಗಳಲ್ಲಿ ರಷ್ಯಾದ ಆಮದನ್ನು ಕಡಿತಗೊಳಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಇದಕ್ಕಾಗಿ ಸದ್ಯ ಪೈಪ್‌ಲೈನ್ ಮುಖಾಂತರ ರಷ್ಯಾದಿಂದ ಬರುವ ತೈಲಕ್ಕೆ ತಾತ್ಕಾಲಿಕ ವಿನಾಯಿತಿ ಇರಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: 130 ಕೋಟಿ ಜನರಿಗೆ ನಾನು ಸೇವಕನಷ್ಟೇ: ನರೇಂದ್ರ ಮೋದಿ

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ಗೆ 117.93 ಡಾಲರ್(9,162 ರೂ.) ಇದ್ದ ಕಚ್ಚಾ ತೈಲದ ಬೆಲೆ ಈಗ 122 ಡಾಲರ್‌ಗೆ(9,478 ರೂ.) ಏರಿಕೆಯಾಗಿದೆ.

    ಜಾಗತಿಕವಾಗಿ ತೈಲಬೆಲೆ ಹೆಚ್ಚಾಗಿದ್ದರೂ ಭಾರತದಲ್ಲಿ ಕಳೆದ 9 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್‌ನ ಬೆಲೆ ತಟಸ್ಥವಾಗಿದೆ. ಮೇ 22 ರಂದು ಕೆಂದ್ರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ ಪೆಟ್ರೋಲ್‌ಗೆ 8 ರೂ. ಹಾಗೂ ಲೀಟರ್ ಡೀಸೆಲ್‌ಗೆ 6 ರೂ. ಕಡಿತಗೊಳಿಸಿದೆ.

  • ಅಮೆರಿಕದ ಬಳಿಕ ಭಾರತದ ಜೊತೆ ವ್ಯಾಪಾರ, ತಂತ್ರಜ್ಞಾನ ಮಂಡಳಿ ಸ್ಥಾಪಿಸಿದ ಯುರೋಪ್ ಒಕ್ಕೂಟ

    ಅಮೆರಿಕದ ಬಳಿಕ ಭಾರತದ ಜೊತೆ ವ್ಯಾಪಾರ, ತಂತ್ರಜ್ಞಾನ ಮಂಡಳಿ ಸ್ಥಾಪಿಸಿದ ಯುರೋಪ್ ಒಕ್ಕೂಟ

    ನವದೆಹಲಿ: ಉಕ್ರೇನ್ ರಷ್ಯಾ ಯುದ್ಧದಲ್ಲಿ ಯಾರ ಪರವು ನಿಲ್ಲದ ತಟಸ್ಥ ಧೋರಣೆ ಅನುಸರಿಸಿದ ಭಾರತ ಜೊತೆ ಯುರೋಪಿಯನ್ ಒಕ್ಕೂಟ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಯುರೋಪಿಯನ್ ಒಕ್ಕೂಟ ಹಾಗೂ ಭಾರತ ತಮ್ಮ ವ್ಯಾಪಾರವನ್ನು ವಿಸ್ತರಿಸಲು ವ್ಯಾಪಾರ ಹಾಗೂ ತಂತ್ರಜ್ಞಾನ ಮಂಡಳಿಯನ್ನು ಸ್ಥಾಪಿಸಲು ಒಪ್ಪಿಕೊಂಡಿವೆ.

    ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆ ಸುರ್ಸುಲಾ ವಾನ್ ಡೆರ್ ಲೇಯೆನ್ ಮಾತುಕತೆ ನಡೆಸಿದ್ದಾರೆ. ದ್ವಿಪಕ್ಷಿಯ ಮಾತುಕತೆಯಲ್ಲಿ ವ್ಯಾಪಾರ, ಹವಾಮಾನ, ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರಗಳನ್ನು ಹೆಚ್ಚಿಸಿಕೊಳ್ಳುವುದಾಗಿ ಉಭಯ ರಾಷ್ಟ್ರಗಳು ಒಪ್ಪಂದಗಳನ್ನು ಮಾಡಿಕೊಂಡವು.

    ಈ ಮೊದಲು ಯುರೋಪಿಯನ್ ಒಕ್ಕೂಟ ವ್ಯಾಪಾರ, ತಂತ್ರಜ್ಞಾನ ಮಂಡಳಿಯನ್ನು ಅಮೆರಿಕದ ಜೊತೆ ಮಾಡಿಕೊಂಡಿತ್ತು. ಈಗ ಈ ರೀತಿ ಒಪ್ಪಂದ ಮಾಡಿಕೊಂಡ ಎರಡನೇ ದೇಶ ಭಾರತವಾಗಿರುವುದು ವಿಶೇಷ. ಅದರಲ್ಲೂ ರಷ್ಯಾ ವಿರೋಧಿ ನಿಲುವು ತೆಗೆದುಕೊಳ್ಳದೇ ಇರುವ ಸಮಯದಲ್ಲೇ ಈ ಮಹತ್ವದ ಒಪ್ಪಂದ ನಡೆದಿರುವುದು ಇನ್ನೊಂದು ವಿಶೇಷ. ಸೋಮವಾರ ಭಾರತದ ಈ ನಿರ್ಧಾರವನ್ನು ಯುರೋಪಿಯನ್ ಯೂನಿಯನ್ ಒಪ್ಪಿಕೊಂಡಿದೆ.

    ಡೆರ್ ಲೇಯೆನ್ ಹೇಳಿದ್ದೇನು?
    ಈ ವೇಳೆ ಮಾತನಾಡಿದ ವಾನ್ ಡೆರ್ ಲೇಯೆನ್, ಯುಇ ಇಲ್ಲಿವರೆಗೆ ಅಮೆರಿಕದೊಂದಿಗೆ ವ್ಯಾಪಾರ ಹಾಗೂ ತಂತ್ರಜ್ಞಾನಗಳಲ್ಲಿ ಒಕ್ಕೂಟವನ್ನು ಏರ್ಪಡಿಸಿಕೊಂಡಿತ್ತು. ಇದೀಗ ಬಹು ಮುಖ್ಯವಾದ ಹಾಗೂ ನಮ್ಮ ಎರಡನೇ ಒಕ್ಕೂಟವನ್ನು ಭಾರತದೊಂದಿಗೆ ಸ್ಥಾಪಿಸುವ ಸಮಯ ಎಂದರು. ಭಾರತ ಹಾಗೂ ಯುರೋಪಿಯನ್ ಯೂನಿಯನ್‌ನ ಅಂತರಾಷ್ಟ್ರೀಯ ಸಂಬಂಧದ 60ನೇ ವಾರ್ಷಿಕೋತ್ಸವದ ಸಮಯದಲ್ಲಿ ಈ ಹೊಸ ಒಕ್ಕೂಟ ಬಹು ಮುಖ್ಯವಾದುದು ಎಂದು ಹೇಳಿದರು. ಇದನ್ನೂ ಓದಿ: ಮುಗಿಯದ ವಿಚಾರಣೆ – BBMP ಚುನಾವಣೆ ಮತ್ತಷ್ಟು ವಿಳಂಬ

    ಭಾರತ ಹಾಗೂ ಯುರೋಪ್ ರಾಷ್ಟ್ರಗಳಿಗೆ ಶಕ್ತಿ ಸುರಕ್ಷತೆ ಒಂದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಯುರೋಪ್ ಈ ಹಿಂದೆ ರಷ್ಯಾದಿಂದ ಪಡೆಯುತ್ತಿದ್ದ ಇಂಧನಗಳಿಂದ ದೂರ ಉಳಿಯಲು ಇಷ್ಟಪಡುತ್ತಿದ್ದು, ಇದೀಗ ಹೊಸ, ಶುದ್ಧ ಹಾಗೂ ನವೀಕರಿಸಬಹುದಾದ ಶಕ್ತಿಗಳೆಡೆ ಗಮನ ಹರಿಸುತ್ತಿದ್ದೇವೆ. ಇದರಲ್ಲಿ ಸೌರ ಹಾಗೂ ಜಲಜನಕದ ಮೇಲೆ ಭಾರತ ಹಾಗೂ ಯುರೋಪ್‌ನ ಸಹಕಾರ ಪ್ರಮುಖವಾಗಿದೆ.

    ಈ ಸಹಕಾರದಲ್ಲಿ #GlobalGateway ನಿರ್ಣಾಯಕ ಪಾತ್ರ ವಹಿಸಲಿದೆ. ಯುರೋಪ್ ಭಾರತದ 3ನೇ ಪ್ರಮುಖ ವ್ಯಾಪಾರ ಪಾಲುದಾರ ಹಾಗೂ ಅದರ ಪ್ರಮುಖ ಹೂಡಿಕೆದಾರರಲ್ಲಿ ಒಂದಾಗಿದೆ. ನಾವು ಶೀಘ್ರದಲ್ಲೇ ಭಾರತದೊಂದಿಗೆ ವ್ಯಾಪಾರ ಹಾಗೂ ಹೂಡಿಕೆ ಒಪ್ಪಂದಗಳ ಕುರಿತು ಮಾತುಕತೆ ಪ್ರಾರಂಭಿಸಲಿದ್ದೇವೆ. ಇದನ್ನೂ ಓದಿ: ಬುಧವಾರ ಎಲ್ಲ ರಾಜ್ಯಗಳ ಸಿಎಂ ಜೊತೆ ಮೋದಿ ತುರ್ತು ಸಭೆ

    ಭಾರತ ಹಾಗೂ ಯುರೋಪ್‌ನ ಪಾಲುದಾರಿಕೆಯನ್ನು ಬಲಪಡಿಸುವುದು ಈ ದಶಕದ ಪ್ರಮುಖ ಆದ್ಯತೆಯಾಗಿದೆ. ನಾವು ವ್ಯಾಪಾರ, ತಂತ್ರಜ್ಞಾನ ಹಾಗೂ ಭದ್ರತೆಯಲ್ಲಿ ಸಹಕಾರವನ್ನು ಹೆಚ್ಚಿಸುತ್ತೇವೆ. ಈ ವಿಚಾರವಾಗಿ ನಾನು ಅತ್ಯಂತ ಸಂತಸಗೊಂಡಿದ್ದೇನೆ ಹಾಗೂ ಭಾರತ-ಯುರೋಪ್‌ನ ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯನ್ನು ಸ್ಥಾಪಿಸುತ್ತೇನೆ.

    ಕಳೆದ ವಾರವಷ್ಟೇ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತಕ್ಕೆ ಆಗಮಿಸಿದ್ದರು. ಇವರು ಮರಳಿದ ಎರಡು ದಿನದಲ್ಲಿ ವಾನ್ ಡೆರ್ ಲೇಯೆನ್ ಭಾರತಕ್ಕೆ ಆಗಮಿಸಿ ಮಹತ್ವದ ಒಪ್ಪಂದ ಮಾಡಿದ್ದಾರೆ.

  • ಮೇ 15ರಿಂದ ರಷ್ಯಾದ ಕಚ್ಚಾತೈಲ ಆಮದು ಕಡಿತ

    ಮೇ 15ರಿಂದ ರಷ್ಯಾದ ಕಚ್ಚಾತೈಲ ಆಮದು ಕಡಿತ

    ಮಾಸ್ಕೋ: ಪ್ರಮುಖ ಜಾಗತಿಕ ವ್ಯಾಪಾರ ಸಂಸ್ಥೆಗಳು ಮೇ 15ರಿಂದ ರಷ್ಯಾದ ರಾಜ್ಯ ನಿಯಂತ್ರಿತ ತೈಲ ಕಂಪನಿಗಳಿಂದ ಕಚ್ಚಾತೈಲ ಖರೀದಿಯನ್ನು ಕಡಿತಗೊಳಿಸಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

    Russia-S-400

    ಉಕ್ರೇನ್ ಮೇಲಿನ ಆಕ್ರಮಣದ ನಂತರವೂ ಯೂರೋಪ್ ಒಕ್ಕೂಟಗಳು ರಷ್ಯಾದ ತೈಲ ಆಮದಿನ ಮೇಲೆ ನಿರ್ಬಂಧ ವಿಧಿಸಿಲ್ಲ. ಏಕೆಂದರೆ ಜರ್ಮನಿಯಂತಹ ಕೆಲ ದೇಶಗಳೂ ರಷ್ಯಾದ ತೈಲ ಆಮದಿನ ಮೇಲೆಯೇ ಅವಲಂಬಿತವಾಗಿವೆ. ಪರ್ಯಾಯ ಮಾರ್ಗ ಕಂಡುಕೊಳ್ಳಲು ಮೂಲ ಸೌಕರ್ಯ ಹೊಂದಿಲ್ಲದೇ ಇರುವುದು ಬಿಕ್ಕಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಪತ್ರಿಕಾ ಅಂಕಣದಿಂದಾಗಿ ಟ್ವಿಟ್ಟರ್‌ ಕಂಪನಿ ಖರೀದಿಗೆ ಮುಂದಾದ್ರಾ ಮಸ್ಕ್‌?

    ಆದಾಗ್ಯೂ, ತೈಲ ಮಾರಾಟ ಕಂಪನಿಗಳು ರಷ್ಯಾದ ಎನರ್ಜಿ ಗ್ರೂಪ್ ರಾಸ್ನೆಫ್ಟ್ನಿಂದ ಖರೀದಿಗಳನ್ನು ಸ್ಥಗಿತಗೊಳಿಸುತ್ತಿವೆ. ಏಕೆಂದರೆ ಅವರು ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಗೆ ರಷ್ಯಾದ ಪ್ರವೇಶವನ್ನು ಮಿತಿಗೊಳಿಸುವ ಉದ್ದೇಶದಿಂದ ಕಡಿತಗೊಳಿಸಲಾಗುತ್ತಿದೆ. ಅದಕ್ಕಾಗಿ ಯೂರೋಪ್‌ನ ಇಂಧನ ಭದ್ರತೆಗಳನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿವೆ.

    OIL 2

    ಯೂರೋಪ್ ಒಕ್ಕೂಟಗಳೂ ಮೇ 15ರಿಂದ ಕೆಲವು ನಿರ್ಬಂಧಗಳನ್ನು ಅನುಸರಿಸಲಿದ್ದು, ತೈಲ ಆಮದನ್ನು ಖಡಿತಗೊಳಿಸಲಿವೆ. ಜೊತೆಗೆ ರಷ್ಯಾದ ಪ್ರಮುಖ ತೈಲ ಖರೀದಿದಾರರಾದ ಟ್ರಾಫಿಗುರಾ ರಾಯಿಟರ್ಸ್ ಸಹ ಎಲ್ಲ ನಿರ್ಬಂಧಗಳನ್ನು ಸಂಪೂರ್ಣವಾಗಿ ಅನುಸರಿಸುತ್ತದೆ. ಹಾಗಾಗಿ ವಹಿವಾಟನ್ನು ಮೇ 15 ರಿಂದ ಇನ್ನಷ್ಟು ಕಡಿತಗೊಳಿಸಲಾಗುವುದು ಎನ್ನಲಾಗಿದೆ. ಇದನ್ನೂ ಓದಿ: ಒಂದೇ ಬಾರಿಗೆ 32 ಜನರಿಗೆ ವಾಯ್ಸ್ ಕಾಲ್ – ಹೀಗಿವೆ ವಾಟ್ಸಪ್‌ನ 4 ಹೊಸ ಫೀಚರ್ಸ್

    ಏಪ್ರಿಲ್‌ನಲ್ಲಿ ರಷ್ಯಾದ ರೋಸ್‌ನೆಫ್ಟ್ ಮತ್ತು ಗಾಜ್‌ಪ್ರೊಮ್‌ನೆಫ್ಟ್ನ ಪಶ್ಚಿಮ ಬಂದರುಗಳಿಂದ ಕಚ್ಚಾ ತೈಲ ರಫ್ತು ಶೇ.40 ರಷ್ಟು ಹೆಚ್ಚಾಗಲಿದೆ. ಹಾಗಾಗಿ, ನಿರ್ಬಂಧಗಳನ್ನು ವಿಧಿಸುವ ಮೂಲಕ ಆಮದು ಕಡಿತಗೊಳಿಸಲಾಗುತ್ತದೆ ಎಂದು ಇಂಟರ್‌ನ್ಯಾಷನಲ್ ಎನರ್ಜಿ ಸಂಸ್ಥೆಯೊಂದು ಹೇಳಿದೆ.

  • ಎಲ್ಲ ಫೋನ್‍ಗಳಿಗೆ, ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಒಂದೇ ಚಾರ್ಜರ್

    ಎಲ್ಲ ಫೋನ್‍ಗಳಿಗೆ, ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಒಂದೇ ಚಾರ್ಜರ್

    – ಮಹತ್ವದ ನಿರ್ಧಾರ ಕೈಗೊಂಡ ಯುರೋಪಿಯನ್ ಯೂನಿಯನ್
    – ಇ-ವೇಸ್ಟ್ ತಪ್ಪಿಸಲು ನಿರ್ಧಾರ

    ಬ್ರಸೆಲ್ಸ್: ಅಂದುಕೊಂಡಂತೆ ನಡೆದರೆ ಎಲ್ಲ ಫೋನ್‍ಗಳಿಗೆ ಮತ್ತು ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಇನ್ನು ಮುಂದೆ ಒಂದೇ ರೀತಿ ಚಾರ್ಜರ್ ಗಳನ್ನು ಬಳಕೆ ಮಾಡಬಹುದು.

    ಹೌದು. ಯುರೋಪಿಯನ್ ಯೂನಿಯನ್ ಎಲ್ಲ ಫೋನ್‍ಗಳಿಗೆ ಒಂದೇ ಮಾನದಂಡದ ಚಾರ್ಜರ್ ಬಳಸಬೇಕೆಂಬ ನಿಯಮವನ್ನು ಸಿದ್ಧಪಡಿಸಿದೆ. ಒಂದು ವೇಳೆ ಈ ನಿಯಮ ಜಾರಿಯಾದರೆ ಕಡ್ಡಾಯವಾಗಿ ಸ್ಮಾರ್ಟ್‍ಫೋನ್ ತಯಾರಕಾ ಕಂಪನಿಗಳು ಒಂದೇ ಮಾದರಿಯ ಚಾರ್ಜರ್ ಅನ್ನು ನೀಡಬೇಕಾಗುತ್ತದೆ.

     

    ಯಾಕೆ ಈ ನಿಯಮ?
    ಸದ್ಯ ಈಗ ಒಂದೊಂದು ಕಂಪನಿಗಳು ಒಂದೊಂದು ರೀತಿ ಚಾರ್ಜರ್ ಗಳೊಂದಿಗೆ ಮಾರುಕಟ್ಟೆಗೆ ಫೋನ್/ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಬಿಡುಗಡೆ ಮಾಡುತ್ತಿವೆ. ಒಂದು ಫೋನ್ ಹಳತಾದ ಬಳಿಕ ಮತ್ತೊಂದು ಫೋನ್ ಖರೀದಿಸಿದರೆ ಹಳೆಯ ಫೋನ್ ಚಾರ್ಜರ್ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಇದು ಎಲೆಕ್ಟ್ರಾನಿಕ್ ವೇಸ್ಟ್ ಆಗುತ್ತದೆ.

    ಒಂದೇ ರೀತಿಯ ಚಾರ್ಜರ್ ಬಿಡುಗಡೆ ಮಾಡಿದರೆ ಖರ್ಚು ಕಡಿಮೆಯಾಗುತ್ತದೆ. ಗ್ರಾಹಕರಿಗೆ ಸ್ವಾತಂತ್ರ್ಯ ಜಾಸ್ತಿ ಸಿಗುತ್ತದೆ ಮತ್ತು ಇ-ವೇಸ್ಟ್ ತಪ್ಪಿಸಲು ಈ ನಿಯಮ ಜಾರಿಗೆ ತರಲು ಮುಂದಾಗಿದೆ.  ಇದನ್ನೂ ಓದಿ: ಆಪಲ್ ಉದ್ಯೋಗಿಗಳ ವಿರುದ್ಧ ಗರಂ – ಖಾರವಾದ ಪತ್ರ ಬರೆದು ಎಚ್ಚರಿಕೆ ನೀಡಿದ ಟಿಮ್ ಕುಕ್ 

    ಯುರೋಪಿಯನ್ ಯೂನಿಯನ್ ಪ್ರಸ್ತಾಪ ಮಾಡಿರುವ ನಿಯಮಗಳ ಪ್ರಕಾರ ಎಲ್ಲ ಕಂಪನಿಗಳು ಟೈಪ್ ಸಿ ಚಾರ್ಜರ್ ಗಳನ್ನೇ ನೀಡಬೇಕಾಗುತ್ತದೆ. ಫೋನಿಗಳಿಗೆ ಮಾತ್ರ ಅಲ್ಲ ಟ್ಯಾಬ್ಲೆಟ್, ಕ್ಯಾಮೆರಾ, ಹೆಡ್‍ಫೋನ್, ಪೋರ್ಟೆಬಲ್ ಸ್ಪೀಕರ್, ವಿಡಿಯೋ ಗೇಮ್ ಕನ್ಸೋಲ್ ಗಳಿಗೂ ಈ ನಿಯಮ ಅನ್ವಯವಾಗುತ್ತದೆ.

    ಇಯರ್ ಬಡ್ಸ್, ಸ್ಮಾರ್ಟ್ ವಾಚ್, ಫಿಟ್ ನೆಸ್ ಟ್ರ್ಯಾಕರ್ ಗಳ ಗಾತ್ರ ಸಣ್ಣದಾಗಿರುವುದರಿಂದ ತಾಂತ್ರಿಕ ಕಾರಣಗಳನ್ನು ನೀಡಿ ಈ ಸಾಧನಗಳನ್ನು ಕೈಬಿಡಲಾಗಿದೆ.

    2009ರಲ್ಲಿ 30ಕ್ಕೂ ಹೆಚ್ಚು ಮಾದರಿಯ ಚಾರ್ಜರ್ ಗಳು ಬಳಕೆಯಲ್ಲಿದ್ದವು. ಆದರೆ ಈಗ ಕಂಪನಿಗಳು ಯುಎಸ್‍ಬಿ ಸಿ, ಲೈಟ್ನಿಂಗ್ ಮತ್ತು ಯುಎಸ್‍ಬಿ ಮೈಕ್ರೋ-ಬಿ ಚಾರ್ಜರ್ ಗಳನ್ನು ನೀಡುತ್ತಿವೆ. ವೈರ್‍ಲೆಸ್ ಚಾರ್ಜರ್ ಗಳಿಗೆ ಯಾವುದೇ ಸಮಸ್ಯೆ ಇಲ್ಲ.

    ಜಾರಿ ಯಾವಾಗ?
    ಈ ನಿಯಮ ಈಗ ಸಿದ್ಧಗೊಂಡಿದ್ದು, ಯುರೋಪಿಯನ್ ಸಂಸತ್ತಿನಲ್ಲಿ ಅನುಮೋದನೆ ಪಡೆದ ಬಳಿಕ ಕಂಪನಿಗಳು ಜಾರಿ ಮಾಡಬೇಕಿದೆ. ವರದಿಗಳ ಪ್ರಕಾರ 2024ರ ವೇಳೆಗೆ ಇದು ಜಾರಿಯಾಗುವ ಸಾಧ್ಯತೆಯಿದೆ. ಶಾಸನ ಜಾರಿಯಾದರೆ ಯುಎಸ್‍ಬಿ-ಸಿ ಮಾದರಿಯ ಚಾರ್ಜಿಂಗ್ ಪೋರ್ಟ್ ಹೊರತು ಪಡಿಸಿ ಬೇರೆ ಯಾವುದೇ ಪೋರ್ಟ್ ಇರುವ ಫೋನುಗಳನ್ನು ಮಾರಾಟ ಮಾಡಿದರೆ ಅಕ್ರಮ ಮಾರಾಟ ಎಂದು ಪರಿಗಣಿಸಲಾಗುತ್ತದೆ.

    ಈ ನಿಯಮವನ್ನು ಆಪಲ್ ವಿರೋಧಿಸಿದ್ದು, ಇದು ಆವಿಷ್ಕಾರಕ್ಕೆ ಹಿನ್ನಡೆಯಾಗುತ್ತದೆ ಎಂದು ಹೇಳಿದೆ.

    ಆಂಡ್ರಾಯ್ಡ್ ಫೋನುಗಳ ಪೈಕಿ ಕೆಲವು ಈಗ ಯುಎಸ್‍ಬಿ ಮೈಕ್ರೋ ಬಿ ಪೋರ್ಟ್ ನಲ್ಲಿ ಬಿಡುಗಡೆಯಾಗಿದ್ದರೆ ಈಗಾಗಲೇ ಕೆಲವು ಕಂಪನಿಗಳು ಯುಎಸ್‍ಬಿ ಟೈಪ್ ಸಿನಲ್ಲಿ ಫೋನುಗಳನ್ನು ಬಿಡುಗಡೆ ಮಾಡಿವೆ.

  • ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಆರು ವಲಸೆ ಕಾರ್ಮಿಕರು ಬಲಿ

    ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಆರು ವಲಸೆ ಕಾರ್ಮಿಕರು ಬಲಿ

    ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 6ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕುಲ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ಪಶ್ಚಿಮ ಬಂಗಾಳದ ಐವರು ವಲಸೆ ಕಾರ್ಮಿಕರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಘಟನೆಯಲ್ಲಿ ಕಾರ್ಮಿಕರೊಬ್ಬರು ತೀವ್ರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇದೀಗ ಆ ಕಾರ್ಮಿಕ ಸಹ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಂತ್ರಸ್ತರೆಲ್ಲರೂ ಪಶ್ಚಿಮ ಬಂಗಾಳದ ಮಿರ್ಷಿದಾಬಾದ್ ಜಿಲ್ಲೆಯವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ವಲಸಿಗರ ಮೇಲೆ ದಾಳಿ ನಡೆಸಲು ಈಗ ಉಗ್ರರು ಮುಂದಾಗುತ್ತಿದ್ದು, ಕೆಲ ದಿನದ ಹಿಂದೆ ಲಾರಿ ಚಾಲಕರ ಮೇಲೆ ದಾಳಿ ನಡೆಸಿದ್ದರು.

    ಇಂದು ಬೆಳಗ್ಗೆ ಸಹ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‍ಪಿಎಫ್ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದರು. ಪುಲ್ವಾಮಾದ ಡ್ರಾಬ್‍ಗ್ರಮ್ ಪ್ರದೇಶದಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆ ನಡೆಯುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದರು. ಪರೀಕ್ಷೆಗೆ ತೊಂದರೆಯಾಗದಂತೆ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಸಿಆರ್‍ಪಿಎಫ್ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು.

    ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಭಾರತೀಯ ಯೋಧರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂಬ ಮಾಹಿತಿ ಲಭಿಸಿದ್ದು, ಯೋಧರು ಪ್ರತಿದಾಳಿ ನಡೆಸಿದ್ದಾರೆ. ಉಗ್ರರು ಸುಮಾರು 6 ರಿಂದ 7 ಸುತ್ತು ಗುಂಡು ಹಾರಿಸಿದ್ದರು ಎಂಬ ಮಾಹಿತಿ ಲಭಿಸಿದೆ. ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಹೆಚ್ಚಿನ ಸೇನೆಯನ್ನು ಕರೆಯಿಸಿಕೊಂಡಿರುವ ಪೊಲೀಸರು, ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯ ಆರಂಭಗೊಂಡಿದೆ.

    ಯುರೋಪ್‍ನ ಯೂನಿಯನ್ ಸಂಸದರ ತಂಡ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಮಯದಲ್ಲೇ ಉಗ್ರರು ದಾಳಿ ನಡೆಸಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದು ಬಳಿಕ ಕಣಿವೆಯ ಪ್ರದೇಶದ ಸ್ಥಿತಿಗತಿ ಬಗ್ಗೆ ತಿಳಿಯಲು ಯುರೋಪಿಯನ್ ಯೂನಿಯನ್ ಸಂಸದರು ಭೇಟಿ ನೀಡಿದ್ದಾರೆ. ಜಮ್ಮು ಕಾಶ್ಮೀರದ ಸೊಪೋರ್ ಬಸ್ ನಿಲ್ದಾಣದಲ್ಲಿ ಸೋಮವಾರ ಗ್ರೇನೇಡ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 19ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.