Tag: Europe Countries

  • ನಿಮಿಷಕ್ಕೆ 1,000 ಬುಲೆಟ್ ಸಿಡಿಸುತ್ತೆ ಮೇಡ್ ಇನ್ ಇಂಡಿಯಾ ಗನ್ – ಯುರೋಪ್ ದೇಶಗಳಿಂದ ಭಾರೀ ಬೇಡಿಕೆ

    ನಿಮಿಷಕ್ಕೆ 1,000 ಬುಲೆಟ್ ಸಿಡಿಸುತ್ತೆ ಮೇಡ್ ಇನ್ ಇಂಡಿಯಾ ಗನ್ – ಯುರೋಪ್ ದೇಶಗಳಿಂದ ಭಾರೀ ಬೇಡಿಕೆ

    ಕ್ಷಣಾ ವಲಯದಲ್ಲಿ ಶಸ್ತ್ರಾಸ್ತ್ರಗಳ ಪೂರೈಕೆಯಲ್ಲಿ ಸ್ವಾವಲಂಬನೆ ಸೃಷ್ಟಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿದೆ. ದೇಶೀಯವಾಗಿಯೇ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಿ ರಫ್ತಿಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಶಸ್ತ್ರಾಸ್ತ್ರಗಳ ಆಮದಿಗೆ ತಗುಲುವ ವೆಚ್ಚವನ್ನು ಆದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸುತ್ತಿದೆ. ಈ ನಡುವೆ ಮೇಡ್ ಇನ್ ಇಂಡಿಯಾ ಗನ್‌ವೊಂದಕ್ಕೆ ಯುರೋಪ್ ದೇಶಗಳಿಂದ ಭಾರೀ ಬೇಡಿಕೆ ಹೆಚ್ಚುತ್ತಿದೆ. ಅಷ್ಟಕ್ಕೂ ಈ ಗನ್ ಯಾವುದು? ಭಾರತದಲ್ಲಿ ತಯಾರಾಗುತ್ತಿರುವ ಈ ಗನ್‌ಗೆ ವಿದೇಶಗಳಿಂದ ಹೆಚ್ಚಿನ ಬೇಡಿಕೆ ಯಾಕೆ? ವಿಶೇಷತೆಗಳೇನು ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಲಾಗಿದೆ.

    ಪ್ರಧಾನಿ ಮೋದಿಯವರ ʼಮೇಕ್ ಇನ್ ಇಂಡಿಯಾʼ ಯೋಜನೆಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಷಿನ್ ಗನ್ ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲಾಗುತ್ತಿದೆ. ಈ ಒಂದು ಸಣ್ಣ ಕಾರ್ಖಾನೆಯಲ್ಲಿ ಸಿದ್ಧಗೊಳ್ಳುತ್ತಿರುವ ದೊಡ್ಡ ದೊಡ್ಡ ವೆಪನ್‌ಗಳು ಭಾರತ ಮಾತ್ರವಲ್ಲದೇ ವಿದೇಶಗಳ ಗಮನವನ್ನೂ ಸೆಳೆಯುತ್ತಿದೆ. ಈ ಪೈಕಿ ಮೀಡಿಯಮ್ ಮಷಿನ್ ಗನ್‌ಗೆ (MMG) ಯುರೋಪ್ ದೇಶಗಳಲ್ಲಿ ಭಾರೀ ಬೇಡಿಕೆ ಹೆಚ್ಚಿದೆ.

    ಈ ಮೀಡಿಯಮ್ ಮಷಿನ್ ಗನ್ ಭವಿಷ್ಯದಲ್ಲಿ ಸೇನೆಯಲ್ಲಿ ಗೇಮ್ ಚೇಂಜರ್ ಆಗಬಹುದು ಎಂದು ವರದಿಗಳು ತಿಳಿಸಿದೆ. ಇದಕ್ಕೆ ಮೂಲ ಕಾರಣ ಇದರ ವೇಗ. ಈ ಮಷಿನ್ ಗನ್ ಕೇವಲ ಒಂದು ನಿಮಿಷದಲ್ಲಿ 1,000 ಬುಲೆಟ್‌ಗಳನ್ನು ಸಿಡಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ ಇನ್ನೂ ಹಲವು ವಿಶೇಷತೆಗಳನ್ನು ಈ ಗನ್ ಹೊಂದಿದೆ.

    ಈ ಒಂದು ಮಷಿನ್ ಗನ್ ಸುಮಾರು 11 ಕಿಲೋ ಭಾರವಿದ್ದು, ಒಂದು ಸುತ್ತಿನಲ್ಲಿ 1,000 ಬುಲೆಟ್ ಫೈರ್ ಮಾಡುತ್ತದೆ. ಸುಮಾರು 1.8 ಕಿಲೋ ಮೀಟರ್ ದೂರವಿರುವ ಶತ್ರುವನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ಗನ್ ಹೊಂದಿದೆ. ಈ ಮಷಿನ್ ಗನ್ನಿನ ಉದ್ದ ಬರೋಬ್ಬರಿ 1255 ಮಿಲಿ ಮೀಟರ್ ಇದ್ದು, 7 .62*51 mm ನಷ್ಟು ಉದ್ದದ ಕ್ಯಾಲಿಬರ್ ಅನ್ನು ಹೊಂದಿದೆ. ಇಷ್ಟೆಲ್ಲಾ ವಿಶೇಷತೆಗಳನ್ನು ಒಳಗೊಂಡಿರುವ ಈ ಗನ್ ನಮ್ಮ ಸೇನೆಯಲ್ಲೂ ಇರಬೇಕು ಎಂದು ಅನೇಕ ದೇಶಗಳು ಬಯಸುತ್ತಿದೆ. ಈ ಹಿನ್ನೆಲೆ ಯುರೋಪ್ ರಾಷ್ಟ್ರಗಳು ಈ ಗನ್‌ಗೆ ಹೆಚ್ಚಿನ ಬೇಡಿಕೆಯನ್ನಟ್ಟಿವೆ.

    ಈ ಕುರಿತು 2023ರಲ್ಲೇ ಭಾರತ ಮತ್ತು ಯುರೋಪ್ ದೇಶಗಳ ನಡುವೆ ಅನೇಕ ಒಪ್ಪಂದಗಳು ನಡೆದಿವೆ. ಇದೀಗ ಕಾನ್ಪುರದಲ್ಲಿ ಸಿದ್ಧಗೊಂಡ ಈ ಗನ್ ವಿದೇಶದಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. 2023ರಲ್ಲಿ ಸುಮಾರು 190 ಕೋಟಿ ರೂ. ವ್ಯವಹಾರದಲ್ಲಿ ಮಷಿನ್ ಗನ್‌ಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿತ್ತು. ಈ ಬಾರಿ ಸುಮಾರು 255 ಕೋಟಿ ರೂ. ಮೌಲ್ಯದ ಒಪ್ಪಂದವಾಗಿದ್ದು, ಸದ್ಯದಲ್ಲಿಯೇ ಮತ್ತಷ್ಟು ಗನ್‌ಗಳು ವಿದೇಶಕ್ಕೆ ರಫ್ತಾಗಲಿವೆ. ಈಗಾಗಲೇ 2,000 ಮೀಡಿಯಮ್ ಮಷಿನ್ ಗನ್‌ಗಳಿಗೆ ಬೇಡಿಕೆ ಬಂದಿದೆ. ಇಷ್ಟು ಮಾತ್ರವಲ್ಲದೇ ಇನ್ನೂ ಕೆಲವು ದೇಶಗಳೋಂದಿಗೆ ಒಪ್ಪಂದಗಳು ನಡೆಯುತ್ತಿದೆ.

    2023-24ರ ಆರ್ಥಿಕ ವರ್ಷದಲ್ಲಿ ಭಾರತದಿಂದ ರಫ್ತಾಗಿರುವ ರಕ್ಷಣಾ ಉಪಕರಣಗಳ ಮೌಲ್ಯ 21,000 ಕೋಟಿ ರೂ. ಆಗಿದ್ದು, ಇದೇ ಮೊದಲ ಬಾರಿಗೆ ಭಾರತದ ರಕ್ಷಣಾ ರಫ್ತುಗಳ ಮೌಲ್ಯ 20,000 ಕೋಟಿ ರೂ. ದಾಟಿದೆ. ಭಾರತದ ರಕ್ಷಣಾ ಸಚಿವಾಲಯ ಈ ಕುರಿತು ಮಾಹಿತಿ ನೀಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2023-24ರಲ್ಲಿ ರಕ್ಷಣಾ ರಫ್ತು ಶೇ.32.5ರಷ್ಟು ಬೆಳವಣಿಗೆ ಕಂಡಿದೆ. FY2013-14ಕ್ಕೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ ರಕ್ಷಣಾ ರಫ್ತು 31 ಪಟ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ.

    ಭಾರತ ವಿಶ್ವದಲ್ಲೇ ನಾಲ್ಕನೇ ಬಲಿಷ್ಟ ಸೇನಾಪಡೆ ಹೊಂದಿರುವ ದೇಶವಾಗಿದೆ. ಅಮೆರಿಕ ಈ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದೆ. ಇದರ ನಂತರದ ಸ್ಥಾನದಲ್ಲಿ ರಷ್ಯಾ ಮತ್ತು ಚೀನಾ ಇದೆ ಎಂದು ಗ್ಲೋಬಲ್ ಫೈರ್ ಪವರ್ ವರದಿ ತಿಳಿಸಿದೆ. ಈ ಪಟ್ಟಿಯಲ್ಲಿ ಪಾಕಿಸ್ಥಾನ 9ನೇ ಸ್ಥಾನದಲ್ಲಿದೆ. ಅತ್ಯಂತ ಕಡಿಮೆ ಸೇನೆ ಹೊಂದಿರುವ ದೇಶವೆಂದರೆ ಭೂತಾನ್. ದೇಶದ ಸೇನಾ ಶಕ್ತಿಯನ್ನು 60 ಅಂಶಗಳಲ್ಲಿ ಅಳೆಯಲಾಗಿದೆ. ಸಿಬ್ಬಂದಿ ಸಂಖ್ಯೆ, ಮಿಲಿಟರಿ ಉಪಕರಣಗಳು, ಆರ್ಥಿಕ ಸ್ಥಿರತೆ, ಭೌಗೋಳಿಕ ಪ್ರದೇಶ ಮತ್ತು ಲಭ್ಯವಿರುವ ಮಾನವ ಸಂಪನ್ಮೂಲಗಳು ಸೇರಿದಂತೆ ಹಲವು ಅಂಶಗಳನ್ನು ಇದು ಒಳಗೊಂಡಿವೆ.

    ವರದಿಯನುಸಾರ ಅಮೆರಿಕ ವಿಶ್ವದ ಶಕ್ತಿಶಾಲಿ ಸೇನಾಪಡೆ ಹೊಂದಿದೆ. ಅಮೆರಿಕದ ಸೇನೆಯಲ್ಲಿ ಜಾಗತಿಕ ತಂತ್ರಜ್ಞಾನದ ಅಭಿವೃದ್ಧಿ, ವೈದ್ಯಕೀಯ, ಏರೋಸ್ಪೇಸ್ ಮತ್ತು ಕಂಪ್ಯೂಟರ್, ಟೆಲಿಕಾಂ ವಲಯ ಅತ್ಯಂತ ಪ್ರಬಲವಾಗಿದೆ. ಅಮೆರಿಕ 13,300 ಯುದ್ಧ ವಿಮಾನಗಳನ್ನು ಹೊಂದಿದ್ದು, 983 ದಾಳಿ ನಡೆಸುವ ಹೆಲಿಕಾಪ್ಟರ್‌ಗಳನ್ನು ಹೊಂದಿದೆ. ಭಾರತ ಬೃಹತ್ ಪ್ರಮಾಣದ ಭೂಸೇನೆ ಮತ್ತು ದೇಶೀಯ ಮಿಲಿಟರಿ ಪಡೆ ಹೊಂದಿದೆ. ಅಮೆರಿಕ ಮತ್ತು ಚೀನಾ ಮಿಲಿಟರಿಗೆ ಅತಿಹೆಚ್ಚು ಖರ್ಚು ಮಾಡುವ ದೇಶಗಳಾಗಿವೆ. ಈ ಪಟ್ಟಿಗೆ ಇದೀಗ ಭಾರತವೂ ಸೇರಿಕೊಂಡಿದೆ.

  • ಅತಿ ವೇಗವಾಗಿ ಹರಡುವ ಕೋವಿಡ್‌ ಹೊಸ ತಳಿ ಪತ್ತೆ – ಯುಕೆ, ಯುಎಸ್‌, ಉಕ್ರೇನ್‌ ಸೇರಿ 27 ದೇಶಗಳಿಗೆ XEC ಆತಂಕ

    ಅತಿ ವೇಗವಾಗಿ ಹರಡುವ ಕೋವಿಡ್‌ ಹೊಸ ತಳಿ ಪತ್ತೆ – ಯುಕೆ, ಯುಎಸ್‌, ಉಕ್ರೇನ್‌ ಸೇರಿ 27 ದೇಶಗಳಿಗೆ XEC ಆತಂಕ

    ವಾಷಿಂಗ್ಟನ್‌: 2020ರಲ್ಲಿ ಕಾಣಿಸಿಕೊಂಡು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದುಕೊಂಡಿದ್ದ ಕೊರೊನಾ ವೈರಸ್‌  ಇದೀಗ ಮತ್ತೊಂದು ಹೊಸ ರೂಪ (Covid New Variant) ಪಡೆದುಕೊಂಡಿದೆ.

    ಎಕ್ಸ್‌ಇಸಿ (XEC) ಎಂಬ ಹೆಸರಿನ ಕೋವಿಡ್‌ ರೂಪಾಂತರ ಯುರೋಪ್‌ ದೇಶಗಳಲ್ಲಿ (Europe Countries) ಪತ್ತೆಯಾಗಿದ್ದು, ಸುಮಾರು 27 ದೇಶಗಳಿಗೆ ಭಾರಿ ಆತಂಕ ಹುಟ್ಟಿಸಿದೆ. ಇದು ಅತ್ಯಂತ ವೇಗವಾಗಿ ಹರಡುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಎಚ್ಚರಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಜನರ ಹಸಿವು ನೀಗಿಸಲು 200 ಆನೆಗಳ ಹತ್ಯೆಗೆ ಮುಂದಾದ ಜಿಂಬಾಬ್ವೆ!

    ಮೂಲಗಳ ಪ್ರಕಾರ, ಒಮಿಕ್ರಾನ್‌ ಉಪತಳಿಯಾಗಿರುವ ಎಕ್ಸ್‌ಇಸಿ ರೂಪಾಂತರವನ್ನು ಕಳೆದ ಜೂನ್‌ನಲ್ಲಿ ಜರ್ಮನಿಯಲ್ಲಿ ಗುರುತಿಸಲಾಯಿತು. ಬಳಿಕ ಯುಕೆ, ಯುಎಸ್‌ (USA), ಡೆನ್ಮಾರ್ಕ್‌, ಪೋಲೆಂಡ್, ನಾರ್ವೆ, ಲಕ್ಸೆಂಬರ್ಗ್, ಉಕ್ರೇನ್ (Ukraine), ಪೋರ್ಚುಗಲ್ ಸೇರಿದಂತೆ ಸುಮಾರು 27 ದೇಶಗಳಲ್ಲಿ 500 ಮಾದರಿಗಳು ಕಾಣಿಸಿಕೊಂಡಿವೆ.

    ಇದು ಅತ್ಯಂತ ವೇಗವಾಗಿ ಹರಡುವ ಸಾಧ್ಯತೆಗಳಿವೆ. ಅದರಲ್ಲಿ ಜರ್ಮನಿ, ಡೆನ್ಮಾರ್ಕ್‌ನಂತಹ ದೇಶಗಳಲ್ಲಿ ಮಾರಣಾಂತಿಕ ಪ್ರಮಾಣದಲ್ಲಿ ವೈರಸ್‌ ಹರಡುತ್ತಿವೆ. ಎಚ್ಚೆತ್ತು ಆದಷ್ಟು ಬೇಕ ಲಸಿಕೆ ಪಡೆದುಕೊಂಡರೇ ಕನಿಷ್ಠ ಮರಣದಿಂದ ತಪ್ಪಿಸಿಕೊಳ್ಳಬಹುದು ಎಂದು ಲಂಡನ್‌ನಲ್ಲಿರುವ ಜೆನೆಟಿಕ್ಸ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಪ್ರೊಫೆಸರ್ ಫ್ರಾಂಕೋಯಿಸ್ ಬಲೂಕ್ಸ್ ತಿಳಿಸಿದ್ದಾರೆ. ಇದನ್ನೂ ಓದಿ: PublicTV Explainer: ಹೊಸ ವರ್ಷದ ಹೊತ್ತಲ್ಲೇ ದೇಶಕ್ಕೆ ಕಾಲಿಟ್ಟ ಕೊರೊನಾ ಹೊಸ ತಳಿ; ಏನಿದು ಜೆಎನ್‌.1? ಇದು ಅಪಾಯಕಾರಿಯೇ?

    XEC ರೂಪಾಂತರದ ಲಕ್ಷಣಗಳೇನು?
    * ಜ್ವರ
    * ಗಂಟಲು ನೋವು
    * ಕೆಮ್ಮು
    * ವಾಸನೆ ಗ್ರಹಿಕೆ ಕಳೆದುಕೊಳ್ಳುವುದು
    * ಹಸಿವಾಗದೇ ಇರುವುದು
    * ಮೈ-ಕೈ ನೋವು ಸೇರಿದಂತೆ ಹಿಂದಿನ ಕೋವಿಡ್‌ ಲಕ್ಷಣಗಳು

    ಪರಿಹಾರ ಏನು?
    * ಲಕ್ಷಣಗಳು ಕಂಡುಬಂದ ಕೂಡಲೇ ತಪಾಸಣೆಗೆ ಒಳಗಾಗಿ ಲಸಿಕೆ ಪಡೆದುಕೊಳ್ಳುವುದು
    * ಶುದ್ಧ ಗಾಳಿ, ನೀರು ಸೇವನೆಯೊಂದಿಗೆ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳುವುದು
    * ರೋಗ ಲಕ್ಷಣಗಳ ಬಗ್ಗೆ ತಿಳಿಯಲು ಮುಜಾಗ್ರತಾ ಕ್ರಮವಾಗಿ ತಪಾಸಣೆಗೆ ಒಳಗಾಗುವುದು