Tag: ETF

  • ಆಪರೇಷನ್ ಮಕ್ನಾ ಸಕ್ಸಸ್ – ಮೂರು ಪುಂಡಾನೆಗಳ ಸೆರೆ, ನಿಟ್ಟುಸಿರು ಬಿಟ್ಟ ಬೇಲೂರು ಜನ

    ಆಪರೇಷನ್ ಮಕ್ನಾ ಸಕ್ಸಸ್ – ಮೂರು ಪುಂಡಾನೆಗಳ ಸೆರೆ, ನಿಟ್ಟುಸಿರು ಬಿಟ್ಟ ಬೇಲೂರು ಜನ

    ಹಾಸನ: ಬೇಲೂರಿನಲ್ಲಿ (Belur) ಕಳೆದ ಭಾನುವಾರದಿಂದ ಆರಂಭಗೊಂಡಿದ್ದ ಮೂರು ಪುಂಡಾನೆಗಳ (Elephant) ಸೆರೆ ಕಾರ್ಯಾಚರಣೆ ಇಂದು ಮತ್ತೊಂದು ಕಾಡಾನೆ ಮಕ್ನಾನನ್ನು ಸೆರೆ ಹಿಡಿದು ಸ್ಥಳಾಂತರಿಸುವ ಮೂಲಕ ಅಂತ್ಯಗೊಂಡಿದೆ.

    ಒಂದು ತಿಂಗಳ ಅಂತರದಲ್ಲಿ ನಾಲ್ವರು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಮೂರು ಪುಂಡಾನೆಗಳ ಸೆರೆ ಹಿಡಿದು ಸ್ಥಳಾಂತರ ಮಾಡಲು ಅನುಮತಿ ನೀಡಿತ್ತು. ಅದರಂತೆ ಏಳು ಸಾಕಾನೆಗಳು, ಇನ್ನೂರಕ್ಕೂ ಹೆಚ್ಚು ಅರಣ್ಯ ಇಲಾಖೆಯ (Forest Department) ಸಿಬ್ಬಂದಿ, ವೈದ್ಯರುಗಳೊಂದಿಗೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ಸೆರೆಹಿಡಿದ ಆನೆಗಳಲ್ಲಿ ಒಂದನ್ನು ಚಾಮರಾಜನಗರದ ಮಲೆಮಹದೇಶ್ವರ ಅರಣ್ಯಕ್ಕೆ ಬಿಟ್ಟರೆ, ಉಳಿದ ಎರಡು ಕಾಡಾನೆಗಳನ್ನು ಸಕ್ಕರೆಬೈಲು ಕ್ಯಾಂಪ್‍ಗೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಮಲೆನಾಡು ಭಾಗದ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಎಟಿಎಫ್‌ ಸಿಬ್ಬಂದಿಯನ್ನು ಅಟ್ಟಾಡಿಸಿದ್ದ ಕಾಡಾನೆ ವಿಕ್ರಾಂತ್‌ ಸೆರೆ – ಜೀವ ಪಣಕ್ಕಿಟ್ಟು ಕಾರ್ಯಾಚರಣೆ ಮಾಡಿದ ತಂಡ

    ಕಳೆದ ಭಾನುವಾರ ಬೇಲೂರಿನ ಕಾನನಹಳ್ಳಿ ಗ್ರಾಮದಿಂದ ಮೂರು ಪುಂಡಾನೆಗಳ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮೊದಲ ದಿನದ ಕಾರ್ಯಾಚರಣೆಯಲ್ಲಿ ಪುಂಡಾನೆಯೊಂದನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿತ್ತು. ಮಂಗಳವಾರದಿಂದ ವಿಕ್ರಾಂತ್ ಕಾಡಾನೆ ಸೆರೆ ಆರಂಭಿಸಿ, ನಿರಂತರ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ವಾಟೀಹಳ್ಳಿ ಬಳಿ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯಲಾಯಿತು. ಇದಾದ ಎರಡು ದಿನಗಳ ಕಾಲ ಬಿಕ್ಕೋಡು ಬಳಿಯ ತಾತ್ಕಾಲಿಕ ಸಾಕಾನೆ ಶಿಬಿರದಲ್ಲಿ ಸಾಕಾನೆಗಳು, ಮಾವುತರು, ಕಾವಾಡಿಗರು ಎರಡು ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಇಂದು (ಮಾ.23) ಮುಂಜಾನೆ ಜನ-ಜಾನುವಾರುಗಳು, ಬೈಕ್‍ಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿದ್ದ ಮಕ್ನಾ ಕಾಡಾನೆಯನ್ನು ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು.

    ಮುಂಜಾನೆಯೇ ಇಟಿಎಫ್ ಸಿಬ್ಬಂದಿ ಮಕ್ನಾ ಕಾಡಾನೆ ಇದ್ದ ಸ್ಥಳವನ್ನು ಪತ್ತೆ ಹಚ್ಚಿದ್ದರು. ಸಕಲೇಶಪುರದ ಹೆಬ್ಬನಹಳ್ಳಿ ಬಳಿಯಿಂದ ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಿ, ಆನೆಗೆ ಅರವಳಿಕೆ ನೀಡಿ ಸೆರೆಹಿಡಿಯಲಾಯಿತು. ಸತತ ಮೂರು ಗಂಟೆಗಳ ಕಾಲ ಶ್ರಮಪಟ್ಟು ಕಾಡಾನೆಗೆ ಹಗ್ಗ ಕಟ್ಟಿ ರಸ್ತೆಗೆ ಎಳೆದು ತಂದು ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಸಕ್ಕರೆಬೈಲು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಇದನ್ನೂ ಓದಿ: ಕಾಡಾನೆ ಸೆರೆ ಮೊದಲ ದಿನದ ಕಾರ್ಯಾಚರಣೆ ಯಶಸ್ವಿ – ಸತತ 4 ಗಂಟೆಗಳ ನಂತರ ಒಂಟಿಸಲಗ ಸೆರೆ

  • ಎಟಿಎಫ್‌ ಸಿಬ್ಬಂದಿಯನ್ನು ಅಟ್ಟಾಡಿಸಿದ್ದ ಕಾಡಾನೆ ವಿಕ್ರಾಂತ್‌ ಸೆರೆ – ಜೀವ ಪಣಕ್ಕಿಟ್ಟು ಕಾರ್ಯಾಚರಣೆ ಮಾಡಿದ ತಂಡ

    ಎಟಿಎಫ್‌ ಸಿಬ್ಬಂದಿಯನ್ನು ಅಟ್ಟಾಡಿಸಿದ್ದ ಕಾಡಾನೆ ವಿಕ್ರಾಂತ್‌ ಸೆರೆ – ಜೀವ ಪಣಕ್ಕಿಟ್ಟು ಕಾರ್ಯಾಚರಣೆ ಮಾಡಿದ ತಂಡ

    ಹಾಸನ: ಬೇಲೂರು ಭಾಗದ ಜನರ ನಿದ್ದೆಗೆಡಿಸಿದ್ದ ಹಾಗೂ ಅರಣ್ಯ ಇಲಾಖೆಗೆ (Forest Department) ತಲೆನೋವಾಗಿದ್ದ ದೈತ್ಯಾಕಾರದ ಪುಂಡಾನೆ ವಿಕ್ರಾಂತ್‌ನನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಸತತ ಮೂರು ದಿನಗಳಿಂದ ವಿಕ್ರಾಂತ್ ಸೆರೆ ಹಿಡಿಯಲು ಏಳು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಸತತ ಪ್ರಯತ್ನಪಟ್ಟಿದ್ದರು. ಇದೀಗ ವಿಕ್ರಾಂತ್‌ (Vikrant) ಜೊತೆಗಿದ್ದ ಭೀಮನಿಂದ ಬೇರ್ಪಡಿಸಿ ಅರವಳಿಕೆ ನೀಡಿ ಕಾಡಾನೆಯನ್ನು ಇಟಿಎಫ್‌ ಸಿಬ್ಬಂದಿ ಸೆರೆಹಿಡಿದಿದ್ದಾರೆ.

    ಮಂಗಳವಾರದಿಂದ ಬೇಲೂರಿನ (Beluru) ಕಾನನಹಳ್ಳಿ ಗ್ರಾಮದ ಬಳಿಯಿರುವ ಅರಣ್ಯದ ಬಳಿ ಏಳು ಸಾಕಾನೆಗಳು, ಇನ್ನೂರಕ್ಕೂ ಹೆಚ್ಚು ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ವಿಕ್ರಾಂತ್ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದರು. ಮೊದಲ ದಿನ 6 ಗಂಟೆಗಳ ಕಾಲ ನಿರಂತರ ಪ್ರಯತ್ನಪಟ್ಟರೂ, ಅರಣ್ಯ ಇಲಾಖೆಗೆ ಚಳ್ಳೆ ಹಣ್ಣು ತಿನ್ನಿಸಿ ದಟ್ಟ ಅರಣ್ಯದೊಳಗೆ ಸೇರಿಕೊಂಡಿತ್ತು. ಎರಡನೇ ದಿನದ ಕಾರ್ಯಾಚರಣೆ ವೇಳೆ ಭೀಮ ಎಂಟ್ರಿಕೊಟ್ಟಿದ್ದರಿಂದ ಕೆಲಕಾಲ ಕಾರ್ಯಾಚರಣೆ ಸ್ಥಗಿತಗೊಳಿಸಿ, ಪುನಃ ಕಾರ್ಯಾಚರಣೆ ನಡೆಸಿದ್ದರು. ಗುಂಪಿನೊಳಗಿದ್ದ ವಿಕ್ರಾಂತ್‌ನನ್ನು ಬೇರ್ಪಡಿಸಿ ಅರವಳಿಕೆ ಚುಚ್ಚುಮದ್ದು ನೀಡಲು ವೈದ್ಯರು ಹಾಗೂ ಇಟಿಎಫ್ ಸಿಬ್ಬಂದಿ ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಸಿಟ್ಟಿಗೆದ್ದು ಅಟ್ಟಾಡಿಸಿದ ಕಾಡಾನೆ – ಓಡಿ ಓಡಿ ಪಾರಾದ ಇಟಿಎಫ್ ಸಿಬ್ಬಂದಿ!

    ವಿಕ್ರಾಂತ್‌ ಸೆರೆಯಾಗಿದ್ದು ಹೇಗೆ?
    ಗುರುವಾರ ಕಾರ್ಯಾಚರಣೆ ವೇಳೆ, ಎಟಿಎಫ್‌ (ETF) ಸಿಬ್ಬಂದಿ ಭೀಮನಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಕೆಲಕಾಲ ನಿತ್ರಾಣಗೊಳ್ಳುವಂತೆ ಮಾಡಿ ವಿಕ್ರಾಂತ್‌ನನ್ನು ಬೇರ್ಪಡಿಸಿದರು. ಬಳಿಕ ವಾಟೀಹಳ್ಳಿ ಗ್ರಾಮದ ಕಾಫಿ ತೋಟವೊಂದರಲ್ಲಿ ನಿಂತಿದ್ದ ವಿಕ್ರಾಂತ್‌ ಬಳಿಗೆ ಸಾಕಾನೆಗಳು ತೆರಳಿದ್ದು ಅರವಳಿಕೆ ತಜ್ಞರಾದ ರಮೇಶ್ ಚುಚ್ಚುಮದ್ದು ನೀಡಿದರು. ಅರವಳಿಕೆ ಚುಚ್ಚುಮದ್ದು ನೀಡುತ್ತಿದ್ದಂತೆ ಕಾಫಿ ತೋಟದೊಳಗಿಂದ ವೇಗವಾಗಿ ಓಡಲಾರಂಭಿಸಿದ ವಿಕ್ರಾಂತ್ ಅರೇಹಳ್ಳಿ-ಸಕಲೇಶಪುರ ರಸ್ತೆ ದಾಟಿ ಕಾಫಿ ತೋಟಕ್ಕೆ ಬಂದು ಕುಸಿದು ಬಿದ್ದಿತ್ತು. ಬಳಿಕ ಸಾಕಾನೆಗಳ ಸಹಾಯದಿಂದ ಆನೆಯನ್ನು ಸಿಬ್ಬಂದಿ ಸೆರೆಹಿಡಿದಿದ್ದಾರೆ.

    ವಾಟೀಹಳ್ಳಿ ಬಳಿ ಇಟಿಎಫ್ ಸಿಬ್ಬಂದಿ ವಿಕ್ರಾಂತ್ ಇರುವ ಸ್ಥಳವನ್ನು ಗುರುತು ಮಾಡುತ್ತಿದ್ದ ವೇಳೆ, ಸಿಬ್ಬಂದಿಯನ್ನು ಈ ಕಾಡಾನೆ ಅಟ್ಟಾಡಿಸಿತ್ತು. ಈ ವೇಳೆ ಕೂದಲೆಳೆ ಅಂತರದಲ್ಲಿ ಇಟಿಎಫ್‌ ಸಿಬ್ಬಂದಿ ಪಾರಾಗಿದ್ದರು. ಇದನ್ನೂ ಓದಿ: ಹಾಟ್ ಅವತಾರ ತಾಳಿದ ಜಾಕ್ವೆಲಿನ್- ನಟಿಯ ಲುಕ್‌ಗೆ ಪಡ್ಡೆಹುಡುಗರು ಫಿದಾ

  • ಕಾಡಾನೆ ಸೆರೆ ಮೊದಲ ದಿನದ ಕಾರ್ಯಾಚರಣೆ ಯಶಸ್ವಿ – ಸತತ 4 ಗಂಟೆಗಳ ನಂತರ ಒಂಟಿಸಲಗ ಸೆರೆ

    ಕಾಡಾನೆ ಸೆರೆ ಮೊದಲ ದಿನದ ಕಾರ್ಯಾಚರಣೆ ಯಶಸ್ವಿ – ಸತತ 4 ಗಂಟೆಗಳ ನಂತರ ಒಂಟಿಸಲಗ ಸೆರೆ

    ಹಾಸನ: ಜಿಲ್ಲೆಯ ಮಲೆನಾಡು ಭಾಗವಾದ ಬೇಲೂರು (Belur) ಭಾಗದಲ್ಲಿ ಮಿತಿಮೀರಿರುವ ಕಾಡಾನೆ (Wild Elephant) ಹಾವಳಿಗೆ ತಾತ್ಕಾಲಿಕ ಬ್ರೇಕ್ ಹಾಕಲು ಅರಣ್ಯ ಇಲಾಖೆ ಇಂದಿನಿಂದ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಿದ್ದು, ಮೊದಲ ದಿನದ ಕಾರ್ಯಾಚರಣೆ ಯಶಸ್ವಿಯಾಗಿದೆ.

    ಬೆಳಗ್ಗೆ 8 ಗಂಟೆ ನಂತರ ಆರು ಇಟಿಎಫ್ ತಂಡಗಳು ಪುಂಡಾನೆಗಳನ್ನು ಗುರುತಿಸಲು ತೆರಳಿದ್ದರು. ಬೇಲೂರು ತಾಲೂಕಿನ ಹಳ್ಳಿಗದ್ದೆ ಗ್ರಾಮದ ಶಾಂತಿ ಎಸ್ಟೇಟ್‌ನಲ್ಲಿ ಎರಡು ಕಾಡಾನೆಗಳು ಕಂಡುಬಂದಿದ್ದು, ಒಂದು ಕಾಡಾನೆಗೆ ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿದರು. ಆದರೆ ಎರಡು ಕಾಡಾನೆಗಳು ಜೊತೆ ಜೊತೆಯಲ್ಲಿಯೇ ಎಲ್ಲಂದರಲ್ಲಿ ಓಡಾಡಲಾರಂಭಿಸಿದವು. ನಂತರ ಏಳು ಕುಮ್ಕಿ ಆನೆಗಳೊಂದಿಗೆ ಹರಸಾಹಸಪಟ್ಟು ಎರಡು ಕಾಡಾನೆಗಳನ್ನು ಬೇರ್ಪಡಿಸಿದರು. ಇದನ್ನೂ ಓದಿ: ಸರ್ಕಾರದ ನಿರ್ಲಕ್ಷ್ಯಕ್ಕೆ ಸರ್ಕಾರಿ ಶಾಲೆಗಳಿಗೆ ಆಪತ್ತು – ಜಿಲ್ಲೆಯಲ್ಲಿ 579 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ದಾಖಲಾತಿ

    ನಂತರ ಒಂಟಿಸಲಗ ಕುಸಿದು ಬಿದ್ದಿದ್ದು ನೀರು ಹಾಕಿ ಪ್ರಾಥಮಿಕ ಚಿಕಿತ್ಸೆ ನೀಡಿ ಎಚ್ಚರಗೊಳಿದರು. ನಂತರ ಕಾಡಾನೆಯನ್ನು ಸಾಕಾನೆಗಳು ಎಳೆದು ತಂದವು. ಕ್ರೇನ್ ಮೂಲಕ ಕಾಡಾನೆಯನ್ನು ಲಾರಿಗೆ ಶಿಫ್ಟ್ ಮಾಡಲಾಗಿದ್ದು, ಅರಣ್ಯಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕ್ಯಾಪ್ಟನ್ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಇದನ್ನೂ ಓದಿ: 2002ರ ಗುಜರಾತ್‌ ಗಲಭೆಯೇ ದೇಶದ ಅತಿದೊಡ್ಡ ಗಲಭೆಯಲ್ಲ – ರೈಲು ದುರಂತ ಸ್ಮರಿಸಿದ ಮೋದಿ