Tag: Esther Duflo

  • ಅರ್ಥಶಾಸ್ತ್ರ ನೊಬೆಲ್ – ಭಾರತೀಯ ಮೂಲದ ಅಭಿಜಿತ್ ದಂಪತಿಗೆ ಪ್ರಶಸ್ತಿ

    ಅರ್ಥಶಾಸ್ತ್ರ ನೊಬೆಲ್ – ಭಾರತೀಯ ಮೂಲದ ಅಭಿಜಿತ್ ದಂಪತಿಗೆ ಪ್ರಶಸ್ತಿ

    ನವದೆಹಲಿ: ಅರ್ಥಶಾಸ್ತ್ರದ 2019ರ ನೊಬೆಲ್ ಪ್ರಶಸ್ತಿ ಪ್ರಕಟವಾಗಿದ್ದು, ಭಾರತೀಯ ಮೂಲದ ಅಮೆರಿಕದಲ್ಲಿ ನೆಲೆಸಿರುವ ಅಭಿಜಿತ್ ಬ್ಯಾನರ್ಜಿ ಸೇರಿದಂತೆ ಎಸ್ತರ್ ಡುಫ್ಲೋ ಹಾಗೂ ಮಿಷಲ್ ಕ್ರೆಮರ್ ಅವರಿಗೆ ಲಭಿಸಿದೆ.

    ‘ಜಾಗತಿಕ ಬಡತನವನ್ನು ಹೋಗಲಾಡಿಸುವ ಕುರಿತ ಪ್ರಾಯೋಗಿಕ ವಿಧಾನ’ಕ್ಕಾಗಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ ಇಂದು ಪ್ರಶಸ್ತಿಯನ್ನು ಪ್ರಕಟಿಸಿದೆ.

    58 ವರ್ಷದ ಬ್ಯಾನರ್ಜಿ ಕೋಲ್ಕತಾ ವಿಶ್ವವಿದ್ಯಾಲಯ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. 1988ರಲ್ಲಿ ಇವರು ಪಿಎಚ್‍ಡಿ ಪಡೆದಿದ್ದಾರೆ.

    ಪ್ರಸ್ತುತ ಫೋರ್ಡ್ ಫೌಂಡೇಶನ್ ಇಂಟರ್ ನ್ಯಾಷನಲ್‍ನ ಮ್ಯಾಸಚೂಸೆಟ್ಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. 2003ರಲ್ಲಿ ಬ್ಯಾನರ್ಜಿಯವರು ಡುಫ್ಲೋ ಮತ್ತು ಸೆಂಧಿಲ್ ಮುಲೈನಾಥನ್ ಅವರೊಂದಿಗೆ ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆ್ಯಕ್ಷನ್ ಲ್ಯಾಬ್(ಜೆ-ಪಿಎಎಲ್) ಸ್ಥಾಪಿಸಿದ್ದರು. ಅಲ್ಲದೆ ಲ್ಯಾಬ್‍ನ ನಿರ್ದೇಶಕರಲ್ಲಿ ಇವರೂ ಸಹ ಒಬ್ಬರಾಗಿದ್ದಾರೆ.

    ಇನ್ನೂ ವಿಶೇಷವೆಂದರೆ ಎಸ್ತರ್ ಡುಫ್ಲೋ ಅವರು ಅಭಿಜಿತ್ ಬ್ಯಾನರ್ಜಿ ಅವರ ಪತ್ನಿಯಾಗಿದ್ದಾರೆ. ಈ ಮೂಲಕ ಪತಿ-ಪತ್ನಿ ಇಬ್ಬರಿಗೂ ಒಂದೇ ಬಾರಿಗೆ ನೊಬೆಲ್ ಪ್ರಶಸ್ತಿ ಲಭಿಸಿದೆ.

    ಈ ವರ್ಷದ ಪ್ರಶಸ್ತಿ ವಿಜೇತರು ನಡೆಸಿದ ಸಂಶೋಧನೆಯು ಜಾಗತಿಕ ಬಡತನದ ವಿರುದ್ಧ ಹೋರಾಡುವ ನಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿದೆ. ಕೇವಲ ಎರಡು ದಶಕಗಳಲ್ಲಿ ಅವರ ಹೊಸ ಪ್ರಯೋಗ ಆಧಾರಿತ ವಿಧಾನವು ಅಭಿವೃದ್ಧಿ ಅರ್ಥಶಾಸ್ತ್ರವನ್ನು ಪರಿವರ್ತಿಸಿದೆ. ಈಗ ಅಭಿವೃದ್ಧಿ ಹೊಂದುತ್ತಿರುವ ಸಂಶೋಧನಾ ಕ್ಷೇತ್ರವಾಗಿದೆ ಎಂದು ನೋಬೆಲ್ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

    ಇಲ್ಲಿಯವರೆಗೆ ಆರ್ಥಸಾಸ್ತ್ರದಲ್ಲಿ 81 ಮಂದಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ಈ ಹಿಂದೆ 1998ರಲ್ಲಿ ಭಾರತೀಯ ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್ ಅವರು ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದರು.

    ಪ್ರಶಸ್ತಿಯೂ 11.10 ಲಕ್ಷ ಡಾಲರ್(7.90 ಕೋಟಿ ರೂ.) ನಗದು ಬಹುಮಾನ, ಚಿನ್ನದ ಪದಕ ನೀಡಲಾಗುತ್ತದೆ. ಕಳೆದ ವಾರ ಔಷಧಿ, ಭೌತಶಾಸ್ತ್ರ, ರಸಾಯನಶಾಸ್ತ್ರ, ಶಾಂತಿ, ಸಾಹಿತ್ಯ ಕ್ಷೇತ್ರಗಳ ನೊಬೆಲ್ ಪ್ರಶಸ್ತಿಯನ್ನು ಪ್ರಕಟಿಸಲಾಗಿತ್ತು.

    ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರನ್ನು ಹೊರತುಪಡಿಸಿ ಎಲ್ಲರೂ ಡಿಸೆಂಬರ್ 10ರಂದು ನೊಬೆಲ್ ಅವರ ಮರಣದ ವಾರ್ಷಿಕೋತ್ಸವದಂದು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಶಾಂತಿ ಪ್ರಶಸ್ತಿ ವಿಜೇತರಿಗೆ ನಾರ್ವೆಯ ಓಸ್ಲೋದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.