Tag: essentials

  • ಅಗತ್ಯ ವಸ್ತುಗಳ ದರ ಗಗನಕ್ಕೆ- ಪ್ರಧಾನಿ ಮಧ್ಯ ಪ್ರವೇಶಕ್ಕೆ ದೀದಿ ಒತ್ತಾಯ

    ಅಗತ್ಯ ವಸ್ತುಗಳ ದರ ಗಗನಕ್ಕೆ- ಪ್ರಧಾನಿ ಮಧ್ಯ ಪ್ರವೇಶಕ್ಕೆ ದೀದಿ ಒತ್ತಾಯ

    ಕೋಲ್ಕತ್ತಾ: ಅಕ್ರಮ ದಾಸ್ತಾನು ನಿಯಂತ್ರಿಸಿ, ಸರಬರಾಜು ಹೆಚ್ಚಿಸಿ ಹಾಗೂ ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆಯನ್ನು ತಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ತುರ್ತು ಮಧ್ಯ ಪ್ರವೇಶಿಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

    ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಅವರು, ಆಲೂಗಡ್ಡೆ ಹಾಗೂ ಈರುಳ್ಳಿ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳ ಬೆಲೆಯನ್ನು ನಿಯಂತ್ರಿಸುವ ರಾಜ್ಯಗಳ ಅಧಿಕಾರವನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಈ ವಿಚಾರದ ಗಂಭೀರತೆಯನ್ನು ಅರಿತು ನಾನು ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಮನವಿ ಮಾಡುತ್ತಿದ್ದೇನೆ. ಅಕ್ರಮ ದಾಸ್ತಾನು ನಿಯಂತ್ರಿಸಿ, ಸರಬರಾಜು ಹೆಚ್ಚಿಸಿ ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಹಬದಿಗೆ ತರಬೇಕು. ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ನಿಯಂತ್ರಿಸಿ ಇಲ್ಲವೇ ಕೃಷಿ ಉತ್ಪನ್ನಗಳ ಉತ್ಪಾದನೆ, ಪೂರೈಕೆ, ವಿತರಣೆ ಹಾಗೂ ಮಾರಾಟ ಮಾಡುವ ರಾಜ್ಯ ಸರ್ಕಾರಗಳ ಹಕ್ಕನ್ನು ಮರು ಸ್ಥಾಪಿಸಿ ಎಂದು ಆಗ್ರಹಿಸಿದ್ದಾರೆ. ಒಟ್ಟು ನಾಲ್ಕು ಪುಟಗಳ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಮತಾ ಬ್ಯಾನರ್ಜಿ ಬರೆದಿದ್ದಾರೆ.

    ಕೃಷಿ ಸರಕುಗಳ ಉತ್ಪಾದನೆ, ಪೂರೈಕೆ, ವಿತರಣೆ ಹಾಗೂ ಮಾರಾಟದ ಮೇಲೆ ತಮ್ಮ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ರೂಪಿಸಲು ರಾಜ್ಯಗಳಿಗೆ ಅನುಮತಿ ನೀಡಿ ಎಂದು ಅವರು ಒತ್ತಾಯಿಸಿದ್ದಾರೆ. ಆಲೂಗಡ್ಡೆ ಹಾಗೂ ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯುವ ಶಕ್ತಿ ರಾಜ್ಯ ಸರ್ಕಾರಗಳಿಗೆ ಇಲ್ಲವಾಗಿದೆ. ಇದರಿಂದಾಗಿ ಸಾಮಾನ್ಯ ಜನರು ನಿರಂತರ ನೋವು ಅನುಭವಿಸುತ್ತಿದ್ದು, ನಾವು ಮೂಕ ಪ್ರೇಕ್ಷಕರಾಗಿ ಕುಳಿತುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.

    ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಖಾದ್ಯ ತೈಲಗಳು, ಈರುಳ್ಳಿ, ಆಲೂಗಡ್ಡೆ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ ಎಂದು ಮಮತಾ ಬ್ಯಾನರ್ಜಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

  • ವಸತಿ ಬಡಾವಣೆಗಳಲ್ಲಿಯೇ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ

    ವಸತಿ ಬಡಾವಣೆಗಳಲ್ಲಿಯೇ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ

    – ತರಕಾರಿ, ಹಾಲು, ಆಹಾರ ಸಾಮಗ್ರಿ ವಿತರಣೆ

    ಹುಬ್ಬಳ್ಳಿ: ಅಗತ್ಯ ವಸ್ತುಗಳನ್ನು ವಸತಿ ಬಡಾವಣೆಗಳಲ್ಲಿಯೇ ಪೂರೈಸಲು ಧಾರವಾಡ ಜಿಲ್ಲಾಡಳಿತ ಮುಂದಾಗಿದೆ.

    ಕೊರೊನಾ ವೈರಸ್ ನಿಯಂತ್ರಿಸಲು 21 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಸಾರ್ವಜನಿಕರಿಗೆ ಅಗತ್ಯ ಸಾಮಗ್ರಿಗಳ ಕೊರತೆಯಾಗದಂತೆ ಸಣ್ಣ ವ್ಯಾಪಾರಿಗಳು, ತಳ್ಳುವ ಗಾಡಿಗಳು ಹಾಗೂ ಆಟೋಗಳ ಮೂಲಕ ಜನವಸತಿ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಧಾರವಾಡ ಜಿಲ್ಲಾಡಳಿತ ನಿರ್ಧರಿಸಿದೆ.

    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಈ ನಿರ್ಧಾರ ಪ್ರಕಟಿಸಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಎಲ್ಲ ವಾರ್ಡುಗಳ ವ್ಯಾಪ್ತಿಯ ವಲಯ ಸಹಾಯಕ ಆಯುಕ್ತರು, ಸಂಬಂಧಿಸಿದ ಪೊಲೀಸ್ ಠಾಣೆ ವ್ಯಾಪ್ತಿಯ ಅಧಿಕಾರಿಗಳು, ತರಕಾರಿ, ಅಗತ್ಯ ವಸ್ತುಗಳು, ಸಗಟು ಮತ್ತು ಸಣ್ಣ ವ್ಯಾಪಾರಿಗಳ ಸಭೆ ನಡೆಸಿದರು. ಈ ವೇಳೆ ಜನ ವಸತಿ ಸ್ಥಳಗಳಲ್ಲಿ ತಳ್ಳುವ ಗಾಡಿಗಳು, ಆಟೋಗಳ ಮೂಲಕ ತರಕಾರಿ ಪೂರೈಸಲು ಉತ್ತೇಜನ ನೀಡುವಂತೆ ಸೂಚಿಸಿದರು.

    ಜನವಸತಿ ಸ್ಥಳಗಳಿಗೆ ಪೂರೈಸಲು ಅಗತ್ಯ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲು ತಿಳಿಸಿದರು. ತಾಲೂಕು ಕೇಂದ್ರಗಳು ಮತ್ತು ಗ್ರಾಮೀಣ ಹೋಬಳಿ ಪ್ರದೇಶಗಳಲ್ಲಿಯೂ ಅಲ್ಲಿನ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸರು ಇದೇ ಮಾದರಿಯಲ್ಲಿ ಕ್ರಮ ಕೈಗೊಂಡು ಜನರಿಗೆ ತರಕಾರಿ ಮತ್ತು ಅಗತ್ಯ ವಸ್ತುಗಳನ್ನು ತಲುಪಿಸಬೇಕು. ತಳ್ಳುವ ಗಾಡಿ ಅಥವಾ ಆಟೋಗಳಲ್ಲಿ ಪ್ರತಿದಿನ ಮಾರಾಟಕ್ಕೆ ಅವಕಾಶ ನೀಡಬೇಕು. ಅಲ್ಲದೆ ಈ ವ್ಯಾಪಾರಕ್ಕೆ ಸಮಯದ ನಿರ್ಬಂಧವಿಲ್ಲ ಎಂದು ತಿಳಿಸಿದ್ದಾರೆ.

    ಜನತೆ ಮಾರುಕಟ್ಟೆಗೆ ಬರುವ ಅಗತ್ಯವಿಲ್ಲ, ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಅವರಿರುವ ಸ್ಥಳಗಳಲ್ಲಿಯೇ ಸುಲಭವಾಗಿ ದೊರೆಯುತ್ತವೆ. ಜನರು ಯಾವುದೇ ಕಾರಣಕ್ಕೂ ಮಾರುಕಟ್ಟೆಗೆ ಬರಬಾರದು. ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.