Tag: eshwar khandre

  • ಯತ್ನಾಳ್ ಮನುಷ್ಯ ಜಾತಿಗೆ ಸೇರಿದವರೇ ಅಲ್ಲ: ಖಂಡ್ರೆ ಕೆಂಡಾಮಂಡಲ

    ಯತ್ನಾಳ್ ಮನುಷ್ಯ ಜಾತಿಗೆ ಸೇರಿದವರೇ ಅಲ್ಲ: ಖಂಡ್ರೆ ಕೆಂಡಾಮಂಡಲ

    ಬೀದರ್: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅವರನ್ನು ಪಾಕ್ ಏಜೆಂಟ್ ಎಂದ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಇಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿ ಯತ್ನಾಳ್ ಮನುಷ್ಯ ಜಾತಿಗೆ ಸೇರಿದವರೇ ಅಲ್ಲ ಎಂದು ಕಿಡಿಕಾರಿದ್ದಾರೆ.

    ಖಾಸಗಿ ಕಾಲೇಜಿನಲ್ಲಿ ಸುದ್ದಿಗೋಷ್ಠಿ ಮಾಡಿದ ಖಂಡ್ರೆ, ಈ ದೇಶಕ್ಕಾಗಿ ಹೋರಾಟ ಮಾಡಿದ ಶತಾಯುಷಿ ಬಗ್ಗೆ ನಕಲಿ ಹೋರಾಟಗಾರ, ಪಾಕಿಸ್ತಾನದ ಏಜೆಂಟ್ ಎಂದು ಹುಚ್ಚು ಹುಚ್ಚಾಗಿ ಹೇಳಿಕೆ ಕೊಟ್ಟಿದ್ದು ಅತ್ಯಂತ ಖಂಡನೀಯವಾಗಿದೆ. ಇದು ಬರಿ ಸ್ವಾತಂತ್ರ್ಯ ಸೇನಾನಿಗಳಿಗೆ ಮಾಡಿದ ಅಪಮಾನವಲ್ಲ, ದೇಶದ 130 ಕೋಟಿ ಜನರಿಗೆ ಮಾಡಿದ ದ್ರೋಹವಾಗಿದೆ. ಹೀಗೆ ಮಾತನಾಡುವ ಯತ್ನಳ್ ಮನುಷ್ಯ ಜಾತಿಗೆ ಸೇರಿದವರೇ ಅಲ್ಲ. ಇದು ದೇಶದ್ರೋಹದ ಹೇಳಿಕೆ ಎಂದು ವಾಗ್ದಾಳಿ ನಡೆಸಿದರು.

    ಒಬ್ಬ ಹಿರಿಯ ವಯೋವೃದ್ಧರಿಗೆ ಏಕ ವಚನದಲ್ಲಿ ಹೇಳಿಕೆ ನೀಡಿದ್ದು ಅಮಾನವೀಯ ಹಾಗೂ ಲಜ್ಜೆಗೆಡಿತನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯತ್ನಾಳ್‍ರನ್ನು ಕೂಡಲೆ ಶಾಸಕ ಸ್ಥಾನದಿಂದ ಉಚ್ಛಾಟನೆ ಮಾಡಿ ಬಿಜೆಪಿ ಅವರ ವಿರುದ್ಧ ಕಾನೂನು ರೀತಿ ಕ್ರಮ ತಗೆದುಕೊಳ್ಳಬೇಕು ಎಂದು ಬೀದರ್ ನಲ್ಲಿ ಖಂಡ್ರೆ ಹರಿಹಾಯ್ದರು.

    ಯತ್ನಾಳ್ ಹೇಳಿದ್ದೇನು?
    ಮಂಗಳವಾರ ವಿಜಯಪುರದಲ್ಲಿ ಯತ್ನಾಳ್ ಅವರು ದೊರೆಸ್ವಾಮಿ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಮಾಧ್ಯಮಗಳ ಜೊತೆ ಮಾತನಾಡುತ್ತಾ, ದೇಶದ್ರೋಹಿ ಘೋಷಣೆ ಹಾಗೂ ಫೇಸ್‍ಬುಕ್ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಖಡಕ್ ವಾರ್ನಿಂಗ್ ನೀಡಿದ್ದರು. ದೇಶದ್ರೋಹಿಗಳಿಗೆ ಬೀಳುತ್ತವೆ ಗುಂಡೇಟು, ದೇಶದ್ರೋಹಿಗಳೇ ಹುಷಾರ್. ಇನ್ನು ಮುಂದು ಹಾಗೆಲ್ಲ ಮಾಡಿದರೆ ಗುಂಡೇಟು ಬೀಳುತ್ತವೆ. ಜೈಲಿಗೆ ಕಳುಹಿಸುವುದೆಲ್ಲ ಇಲ್ಲ, ಇನ್ಮೇಲೆ ದೇಶದ್ರೋಹದ ಹೇಳಿಕೆ ಕೊಟ್ಟರೆ ಅವರಿಗೆ ಗುಂಡು ಬೀಳುತ್ತೆ ಎನ್ನುವ ಮೂಲಕ ದೇಶದ್ರೋಹಿಗಳಿಗೆ ಎಚ್ಚರಿಕೆ ಕೊಟ್ಟಿದ್ದರು. ಅಷ್ಟೇ ಅಲ್ಲದೇ ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ. ಎಲ್ಲಿದ್ದಾನೆ ಆ ಮುತ್ಯಾ ಈಗ, ದೊರೆಸ್ವಾಮಿ ಪಾಕಿಸ್ತಾನ ಏಜೆಂಟ್. ಪಾಕಿಸ್ತಾನ ಏಜೆಂಟ್ರಂತೆ ದೊರೆಸ್ವಾಮಿ ಮಾತಾಡ್ತಿದ್ದಾನೆ ಎಂದು ಕಿಡಿಕಾರಿದ್ದರು.

  • ಕಾಗೋಡು ತಿಮ್ಮಪ್ಪ ಹಿರಿಯರು, ಪಕ್ಷದ ಆಂತರಿಕ ವಿಚಾರ ಮಾತಾಡಲ್ಲ: ಖಂಡ್ರೆ

    ಕಾಗೋಡು ತಿಮ್ಮಪ್ಪ ಹಿರಿಯರು, ಪಕ್ಷದ ಆಂತರಿಕ ವಿಚಾರ ಮಾತಾಡಲ್ಲ: ಖಂಡ್ರೆ

    ರಾಯಚೂರು: ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಳಂಬವಾಗಿದೆ. ಎಲ್ಲಾ ಆಯಾಮಗಳ ಬಗ್ಗೆ ಯೋಚಿಸಿ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತೆ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಖಂಡ್ರೆ, ಕಾಗೋಡು ತಿಮ್ಮಪ್ಪ ಪಕ್ಷದ ಹಿರಿಯರು ಅವರ ಅಭಿಪ್ರಾಯ ಪರಿಗಣಿಸಲಾಗುತ್ತದೆ. ಪಕ್ಷದ ಹಿತದೃಷ್ಟಿಯಿಂದ ಪಕ್ಷದ ಆಂತರಿಕ ವಿಚಾರಗಳನ್ನ ನಾನು ಮಾತನಾಡುವುದಿಲ್ಲ ಎಂದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹರಿಹಾಯ್ದ ಖಂಡ್ರೆ, ಕ್ರೂರ ರೀತಿಯಲ್ಲಿ ರಾಜ್ಯ ಕೇಂದ್ರ ಸರ್ಕಾರ ವರ್ತನೆ ಮಾಡುತ್ತಿವೆ. ಕೋಮುಸೌಹಾರ್ದ ಕದಡುವ ಹೇಳಿಕೆಯನ್ನ ಬಿಜೆಪಿ ನಾಯಕರು ನೀಡುತ್ತಿದ್ದಾರೆ. ಉದ್ಯೋಗ ಸೃಷ್ಟಿ ಮಾಡುವುದಿರಲಿ ಯುವಕರ ಉದ್ಯೋಗಗಳೇ ಹೋಗುತ್ತಿವೆ. ದೇಶ ಆರ್ಥಿಕವಾಗಿ ಕುಸಿಯುತ್ತಾ ಹೋಗುತ್ತಿದೆ. ರೈತರ ಕೃಷಿ ಭಾಗ್ಯ ಯೋಜನೆ ಕೈಬಿಡಲಾಗಿದೆ. ಅಸಂವಿಧಾನಿಕ ಕಾಯಿದೆ ರೂಪಿಸಿ ಜಾತಿ ಜಾತಿ ಮಧ್ಯೆ ಜಗಳ ತರುತ್ತಿದ್ದಾರೆ. ವಿಧಾನಸಭಾ ಅಧಿವೇಶನ ವೇಳೆ ಒಳಗೆ ಹಾಗೂ ಹೊರಗಡೆ ಹೋರಾಟ ಮಾಡುತ್ತೇವೆ. ಇದುವರೆಗೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲಿ ಅಂತ ಈಶ್ವರ ಖಂಡ್ರೆ ಸರ್ಕಾರಕ್ಕೆ ಸವಾಲು ಹಾಕಿದರು.

    ರೈತ ವಿರೋಧಿ ಕ್ರಮಗಳನ್ನ ಸರ್ಕಾರ ತೆಗೆದುಕೊಳ್ಳುತ್ತಿದೆ. ನಮ್ಮ ಸರ್ಕಾರ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳ ಅನುಕೂಲ ಮಾಡಲಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಕೃಷಿ ಹೊಂಡಗಳನ್ನ ಸ್ಥಗಿತಗೊಳಿಸಲಾಗಿದೆ. ರೈತರ ಬೇಡಿಕೆಯಿದ್ದರೂ ಸ್ಪ್ರಿಕ್ಲರ್ ಸೆಟ್ ಗಳನ್ನ ರೈತರಿಗೆ ನೀಡುತ್ತಿಲ್ಲ. ಇದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ದಿವಾಳಿ ಹಂತದಲ್ಲಿವೆ ಅನ್ನೊದು ತಿಳಿಯುತ್ತೆ ಎಂದರು.

    ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹೊಸ ಕಾಯಿದೆ ಅವಶ್ಯಕತೆಯಿರಲಿಲ್ಲ. ಈಗಾಗಲೇ ಪೌರತ್ವ ಕಾಯಿದೆ ಇದೆ. ಆದ್ರೆ ಈಗ ಧರ್ಮಾಧಾರಿತ ಕಾಯಿದೆ ಜಾರಿಗೆ ತರುವುದು ಸರಿಯಲ್ಲ ಅಂತ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

  • ಕುಂಬಳಕಾಯಿ ಕಳ್ಳ ಅಂದ್ರೆ ಖಂಡ್ರೆ ಹೆಗಲು ಮುಟ್ಕೊಂಡು ನೋಡ್ತಾರೆ- ಖೂಬಾ

    ಕುಂಬಳಕಾಯಿ ಕಳ್ಳ ಅಂದ್ರೆ ಖಂಡ್ರೆ ಹೆಗಲು ಮುಟ್ಕೊಂಡು ನೋಡ್ತಾರೆ- ಖೂಬಾ

    ಬೀದರ್: ಕುಂಬಳಕಾಯಿ ಕಳ್ಳ ಎಂದರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಮ್ಮ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳುತ್ತಾರೆ ಎಂದು ಸಂಸದ ಭಗವಂತ್ ಖೂಬಾ ತಿರುಗೇಟು ನೀಡಿದ್ದಾರೆ.

    ಪಕ್ಷ ಕಚೇರಿಯಲ್ಲಿ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಂಡ್ರೆ ತಮ್ಮ ಕ್ಷೇತ್ರದಲ್ಲಿ ಉಳ್ಳವರಿಗೆ ಮಾತ್ರ ವಸತಿ ಮನೆಗಳನ್ನು ನೀಡಿದ್ದು, ಇನ್ನೂ ಕೆಲವರಿಗೆ ಮನೆ ನೀಡದೆ ಹಣ ಕೊಳ್ಳೆ ಹೊಡೆದಿದ್ದಾರೆ. ನಾನು ವಸತಿ ಯೋಜನೆಯಲ್ಲಿ ಅವ್ಯವಹಾರ ನಡೆಸಿದ್ದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೆನೆ ಎಂದು ಹೇಳುತ್ತಾರೆ. ತಾವು ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬ ಭಯಕ್ಕೆ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

    ಕಳೆದ ಬಾರಿ ವಸತಿ ಸಚಿವ ವಿ.ಸೋಮಣ್ಣ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಂದರ್ಭದಲ್ಲಿ ಸಂಸದ ಖೂಬಾ ಭಾಲ್ಕಿ ಕ್ಷೇತ್ರದ ವಸತಿ ಯೋಜನೆಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಈಶ್ವರ್ ಖಂಡ್ರೆ, ವಸತಿ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪ ಸಾಬೀತಾದರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದರು.

  • 7 ಕೋಟಿ ಕನ್ನಡಿಗರಿಗೆ ಮೋದಿ ಅವಮಾನ ಮಾಡಿದ್ದಾರೆ: ಈಶ್ವರ್ ಖಂಡ್ರೆ

    7 ಕೋಟಿ ಕನ್ನಡಿಗರಿಗೆ ಮೋದಿ ಅವಮಾನ ಮಾಡಿದ್ದಾರೆ: ಈಶ್ವರ್ ಖಂಡ್ರೆ

    -ಬಿಜೆಪಿ ನೂರು ಸಲ ಸುಳ್ಳು ಹೇಳಿ ಸತ್ಯ ಎನ್ನುತ್ತೆ

    ಬೀದರ್: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ವಿಳಂಬ ಧೋರಣೆ ಹಿನ್ನೆಲೆ ಬೀದರ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೆರೆ ಬಂದು ಇಷ್ಟು ದಿನ ಆದರೂ ಕೇಂದ್ರ ಸರ್ಕಾರ ನೈಯಾ ಪೈಸೆ ಪರಿಹಾರ ಕೊಟ್ಟಿಲ್ಲಾ. ಕೇಂದ್ರ ಸರ್ಕಾರ ಬರಿ ಹೇಳಿಕೆ ಕೋಡೋದೆ ಆಯ್ತು. ಕೊನೆಗೂ ಅತ್ತು ಕರೆದು ತುಟಿಗೆ ತುಪ್ಪ ಹಚ್ಚುವ ಹಾಗೆ 1,200 ಕೋಟಿ ರೂ. ಪರಿಹಾರ ನೀಡಿದೆ ಎಂದು ಹರಿಹಾಯ್ದರು. ಜೊತೆಗೆ ಮೋದಿ ಅವರ ಭೇಟಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅನುಮತಿ ಕೊಟ್ಟಿಲ್ಲ. ಈ ಮೂಲಕ 7 ಕೋಟಿ ಕನ್ನಡಿಗರಿಗೆ ಮೋದಿ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.

    ಬಿಜೆಪಿಯವರು ನೂರು ಸಲ ಸುಳ್ಳನ್ನು ಹೇಳಿ ಸತ್ಯ ಎಂಬಂತೆ ಬಿಂಬಿಸುತ್ತಾರೆ. ಹೀಗಾಗಿ ಉಪ ಚುನಾವಣೆಯಲ್ಲಿ 15 ಸೀಟು ನಮಗೆ ಕೊಡುವ ಮೂಲಕ ಜನರು ತಕ್ಕ ಪಾಠ ಕಳಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಸಿಂಹಗೆ ಮೋದಿ ದೇವ್ರು ಇರ್ಬೋದು, ಬೇಕಾದ್ರೆ ಪೂಜೆ ಮಾಡ್ಲಿ – ಆದ್ರೆ ಮೊದ್ಲು ಪರಿಹಾರ ಕೊಡ್ಲಿ: ಕಾಂಗ್ರೆಸ್ ಕಿಡಿ

    ಸಿಂಹಗೆ ಮೋದಿ ದೇವ್ರು ಇರ್ಬೋದು, ಬೇಕಾದ್ರೆ ಪೂಜೆ ಮಾಡ್ಲಿ – ಆದ್ರೆ ಮೊದ್ಲು ಪರಿಹಾರ ಕೊಡ್ಲಿ: ಕಾಂಗ್ರೆಸ್ ಕಿಡಿ

    ಬೆಂಗಳೂರು: ಯಾರೂ ಕಿಸೆಯಿಂದ ಪರಿಹಾರ ಕೊಡಲು ಆಗಲ್ಲ. ಯಾವ ರಾಜ್ಯಕ್ಕೂ ಪ್ರಧಾನಿ ಮೋದಿ ಪರಿಹಾರ ಕೊಟ್ಟಿಲ್ಲ ಎಂಬ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.

    ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಹೆಚ್.ಕೆ ಪಾಟೀಲ್, ಸಂಸದರಾಗಿರುವ ಪ್ರತಾಪ್ ಸಿಂಹ ಅವರ ಟಿಪ್ಪಣಿ ಬಹಳ ನೋವು ತರುವಂತದ್ದಾಗಿದೆ. ವೈಚಾರಿಕ ಹಿನ್ನೆಲೆಯಿಂದ ಬಂದ ಸಂಸದರು ಮೋದಿಯನ್ನು ಬೈದರೆ ದೇವರನ್ನು ಬೈದಂಗೆ. ಹೋಲಿಕೆ ಮಾಡುವುದಕ್ಕೆ ಸಮಾನ ಬೇಡವೇ. ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ ಅವರು ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಸಾವಿರಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣ ಹಾನಿಯಾಗಿದ್ರೂ ಅವರ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ. ಈಗ ಅವರ ಆಕ್ರೋಶ ಹೊರಹೊಮ್ಮಿದೆ. ಈಗ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಯಾರೂ ಕಿಸೆಯಿಂದ ಪರಿಹಾರ ಕೊಡಲು ಆಗಲ್ಲ: ಪ್ರತಾಪ್ ಸಿಂಹ

    ಮಾಜಿ ಡಿಸಿಎಂ ಪರಮೇಶ್ವರ್, ಪ್ರತಾಪ್ ಸಿಂಹಗೆ ಮೋದಿಯವರು ದೇವರು ಆಗಿರಬಹುದು. ಅವರ ಭಾವನೆಗೆ ನಾನು ತಪ್ಪು ಎಂದು ಹೇಳುವುದಿಲ್ಲ. ಏಕೆಂದರೆ ಅವರಿಗೆ ಮೋದಿಯವರೇ ದೇವರು. ಆದರೆ ಕರ್ನಾಟಕದ ಜನತೆಗೆ ಆಗಿರುವಂತಹ ಅನ್ಯಾಯದ ಬಗ್ಗೆ ಮಾತನಾಡಬೇಕು. ನಾವು ನೆರೆಗೆ ಪರಿಹಾರ ಕೊಡಿ ಎಂದು ಕೇಳುತ್ತಿದ್ದೆವೆ ಹೊರತು ಬೇರೆನೂ ನಾವು ಕೇಳುತ್ತಿಲ್ಲ. ಲಕ್ಷಾಂತರ ಜನ ಮನೆ, ದನ, ಕರುಗಳನ್ನು ಕಳೆದುಕೊಂಡಿದ್ದಾರೆ. ನೂರಾರು ಮಂದಿ ಮೃತಪಟ್ಟಿದ್ದಾರೆ. ನಿಮಗೆ ಕರ್ನಾಟಕದ ಮೇಲೆ ಅಷ್ಟು ಕೂಡ ಕನಿಕರ ಇಲ್ವಾ ಎಂದು ನಾನು ಪ್ರತಾಪ್ ಅವರು ಕೇಳಬೇಕು. ಅದು ಬಿಟ್ಟು ಮೋದಿ ದೇವರು ಎಂದರೆ ಅವರು ಪೂಜೆ ಮಾಡಿಕೊಳ್ಳಿ ನಾವೇನು ಬೇಡ ಎನ್ನುವುದಿಲ್ಲ. ಅದು ಅವರ ವೈಯಕ್ತಿಕ ವಿಚಾರ ಎಂದು ಹೇಳಿದ್ದಾರೆ.

    ಇಲ್ಲಿ ಯಾರೂ ದೇವರಾಗಲು ಸಾಧ್ಯವಿಲ್ಲ. ಪತ್ರಾಪ್ ಸಿಂಹ ಅವರು ಬಕೆಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಅವರಿಗೆ ಭಟ್ಟಂಗಿತನ ಮಾಡುವುದು ಮಾತ್ರ ಗೊತ್ತಿದೆ. ಇಂದು ಅವರು ಭಟ್ಟಂಗಿತನ ಮಾಡಿ ತಮ್ಮ ಸ್ವಾರ್ಥಕ್ಕಾಗಿ ಉಪಯೋಗತನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.

    ಪ್ರತಾಪ್ ಸಿಂಹ ಹೇಳಿದ್ದೇನು?
    ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಲು ಇಷ್ಟಪಡುತ್ತೇನೆ. ಕೇಂದ್ರ ಸರ್ಕಾರ ಪರಿಹಾರ ಕೊಡುವುದಿಲ್ಲ. ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್ ರೈತರಿಗೆ ಕೃಷಿ ಚಟುವಟಿಕೆ ತೊಂದರೆಯಾದರೆ ಮೊದಲಿನಿಂದ ಶುರು ಮಾಡುವುದಕ್ಕೆ ಕೊಡುವ ಸಹಾಯಧನವೇ ಹೊರತು ಪರಿಹಾರ ಅಲ್ಲ. ದೇಶಾದ್ಯಂತ ನೆರೆ ಬಂದಾಗ ಯಾವ ಸರ್ಕಾರ ಕೂಡ ಪರಿಹಾರ ಕೊಡುವುದಿಲ್ಲ. ಅವರು ಕೊಡುವುದು ಸಹಾಯಧನ. ಮೋದಿ ಅವರು ಕರ್ನಾಟಕದ ಮೇಲೆ ಬಹಳ ಪ್ರೀತಿ ಇಟ್ಟುಕೊಂಡು ಏನೇನು ಅನುದಾನ ಕೊಡಬೇಕಿತ್ತೋ ಆ ಅನುದಾನವನ್ನು ಕೊಟ್ಟಿದ್ದಾರೆ. ಎನ್‍ಡಿಆರೆಫ್ ತಂಡ ಅನುದಾನವನ್ನು ಬಿಡುಗಡೆ ಮಾಡಬೇಕಿದೆ. ಅದಕ್ಕೆ ತಂಡ ಬಂದು ಪರಿಶೀಲನೆ ಮಾಡಿಕೊಂಡು ಹೋಗಿದೆ. ಪರಿಹಾರ ಎಂದಾಕ್ಷಣ ಯಾರೂ ಕಿಸೆಯಿಂದ ಪರಿಹಾರ ಕೊಡುವುದಲ್ಲ. ಅದಕ್ಕೆ ಅಂತಾನೇ ತುಂಬಾನೇ ಪ್ರಕ್ರಿಯೆಗಳು ಇರುತ್ತದೆ ಎಂದು ಹೇಳಿದ್ದರು.

  • ಮನವೊಲಿಕೆಗೆ ಕೈ ನಾಯಕರಿಂದ 2 ಗಂಟೆ ಕಸರತ್ತು – ಯಾವುದೇ ಸ್ಪಷ್ಟ ಭರವಸೆ ನೀಡದ ರೆಡ್ಡಿ

    ಮನವೊಲಿಕೆಗೆ ಕೈ ನಾಯಕರಿಂದ 2 ಗಂಟೆ ಕಸರತ್ತು – ಯಾವುದೇ ಸ್ಪಷ್ಟ ಭರವಸೆ ನೀಡದ ರೆಡ್ಡಿ

    ಬೆಂಗಳೂರು: ಅತೃಪ್ತ ಶಾಸಕ ರಾಮಲಿಂಗರೆಡ್ಡಿ ಅವರನ್ನು ಮನವೊಲಿಸಲು ಕಾಂಗ್ರೆಸ್ ನಾಯಕರ ಕಸರತ್ತು ಮಾಡಿದ್ದಾರೆ. ಆದರೆ ರೆಡ್ಡಿ ಅವರು ಯಾವುದೇ ಖಚಿತ ಭರವಸೆಯನ್ನು ನೀಡಲಿಲ್ಲ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಲಕ್ಕಸಂದ್ರದ ರಾಮಲಿಂಗಾರೆಡ್ಡಿ ನಿವಾಸಕ್ಕೆ ಕಾಂಗ್ರೆಸ್ ನಾಯಕರಾದ ಈಶ್ವರ ಖಂಡ್ರೆ ಹಾಗೂ ಹೆಚ್.ಕೆ. ಪಾಟೀಲ್ ಬಂದಿದ್ದರು. ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ರಾಮಲಿಂಗಾರೆಡ್ಡಿಗೆ ಆಪ್ತರು. ಹೀಗಾಗಿ ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸಲು ಸತತವಾಗಿ ಎರಡು ಗಂಟೆಯ ಕಾಲ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಖಾಲಿ ಕೈಯಲ್ಲಿ ಕೈ ನಾಯಕರು ವಾಪಸ್ಸಾಗಿದ್ದಾರೆ.

    ರಾಜೀನಾಮೆ ಹಿಂಪಡೆಯುವ ಬಗ್ಗೆ ರಾಮಲಿಂಗಾರೆಡ್ಡಿ ಅವರು ಗುಟ್ಟು ಬಿಟ್ಟು ಕೊಡದೆ ಸಸ್ಪನ್ಸ್ ಆಗಿ ಇಟ್ಟಿದ್ದಾರೆ. ಚರ್ಚೆಯಾದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ದಿನಾಂಕ 15ರವರೆಗೂ ಯಾವ ರಾಜಕೀಯದ ಬಗ್ಗೆಯೂ ಮಾತನಾಡಲ್ಲ. ಎಲ್ಲರೂ ಆಪ್ತರು ಮಾತನಾಡಲು ಬಂದಿದ್ದರು ಅಷ್ಟೇ ಎಂದು ಹೇಳಿದರು.

    ಸೋಮವಾರ ಸ್ಪೀಕರ್ ಅವರನ್ನು ರಾಮಲಿಂಗಾರೆಡ್ಡಿ ಅವರು ಭೇಟಿ ಮಾಡಲಿದ್ದಾರೆ. ಹೀಗಾಗಿ ನಾಳೆ ರಾಜೀನಾಮೆ ಹಿಂಪಡೆಯದ ಬಗ್ಗೆ ಮಾತನಾಡುವ ಸಾಧ್ಯತೆ ಇದೆ. ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸುವ ಹೊಣೆಯನ್ನು ಈಶ್ವರ್ ಖಂಡ್ರೆಗೆ ವಹಿಸಲಾಗಿತ್ತು. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಎರಡು ಬಾರಿ ರೆಡ್ಡಿ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ.

    ಕಾಂಗ್ರೆಸ್ ಕಷ್ಟದಲ್ಲಿದೆ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ರಾಮಲಿಂಗಾರೆಡ್ಡಿ ಅವರನ್ನು ನಾನು ಮತ್ತೆ ಎಚ್.ಕೆ.ಪಾಟೀಲ್ ಅವರು ಭೇಟಿಯಾಗಿದ್ದೇವೆ. ಇಂದು ಕಾಂಗ್ರೆಸ್ ಕಷ್ಟದಲ್ಲಿದೆ. ರಾಮಲಿಂಗಾರೆಡ್ಡಿ ಅವರು ಪಕ್ಷವನ್ನ ಬಲವಾಗಿ ಕಟ್ಟಿದ್ದಾರೆ. ಹೀಗಾಗಿ ಅವರ ಸೇವೆ ಪಕ್ಷಕ್ಕೆ ಅವಶ್ಯಕತೆ ಇದೆ. ಇಂತಹ ಸಂದರ್ಭದಲ್ಲಿ ನಿಮ್ಮ ಅವಶ್ಯಕತೆ ಪಕ್ಷಕ್ಕೆ ಇದೆ ರಾಜೀನಾಮೆ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ. ರಾಮಲಿಂಗಾರೆಡ್ಡಿ ಅವರು ನಮ್ಮ ಮನವಿಗೆ ಸ್ಪಂದನೆ ಮಾಡುತ್ತಾರೆ. ಸರ್ಕಾರದ ಮತ್ತು ಪಕ್ಷದ ಜೊತೆ ಇರುತ್ತಾರೆ ಎಂಬ ಭರವಸೆ ಇದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

  • ರಾಜೀನಾಮೆಯಿಂದ ಹಿಂದೆ ಸರಿಯುವುದಿಲ್ಲ: ರಾಮಲಿಂಗಾ ರೆಡ್ಡಿ

    ರಾಜೀನಾಮೆಯಿಂದ ಹಿಂದೆ ಸರಿಯುವುದಿಲ್ಲ: ರಾಮಲಿಂಗಾ ರೆಡ್ಡಿ

    ಬೆಂಗಳೂರು: ಮಾಜಿ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಬಳಿ ಹೇಳಿಕೊಂಡಿದ್ದಾರೆ ಎಂಬುದಾಗಿ ಅವರ ಆಪ್ತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ಇಂದು ಒಟ್ಟು 13 ಶಾಸಕರು ರಾಜೀನಾಮೆ ನೀಡುತ್ತಿದ್ದು, ರಾಮಲಿಂಗಾ ರೆಡ್ಡಿ ಹಾಗೂ ಅವರ ಮಗಳು ಸೌಮ್ಯ ರೆಡ್ಡಿ ಅವರು ರಾಜೀನಾಮೆ ನೀಡುತ್ತಿದ್ದಾರೆ. ರಾಜೀನಾಮೆ ನೀಡುತ್ತಿರುವ ಸುದ್ದಿ ಕೇಳಿ ಈಶ್ವರ್ ಖಂಡ್ರೆ ಅವರು ರಾಮಲಿಂಗಾ ರೆಡ್ಡಿ ಬಳಿ ಮಾತನಾಡಲು ಹೋಗಿದ್ದಾರೆ.

    ಇಬ್ಬರ ಮನವೊಲಿಸಲು ಭೇಟಿ ಮಾಡಿದ್ದಾರೆ. ಈ ವೇಳೆ ರಾಮಲಿಂಗಾ ರೆಡ್ಡಿ ರಾಜೀನಾಮೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಟಷ್ಟನೆ ನೀಡಿದ್ದಾರೆ ಎನ್ನಲಾಗಿದೆ.

    ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ 13ಕ್ಕೂ ಹೆಚ್ಚು ಅತೃಪ್ತ ಶಾಸಕರು ಇಂದು ರಾಜೀನಾಮೆ ಕೊಡುವ ಸಾಧ್ಯತೆ ಇದೆ. ಅದರಲ್ಲೂ ಬಂಡಾಯಗಾರರ ಪಟ್ಟಿಯಲ್ಲಿ ಬೆಂಗಳೂರಿನ ಐವರು ಶಾಸಕರ ಹೆಸರೂ ಇದೆ ಎಂಬುದಾಗಿ ತಿಳಿದುಬಂದಿದೆ.

    ಮೊದಲನೆಯದಾಗಿ ಬಿಡುಗಡೆಯಾಗಿರುವ ಬಂಡಾಯಗಾರರ ಪಟ್ಟಿಯಲ್ಲಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಹಿರೇಕೆರೂರು ಶಾಸಕ ಬಿ.ಸಿಪಾಟೀಲ್, ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ರಾಜೀನಾಮೆ ಕೊಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಬೆಂಗಳೂರಿನ ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜು, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ, ಹುಣಸೂರು ಶಾಸಕ ಎಚ್. ವಿಶ್ವನಾಥ್, ಕೆ.ಆರ್ ಪೇಟೆ ಶಾಸಕ. ನಾರಾಯಣ ಗೌಡ ಇವರೆಲ್ಲರೂ ಹೆಸರು ರಾಜೀನಾಮೆ ಪಟ್ಟಿಗೆ ಹೊಸದಾಗಿ ಸೇರಿಕೊಂಡಿದ್ದು, ರಾಜ್ಯ ರಾಜಕಾರಣದಲ್ಲಿ ತಲ್ಲಣ ಶುರುವಾಗಿದೆ.

    ನಾಗೇಂದ್ರ, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ, ಬಿ.ಸಿ.ಪಾಟೀಲ್ ಇವರು ಹಳೆಯ ಆಪರೇಷನ್‍ಗೆ ಒಳಗಾದ ಶಾಸಕರಾಗಿದ್ದು, ಹೊಸದಾಗಿ ಸೇರಿಕೊಂಡಿರುವ ಶಾಸಕರ ಹೆಸರಿಂದ ಎಲ್ಲರಿಗೂ ಶಾಕ್ ಆಗಿದೆ. ಈಗಾಗಲೇ ಸ್ಪೀಕರ್ ಭೇಟಿಗೆ ಬಂಡಾಯಗಾರರು ಕಾಲಾವಕಾಶ ಕೇಳಿದ್ದಾರೆ ಎಂದು ತಿಳಿದು ಬಂದಿದೆ.

  • ಭಾಲ್ಕಿ ಮಾಜಿ ಶಾಸಕ ಡಾ.ವಿಜಯಕುಮಾರ್ ಖಂಡ್ರೆ ಇನ್ನಿಲ್ಲ

    ಭಾಲ್ಕಿ ಮಾಜಿ ಶಾಸಕ ಡಾ.ವಿಜಯಕುಮಾರ್ ಖಂಡ್ರೆ ಇನ್ನಿಲ್ಲ

    ಬೀದರ್: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಹಿರಿಯ ಸಹೋದರ ಹಾಗೂ ಭಾಲ್ಕಿ ಮಾಜಿ ಶಾಸಕ ವಿಜಯ್‍ಕುಮಾರ್ ಖಂಡ್ರೆ ಅವರು ಇಂದು ನಿಧನರಾಗಿದ್ದಾರೆ.

    60 ವರ್ಷದ ವಿಜಯ್‍ಕುಮಾರ್ ಖಂಡ್ರೆ ಅವರು ಹೃದಯಾಘಾತಕ್ಕೆ ಒಳಗಾಗಿ ಹೈದರಾಬಾದ್‍ನ ಖಾಸಗಿ ಸನ್ ಶೈನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ 10.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

    ಎರಡು ಬಾರಿ ಭಾಲ್ಕಿ ಶಾಸಕರಾಗಿ ವಿಜಯಕುಮಾರ್ ಅವರು ಆಯ್ಕೆಯಾಗಿದ್ದರು. ಭಾಲ್ಕಿ ಕ್ಷೇತ್ರದಲ್ಲಿ ಇವರು ಬಹಳಷ್ಟು ಕೆಲಸಗಳನ್ನು ಮಾಡಿ ಹೆಸರುವಾಸಿಯಾಗಿದ್ದರು. ಇವರ ಅಂತ್ಯಸಂಸ್ಕಾರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಸ್ವಗ್ರಾಮ ಭಾಲ್ಕಿಯಲ್ಲಿ ನೆರವೇರಲಿದ್ದು, ಈ ಬಗ್ಗೆ ಭಾಲ್ಕಿ ಕಾಂಗ್ರೆಸ್ ಹಾಗೂ ಈಶ್ವರ್ ಖಂಡ್ರೆ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಶೋಕ ಸಂದೇಶ, ಭಾಲ್ಕಿ ಮಾಜಿ ಶಾಸಕ ಡಾ.ವಿಜಯಕುಮಾರ ಖಂಡ್ರೆರವರು ಇಂದು ಬೆಳಗ್ಗೆ 10.30 ಗಂಟೆಗೆ ಹೈದ್ರಾಬಾದನ ಖಾಸಗಿ ಸನ್ ಶೈನ್ ಆಸ್ಪತ್ರೆ ಯಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಶ್ರೀಯುತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 1.00ಗಂಟೆಗೆ ಸ್ವಗ್ರಾಮ ಭಾಲ್ಕಿಯಲ್ಲಿ ಜರುಗಲಿದೆ ಎಂದು ಬರೆದು ಟ್ವೀಟ್ ಮಾಡಿ ಸಹೋದರ ನಿಧನರಾಗಿರುವ ವಿಷಯವನ್ನು ತಿಳಿಸಿ, ಸಂತಾಪ ಸೂಚಿಸಿದ್ದಾರೆ.

  • ರಾಜಕೀಯ ವೈರತ್ವ ಮರೆತು ಜೊತೆಗೆ ಕುಣಿದ ಖೂಬಾ, ಖಂಡ್ರೆ – ವಿಡಿಯೋ ನೋಡಿ

    ರಾಜಕೀಯ ವೈರತ್ವ ಮರೆತು ಜೊತೆಗೆ ಕುಣಿದ ಖೂಬಾ, ಖಂಡ್ರೆ – ವಿಡಿಯೋ ನೋಡಿ

    ಬೀದರ್: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಹಿನ್ನೆಲೆ ಬೀದರ್ ನಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪಕ್ಷಬೇದ ಮರೆತು ಸಖತ್ ಸ್ಟೆಪ್ಸ್ ಹಾಕಿದ್ದಾರೆ.

    ಲೊಕಸಭಾ ಚುನಾವಣಾ ಗುಂಗು ಮರೆತು ಅಭ್ಯರ್ಥಿಗಳು ಹಾಗೂ ರಾಜಕೀಯ ಮುಖಂಡರು ಖುಷಿಯಿಂದ ಹೆಜ್ಜೆ ಹಾಕಿದ್ದಾರೆ. ಪರಸ್ಪರ ಎದುರಾಳಿಯಾಗಿದ್ದರೂ ಕಾಂಗ್ರೆಸ್ ನಾಯಕ ಈಶ್ವರ ಖಂಡ್ರೆ ಹಾಗೂ ಬಿಜೆಪಿಯ ಭಗವಂತ ಖೂಬಾ ವೈರತ್ವವನ್ನು ಮರೆತು ಕುಣಿದು ಸಂತೋಷ ಪಟ್ಟಿದ್ದಾರೆ. ಅವರಿಗೆ ಸಚಿವ ಬಂಡೆಪ್ಪ ಕಾಶೆಂಪೂರ್, ಎಂಎಲ್‍ಸಿ ವಿಜಯ ಸಿಂಗ್, ಸೇರಿದಂತೆ ಅನೇಕ ರಾಜಕೀಯ ಮುಖಂಡರು ಸಾಥ್ ನೀಡಿದರು.

    ಇಂದು ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಹಿನ್ನೆಲೆ ಬೀದರ್ ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾಗಿಯಾಗಿದ್ದರು. ಈ ವೇಳೆ ಎಲ್ಲಾ ಪಕ್ಷದ ನಾಯಕರು ಒಟ್ಟಾಗಿ ಕುಣಿದು ಲೋಕಸಭಾ ಚುನಾವಣಾ ಪ್ರಚಾರದಿಂದ ಕೊಂಚ ರಿಲೀಫ್ ಪಡೆದಿದ್ದಾರೆ.

  • ರಾಹುಲ್ ಗಾಂಧಿ ಭಯೋತ್ಪಾದಕರ ದಾಳಿಗೆ ಬಲಿಯಾದ್ರು: ಈಶ್ವರ ಖಂಡ್ರೆ ಎಡವಟ್ಟು

    ರಾಹುಲ್ ಗಾಂಧಿ ಭಯೋತ್ಪಾದಕರ ದಾಳಿಗೆ ಬಲಿಯಾದ್ರು: ಈಶ್ವರ ಖಂಡ್ರೆ ಎಡವಟ್ಟು

    ಹಾವೇರಿ: ಭಯೋತ್ಪಾದಕರ ದಾಳಿಗೆ ರಾಹುಲ್ ಗಾಂಧಿ ಬಲಿಯಾದರು ಎಂದು ಹೇಳುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಇಂದು ತಮ್ಮ ಭಾಷಣದ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

    ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎನ್ನುವ ಬದಲು ರಾಹುಲ್ ಗಾಂಧಿ ಭಯೋತ್ಪಾದಕರ ದಾಳಿಗೆ ಬಲಿಯಾದರು ಎಂದು ಹೇಳಿದರು. ಕೆಲಹೊತ್ತು ಮುಜುಗುರಕ್ಕೆ ಒಳಗಾದ ಈಶ್ವರ ಖಂಡ್ರೆ ಅವರು, ಕಾಂಗ್ರೆಸ್ ಎಲ್ಲ ವರ್ಗದ ಜನರಿಗೆ ಬದುಕು ಕಟ್ಟಿಕೊಟ್ಟಿದೆ. ನಮ್ಮ ಪಕ್ಷಕ್ಕೆ ಸುದೀರ್ಘ ಇತಿಹಾಸವಿದೆ. ಸ್ವಾತಂತ್ರ್ಯಕ್ಕಾಗಿ ನಮ್ಮ ನಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

    ಲೋಕಸಭಾ ಚುನಾವಣೆಯಲ್ಲಿ ಮತವನ್ನು ಯಾವ ಪಕ್ಷಕ್ಕೆ ನೀಡಬೇಕೆಂದು ಜನ ನಿರ್ಧಾರ ಮಾಡಬೇಕು. ಸ್ವಾತಂತ್ರ್ಯ ನಂತರ ದೇಶದ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ನಿಧಾನವಾಗಿ ಎಲ್ಲವನ್ನೂ ಸರಿಪಡಿಸುತ್ತಾ ಬಂದಿದ್ದೇವೆ. ಆದರೆ ಬಿಜೆಪಿಯವರು 55 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಜನ ಉತ್ತರ ಕೊಡುತ್ತಾರೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಪ್ರಗತಿ ಸಾಧಿಸಲು ಕಾಂಗ್ರೆಸ್ ಶ್ರಮಿಸಿದೆ. ಈ ಯಶಸ್ಸು ಕಾಂಗ್ರೆಸ್‍ಗೆ ಸಲ್ಲಬೇಕು. ದೇಶದಲ್ಲಿ ಉದ್ಯೋಗ ಸೃಷ್ಟಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಆಗಿಲ್ಲ. ರೈತರು ಹಾಗೂ ಯುವಕರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

    ಕಾಂಗ್ರೆಸ್ ಮಾಡಿದ ಅಭಿವೃದ್ಧಿಯನ್ನು ನಾವೇ ಮಾಡಿದ್ದೇವೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಅವರ ಮಾತಿಗೆ ನೀವು ಮರುಳಾಗಬೇಡಿ. ಬಿಜೆಪಿಯು ಜನರಿಗೆ ಸುಳ್ಳು ಆಶ್ವಾಸನೆ ನೀಡಿ, ಅಧಿಕಾರಕ್ಕೆ ಬಂದರು. ಆದರೆ ಯಾವುದೇ ಆಶ್ವಾಸನೆ ಈಡೇರಿಸಲಿಲ್ಲ. ಕಾಂಗ್ರೆಸ್ ನೀಡಿದ ಭರವಸೆಯನ್ನು ಈಡೇರಿಸುತ್ತಾ ಬಂದಿದೆ. ಮುಂದೆಯೂ ಹೀಗೆ ನಡೆದುಕೊಳ್ಳುತ್ತೇವೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv