Tag: eshwar khandre

  • ವಿಧಾನಸಭೆಯಲ್ಲಿ ರಾಗಿ, ರಾಗಿ ಎಂದು ಕೂಗಿದ ಕಾಂಗ್ರೆಸ್ ಶಾಸಕ: ಸ್ಪೀಕರ್ ಕೆಂಡಾಮಂಡಲ

    ವಿಧಾನಸಭೆಯಲ್ಲಿ ರಾಗಿ, ರಾಗಿ ಎಂದು ಕೂಗಿದ ಕಾಂಗ್ರೆಸ್ ಶಾಸಕ: ಸ್ಪೀಕರ್ ಕೆಂಡಾಮಂಡಲ

    ಬೆಂಗಳೂರು: ವಿಧಾನಸಭೆಯಲ್ಲಿ ಇಂದು ರಾಗಿ, ರಾಗಿ ಎಂದು ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಘೋಷಣೆ ಕೂಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶಕ್ಕೆ ಗುರಿಯಾದರು.

    ಶೂನ್ಯವೇಳೆಗೂ ಮುಂಚೆ ಎದ್ದು ನಿಂತ ಡಾ. ರಂಗನಾಥ್ ರಾಗಿ ಖರೀದಿ ವಿಚಾರವಾಗಿ ಚರ್ಚೆಗೆ ಅವಕಾಶ ಕೊಡುವಂತೆ ಆಗ್ರಹಿಸಿದ್ರು. ಅಷ್ಟೇ ಅಲ್ಲ ರಾಗಿ, ರಾಗಿ ಎಂದು ಘೋಷಣೆ ಕೂಗಿದರು. ಆಗ ರಂಗನಾಥ್ ವರ್ತನೆಗೆ ಸ್ಪೀಕರ್ ಕಾಗೇರಿ ಆಕ್ಷೇಪ ವ್ಯಕ್ತಪಡಿಸಿ ಸದನದಲ್ಲಿ ಅಸಭ್ಯವಾಗಿ ನಡೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ

    ರಾಗಿ ವಿಚಾರ ಪ್ರಮುಖವಾದದ್ದು ಎಂದು ಗೊತ್ತಿದೆ. ಅಸಭ್ಯವಾಗಿ ಅಸಹ್ಯವಾಗಿ ವರ್ತನೆ ಮಾಡಬೇಡಿ. ನಿಯಮಾವಳಿ ಪ್ರಕಾರ ನಡೆದುಕೊಳ್ಳಬೇಕು. ಮೂರು ಲಕ್ಷ ಟನ್ ಹೆಚ್ಚುವರಿ ಖರೀದಿಗೆ ಕೇಂದ್ರಕ್ಕೆ ಪ್ರಸ್ತಾವಣೆ ಸಲ್ಲಿಸುತ್ತೇವೆ ಎಂದು ಸರ್ಕಾರ ಹೇಳಿದೆ. ಉತ್ತರ ಬೇಕೆಂದರೆ ನಿಯಮಾವಳಿ ಪ್ರಕಾರ ನಡೆದುಕೊಳ್ಳಬೇಕು ಎಂದು ಸ್ಪೀಕರ್ ತಿಳಿಸಿದರು. ಬಳಿಕ ರಂಗನಾಥ್ ಸುಮ್ಮನಾದ್ರು. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಹುಟ್ಟಹುಬ್ಬ- ಬಿಎಸ್‍ವೈ, ಬೊಮ್ಮಾಯಿ ಹೇಳಿದ್ದೇನು..?

    ಇನ್ನೊಂದೆಡೆ ಶೂನ್ಯವೇಳೆಯಲ್ಲಿ ಬೀದರ್, ಕಲಬುರಗಿ ಜಿಲ್ಲೆಯಲ್ಲಿ ನಿರಂತರವಾಗಿ ರಾಶಿಯಂತ್ರಕ್ಕೆ ಸಿಲುಕಿ ಸರಣಿ ಸಾವುಗಳಾಗುತ್ತಿವೆ ಎಂದು ಶಾಸಕ ಈಶ್ವರ್ ಖಂಡ್ರೆ ಪ್ರಸ್ತಾಪಿಸಿದರು. ಕಲಬುರಗಿ ಜಿಲ್ಲೆಯಲ್ಲಿ 18 ವರ್ಷದ ಯುವತಿ ಸಾವಿಗೀಡಾಗಿದ್ದಾಳೆ. ರಾಶಿ ಯಂತ್ರ ಅಂದ್ರೆ, ಕಡಲೆ, ತೊಗರಿ ಕಟವ್ ಮಾಡುವ ಯಂತ್ರವನ್ನು ರೈತರು ಖರೀದಿ ಮಾಡ್ತಾರೆ ಆದ್ರೆ ರೈತರಿಗೆ ಈ ಯಂತ್ರ ಉಪಯೋಗ ಮಾಡಲು ಬರಲ್ಲ. ಕೆಲದಿನಗಳ ಹಿಂದೆ ಮಹಿಳೆಯ ಕೂದಲು ಹಾಗೂ ಚೂಡಿದಾರದ ದುಪ್ಪಟ ಸಿಲುಕಿ ಸಾವಿಗೀಡಾಗಿದ್ದಾರೆ. ಈ ಯಂತ್ರ ಉಪಯೋಗಕ್ಕೆ ಯಾವುದೇ ರೀತಿಯ ತರಬೇತಿ, ಜಾಗೃತಿ ಇಲ್ಲ. ಇದಕ್ಕೆ ತರಬೇತಿ ಕೊಡಬೇಕು. ಮೃತಪಟ್ಟವರಿಗೆ 5 ಲಕ್ಷ ಪರಿಹಾರ ನೀಡುವಂತೆ ಈಶ್ವರ ಖಂಡ್ರೆ ಮನವಿ ಮಾಡಿಕೊಂಡರು.

    ಈ ವೇಳೆ ಸ್ಪೀಕರ್ ಮಧ್ಯಪ್ರವೇಶ ಮಾಡಿ ಯಂತ್ರಗಳನ್ನು ನೋಡಿದ್ರೆ ಎಲ್ಲ ತಮಿಳುನಾಡಿನಿಂದ ಬರ್ತಿವೆ ಅನ್ಸುತ್ತೆ? ಎಲ್ಲ ತಮಿಳುನಾಡಿನವು ಅಲ್ವಾ ಎಂದು ಪ್ರಶ್ನಿಸಿದ್ರು. ಬಳಿಕ ಉತ್ತರಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ರೈತರಿಗೆ ತರಬೇತಿ ಕೊಡುವ ಕೆಲಸವನ್ನು ಕೃಷಿ ಇಲಾಖೆಯಿಂದಲೇ ಮಾಡುತ್ತೇವೆ. ಸಾವಿಗೀಡಾದವರಿಗೆ ಪರಿಹಾರ ನೀಡುವ ಬಗ್ಗೆ ಅವಕಾಶ ಇದ್ದರೆ ಪರಿಶೀಲನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

  • ಬಿಜೆಪಿ ಸಂಸದರು ಕೇಂದ್ರದ ಗುಲಾಮರಂತೆ ವರ್ತಿಸ್ತಿದ್ದಾರೆ: ಈಶ್ವರ್ ಖಂಡ್ರೆ

    ಬಿಜೆಪಿ ಸಂಸದರು ಕೇಂದ್ರದ ಗುಲಾಮರಂತೆ ವರ್ತಿಸ್ತಿದ್ದಾರೆ: ಈಶ್ವರ್ ಖಂಡ್ರೆ

    ಬೀದರ್: ಬಿಜೆಪಿಯ ಸಂಸದರು ಹಾಗೂ ನಾಯಕರು ಕೇಂದ್ರದ ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.

    ನಗರದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ಮೇಲೆ ಪ್ರಹಾರ ಮಾಡುತ್ತಿದೆ. ಕರ್ನಾಟಕಕ್ಕೆ ಬಿಜೆಪಿಯವರು ಘೋರ ಅನ್ಯಾಯ ಮಾಡುತ್ತಿದ್ದಾರೆ. ಬಿಜೆಪಿ ಸಂಸದರು ಮತ್ತು ನಾಯಕರು ‌ಲೋಕಸಭೆಯಲ್ಲಾಗಲಿ ಅಥವಾ ಪ್ರಧಾನಿ ಮುಂದೆಯಾಗಲಿ ರಾಜ್ಯದ ಹಕ್ಕು ಕೇಳುವ ಧೈರ್ಯ ಮಾಡದ ಅಂಜುಬುರುಕರಾಗಿದ್ದಾರೆ. ಪರಿಣಾಮವಾಗಿ ರಾಜ್ಯ ಬಳಲುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಟೀಲ್ ಅಸಂಬದ್ಧ ಹೇಳಿಕೆ ನೀಡ್ತಾನೆ: ಏಕವಚನದಲ್ಲಿ ಸತೀಶ್ ಜಾರಕಿಹೊಳಿ ವಾಗ್ದಾಳಿ

    ಕೇಂದ್ರ ಸರ್ಕಾರ ಯಾವ ರೀತಿ ರಾಜ್ಯವನ್ನು ಕಡೆಗಣಿಸುತ್ತಿದೆಯೋ ಅದೇ ರೀತಿ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕವನ್ನು ಕಡೆಗಣಿಸುತ್ತಿದೆ. ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ಘೋರ ಅನ್ಯಾಯ ಮಾಡಿದೆ. ಕಲ್ಯಾಣ ಕರ್ನಾಟಕ ಮಂಡಳಿಯನ್ನೇ ಇನ್ನೂ ರಚಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಈವರೆಗೆ ಒಂದು ಸಭೆ ಕೂಡ ಮಾಡಿಲ್ಲ. ಪರಿಷತ್ ಚುನಾವಣೆಯಿಂದ ಬಿಜೆಪಿಗೆ ಒಂದು ಸಂದೇಶ ಹೋಗಬೇಕಾಗಿದೆ. ಜಿಲ್ಲೆಯ ಎಲ್ಲಾ ಕಡೆ ಕಾಂಗ್ರೆಸ್ ಅಲೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 140ಕ್ಕೂ ಹೆಚ್ಚು ಕ್ಷೇತ್ರ ಗೆದ್ದು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು: BSY ಸಂಕಲ್ಪ

    ಕಾಂಗ್ರೆಸ್ ಅಭ್ಯರ್ಥಿ ಭೀಮ್‌ರಾವ್ ಬಿ ಪಾಟೀಲ್ ಸಮರ್ಥ ಅಭ್ಯರ್ಥಿಯಾಗಿದ್ದು, ಹೆಚ್ಚಿನ ಮತಗಳಿಂದ ಗೆಲ್ಲುವ ವಿಶ್ವಾಸ ಇದೆ ಎಂದು ಪ್ರಚಾರ ಸಭೆಯಲ್ಲಿ ಈಶ್ವರ ಖಂಡ್ರೆ ಆಶಯ ವ್ಯಕ್ತಪಡಿಸಿದ್ದಾರೆ.

  • ಮಾದಕವಸ್ತು ತೆಗೆದುಕೊಳ್ಳುತ್ತಿದ್ದ ಬಗ್ಗೆ ವಾಜಪೇಯಿ ಸ್ವತಃ ಹೇಳಿಕೊಂಡಿದ್ದಾರೆ: ಈಶ್ವರ ಖಂಡ್ರೆ

    ಮಾದಕವಸ್ತು ತೆಗೆದುಕೊಳ್ಳುತ್ತಿದ್ದ ಬಗ್ಗೆ ವಾಜಪೇಯಿ ಸ್ವತಃ ಹೇಳಿಕೊಂಡಿದ್ದಾರೆ: ಈಶ್ವರ ಖಂಡ್ರೆ

    – ಆಗಸ್ಟ್ 17ಕ್ಕೆ ರಾಯಚೂರಿನಲ್ಲಿ ಕಾಂಗ್ರೆಸ್ ನಾಯಕರ ಸಭೆ

    ರಾಯಚೂರು: ಮಾಜಿ ಪ್ರಧಾನಿ ವಾಜಪೇಯಿ ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನಮ್ಮ ನಾಯಕರು ಯಾರೂ ಸುಮ್ಮನೆ ಹೇಳಿಕೆಗಳನ್ನ ನೀಡಲ್ಲ. ಹುಕ್ಕಾ ಬಾರ್, ಅಫೀಮು ಬಗ್ಗೆ ವಾಜಪೇಯಿ ಅವರೇ ಹೇಳಿಕೊಂಡಿದ್ದಾರೆ. ಸ್ವತಃ ವಾಜಪೇಯಿ ಅವರು ಸಂದರ್ಶನವೊಂದರಲ್ಲಿ ಇತಿ-ಮಿತಿಯಲ್ಲಿ ಮಾದಕ ವಸ್ತು ತಗೋತಿದ್ದೆ ಅಂತ ತಾವೇ ಹೇಳಿದ್ದಾರೆ ಅಂತ ಈಶ್ವರ ಖಂಡ್ರೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಅವರು, ಸಿಟಿ ರವಿಗೆ ಯಾವ ಚರಿತ್ರೆ, ಇತಿಹಾಸ ಇದೆ. ನೆಹರು ಇಂದಿರಾಗಾಂಧಿ ತ್ಯಾಗ ಬಲಿದಾನಗಳ ಬಗ್ಗೆ ಇವರಿಗೆ ಏನು ಗೊತ್ತಿದೆ. ಸಿ.ಟಿ ರವಿ ಅವರ ಪಾದದ ಧೂಳಿಗೂ ಸಮನಾಗಿಲ್ಲ. ಅವರ ಸೇವೆಯಷ್ಟೂ ಸಿ.ಟಿ ರವಿಗೆ ವಯಸ್ಸಾಗಿಲ್ಲ. ಯಾರ ಬಗ್ಗೆ ಸುಮ್ಮನೆ ಹೇಳಿಕೆಗಳನ್ನ ನೀಡಬಾರದು ಜನರೇ ಇವರಿಗೆ ತಕ್ಕ ಪಾಠ ಕಲಿಸಿತ್ತಾರೆ. ಪ್ರಿಯಾಂಕ್ ಖರ್ಗೆ ಸಿ.ಟಿ ರವಿ ಹೇಳಿಕೆಗಳು ಹೋಲಿಕೆ ಮಾಡುವಂತವಲ್ಲ ಅಂತ ಖಂಡ್ರೆ ಹೇಳಿದ್ದಾರೆ.

    ಈ ರಾಜ್ಯದಲ್ಲಿರುವುದು ಅಸ್ಥಿರವಾದ ಸರ್ಕಾರ. ಬಹಳ ದಿನ ಉಳಿಯುವುದಿಲ್ಲ, ಮಧ್ಯಂತರ ಚುನಾವಣೆ ಬರಲಿದೆ. ಬಿಜೆಪಿ ಸರ್ಕಾರ ಅವಧಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. 40 ಸಾವಿರ ಖಾಲಿ ಹುದ್ದೆ ಭರ್ತಿಯಾಗದೆ ಹಾಗೇ ಉಳಿದಿವೆ. ಯುವಕರು ಉದ್ಯೋಗವಿಲ್ಲದೆ ಭ್ರಮನಿರಸವಾಗಿದ್ದಾರೆ ಎಂದರು. ಇದನ್ನೂ ಓದಿ: ವಾಜಪೇಯಿ ಹೆವೀ ಡ್ರಿಂಕರ್ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

    ಎಂಟಿಬಿ ನಾಗರಾಜ್ ಹಾಗೂ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಮಾತನಾಡಿದ ಖಂಡ್ರೆ, ಅವರು ಮೊದಲು ನಮ್ಮ ಪಕ್ಷದಲ್ಲಿದ್ದವರು, ಮಂತ್ರಿಯಾಗಿದ್ದವರು ಹೀಗಾಗಿ ಭೇಟಿಯಾಗಿದ್ದಾರೆ. ಮುರುಗೇಶ್ ನಿರಾಣಿ ಸಹ ಸಿದ್ದರಾಮಯ್ಯರನ್ನ ಭೇಟಿಯಾಗಿದ್ದರು. ಸುಮಾರು ಜನ ನಮ್ಮ ಸಂಪರ್ಕದಲ್ಲಿದ್ದಾರೆ. ಅದೆಲ್ಲಾ ನಮ್ಮ ಪಕ್ಷದ ಹಿರಿಯರು ನೋಡಿಕೊಳ್ಳುತ್ತಿರುವ ವಿಚಾರ. ಮುಂದೆ ಎಲ್ಲವನ್ನೂ ನಮ್ಮ ಪಕ್ಷದ ಹಿರಿಯರೆ ಬಹಿರಂಗವಾಗಿ ತಿಳಿಸುತ್ತಾರೆ ಎಂದರು. ಇದನ್ನೂ ಓದಿ: ಟ್ವಿಟ್ಟರ್‌ ಖಾತೆ ಮತ್ತೆ ಸಕ್ರಿಯ – ಸತ್ಯಮೇವ ಜಯತೇ ಎಂದ ಕಾಂಗ್ರೆಸ್‌

    ಇನ್ನೂ ಆಗಸ್ಟ್ 17 ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಿರಿಯ ಮುಖಂಡರು ರಾಯಚೂರಿಗೆ ಆಗಮಿಸುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಶಾಸಕರು, ಮುಖಂಡರ ಸಭೆ ನಡೆಸಲಿದ್ದಾರೆ. ರಾಜ್ಯದ ಹಿರಿಯ ಮುಖಂಡರೆಲ್ಲಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿವೆ. ಸರ್ಕಾರಗಳ ದುರಾಡಳಿತ ವಿರುದ್ದ ಧ್ವನಿ ಎತ್ತಿ ಜನರ ಪರ ಹೋರಾಟ ಮಾಡುತ್ತೇವೆ ಅಂತ ಈಶ್ವರ ಖಂಡ್ರೆ ಹೇಳಿದ್ದಾರೆ.

  • ರಾಜ್ಯಕ್ಕೆ ತಕ್ಷಣ 50 ಸಾವಿರ ಆಂಫೋಟೆರಿಸಿನ್ ಬಿ ಪೂರೈಸಿ: ಈಶ್ವರ್ ಖಂಡ್ರೆ

    ರಾಜ್ಯಕ್ಕೆ ತಕ್ಷಣ 50 ಸಾವಿರ ಆಂಫೋಟೆರಿಸಿನ್ ಬಿ ಪೂರೈಸಿ: ಈಶ್ವರ್ ಖಂಡ್ರೆ

    ಬೆಂಗಳೂರು: ಕೇಂದ್ರ ಸರ್ಕಾರ ತಕ್ಷಣವೇ ರಾಜ್ಯಕ್ಕೆ 50 ಸಾವಿರ ಆಂಫೋಟೆರಿಸಿನ್ ಬಿ (Amphotericin B) ಪೂರೈಸುವ ಮೂಲಕ ಕಪ್ಪು ಶಿಲೀಂದ್ರ (Black Fungus) ಸೋಂಕಿನಿಂದ ಜೀವನ್ಮರಣದ ನಡುವೆ ಹೋರಾಡುತ್ತಿರುವ ರಾಜ್ಯದ ಜನತೆಯನ್ನು ರಕ್ಷಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕಿತರ, ಮರಣ ಹೊಂದಿದವರ ಸಂಖ್ಯೆಯಲ್ಲಿ ಸುಳ್ಳು ಹೇಳಿದ ಸರ್ಕಾರ, ಕಪ್ಪು ಶಿಲೀಂದ್ರ ಸೋಂಕಿನಿಂದ ನರಳುತ್ತಿರುವವರ ಮತ್ತು ಸಾವಿಗೀಡಾಗುತ್ತಿರುವವರ ಸಂಖ್ಯೆಯಲ್ಲೂ ಅಸ್ಪಷ್ಟ ಮಾಹಿತಿ ನೀಡುತ್ತಿರುವುದರಿಂದ ರಾಜ್ಯಕ್ಕೆ ಸೂಕ್ತ ಪ್ರಮಾಣದಲ್ಲಿ ಚುಚ್ಚುಮದ್ದು ಹಂಚಿಕೆಯಾಗುತ್ತಿಲ್ಲ. ಇದರಿಂದ ರಾಜ್ಯದಲ್ಲಿ ತೀವ್ರ ಕೊರತೆ ಉಂಟಾಗಿದೆ ಎಂದು ಆಕ್ಷೇಪಿಸಿದ್ದಾರೆ.

    ರಾಜ್ಯದಲ್ಲಿ ಪ್ರಸ್ತುತ ಕೋವಿಡ್ ನಿಂದ ಗುಣವಾದ 2 ಸಾವಿರಕ್ಕೂ ಹೆಚ್ಚು ಜನರಲ್ಲಿ ಕಪ್ಪು ಶಿಲೀಂದ್ರ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ನಿತ್ಯ 4 ರಿಂದ 5 ಆಂಫೋಟೆರಿಸಿನ್ ಬಿ ಚುಚ್ಚುಮದ್ದು ನೀಡಬೇಕಾಗುತ್ತದೆ. ಆದರೆ ರಾಜ್ಯಕ್ಕೆ ಪೂರೈಕೆ ಆಗುತ್ತಿರುವುದು ಕೆಲವೇ ಸಾವಿರ, ಹೀಗಾಗಿ ಸೋಂಕಿತರ ಪಾಡು ಹೇಳತೀರದಾಗಿದೆ ಎಂದರು.

    ರಾಜ್ಯದ ಬೀದರ್ ನಿಂದ ಚಾಮರಾಜನಗರದವರೆಗೆ ಎಲ್ಲ ಕಡೆಯೂ ಆಂಫೋಟೆರಿಸಿನ್ ಬಿ ಚುಚ್ಚುಮದ್ದಿನ ತೀವ್ರ ಕೊರತೆ ಎದುರಾಗಿದೆ. ಆದರೂ ಆರೋಗ್ಯ ಇಲಾಖೆ ಇತ್ತ ಗಮನ ಹರಿಸದಿರುವುದು ದುರ್ದೈವ. ಇವರಿಗೆ ಜನರ ಬಗ್ಗೆ ಕಾಳಜಿಯೇ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ರಾಜ್ಯದ ಸಂಸತ್ ಸದಸ್ಯರೇ ಕೇಂದ್ರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದರೂ ಸೂಕ್ತ ಪ್ರಮಾಣದಲ್ಲಿ ಔಷಧ ಹಂಚಿಕೆ ಆಗುತ್ತಿಲ್ಲ. 25 ಬಿಜೆಪಿ ಸಂಸದರು ನಾಡಿನ ಜನರ ಜೀವ ಉಳಿಸಲು ಚುಚ್ಚುಮದ್ದು ಕೇಳಲೂ ಬಾಯಿ ಇಲ್ಲದವರಾಗಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ತಕ್ಷಣ ಕನಿಷ್ಠ 50 ಸಾವಿರ ಆಂಫೋಟೆರಿಸಿನ್ ಬಿ ಪೂರೈಸುವ ಮೂಲಕ 2 ಸಾವಿರ ಸೋಂಕಿತರ ಪ್ರಾಣ ಉಳಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯಿಸಿದ್ದಾರೆ.

  • ದಪ್ಪ ಚರ್ಮದ, ಕಿವಿ, ಕಣ್ಣು, ಹೃದಯ ಇಲ್ಲದ ಸರ್ಕಾರ ಇದು- ಈಶ್ವರ್ ಖಂಡ್ರೆ ವಾಗ್ದಾಳಿ

    ದಪ್ಪ ಚರ್ಮದ, ಕಿವಿ, ಕಣ್ಣು, ಹೃದಯ ಇಲ್ಲದ ಸರ್ಕಾರ ಇದು- ಈಶ್ವರ್ ಖಂಡ್ರೆ ವಾಗ್ದಾಳಿ

    – ರೈತರು ಸತ್ತ ಮೇಲೆ ಪರಿಹಾರ ಕೊಡತ್ತಾರಾ?

    ಬೀದರ್: ದಪ್ಪ ಚರ್ಮದ, ಕಿವಿ, ಕಣ್ಣು, ಹೃದಯ ಇಲ್ಲದ ಸರ್ಕಾರ ಇದು. ಇಲ್ಲಿಯವರೆಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹಕ್ಕೆ ಸಿಲುಕಿ ಸಂಕಷ್ಟಕ್ಕೆ ಒಳಗಾದವರಿಗೆ ಇಲ್ಲಿಯವರೆಗೆ ಸ್ಪಂದನೆ ಇಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯಾ, ಯಾವಾಗ ಪರಿಹಾರ ಬಿಡುಗಡೆ ಮಾಡುತ್ತಾರೆ, ರೈತರು ಸತ್ತ ಮೇಲೆ ಪರಿಹಾರ ಕೊಡತ್ತಾರಾ? ಇದರಲ್ಲೂ ರಾಜಕೀಯ ಮಾಡೋದು ಬಿಡಿ. ಎಲ್ಲರೂ ಉಪ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವಿಷಯದಲ್ಲಿ ಬಿಜೆಪಿ ನಾಟಕ ಮಾಡುತ್ತಿದೆ. ಪ್ರತಿ ಎಕರೆಗೆ 50 ಸಾವಿರ ರೂ. ವಿಶೇಷ ಪ್ಯಾಕೇಜ್ ಕೊಡಬೇಕು ಎಂದು ಖಂಡ್ರೆ ಆಗ್ರಹಿಸಿದರು.

    ಪ್ರವಾಹ ಪೀಡಿತ ಪ್ರದೇಶದಲ್ಲಿ ಅ.21 ರಂದು ಸಿಎಂ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಕಲಬುರಗಿ, ವಿಜಯಪುರ, ರಾಯಚೂರು, ಯಾದಗಿರಿಯಲ್ಲಿ ಮಾತ್ರ ವೈಮಾನಿಕ ಸಮೀಕ್ಷೆ ನಡೆಸಲಾಗುತ್ತಿದೆ. ವೈಮಾನಿಕ ಸಮೀಕ್ಷೆ ಪಟ್ಟಿಯಲ್ಲಿ ಬೀದರ್ ಜಿಲ್ಲೆ ಯಾಕೆ ಇಲ್ಲ? ಸಿಎಂ ಬೀದರ್ ಜಿಲ್ಲೆಗೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಸಿಎಂಗೆ ಒತ್ತಾಯ ಮಾಡುತ್ತೇನೆ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ಮಾಡಿ, ಜೊತೆಗೆ ಪ್ರಗತಿ ಪರಿಶೀಲನೆ ಮಾಡಿ, ಪರಿಹಾರ ಘೋಷಿಸಿ ಎಂದು ಅವರು ಒತ್ತಾಯಿಸಿದರು.

    ಜಿಲ್ಲೆಯಲ್ಲಿ 2.47 ಸಾವಿರ ರೂ. ಬೆಳೆ ಹಾನಿ ಸಂಭವಿಸಿದೆ. ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಭೀಕರ ಅತಿವೃಷ್ಟಿಯಾಗಿದೆ. ಇಷ್ಟಾದರೂ ಸರ್ಕಾರ ರಾಜಕೀಯ ಮಾಡುತ್ತಿದೆ. ಪ್ರವಾಹ ಸಂತ್ರಸ್ತರ ರಕ್ಷಣೆಗೆ ಬರುತ್ತಿಲ್ಲ. ಜನ ಮನೆ ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ: ಈಶ್ವರ್ ಖಂಡ್ರೆ

    ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ: ಈಶ್ವರ್ ಖಂಡ್ರೆ

    ರಾಯಚೂರು: ಶಿರಾ, ಆರ್.ಆರ್.ನಗರ ವಿಧಾನಸಭಾ ಉಪ ಚುನಾವಣಾ ಹಿನ್ನೆಲೆ ಡಿ.ಕೆ ಶಿವಕುಮಾರ್ ಮನೆ ಮೇಲೆ ಉದ್ದೇಶಪೂರ್ವಕವಾಗಿ ಸಿಬಿಐ ರೇಡ್ ಮಾಡಲಾಗಿದೆ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

    ರಾಯಚೂರಿನ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಖಂಡ್ರೆ, ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಜಿಜೆಪಿ ತಂತ್ರ ರೂಪಿಸಿದೆ. ಸಿಬಿಐ ಬಿಜೆಪಿ ಪಕ್ಷದ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಸಿಬಿಐ ಕೇದ್ರ ಸರ್ಕಾರದ ಪಂಜರದ ಗಿಣಿಯಾಗಿದೆ ಎಂದರು.

    ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜ್ ನಿಂದ ಯಾವುದೇ ಕಾರ್ಯಕ್ರಮ ಜಾರಿಯಾಗಿಲ್ಲ ಅಂತ ಆರೋಪಿಸಿದರು. ಹತ್ರಾಸ್ ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರವಾಗಿ ಕೊಲೆಯಾಗಿದೆ. ಯುಪಿ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳಬೇಕಿತ್ತು. ಆದ್ರೆ ಯೋಗಿ ಸರ್ಕಾರವು ಆರೋಪಿಗಳಿಗೆ ಸಮರ್ಥನೆ ಮಾಡುವ ರೀತಿ ವರ್ತನೆ ಮಾಡಿದ್ದಾರೆ. ಯುಪಿ ಸರ್ಕಾರದ ವಕ್ತಾರರು ಅತ್ಯಾಚಾರವಾಗಿಲ್ಲ ಅಂತ ಹೇಳುತ್ತಾರೆ. ಯುಪಿ ಸರ್ಕಾರ ಜಂಗಲ ರಾಜ್ಯ ನಡೆಸುತ್ತಿದೆ. ಇವರಿಗೆ ನೈತಿಕತೆ, ಮಾನ ಮಾರ್ಯಾದೆ, ಸಂವಿಧಾನದ ಮೇಲೆ ನಂಬಿಕೆ ಇದೆಯೇ ಅಂತ ಪ್ರಶ್ನೆ ಮಾಡಿದರು.

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಮೇಲೆ ಪುರುಷ ಪೊಲೀಸ್ ಪೇದೆ ಹಲ್ಲೆ ಮಾಡಿದ್ದಾರೆ. ಇಲ್ಲಿ ಕಾನೂನು ಇದೆಯೇ? ಆರೋಪಿಗಳಿಗೆ ಕಠಿಣವಾದ ಶಿಕ್ಷೆಯಾಗಬೇಕು. ಯೋಗಿ ಸರ್ಕಾರಕ್ಕೆ ಆಡಳಿತ ಮಾಡಲು ಅರ್ಹತೆ ಇಲ್ಲ, ವಜಾಗೊಳಿಸಬೇಕು. ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಅಂತ ಖಂಡ್ರೆ ಒತ್ತಾಯಿಸಿದರು.

    ಶಿರಾ ಹಾಗೂ ಆರ್ ಆರ್ ನಗರ ಎರಡೂ ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಮಸ್ಕಿ ಕ್ಷೇತ್ರ ಅಭಿವೃದ್ಧಿ ಆಗಿದೆ. ಮಸ್ಕಿ ವಿಧಾನಸಭಾ ಉಪ ಚುನಾವಣೆಗೆ ಐದಾರು ಜನ ಆಕಾಂಕ್ಷಿಗಳಿದ್ದಾರೆ. ಮಸ್ಕಿಗೆ ಗೆಲ್ಲುವ ಅಭ್ಯರ್ಥಿಯನ್ನು ನಿಲ್ಲಿಸಲಿದ್ದೇವೆ ಅಂತ ಈಶ್ವರ ಖಂಡ್ರೆ ಹೇಳಿದರು.

  • ಕಾಂಗ್ರೆಸ್‌ ಸೇರಲು ಮುಂದಾಗಿದ್ರಾ ರಾಗಿಣಿ? – ಕೆಪಿಸಿಸಿ ಚರ್ಚೆಯ ಇನ್‌ಸೈಡ್‌ ಸ್ಟೋರಿ

    ಕಾಂಗ್ರೆಸ್‌ ಸೇರಲು ಮುಂದಾಗಿದ್ರಾ ರಾಗಿಣಿ? – ಕೆಪಿಸಿಸಿ ಚರ್ಚೆಯ ಇನ್‌ಸೈಡ್‌ ಸ್ಟೋರಿ

    ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ ರಾಗಿಣಿ ವಿಚಾರ ಇಂದು ಪ್ರಸ್ತಾಪಗೊಂಡಿತು.

    ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಸ್ಯಾಂಡಲ್‌ವುಡ್‌ ಡ್ರಗ್ಸ್‌ ದಂಧೆ ಪ್ರಕರಣದ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಕೆಲ ಶಾಸಕರು ನಟಿ ರಾಗಿಣಿ ಕಾಂಗ್ರೆಸ್‌ ಸೇರಲು ಸಿದ್ಧವಾಗಿದ್ದರು ವಿಷಯ ಪ್ರಸ್ತಾಪ ಮಾಡಿದರು ಎಂಬ ವಿಷಯ ಮೂಲಗಳಿಂದ ಪಬ್ಲಿಕ್‌ ಟಿವಿಗೆ ಸಿಕ್ಕಿದೆ.

    ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿದ ಶಾಸಕರು ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ, ಅಂತದ್ದು ಏನಿಲ್ಲ. ಈಶ್ವರ್ ಖಂಡ್ರೆಯನ್ನು ಭೇಟಿ ಮಾಡಿದ್ದಳಂತೆ ಅಷ್ಟೇ ಎಂದು ತಿಳಿಸಿದರು. ಇದನ್ನೂ ಓದಿ: ದಿಗಂತ್, ಐಂದ್ರಿತಾ ಮಧ್ಯರಾತ್ರಿ ದೊಡ್ಡ ಸಂಭ್ರಮಾಚರಣೆ ಮಾಡಿದ್ರು – ಸುಚೇಂದ್ರ ಪ್ರಸಾದ್

    ಈ ಸಂದರ್ಭದಲ್ಲಿ ಈಶ್ವರ್‌ ಖಂಡ್ರೆ ಮಾತನಾಡಿ, 2-3 ತಿಂಗಳ ಹಿಂದೆ ನನ್ನನ್ನು ಬಂದು ಭೇಟಿಯಾಗಿದ್ದರು. ಪಕ್ಷ ಸೇರ್ಪಡೆಯ ಬಗ್ಗೆ ಮಾತನಾಡಿದರು. ಈಗ ನೀವು ಬಿಜೆಪಿಯಲ್ಲಿ ಇದ್ದೀರಿ ನೀವು ಅಲ್ಲೇ ಇರಿ ಎಂದು ಹೇಳಿದೆ. ಇದಕ್ಕೆ ರಾಗಿಣಿ, ಇಲ್ಲಿ ನನಗೆ ಯಾವುದೇ ಅವಕಾಶ ಇಲ್ಲ. ನಾನು‌ ಕಾಂಗ್ರೆಸ್ ಸೇರುತ್ತೇನೆ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಉತ್ತಮ ಅವಕಾಶ ಇದೆ ಅಂತ ಅವರೇ ಹೇಳಿದರು‌‌ ಎಂದು ವಿವರಿಸಿದರು.

    ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರ ಅಭಿಪ್ರಾಯ ಕೇಳಿ ಹೇಳುತ್ತೇನೆ. ಕೊರೊನಾ ಕಡಿಮೆ ಆಗಲಿ ಮತ್ತೆ ನೋಡೋಣ ಎಂದಿದ್ದೆ ಎಂದು ಈಶ್ವರ್‌ ಖಂಡ್ರೆ ಮಾತುಕತೆಯ ವಿಚಾರವನ್ನು ನಾಯಕರ ಗಮನಕ್ಕೆ ತಂದರು

    ರಾಗಿಣಿ ಬಿಜೆಪಿ ಸದಸ್ಯೆ ಎಂಬ ಸುದ್ದಿಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್‌, ರಾಗಿಣಿ ದ್ವಿವೇದಿ ಬಿಜೆಪಿ ಸದಸ್ಯೆ ಅಲ್ಲ. ರಾಗಿಣಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು ಎಂದು ಹೇಳಿದ್ದರು.

    ಬಿಜೆಪಿ ನಾಯಕರ ಜೊತೆ ರಾಗಿಣಿ ಪ್ರಚಾರ ಮಾಡುತ್ತಿರುವ ಫೋಟೋ, ವಿಡಿಯೋವನ್ನು ಕಾಂಗ್ರೆಸ್‌ ಬಿಟ್ಟಿದ್ದರೆ, ಬಿಜೆಪಿ ಕೈ ನಾಯಕರ ಜೊತೆ ರಾಗಿಣಿ ಇರುವ ಫೋಟೋವನ್ನು ಪ್ರಕಟಿಸಿ ತಿರುಗೇಟು ನೀಡಿತ್ತು.

  • ಬಿಗಿ ಲಾಕ್‍ಡೌನ್ ಮಾಡದಿದ್ರೆ ಬೆಂಗ್ಳೂರನ್ನು ‘ಭಗವಂತ’ನಿಂದ್ಲೂ ಕಾಪಾಡಲು ಕಷ್ಟ: ಈಶ್ವರ ಖಂಡ್ರೆ

    ಬಿಗಿ ಲಾಕ್‍ಡೌನ್ ಮಾಡದಿದ್ರೆ ಬೆಂಗ್ಳೂರನ್ನು ‘ಭಗವಂತ’ನಿಂದ್ಲೂ ಕಾಪಾಡಲು ಕಷ್ಟ: ಈಶ್ವರ ಖಂಡ್ರೆ

    ಬೆಂಗಳೂರು: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸ್ಫೋಟವಾಗುತ್ತಿದ್ದು, ಈಗಾಗಲೇ ಒಂದು ವಾರಗಳ ಕಾಲ ಸರ್ಕಾರ ಬೆಂಗಳೂರಿನಲ್ಲಿ ಲಾಕ್ ಡೌನ್ ಹೇರಿದೆ. ಇದೀಗ ಕೆಪಿಸಿಸಿ ಅಧ್ಯಕ್ಷ ಈಶ್ವರ್ ಕಂಡ್ರೆ ಅವರು ಕನಿಷ್ಠ 15 ದಿನವಾದರೂ ಬಿಗಿಯಾದ ಲಾಕ್‍ಡೌನ್ ಮಾಡಿ ಎಂದು ಹೇಳಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಖಂಡ್ರೆ, ಮಾನ್ಯ ಮುಖ್ಯಮಂತ್ರಿಗಳೇ ಬೆಂಗಳೂರು ಲಾಕ್‍ಡೌನ್ ಮಾಡಿದ್ದಿರಿ. ಆದರೆ ಈ ನೆಪ ಮಾತ್ರದ ಲಾಕ್‍ಡೌನ್ ನಿಂದ ಫಲಿತಾಂಶ ನಿರೀಕ್ಷೆ ಕಷ್ಟ. ತಜ್ಞರ ಅಭಿಪ್ರಾಯ ಪಡೆದು ಕನಿಷ್ಠ 15 ದಿನವಾದ್ರೂ ಬೆಂಗಳೂರಿನಲ್ಲಿ ಬಿಗಿಯಾಗಿ ಲಾಕ್ ಡೌನ್ ಮಾಡಿ. ಇಲ್ಲವಾದರೆ ಆ “ಭಗವಂತ” ಬಂದರೂ ಬೆಂಗಳೂರನ್ನ ಕಾಪಾಡುವುದು ಕಷ್ಟವಾಗಲಿದೆ ಎಂದು ಬರೆದುಕೊಂಡು ಸಿಎಂ ಆಫ್ ಕರ್ನಾಟಕ ಹಾಗೂ ಕೆಪಿಸಿಸಿ ಪ್ರೆಸಿಡೆಂಟ್ ಗೆ ಟ್ಯಾಗ್ ಮಾಡಿದ್ದಾರೆ.

    ಕೊರೊನಾ ವೈರಸ್ ತನ್ನ ಅಟ್ಟಹಾಸ ಮುಂದುವರಿಸಿದ್ದರಿಂದ ಸರ್ಕಾರ ಕಳೆದ ಮಂಗಳವಾರ ರಾತ್ರಿಯಿಂದ ಒಂದು ವಾರಗಳ ಕಾಲ ಲಾಕ್‍ಡೌನ್ ಮಾಡಿದೆ. ಈ ಮಧ್ಯೆ ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಸೋಮಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಆದರೂ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದ್ದು, ರಾಜ್ಯವನ್ನು ಆ ದೇವರೇ ಕಾಪಾಡಬೇಕು ಎಂದು ಮಾರ್ಮಿಕವಾಗಿ ಹೇಳಿದ್ದರು. ಆರೋಗ್ಯ ಸಚಿವರು ಭಗವಂತನೇ ಕಾಪಾಡಬೇಕು ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಅದು ವ್ಯಾಪಕ ಚರ್ಚೆಗೆ ಕಾರಣವಾಯಿತು.

    ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಜನರ ಆರೋಗ್ಯ ರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ ಸಿಎಂ ಯಡಿಯೂರಪ್ಪ ಸೇರಿದಂತೆ ಎಲ್ಲ ಮಂತ್ರಿಗಳು ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದರು. ಈ ವಿಚಾರ ಭಾರೀ ಚರ್ಚೆಯಾದ ಬಳಿಕ, ನನ್ನ ಹೇಳಿಕೆಯನ್ನು ಪ್ರಸ್ತಾಪಿಸಿ ಸಿಎಂ ಸೇರಿದಂತೆ ಮಂತ್ರಿಗಳು ರಾಜೀನಾಮೆ ನೀಡಲಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಕ್ಕೆ ಶ್ರೀರಾಮುಲು ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ಒಬ್ರು ದೇವರ ಮೇಲೆ ಭಾರ ಹಾಕ್ತಾರೆ, ಮತ್ತೊಬ್ರು ದೇವರ ಕಥೆ ಹೇಳ್ತಾರೆ: ಡಿಕೆಶಿ

    ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಯಿಸಿದ್ದ ಶ್ರೀರಾಮುಲು, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಸೋಂಕು ಹೆಚ್ಚಾಗಲು, ಸರ್ಕಾರದ ನಿರ್ಲಕ್ಷ್ಯ, ಮಂತ್ರಿಗಳ ಬೇಜವಾಬ್ದಾರಿ, ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸುವ ಸಂದರ್ಭದಲ್ಲಿ ಆರೋಪಗಳು ಸತ್ಯಕ್ಕೆ ದೂರವಾದದ್ದು, ಸೋಂಕು ತಡೆಯಲು ಜನರಲ್ಲಿ ಜಾಗೃತಿ ಬರಬೇಕು. ಸೋಂಕು ತಡೆಯುವಲ್ಲಿ ಇದು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಇಲ್ಲಿ ಎಡವಿದರೆ ಪರಿಸ್ಥಿತಿ ಕ್ಲಿಷ್ಟಕರ ಎಂದು ಹೇಳುವ ಸಂರ್ಭದಲ್ಲಿ, `ಇನ್ನೂ ಎಡವಿದರೆ ದೇವರೇ ಕಾಪಾಡಬೇಕು’ ಎಂದು ಹೇಳಿದ ಎಚ್ಚರಿಕೆಯ ಮಾತುಗಳು ಎಂದು ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ‘ದೇವರೇ ಕಾಪಾಡಬೇಕು’ – ಹೇಳಿಕೆ ನೀಡಿದ್ದು ಯಾಕೆಂದು ವಿವರಿಸಿದ ಶ್ರೀರಾಮುಲು

  • ನರೇಗಾ ಯೋಜನೆಯಡಿ ಪ್ರತಿದಿನ 250 ಜನರಿಗೆ ಕೆಲಸ- ಕಾಮಗಾರಿ ಪರಿಶೀಲಿಸಿದ ಖಂಡ್ರೆ

    ನರೇಗಾ ಯೋಜನೆಯಡಿ ಪ್ರತಿದಿನ 250 ಜನರಿಗೆ ಕೆಲಸ- ಕಾಮಗಾರಿ ಪರಿಶೀಲಿಸಿದ ಖಂಡ್ರೆ

    ಬೀದರ್: ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಚೆಕ್ ಡ್ಯಾಮ್ ಹಾಗೂ ಮೊರಂಬಿ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ಸಮೀಪ ಗಿಡ ನೆಡಲು ಗುಣಿ ತೊಡುತ್ತಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಈಶ್ವರ್ ಖಂಡ್ರೆ ಅವರು ಕಾಮಗಾರಿಯನ್ನು ಪರಿಶೀಲಿಸಿದರು.

    ಶನಿವಾರ ಅಧಿಕಾರಿಗಳ ತಂಡದೊಂದಿಗೆ ಉಚ್ಛಾ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಲಾಕ್‍ಡೌನ್ ಮಾಡಿರುವುದರಿಂದ ಬಡ ಜನರು, ಕೂಲಿ ಕಾರ್ಮಿಕರು ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಷೇತ್ರದ ಬಡಜನರಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎನ್ನುವ ಉದ್ದೇಶದಿಂದ ಈಗಾಗಲೇ ವೈಯಕ್ತಿಕವಾಗಿ ಆಹಾರದ ಪೊಟ್ಟಣ, ತರಕಾರಿ ಕಿಟ್ ನೀಡುವ ಮೂಲಕ ನೆರವು ನೀಡಲಾಗಿದೆ ಎಂದರು.

    ಬಡವರು, ಕೂಲಿ ಕಾರ್ಮಿಕರು ಸಂಕಷ್ಟದಲ್ಲಿರುವ ಸಮಯದಲ್ಲಿ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ಎಲ್ಲ 40 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನರೇಗಾದಡಿ ಪ್ರತಿ ಗ್ರಾಮ ಪಂಚಾಯಿತಿಯಿಂದ ಪ್ರತಿದಿನ ಕನಿಷ್ಟ 250 ಜನರಿಗೆ ಕೆಲಸ ನೀಡುವಂತೆ ಸೂಚನೆ ನೀಡಲಾಗಿದೆ. ಯಾರೂ ಆತಂಕ ಪಡಬೇಕಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿದಿನ ಒಬ್ಬರಿಗೆ 275 ರೂ. ಯಂತೆ ಕನಿಷ್ಟ 25 ದಿನ ಕೆಲಸ ನೀಡುವಂತೆ ಸೂಚನೆ ನೀಡಲಾಗಿದೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದರು. ಈ ವೇಳೆ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ನಾಯಕರ್ ಇದ್ದರು.

  • ಪಾಪು ಆರೋಗ್ಯ ವಿಚಾರಿಸಿದ ಬಿ.ಸಿ ಪಾಟೀಲ್, ಖಂಡ್ರೆ

    ಪಾಪು ಆರೋಗ್ಯ ವಿಚಾರಿಸಿದ ಬಿ.ಸಿ ಪಾಟೀಲ್, ಖಂಡ್ರೆ

    ಹುಬ್ಬಳ್ಳಿ: ಕೆಲವು ದಿನಗಳಿಂದ ನಗರದ ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ ನಾಡೋಜ ಪಾಟೀಲ್ ಪುಟ್ಟಪ್ಪ ಅವರನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿಯಾಗಿ ಪಾಪು ಅವರ ಆರೋಗ್ಯ ವಿಚಾರಿಸಿದ್ದಾರೆ.

    ಹಾಲಿ ಹಾಗೂ ಮಾಜಿ ಸಚಿವರಿಬ್ಬರು ಪಾಪು ಅವರ ಆರೋಗ್ಯದ ಬಗ್ಗೆ ಅವರ ಸಂಬಂಧಿಗಳು ಹಾಗೂ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಪಾಟೀಲ್ ಪುಟ್ಟಪ್ಪವರು ನಾಡಿನ ಹಿರಿಯ ಚಿಂತಕರು, ಅವರು ಬೇಗನೆ ಗುಣಮುಖರಾಗಿ ಮತ್ತೆ ಮೊದಲಿನಂತೆ ನೆಲ, ಜಲ ಹಾಗೂ ಕನ್ನಡಕ್ಕಾಗಿ ಅವರ ಹೋರಾಟ ಮುಂದುವರೆಸಲು ಎಂದು ಬಿ.ಸಿ ಪಾಟೀಲ್ ಹಾಗೂ ಈಶ್ವರ ಖಂಡ್ರೆ ಹಾರೈಸಿದರು.

    ಇದೇ ವೇಳೆ ಕೃಷಿ ಸಚಿವರು ಕಿಮ್ಸ್ ವೈದ್ಯರ ಜೊತೆ ಕೆಲಕಾಲ ಚರ್ಚೆ ನಡೆಸಿ ಆರೋಗ್ಯದ ಬಗ್ಗೆ ಮಾಹಿತಿ ತಿಳಿದುಕೊಂಡರು. ಬಳಿಕ ಪಾಪು ಅವರ ಆರ್ಶಿವಾದ ಪಡೆದರು. ಸಚಿವ ಬಿಸಿ ಪಾಟೀಲ್ ಜೊತೆ ಅವರ ಪುತ್ರಿ ಸೃಷ್ಠಿ ಪಾಟೀಲ್ ಸಹ ಪಾಪುರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.