Tag: Eshwar Kandre

  • ವನ್ಯ ಜೀವಿಗಳು, ಮನುಷ್ಯನ ಸಂಘರ್ಷ ದಿನೇ ದಿನೇ ಹೆಚ್ಚಳಕ್ಕೆ ಕಾರಣ – ತಜ್ಞರ ಅಭಿಪ್ರಾಯವೇನು?

    ವನ್ಯ ಜೀವಿಗಳು, ಮನುಷ್ಯನ ಸಂಘರ್ಷ ದಿನೇ ದಿನೇ ಹೆಚ್ಚಳಕ್ಕೆ ಕಾರಣ – ತಜ್ಞರ ಅಭಿಪ್ರಾಯವೇನು?

    ಮಾನವ ವನ್ಯಜೀವಿ (Wild Animals) ಸಂಘರ್ಷ ನಿರಂತರವಾಗಿ ಗತಕಾಲದಿಂದಲೂ ನಡೆಯುತ್ತಾ ಬಂದಿದೆ. ಮಾನವನ (Human) ಅನುಕೂಲಕ್ಕಾಗಿ ಅಭಿವೃದ್ಧಿ ಯೋಜನೆಗಳು ವನ್ಯಜೀವಿಗಳು ಮತ್ತು ಮಾನವರ ನಡುವೆ ನಡೆಯುವ ಸಂಘರ್ಷಕ್ಕೆ ಮೂಲ ಕಾರಣವಾಗಿದೆ. ಮತ್ತೊಂದು ಕಡೆ ಅರಣ್ಯ ಇಲಾಖೆ ವತಿಯಿಂದ ಕಾಯ್ದೆ ಕಾನೂನುಗಳು ಜಾರಿಗೆ ತಂದು ವನ್ಯ ಪ್ರಾಣಿಗಳ ರಕ್ಷಣೆಗೆ ಕಾರ್ಯನಿರ್ವಹಿಸುತ್ತಿದ್ದು ವನ್ಯಜೀವಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಆ ವನ್ಯಜೀವಿಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶದ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಇದೇ ಕಾರಣಕ್ಕೆ ಪ್ರಾಣಿಗಳು ಕಾಡಿನಿಂದ ಹೊರಬರಲು ಕಾಡಂಚಿನ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಮನುಷ್ಯರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಅರಣ್ಯ ಭೂಮಿಯಲ್ಲಿ ಮನುಷ್ಯನ ಮಿತಿ ಮೀರಿದ ಹಸ್ತಕ್ಷೇಪದಿಂದ ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗಿ ನಾಡಿನ ಕಡೆ ಮುಖ ಮಾಡುತ್ತಿವೆ. ಇದೇ ಕಾರಣಕ್ಕೆ ಬೇಟೆ, ಉರುಳಿಗೆ ಸಿಕ್ಕು ಚಿರತೆ ಸಾವು ಎಂಬ ಸುದ್ದಿಗಳನ್ನು ಕಾಣುತ್ತೇವೆ. ಒಂದು ಕಡೆ ಅರಣ್ಯ ಇಲಾಖೆಯ ಬಹುಭಾಗದ ಭೂಮಿ ಸಾಗುವಾನಿ ಮರಗಳೇ ಹೆಚ್ಚಾಗಿದ್ದು, ಇದು ಎಷ್ಟರ ಮಟ್ಟಿಗೆ ವನ್ಯ ಜೀವಿಗಳಿಗೆ ಉಪಕಾರವಾಗಿದೆ ಎಂಬ ಪ್ರಶ್ನೆ ಸಹ ಮೂಡುತ್ತದೆ.

    ಎಷ್ಟೋ ಕಡೆಗಳಲ್ಲಿ ಕೃಷಿಭೂಮಿಗಾಗಿ ನೂರಾರು ಎಕರೆ ಕಾಡನ್ನು ನಾಶ ಮಾಡುವುದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆಲ್ಲ ಒಂದು ತಡೆ ಎಂಬುದೇ ಇಲ್ಲವಾಗಿ ವನ್ಯಜೀವಿಗಳು ಸಂಕಷ್ಟಕ್ಕೆ ಸಿಲುಕಿವೆ. ಅಲ್ಲದೇ ಆಹಾರಕ್ಕಾಗಿ ಕೃಷಿ ಭೂಮಿಗೆ ಬಂದ ಎಷ್ಟೋ ಪ್ರಾಣಿಗಳು ವಿದ್ಯುತ್, ಗುಂಡು, ಉರುಳು ಹಾಗೂ ವಿಷದಂತಹ ದಾಳಿಗೆ ಸಿಲುಕುತ್ತಿವೆ. ಹೀಗೆ ಸುಮಾರು ಪ್ರತಿದಿನ ಭಾರತದಲ್ಲಿ 50ಕ್ಕೂ ಹೆಚ್ಚು ವನ್ಯಜೀವಿಗಳು ಸಾವಿಗೀಡಾಗುತ್ತಿವೆ ಎಂಬ ವರದಿ ಇದೆ. ಕಳೆದ 2022 ರಿಂದ ಕರ್ನಾಟಕದಲ್ಲಿ ವನ್ಯಜೀವಿಗಳ ದಾಳಿಗೆ ಸುಮಾರು 31 ಜನರ ಸಾವಾಗಿದೆ. ಹೀಗೆ ನಿರಂತರ ಮನುಷ್ಯ ಮತ್ತು ಪ್ರಾಣಿಗಳ ಸಂಘರ್ಷ ಒಂದಲ್ಲ ಒಂದು ರೀತಿಯಾಗಿ ಮುಂದುವರಿಯುತ್ತಲೇ ಇದೆ.

    ಆನೆಗಳ ಹಾವಳಿ ಎಂಬ ವರದಿ ಬಂದಾಗ ಈ ಮಾತು ನೆನಪಾಗುತ್ತದೆ. ಆನೆಗಳು ತಮ್ಮ ಹಿಂದಿನ ತಲೆಮಾರು, ಅಂದರೆ ಅಜ್ಜ ಅಜ್ಜಿ ಆ ಜಾಗದಲ್ಲಿ ಓಡಾಡಿದ್ದರೆ ಮಾತ್ರ ಅಲ್ಲಿಗೆ ಬರುತ್ತವೆ ಎಂಬ ಮಾತಿದೆ. ಹೀಗೆ ಆನೆಗಳು ಬರುವ ಹೊತ್ತಿಗೆ ಆ ಕಾಡಿನ ಜಾಗದಲ್ಲಿ ಊಹಿಸಲಾಗದಷ್ಟು ಎತ್ತರದ ಕಟ್ಟಡಗಳು ತಲೆ ಎತ್ತಿ ಅವುಗಳನ್ನು ಕಂಗಲಾಗಿಸುತ್ತವೆ. ಹುಲಿ, ಚಿರತೆ ಹಾಗೂ ಮಂಗಗಳದ್ದೂ ಇದೇ ಕತೆಯಾಗಿ ಕಾಣುತ್ತದೆ.

    ಈಗ ಒಂದು ಸಲ ಭಾರೀ ಸುದ್ದಿಯಾದ ಅರ್ಜುನ ಎಂಬ ಆನೆಯ ಸಾವಿನಲ್ಲಿ ನೋಡುವಾಗ, ಇಲ್ಲಿ ಅರ್ಜುನನ ತಪ್ಪೇನಿದೆ? ಆತ ಸೆರೆ ಹಿಡಿಯಲು ಹೊರಟಿದ್ದು ಯಾರನ್ನ? ತನ್ನಂತೆ ಬಂಧಿಯಾಗಲು ಇನ್ನೊಂದು ಆನೆಯನ್ನ. ಇಲ್ಲಿ ಆಯುಧವಾಗಿ ಅರ್ಜುನ ಬಳಕೆಯಾದ ಕೊನೆಗೆ ಸೋತ, ಮನುಷ್ಯನ ಸಂಪರ್ಕ ಅರ್ಜುನನಿಗೆ ಮುಳ್ಳಾಗಿದ್ದು ಚರ್ಚೆ ಆಗುವುದೇ ಇಲ್ಲ. ಒಂದು ಕಡೆ ತೇಜಸ್ವಿಯವರ ಬರಹದಲ್ಲಿ ವನ್ಯಜೀವಿಗಳ ಜೊತೆ ಮನುಷ್ಯನ ಸ್ನೇಹ ಎಂದಿಗೂ ಒಪ್ಪಲು ಸಾಧ್ಯವಿಲ್ಲ ಎಂದು ಬರೆಯುತ್ತಾರೆ. ಒಮ್ಮೆ ನೋಡಿದರೆ ಇದು ಸರಿ. ಮನುಷ್ಯನ ಸ್ನೇಹ ಪ್ರಾಣಿಗಳಿಗೆ ವರವಾಗುವುದಕ್ಕಿಂತ ಶಾಪವಾಗಿಯೇ ಪರಿಣಮಿಸುತ್ತದೆ. ಬಹುಶಃ ಇದೇ ಕಾರಣಕ್ಕೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಯಾವುದೇ ಕಾಡು ಪ್ರಾಣಿಗಳನ್ನು ಸಾಕಲು ಮನುಷ್ಯರಿಗೆ ಅನುಮತಿಯನ್ನು ನಿರಾಕರಿಸಲಾಗಿದೆ. ಇದರೊಂದಿಗೆ ಮನುಷ್ಯ ಹಾಗೂ ವನ್ಯಜೀವಿಗಳ ಸಂಘರ್ಷಕ್ಕೆ ಕೊನೆ ಹಾಡಲು ಸೂಕ್ತ ಮಾರ್ಗ ಕಂಡುಕೊಳ್ಳುವಲ್ಲಿ ವ್ಯವಸ್ಥೆ ಸೋತಿದೆ ಎಂಬುದು ಪರಿಸರ ಪ್ರಿಯರ ಬೇಸರಕ್ಕೂ ಕಾರಣವಾಗಿದೆ.

    ಪ್ರಾಣಿಗಳ ಅಸಹಜ ಸಾವಿನ ಬಗ್ಗೆ ಕಾನೂನು ಏನು ಹೇಳುತ್ತದೆ?
    ಪ್ರಾಣಿ ಸಾವಿನ ಬಗ್ಗೆ ಅನುಮಾನವಿದ್ದಾಗ ಮರಣೋತ್ತರ ಪರೀಕ್ಷೆ ನಡೆಸಬೇಕು. ಮರಣೋತ್ತರ ಪರೀಕ್ಷೆಯಲ್ಲಿ ಗುಂಡೇಟಿನ ಸತ್ಯ ಸಂಪೂರ್ಣವಾಗಿ ತಿಳಿಯುವುದಿಲ್ಲ. ಸಾಮಾನ್ಯವಾಗಿ ದೊಡ್ಡ ಪ್ರಾಣಿಗಳಿಗೆ ಮೆಟಲ್ ಡಿಟೆಕ್ಟರ್ ಟೆಸ್ಟ್ ಮಾಡುತ್ತಾರೆ. ಮರಣೋತ್ತರ ಪರೀಕ್ಷೆಗೂ ಮುನ್ನ ಮೆಟಲ್ ಡಿಟೆಕ್ಟರ್ ಟೆಸ್ಟ್ ನಡೆಸಬೇಕು. ಇದಕ್ಕಾಗಿ ಅರಣ್ಯ ಇಲಾಖೆಯಲ್ಲಿ ಪ್ರತ್ಯೇಕ ಮಾರ್ಗಸೂಚಿಯೇ ಇದೆ. ಅರ್ಜುನ ಆನೆ ಸಾವಿನ ವಿಚಾರದಲ್ಲಿ ಇದ್ಯಾವುದು ಕೂಡ ಪಾಲನೆ ಮಾಡಿಲ್ಲ ಎಂಬುದು ಗಮನಾರ್ಹ ಅಂಶ.

    ಕರ್ನಾಟಕ ಸರ್ಕಾರ ಕೈಗೊಂಡ ನೂತನ ಕ್ರಮಗಳು
    ಕಾಡಾನೆ ಹಾವಳಿ ತಡೆಗೆ ಅಗತ್ಯವಿರುವ ಕಡೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ ಪ್ರಸ್ತಾವನೆ ಸಲ್ಲಿಸುವಂತೆ ಕೇಳಲಾಗಿದೆ. ಎಷ್ಟು ಬೇಡಿಕೆಯಿದೆಯೋ ಅಷ್ಟನ್ನು ಮಂಜೂರು ಮಾಡಿ ಈ ವರ್ಷ ಹಾಗೂ ಮುಂದಿನ ಆರ್ಥಿಕ ವರ್ಷದಲ್ಲಿ ಪೂರ್ಣಗೊಳಿಸಲು ತೀರ್ಮಾನ ಮಾಡಲಾಗಿದೆ. ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಅನುದಾನದ ಕೊರತೆಯಿದ್ದರೂ ಈ ಬಜೆಟ್‍ನಲ್ಲೇ ಹೆಚ್ಚುವರಿಯಾಗಿ 100 ಕೋಟಿ ರೂ. ಪಡೆದು 120 ಕಿ.ಮೀ. ರೈಲ್ವೆ ಕಂಬಿ ಅಳವಡಿಕೆಗೆ ತೀರ್ಮಾನ ಮಾಡಲಾಗಿದೆ.

    ಕೆಲವೊಂದು ತಾಂತ್ರಿಕ ಸಮಸ್ಯೆಗಳಿದ್ದು, ರೈಲ್ವೆ ಕಂಬಿ ಅಳವಡಿಕೆಗೆ ಗುತ್ತಿಗೆ ನೀಡಿದರೂ ಕಂಬಿಗಳು ತುರ್ತಾಗಿ ಸಿಗುವುದಿಲ್ಲ. ಈ ಬಗ್ಗೆ ಕೇಂದ್ರಕ್ಕೆ ಸಾಕಷ್ಟು ಬಾರಿ ಪತ್ರ ಬರೆದು, ಹಳೆಯ ರೈಲ್ವೆ ಕಂಬಿಗಳನ್ನು ನಮಗೆ ನೀಡಿ ಎಂದು ಮನವಿ ಮಾಡಿಕೊಂಡಿದ್ದೇವೆ. ಈ ಬಗ್ಗೆ ಕೇಂದ್ರ ಸ್ಪಂದಿಸಿಲ್ಲ. ಶೀಘ್ರದಲ್ಲೇ ರೈಲ್ವೆ ಕಂಬಿ ತರಿಸಿಕೊಂಡು ಅಮೂಲ್ಯವಾಗಿರುವ ಜನರ ಜೀವ ರಕ್ಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಸಚಿವರು ಭರವಸೆ ನೀಡಿದ್ದಾರೆ.

    ಕಾಡಾನೆಗಳಿಂದ ಹಾವಳಿಯಿಂದ ಉಂಟಾಗಿರುವ ಬೆಳೆಹಾನಿಗೆ ಬಾಕಿ ಇರುವ 85 ಲಕ್ಷ ರೂ. ತಕ್ಷಣ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ಸಹ ನೀಡಲಾಗಿದೆ. ಬೆಂಗಳೂರಿನಲ್ಲೇ ಎರಡರಿಂದ ಎರಡೂವರೆ ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಇಡೀ ರಾಜ್ಯದಲ್ಲಿ ಒಂದುವರೆಯಿಂದ ಎರಡು ಲಕ್ಷ ಎಕರೆ ಒತ್ತುವರಿಯಾಗಿದೆ. ಅನೇಕ ಪ್ರಕರಣಗಳು ಹೈಕೋರ್ಟ್‍ನಲ್ಲಿವೆ ಕೆಲವೊಂದಕ್ಕೆ ತಡೆಯಾಜ್ಞೆ ಇದೆ. ಹಲವರು ಮನೆ ಕಟ್ಟಿಕೊಂಡಿದ್ದಾರೆ. ಬಡವರನ್ನು ಹೊರತುಪಡಿಸಿ ದೊಡ್ಡ ಮಟ್ಟಮಟ್ಟದಲ್ಲಿ ಒತ್ತುವರಿಯಾಗಿರುವ ಕಡೆ ತೆರವುಗೊಳಿಸಲು ತೀರ್ಮಾನ ಮಾಡಿದ್ದೇವೆ. ಇಂತಹ ಪ್ರಕರಣಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಅರಣ್ಯ ಪ್ರದೇಶ ಭೂಮಿಯನ್ನು ದುರುದ್ದೇಶಪೂರಿತವಾಗಿ ಬೇರೆಯವರಿಗೆ ಹಂಚಿಕೆ ಮಾಡಲು ಯಾವುದೇ ರೀತಿಯಲ್ಲೂ ಕಾನೂನು ಬದ್ಧ ಹಕ್ಕುಗಳಿಲ್ಲ. ಯಾರ್ಯಾರು ಕಾನೂನು ಮೀರುತ್ತಾರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶವಿದೆ ಎಂದು ಇತ್ತೀಚೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar kandre) ಹೇಳಿದ್ದರು.

  • ಏನ್ ಕೇಳಿಸ್ಕೊಂಡ್ಯೋ ಪಾಟೀಲ್, ಇದ್ರಿಂದ ನಿಂಗೂ, ನಮಗೂ ಡ್ಯಾಮೇಜ್: ಸಿಎಂ ಕ್ಲಾಸ್

    ಏನ್ ಕೇಳಿಸ್ಕೊಂಡ್ಯೋ ಪಾಟೀಲ್, ಇದ್ರಿಂದ ನಿಂಗೂ, ನಮಗೂ ಡ್ಯಾಮೇಜ್: ಸಿಎಂ ಕ್ಲಾಸ್

    ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ತುಮಕೂರಿನ ಸಿದ್ಧಗಂಗಾ ಶ್ರೀಗಳು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿಟ್ಟ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಅವರನ್ನು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಂಪುಟ ಸಭೆಯಲ್ಲಿ ಇಂದು ಸಿದ್ದರಾಮಯ್ಯ, ಶ್ರೀಗಳ ಜತೆ ಮಾತನಾಡಿದ್ದನ್ನ ಅವಸರದಲ್ಲಿ ಮಾಧ್ಯಮಗಳ ಮುಂದೆ ಹೋಗಿದ್ದು ಯಾಕೆ ಎಂದು ಪಾಟೀಲ್ ಅವರನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ, ಅವರು ಏನು ಹೇಳಿದ್ದನ್ನ ನೀನು ಏನ್ ಕೇಳಿಸ್ಕೊಂಡಿದ್ದಿ. ಶ್ರೀಗಳು ಸಮುದಾಯದ ಸುಪ್ರೀಂ ಕೋರ್ಟ್ ಇದ್ದಂತೆ. ಅವರ ವಿರುದ್ಧವೇ ಏನೇನೋ ಮಾತನಾಡಿದ್ದಿ. ಇದರಿಂದ ನಿನಗೂ, ಪಕ್ಷಕ್ಕೂ, ಸರ್ಕಾರಕ್ಕೂ ಡ್ಯಾಮೇಜ್ ಆಗಿದೆ ಎಂದು ಹೇಳಿ ತರಾಟಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ.

    ಇದನ್ನೂ ಓದಿ: ನಡೆದಾಡುವ ದೇವರಲ್ಲಿ ಸಾರ್ವಜನಿಕವಾಗಿ ಎಂಬಿ ಪಾಟೀಲ್ ಕ್ಷಮೆ ಕೇಳಬೇಕು: ಎಚ್‍ಡಿಕೆ

    ಪೌರಾಡಳಿತ ಖಾತೆಯ ಸಚಿವ ಈಶ್ವರ್ ಖಂಡ್ರೆ ಅವರಿಗೂ ಕ್ಲಾಸ್ ತೆಗೆದುಕೊಂಡ ಸಿಎಂ, ನಿಮ್ದು ಏನ್ರೀ? ನೀವು ಮಾಧ್ಯಮಗಳ ಮುಂದೆ ಏನೇನೋ ಮಾತಾಡ್ತಿದ್ದೀರಿ. ಇದರಿಂದ ನಮ್ಗೆ ಅನುಕೂಲ ಏನಿಲ್ಲ, ಬಿಜೆಪಿ ಅವರಿಗೆ ಅನುಕೂಲ ಆಗುತ್ತೆ ಅಷ್ಟೇ. ಅದೇನ್ ಮಾಡ್ತಿರೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ಕೊನೆಗೆ ಸಿದ್ಧಗಂಗಾ ಶ್ರೀಗಳ ವಿಚಾರವಾಗಿ ಆಗಿರೋ ಡ್ಯಾಮೇಜ್ ಅನ್ನು ನೀವೇ ಸರಿ ಮಾಡಬೇಕು. ಇನ್ನೆರಡು ದಿನದೊಳಗೆ ಬಗೆಹರಿಸಿಕೊಳ್ಳಿ ಎಂದು ಇಬ್ಬರು ಸಚಿವರಿಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಪ್ರತಿಕ್ರಿಯೆ ನೀಡಲ್ಲ: ಶಿವಕುಮಾರ ಸ್ವಾಮೀಜಿಗಳ ಸ್ಪಷ್ಟನೆ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಎಂಬಿ ಪಾಟೀಲ್, ಇನ್ನು ಎರಡು ದಿನಗಳ ಕಾಲ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಾನು ನಿರ್ಧಾರ ತೆಗೆದುಕೊಂಡಿದ್ದೇನೆ. ಎರಡು ದಿನಗಳ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತೇನೆ ಎಂದು ಹೇಳಿದರು.