Tag: ero India 2019

  • 100ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ-ಏರ್ ಶೋ ಸ್ಥಗಿತ

    100ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ-ಏರ್ ಶೋ ಸ್ಥಗಿತ

    -ಏರೋ ಇಂಡಿಯಾ ಶೋನಲ್ಲಿ ಅಗ್ನಿದೇವನ ರುದ್ರ ನರ್ತನ

    ಬೆಂಗಳೂರು: ನಗರದ ಯಲಹಂಕ ವಾಯುನೆಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 100ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಏರ್ ಶೋ ಸ್ಥಗಿತಗೊಳಿಸಲಾಗಿದೆ. ಸ್ಥಳಕ್ಕೆ 10ಕ್ಕೂ ಹೆಚ್ಚು ಅಗ್ನಿಶಾಮಕದಳದ ವಾಹನಗಳು ಆಗಮಿಸಿದ್ದು, ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

    ಪಾರ್ಕಿಂಗ್ ಗೇಟ್ ನಂಬರ್ 5ರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಯಲಹಂಕ ವಾಯುನೆಲೆಯಲ್ಲಿಯ ಏರ್ ಶೋ ಸ್ಥಗಿತಗೊಂಡಿದೆ. ಪಾರ್ಕಿಂಗ್ ಲಾಟ್ ಬಳಿ ಒಣಹುಲ್ಲು ಹೆಚ್ಚಾಗಿದ್ದು, ಸಿಗರೇಟ್ ಹಾಕಿದ್ದರಿಂದ ಬೆಂಕಿ ಹತ್ತಲು ಕಾರಣ ಎಂದು ಹೇಳಲಾಗುತ್ತಿದೆ. ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ವಾಹನದ ಮಾಲೀಕರು ಪಾರ್ಕಿಂಗ್ ಸ್ಥಳಕ್ಕೆ ಬಂದಿದ್ದಾರೆ. ಪೊಲೀಸರು ಯಾರನ್ನು ಒಳಗಡೆ ಬಿಡುತ್ತಿಲ್ಲ.

    ಯಲಹಂಕದ ಬಳಿ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಯಲಹಂಕ ಮತ್ತು ಹೆಬ್ಬಾಳದ ಕಡೆ ಪ್ರಯಾಣ ಬೆಳೆಸುವವರು ಮಾರ್ಗ ಬದಲಿಸಿಕೊಳ್ಳುವುದು ಉತ್ತಮ. ಇಂದು ಮತ್ತು ನಾಳೆ ಸಾರ್ವಜನಿಕರಿಗೆ ಏರ್ ಶೋ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ವೀಕೆಂಡ್ ಎಂದು ಸಾವಿರಾರು ಸಂಖ್ಯೆಯಲ್ಲಿ ಜನರು ಏರ್ ಶೋ ಕಣ್ತುಂಬಿಕೊಳ್ಳಲು ಆಗಮಿಸಿದ್ದರು.

    ಬೆಂಕಿ ಅವಘಡ ಸಂಭವಿಸಿದ ವೇಳೆ ಸ್ಥಳದಲ್ಲಿ ಸಾರ್ವಜನಿಕರು ಇಲ್ಲದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ತಮ್ಮ ಮುಂದೆಯೇ ನೆಚ್ಚಿನ ಕಾರು ಅಗ್ನಿದೇವನಿಗೆ ಆಹುತಿ ಆಗುತ್ತಿರೋದನ್ನು ಕಂಡು ಕೆಲವರು ಕಣ್ಣೀರು ಹಾಕುತ್ತಿದ್ದಾರೆ. ಮತ್ತೆ ಕೆಲವರು ನಮ್ಮ ಕಾರುಗಳನ್ನು ತೆಗೆದುಕೊಳ್ಳಲು ಒಳಗೆ ಬಿಡಿ ಎಂದು ಭದ್ರತಾ ಸಿಬ್ಬಂದಿ ಜೊತೆಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ.

    https://www.youtube.com/watch?v=lVsSt2_gisQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv