Tag: Equal Pay

  • ಸಮಾನ ವೇತನಕ್ಕಾಗಿ ಆಗ್ರಹಿಸಿ ಶಿಕ್ಷಕಿಯರಿಂದ ಕೇಶ ಮುಂಡನ

    ಸಮಾನ ವೇತನಕ್ಕಾಗಿ ಆಗ್ರಹಿಸಿ ಶಿಕ್ಷಕಿಯರಿಂದ ಕೇಶ ಮುಂಡನ

    ಭೋಪಾಲ್: ಸಮಾನ ವೇತನಕ್ಕಾಗಿ ಆಗ್ರಹಿಸಿ ಶಿಕ್ಷಕಿಯರು ಕೇಶ ಮುಂಡನ ಮಾಡಿಸಿಕೊಳ್ಳುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಮಧ್ಯಪ್ರದೇಶದಲ್ಲಿ ಪುರುಷರಿಗಿಂತ ಕಡಿಮೆ ವೇತನ ನೀಡಲಾಗುತ್ತಿದ್ದು, ಸಂಬಳದಲ್ಲಿ ಸಮಾನತೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

    ಶನಿವಾರ ರಾಜಧಾನಿ ಭೋಪಾಲ್ ಸೇರಿದಂತೆ ರಾಜ್ಯಾದ್ಯಂತ ‘ಅಧ್ಯಾಪಕ ಅಧಿಕಾರ ಯಾತ್ರಾ’ ಎಂಬ ಪ್ರತಿಭಟನೆ ನಡೆಸಿದ್ದಾರೆ. ಭೋಪಾಲ್‍ನ ಜಂಬೂರಿ ಮೈದಾನದಲ್ಲಿ ಸೇರಿದ ಪ್ರತಿಭಟನಾಕರರು ಸರ್ಕಾರಕ್ಕೆ ತಮ್ಮ ಕೇಶವನ್ನು ಮುಡಿಯಾಗಿ ಕೊಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕೆಲವು ಶಿಕ್ಷಕರು ತಮ್ಮ ಕೇಶ ಮುಂಡನ ಮಾಡಿಕೊಳ್ಳುವ ಮೂಲಕ ಪ್ರತಿಭಟನಾ ನಿರತ ಶಿಕ್ಷಕಿಯರಿಗೆ ಸಾಥ್ ನೀಡಿದ್ರು. ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶಿಕ್ಷಕ ವರ್ಗ ಪ್ರತಿಭಟನೆ ನಡೆಸಿದೆ.

    ಬೇಡಿಕೆಗಳೇನು?: ಪ್ರತಿಭಟನಾನಿರತರು ಸಮಾನ ವೇತನ, ಇತರೆ ಸರ್ಕಾರಿ ಉದ್ಯೋಗಸ್ಥರಿಗೆ ದೊರೆಯುವ ಸವಲತ್ತುಗಳು, ಉದ್ಯೋಗ ಭದ್ರತೆ, ಕ್ರಮಬದ್ಧ ವರ್ಗಾವಣೆಯ ಪಾಲಿಸಿ ಸೇರಿದಂತೆ ಮುಂತಾದ ಬೇಡಿಕೆಗಳನ್ನು ಪೂರ್ಣಗೊಳಿಸಬೇಕೆಂದು ಪ್ರತಿಭಟನೆ ಮಾಡಿದ್ದಾರೆ.

    ಪ್ರತಿಭಟನೆಯಲ್ಲಿ ಮುಂಡನದಿಂದ ಸಂಗ್ರಹವಾಗಿರುವ ಕೇಶವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪತ್ನಿ ಸಾಧನಾ ಸಿಂಗ್ ಅವರಿಗೆ ಉಡುಗೊರೆಯಾಗಿ ನೀಡಲಾಗುವುದು ಎಂದು ಆಜಾದ್ ಅಧ್ಯಾಪಕ ಸಂಘದ ಅಧ್ಯಕ್ಷ ಶಿವರಾಜ್ ವರ್ಮಾ ತಿಳಿಸಿದ್ದಾರೆ.