Tag: Eoin Morgan

  • ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಯಾನ್ ಮಾರ್ಗನ್ ವಿದಾಯ

    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಯಾನ್ ಮಾರ್ಗನ್ ವಿದಾಯ

    ಲಂಡನ್: ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ಇಂದು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

    2021ರ ಐಪಿಎಲ್ ನಂತರ ಸತತ ಬ್ಯಾಟಿಂಗ್ ವೈಫಲ್ಯದಿಂದ ಹಿನ್ನಡೆ ಕಂಡಿದ್ದ ಇಯಾನ್ ಮಾರ್ಗನ್ ತಮ್ಮ 16 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ.

    13 ವರ್ಷಗಳ ಇಂಗ್ಲೆಂಡ್ ತಂಡದ ಪಯಣದಲ್ಲಿ ಐಯಾನ್ ಮಾರ್ಗನ್ ಅಮೋಘ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ತಂಡ 2019ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಮೊಟ್ಟ ಮೊದಲ ಬಾರಿಗೆ ಗೆದ್ದು ಸಂಭ್ರಮಿಸಿತ್ತು. 2010ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದಲ್ಲಿ ಮಾರ್ಗನ್ ಆಡಿದ್ದರು. 2021ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನೊಂದಿಗೆ ಸೆಣಸಾಡಿ ಕೆಕೆಆರ್ ತಂಡಕ್ಕೆ ರನ್ನರ್‌ಅಪ್ ಪ್ರಶಸ್ತಿ ತಂದುಕೊಡುವಲ್ಲಿ ಮಾರ್ಗನ್ ಅವರ ಪಾತ್ರ ಅಪಾರವಾಗಿತ್ತು.

    2006ರಲ್ಲಿ ಐರ್ಲೆಂಡ್ ಪರ ಇಯಾನ್ ಮಾರ್ಗನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 3 ವರ್ಷಗಳ ಬಳಿಕ ಇಂಗ್ಲೆಂಡ್ ತಂಡಕ್ಕೆ ಸೇರ್ಪಡೆಯಾದರು. ಹಲವು ವರ್ಷಗಳ ಕಾಲ ಮಾರ್ಗನ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ಐಸಿಇ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನೂ ಕಾಯ್ದುಕೊಂಡಿತ್ತು.

    ಇಯಾನ್ ಮಾರ್ಗನ್ ಈವರೆಗೆ 225 ಏಕದಿನ, 73 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ 13 ಶತಕಗಳೊಂದಿಗೆ 39.75ರ ಸರಾಸರಿಯಲ್ಲಿ 6,957 ರನ್ ದಾಖಲಿಸಿದ್ದಾರೆ. ಅದರಲ್ಲೂ ಅವರು 126 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದು, ಇದರಲ್ಲಿ 76 ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ.

    Live Tv

  • ಡೆಲ್ಲಿ ಮಣಿಸಿದ ಕೋಲ್ಕತ್ತಾ – 3 ವಿಕೆಟ್‍ಗಳ ಜಯ

    ಡೆಲ್ಲಿ ಮಣಿಸಿದ ಕೋಲ್ಕತ್ತಾ – 3 ವಿಕೆಟ್‍ಗಳ ಜಯ

    ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್ 3 ವಿಕೆಟ್‍ಗಳ ಜಯ ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

    ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 128 ರನ್‍ಗಳ ಗುರಿಯನ್ನು ಕೆಕೆಆರ್ 18.2 ಓವರ್‍ಗಳಲ್ಲಿ ಹೊಡೆದು ಜಯವನ್ನು ತನ್ನದಾಗಿಸಿಕೊಂಡಿದೆ. ಸೋತರೂ ಡೆಲ್ಲಿ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ಇದನ್ನೂ ಓದಿ: ಕೋಲ್ಕತ್ತಾಗೆ 7 ವಿಕೆಟ್‍ಗಳ ಭರ್ಜರಿ ಜಯ – 4ನೇ ಸ್ಥಾನಕ್ಕೆ ಜಿಗಿತ

    ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಬಹೃತ್ ಮೊತ್ತ ದಾಖಲಿಸುವ ಸೂಚನೆ ನೀಡಿತು. ಸ್ಮಿತ್ 39 ರನ್ (34 ಎಸೆತ 4 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಶಿಖರ್ ಧವನ್ 24ರನ್ (20 ಎಸೆತ 5 ಬೌಂಡರಿ) ಗಳಿಸಿದರು. ಕೆಕೆಆರ್ ಬೌಲರ್‍ಗಳ ದಾಳಿಗೆ ನಲುಗಿದ ಡೆಲ್ಲಿ ರನ್ ಗಳಿಸಲು ಪರಾದಡಿತು. ನಾಯಕ ರಿಷಭ್ ಪಂತ್ 39 ರನ್ (36 ಎಸೆತ 3 ಬೌಂಡರಿ) ಸಿಡಿಸಿ ರನ್ ಔಟ್‍ಗೆ ಬಲಿಯಾದರು. ಇನ್ನುಳಿದ ಯಾವೊಬ್ಬ ಡೆಲ್ಲಿ ಬ್ಯಾಟ್ಸ್‍ಮನ್ ಕೂಡ ಕೆಕೆಆರ್ ಬೌಲಿಂಗ್ ದಾಳಿಯನ್ನು ಎದುರಿಸಲಾಗದೆ ಪೆವಿಲಿಯನ್ ಪರೆಡ್ ನಡೆಸಿದರು. ನಿಗದಿತ 20 ಓವರ್‍ಗಳಲ್ಲಿ ಡೆಲ್ಲಿ ತಂಡ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಲಷ್ಟೆ ಶಕ್ತವಾಯಿತು. ಕೆಕೆಆರ್ ಪರ ನರೈನ್ ಹಾಗೂ ಫರ್ಗುಸನ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: ಜೇಸನ್ ರಾಯ್ ಅಬ್ಬರಕ್ಕೆ ಮಕಾಡೆ ಮಲಗಿದ ರಾಜಸ್ಥಾನ್ ರಾಯಲ್ಸ್: ಹೈದರಾಬಾದ್‍ಗೆ ಜಯ

    ಡೆಲ್ಲಿ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿದ ಕೋಲ್ಕತ್ತಾ ಉತ್ತಮ ಆರಂಭ ಪಡೆಯಿತು. ಶುಬ್‍ಮನ್ ಗಿಲ್ 30ರನ್ (33 ಎಸೆತ 1 ಬೌಂಡರಿ 2 ಸಿಕ್ಸರ್) ಸಿಡಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. ಡ್ಯಾಸಿಂಗ್ ಓಪನರ್ ವೆಂಕಟೇಶ್ ಅಯ್ಯರ್ 14ರನ್ (15 ಎಸೆತ 2 ಬೌಂಡರಿ) ಗಳಿಸಿ ಯಾದವ್‍ಗೆ ವಿಕೆಟ್ ಕೊಟ್ಟು ಹೊರ ನಡೆದರು. ಅಲ್ಪ ಮೊತ್ತವನ್ನು ಬೆನ್ನತ್ತಲು ತಿಣುಕಾಡಿದ ಕೆಕೆಆರ್‍ಗೆ ನಿತೀಶ್ ರಾಣಾ ಅಜೇಯ 36ರನ್ (27 ಎಸೆತ 2 ಬೌಂಡರಿ 2 ಸಿಕ್ಸರ್) ಸಿಡಿಸುವ ಮೂಲಕ ಜಯ ದೊರಕಿಸಿಕೊಟ್ಟರು. ಡೆಲ್ಲಿ ಪರ ಅವೇಶ್ ಖಾನ್ 3 ವಿಕೆಟ್ ಪಡೆದರೆ ಅಶ್ವಿನ್ 1 ಹಾಗೂ ಲಲಿತ್ ಯಾದವ್ 1 ವಿಕೆಟ್ ಪಡೆದರು.

  • ಮೋರ್ಗನ್ ವಿಲಕ್ಷಣ ನಾಯಕತ್ವ, ಭಾರತೀಯನಿಂದ ಈ ಬ್ಲಂಡರ್ ಆಗದ್ದಕ್ಕೆ ನನಗೆ ಸಂತೋಷವಿದೆ – ಗಂಭೀರ್

    ಮೋರ್ಗನ್ ವಿಲಕ್ಷಣ ನಾಯಕತ್ವ, ಭಾರತೀಯನಿಂದ ಈ ಬ್ಲಂಡರ್ ಆಗದ್ದಕ್ಕೆ ನನಗೆ ಸಂತೋಷವಿದೆ – ಗಂಭೀರ್

    ಚೆನ್ನೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮೋರ್ಗನ್ ನಾಯಕತ್ವದ ಬಗ್ಗೆ ಮಾಜಿ ನಾಯಕ ಗೌತಮ್ ಗಂಭೀರ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ 38 ರನ್‌ಗಳ ಸೋಲು ಅನುಭವಿಸಿದ ಬಳಿಕ ವಾಹಿನಿಯ ಜೊತೆ ಗಂಭೀರ್ ಮಾತನಾಡುತ್ತಿದ್ದರು.

    ಈ ವೇಳೆ ಮಾತನಾಡಿದ ಅವರು, ವರುಣ್ ಚಕ್ರವರ್ತಿ ಅವರು ತಮ್ಮ ಮೊದಲ ಓವರಿನಲ್ಲೇ ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದರ್ ಅವರನ್ನು ಔಟ್ ಮಾಡಿದ್ದರು. ಮೂರನೇ ಓವರಿನಲ್ಲಿ ಅವರಿಗೆ ಬೌಲ್ ನೀಡದೇ ಬಾಂಗ್ಲಾದೇಶ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರಿಗೆ ನೀಡಿದ್ದು ಯಾಕೆ ಎನ್ನುವುದನ್ನು ನಾನು ಅರ್ಥಮಾಡಿಕೊಳ್ಳಲು ವಿಫಲನಾಗಿದ್ದೇನೆ. ನನ್ನ ಜೀವನದಲ್ಲಿ ನಾನು ಕಂಡ ವಿಲಕ್ಷಣವಾದ ನಾಯಕತ್ವ ಇದೇ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಒಬ್ಬ ಭಾರತೀಯ ನಾಯಕ ಈ ಪ್ರಮಾದವನ್ನು ಮಾಡದಿದ್ದಕ್ಕೆ ನನಗೆ ಸಂತೋಷವಾಗಿದೆ. ಇದೊಂದು ದೊಡ್ಡ ಬ್ಲಂಡರ್. ಒಂದು ವೇಳೆ ಭಾರತೀಯ ನಾಯಕ ಏನಾದರೆ ಈ ಪ್ರಮಾದ ಮಾಡಿದ್ದರೆ ಜನ ಭಾರೀ ಟೀಕೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

    ತಮ್ಮ ಮೊದಲ ಓವರ್‌ನಲ್ಲೇ ವರುಣ್ ಚಕ್ರವರ್ತಿ 2 ವಿಕೆಟ್ ಪಡೆದಿದ್ದರು. ನಂತರ ಅವರಿಗೆ ಇನ್ನಿಂಗ್ಸ್ ನ 8ನೇ ಓವರ್ ನೀಡಲಾಗಿತ್ತು. ವರುಣ್ ಚಕ್ರವರ್ತಿ 4 ಓವರ್ ಎಸೆದು 39 ರನ್ ನೀಡಿ 2 ವಿಕೆಟ್ ಪಡೆದಿದ್ದರು.

    ಎಬಿಡಿ ವಿಲಿಯರ್ಸ್ ಮತ್ತು ಗ್ಲೇನ್ ಮ್ಯಾಕ್ಸ್‌ವೆಲ್ ಅವರ ಸ್ಫೋಟಕ ಅರ್ಧಶತಕದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 38 ರನ್‌ಗಳಿಂದ ಜಯಗಳಿಸಿತ್ತು. ಗೆಲ್ಲಲು 205 ರನ್‌ಗಳ ಕಠಿಣ ಸವಾಲನ್ನು ಪಡೆದ ಕೋಲ್ಕತ್ತಾ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿತು.

    ಈ ಮೂಲಕ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಬೆಂಗಳೂರು ಮುಂದುವರಿದಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರ್ಸಿಬಿ ಮೊದಲ 3 ಪಂದ್ಯಗಳನ್ನು ಗೆದ್ದುಕೊಂಡಿದೆ.

  • ಕೆಕೆಆರ್ ನಾಯಕತ್ವದಿಂದ ಹಿಂದೆ ಸರಿದ ದಿನೇಶ್ ಕಾರ್ತಿಕ್

    ಕೆಕೆಆರ್ ನಾಯಕತ್ವದಿಂದ ಹಿಂದೆ ಸರಿದ ದಿನೇಶ್ ಕಾರ್ತಿಕ್

    ಅಬುಧಾಬಿ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ್ವದಿಂದ ದಿನೇಶ್ ಕಾರ್ತಿಕ್ ಅವರು ಹಿಂದೆ ಸರಿದಿದ್ದಾರೆ.

    ಕೆಕೆಆರ್ ತಂಡವನ್ನು ಐಪಿಎಲ್-2020ಯಲ್ಲಿ ಮಧ್ಯಂತರದವರೆಗೂ ಮುನ್ನಡೆಸಿದ್ದ ಕಾರ್ತಿಕ್ ಅವರು, ಇಂದು ನಾಯಕತ್ವವನ್ನು ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಇಂದು ನಡೆಯುವ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಕೋಲ್ಕತ್ತಾ ತಂಡವನ್ನು ಹೊಸ ನಾಯಕ ಮಾರ್ಗನ್ ಮುನ್ನಡೆಸಲಿದ್ದಾರೆ.

    2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ನೇಮಕವಾಗಿದ್ದ ದಿನೇಶ್ ಕಾರ್ತಿಕ್ ಅವರು, ಸುಮಾರು 37 ಪಂದ್ಯಗಳಲ್ಲಿ ಕೋಲ್ಕತ್ತಾ ತಂಡವನ್ನು ಮುನ್ನಡೆಸಿದ್ದರು. ಜೊತೆಗೆ ಈ ಬಾರಿಯ ಐಪಿಎಲ್‍ನಲ್ಲೂ ಕೂಡ ಏಳು ಪಂದ್ಯಗಳಲ್ಲಿ ಕೋಲ್ಕತ್ತಾ ತಂಡವನ್ನು ಮುನ್ನಡೆಸಿ ಅದರಲ್ಲಿ ನಾಲ್ಕು ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಕೋಲ್ಕತ್ತಾ ತಂಡ ನಾಲ್ಕರಲ್ಲಿ ಗೆದ್ದು ಮೂರು ಪಂದ್ಯಗಳಲ್ಲಿ ಸೋತು ಸದ್ಯ ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

    ನಾಯಕನಾಗಿ ತಂಡವನ್ನು ಮುನ್ನಡೆಸುವಲ್ಲಿ ದಿನೇಶ್ ಕಾರ್ತಿಕ್ ಅವರು ಕೊಂಚ ಎಡವಿದ್ದರು. ಜೊತೆಗೆ ಓರ್ವ ಬ್ಯಾಟ್ಸ್ ಮ್ಯಾನ್ ಆಗಿ ಕೂಡ ತಂಡಕ್ಕೆ ಬೇಕಾದಾಗ ಬ್ಯಾಟ್ ಬೀಸುವಲ್ಲಿ ವಿಫಲರಾಗಿದ್ದರು. ಈ ಕಾರಣದಿಂದ ಮಾರ್ಗನ್ ಅವರಿಗೆ ನಾಯಕ್ವವನ್ನು ಬಿಟ್ಟುಕೊಡುವಂತೆ ಕೆಕೆಆರ್ ಅಭಿಮಾನಿಗಳು ಒತ್ತಾಯಿಸಿದ್ದರು. ಆದ್ದರಿಂದ ನಾಯಕ್ವ ಬಿಟ್ಟುಕೊಟ್ಟು ಬ್ಯಾಟಿಂಗ್ ಕಡೆ ಹೆಚ್ಚು ಗಮನ ನೀಡಲು ಕಾರ್ತಿಕ್ ತೀರ್ಮಾನ ಮಾಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಕೆಕೆಆರ್ ತಂಡದ ಸಿಇಒ ವೆಂಕಿ ಮೈಸೂರು, ನಮಗೂ ದಿನೇಶ್ ಕಾರ್ತಿಕ್ ಅವರ ತೀರ್ಮಾನ ಕೇಳಿ ಶಾಕ್ ಆಗಿದೆ. ಆದರೆ ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ. ಈ ಹಿಂದೆ ಭಾರತದ ಬೌಲರ್ ಶ್ರೀಶಾಂತ್ ಟ್ವೀಟ್ ಮಾಡಿ, ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಕೆಕೆಆರ್ ತಂಡವನ್ನು ಮುನ್ನೆಡಸಬೇಕು ಎಂದು ಹೇಳಿದ್ದರು. ಈ ಎಲ್ಲ ಕಾರಣದಿಂದ ಕಾರ್ತಿಕ್ ನಾಯಕ್ವದಿಂದ ಕೆಳಗೆ ಇಳಿದಿದ್ದಾರೆ.

  • ಐಪಿಎಲ್‍ನಲ್ಲಿ ಇಂಗ್ಲೆಂಡ್ ಕ್ರಿಕೆಟಿಗರ ಪಕ್ಷಪಾತ?- ಗವಾಸ್ಕರ್ ಆಕ್ರೋಶ

    ಐಪಿಎಲ್‍ನಲ್ಲಿ ಇಂಗ್ಲೆಂಡ್ ಕ್ರಿಕೆಟಿಗರ ಪಕ್ಷಪಾತ?- ಗವಾಸ್ಕರ್ ಆಕ್ರೋಶ

    ಅಬುಧಾಬಿ: ಐಪಿಎಲ್ 2020ರ ಆವೃತ್ತಿಯಲ್ಲಿ ಇಂಗ್ಲೆಂಡ್ ಕ್ರಿಕೆಟಿಗರು ಪಕ್ಷಪಾತದಿಂದ ಆಡುತ್ತಿದ್ದಾರೆ ಎಂಬ ಅನುಮಾನ ರಾಜಸ್ಥಾನ ಮತ್ತು ಕೋಲ್ಕತ್ತಾ ವಿರುದ್ಧದ ಪಂದ್ಯದ ಬಳಿಕ ಮೂಡಿದೆ.

    ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಐಯಾನ್ ಮಾರ್ಗನ್ ಎದುರು ವೇಗದ ಬೌಲರ್ ಜೋಫ್ರಾ ಆರ್ಚರ್, ಟಾಮ್ ಕರ್ರನ್ ಕನಿಷ್ಠ ಒಂದು ಬೌನ್ಸರ್ ಕೂಡ ಎಸೆಯದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಇದೇ ವಿಚಾರದ ಕುರಿತು ಕ್ರಿಕೆಟ್ ವಿಶ್ಲೇಷಕ ಸುನಿಲ್ ಗವಾಸ್ಕರ್ ಗರಂ ಆಗಿದ್ದಾರೆ.

    ಕೋಲ್ಕತ್ತಾ ತಂಡ 13.1 ಓವರ್ ಗಳಲ್ಲಿ 106 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಐಯಾನ್ ಮಾರ್ಗನ್ ಬ್ಯಾಟಿಂಗ್‍ಗೆ ಇಳಿದಿದ್ದರು. ಪಂದ್ಯದಲ್ಲಿ 23 ಎಸೆತಗಳಲ್ಲಿ 34 ರನ್ ಗಳಿಸಿದ ಮಾರ್ಗನ್ ಚೆಂಡನ್ನು ಮಿಡಲ್ ಮಾಡಲು ವಿಫಲರಾಗುತ್ತಿದ್ದರು. ಆದರೂ ಆರ್ಚರ್ ಮತ್ತು ಕರ್ರನ್ ಆತನ ವಿರುದ್ಧ ಕನಿಷ್ಠ ಒಂದು ಬೌನ್ಸರ್ ಕೂಡ ಎಸೆಯಲಿಲ್ಲ. ಸ್ಲಾಗ್ ಓವರ್ ಗಳಲ್ಲಿ 2 ಸಿಕ್ಸರ್ ಸಿಡಿಸಿದ ಮಾರ್ಗನ್ ತಂಡಕ್ಕೆ ಉಪಯುಕ್ತವಾದರು. ಇದನ್ನೂ ಓದಿ: ಗುರು ದ್ರಾವಿಡ್ ಪರಿಶ್ರಮ – ಐಪಿಎಲ್ ಅಲ್ಲ ಇದು ಇಂಡಿಯನ್ ಪ್ಲೇಯರ್ಸ್ ಲೀಗ್

    ಐಪಿಎಲ್‍ನಲ್ಲಿ ಫಾಸ್ಟೆಸ್ಟ್ ಬೌಲರ್ ಎಂದು ಗುರುತಿಸಿಕೊಂಡಿರುವ ಆರ್ಚರ್ ಪಂದ್ಯದಲ್ಲಿ ಇಯಾನ್ ಮಾರ್ಗನ್‍ಗೆ ಒಂದು ಬೌನ್ಸರ್ ಕೂಡ ಹಾಕಿಲಿಲ್ಲ. ಆರ್ಚರ್ ರಂತಹ ಆಟಗಾರನಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇನ್ನು ಕರ್ರನ್ ಆದ್ರೆ ಏಕಾಏಕಿ ಫುಲ್‍ಟಾಸ್ ಎಸೆದು ತನ್ನ ಕ್ಯಾಪ್ಟನ್ ಸಿಕ್ಸರ್ ಸಿಡಿಸುವಂತೆ ಮಾಡಿದ್ದರು ಎಂದು ಸುನಿಲ್ ಗವಾಸ್ಕರ್ ಆರೋಪಿಸಿದ್ದಾರೆ. ಪಂದ್ಯದಲ್ಲಿ ಕೋಲ್ಕತ್ತಾ ತಂಡ 6 ವಿಕೆಟ್ ನಷ್ಟಕ್ಕೆ 174 ರನ್ ಸಿಡಿಸಿದ್ರೆ, ರಾಜಸ್ಥಾನ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯ್ತು.

  • ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್ ಒಲವು

    ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್ ಒಲವು

    ಲಂಡನ್: ವಿಶ್ವವೇ ಚುಟುಕು ಕ್ರಿಕೆಟ್ ಕದನದತ್ತ ಮುಖ ಮಾಡಿದ್ದು, ಪ್ರತಿಯೊಂದು ಪಂದ್ಯಗಳೂ ರೋಚಕತೆಗೆ ಸಾಕ್ಷಿಯಾಗುತ್ತಿದೆ. ಟಿ20 ಕ್ರಿಕೆಟ್ ಟೂರ್ನಿಗಳನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ ಈಗ ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್‍ಗೆ ಒಲವು ವ್ಯಕ್ತವಾಗಿದೆ.

    ಕೇವಲ 10 ದಿನಗಳಲ್ಲಿ ಇಡೀ ಟೂರ್ನಿಯನ್ನ ಮುಗಿಸುವುದು ಕಷ್ಟ. ಹೀಗಾಗಿ ಒಲಿಂಪಿಕ್ಸ್ ನಂತಹ ಜಾಗತಿಕ ಕ್ರೀಡಾಕೂಟದಲ್ಲಿ 10 ಓವರ್‌ಗಳ ಕ್ರಿಕೆಟ್ ಮಾದರಿ ಸೂಕ್ತವಾಗಿದೆ ಎಂದು ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೋರ್ಗಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    1900ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕಾಣಿಸಿಕೊಂಡಿತ್ತು. ಬಳಿಕ 1998ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಆಡಲ್ಪಟ್ಟಿತ್ತು. ಆ ಬಳಿಕ ಅನೇಕ ಕ್ರೀಡಾಕೂಟಗಳಲ್ಲಿ ಕ್ರಿಕೆಟ್ ಟೂರ್ನಿ ನಡೆದಿಲ್ಲ. ಆದರೆ ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯುವ 2022ರ ಕಾಮನ್ವೆಲ್ತ್ ಕ್ರೀಡಾಕೂಟವು ಮಹಿಳೆಯರ ಟಿ20 ಟೂರ್ನಿಯನ್ನು ಒಳಗೊಂಡಿದೆ. ಆದರೆ ಮೋರ್ಗನ್ ಅವರು ಟಿ10 ಮಾದರಿಯು ಟಿ20, 50 ಓವರ್‍ಗಳ ಅಥವಾ ಟೆಸ್ಟ್ ಕ್ರಿಕೆಟ್‍ಗಿಂತ ಉತ್ತಮ ಎಂದು ಹೇಳಿದ್ದಾರೆ.

    “ಟೆಸ್ಟ್, ಏಕದಿನ, ಟಿ20 ಮೂರು ಮಾದರಿಗಳಿಗಿಂತ ಟಿ10 ಒಲಿಂಪಿಕ್ಸ್ ಅಥವಾ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಹೊಂದಿಕೊಳ್ಳುತ್ತದೆ. ಈ ಮೂಲಕ 10 ದಿನಗಳಲ್ಲಿ ಇಡೀ ಟೂರ್ನಿಯನ್ನು ಮುಗಿಸಬಹುದಾಗಿದೆ” ಎಂದು ಇಯಾನ್ ಮೋರ್ಗಾನ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ತಿಳಿಸಿದ್ದಾರೆ.

    “ಟಿ20 ಪಂದ್ಯದಿಂದ 8-10 ದಿನಗಳಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಡಲು ಸಾಧ್ಯವಾಗುತ್ತದೆ. ಹೀಗಾಗಿ ಈ ಆಯ್ಕೆಯು ಎಲ್ಲರಿಗೂ ಇಷ್ಟವಾಗುತ್ತದೆ, ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಹೊಂದಿಕೊಳ್ಳುತ್ತದೆ. ಮತ್ತೊಂದು ವಿಚಾರವೆಂದರೆ ಟಿ10 ಪಂದ್ಯದಿಂದ ಹೆಚ್ಚಿನ ಮನರಂಜನೆ ಸಿಗುತ್ತದೆ” ಎಂದು ಮೋರ್ಗಾನ್ ಹೇಳಿದ್ದಾರೆ.

    ಲಾಭದಾಯಕ ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ವಿಶ್ವಾದ್ಯಂತ ಹಲವಾರು ಫ್ರ್ಯಾಂಚೈಸ್ ಆಧಾರಿತ ಲೀಗ್‍ಗಳನ್ನು ಹುಟ್ಟುಹಾಕಿದ ಟಿ20 ಕ್ರಿಕೆಟ್ ಅತ್ಯಂತ ಜನಪ್ರಿಯ ಸ್ವರೂಪವಾಗಿ ಹೊರಹೊಮ್ಮಿದೆ. ಈಗ ಟಿ10 ಮಾದರಿಯ ಕ್ರಿಕೆಟ್ ಒಲವು ವ್ಯಕ್ತವಾಗಿದ್ದು ಅಚ್ಚರಿಯೆನಲ್ಲ. ಕೆಲ ಅಭಿಮಾನಿಗಳು ಟೆಸ್ಟ್, ಏಕದಿನ ಪಂದ್ಯಕ್ಕಿಂತಲೂ ಚುಟುಕು ಕ್ರಿಕೆಟ್‍ಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ.