Tag: Environmental Control Corporation

  • ಎರಡನೇ ಲಿಸ್ಟ್​ನಲ್ಲೂ ಶಾಸಕ ಸುಧಾಕರ್‌ಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಡೌಟ್

    ಎರಡನೇ ಲಿಸ್ಟ್​ನಲ್ಲೂ ಶಾಸಕ ಸುಧಾಕರ್‌ಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಡೌಟ್

    – ಹ್ಯಾರಿಸ್, ಸುಬ್ಬಾರೆಡ್ಡಿ, ನನ್ನ ಅಧ್ಯಕ್ಷ ಸ್ಥಾನ ಕ್ಲಿಯರ್- ಸೋಮಶೇಖರ್ ಸ್ಪಷ್ಟನೆ

    ಬೆಂಗಳೂರು: ತೀವ್ರ ವಿವಾದಕ್ಕೆ ಕಾರಣವಾಗಿದ್ದ 5 ನಿಗಮ-ಮಂಡಳಿ ಅಧ್ಯಕ್ಷ ನೇಮಕ ತಡೆ ವಿಚಾರದ ಗೊಂದಲ ಸ್ವಲ್ಪ ಮಟ್ಟಿಗೆ ಶಮನವಾದಂತೆ ಕಾಣುತ್ತಿದೆ. 5 ಸ್ಥಾನಗಳ ಪೈಕಿ 3 ಸ್ಥಾನಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಂಕಿತ ಹಾಕಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

    ಗೃಹ ಕಚೇರಿ ಕೃಷ್ಣದಲ್ಲಿ ಇಂದು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಶಾಸಕರು, ನನಗೆ, ಶಾಸಕರಾದ ಹ್ಯಾರಿಸ್, ಸುಬ್ಬಾರೆಡ್ಡಿ ಅವರಿಗೆ ನೀಡಲಾಗಿದ್ದ ನಿಗಮ-ಮಂಡಳಿ ಸ್ಥಾನಕ್ಕೆ ಸಹಿ ಹಾಕಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅವರಿಗೆ ಕಳುಹಿಸಿದ್ದೇನೆ ಅಂತ ಸಿಎಂ ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಶಾಸಕ ಸುಧಾಕರ್ ಗೆ ಸಚಿವ ಸ್ಥಾನವೂ ಇಲ್ಲ, ಈಗ ಪರಿಸರ ನಿಯಂತ್ರಣ ಮಂಡಳಿ ಅಧ್ಯಕ್ಷ ಪದವಿಗೂ ಕುತ್ತು

    ಮೊದಲ ಪಟ್ಟಿಯಲ್ಲಿ ಯಾಕೆ ಸಹಿ ಹಾಕಿಲ್ಲ ಎನ್ನುವುದು ಗೊತ್ತಿಲ್ಲ. ಈ ಕುರಿತು ಕುಮಾರಸ್ವಾಮಿ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮೊದಲ ಪಟ್ಟಿಯಲ್ಲಿ ಹೆಸರು ಬಂದರೇನು, ಎರಡನೇ ಪಟ್ಟಿಯಲ್ಲಿ ಬಂದರೆ ಏನು ವ್ಯತ್ಯಾಸ ಆಗುವುದಿಲ್ಲ. ಸಿಎಂ ಸಹಿ ಹಾಕಿರುವುದಾಗಿ ಹೇಳಿದ್ದಾರೆ. ಆದೇಶ ಬಂದ ಕೂಡಲೇ ಅಧಿಕಾರ ಸ್ವೀಕಾರ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನು ಓದಿ: ಮೈತ್ರಿ ಮಾಡೋದ್ರಲ್ಲಿ ಜೆಡಿಎಸ್ ಅವರೇ ಬೆಸ್ಟ್: ಸುಧಾಕರ್ ವ್ಯಂಗ್ಯ

    ಉಳಿದ ಎರಡು ಸ್ಥಾನಗಳ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡುತ್ತಿದ್ದಂತೆ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಹೀಗಾಗಿ ಎರಡನೇ ಪಟ್ಟಿಯಲ್ಲಿಯೂ ಶಾಸಕ ಡಾ.ಸುಧಾಕರ್ ಮತ್ತು ವೆಂಕಟರಮಣ ಅವರಿಗೆ ನೀಡಿದ್ದ ಸ್ಥಾನಗಳಿಗೆ ಸಿಎಂ ಸಹಿ ಹಾಕದೇ ತಡೆಹಿಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಸ್ಥಾನವೂ ಇಲ್ಲ, ಈಗ ಪರಿಸರ ನಿಯಂತ್ರಣ ಮಂಡಳಿ ಅಧ್ಯಕ್ಷ ಪದವಿಗೂ ಕುತ್ತು

    ಸಚಿವ ಸ್ಥಾನವೂ ಇಲ್ಲ, ಈಗ ಪರಿಸರ ನಿಯಂತ್ರಣ ಮಂಡಳಿ ಅಧ್ಯಕ್ಷ ಪದವಿಗೂ ಕುತ್ತು

    ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯದೇ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಡೆಯಲು ಮುಂದಾಗಿದ್ದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಗೆ ಸಿಕ್ಕಿದ್ದ ಪರಿಸರ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಎದುರಾಗಿದೆ.

    ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‍ಜಿಟಿ) ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಪರಿಸರ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನ ಪಡೆಯುವ ವ್ಯಕ್ತಿ ಪರಿಸರ ಬಗ್ಗೆ ವಿಶೇಷ ಜ್ಞಾನ ಹೊಂದಿರಬೇಕು. ಅಲ್ಲದೇ ಪರಿಸರ ವಿಜ್ಞಾನದ ವಿಷಯದಲ್ಲಿ ಸ್ನಾತಕೋತ್ತರ ಅಥವಾ ಎಂಜಿನಿಯರಿಂಗ್ ಪದವಿ ಪಡೆದಿರಬೇಕು. ಇದಲ್ಲದೇ ಮಾಲಿನ್ಯ ಪ್ರಮಾಣ ತಗ್ಗಿಸಲು ಅನುಭವ ಹಾಗೂ ಪರಿಸರ ಜ್ಞಾನ ಹೊಂದಿರಬೇಕು ಎನ್ನುವ ನಿಯಮವಿದೆ.

    ಪರಿಸರ ನಿಯಂತ್ರಣ ಅಧ್ಯಕ್ಷ ಸ್ಥಾನ ರಾಜಕೀಯ ಹುದ್ದೆಯಲ್ಲ. ಪ್ರತಿಭೆಯನ್ನು ಆಧರಿಸಿ ನೇಮಕ ಮಾಡಬೇಕು. ಅಲ್ಲದೇ ತಜ್ಞರಿಂದ ಅರ್ಜಿ ಆಹ್ವಾನಿಸಿ, ಸಂದರ್ಶನ ಮಾಡಿ ನೇಮಕ ಮಾಡಬೇಕಾಗುತ್ತದೆ. ಆದರೆ ಇದ್ಯಾವುದನ್ನು ಪಾಲಿಸದೇ ಸರ್ಕಾರ ಸುಧಾಕರ್ ಅವರನ್ನು ನೇಮಕ ಮಾಡಲು ಮುಂದಾಗಿದೆ. ಹೀಗಾಗಿ ಈ ಆದೇಶಕ್ಕೆ ಸಹಿ ಮಾಡಲು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು ಹಿಂದೇಟು ಹಾಕಿದ್ದಾರೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿ ಸಹಿಯನ್ನು ಹಾಕಿದರೆ, ಜೈಲಿಗೆ ಹೋಗುವ ಭೀತಿ ಅಧಿಕಾರಿಗೆ ಎದುರಾಗುತ್ತದೆ ಎಂದು ಹಿರಿಯ ಐಎಎಸ್ ಅಧಿಕಾರಿಗಳು ಹೇಳಿದ್ದಾರೆ.

    ಮುಖ್ಯಮಂತ್ರಿಗಳ ಅಧಿಕೃತ ಪತ್ರ ಬರುವವರೆಗೂ ಸಹಿ ಮಾಡುವುದಿಲ್ಲ. ಅಲ್ಲದೇ ಸುಖಾ-ಸುಮ್ಮನೆ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಸಿಎಂ ಆದೇಶದ ಪ್ರತಿ ಬಂದರೇ ಮಾತ್ರ ಪಾಲಿಸುತ್ತೇನೆ. ಒಂದು ವೇಳೆ ಸಹಿ ಮಾಡಿದರೆ ನಾನು ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ. ಆಗ ನನ್ನ ಬೆಂಬಲಕ್ಕೆ ಯಾರೂ ಬರುವುದಿಲ್ಲವೆಂದು ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು ಹೇಳಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಈ ಹುದ್ದೆಗೆ ಅನುಭವ ಇಲ್ಲದ ಸುಧಾಕರ್ ಅವರನ್ನು ನೇಮಕ ಮಾಡಿದರೆ ಕೋರ್ಟ್ ಮೆಟ್ಟಿಲೇರಲು ಸಾಮಾಜಿಕ ಹೋರಾಟಗಾರರು ಸಿದ್ದರಾಗಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv