ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿಗಿರಿಧಾಮದ ಬಳಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ವತಿಯಿಂದ ನಂದಿ ಹಬ್ಬ ಆಯೋಜನೆ ಮಾಡಲಾಗಿದೆ.
ನಂದಿಹಬ್ಬದ ಅಂಗವಾಗಿ ಇಂದು ಮ್ಯಾರಾಥಾನ್, ಸೈಕ್ಲಿಂಗ್, ಯೋಗ, ಪಾರಂಪರಿಕ ಪರಿಸರ ನಡಿಗೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ವಿಶ್ವವಿಖ್ಯಾತ ನಂದಿಗಿರಿಧಾಮದ ತಪ್ಪಲಿನ ಹಿರೇನಹಳ್ಳಿ ಬಳಿಯ ಖಾಸಗಿ ಬಡಾವಣೆಯಲ್ಲಿ ಆಯೋಜನೆ ಮಾಡಲಾಗಿದೆ. ಬೆಳ್ಳಂಬೆಳಗ್ಗೆ ಮ್ಯಾರಾಥಾನ್ ಗೆ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಚಾಲನೆ ನೀಡಿದ್ದರು.

ನಂದಿಗಿರಿಧಾಮದ ತಪ್ಪಲಿನ ಹಿರೇನಹಳ್ಳಿ ಬಳಿಯಿಂದ ಮ್ಯಾರಾಥಾನ್ ಆರಂಭವಾಗಿದ್ದು, ನಂದಿಗಿರಿಧಾಮದ ಸುತ್ತಳತೆಯ 16 ಕಿಲೋಮೀಟರ್ ನ ಮ್ಯಾರಾಥಾನ್ ಆಯೋಜನೆ ಮಾಡಲಾಗಿದೆ. ಮ್ಯಾರಾಥಾನ್ ಅಂಗವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದ್ದು, ನಂದಿಗಿರಿಧಾಮದ ಸುತ್ತ ಸಾರ್ವಜನಿಕರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಒಂದಲ್ಲ ಎರಡಲ್ಲ ಬರೋಬ್ಬರಿ 40 ಲಕ್ಷ ರೂಪಾಯಿ ಖರ್ಚು ಮಾಡಿ ಮಾಡುತ್ತಿರೋ ಚಿಕ್ಕಬಳ್ಳಾಪುರದ ನಂದಿ ಹಬ್ಬದಲ್ಲಿ ಸಂಭ್ರಮವೇ ಇಲ್ಲದಂತಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವತಿಯಿಂದ ಪ್ರವಾಸೋದ್ಯಮ ಇಲಾಖೆ ನೇತೃತ್ವದಲ್ಲಿ 40 ಲಕ್ಷ ರೂಪಾಯಿ ಹಣ ಖರ್ಚು ಮಾಡಿ ನಂದಿಹಬ್ಬ ಆಚರಣೆ ಮಾಡಲಾಗುತ್ತಿದೆ.

ಸಾರ್ವಜನಿಕರಲ್ಲಿ ಅಸಮಾಧಾನ: ಈ ಎಲ್ಲಾ ಕಾರ್ಯಕ್ರಮಗಳಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಮಣೆ ಹಾಕದ ಜಿಲ್ಲಾಡಳಿತ ಬೆಂಗಳೂರಿನ ಐಷಾರಾಮಿ ಮಂದಿಗೆ ಮಣೆ ಹಾಕಿದೆ. ಜಿಲ್ಲೆಯ ಜನತೆಗೆ ಕನಿಷ್ಠ ಕಾರ್ಯಕ್ರಮಗಳಲ್ಲೊ ಭಾಗವಹಿಸುವಂತೆ ಆಹ್ವಾನವೂ ನೀಡಿಲ್ಲ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಜಿಲ್ಲಾಡಳಿತ ಶಾಸಕ ಸುಧಾಕರ್ ಅಣತಿಯಂತೆ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಎಂದು ದರ್ಬಾರ್ ನಡೆಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಅಸಮಾಧಾನ ತೋಡಿಕೊಂಡಿದ್ದಾರೆ.






























































