Tag: environment

  • ಆಡಂಬರದ ಮದುವೆಗೆ ಬ್ರೇಕ್ – ಸರಳ ವಿವಾಹಕ್ಕೆ ಸಾಕ್ಷಿಯಾದ ಪರಿಸರ ಸ್ನೇಹಿ ಕಪಲ್

    ಆಡಂಬರದ ಮದುವೆಗೆ ಬ್ರೇಕ್ – ಸರಳ ವಿವಾಹಕ್ಕೆ ಸಾಕ್ಷಿಯಾದ ಪರಿಸರ ಸ್ನೇಹಿ ಕಪಲ್

    ನವದೆಹಲಿ: ಮದುವೆ ಎಂದರೆ ವಿಜೃಂಭಣೆ, ಅದ್ಧೂರಿಯಾಗಿ ಹಣ ಖರ್ಚುಮಾಡಿ ಆಗುವುದನ್ನು ಸಾಮಾನ್ಯವಾಗಿ ನಾವು ನೋಡಿರುತ್ತೇವೆ. ಆದರೆ ದೆಹಲಿಯ ಜೋಡಿಯೊಂದು ಆಡಂಬರದ ಮದುವೆಗೆ ಬ್ರೇಕ್ ಹಾಕಿ ಬಹಳ ಯುನಿಕ್ ಆಗಿ ಸರಳವಾಗಿ ಪರಿಸರ ಸ್ನೇಹಿಗಳಿಬ್ಬರು ವಿವಾಹವಾಗಿದ್ದಾರೆ.

    ಹೌದು, ವರ ಆದಿತ್ಯ ಅಗರ್‍ವಾಲ್(32) ತಮ್ಮ ಮದುವೆಗೆ ಕಾರು ಬೈಕ್‍ನಲ್ಲಿ ಬರದೇ ಯುಲು ಬೈಕ್ ಮೇಲೆ ಬಂದರು. ಮೊದಲಿನಿಂದಲೂ ಕಡಿಮೆ ವೆಚ್ಚದಲ್ಲಿ ಮದುವೆಯಗಬೇಕೆಂಬ ಆಸೆ ಹೊಂದಿದ್ದ, ವಧು ಮಾಧುರಿ ಬಲೋಡಿಯವರಿಗೆ ಕುಟುಂಬಸ್ಥರು ಹಾಗೂ ಸ್ನೇಹಿತರು ಬೆಂಬಲ ನೀಡಿದ್ದಾರೆ.

    ಮಾಧುರಿಯವರ ವಿವಾಹವನ್ನು ಅವರ ಚಿಕ್ಕಪ್ಪನ ಮನೆಯ ಗಾರ್ಡನ್ ನಲ್ಲಿ ಏರ್ಪಡಿಸಲಾಗಿತ್ತು. ಮದುವೆ ಸಮಯದಲ್ಲಿ ಸಾಧ್ಯವಾದಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೇ, ಹಳೆಯ ಬಾಟಲಿಗಳಿಗೆ ನ್ಯೂಸ್ ಪೇಪರ್‌ಗಳನ್ನು ಅಂಟಿಸಿ, ಪರಿಸರ ಸ್ನೇಹಿ ವಸ್ತುಗಳನ್ನು ಅಲಂಕಾರಕ್ಕೆ ಉಪಯೋಗಿಸಲಾಗಿತ್ತು.

    ಮದುವೆಗೆ ಆಹ್ವಾನ ಪತ್ರಿಕೆ ನೀಡಿದರೆ ಜನ ಅದನ್ನು ನೋಡಿ ಬಿಸಾಡುತ್ತಾರೆ. ಹಾಗಾಗಿ ಆಹ್ವಾನ ಪತ್ರಿಕೆಯನ್ನು ಪ್ರಿಂಟ್ ಮಾಡಿಸದೇ ನನ್ನ ಮದುವೆ ಸ್ವತಃ ನಾನೇ ಆಹ್ವಾನ ಪತ್ರಿಕೆಯನ್ನು ವಿನ್ಯಾಸಗೊಳಿಸಿದೆ ಹಾಗೂ ಮದುವೆಗೆ ಪ್ರಿಂಟೆಡ್ ಬ್ಯಾನರ್ ಬಳಸುವ ಬದಲಾಗಿ ನಾವು ಚಾರ್ಕ್ ಬೋಡ್ ಬಳಸಲಾಗಿದೆ ಎಂದು ಮಾಧುರಿ ತಿಳಿಸಿದ್ದಾರೆ.

    ಮದುವೆ ಸಮಯದಲ್ಲಿ ನನ್ನ ಸ್ನೇಹಿತರು ಗಾಜಿಪುರದಿಂದ ತುಳಸಿ ಹಾರವನ್ನು ತರಿಸಿದ್ದು, ನಾವು ಹಾರವಾಗಿ ತುಳಸಿಯನ್ನು ಬಳಸಿದ್ದೇವೆ. ಅಲ್ಲದೇ ಎರಡು ಕುಟುಂಬಗಳು ಯಾವುದೇ ಗಿಫ್ಟ್‍ಗಳನ್ನು ವಿನಿಮಯ ಮಾಡಿಕೊಳ್ಳದೇ, ಬದಲಾಗಿ ಇಬ್ಬರು ಒಂದು ಕೆಜಿ ಹಣ್ಣುಗಳನ್ನು ತಂದಿದ್ದಾರೆ. ಹಿಂದಿನ ಕಾಲದಲ್ಲಿ ಜನರು ಮದುವೆಗೆ ಹೋಗುವಾಗ ತಮ್ಮದೇ ಗುಂಪುಗಳನ್ನು ಮಾಡಿಕೊಂಡು ಹೋಗುತ್ತಿದ್ದರು. ಇದೀಗ ಜನರ ಮಧ್ಯೆ ಆ ಬಾಂಧವ್ಯ ಕಾಣೆಯಾಗದೆ. ಆದರೆ ನಮ್ಮ ಮದುವೆಗೆ ಎಲ್ಲರೂ ವಿಭಿನ್ನ ರೀತಿಯಲ್ಲಿಯೇ ಕೊಡುಗೆ ನೀಡಿದ್ದಾರೆ.

    ಈ ಜೋಡಿ ವಿವಾಹಕ್ಕೆ ಮಾಧುರಿ ಸೋದರ ಸಂಬಂಧಿಯೊಬ್ಬರು ಪಂಡಿತರ ಪಾತ್ರವನ್ನು ವಹಿಸಿದರೆ, ಸ್ನೇಹಿತರು ಫೋಟೋವನ್ನು ಮದುವೆಯ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಮದುವೆ ವೇಳೆ ಮಾಧುರಿ 2,500 ರೂ ಸೀರೆ ಉಟ್ಟರೆ, ವರ ಆದಿತ್ಯ 3,000 ರೂ ಶೇರ್ವಾನಿ ಧರಿಸಿದ್ದರು. ಅಲ್ಲದೆ ಮದುವೆಯಲ್ಲಿ ಪಾಲ್ಗೊಂಡವರಿಗೆ ತಾಂಬೂಲದ ಬದಲಿಗೆ ಗಿಡವನ್ನು ಉಡುಗೊರೆಯಾಗಿ ನೀಡಲಾಗಿತ್ತು.

  • 10 ದಿನಗಳಿಂದ ಹೊತ್ತಿ ಉರಿಯುತ್ತಿದೆ ರಾಷ್ಟ್ರೀಯ ಉದ್ಯಾನವನ

    10 ದಿನಗಳಿಂದ ಹೊತ್ತಿ ಉರಿಯುತ್ತಿದೆ ರಾಷ್ಟ್ರೀಯ ಉದ್ಯಾನವನ

    ಭುವನೇಶ್ವರ: ಏಷ್ಯಾದ ಎರಡನೇ ಅತೀ ದೊಡ್ಡ ಬಯೋಸ್ಫಿಯರ್ ರಿಸರ್ವ್ ಎನಿಸಿಕೊಂಡಿರುವ ಒಡಿಶಾದ ಸಿಮ್ಲಿಪಾಲ ರಾಷ್ಟ್ರೀಯ ಉದ್ಯಾನದಲ್ಲಿ ಸುಮಾರು 10 ದಿನಗಳಿಂದ ಹೊತ್ತಿ ಉರಿಯುತ್ತಿದೆ.

    ಕಳೆದ ವಾರ ಕಾಣಿಸಿಕೊಂಡ ದಿಢೀರ್ ಬೆಂಕಿಯಿಂದ ಅಪಾರವಾದ ವನ್ಯ ಸಂಪತ್ತು ಹಾನಿಗೊಳಗಾಗಿದೆ. ಈಗಾಗಲೇ ಕಾಡ್ಗಿಚ್ಚು ಮತ್ತಷ್ಟು ವಿಸ್ತರಿಸಿದ್ದು, ಉದ್ಯಾನವನದಲ್ಲಿ ಹೊತ್ತು ಉರಿಯುತ್ತಿರುವ ಬೆಂಕಿಯನ್ನ ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

    ಸ್ಥಳದಲ್ಲಿ ಅರಣ್ಯ ಇಲಾಖೆ, ಹೆಚ್ಚುವರಿ ಸಿಬ್ಬಂದಿ ಮತ್ತು ಹೆಚ್ಚಿನ ಅಗ್ನಿಶಾಮಕ ದಳವನ್ನು ನಿಯೋಜಿಸಲಾಗಿದೆ. ಸಿಮ್ಲಿಪಾಲ ರಾಷ್ಟೀಯ ಉದ್ಯಾನವನವು ಹುಲಿ ಮೀಸಲು ಪ್ರದೇಶವಾಗಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ ಎಂದು ಒಡಿಶಾ ಸರ್ಕಾರ ವರದಿ ಮಾಡಿದೆ. ಆದರೆ ಪ್ರಾಣಿಗಳಿಗೆ ಹಾನಿಯಾಗಿದೆಯಾ ಅನ್ನೋದು ತಿಳಿದುಬಂದಿಲ್ಲ.

  • 3 ವರ್ಷಗಳಿಂದ ಆಧುನಿಕ ಸೌಲಭ್ಯವಿಲ್ಲದೆ ಜೀವನ ಸಾಗಿಸುತ್ತಿರುವ ಪ್ರೊಫೆಸರ್

    3 ವರ್ಷಗಳಿಂದ ಆಧುನಿಕ ಸೌಲಭ್ಯವಿಲ್ಲದೆ ಜೀವನ ಸಾಗಿಸುತ್ತಿರುವ ಪ್ರೊಫೆಸರ್

    – ಸರಳ ಜೀವನಕ್ಕೆ ಮಾದರಿಯಾದ ದಂಪತಿ
    – ಆಧುನಿಕ ಸೌಲಭ್ಯವಿಲ್ಲದೆ ಜೀವನ

    ನವದೆಹಲಿ: ಪರಿಸರಪ್ರೇಮಿ ಮಹಿಳೆಯೊಬ್ಬರು ಸರಿಸುಮಾರು 3 ವರ್ಷಗಳಿಂದ ಸರ್ಕಾರದಿಂದ ವಿದ್ಯತ್ ಮತ್ತು ನೀರಿನ ಸೌಲಭ್ಯ ಪಡೆಯದೇ ಮಾದರಿ ಜೀವನವನ್ನು ನಡೆಸುತ್ತಿದ್ದಾರೆ.

    ಹೌದು. ಇಂದಿನ ದಿನದಲ್ಲಿ ಕರೆಂಟ್ ಇಲ್ಲದೇ ಜೀವನ ನಡೆಸಲು ಸಾಧ್ಯವಿಲ್ಲ. ಹೀಗಿರುವಾಗ ಜೆಎನ್‍ಯುನ ಮಾಜಿ ಪ್ರೊಫೆಸರ್ ಆಗಿರುವ ಸೌಮ್ಯಾ ಅವರಿಗೆ ಕಳೆದ ಮೂರು ವರ್ಷಗಳಿಂದ ಕರೆಂಟ್ ಮತ್ತು ನೀರಿನ ಬಿಲ್ ಕಟ್ಟುವ ಸಂದರ್ಭವೇ ಬಂದಿಲ್ಲವಂತೆ.

    ಸೌಮ್ಯಾ ಅವರು ಡೆಹ್ರಾಡೂನ್‍ನಲ್ಲಿ ವಾಸವಾಗಿದ್ದಾರೆ. ಎಲ್ಲರಂತೆ ಸರಳವಾಗಿ ತುಂಬಾ ಚೆಂದದ ಜೀವನವನ್ನು ಕಟ್ಟಿಕೊಂಡಿದ್ದಾರೆ. ಆದರೆ ಆಧುನಿಕವಾದ ಯಾವುದೇ ಸೌಲಭ್ಯಗಳಿಲ್ಲದೇ ಜೀವನವನ್ನು ನಡೆಸಬಹುದು ಎಂಬುದನ್ನು ಇವರು ಬದುಕಿ ತೋರಿಸುತ್ತಿದ್ದಾರೆ.

    ಸೌಮ್ಯಾ ಅವರು ತಮ್ಮ ಪತಿಯ ಜೊತೆಯಲ್ಲಿ 2015 ರಿಂದ ಡೆಹ್ರಾಡೂನ್‍ನ ಸಾಮಾನ್ಯ ಹಳ್ಳಿಯೊಂದರಲ್ಲಿ ವಾಸವಾಗಿದ್ದಾರೆ. ಇವರು ವಾಸವಿರುವ ಮನೆಗೆ ಸೋಲಾರ್ ಪ್ಯಾನ್ ಹಾಕಿಕೊಂಡಿದ್ದಾರೆ. ಮಳೆ ನೀರು ಕೊಯ್ಲು ಮೂಲಕವಾಗಿ ನೀರಿನ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಹೀಗಾಗಿ ಇವರಿಗೆ ಕರೆಂಟ್ ಮತ್ತು ನೀರಿನ ಬಿಲ್ ಕಟ್ಟುವ ಸಂದರ್ಭವೇ ಬಂದಿಲ್ಲ.

    ಇವರು ವಾಸವಿರುವ ಮನೆಯೂ ಕೂಡ ವಿಶೇಷವಾಗಿದೆ. ಬಿದಿರು ಹಾಗೂ ಇನ್ನಿತರ ಮರಗಳನ್ನು ಸೇರಿಸಿ ಮನೆಯ ನಿರ್ಮಾಣವನ್ನು ಝೀರೋ ವೇಸ್ಟೇಜ್‍ನಲ್ಲಿ ಮನೆಯ ನಿರ್ಮಾಣ ಮಾಡಿಕೊಂಡಿದ್ದಾರೆ. ಇವರು ಬಳಸುತ್ತಿರುವ ಕಾರಿನಿಂದ ಕೂಡ ಹೊಗೆ ಬರುವುದಿಲ್ಲ. ಕಾರಣ ಈ ಕಾರು ಮಹೀಂದ್ರಾ ಇ-20 ವಿದ್ಯುತ್ ಬ್ಯಾಟರಿ ಆಧರಿಸಿ ಕಾರು ಓಡುತ್ತದೆ. 2015 ರಿಂದ ಈ ಕಾರನ್ನೇ ಬಳಸುತ್ತಿದ್ದಾರೆ.

    ದಂಪತಿ ಪರಿಸರ ಪ್ರೇಮಿಗಳು ಶೂನ್ಯ ತ್ಯಾಜ್ಯ ಮತ್ತು ಸುಸ್ಥಿರ ಜೀವನವನ್ನು ನಡೆಸುತ್ತಾರೆ. ತಮಗೆ ಬೇಕಾಗಿರುವ ತರಕಾರಿಗಳನ್ನು ತೋಟದಲ್ಲೇ ಬೆಳೆಯುತ್ತಾರೆ. ಯಾವುದೇ ರಾಸಾಯನಿಕ ಗೊಬ್ಬರ ಬಳಕೆ ಮಾಡದೇ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಬಳಕೆ ಮಾಡುತ್ತಾರೆ. ಇವರ ಮಾದರಿ ಜೀವ ತುಂಬಾ ವಿಶೇಷವಾಗಿದೆ. ಪರಿಸರ ಕಾಳಜಿಯನ್ನು ಹೊತ್ತಿರುವ ದಂಪತಿ ಎಲ್ಲರಿಗೆ ಮಾದರಿಯಾಗುವಂತೆ ಆಧುನಿಕ ಸೌಲಭ್ಯವಿದಲ್ಲದೇ ಜೀವನ ನಡೆಸಿ ತೊರಿಸುತ್ತಾ ಪರಿಸರ ಕಾಳಜಿಯನ್ನು ಹೊಂದಿದ್ದಾರೆ.

  • ‘ಧನ್ಯವಾದಗಳು ಅಜ್ಜಿ’ – ಸಾಲುಮರದ ತಿಮ್ಮಕ್ಕನನ್ನು ನೆನೆದ ಭಜ್ಜಿ

    ‘ಧನ್ಯವಾದಗಳು ಅಜ್ಜಿ’ – ಸಾಲುಮರದ ತಿಮ್ಮಕ್ಕನನ್ನು ನೆನೆದ ಭಜ್ಜಿ

     ನವದೆಹಲಿ: ಭಾರತದ ಕ್ರಿಕೆಟರ್ ಮತ್ತು ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಕರುನಾಡಿನ ಹೆಮ್ಮೆಯ ಮಹಿಳೆ ಸಾಲುಮರದ ತಿಮ್ಮಕ್ಕರನ್ನು ನೆನೆದು ಟ್ವೀಟ್ ಮಾಡಿದ್ದಾರೆ.

    ಭಜ್ಜಿ ಕೊರೊನಾ ಲಾಕ್‍ಡೌನ್‍ನಿಂದ ಕ್ರಿಕೆಟ್‍ನಿಂದ ಕೊಂಚ ಬಿಡುವು ಮಾಡಿಕೊಂಡಿದ್ದಾರೆ. ಈ ವೇಳೆ ಸದಾ ಸಾಮಾಜಿಕ ಜಾಲತಣದಲ್ಲಿ ಸಕ್ರಿಯವಾಗಿರುವ ಹರ್ಭಜನ್ ಅವರು, ತಮ್ಮ ಟ್ವಿಟ್ಟರ್ ನಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗ ಕರ್ನಾಟಕದ ವೃಕ್ಷಮಾತೆ ಪದ್ಮಶ್ರೀ ಪ್ರಶಸ್ತಿ ವಿಜೇತೆ ಸಾಲುಮರದ ತಿಮ್ಮಕ್ಕ ಅವರಿಗೆ ಧನ್ಯವಾದ ಎಂದು ಹೇಳಿ ಟ್ವೀಟ್ ಮಾಡಿದ್ದಾರೆ.

    ಸಾಲುಮರದ ತಿಮ್ಮಕ್ಕ ಅವರ ಸಾಧನೆಯನ್ನು ನೆನಪಿಸಿಕೊಂಡು ಟ್ವೀಟ್ ಮಾಡಿರುವ ಹರ್ಭಜನ್, ಇವರು 73,000 ಸಾವಿರಕ್ಕೂ ಅಧಿಕ ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಆದರೆ ನಮ್ಮಲ್ಲಿ ಕೆಲವರಿಗೆ ಮಾತ್ರ ಇವರ ಬಗ್ಗೆ ಗೊತ್ತು. ಸಾಲುಮರದ ತಿಮ್ಮಕ್ಕನ ರೀತಿಯಲ್ಲಿ ನಾವು ಕೂಡ ಕಮ್ಮಿ ಎಂದರು ಒಂದು ಮರವನ್ನು ನೆಟ್ಟು ಬೆಳಸಬೇಕು. ಧನ್ಯವಾದಗಳು ಅಜ್ಜಿ ಎಂದು ಬರೆದು ಸಾಲುಮರದ ತಿಮ್ಮಕ್ಕ ಅವರು ಪ್ರಶಸ್ತಿ ಪತ್ರ ಹಿಡಿದುಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಪರಿಸರದ ಮೇಲಿನ ಕಾಳಜಿಯಿಂದ ಸಾಲುಮರದ ತಿಮ್ಮಕ್ಕ ಮಾಡಿದ ಸಾಧನೆಯನ್ನು ಗುರುತಿಸಿದ್ದ ಕೇಂದ್ರ ಸರ್ಕಾರ ಕಳೆದ ವರ್ಷ ಇವರಿಗೆ ಪದ್ಮಶ್ರೀ ಪ್ರಶಸ್ತಿ ಕೊಟ್ಟು ಗೌರವಿಸಿತ್ತು. ಸಾಲು ಮರದ ತಿಮ್ಮಕ್ಕನವರು ನೆಟ್ಟ ಸಾವಿರಾರು ಮರಗಳು ಕುದೂರಿನಿಂದ ಹುಲಿಕಲ್‍ನ ರಾಜ್ಯ ಹೆದ್ದಾರಿಯಲ್ಲಿ ಇಂದಿಗೂ ಇವೆ. ಈಗ ಇವುಗಳನ್ನು ಬೆಳೆಸುವ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ವಹಿಸಿಕೊಂಡಿದೆ. ಆದ್ರೆ ಇಳಿ ವಯಸಿನಲ್ಲೂ ತಿಮ್ಮಕ್ಕ ಅವರು ಮಾತ್ರ ಪರಿಸರ ರಕ್ಷಣೆ, ಕಾಳಜಿಯನ್ನು ಮರೆತಿಲ್ಲ.

    ಸ್ವಾರ್ಥವಿಲ್ಲದೆ ಪರಿಸರಕ್ಕಾಗಿ ಸೇವೆ ಸಲ್ಲಿಸಿದ ತಿಮ್ಮಕ್ಕ ಅವರ ಕಾರ್ಯವನ್ನು ಮೆಚ್ಚಿ ಈಗಾಗಲೇ ಹಲವು ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಗಳು ಲಭಿಸಿದೆ.

    ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುವ ಹರ್ಭಜನ್ ಸಿಂಗ್ ಅವರು, ಈ ಬಾರಿ ಐಪಿಎಲ್ ಆಡಲು ಬಹಳ ಉತ್ಸುಕರಾಗಿದ್ದರು. ಆದರೆ ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಐಪಿಎಲ್ ಮುಂದಕ್ಕೆ ಹೋಗಿದೆ. ಈ ನಡುವೆ ಭಜ್ಜಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು, ಫ್ರೆಂಡ್‍ಶಿಫ್ ಎಂಬ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡಿಗ ಅರ್ಜುನ್ ಸರ್ಜಾ ಕೂಡ ನಟಿಸುತ್ತಿದ್ದಾರೆ.

  • ಬಾಲಗಂಗಾಧರನಾಥ ಶ್ರೀಗಳು ನೆಟ್ಟು ಬೆಳೆಸಿದ್ದ ಮರಗಳ ಸ್ಥಳಾಂತರ

    ಬಾಲಗಂಗಾಧರನಾಥ ಶ್ರೀಗಳು ನೆಟ್ಟು ಬೆಳೆಸಿದ್ದ ಮರಗಳ ಸ್ಥಳಾಂತರ

    – ಆದಿಚುಂಚನಗಿರಿ ಶ್ರೀಗಳ ಪರಿಸರ ಕಾಳಜಿಗೆ ಪ್ರಶಂಸೆ

    ಮಂಡ್ಯ: ಆಧುನೀಕರಣ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯ ಹಾಗೂ ದೇಶದಲ್ಲಿ ಲಕ್ಷಾಂತರ ಮರಗಳ ಮಾರಣಹೋಮ ನಡೆಯುತ್ತಿದೆ. ಇದರಿಂದ ಪರಿಸರ ನಾಶವಾಗುವುದರ ಜೊತೆಗೆ ಮಾನವನ ಆರೋಗ್ಯವೂ ಸಹ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಮರಗಳನ್ನು ಕಡಿಯದೇ ಅಭಿವೃದ್ಧಿ ಮಾಡುವುದು ಹೇಗೆ ಎಂದು ಆದಿಚುಂಚನಗಿರಿಯ ಶ್ರೀಗಳು ನಿರೂಪಿಸಿದ್ದಾರೆ.

    ರಸ್ತೆಗಳ ಅಭಿವೃದ್ಧಿ, ಕಟ್ಟಡಗಳ ನಿರ್ಮಾಣ ಹಾಗೂ ಆಧುನಿಕತೆಯ ಹೆಸರನ್ನು ಹೇಳಿಕೊಂಡು ಸರ್ಕಾರ ಹಾಗೂ ಖಾಸಗಿಯವರು ಲಕ್ಷಾಂತರ ಮರಗಳನ್ನು ಮಾರಣ ಹೋಮ ಮಾಡಿದ್ದಾರೆ. ಇದರಿಂದ ದಿನದಿಂದ ದಿನಕ್ಕೆ ಪ್ರಕೃತಿಯಲ್ಲಿ ಮರಗಳ ಸಂಖ್ಯೆಯೂ ಸಹ ಕಡಿಮೆಯಾಗುತ್ತಿದೆ. ಆದರೆ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿಗಳು ಮರಗಳನ್ನು ಕಡಿಯದೆ ಅಭಿವೃದ್ಧಿ ಮಾಡುವುದು ಹೇಗೆ ಎಂದು ಸಮಾಜಕ್ಕೆ ತಿಳಿಸಲು ಮುಂದಾಗಿದ್ದಾರೆ.

    ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮರ ಕಡಿಯದೆ ಅವುಗಳನ್ನು ಸಂರಕ್ಷಣೆ ಮಾಡುವ ಮೂಲಕ ಸಾಮಾಜಕ್ಕೆ ಮಾದರಿಯಾಗುತ್ತಿದ್ದಾರೆ. ಬಿಜಿ ನಗರದ ಆದಿಚುಂಚನಗಿರಿ ಮೆಡಿಕಲ್ ಕಾಲೇಜು ಎದುರು ಇದೀಗ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಶ್ರೀಗಳು ಮುಂದಾಗಿದ್ದಾರೆ. ಆದರೆ ಆಸ್ಪತ್ರೆ ನಿರ್ಮಾಣ ಮಾಡುವ ಜಾಗದಲ್ಲಿ 250 ಕ್ಕೂ ಹೆಚ್ಚು ಬೆಳೆದು ನಿಂತಿರುವ ಮರಗಳು ಇವೆ. ಈ ಮರಗಳನ್ನು ಏನು ಮಾಡುವುದು ಎಂದು ಯೋಚನೆ ಮಾಡುವಾಗ ಶ್ರೀಗಳಿಗೆ ಹೊಳೆದಿರುವುದು ಮರಗಳನ್ನು ಸ್ಥಳಾಂತರ ಮಾಡುವ ಪ್ಲಾನ್.

    ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಬಡವರಿಗೆ ಉಪಯೋಗವಾಗಬೇಕು ಎಂದು ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಶ್ರೀಗಳು ಮುಂದಾಗಿದ್ದು, ಅಲ್ಲಿ ಬೆಳೆದು ನಿಂತಿರುವ ಮರಗಳ ಜೀವವನ್ನು ಕಾಪಾಡಿದ್ದಾರೆ. ಈ ಮರಗಳನ್ನು ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ನೆಟ್ಟು ಪೋಷಣೆ ಮಾಡಿದ್ದರು. ಆದ್ದರಿಂದ ಈ ಮರಗಳನ್ನು ಕಡಿಯುವುದು ಬೇಡಾ, ಈ ಮರಗಳನ್ನು ಸ್ಥಳಾಂತರ ಮಾಡೋಣ ಎಂದು ಹೇಳಿದ್ದಾರೆ. ಹೀಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿರು ಶ್ರೀಗಳು, ಯಂತ್ರದ ಸಹಾಯದಿಂದ ಮರಕ್ಕೆ ಪೆಟ್ಟು ಆಗದಂತೆ ಇಡೀ ಮರವನ್ನು ಬೇರು ಸಹಿತ ಕಿತ್ತು ಎರಡು ಎಕರೆ ಪ್ರದೇಶದಲ್ಲಿ ಪ್ಲಾಂಟ್ ಮಾಡಿಸುತ್ತಿದ್ದಾರೆ.

    ಆದಿಚುಂಚನಗಿರಿ ಶ್ರೀಗಳ ಈ ಪರಿಸರ ಕಾಳಜಿಗೆ ಎಲ್ಲರೂ ಸಹ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಈಗಲಾದರೂ ಸರ್ಕಾರ ಹಾಗೂ ಖಾಸಗಿ ಅವರು ಮರಗಳ ಮಾರಣಹೋಮ ಮಾಡದೇ ಶ್ರೀಗಳ ಹಾದಿ ತುಳಿದು ಪರಿಸರ ರಕ್ಷಣೆಗೆ ಮುಂದಾಗಬೇಕಿದೆ.

  • ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    – ಸಗಣಿ ನೀರು ಎರಚಿದ್ರೂ ಬಿಡದ ಸಮಾಜ ಸೇವೆ
    – ರಾತ್ರಿ ಶಾಲೆ ಮುಖಾಂತರ 10 ಸಾವಿರ ಮಂದಿಗೆ ಅಕ್ಷರ ಜ್ಞಾನ
    – ಶ್ರಮದಾನದ ಮೂಲಕ ಕೆರೆಗಳ ನಿರ್ಮಾಣ

    ಬೆಂಗಳೂರು: ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಶಿವಾಜಿ ಚತ್ರಪ್ಪ ಕಾಗಣಿಕರ್ ಸಹ ಪಾತ್ರರಾಗಿದ್ದಾರೆ.

    ಶಿವಾಜಿ ಕಾಗಣಿಕರ್ ಅವರನ್ನು ಪಬ್ಲಿಕ್ ಹೀರೋ ವೇದಿಕೆಯಲ್ಲಿ ನಾಡಿನ ಜನತೆಗೆ ಮೇ 26, 2015ರಂದು ಪರಿಚಯಿಸಿತ್ತು. ಯಾವುದೇ ಪ್ರಚಾರದ ಆಸೆ ಇಲ್ಲದ ಶಿವಾಜಿಯವರು ಪರಿಸರ ಸೇವೆ ಮಾಡುತ್ತಾ ಬಂದಿದ್ದಾರೆ. ಪರಿಸರ ಉಳಿವಿಗಾಗಿ ಸ್ಥಳೀಯರಿಂದಲೇ ಸುಮಾರು 4 ಲಕ್ಷ ಗಿಡಗಳನ್ನು ಹೆಚ್ಚಿಸಿ ಅವರಿಂದಲೇ ಆರೈಕೆ ಮಾಡಿಸುವಲ್ಲಿ ಶಿವಾಜಿಯವರು ಯಶಸ್ವಿಯಾಗಿದ್ದಾರೆ.

    ಪ್ರಶಸ್ತಿ ಬಂದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಿವಾಜಿ ಕಾಗಣಿಕರ್, ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ನನಗೆ ದುಃಖ ಆಗಿದೆ. ನೆರೆ ಹಾವಳಿಯಿಂದಾಗಿ ಜಿಲ್ಲೆಯ ಬಹುತೇಕ ಗ್ರಾಮಗಳು ತೇಲಿ ಹೋಗಿವೆ. ಬದುಕಿರುವ ಜನರು ನಾವು ಸಹ ಪ್ರವಾಹದಲ್ಲಿ ತೇಲಿ ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸಂತ್ರಸ್ತರು ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನನಗೆ ಪ್ರಶಸ್ತಿ ಬಂದಿರೋದು ಸಂತಸ ತಂದಿಲ್ಲ ಎಂದರು. ಇದನ್ನೂಓದಿ: ದಾವಣಗೆರೆಯ ಪಬ್ಲಿಕ್ ಹೀರೋ ಸಾಲು ಮರದ ವೀರಾಚಾರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 

    ಭೂಮಿ, ಜಲ, ವಾಯು ಮಲೀನದಿಂದಾಗಿ ನಾವೆಲ್ಲರೂ ವಿಷಾಹಾರ ಸೇವನೆ ಮಾಡುತ್ತಿದ್ದೇವೆ. ನನ್ನ ಪ್ರಕಾರ ಸರ್ಕಾರ ಅಂದ್ರೆ ತಂದೆ-ತಾಯಿ. ಅಂತಹ ಸ್ಥಾನದಲ್ಲಿರುವ ಸರ್ಕಾರಗಳು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಒಳ್ಳೆಯ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿದೆ. ಸರ್ಕಾರ ಮನಸ್ಸು ಮಾಡಿದ್ರೆ ರೈತರ ಆತ್ಮಹತ್ಯೆಯನ್ನು ತಡೆಯಬಹುದು ಎಂದು ಶಿವಾಜಿ ಅವರು ಸಲಹೆ ನೀಡಿದರು. ಇದನ್ನೂಓದಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2019- 64 ಸಾಧಕರ ಪಟ್ಟಿ ಇಲ್ಲಿದೆ

    ಯಾರು ಈ ಶಿವಾಜಿ?
    ಬೆಳಗಾವಿ ಜಿಲ್ಲೆಯ ಕಟ್ಟಣಬಾವಿಯ ನಿವಾಸಿಯಾಗಿರುವ ಶಿವಾಜಿ ಕಾಗಣಿಕರ್ ಮೊಬೈಲ್ ಸಹ ಬಳಸಲ್ಲ. ಖಾದಿ ಶರ್ಟ್ ಶಿವಾಜಿಯವರ ಟ್ರೇಡ್ ಮಾರ್ಕ್. ಸದಾ ಕಾಡಂಚಿನ ಗ್ರಾಮಗಳಲ್ಲಿ ಸಂಚರಿಸುವ ಶಿವಾಜಿ ಅವರು ಯಾವುದೇ ಸ್ವಾರ್ಥವಿಲ್ಲದೇ ಪರಿಸರ ಸೇವೆಯಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ. 1972ರಲ್ಲಿಯೇ ಬಿಎಸ್‍ಸಿ ಪದವಿ ಪಡೆದ ಶಿವಾಜಿ ಅವರಿಗೆ ಮಹಾತ್ಮ ಗಾಂಧೀಜಿ ಮತ್ತು ವಿನೋದ ಭಾವೆ ರೋಲ್ ಮಾಡೆಲ್.

    https://www.youtube.com/watch?v=lKIAFdcxLkk

    ಕೇವಲ ಪರಿಸರ ಪ್ರೇಮ ಅಲ್ಲದೇ ಬೆಳಗಾವಿ ಕಾಡಂಚಿನ ಗ್ರಾಮಗಳಲ್ಲಿ ವಾಸವಾಗಿರುವ ಜನರನ್ನು ಸಾಕ್ಷರಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ರಾತ್ರಿ ಶಾಲೆಯ ಮುಖಾಂತರವೇ ಸುಮಾರು 10 ಸಾವಿರ ಜನರಿಗೆ ಅಕ್ಷರ ಜ್ಞಾನ ನೀಡಿದ್ದಾರೆ. ಗ್ರಾಮೀಣ ಭಾಗದ ರೈತರಿಗೆ ಸಾವಯವ ಗೊಬ್ಬರ, ಗೋಬರ್ ಗ್ಯಾಸ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆರಂಭದ ದಿನಗಳಲ್ಲಿ ಗೋಬರ್ ಗ್ಯಾಸ್ ಬಳಕೆ ಬಗ್ಗೆ ತಿಳಿಸಲು ಹೋದಾಗ ಜನರು ಇವರ ಮೇಲೆಯೇ ಸಗಣಿ ನೀರು ಎರಚಿದ್ದರಂತೆ. ಯಾವುದನ್ನು ಲೆಕ್ಕಿಸದೇ ಇಂದು ಸಹ ಜಾಗೃತಿ ಮೂಡಿಸುತ್ತಿದ್ದಾರೆ. ಶ್ರಮದಾನದ ಮೂಲಕ 26 ಗ್ರಾಮಗಳಲ್ಲಿ ಕೆರೆ ನಿರ್ಮಾಣ ಮಾಡಿದ್ದಾರೆ.

  • ನನಸಾಯ್ತು 30 ವರ್ಷಗಳ ಅರಣ್ಯದ ಕನಸು – 10 ಎಕರೆಯಲ್ಲಿ ತಲೆಯೆತ್ತಿದೆ ಸಮೃದ್ಧ ಕಾಡು

    ನನಸಾಯ್ತು 30 ವರ್ಷಗಳ ಅರಣ್ಯದ ಕನಸು – 10 ಎಕರೆಯಲ್ಲಿ ತಲೆಯೆತ್ತಿದೆ ಸಮೃದ್ಧ ಕಾಡು

    -ಸರ್ಕಾರವನ್ನೇ ನಾಚಿಸಿದ ಪುತ್ತೂರಿನ ಸದಾಶಿವ ಮರಿಕೆ

    ಮಂಗಳೂರು: ಒಂದಿಂಚು ಜಾಗ ಇದ್ದರೆ ಅದರಲ್ಲಿ ಲಾಭ ಪಡೆಯಬೇಕೆನ್ನುವವರೇ ಹೆಚ್ಚು. ಅದರಲ್ಲೂ ಪಿತ್ರಾರ್ಜಿತ ಆಸ್ತಿ ಸಿಕ್ಕಿದರೆ ಅದನ್ನು ತಿಂದು ಮುಗಿಸೋದು ಹೇಗೆ ಅನ್ನೋದನ್ನೇ ಕಾಯುತ್ತಿರುವ ಜನ ಇರೋ ಕಾಲ ಇದು. ಆದರೆ ಇಲ್ಲೊಬ್ಬರು ತಮ್ಮ ಎಕರೆಗಟ್ಟಲೆ ಜಾಗವನ್ನು ಪರಿಸರಕ್ಕಾಗಿಯೇ ಅರ್ಪಣೆಗೈದಿದ್ದಾರೆ. ಅರಣ್ಯ ಇಲಾಖೆ, ಸರ್ಕಾರವನ್ನು ನಾಚಿಸುವಂತೆ ಎಕರೆಗಟ್ಟಲೆ ತಮ್ಮ ಸ್ವಂತ ಜಾಗದಲ್ಲಿ ದಟ್ಟ ಅರಣ್ಯವನ್ನು ಬೆಳೆಸಿದ್ದಾರೆ. ಇಂತಹ ಅಪರೂಪದ ಪರಿಸರ ಪ್ರೇಮಿ ಪುತ್ತೂರು ತಾಲೂಕಿನ ಸಂಟ್ಯಾರು ನಿವಾಸಿ ಪ್ರಗತಿಪರ ಕೃಷಿಕ ಸದಾಶಿವ ಮರಿಕೆ ನಮ್ಮ ಪಬ್ಲಿಕ್ ಹೀರೋ.

    ಪರಿಸರದ ಬಗ್ಗೆ ಅತಿಯಾದ ಕಾಳಜಿ ಇರುವ ಸದಾಶಿವ ಮರಿಕೆ ತಮ್ಮಿಂದ ಏನಾದರೂ ಈ ಪ್ರಕೃತಿಗೆ ಅಳಿಲು ಸೇವೆ ಮಾಡಬೇಕೆಂದು ಕಳೆದ 30 ವರ್ಷಗಳ ಹಿಂದೆ ಕಂಡಿದ್ದ ಕನಸನ್ನು ಇದೀಗ ನನಸಾಗಿಸಿದ್ದಾರೆ. ನಾಶವಾಗುತ್ತಿರುವ ಪರಿಸರವನ್ನು ಉಳಿಸಬೇಕು, ಜೊತೆಗೆ ಪ್ರಾಣಿ ಪಕ್ಷಿಗಳಿಗೆ ಅದರಿಂದ ಸಹಕಾರಿ ಆಗಬೇಕೆಂದುಕೊಂಡ ಸದಾಶಿವರವರು ಅದಕ್ಕಾಗಿ ದಟ್ಟ ಅರಣ್ಯವನ್ನು ಮಾಡಬೇಕೆಂದು ಪಣ ತೊಟ್ಟಿದ್ದರು. ಅದರಂತೆ ತಮ್ಮ ಪೂರ್ವಜರಿಂದ ಬಂದಿರುವ ಒಟ್ಟು 25 ಎಕರೆ ಜಮೀನಿನ ಪೈಕಿ ಕೃಷಿ ರಹಿತ ಹತ್ತು ಎಕರೆ ಬರಡು ಭೂಮಿಯಲ್ಲಿ ಕಾಡು ಬೆಳೆಸಬೇಕೆಂದು ನಿರ್ಧರಿಸಿದ್ದರು. ಅದಕ್ಕಾಗಿ ಕಾಡಿನಲ್ಲಿರುವ ವಿವಿಧ ತಳಿಯ ಮರಗಳ ಗಿಡಗಳನ್ನು ತಂದು ಗುಡ್ಡದ ಉದ್ದಕ್ಕೂ ನೆಟ್ಟಿದ್ದರು.

    30 ವರ್ಷಗಳ ಸತತ ಪರಿಶ್ರಮದ ಬಳಿಕ ಗಿಡಗಳು ಮರವಾಗಿ ಬೆಳೆದಿದ್ದು ಇದೀಗ ದಟ್ಟ ಅರಣ್ಯವಾಗಿದೆ. ತಮ್ಮ ಸ್ವಂತ ಜಮೀನಿನಲ್ಲೇ ಅರಣ್ಯ ಇಲಾಖೆ ಹಾಗೂ ಸರ್ಕಾರವನ್ನು ನಾಚಿಸುವಂತಹ ದಟ್ಟ ಅರಣ್ಯವನ್ನು ಬೆಳೆಸಿದ್ದಾರೆ. ಇದರಿಂದಾಗಿ ಒಂದೆಡೆ ಸಮೃದ್ಧ ಕಾಡು, ಅದರಿಂದಾಗಿ ಜಮೀನಿನಲ್ಲಿ ನೀರಿನ ಉತ್ಪತ್ತಿಯೂ ಆಗಿದೆ. ಇದೀಗ ತಾವೇ ಬೆಳೆಸಿದ ದಟ್ಟ ಅರಣ್ಯದಲ್ಲಿ ಪ್ರತಿದಿನ ಒಂದು ಸುತ್ತು ಹೊಡೆಯುವ ಸದಾಶಿವರವರು ಅರಣ್ಯದಿಂದ ತೃಪ್ತಿ ಕಂಡಿದ್ದಾರೆ. ಕಾಡಿನಲ್ಲಿ ಹಕ್ಕಿಗಳ ಇಂಚರ, ಚಿಲಿಪಿಲಿಯ ನಾದ ಕೇಳುತ್ತಾರೆ. ಭೂಮಿಯಲ್ಲಿ ಕಾಡು, ಹಸಿರು ಇಲ್ಲದೇ ಇದ್ದರೆ ಮನುಷ್ಯನ ಉಳಿವು ಸಾಧ್ಯವಿಲ್ಲ ಎಂಬುವುದು ಸದಾಶಿವ ಅವರ ಮಾತು.

    ಆರಂಭದಲ್ಲಿ ಜಮೀನಿನ ಮಧ್ಯೆ ಇದ್ದ ಕೆರೆಯಿಂದಲೇ ಗಿಡಗಳಿಗೆ ನೀರುಣಿಸುತ್ತಿದ್ದರು. ಬೇಸಿಗೆಯಲ್ಲಿ ನೀರು ಪೂರೈಸುವುದು ಕಷ್ಟವೂ ಆಗಿತ್ತು. ಆದರೆ ಕಾಡು ಬೆಳೆದಂತೆ ಜಮೀನಿನಲ್ಲಿ ನೀರಿನ ಸಮಸ್ಯೆಯೂ ಇಲ್ಲದಾಗಿದೆ. ಕಾಡಿನ ಮಧ್ಯೆ ಬಿದ್ದ ಮಳೆ ನೀರು ಅಲ್ಲಿಯೇ ಇಂಗುವಂತೆ ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ. ಈಗ ಒಂದೆಡೆ ಸಮೃದ್ಧ ಕಾಡು, ಇನ್ನೊಂದೆಡೆ ಯಾವ ಬರಗಾಲ ಬಂದರೂ ಕಡಿಮೆಯಾಗದಷ್ಟು ಯಥೇಚ್ಛ ನೀರು ಜಮೀನಿನಲ್ಲಿ ಸೃಷ್ಟಿಯಾಗಿದ್ದು ಕೃಷಿ ಬದುಕಿನಲ್ಲಿ ಸಂತೃಪ್ತಿ ಕಂಡಿದ್ದಾರೆ. ಇವರ ದಟ್ಟ ಕಾಡಿನಿಂದಾಗಿ ಅಕ್ಕಪಕ್ಕದ ಜಮೀನುಗಳಲ್ಲಿಯೂ ಅಂತರ್ಜಲ ಮಟ್ಟ ಹೆಚ್ಚಾಗಿದೆ.

    ಕಾಡು ಕಡಿದು ನಾಶ ಮಾಡುವ ಸರ್ಕಾರ, ತಮ್ಮ ಜಮೀನುಗಳಲ್ಲಿ ಬೆಳೆದು ನಿಂತ ಮರಗಳನ್ನು ಕಡಿದು ಮಾರಾಟ ಮಾಡೋ ಜನಸಾಮಾನ್ಯರ ಮಧ್ಯೆ ಸದಾಶಿವ ಮರಿಕೆ ತಮ್ಮದೇ ಜಾಗದಲ್ಲಿ ದಟ್ಟಾರಣ್ಯವನ್ನೇ ಬೆಳೆಸಿ ಗಮನ ಸೆಳೆದಿದ್ದಾರೆ.

  • ಬೀದರ್‌ನಲ್ಲಿ ಮರಗಳಿಗೆ ರಾಖಿ ಕಟ್ಟಿದ ವಿದ್ಯಾರ್ಥಿನಿಯರು

    ಬೀದರ್‌ನಲ್ಲಿ ಮರಗಳಿಗೆ ರಾಖಿ ಕಟ್ಟಿದ ವಿದ್ಯಾರ್ಥಿನಿಯರು

    ಬೀದರ್: ಮರಗಳಿಗೆ ರಾಖಿ ಕಟ್ಟುವ ಮೂಲಕ ವಿದ್ಯಾರ್ಥಿನಿಯರು ಪರಿಸರ ರಕ್ಷಣೆಗೆ ಮುಂದಾಗಿದ್ದಾರೆ.

    ಮರ ಉಳಿಸಿ ಕಾಡು ಬೆಳಸಿ ಎಂದು ವಿದ್ಯಾರ್ಥಿನಿಯರು ಪರಿಸರದ ಜಾಗೃತಿ ಮೂಡಿಸಿದ್ದಾರೆ. ಮರಗಳ ಮಾರಣಹೋಮದಿಂದಾಗಿ ಇಂದು ಪ್ರಕೃತಿ ವಿಕೋಪಗಳು, ಬರಗಾಲ ಸೃಷ್ಟಿಯಾಗಿ ಹನಿ ಹನಿ ನೀರಿಗೂ ರಾಜ್ಯದಲ್ಲಿ ಹಾಹಾಕಾರ ಶುರುವಾಗಿದ್ದು, ಇಂದು ಪರಿಸರವನ್ನು ಹೇಗೆ ನಾವು ಕಾಪಾಡಿಕೊಳ್ಳಬೇಕು ಎಂದು ನೂರಾರು ವಿದ್ಯಾರ್ಥಿನಿಯರು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.

    ಬೀದರ್ ತಾಲೂಕಿನ ಚಿಟ್ಟಾ ಅರಣ್ಯ ಪ್ರದೇಶದಲ್ಲಿರುವ ನೂರಾರು ಮರಗಳಿಗೆ ರಾಖಿ ಕಟ್ಟು ಮೂಲಕ “ಹಸಿರೆ ಉಸಿರು” ಎಂಬ ಜಾಗತಿಕ ಸಂದೇಶವನ್ನು ವಿದ್ಯಾರ್ಥಿನಿಯರು ನೀಡಿದ್ದಾರೆ. ವಿದ್ಯಾರ್ಥಿನಿಯರಿಗೆ ಅರಣ್ಯಾಧಿಕಾರಿಗಳು ಸಾಥ್ ನೀಡಿದ್ದು, ಮರಗಳಲ್ಲಿ ಸಹೋದರತ್ವ ಕಾಣುವ ಮೂಲಕ ಮರಕ್ಕೆ ರಾಖಿ ಕಟ್ಟುವ ಮೂಲಕ ವಿನೂತನವಾಗಿ ಪರಿಸರ ಪ್ರೇಮವನ್ನು ವ್ಯಕ್ತಪಡಿಸಿದರು. ಈ ವಿನೂತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ಶಿಕ್ಷಕರು, ಪೋಷಕರು ಹಾಗೂ ಅರಾಣ್ಯಾಧಿಕಾರಿಗಳು ಭಾಗಿಯಾಗಿದ್ದರು.

    ಈ ವೇಳೆ ಮಾತನಾಡಿದ ವಿದ್ಯಾರ್ಥಿನಿ ಐಶ್ವರ್ಯ, ಅರಣ್ಯಾಧಿಕಾರಿಗಳು ನಮ್ಮ ಶಾಲೆಗೆ ಬಂದು ಗಿಡಗಳ ಮಾಹಿತಿ ನೀಡಿದ್ದರು. ಬಳಿಕ ಮರಗಳಿಗೆ ರಾಖಿ ಕಟ್ಟಬೇಕು ಎಂದು ಹೇಳಿದ್ದರು. ಹಾಗಾಗಿ ನಾವು ಅರಣ್ಯಕ್ಕೆ ಬಂದು ಎಲ್ಲ ಮರಗಳಿಗೆ ರಾಖಿ ಕಟ್ಟಿದ್ದೇವೆ. ರಾಖಿ ಕಟ್ಟಲು ಕಾರಣ ಏನೆಂದರೆ ನಮ್ಮ ಅಣ್ಣ-ತಮ್ಮನಿಗೆ ರಾಖಿ ಕಟ್ಟಿದ್ದರೆ ಅವರು ನಮ್ಮನ್ನು ಹೇಗೆ ರಕ್ಷಿಸುತ್ತಾರೋ, ಹಾಗೆಯೇ ಮರಗಳು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ಎಲ್ಲ ಗಿಡಗಳಿಗೆ ರಾಖಿ ಕಟ್ಟಿದ್ದೇವೆ ಎಂದು ಹೇಳಿದ್ದಾಳೆ.

  • ಉಪನಯನದಲ್ಲಿ ಸಿಹಿ ಬದಲಾಗಿ ಬೀಜದುಂಡೆ ನೀಡಿ ಪರಿಸರ ಕಾಳಜಿ ಮೆರೆದ ಕುಟುಂಬ

    ಉಪನಯನದಲ್ಲಿ ಸಿಹಿ ಬದಲಾಗಿ ಬೀಜದುಂಡೆ ನೀಡಿ ಪರಿಸರ ಕಾಳಜಿ ಮೆರೆದ ಕುಟುಂಬ

    ಕಾರವಾರ: ಯಾವುದೇ ಕಾರ್ಯಕ್ರಮವಿರಲಿ ಬಂದ ಅಥಿತಿಗಳಿಗೆ ಸಿಹಿ ನೀಡಿ ಮೃಷ್ಟಾನ್ನ ಭೋಜನ ನೀಡುವ ಮೂಲಕ ಅತಿಥಿ ಸತ್ಕಾರ ಮಾಡುವುದು ಸಂಪ್ರದಾಯ .

    ಯಲ್ಲಾಪುರ ತಾಲೂಕಿನ ಚಂದಗುಳಿಯಲ್ಲಿ ಬುಧವಾರ ನಡೆದ ಉಪನಯನವೊಂದರಲ್ಲಿ ವಿತರಿಸಿದ ವಿಭಿನ್ನ ಉಂಡೆ ಅತಿಥಿಗಳನ್ನು ಮೆಚ್ಚಿಸುವಂತೆ ಮಾಡಿತ್ತು. ಅಲ್ಲಿ ವಿತರಿಸಿದ್ದು ಯಾವುದೇ ಸಿಹಿಯಾದ ಉಂಡೆಯಾಗಿರದೇ ಪ್ಯಾಕ್ ಮಾಡಿದ ಬೀಜದುಂಡೆಯಾಗಿತ್ತು. ವೀಣಾ ಹಾಗೂ ರಾಮಚಂದ್ರ ವೈದ್ಯ ದಂಪತಿಗಳ ಪುತ್ರನಾದ ಆದಿತ್ಯ (ಜಯಶೀಲ)ನ ಉಪನಯನವನ್ನು ತಾಲೂಕಿನ ಚಂದಗುಳಿ ಗಂಟೆ ಗಣಪತಿ ದೇವಾಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

    ನಮ್ಮ ಮಗನ ಉಪನಯನ ವಿಭಿನ್ನವಾಗಿರಬೇಕು ಮತ್ತು ಈ ಶುಭಕಾರ್ಯದ ಸವಿನೆನಪು ಚಿರಸ್ಥಾಯಿಯಾಗಿರಬೇಕು ಎನ್ನುವ ಉದ್ದೇಶದಿಂದ ಈ ದಂಪತಿ ಆಯ್ಕೆ ಮಾಡಿಕೊಂಡಿದ್ದು ಪರಿಸರ ಜಾಗೃತಿ. ಮಗನ ಉಪನಯನದ ಹೆಸರಿನಲ್ಲಿ ನೂರಾರು ಗಿಡಗಳು ಅಲ್ಲಲ್ಲಿ ಬೆಳೆದು ನಿಲ್ಲಲಿ, ಈ ಮೂಲಕ ಹಸಿರು ಪರಿಸರ ಹೆಚ್ಚಾಗಲಿ ಎಂಬ ಉದ್ದೇಶದಿಂದ ಬೀಜದುಂಡೆಗಳನ್ನು ತಯಾರಿಸಿ, ಬಂದಂತಹ ಅತಿಥಿಗಳಿಗೆ ಆದಿತ್ಯನ ಆಧ್ಯಾತ್ಮಿಕ ಪಯಣಕ್ಕೆ ಸಾಕ್ಷಿಯಾಗಿ ಹರಸಿ. ಪ್ರೀತಿಯಿಂದ ನಾವು ನೀಡುವ ಜೀವಗಾಳು ಪಸರಿಸಿ ಎಂಬ ಸಂದೇಶದೊಂದಿಗೆ ವಿತರಿಸಿದ್ದಲ್ಲದೇ, ಇದನ್ನು ನಿಮ್ಮ ಮನೆಯ ಸುತ್ತಮುತ್ತಲಿನ ಖಾಲಿ ಪ್ರದೇಶದಲ್ಲಿ ಹಾಕುವುದರ ಮೂಲಕ ಹಸಿರು ಪರಿಸರ ಹೆಚ್ಚಾಗಲು ಕೈಜೋಡಿಸಿ ಎಂಬ ಮನವಿಯನ್ನೂ ಮಾಡಿಕೊಳ್ಳಲಾಯಿತು.

    ಈ ವಿಚಾರದ ಬಗ್ಗೆ ಮಾತನಾಡಿರುವ ಈ ಬೀಜದುಂಡೆ ವಿತರಣೆಯ ರೂವಾರಿ ಆದಿತ್ಯನ ಕುಟುಂಬದವರಾದ ವಾನಳ್ಳಿಯ ನಾಗವೇಣಿ ಹೆಗಡೆ, ಅತಿಥಿಗಳಿಗೆ ವಿತರಿಸಲು ಎರಡು ಜಾತಿಯ ಮರಗಳಾದ ನೇರಳೆ, ಹಲಸು ಮುಂತಾದ ಬೀಜಗಳುಳ್ಳ ಸುಮಾರು 1200 ಹೆಚ್ಚು ಬೀಜದುಂಡೆಗಳನ್ನು ತಯಾರಿಸಿ ವಿತರಿಸಿದ್ದೇವೆ. ಅವುಗಳಲ್ಲಿ ನೂರು ಗಿಡಗಳು ಹುಟ್ಟಿ, ಮರವಾಗಿ ಬೆಳೆದು ನಿಂತರೆ ಪರಿಸರಕ್ಕೊಂದು ಕೊಡುಗೆ ನೀಡಬೇಕೆಂದ ನಮ್ಮ ಅಭಿಲಾಶೆ ಎಂದು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಈ ರೀತಿ ಶುಭ ಕಾರ್ಯಗಳಲ್ಲಿ ಸಾಮಾಜಿಕ ಸಂದೇಶವನ್ನು, ಪರಿಸರ ಜಾಗೃತಿಯನ್ನು ಮೂಡಿಸುವಂತಾದರೆ ಶುಭ ಕಾರ್ಯ ಸಾಮಾಜಿಕ ಕಾರ್ಯವಾಗುವುದರಲ್ಲಿ ಸಂಶಯವಿಲ್ಲ.

  • 15,000 ಟನ್ ಕಾಗದ ತ್ಯಾಜ್ಯ ಸಂಗ್ರಹಿಸಿ ಪ್ರಶಸ್ತಿ ಗೆದ್ದ ಭಾರತೀಯ ಬಾಲೆ

    15,000 ಟನ್ ಕಾಗದ ತ್ಯಾಜ್ಯ ಸಂಗ್ರಹಿಸಿ ಪ್ರಶಸ್ತಿ ಗೆದ್ದ ಭಾರತೀಯ ಬಾಲೆ

    ದುಬೈ: 8 ವರ್ಷದ ಭಾರತೀಯ ಬಾಲಕಿಯೊಬ್ಬಳು ಬರೋಬ್ಬರಿ 15 ಸಾವಿರ ಕಿಲೋಗ್ರಾಂ ಕಾಗದದ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾಳೆ.

    ಭಾರತೀಯ ಮೂಲದ ನಿಯಾ ಟೋನಿ 15 ಸಾವಿರ ಕೆಜಿ ತೂಕದ ಪೇಪರ್ ತ್ಯಾಜ್ಯ ಸಂಗ್ರಹಿಸಿದ್ದಾಳೆ. ಈಕೆ ಪೋಷಕರ ಜೊತೆ ದುಬೈನಲ್ಲಿ ನೆಲೆಸಿದ್ದಾಳೆ. ಟೋನಿ ಎಮಿರೇಟ್ಸ್ ಎನ್ವಿರಾನ್ಮೆಂಟಲ್ ಗ್ರೂಪ್‍ನ ರಾಷ್ಟ್ರವ್ಯಾಪಿ ಮರುಬಳಕೆ ಅಭಿಯಾನದ ಭಾಗವಾಗಿ ವೇಸ್ಟ್ ಪೇಪರ್‌ಗಳನ್ನು ಸಂಗ್ರಹಿಸಿದ್ದಾಳೆ. ಇತ್ತೀಚೆಗಷ್ಟೆ ದುಬೈಯ ಎಮಿರೇಟ್ಸ್ ರಿಸೈಕ್ಲಿಂಗ್ ಅವಾರ್ಡ್ಸ್ ನ 22ನೇ ಆವೃತ್ತಿಯಲ್ಲಿ ಬಾಲಕಿಯ ಅಸಾಮಾನ್ಯ ಸಾಧನೆಗೆ ಆಕೆಯನ್ನು ಗೌರವಿಸಲಾಗಿದೆ.

    ಇಂಗಾಲದ ಡೈಆಕ್ಸೈಡ್ ಹೊರಹೊಮ್ಮುವುದನ್ನು ತಡೆಯುವ ನಿಟ್ಟಿನಲ್ಲಿ ಎಮಿರೇಟ್ಸ್ ಗ್ರೂಪ್ ಅಭಿಯಾನವನ್ನು ಕೈಗೊಂಡಿತ್ತು. ಅದರಲ್ಲಿ ಬರೋಬ್ಬರಿ 73,393 ಮೆಟ್ರಿಕ್ ಟನ್ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಈ ಅಭಿಯಾನದಲ್ಲಿ ಕಾರ್ಪೋರೇಷನ್‍ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ವ್ಯಕ್ತಿಗಳು ಅಥವಾ ಕುಟುಂಬದವರು ಎಂದು ಭಾಗ ಮಾಡಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿತ್ತು.

    ಈ ಅಭಿಯಾನದಲ್ಲಿ ಕಾಗದದ ಹೊರತಾಗಿಯೂ ಪ್ಲಾಸ್ಟಿಕ್, ಗಾಜು, ಡಬ್ಬಿಗಳು ಮತ್ತು ಮೊಬೈಲ್ ಫೋನ್‍ಗಳು ಸಂಗ್ರಹಿಸಲಾಗಿದೆ. ಅನೇಕ ಜನರು ಈ ಅಭಿಯಾನದಲ್ಲಿ ಭಾಗವಹಿಸಿ ತ್ಯಾಜ್ಯ ಪೇಪರ್‌ಗಳನ್ನು ಸಂಗ್ರಹಿಸಿದ್ದರು. ಆದರೆ 8 ವರ್ಷದ ಟೋನಿ 14,914 ಕೆಜಿ ತ್ಯಾಜ್ಯ ಸಂಗ್ರಹಿಸಿ ಎಲ್ಲರಿಗೂ ಅಚ್ಚರಿ ನೀಡಿದ್ದಳು.

    ಪ್ರತಿವಾರ ಕಾಗದಗಳನ್ನು ಸಂಗ್ರಹಿಸಲು ನಾನು ನಮ್ಮ ಪ್ರದೇಶದ ಸುತ್ತಮುತ್ತ ಅಭಿಯಾನ ನಡೆಸುತ್ತಿದ್ದೆ. ಪ್ರತಿಯೊಬ್ಬರ ಮನೆಗೆ ಹೋಗಿ ಕಾಗದ ತ್ಯಾಜ್ಯ, ಓದಿ ಮುಗಿದ ಪತ್ರಿಕೆ, ನಿಯತಕಾಲಿಕೆ ಇತ್ಯಾದಿಗಳನ್ನು ಸಂಗ್ರಹಿಸಿ ತರುತ್ತಿದ್ದೆ ಎಂದು ಟೋನಿ ಹೇಳಿದ್ದಾಳೆ.

    ಯಾರೂ ಕೂಡ ಬಳಸಿದ ಪೇಪರ್‌ಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಇಟ್ಟಪಡುವುದಿಲ್ಲ. ಅದರಲ್ಲೂ ಮರುಬಳಕೆ ಮಾಡುವಂತಹ ತ್ಯಾಜ್ಯವನ್ನು ಸಂಗ್ರಹಿಸಬೇಕು. ನನ್ನಂತೆಯೇ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಪರಿಸರ ಜಾಗೃತಿಯ ಬಗ್ಗೆ ಅರಿವು ಮೂಡಿಸಬೇಕು. ಆಗ ಮುಂದಿನ ದಿನದಲ್ಲಿ ನಾವು ಪರಿಸರ ಮಧ್ಯೆ ವಾಸಿಸಬಹುದು ಎಂದು ತಿಳಿಸಿದ್ದಾಳೆ.