Tag: English Premier League

  • ಕೊರೊನಾ ಎಫೆಕ್ಟ್‌ನಿಂದಾಗಿ ಕ್ರೀಡಾ ಜಗತ್ತಿಗೆ 1.21 ಲಕ್ಷ ಕೋಟಿ ನಷ್ಟ

    ಕೊರೊನಾ ಎಫೆಕ್ಟ್‌ನಿಂದಾಗಿ ಕ್ರೀಡಾ ಜಗತ್ತಿಗೆ 1.21 ಲಕ್ಷ ಕೋಟಿ ನಷ್ಟ

    – ಭಾರತದ ಕ್ರೀಡಾ ಉದ್ಯಮಕ್ಕೂ 4,700 ಕೋಟಿ ಲಾಸ್

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿ ಕ್ರೀಡಾಕೂಟ, ಆರ್ಥಿಕ ಚಟುವಟಿಕೆ ಹೀಗೆ ಎಲ್ಲವನ್ನೂ ಸ್ತಬ್ಧಗೊಳಿಸಿದೆ. ಕೊರೊನಾ ಆರ್ಭಟದ ಎದುರು ಕ್ರೀಡಾ ಉದ್ಯಮ ಭಾರೀ ನಷ್ಟವನ್ನೇ ಅನುಭವಿಸಿದೆ.

    ಕೊರೊನಾ ಎಫೆಕ್ಟ್‌ನಿಂದಾಗಿ ವಿಶ್ವ ಕ್ರೀಡಾ ಉದ್ಯಮವು 1.21 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದರೆ, ಭಾರತದ ಕ್ರೀಡಾ ಉದ್ಯಮಕ್ಕೂ 4,700 ಕೋಟಿ ರೂ. ಕಳೆದುಕೊಂಡಿದೆ. ಸದ್ಯ ವಿವಿಧ ದೇಶಗಳಲ್ಲಿ ಖಾಲಿ ಮೈದಾನದಲ್ಲೇ ಫುಟ್ಬಾಲ್ ಸೇರಿದಂತೆ ಕೆಲ ಟೂರ್ನಿಗಳು ಪ್ರಾರಂಭಗೊಂಡಿವೆ.

    ಸದ್ಯ ಆರಂಭವಾಗಿರುವ ಎಲ್ಲಾ ಟೂರ್ನಿ, ಲೀಗ್‍ಗಳನ್ನು ಪ್ರೇಕ್ಷಕರಿಲ್ಲದೆ ಆಡಬೇಕಾಗಿದೆ. ಪಂದ್ಯದಲ್ಲಿ ಪ್ರೇಕ್ಷಕರು ಇಲ್ಲದಿದ್ದಾಗ ಆಡುವ ಪ್ರಯೋಜನವೇನು ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ ಇದಕ್ಕೆ ಸರಳವಾದ ಉತ್ತರವೆಂದರೆ ಕ್ರೀಡಾ ಉದ್ಯಮದ ಆದಾಯದ ಬಹುಪಾಲು ಭಾಗವು ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರಿಂದ ಬರುವುದಿಲ್ಲ. ಹೊರತಾಗಿ ಪ್ರಸಾರ ಮತ್ತು ಕ್ರೀಡೆಗಳಿಗೆ ಸಂಬಂಧಿಸಿದ ವಿವಿಧ ವ್ಯವಹಾರಗಳಿಂದ ಹೆಚ್ಚಿನ ಹಣ ಹರಿದುಬರುತ್ತದೆ.

    ಪ್ರಪಂಚದಾದ್ಯಂತದ ಅನೇಕ ದೇಶಗಳು ಈಗ ಪ್ರೇಕ್ಷಕರಿಲ್ಲದೆ ಟೂರ್ನಿಗಳನ್ನು ಆರಂಭಿಸಿ ಕ್ರೀಡಾ ಚಟುವಟಿಕೆಯನ್ನು ಚುರುಕುಗೊಳಿಸುತ್ತಿರುವುದು ಇದೇ ಕಾರಣಕ್ಕೆ ಎಂದು ಹೇಳಬಹುದು. ಈ ಮೂಲಕ ಪ್ರೇಕ್ಷಕರಿಂದ ಬರುವ ಹಣವನ್ನು ಹೊರತುಪಡಿಸಿ ಬೇರೆ ಬೇರೆ ಮೂಲಗಳಿಂದ ಪಡೆಯಲು ಆಡಳಿತ ಮಂಡಳಿಗಳು ಪ್ಲಾನ್ ರೂಪಿಸುತ್ತಿವೆ.

    ಕ್ರೀಡಾ ಮಾಧ್ಯಮದ ವರದಿಯ ಪ್ರಕಾರ, ಈ ವರ್ಷ ಕೋವಿಡ್-19ನಿಂದಾಗಿ ವಿಶ್ವ ಕ್ರೀಡಾ ಉದ್ಯಮವು 1.21 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಿನ ನಷ್ಟವನ್ನು ಅನುಭಸಲಿದೆ. ಈ ಪೈಕಿ ಅಮೆರಿಕವೊಂದೇ 9 ಸಾವಿರ ಕೋಟಿ ರೂ. ನಷ್ಟವನ್ನು ಅನುಭವಿಸಲಿದೆ. ಭಾರತದಲ್ಲಿ ಕ್ರೀಡೆ ಮತ್ತು ಸಂಬಂಧಿತ ಉದ್ಯಮಗಳು 30 ಸಾವಿರ ಕೋಟಿ ರೂ. ನಷ್ಟದ ಸುಳಿಗೆ ಸಿಲುಕಲಿವೆ. ಕ್ರೀಡಾ ವ್ಯವಹಾರ ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ತಜ್ಞರ ಪ್ರಕಾರ, ಭಾರತದ ಕ್ರೀಡಾ ಸರಕು ಉದ್ಯಮವು 4,700 ಕೋಟಿ ರೂ. ನಷ್ಟವನ್ನು ತೆರಲಿದೆ ಎಂದು ಹೇಳಲಾಗಿದೆ.

    ಪ್ರೊ ಕಬಡ್ಡಿ ಲೀಗ್:
    ಈ ವರ್ಷದ ಏಪ್ರಿಲ್‍ನಲ್ಲಿ ಪ್ರೊ ಕಬಡ್ಡಿ ಲೀಗ್‍ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಈವರೆಗೂ ಹರಾಜು ಪ್ರಕ್ರಿಯೆ ಆರಂಭವಾಗಿಲ್ಲ. ಟೂರ್ನಿ ಜುಲೈನಲ್ಲಿ ಪ್ರಾರಂಭವಾಗಬೇಕಿತ್ತಾದರೂ ಯಾವುದೇ ಚಟುವಟಿಕೆ ಕಾಣಿಸಿಕೊಂಡಿಲ್ಲ. ಈ ಲೀಗ್‍ನಿಂದ ಸಂಘಟಕರು ಪ್ರತಿವರ್ಷ ಪಂದ್ಯಾವಳಿಯಿಂದ ಸುಮಾರು 500 ಕೋಟಿ ರೂ. ಗಳಿಸುತ್ತಾರೆ. ಒಂದು ವೇಳೆ ಪ್ರೊ ಕಬಡ್ಡಿ ನಡೆಯದಿದ್ದಲ್ಲಿ ಆಟಗಾರರು, ಫ್ರಾಂಚೈಸಿಗಳು ಹಾಗೂ ಆಡಳಿತ ಮಂಡಳಿಗಳಿಗೆ ಆದಾಯವೇ ನಿಲ್ಲುತ್ತದೆ.

    ಒಲಿಂಪಿಕ್:
    ಜಗತ್ತಿನ ಪ್ರಮುಖ ಕ್ರೀಡಾಕೂಟಗಳಲ್ಲಿ ಒಂದಾದ ಒಲಿಂಪಿಕ್ ಆಥಿತ್ಯವನ್ನು ಜಪಾನ್ ವಹಿಸಿಕೊಂಡಿತ್ತು. ಆದರೆ ಕೊರೊನಾ ಭೀತಿ ಹಿನ್ನೆಲೆ ಕ್ರೀಡಾಕೂಟವನ್ನು ಮುಂದೂಡಲಾಗಿದೆ. ಪರಿಣಾಮ ಈ ವರ್ಷ ಜಪಾನ್ 56 ಸಾವಿರ ಕೋಟಿ ರೂ. ನಷ್ಟ ಉಂಟಾಗಿಎ.

    ಜಪಾನ್‍ನ ಮಾಧ್ಯಮಗಳ ಪ್ರಕಾರ, ಒಲಿಂಪಿಕ್ ಕ್ರೀಡಾಕೂಟವನ್ನು ಮುಂದೂಡಿದ್ದರಿಂದ ಸಂಘಟಕರು ನಷ್ಟವನ್ನು ಸರಿದೂಗಿಸಲು ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ 20 ಕೋಟಿ ರೂ. ವೆಚ್ಚವನ್ನು ಕಡಿತಗೊಳಿಸುವ ಯೋಜನೆಯನ್ನು ಸಹ ಸಿದ್ಧಪಡಿಸಿದ್ದಾರೆ. ಒಲಿಂಪಿಕ್ ಸಂಘಟನಾ ಸಮಿತಿಯ ಅಧ್ಯಕ್ಷ ಯೋಶಿರೋ ಮೋರಿ ಇದನ್ನು ಖಚಿತಪಡಿಸಿದ್ದಾರೆ.

    ಬಿಸಿಸಿಐ 5,000 ಕೋಟಿ ಲಾಸ್:
    ಐಪಿಎಲ್ ನಡೆಸಲು ಸಾಧ್ಯವಿರುವ ಎಲ್ಲ ಆಯ್ಕೆಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕಳೆದ ಗುರುವಾರ ಹೇಳಿದ್ದರು. ಈ ನಿಟ್ಟಿನಲ್ಲಿ ಟೂರ್ನಿಯನ್ನು ಪ್ರೇಕ್ಷಕರು ಇಲ್ಲದೆ ನಡೆಸಬಹುದು. ಏಕೆಂದರೆ ಬಿಸಿಸಿಐಗೆ ವಾರ್ಷಿಕ ಆದಾಯದ ಬಹುಪಾಲು ಭಾಗ ಐಪಿಎಲ್‍ನಿಂದ ಬರುತ್ತದೆ. ಐಪಿಎಲ್‍ನ ಬ್ರಾಂಡ್ ಮೌಲ್ಯ 47,500 ಕೋಟಿ ರೂ. ಆಗಿದೆ. ಈ ಬಾರಿ ಐಪಿಎಲ್ ನಡೆಯದಿದ್ದರೆ ಭಾರತೀಯ ಕ್ರಿಕೆಟ್ ಮಂಡಳಿಗೆ 5,000 ಕೋಟಿ ರೂ. ನಷ್ಟವನ್ನು ಅನುಭವಿಸಬೇಕಾಗುತ್ತದೆ.

    ಫುಟ್ಬಾಲ್:
    ಯುರೋಪಿಯನ್ ಫುಟ್ಬಾಲ್ ಉದ್ಯಮವು 2018-19ರಲ್ಲಿ 25 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸಿತ್ತು. ಇಂಗ್ಲಿಷ್ ಪ್ರೀಮಿಯರ್ ಲೀಗ್ ಕ್ಲಬ್‍ಗಳ ಆದಾಯ 505 ಕೋಟಿ ರೂ. ಆಗಿತ್ತು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಈ ವರ್ಷ ಪ್ರೀಮಿಯರ್ ಲೀಗ್ ಕ್ಲಬ್‍ಗಳ ಆದಾಯವು ಸುಮಾರು 8,500 ಕೋಟಿ ರೂ.ನಷ್ಟು ಕಡಿಮೆ ಮಾಡಬಹುದು ಎನ್ನಲಾಗಿದೆ.

    ಆದಾಯದ ದೃಷ್ಟಿಯಿಂದ ನೋಡುವುದಾದರೆ ಸ್ಪ್ಯಾನಿಷ್ ಫುಟ್ಬಾಲ್ ಲೀಗ್ ಯುರೋಪಿನ ಎರಡನೇ ಅತಿದೊಡ್ಡ ಲೀಗ್ ಆಗಿದೆ. ಹಿಂದಿನ ಆವೃತ್ತಿಯಲ್ಲಿ ಈ ಲೀಗ್ ಸುಮಾರು 38,363 ಕೋಟಿ ರೂ. ಗಳಿಸಿತ್ತು. ಈ ಆವೃತ್ತಿಯು 1.85 ಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ.

    ಯುಎಸ್ ಓಪನ್: ಆಗಸ್ಟ್ 24ರಿಂದ ಅಮೆರಿಕ ಓಪನ್ ಪ್ರಾರಂಭವಾಗುತ್ತದೆ. ಈ ಲೀಗ್ ಕೂಡ ಪ್ರೇಕ್ಷಕರಿಲ್ಲದೆ ನಡೆಯಬಹುದು. ಹಾಗೆ ನಡೆದಲ್ಲಿ ಯುಎಸ್ ಓಪನ್ ಆಯೋಜಕರು 760 ಕೋಟಿ ರೂ. ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

  • ಇಂಗ್ಲೀಷ್ ಪ್ರೀಮಿಯರ್ ಲೀಗ್: ಮ್ಯಾಂಚೆಸ್ಟರ್ ಸಿಟಿ ಚಾಂಪಿಯನ್

    ಇಂಗ್ಲೀಷ್ ಪ್ರೀಮಿಯರ್ ಲೀಗ್: ಮ್ಯಾಂಚೆಸ್ಟರ್ ಸಿಟಿ ಚಾಂಪಿಯನ್

    ಲಂಡನ್: ಪ್ರತಿಷ್ಠಿತ ಇಂಗ್ಲಿಷ್ ಪ್ರೀಮಿಯರ್ ಲೀಗ್ ಫುಟ್ಬಾಲ್ ಕೂಟದಲ್ಲಿ ಮ್ಯಾಂಚೆಸ್ಟರ್ ಸಿಟಿ ತಂಡ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.

    ಮ್ಯಾಂಚೆಸ್ಟರ್ ಎತ್ತಿಹಾದ್ ಮೈದಾನದಲ್ಲಿ ನಿನ್ನೆ ತಡರಾತ್ರಿ ನಡೆದ ಪಂದ್ಯದಲ್ಲಿ ಅತಿಥೇಯ ಸಿಟಿ ತಂಡ ಹಡ್ಡರ್ಸ್‍ಫೀಲ್ಡ್ ತಂಡದ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿತು. ಆ ಮೂಲಕ ಸೀಸನ್‍ನಲ್ಲಿ ಆಡಿದ 36 ಪಂದ್ಯಗಳಲ್ಲಿ 30 ಪಂದ್ಯದಲ್ಲಿ ಜಯಭೇರಿ ಬಾರಿಸಿ, 4 ಪಂದ್ಯಗಳಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿತು.

    ಕೇವಲ ಎರಡು ಪಂದ್ಯಗಳನ್ನು ಸೋತಿರುವ ಸಿಟಿ ಒಟ್ಟು 94 ಅಂಕಗಳನ್ನು ಕಲೆಹಾಕಿದೆ. ತವರು ಮೈದಾನದಲ್ಲಿ 102 ಗೋಲು ಗಳಿಸಿರುವ ಸಿಟಿ, ತವರಿನಾಚೆ 26 ಗೋಲು ದಾಖಲಿಸಿದೆ. ಆ ಮೂಲಕ ಇತರ ತಂಡಗಳಿಗಿಂತ ಒಟ್ಟು 76 ಗೋಲುಗಳ ಭಾರೀ ಅಂತರವನ್ನು ಕಾಯ್ದುಕೊಂಡಿದೆ.

    ಎರಡನೇ ಸ್ಥಾನದಲ್ಲಿರುವ ಮ್ಯಾಂಚೆಸ್ಟರ್ ಯುನೈಟೆಡ್ ತಂಡ 36 ಪಂದ್ಯಗಳಲ್ಲಿ 24 ಜಯಗಳಿಸಿದ್ದರೆ 7 ಪಂದ್ಯಗಳಲ್ಲಿ ಸೋಲು ಹಾಗೂ 5 ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದು, 77 ಅಂಕಗಳಿಗಷ್ಟೇ ಸೀಮಿತಗೊಂಡಿದೆ. ಕಳೆದ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಚೆಲ್ಸಿಯಾ ತಂಡ ಈ ಬಾರಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

    ಎತ್ತಿಹಾದ್ ಮೈದಾನದಲ್ಲಿ ಇದೇ ಮೊದಲ ಬಾರಿ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡ ವಿನ್ಸೆಂಟ್ ಕೊಂಪೆನಿ ನಾಯಕತ್ವದ ಮ್ಯಾಂಚೆಸ್ಟರ್ ಸಿಟಿ ತಂಡಕ್ಕೆ ಕೂಟದಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇದ್ದು, 2004-05ರಲ್ಲಿ ಚೆಲ್ಸಿಯಾ ತಂಡ ನಿರ್ಮಸಿದ್ದ ಅತಿಹೆಚ್ಚು ಪಾಯಿಂಟ್ಸ್ (96) ಗಳಿಕೆಯ ದಾಖಲೆಯನ್ನು ಮುರಿಯುವ ತವಕದಲ್ಲಿದೆ.

    ಟ್ರೋಫಿ ಸ್ವೀಕರಿಸಿದ ಬಳಿಕ ಮಾತನಾಡಿದ ಕೋಚ್ ಪೆಪ್ ಗಾರ್ಡಿಯೋಲಾ, ಚಾಂಪಿಯನ್‍ಶಿಪ್ ಗೆಲ್ಲುವುದರ ಜೊತೆಜೊತೆಗೆ ನನ್ನ ತಂಡ ಕೆಲ ದಾಖಲೆಗಳನ್ನು ಮುರಿಯುವುದನ್ನು ನಾನು ಎದುರುನೋಡುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು. ಬಾರ್ಸಿಲೋನಾ, ಬಯಾರ್ನ್ ಮ್ಯೂನಿಚ್‍ನಂತಹ ಘಟಾನುಘಟಿಗೆ ತಂಡಗಳನ್ನು ಯಶಸ್ಸಿನ ತುತ್ತತುದಿಗೆ ಕೊಂಡೊಯ್ದಿದ್ದ ಕೋಚ್ ಗಾರ್ಡಿಯೋಲ ಸಿಟಿ ತಂಡವನ್ನು ಚಾಂಪಿಯನ್‍ಶಿಪ್ ಪಟ್ಟಕ್ಕೆ ಕೊಂಡೊಯ್ಯುವುದರ ಮೂಲಕ ತನ್ನ ವೃತ್ತಿ ಜೀವನದ ಟ್ರೋಫಿ ಗಳಿಕೆಯನ್ನು 22ಕ್ಕೇರಿಸಿದ್ದಾರೆ. ಇದರಲ್ಲಿ ಎರಡು ಚಾಂಪಿಯನ್ಸ್ ಲೀಗ್ ಕಿರೀಟವೂ ಸೇರಿದೆ.

    ನೆಲಕ್ಕೆ ಬಿದ್ದ ಟ್ರೋಫಿ..!
    ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಚಾಂಪಿಯನ್‍ಶಿಪ್ ಟ್ರೋಫಿ ನೆಲಕ್ಕೆ ಬಿದ್ದ ಘಟನೆಯೂ ನಡೆಯಿತು. ತಂಡದ ಹಿರಿಯ ಆಟಗಾರ ಯಾಯಾ ಟೋರೆ ಸುತ್ತ ಸೇರಿದ್ದ ಸಿಟಿ ತಂಡದ ಇತರ ಆಟಗಾರರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು ಆದರೆ ಆಗಿನ್ನೂ ಟ್ರೋಫಿ ವಿತರಣೆಯಾಗಿರಲಿಲ್ಲ. ಸ್ಟ್ಯಾಂಡ್‍ನಲ್ಲಿಟ್ಟಿದ್ದ ಟ್ರೋಫಿ ಒಲೆಕ್ಸಾಂಡರ್ ಕ್ಸಿಂಚಾಂಕೋ ಬೆನ್ನು ತಾಗಿ ಕೆಳಕ್ಕೆ ಬಿತ್ತು. ಆ ಕ್ಷಣ ಕ್ಸಿಂಚಾಂಕೋ ಕಕ್ಕಾಬಿಕ್ಕಿಯಾದರು. ಬಳಿಕ ಸಂಘಟಕರು ಬಂದು ಟ್ರೋಫಿಯನ್ನು ಮೂಲ ಸ್ಥಾನದಲ್ಲಿರಿಸಿದರು.

    https://www.instagram.com/p/BicUu1HH_Mc/?utm_source=ig_embed%20(E£ï%20¸ÁÖUÁæªÀiï%20°APï)