Tag: English-medium School

  • ಗಡಿಭಾಗದ ಮಕ್ಕಳನ್ನು ಶಾಲೆಗೆ ಸೆಳೆಯೋಕೆ ಶಿಕ್ಷಕರ ಪ್ಲ್ಯಾನ್‌ – ಸ್ವಂತ ಖರ್ಚಿನಲ್ಲಿ ಎಲ್‌ಕೆಜಿ, ಯುಕೆಜಿ

    ಗಡಿಭಾಗದ ಮಕ್ಕಳನ್ನು ಶಾಲೆಗೆ ಸೆಳೆಯೋಕೆ ಶಿಕ್ಷಕರ ಪ್ಲ್ಯಾನ್‌ – ಸ್ವಂತ ಖರ್ಚಿನಲ್ಲಿ ಎಲ್‌ಕೆಜಿ, ಯುಕೆಜಿ

    – ಸರ್ಕಾರದ ಅನುದಾನವಿಲ್ಲದೇ ಉಚಿತ ಆಂಗ್ಲ ಮಾಧ್ಯಮ ಶಾಲೆ ಶುರು
    – ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆ ಶಿಕ್ಷಕರು ಸಡ್ಡು

    ಚಿಕ್ಕೋಡಿ: ಗಡಿಭಾಗದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ (Government School) ದಾಖಲಾತಿ ಕುಸಿಯುತ್ತಿರುವ ಕಾರಣ ಸರ್ಕಾರದ ಅನುದಾನವಿಲ್ಲದೇ ಎಲ್‌ಕೆಜಿ-ಯುಕೆಜಿ (LKG-UKG) ಆರಂಭಿಸುವ ಮೂಲಕ ಶಿಕ್ಷಕರು ಮಾದರಿಯಾಗಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಗಡಿಭಾಗದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿದ್ದು, ಇದರಿಂದಾಗಿ ಸರ್ಕಾರಕ್ಕೆ ದಾಖಲಾತಿ ಕಡಿಮೆಯಾಗುತ್ತಿರುವ ಟೆನ್ಶನ್ ಹೆಚ್ಚಾಗುತ್ತಿದೆ. ಇದರ ನಡುವೆಯೂ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವಲ್ಲಿ ಶಿಕ್ಷಕರು (Teachers) ನಿರತರಾಗಿದ್ದು, ಸರಕಾರದ ಅನುದಾನವಿಲ್ಲದೆ ಎಲ್‌ಕೆಜಿ-ಯುಕೆಜಿ ಆರಂಭಿಸುವ ಮೂಲಕ ಮಾದರಿಯಾಗಿದ್ದಾರೆ.ಇದನ್ನೂ ಓದಿ: ಇಂದಿನಿಂದ ಭಾರತ v/s ಬಾಂಗ್ಲಾ ಟೆಸ್ಟ್‌ ಸರಣಿ ಶುರು – ವರ್ಕೌಟ್‌ ಆಗುತ್ತಾ ಗಂಭೀರ್‌ ಪ್ಲ್ಯಾನ್‌?

    ಮಹಾರಾಷ್ಟ್ರ (Maharashtra) ಗಡಿಭಾಗದ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಗೋಟೂರ (Gotur) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಜರಾತಿ ಕೊರತೆ ಇತ್ತು. ಹೀಗಾಗಿ ಸರ್ಕಾರದ ಅನುದಾನವಿಲ್ಲದೇ ಇದ್ದರೂ ಶಾಲಾ ಸುಧಾರಣಾ ಸಮಿತಿ ಹಾಗೂ ಶಾಲೆಯ ಶಿಕ್ಷಕರು ಉಚಿತವಾಗಿ ಆಂಗ್ಲ ಮಾಧ್ಯಮದಲ್ಲಿ (English Medium) ಯುಕೆಜಿ – ಎಲ್‌ಕೆಜಿ ತರಗತಿ ಪ್ರಾರಂಭಿಸಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಮಾದರಿಯಲ್ಲಿಯೇ ಶಿಕ್ಷಣ ನೀಡಲು ರೂಪುರೇಷೆ ಹಾಕಿಕೊಂಡಿದ್ದಾರೆ. ಈ ಶಾಲಾ ಮಕ್ಕಳಿಗೆ ಶಿಕ್ಷಕರು ತಮ್ಮ ವೇತನದಲ್ಲಿ ನಿರ್ವಹಣೆ ವೆಚ್ಚ ಭರಿಸಲು ಮುಂದಾಗಿದ್ದಾರೆ. ಜೊತೆಗೆ ಶಾಲೆಗೆ ಮಕ್ಕಳನ್ನು ಕರೆತರಲು, ಬಟ್ಟೆ, ಪುಸ್ತಕವನ್ನು ಶಿಕ್ಷಕರು ತಮ್ಮ ಸಂಬಳದಿಂದಲೇ ಭರಿಸುತ್ತಿದ್ದಾರೆ.

    ವರ್ಷದಿಂದ ವರ್ಷಕ್ಕೆ ದಾಖಲಾತಿ ಕುಸಿಯುತ್ತಿದ್ದು, ಸಾಕಷ್ಟು ಅಭಿಯಾನ ನಡೆಸಿದರೂ ಸಹ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ. ಇದೀಗ ತಾವು ಕಲಿಸುವ ಶಾಲೆಯ ಬೆಳವಣಿಗೆ ಬಯಸಿರುವ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಅನುಮತಿಯೊಂದಿಗೆ ಸ್ವಂತ ಖರ್ಚಿನಲ್ಲಿಯೇ ಎಲ್‌ಕೆಜಿ -ಯುಕೆಜಿ ತರಗತಿ ಆರಂಭಿಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ.

    ಇತ್ತೀಚಿಗೆ ಅಂಗನವಾಡಿಯಲ್ಲಿ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿತ್ತು. ಈ ನಡುವೆಯೇ ಸರ್ಕಾರಿ ಶಾಲಾ ಶಿಕ್ಷಕರು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಮುಂದಾಗಿದ್ದಾರೆ. ಖಾಸಗಿ ಶಾಲೆಯ ಮಾದರಿಯಲ್ಲಿಯೇ ಶಿಕ್ಷಣ ಪದ್ದತಿ ಅನುಸರಿಸಿದ್ದು, ಗ್ರಾಮೀಣ ಭಾಗದ ಪೋಷಕರ ಉತ್ಸಾಹಕ್ಕೆ ಕಾರಣವಾಗಿದೆ. ಎಲ್‌ಕೆಜಿ-ಯುಕೆಜಿ ಆರಂಭಿಸುತ್ತಿದ್ದಂತೆ ಇದೇ ವರ್ಷ 40 ಮಕ್ಕಳು ದಾಖಲಾಗಿದ್ದು, ಈ ಸಂಖ್ಯೆ ಮುಂದಿನ ಬಾರಿ ಹೆಚ್ಚಾಗುವ ವಿಶ್ವಾಸವಿದೆ ಎಂದಿದ್ದಾರೆ.ಇದನ್ನೂ ಓದಿ: ಲೋಕಾಯುಕ್ತದಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ 18 ಸಾವಿರಕ್ಕೂ ಹೆಚ್ಚು ಕೇಸ್‌

    ಸರ್ಕಾರದ ಸಂಬಳ ಸಿಕ್ಕರೆ ಸಾಕು ನಾವು, ನಮ್ಮ ಕುಟುಂಬ ನೆಮ್ಮದಿಯಿಂದ ಇರಬಹುದು ಎನ್ನುವ ಜನರಿಗೆ ಗೋಟೂರ ಸರ್ಕಾರಿ ಶಾಲೆಯ ಶಿಕ್ಷಕರು ತಾವು ಕಲಿಸುತ್ತಿರುವ ಶಾಲೆಯ ಅಭಿವೃದ್ಧಿ ಬಯಸಿರುವುದು, ಇತರರಿಗೆ ಮಾದರಿಯಾಗಿದೆ.

  • ಮಾಜಿ ಸಿಎಂ ಹುಟ್ಟೂರಿನ ಸರ್ಕಾರಿ ಇಂಗ್ಲೀಷ್ ಮಾಧ್ಯಮ ಶಾಲೆಗೆ ಫುಲ್ ಡಿಮ್ಯಾಂಡ್

    ಮಾಜಿ ಸಿಎಂ ಹುಟ್ಟೂರಿನ ಸರ್ಕಾರಿ ಇಂಗ್ಲೀಷ್ ಮಾಧ್ಯಮ ಶಾಲೆಗೆ ಫುಲ್ ಡಿಮ್ಯಾಂಡ್

    ಮೈಸೂರು: ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರ ಹುಟ್ಟೂರಿನಲ್ಲೇ ಇಂಗ್ಲೀಷ್ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಲು ಪೋಷಕರು ಮುಗಿಬಿದ್ದಿದ್ದಾರೆ.

    ಸಿದ್ದರಾಮಯ್ಯರ ತವರೂರಾದ ಸಿದ್ದರಾಮನಹುಂಡಿಯಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರಿಗೆ ಕಿಂಚಿತ್ತು ಆಸಕ್ತಿ ಇಲ್ಲ. ಈ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಪ್ರಾರಂಭವಾಗಿದೆ. ಮೊದಲನೇ ವರ್ಷವೇ ಇಂಗ್ಲೀಷ್ ಕಲಿಕೆಗೆ ಹೆಚ್ಚಿನ ಆಸಕ್ತಿ ಪೋಷಕರಿಂದ ವ್ಯಕ್ತವಾಗಿದೆ.

    ಸಿದ್ದರಾಮನಹುಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾರಂಭವಾದ ಎಲ್‍ಕೆಜಿಯ ಇಂಗ್ಲೀಷ್ ಮಾಧ್ಯಮ ತರಗತಿಗೆ 30 ಮಕ್ಕಳು ದಾಖಲಾತಿ ಪಡೆದಿದ್ದಾರೆ. ಎಲ್‍ಕೆಜಿ ಕನ್ನಡ ಮಾಧ್ಯಮಕ್ಕೆ ಒಂದೇ ಒಂದು ದಾಖಲಾತಿಯೂ ಆಗಿಲ್ಲ. ಹೀಗಾಗಿ ಒಂದನೇ ತರಗತಿಯ ಕನ್ನಡ ತರಗತಿಗಳು ಖಾಲಿ ಖಾಲಿಯಾಗಿವೆ.

    ಮೈಸೂರು ಜಿಲ್ಲೆಯ 29 ಶಾಲೆಗಳಲ್ಲೂ ಇದೆ ಸ್ಥಿತಿ ಇದೆ. ಜಿಲ್ಲೆಯ 46 ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭವಾಗಿದೆ. ಇದರಲ್ಲಿ 29 ಕನ್ನಡ ಮಾಧ್ಯಮ ಶಾಲೆಗಳಿಗೆ ಪೋµಕರು ಮಕ್ಕಳನ್ನು ಕಳಿಸಿಲ್ಲ.

    30 ಸಾವಿರ ರೂ. ನೀಡಿ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮವಿರುವ ಖಾಸಗಿ ಶಾಲೆಗಳಿಗೆ ಕಳುಹಿಸಲು ನಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಸರ್ಕಾರವೇ ಇಂಗ್ಲೀಷ್ ಮಾಧ್ಯಮ ಆರಂಭಿಸಿದ್ದು ನಮಗೆ ಹೆಚ್ಚು ಅನುಕೂಲವಾಗಿದೆ ಎಂದು ಪೋಷಕರೊಬ್ಬರು ತಿಳಿಸಿದ್ದಾರೆ.

    ಇಂಗ್ಲೀಷ್ ಭಾಷೆಯ ಜ್ಞಾನ, ಸಂವಹನ ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಮಕ್ಕಳನ್ನು ಖಾಸಗಿ ಸೇರಿಸಲು ಹೋದರೆ ನಮಗೆ ಆರ್ಥಿಕ ಪರಿಸ್ಥಿತಿ ಅಡ್ಡಿಯಾಗುತ್ತದೆ. ಏಕೆಂದರೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ವ್ಯವಹಾರವಾಗಿ ಪರಿಣಮಿಸಿದೆ ಎಂದು ಪೋಷಕರು ಹೇಳಿದ್ದಾರೆ.

    ಮಾಜಿ ಸಿಎಂ ಹೇಳಿದ್ದೇನು?:
    ಸಿದ್ದರಾಮಯ್ಯನವರ ವಿರೋಧದ ನಡುವೆಯೂ ಸಿಎಂ ಕುಮಾರಸ್ವಾಮಿ ಅವರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭಿಸಿ ಸವಾಲು ಹಾಕಿದರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸುವುದಕ್ಕೆ ವೈಯಕ್ತಿಕವಾಗಿ ವಿರೋಧ ವ್ಯಕ್ತಪಡಿಸುತ್ತೇನೆ. ಕನ್ನಡ ಮಾಧ್ಯಮದಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡಬೇಕು. ಈ ವಿಚಾರಕ್ಕೆ ನಾನು ಬದ್ಧನಾಗಿದ್ದೇನೆ. ಒಂದು ವೇಳೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಜಾರಿಗೆ ತಂದರೆ ನಾನು ವಿರೋಧ ವ್ಯಕ್ತಪಡಿಸುತ್ತೇನೆ ಹಾಗೂ ತಡೆಹಿಡಿಯುತ್ತೇನೆ ಎಂದು ಹೇಳಿದ್ದರು.

    ಎಂ.ಮಹೇಶ್ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದಾಗ ಅವರಿಗೆ ಕರೆ ಮಾಡಿ ಇಂಗ್ಲೀಷ್ ಮಾಧ್ಯಮ ಶಿಕ್ಷಣ ವಿಚಾರವನ್ನು ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾಪಿಸದಂತೆ ಹೇಳಿದ್ದೆ. ಸಿಎಂ ಕುಮಾರಸ್ವಾಮಿ ಸೇರಿದಂತೆ ಯಾರೇ ಹೇಳಿದರೂ ತಲೆಕೆಡಿಸಿಕೊಳ್ಳಬೇಡ ಅಂತ ಸೂಚಿಸಿದ್ದೆ ಎಂದು ತಿಳಿಸಿದ್ದರು.